ಬೆಳಕಾಗಿ ಗಾಂಧಿ
-ಎಂ ವಿ ಶಶಿಭೂಷಣ ರಾಜು
ಹಾಗೆ ಅದು
ಮನಸು ತಳಮಳಗೊಳ್ಳುತ್ತದೆ
ಎದೆಯಲಿ ಕಳವಳ
ಗಾಳಿದಿಕ್ಕು ಬದಲಿಸಿ ನಿಡಿಸುಯ್ಯುತ್ತದೆ
ಅಂಧಕಾರದ ಸುರಂಗ
ಮಾತನಾಡುತ್ತದೆ
ಪಿಸು ಪಿಸು ಮಾತಲಿ ಒಂದು ವ್ಯಂಗ
ಹಚ್ಚಿಯೂ ಹಚ್ಚಿಕೊಳ್ಳದಂತೆ
ಇರುವಿಕೆಗೆ ಒಂದು ಸಣ್ಣ ವಿರಾಮ
ಬರಿ ಅವಲೋಕಿಸುವುದು
ಗಾಳಿ ಎತ್ತ ತಿರುಗುತ್ತದೆ ಎಂದು
ಅತ್ತ ತಿರುಗಲು
ಹೀಗಿರುವ ಮನಸಿಗೆ
ಒಂದು ಮುಲಾಮಿನ ಹಾಗೆ
ನಿಮ್ಮ ಮಾತು ಕಿವಿಗರಳುತ್ತದೆ
ಮನಸು ಮೆದುವಾಗುತ್ತದೆ
ಕೈಯಲಿ ಹಿಡಿದ ಕೋಲು ಕೋಟೆಯಾಗುತ್ತದೆ
ನಿಮ್ಮ ಮುಗ್ದನಗು
ಪಟದಾಚೆಯೂ ಹಾಯುತ್ತದೆ
ಪಕ್ಕನೆ ಮನಸು ತಿಳಿಯಾಗುತ್ತದೆ
ಅನಾಥ ಮಗುವಿಗೊಂದು ಅಜ್ಜ ಸಿಕ್ಕಂತೆ
ಮಾತು ಸತ್ತ ಮನಸಿಗೆ ಸಂಜೀವಿನಿ
ಸತ್ಯ ಶೋಧನೆಯಲ್ಲಿ ಶೂನ್ಯ ಸಾಧನೆ
ಹುಡುಕುವ ವರ್ಗವೊಂದಿದೆ ಇಲ್ಲಿ,
ಸಣ್ಣ ದೀಪವೆಂದು ಊದಿ ಆರಿಸುವ ಸನ್ನಾಹ
ಆರಿಸಲು ಹೊರಟರೂ ಅವರ ಹಾದಿಗೂ ಬೆಳಕಾಗುತ್ತದೆ
ಕೋಪವೇನೆಂದರಿಯದ ಮನಸು
ಸೈರಣೆಯ ಆಳಸಾಗರ
ಅಹಿಂಸೆ, ಸತ್ಯಗಳೇ ಆಯುಧ
ಹಠ ಚಿಕ್ಕ ಮಗುವಿನಂತೆ
ಹುಟ್ಟಿ ಅಳಿಯುವವರಿಗೆ
ಜನುಮದಿನದ ಆಚರಣೆ
ಸಾವೇ ಇಲ್ಲದೆ
ಸದಾ ಬದುಕಿರುವವರಿಗೆ
ಎಲ್ಲರ ಮನಸಿನಲಿ, ನೆಮ್ಮದಿ ಅರಳಿಸುವುದೇ
ಜನುಮದಿನ, ಪ್ರತಿಕ್ಷಣ






0 Comments