ಮೊಟ್ಟೆಯೊಡೆಯದೆ ಮರಿಹಾಕಿದ್ದು..

ಪರಿಚಿತರೊಬ್ಬರಿಗೆ ರಾಜಕೀಯ ಕರಪತ್ರವೊಂದನ್ನು ಬರೆದುಕೊಟ್ಟಿದ್ದೆ. ಮರುವರ್ಷ ಅಂತಹದೇ ಇನ್ನೊಂದು ಕರಪತ್ರ ಬರೆಯುವಾಗ ಪತ್ರದ ಕೊನೆಯಲ್ಲಿ ‘ನಿಮ್ಮ ಸುಖ ಕಷ್ಟಗಳಲ್ಲಿ ನಾನೂ ಭಾಗಿ’ ಎಂಬರ್ಥ ಬರುವ ಪದವೊಂದನ್ನು ಗುರುತಿಸಿ, ಅಂತಹ ವಾಕ್ಯಗಳು ವ್ಯಕ್ತವಾಗಿ ಬೇಡ ಎಂದು ಸೂಚಿಸಿದರು. ಬಳಿಕ ಏಕೆಂದು ವಿಚಾರಿಸಿದಾಗ ತಿಳಿದದ್ದು – ಆ ಕರಪತ್ರ ಸಿಕ್ಕಿದ ಹೆಚ್ಚಿನವರು ಆ ಪತ್ರದ ಸಹಿತ ಮನೆಯ ಮದುವೆ, ಮನೆ ರಿಪೇರಿಯಂತಹ ಕಷ್ಟಗಳಿಗೂ ನೇರವಾಗಿ ಹಣಕಾಸಿನ ಸಹಾಯ ಕೇಳಿ ಇವರ ಬಳಿ ಬರಲಾರಂಭಿಸಿದ್ದರಂತೆ!

ಹಾಗಾಗಿ ರಾಜಕೀಯ ಪ್ರಚಾರ ಬರಹಗಳು ಹೇಗಿರಬೇಕು ಎಂದರೆ, ಹೇಳಬೇಕು ಆದರೆ ಹೇಳಿದ್ದು ಖಚಿತವಾಗಿರಬಾರದು. ಅದು “ಕಮಲ ಪತ್ರದ ಮೇಲಿನ ನೀರ ಹನಿಯಂತೆ” ಇರಬೇಕು ಎಂಬುದು ಸಾಮಾನ್ಯ ಪಾಠ!

ಇನ್ನು ನಾಲ್ಕೇ ದಿನಗಳಲ್ಲಿ ಮೂರು ವರ್ಷ ಪೂರೈಸಲಿರುವ ನರೇಂದ್ರ ಮೋದಿಯವರ ಸರಕಾರ 2014ರಲ್ಲಿ ಹೊರತಂದ ಚುನಾವಣಾ ಪ್ರಣಾಳಿಕೆಯನ್ನು ಓದುತ್ತಿದ್ದೆ.  ಅದು ಬಹಳ ಖಚಿತ ಆಶ್ವಾಸನೆಗಳಿರುವ ಕಿರುಪುಸ್ತಕ. ಅವರ ಗುರಿ – ಏಕ್ ಭಾರತ್ – ಶ್ರೇಷ್ಠ ಭಾರತ್” ಮತ್ತು ಆ ಗುರಿಯನ್ನು ತಲುಪುವ ಹಾದಿ “ ಸಬ್ಕಾ ಸಾತ್ ಸಬ್ಕಾ ವಿಕಾಸ್” ಎಂದು ಖಚಿತವಾಗಿ ನಂಬಿರುವ ಚುನಾವಣಾಪೂರ್ವ ಘೋಷಣೆ ಅದು.

ನಾನಿಲ್ಲಿ ನೀಡುತ್ತಿರುವುದು ಅವರು ತಮ್ಮ ಪ್ರಣಾಲಿಕೆಯಲ್ಲಿ ಹೇಳಿರುವ ಚುನಾವಣಾ ಪೂರ್ವ ವಚನಗಳನ್ನು (pledges). ಈ ಮೂರು ವರ್ಷಗಳ ಅಂತ್ಯಕ್ಕೆ ಅವು ಎಷ್ಟರ ಮಟ್ಟಿಗೆ ಪೂರ್ಣಗೊಳ್ಳುವ ಹಾದಿಯಲ್ಲಿ ಸಾಗುತ್ತಿವೆ ಎಂದು ತೀರ್ಮಾನಿಸಬೇಕಾದವರು ಜನ. ಈಗ ಬಿಜೆಪಿ ಪರಿವಾರದವರಿಗೆ ಹಿಂದೆಲ್ಲ ಹೇಳುತ್ತಾ ಬಂದಂತೆ, ಮತ್ತೊಬ್ಬರ 60 ವರ್ಷದ ದುರಾಡಳಿತದ ಫಲ-ಇನ್ನೊಂದು-ಮತ್ತೊಂದು ಎಂದು ಸಬೂಬು ಹೇಳಲು ಸಾಧ್ಯವಿಲ್ಲ. ಯಾಕೆಂದರೆ, ಇದನ್ನೆಲ್ಲ ಅನುಭವಿಸಿ, ಪರಿಗಣನೆಗೆ ತೆಗೆದುಕೊಂಡೇ ನರೇಂದ್ರ ಮೋದಿಯವರ ಪಕ್ಷ ತನ್ನ 5 ವರ್ಷಗಳ ಅಧಿಕಾರಾವಧಿಯಲ್ಲಿ ತಾನು ಮಾಡಲುದ್ದೇಶಿಸಿರುವ ಕೆಲಸಗಳನ್ನು ಹೇಳಿ ಮತ ಕೇಳಿರುವುದು.

ಭಾರತ ಶ್ರೇಷ್ಠ ಆಗುವುದು ಹೇಗೆ ಎಂಬುದಕ್ಕೆ ಅವರು ಕೊಟ್ಟಿರುವ ಯೋಚನೆಗಳು:

* ಸ್ಪಂದನಶೀಲ ಮತ್ತು ಎಲ್ಲರ ಪಾಲ್ಗೊಳ್ಳುವಿಕೆ ಇರುವ ಪ್ರಜಾಸತ್ತೆ

*ಬಲಪಡಿಸಲಾದ ಮತ್ತು ಸ್ಫೂರ್ತಿ ಪಡೆದ ಜನತೆ

* ಎಲ್ಲರನ್ನು ಒಳಗೊಂಡ ಮತ್ತು ಸಹನಶೀಲ ಅಭಿವ್ರದ್ಧಿ

*ಹಳ್ಳಿಗಳಲ್ಲಿ ಮತ್ತು ನಗರಗಳಲ್ಲಿ ಒಳ್ಳೆಯ ಗುಣಮಟ್ಟದ ಬದುಕು

*ಎಲ್ಲರಿಗೂ ಮೂಲಭೂತ ಸೌಕರ್ಯಗಳು

*ನಳನಳಿಸುವ ಕ್ರಷಿರಂಗ

*ಸದುತ್ಪಾದಕ ಯುವಜನತೆ

*ಮಹಿಳೆಯರ ಒಳಗೊಳ್ಳುವಿಕೆ

* ಸದ್ರಢ ದೈಹಿಕ ಮತ್ತು ಸಾಮಾಜಿಕ ಮೂಲಸೌಕರ್ಯ

* ಸ್ರಜನಶೀಲ ಮತ್ತು ತಂತ್ರಜ್ನಾನ ಪ್ರೇರಿತ ಸಮಾಜ

* ವಿಶ್ವದೊಂದಿಗೆ  ಸ್ಪರ್ಧಿಸಬಲ್ಲ ಆರ್ಥಿಕತೆ

* ಗುಣಮಟ್ಟ ಆಧರಿಸಿದ “ ಬ್ರಾಂಡ್ ಇಂಡಿಯಾ”

* ಪ್ರಬಲ, ಪರಿಣಾಮಕಾರಿ ಮತ್ತು ಭವಿಷ್ಯದ ಕಲ್ಪನೆಯಿರುವ ಸಂಸ್ಥೆಗಳು

* ತೆರೆದ, ಪಾರದರ್ಶಕ ವ್ಯವಸ್ಥೆಗಳನ್ನಾಧರಿಸಿರುವ ಸರಕಾರ

* ಸ್ವಯಂ ಕ್ರಿಯಾಶೀಲ, ಜನಪರ ಒಳ್ಳೆಯ ಆಡಳಿತ.

ಇವನ್ನೆಲ್ಲ ಸಾಧಿಸಲು ಹಾದಿ:  ಸಬ್ ಕಾ ಸಾತ್ ಸಬ್ ಕಾ ವಿಕಾಸ್.

ಆಧುನಿಕ ಭಾರತವನ್ನು ಕಟ್ಟಲು ಅತ್ಯುತ್ತಮ ತಳಪಾಯ ನಮ್ಮ ಸಂಸ್ಕ್ರತಿ.

ಅತ್ಯುತ್ತಮ ಹತಾರು ನಮ್ಮದೇ ಕೈಗಳು; ಅತ್ಯುತ್ತಮ ಪರಿಕರ ನಮ್ಮದೇ ಆಶೋತ್ತರಗಳು.

ಈಗ ಏಲ್ಲಿದ್ದೇವೆ ನಾವು?

ಇಂತಹದೊಂದು ಘೋಷಣಾಪತ್ರದೊಂದಿಗೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿರುವ ನರೇಂದ್ರ ಮೋದಿ ಸರಕಾರದ ಪ್ರೋಗ್ರೆಸ್ ರಿಪೋರ್ಟ್ ಇನ್ನೊಂದೆರಡು ದಿನಗಳಲ್ಲಿ ಕೈ ಸೇರಲಿದೆ. ಸರಕಾರ ತೋರಿಸಿದ್ದೇನು ಮತ್ತು ಸಾಧಿಸಿದ್ದೇನು ಎಂಬುದರಲ್ಲಿ ಹಾಲೆಷ್ಟು – ನೀರೆಷ್ಟು ಎಂಬುದು ನಮ್ಮೆದುರು ಬರಲಿದೆ.

ಹೊರನೋಟಕ್ಕೆ ಎಲ್ಲೋ ಅಪರೂಪಕ್ಕೆ ಸುರೇಶ್ ಪ್ರಭು, ನಿತಿನ್ ಘಡ್ಕರಿ, ಅರುಣ್ ಜೆಟ್ಲಿ, ಪಿಯೂಷ್ ಗೋಯಲ್, ಸುಷ್ಮಾ ಸ್ವರಾಜ್, ಅನಂತ್ ಕುಮಾರ್ – ಹೀಗೆ ಬೆರಳೆಣಿಕೆಯ ಸಚಿವರು ಅಲ್ಲಿ ಇಲ್ಲಿ ಮುಖ ತೋರಿಸಿದ್ದು ಬಿಟ್ಟರೆ ಇಡಿಯ ಮೂರು ವರ್ಷಗಳಲ್ಲಿ ದೇಶದ ಜನತೆ ಕೇಂದ್ರ ಸಚಿವ ಸಂಪುಟದಲ್ಲಿ ಢಾಳಾಗಿ ಕಂಡದ್ದು ನರೇಂದ್ರ ಮೋದಿಯವರನ್ನು ಮಾತ್ರ. ಅದೂ ಮಾಧ್ಯಮಗಳ, ಸದನದ ಪ್ರಶ್ನೆಗಳು, ಹಸ್ತಕ್ಷೇಪಗಳು ಸಾಧ್ಯವಿರದ ವನ್ ವೇ ಟ್ರಾಫಿಕ್ಕಿನ ಭದ್ರ ಕೋಟೆಯಲ್ಲಿ. ಹಿಂದೆ ಇದೇ ಪಕ್ಷದ ಸರಕಾರದ ಪ್ರಧಾನಿ ಆಗಿದ್ದ ಅಟಲ್ ಬಿಹಾರಿ ವಾಜಪೇಯಿ ಅವರು ಸದನದಲ್ಲಿ, ಪತ್ರಿಕಾಗೋಷ್ಟಿಗಳಲ್ಲಿ ತಮ್ಮ ಪಕ್ಷ-ಸರಕಾರಗಳನ್ನು ಸಮರ್ಥಿಸಿಕೊಂಡದ್ದನ್ನು ಕಂಡವರಿಗೆ ಹಾಲೀ ನರೇಂದ್ರ ಮೋದಿಯವರ ಸರಕಾರ ಮೊಟ್ಟೆಯೊಡೆಯದೆ ಮರಿ ಹಾಕುತ್ತಿರುವಂತೆ ಕಂಡರೆ ಅಚ್ಚರಿ ಇಲ್ಲ!

ಹೆಚ್ಚಿನ ಓದಿಗಾಗಿ: ಬಿಜೆಪಿ ಚುನಾವಣಾ ಪ್ರಣಾಲಿಕೆ ಇಲ್ಲಿದೆ: http://www.bjp.org/images/pdf_2014/full_manifesto_english_07.04.2014.pdf

‍ಲೇಖಕರು avadhi

May 22, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: