
ಡಾ.ಎಸ್.ಬಿ.ಜೋಗುರ
ಜಾತಿಯ ಗಡುಸುತನದ ಬಗ್ಗೆ ಸಾಕಷ್ಟು ಅಧ್ಯಯನಗಳಾಗಿವೆ. ಕೆಲವು ಸಮಾಜಶಾಸ್ತ್ರಜ್ಞರಂತೂ ಇದರ ಅಧ್ಯಯನದಲ್ಲಿ ಸಾಕಷ್ಟು ಶ್ರಮ ಮತ್ತು ಸಮಯ ಹಾಳಾಗಿರುವದಿದೆಯೇ ಹೊರತು ಏನೂ ಪ್ರಯೋಜನವಾಗಿಲ್ಲ ಎಂದಿರುವದಿದೆ. ಸಾವಿರಾರು ವರ್ಷಗಳಿಂದ ಈ ಜಾತಿಪದ್ಧತಿ ಊಸರವಳ್ಳಿಯ ಹಾಗೆ ಬಣ್ಣ ಬದಲಾಯಿಸಿರುವದಿದೆಯೇ ಹೊರತು ಅದು ಬದಲಾವಣೆ ಹೊಂದಿರುವದಿಲ್ಲ. ಇನ್ನೇನಾದರೂ ಚೂರು -ಪಾರು ಬದಲಾವಣೆ ಆದಂತೆನಿಸಿದರೂ ಅದು ಕೇವಲ ಸಮಾನಾಂತರ ಸಂಚಲನೆಯೇ ಹೊರತು ಲಂಬರೂಪದ ಸಂಚಲನೆಯಲ್ಲ. ಅಂದರೆ ಆರಕ್ಕೇರದ, ಮೂರಕ್ಕಿಳಿಯದ ಸ್ಥಿತಿ ಎಂದರ್ಥ.
16 ನೇ ಶತಮಾನದಲ್ಲಿ ಮಹಾರ ಮತ್ತು ಮಾಂಗ್ ಎನ್ನುವ ದಲಿತ ಜನಸಮುದಾಯಗಳು ಪೂನಾ ನಗರದಲ್ಲಿ ಪ್ರವೇಶ ಮಾಡಬೇಕಿದ್ದರೆ ಬೆಳಿಗ್ಗೆ 9 ಗಂಟೆಯ ಒಳಗೆ ಮತ್ತು ಮಧ್ಯಾಹ್ನ 3 ಘಂಟೆಯ ನಂತರ ಬರುವಂತಿರಲಿಲ್ಲ. ಕಾರಣ ಆಗ ಮನುಷ್ಯನ ಶರೀರದ ನೆರಳು ಲಂಬರೂಪದಲ್ಲಿ ಬೀಳುವದರಿಂದ ಅದು ಮೇಲಿನ ಜಾತಿಗಳನ್ನು ಸ್ಪರ್ಷಿಸುತ್ತದೆ ಆ ಮೂಲಕ ಮೈಲಿಗೆಯಾಗುತ್ತದೆ ಎನ್ನುವ ನಂಬುಗೆಗಳಿದ್ದವು. ಅಂಥಾ ನಂಬುಗೆಗಳು 400 ವರ್ಷಗಳ ನಂತರವೂ ಬೇರೆ ರೀತಿಯಲ್ಲಿ ಉಳಿದುಕೊಂಡಿರುವುದು ದೊಡ್ಡ ವಿಪರ್ಯಾಸ.
ಡಾ ಬಾಬಾಸಾಹೇಬ ಅಂಬೇಡ್ಕರ್ ಅವರು ‘ಈ ಜಾತಿ ಎಂಬ ರೋಗದ ಸೋಂಕು ಎಷ್ಟು ಭಯಂಕರವೆಂದರೆ ಇದು ಕೇವಲ ಗುಳಿಗೆ ಮತ್ತು ಇಂಜಕ್ಷನ್ ಮೂಲಕ ನಿವಾರಣೆಯಾಗುವಂಥದಲ್ಲ. ಇದಕ್ಕೆ ಏನಿದ್ದರೂ ಶಸ್ತ್ರ ಚಿಕಿತ್ಸೆಯೇ ಆಗಬೇಕು’ ಎಂದದ್ದು ಅದರ ಕರಾಳ ಕರಾಮತ್ತಿನ ಅನುಭವದಿಂದಾಗಿಯೇ..ಹಾಗಾಗಿಯೇ ಅವರು ಸಂವಿಧಾನವನ್ನು ಪರಿಚಯಿಸುವ ಸಂದರ್ಭದಲ್ಲಿ ‘ಆರ್ಥಿಕ ಮತ್ತು ಸಾಮಾಜಿಕ ಸಮಾನತೆಯಿಲ್ಲದ ರಾಜಕೀಯ ಸ್ವಾತಂತ್ರ್ಯಕ್ಕೆ ಯಾವುದೇ ಬಗೆಯ ಅರ್ಥವಿಲ್ಲ’ ಎಂದಿರುವದಿತ್ತು.
ಈಗಲೂ ದೇಶದಲ್ಲಿ ಇಷ್ಟೆಲ್ಲಾ ವಿಶ್ವವಿದ್ಯಾಲಯಗಳು, ಹಿಂದೆಂದೂ ಇರದಂತಹ ಸಾಕ್ಷರತೆಯ ಪ್ರಮಾಣ, ಮೂಲಭೂತ ಹಕ್ಕುಗಳ ಬಗ್ಗೆ ತಿಳುವಳಿಕೆ, ಮಾನವ ಹಕ್ಕುಗಳ ಬಗ್ಗೆ ಜಾಗೃತಿ. ಕಾನೂನಿನ ಅರಿವು ಹೀಗೆಲ್ಲಾ ಇರುವಾಗಲೂ ನಿರಂತರವಾಗಿ ದಲಿತರ ಮೇಲೆ ದೌರ್ಜನ್ಯಗಳು ನಡೆಯುವದನ್ನು ಗಮನಿಸಿದರೆ ಬಹುಷ: ಜಾತಿಯ ಭಾವನೆಗಳು ಬೇರೆ ರೀತಿಯಲ್ಲಿ ಇನ್ನಷ್ಟು ಜಟಿಲವಾಗಿ ರೂಪಾಂತರಗೊಳ್ಳುತ್ತಿವೆಯೇನೋ ಎಂದೆನಿಸುತ್ತದೆ. ಯಾಕೆಂದರೆ ಈಗಲೂ ದಲಿತರು ಕೆಲವೆಡೆ ಕುಡಿಯುವ ನೀರಿಗಾಗಿ ಪಡಬಾರದ ಪಾಡನ್ನು ಪಡುವುದನ್ನು ಗಮನಿಸಿದರೆ ತುಂಬಾ ಬೇಸರವೆನಿಸುತ್ತದೆ.
ಮನುಷ್ಯ ಎಷ್ಟೇ ಎತ್ತರವಾದ ನಾಗರಿಕತೆ, ವಿಜ್ಞಾನ, ತಂತ್ರಜ್ಞಾನ ಬೆಳೆಸಿದರೂ ಮನುಷ್ಯ –ಮನುಷ್ಯರ ನಡುವೆ ಸೌಹಾರ್ದಯುತವಾಗಿ ಬದುಕಲು ಆತ ಬೆಳೆಸಿದ ಸಂಸ್ಕೃತಿ ಮತ್ತು ನಾಗರಿಕತೆಗೆ ಸಾಧ್ಯವಾಗಲಿಲ್ಲ ಎಂತಾದರೆ ಅವುಗಳ ಸಾಧನೆಯ ಸಾರ್ಥಕತೆಯ ಬಗ್ಗೆ ಯೋಚಿಸಬೇಕಾಗುತ್ತದೆ. ತನ್ನದೇ ದೇಶದ ಜನರನ್ನು ಅಮಾನವೀಯವಾಗಿ ನಡೆಯಿಸಿಕೊಳ್ಳುವ ಕ್ರಮ ಖಂಡನೀಯ. ಈಚೆಗೆ ನಡೆದ ಒಂದೆರಡು ಘಟನೆಗಳು ನನ್ನನ್ನು ತುಂಬಾ ಕಾಡಿದ ಪರಿಣಾಮವಾಗಿ ಇದನ್ನು ಬರೆಯಬೇಕಾಯಿತು.
ಯಾವುದೋ ಒಂದು ಕಾಲದಲ್ಲಿ ದಲಿತರು ಮದುವೆಯ ಮೆರವಣಿಗೆ ಹೊರಡಿಸಬಾರದು, ಅವರು ಊರಲ್ಲಿ ಬರಬೇಕಿದ್ದರೆ ಸೊಂಟಕ್ಕೆ ಕಸಪೆರಕೆಯನ್ನು ಕಟ್ಟಿಕೊಂಡು ಬರಬೇಕು, ಕೈಯಲ್ಲಿ ಗೆಜ್ಜೆ ಕಟ್ಟಿದ ಕೋಲು ಹಿಡಿದು ಬರಬೇಕು, ಕುತ್ತಿಗೆಯಲ್ಲಿ ಮಡಿಕೆ ಕಟ್ಟಿಕೊಂಡು ಬರಬೇಕು ಎನ್ನುವ ಇಂಥಾ ಹತ್ತಾರು ನಿರ್ಬಂಧಗಳಿದ್ದವು. ಆ ನಿರ್ಬಂಧಗಳ ಹಿಂದೆ ಒಂದು ಬಗೆಯ ಹುನ್ನಾರ, ಅಜ್ಞಾನ,ಮೌಢ್ಯತೆ,ಕರ್ಮ ಸಿದ್ಧಾಂತದ ಭಾವನೆಗಳಿದ್ದವು ಎಲ್ಲಕ್ಕಿಂತಲೂ ಮುಖ್ಯವಾಗಿ ಶಿಕ್ಷಣ ಎನ್ನುವುದು ವ್ಯಾಪಕವಾಗಿರಲಿಲ್ಲ. ಈಗ ಹಾಗಲ್ಲ, ನಮ್ಮೆಲ್ಲರಿಗೂ ಸಮಾನತೆಯ ಪಾಠವನ್ನು ಕಲಿಸುವ ಸಂವಿಧಾನವಿದೆ, ಮಾನಹ ಹಕ್ಕುಗಳ ಆಯೋಗವಿದೆ ಜೊತೆಗೆ ಪ್ರತಿಯೊಬ್ಬರು ಸುಶಿಕ್ಷತರು. ಜಾತಿಯ ಕರಾಳ ಮುಖಗಳನ್ನು ಅರಿತವರು ಹೀಗಿರುವಾಗಲೂ ಆಗಾಗ ದಲಿತರ ಮೇಲೆ ನಡೆಯುವ ದೌರ್ಜನ್ಯಗಳನ್ನು ಗಮನಿಸಿದರೆ ಎಲ್ಲೋ ಒಂದೆಡೆ ನಮ್ಮ ಶಿಕ್ಷಣ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದರ್ಥ.
ಸಮಾನತೆ, ಭ್ರಾತೃತ್ವ ಮತ್ತು ವ್ಯಕ್ತಿಸ್ವಾತಂತ್ರ್ಯವನ್ನು ಗೌರವಿಸುವ ಗುಣವನ್ನು ಕಲಿಸಿಕೊಡದ ಶಿಕ್ಷಣ ಒಂದು ಮೌಲ್ಯವಾಗಲಾರದು. ಈಚೆಗೆ ರಾಜಸ್ಥಾನದ ಉದಯಪುರದಲ್ಲಿ ಮತ್ತು ಮಧ್ಯಪ್ರದೇಶದ ಒಂದು ಗ್ರಾಮದಲ್ಲಿ ದಲಿತರ ಮೇಲೆ ಒಂದೆರಡು ತೀರಾ ಅಮಾನವೀಯವಾದ ದೌರ್ಜನ್ಯಗಳು ಜರುಗಿದವು. ಮನುಷ್ಯರಾದವರು ಯಾರೂ ಇವುಗಳನ್ನು ಸಹ್ಯ ಎಂದು ಭಾವಿಸುವದಿಲ್ಲ.
ಉದಯಪುರದಲ್ಲಿ ದಲಿತ ವರ ಮದುವೆಯಲ್ಲಿ ಕುದುರೆಯ ಮೇಲೆ ಮೆರವಣಿಗೆ ಹೊರಡಿಸಿದ ಎನ್ನುವ ಹಿನ್ನೆಲೆಯಲ್ಲಿ ಅವನನ್ನು ಹಿಗ್ಗಾ ಮುಗ್ಗಾ ಥಳಿಸಲಾಯಿತು. ಈ ಬಗೆಯ ಘಟನೆ ಇದೇ ಮೊದಲಂತೂ ಅಲ್ಲ.ಇದೇ ಉತ್ತರ ಭಾರತದಲ್ಲಿ ಹಿಂದೊಮ್ಮೆ ಮೆಹುಲ್ ಎಂಬ ದಲಿತ ರಿಕ್ಷಾ ಖರೀದಿಸಿ ತಂದು ಬಾಡಿಗೆಗೆ ಓಡಿಸಿದ ಎನ್ನುವ ಕಾರಣಕ್ಕೆ ಅವನ ರಿಕ್ಷಾ ಜಖಂ ಗೊಳಿಸಲಾಗಿತ್ತು. 2017 ರಲ್ಲಿ ದಲಿತ ವರ ಕುದುರೆಯ ಮೇಲೆ ಹೊರಟಿರುವದನ್ನು ಸಹಿಸಲಾಗದ ವ್ಯವಸ್ಥೆ ಈಗಲೂ ಜೀವಂತವಾಗಿದೆ ಎನ್ನುವುದೇ ದೊಡ್ಡ ಅಪಾಯ.
ಇದಕ್ಕಿಂತಲೂ ಹೇಯವಾದ ಇನ್ನೊಂದು ಘಟನೆ ಮಧ್ಯಪ್ರದೇಶದ ಗ್ರಾಮವೊಂದರಲ್ಲಿ ನಡೆದಿರುವದಿದೆ. ಅದಕ್ಕೂ ಕಾರಣ ದಲಿತನೊಬ್ಬ ತನ ಮಗಳ ಮದುವೆಯಲ್ಲಿ ಬ್ಯಾಂಡ್ ಬಾಜಾ ಬಾರಿಸಲು ವ್ಯವಸ್ಥೆ ಮಾಡಿದ ಎನ್ನುವುದು. ಅದಕ್ಕೆ ಸೇಡಾಗಿ ದಲಿತರು ಬಳಸುತ್ತಿದ್ದ ಬಾವಿಯಲ್ಲಿ ಸೀಮೆ ಎಣ್ಣೆಯನು ಸುರಿದು ಅದನ್ನು ಕುಡಿಯಲು ಬಾರದಂತೆ ಮಾಡಿರುವುದು. ದುಷ್ತತನಕ್ಕೆ ಒಂದು ಮಿತಿ ಇದೆ. ಆ ದುಷ್ಟತನವೂ ಬಾಗಿ ತಲೆ ತಗ್ಗಿಸುವ ಘಟನೆಯಿದು. ಮೊದಲೇ ಮಳೆಯಿಲ್ಲ.. ಕುಡಿಯಲು ನೀರಿಲ್ಲ, ಭೀಕರ ಬರಗಾಲ ಬೇರೆ, ಹೀಗಿರುವಾಗ ದಲಿತರ ಬಾವಿಗೆ ಸೀಮೆ ಎಣ್ಣೆ ಸುರಿಯುವ ವಿಕೃತ ಮನ:ಸ್ಥಿತಿಯ ಬಗ್ಗೆ ಏನನ್ನಬೇಕು. ಈಗವರು ನೀರಿಗಾಗಿ ಎಲ್ಲೆಲ್ಲೋ ಅಲೆಯುವ ಪರದಾಟ ಎದುರಾಗಿದೆ.
ಇಂಥಾ ಘಟನೆಗಳು ನಮ್ಮ ನಾಗರಿಕ ಸಮಾಜವನ್ನು ಅಣುಕಿಸುವಂತಿರುತ್ತವೆ.ಮನುಷ್ಯ ತನ್ನಂತೆಯೇ ಇರುವ, ತನ್ನ ಜೊತೆಗೆಯೇ ಕೂಡಿ ಬದುಕುವ ಇನ್ನೊಬ್ಬ ಮನುಷ್ಯನನ್ನು ಸಮನಾಗಿ ಸ್ವೀಕರಿಸಲು ಸಾಧ್ಯವಾಗದಿರುವ ಸ್ಥಿತಿಗೆ ಮರುಕಪಡಬೇಕೋ ಇಲ್ಲಾ ಧಿಕ್ಕಾರವೆನ್ನಬೇಕೋ ತಿಳಿಯುತ್ತಿಲ್ಲ. ಮನುಷ್ಯ ಮನುಷ್ಯನಾಗಿ ಬದುಕುವಲ್ಲಿ ಮತ್ತು ತನ್ನೊಂದಿಗೆ ಕೂಡಿ ಬದುಕುವವರನ್ನು ಗೌರವಿಸುವಲ್ಲಿಯೇ ಆತನ ಬದುಕಿನ ಸಾರ್ಥಕತೆ ಅಡಗಿದೆ.






ಭಾರತೀಯ ಮೇಲ್ಸ್ಥರದ ಸಮಾಜಗಳ ಕೆಲವೇ ಅಂದರೆ ಕೆಲವೇ ದುಷ್ಟ ಮನಸ್ಸುಗಳ ಹುನ್ನಾರಗಳಂತೆ ನಡೆದುಹೋಗುವ ಇಂತಹ ಖೇದನೀಯ ಸಂಗತಿಗಳಿಗೆ ಒಕ್ಕೊರಲ ಧಿಕ್ಕಾರವಿರಲಿ.. ಪ್ರತಿಯೊಬ್ಬ ಜವಾಬ್ದಾರಿಯುತ ನಾಗರಿಕ ದೇಶದುದ್ದಕ್ಕೂ ಇಂತಹ ಕೃತ್ಯಗಳನ್ನು ಖಂಡಿಸಿ, ಸಂಬಂಧಿಸಿದವರಿಗೆ ಸಾಂತ್ವನ ಹಾಗೂ ಈ ಕೃತ್ಯವೆಸಗಿದವರಿಗೆ ಸಮಾಜ ಗುರುಗಳಿಂದ, ಸಮಾಜಶಾಸ್ರ್ತಜ್ಞರಂಥವರಿಂದ ಆಗುಹೋಗುಗಳ ಕುರಿತು ವೈಯಕ್ತಿಕವಾಗಿ ಹಾಗೂ ಸಾಮೂಹಿಕವಾಗಿ ತಿಳುವಳಿಕೆ ಕೊಡುವ ಕಾರ್ಯಗಳಾಗಬೇಕು.ಈ ಕೃತ್ಯಕ್ಕೆ ಕಾರಣರಾದವರಿಗೆ ಸರಕಾರದ ಎಲ್ಲಾ ಸವಲತ್ತುಗಳನ್ನು ವಾಪಸ್ ಪಡೆಯಬೇಕು. ವಿದ್ಯುತ್, ಗ್ಯಾಸ್, ಸಬ್ಸಿಡಿಯ ಎಲ್ಲಾ ಕಾರ್ಡುಗಳು ಇತ್ಯಾದಿ…ಅಷ್ಟರಮಟ್ಟಿಗಾದರೂ ಈ ಪಿಡುಗು ನಿಯಂತ್ರಣಕ್ಕೆ ಬಂದೀತು ಅನಿಸುತ್ತದೆ…ಯಾವ ಮಾನದಂಡದಿಂದಲೂ ಮನುಜ ಮನುಜನನ್ನು ಹೀನಾಯವಾಗಿ ಕಾಣುವ ಧೋರಣೆ ಯಾವ ರೀತಿಯಲ್ಲೂ ಒಪ್ಪುವಂತಹುದಲ್ಲ.-ಲಕ್ಷ್ಮೀಕಾಂತ ಇಟ್ನಾಳ