ಬೆಂಕಿಯಲ್ಲಿ ಬೆಂದ ಗಡಿಗೆಯಂತೆ..

ಸಂಧ್ಯಾ ಹೊನಗುಂಟಿಕರ್ / ಕಲಬುರ್ಗಿ         

ಹೊಳೆಯುವ ಕಣ್ಣುಗಳು, ಕಾಸಗಲ ಕುಂಕುಮ, ಹಾಲ್ನೊರೆಯಂತಹ ಕೂದಲು, ಮುಖದ ಮೇಲೆ ಒಂದು ಪ್ರಬುದ್ಧ ನಗೆಯ ಇವರನ್ನು ಕಂಡಾಗ ‘ರಾಜಮಾತೆ’ ಎಂಬ ಗೌರವ ಹುಟ್ಟುತ್ತದೆ. ಇವರಿಗೆ ದಕ್ಕಿದ ಸ್ಥಾನಮಾನಗಳನ್ನು ಗಮನಿಸಿದಾಗ ಓಹ್ ಎಂಥ ಸಾಧನೆ ,ಎಂತಹ ಬದುಕು ಎಂದು ಹುಬ್ಬೇರಿಸುವಂತಾಗುತ್ತದೆ. ಸಾಧನೆ ಎಂದರೆ ಸರಿ. ಆದರೆ ಎಂತಹ ಬದುಕು ಎಂದರೆ ಖಂಡಿತ ಅವರು ಬರೆದಿರುವಂತೆ ಅದು ಕುದಿ ಎಸರು. ಹೌದು, ಆ ಎಸರು ನೀರಿನಲ್ಲಿ ಕುದ್ದು ಕುದ್ದು ಹಬೆಯಲ್ಲಿ ಬೆಂದು ಕೊನೆಗೆ ಹದವಾದ ಮೃದುವಾದ ಮಲ್ಲಿಗೆಯಂತೆ ಅರಳಿದ್ದ ಅನ್ನವಾಗಿ ನಮ್ಮ ನಾಡಿನ ಬಾಳೆ ಎಲೆಯಲ್ಲಿ ಬಡಿಸುತ್ತಿದೆ …. ಡಾ ವಿಜಯ ಅಮ್ಮ ಅವರ ಬದುಕು ಆತ್ಮಕಥೆಯ ಮೊದಲ ಭಾಗವಾಗಿ.

ಚಿತ್ರದುರ್ಗ ,ದಾವಣಗೆರೆ ,ಹೈದರಾಬಾದ್, ಬೆಂಗಳೂರು, ಹೊಸಪೇಟೆಯಲ್ಲೆಲ್ಲ ವಿಜಯಮ್ಮ ಅವರ ಬದುಕು ಚಿತ್ತಾರ ಬರೆದಿದೆ. ಚಿಕ್ಕಂದಿನಲ್ಲೇ ತಾಯಿಯನ್ನು ಕಳೆದುಕೊಂಡು ಹತ್ತನೇ ತರಗತಿಯವರೆಗೆ ವಿದ್ಯಾಭ್ಯಾಸ ಮುಗಿಸಿ ಹರೆಯ ಶುರುವಾಗುವ ಮುನ್ನವೇ ಎರಡು ಮಕ್ಕಳ ತಾಯಿಯಾಗಿ ಸಾಕಷ್ಟು ಕಷ್ಟ ಉಂಡ ಬದುಕಿನಲ್ಲಿ ಬರೀ ಬಿಳಿ ಬಣ್ಣವೇ ಇದ್ದರೂ ಅದಕ್ಕೆ ತಮ್ಮ ಮುಗ್ಧತೆಯಿಂದ ಅನೇಕ ಬಣ್ಣಗಳನ್ನು ತುಂಬಿಕೊಟ್ಟಿದ್ದಾರೆ.

ಕಷ್ಟವಿದ್ದರೂ ಬಾಲ್ಯ ಹಸಿರು ಸಮೃದ್ಧಿ. ಅದೆಷ್ಟು ವಿಷಯಗಳನ್ನು ಹೆಕ್ಕಿ ಹೆಕ್ಕಿ ತೆಗೆದು ಕೊಟ್ಟಿದ್ದಾರೆ ಆ ಶ್ರೀಮಂತ ಬಾಲ್ಯವನ್ನು ನೆನಪಿನ ಪುಟ ದಿಂದ  ಜಾರಿ ಹೋಗದಂತೆ ಅತ್ಯಂತ ಶ್ರದ್ಧೆಯಿಂದ ವಿಜಯಮ್ಮ ಕಟ್ಟಿಕೊಟ್ಟಿದ್ದಾರೆ. ತಂದೆ ತಾತನ ಪ್ರೀತಿ ,ಕಾಯಿಲೆ ಕಸಾಲೆ, ಜಗಳ ,ಬೈಗಳು ಅಲ್ಲದೆ ಅವಲಕ್ಕಿ ಮಾಡುವ ರೀತಿ, ಸಿನಿಮಾ, ಗರಡಿ ಮನೆ, ಕಸೂತಿ ,ಮೊದಲ ಪ್ರೇಮ ಪತ್ರ,  ಶ್ರಾದ್ಧ ತಿಥಿ ,ಪೂಜೆ ,ಮಂಗಳ ಕಾರ್ಯ, ಹಬ್ಬ, ಊಟತಿಂಡಿ ವೈವಿಧ್ಯ, ಆಟ ಪಾಠ, ಪೊಲಿ ಸುದ್ದಿಗಳು,ಮೈಯಲ್ಲಿ ಅಮ್ಮ ಬಂದದ್ದು, ದೆವ್ವ  ಹಿಡಿದದ್ದು, ಮನೆವಾರ್ತೆಯ ಸಂಕಷ್ಟಗಳು, ಖರ್ಚು ತೂಗಿಸುವ ರೀತಿ ಇವೆಲ್ಲವನ್ನೂ ಇದ್ದದ್ದು ಇದ್ದ ಹಾಗೆ ಬಿಡಿಸಿಡುತ್ತಾರೆ. ಹೊಡೆತ ಬೈಗಳನ್ನು ಆಟ ಮೋಜು ಮಸ್ತಿಗಳನ್ನು ಮತ್ತೊಮ್ಮೆ ಅನುಭವಿಸಿ ಸುಖಿಸಿದಂತೆ ಬರೆಯುತ್ತಾರೆ. ಬಹುಶಃ ಅವುಗಳನ್ನು ಬರೆಯುವಾಗಲೂ ಅವರ ಕಣ್ಣಲ್ಲಿ, ಮುಖದಲ್ಲಿ ತುಂಟ ನಗು ಮಿನುಗಿರಬೇಕು ಎಂದು ಅನ್ನಿಸದಿರದು. ಈ ಕೃತಿಯು ಕಾದಂಬರಿಯ ಘಟನಾವಳಿಗಳ ಹಾಗೆ ಹಾದು ಹೋಗುತ್ತದೆ

ಮದುವೆಯ ಮುಂಚೆಯ ಅವರ ಬದುಕಿನ ಪದರುಗಳನ್ನು ಬಿಚ್ಚಿಡುವಾಗ ತಮ್ಮ ಸುತ್ತಮುತ್ತಲಿನ ಜನಜೀವನ, ಹವಾಮಾನ, ಪ್ರಾದೇಶಿಕತೆ, ಕಾಲದ  ಸ್ಥಿತ್ಯಂತರ ಇದೆಲ್ಲವನ್ನೂ ದಾಖಲಾಗುವಂತೆ ಕಟ್ಟಿಕೊಡುತ್ತಾರೆ. ತಾವು ವಯಸ್ಸಿನಿಂದ ದೊಡ್ಡವಳಾಗಿಯೂ ಹೆಣ್ತನದ ಸೂಕ್ಷ್ಮ ವಿಲ್ಲದ ಬಗ್ಗೆ, ತಂದೆಯ ಅನೈತಿಕ ಸಂಬಂಧಗಳ ಬಗ್ಗೆ, ತನ್ನ ಚಿಕ್ಕಮ್ಮಚಿಕ್ಕಪ್ಪನ ಇರುಸು ಮುರುಸು ಹಾಗೂ ಅಪ್ಪುನ ಜೊತೆ ತಾವು ಜಗಳವಾದಾಗ ತುಂಬಾ ಸಹಜವಾಗಿ ಅವುಗಳ ಬರೆಯುತ್ತಾರೆ. ಅಲ್ಲೆಲ್ಲೂ ಪಾಪಪ್ರಜ್ಞೆಯ ಭಾವ, ನಾನು ಪ್ರಾಮಾಣಿಕಳು ಅಂತಲೂ, ನನ್ನದು ಸರಿಯಾಗಿಯೇ ಇತ್ತು ಎಂದಾಗಲಿ ಎಲ್ಲಿಯೂ ಹೇಳಿಕೊಳ್ಳುವುದಿಲ್ಲ. ನನ್ನದು ತಪ್ಪಿತ್ತು ಅಥವಾ ನನಗೇಕೆ ತಿಳಿಯಲಿಲ್ಲವೋ ಎನ್ನುತ್ತಾರೆ. ಅಲ್ಲದೆ ಅವರೇ ಹೇಳಿದಂತೆ ತಮಗೆ ವಿರುದ್ಧವಾಗಿರುವ ಬಗ್ಗೆ  ಆಕೆಗೆ ದ್ವೇಷ,. ಕೋಪ ಇಲ್ಲ. ಅವರು ಕೆಟ್ಟವರು ಎಂಬ ಭಾವವೂ ಇಲ್ಲ. ಚಿಕ್ಕಮ್ಮ ನೀಡಿದ ತೊಂದರೆಗಳನ್ನು ಹೇಳುವಾಗ ಎಲ್ಲರಿಗೂ ಆ ಪರಿಸ್ಥಿತಿಯಲ್ಲಿ ಆ ಸ್ವಭಾವ ಸಹಜ ಎನ್ನುತ್ತಾರೆ.

ಮದುವೆಯ ನಂತರದ ಬದುಕಿನ ಬಗ್ಗೆ ಅವರು ಬಿಚ್ಚಿಟ್ಟ ಸಂಗತಿಗಳು ಎಂಥವರ ಎದೆಯನ್ನೂ ಢವಗುಡಿಸುತ್ತವೆ. ಶೋಷಣೆಯ ವಿಕೃತ ಮುಖವನ್ನು ಅನಾವರಣಗೊಳಿಸಿರುವ ಆ ಘಟನೆಗಳು ಓದುಗರನ್ನು ಅವರ    ವೈಯಕ್ತಿಕ ನೆಲೆಯಲ್ಲಿ ನೋಡದೇ ಸಾಮಾಜಿಕ ನೆಲೆಯಲ್ಲಿ ಯೋಚಿಸುವಂತೆ ಮಾಡುತ್ತವೆ .

ಡಾ ವಿಜಯಾ ಆ ಎಲ್ಲ ದಾರುಣ ಸ್ಥಿತಿಗೆ ಬಲಿಪಶು ನಾನಲ್ಲ… ಒಬ್ಬ ಹೆಣ್ಣು  ಎಂಬ ಭಾವದಿಂದ ಆ ಘಟನೆಗಳ ಆಚೆ ನಿಂತು ಮೂಕಪ್ರೇಕ್ಷಕರಾಗಿ  ವಿವರಿಸಿದ್ದಾರೆ .ಆಗ ಎಲ್ಲಿಯೂ ತಮ್ಮ ಬಗ್ಗೆ ತಮಗೆ ಮರುಕ ವಿಲ್ಲದಂತೆ ಬರೆದಿರುವುದನ್ನು ಕಂಡಾಗ ಅವರಲ್ಲಿಯ ವಿರಕ್ತತೆ ಎದ್ದು ಕಾಣುತ್ತದೆ. ಕುದಿದು ಕುದಿದು ಪಕ್ವಗೊಂಡ ಪ್ರಬುದ್ಧ ಮನಸ್ಸು ಗೋಚರಿಸುತ್ತದೆ.

“ಇನ್ನೂ ಹಾಸಿಗೆ ಸುಖ ….ಅದನ್ನು ಗರತಿಯರು ಅಪೇಕ್ಷಿಸಬಹುದಾ? ಊಟ ಒಂದು ಹಕ್ಕು… ಬಟ್ಟೆ ಬರೆ ಮತ್ತು ಸುಖ ಗಿಫ್ಟ್ ಕೂಪನ್  ತರಹ ” ಸೇತುರಾಮ್ ಅವರ ಒಂದು ಕತೆಯಲ್ಲಿ ಬರುವ ಮಾತು.ಹೌದು.ಮದುವೆಯ  ನಂತರ ಮಹಿಳೆಯ ಹಾಸಿಗೆ ಎಂತಹ ಕಷ್ಟ  ಸುಖಗಳನ್ನುತರುತ್ತದೋ ಉಹಿಸಲಾಗದು.ರೌರವ ನರಕದಲ್ಲಿ ಮಾನಸಿಕ , ದೈಹಿಕ ಹಿಂಸೆಗಳನ್ನು ಬಿಚ್ಚಿಟ್ಟ ಆ ಪರಿ ಓದುವವರಿಗೆ ಅಳು ಬರಿಸುತ್ತದೆ, ಗಾಬರಿಯಾಗುತ್ತದೆ. ಅಯ್ಯೋ ..ಇಂಥಹದ್ದನ್ನೆಲ್ಲಾ ಯಾಕೆ ಸಹಿಸಿದರೂ? ಯಾಕೆ ಮೌನವಾಗಿದ್ದರು? ಯಾಕೆ ಕೂಗಿ ಚೀರಿ ಮನೆಯವರಿಗೆಲ್ಲ ಹೇಳಲಿಲ್ಲ ?ಯಾಕೆ ತಮ್ಮವರೊಂದಿಗೆ ದುಃಖ ಹಂಚಿಕೊಳ್ಳಲಿಲ್ಲ? ಯಾಕೆ ದಂಡಿಸಲಿಲ್ಲ? ಎಂದೆಲ್ಲಾ ಪ್ರಶ್ನೆಗಳು ಮೂಡುವುದು ಸಹಜ. ಅಂತೆಯೇ ಬರೆಯುತ್ತಾ ಆಕೆಯೂ ಈ ಪ್ರಶ್ನೆಗಳನ್ನು ಹಾಕಿಕೊಂಡು ಉತ್ತರಿಸುತ್ತಾರೆ,ಆಗ ನನಗೂ ಈ ಸಂಗತಿಗಳು ಹೊಳೆಯಲಿಲ್ಲ ಎಂದು. ಆಕೆ ಎಲ್ಲಿಯೂ ನಾನು ಸಹನಶೀಲೆ, ತಾಳ್ಮೆಯ ಪ್ರತೀಕ, ಶಾಂತ ಸ್ವರೂಪಿ, ಎಂದು ಹೇಳಿಕೊಂಡಿಲ್ಲ. ಓದುಗರಿಂದ ಅನುಕಂಪ ಗಿಟ್ಟಿಸಿಕೊಳ್ಳುವ ಯಾವ ಗೆರೆಯೂ ಅಲ್ಲಿಲ್ಲ. ತಮ್ಮ ಮೇಲೆ ಓದುಗರು ಹೊಗಳಿಕೆಯ ಹೊರೆ ಹೊರಿಸಬೇಕೆಂಬ ಭಾವವಿಲ್ಲ. ಅದು ಯಾರದೋ ಬದುಕು. ನಾನು ಪ್ರಾಮಾಣಿಕವಾಗಿ ದಾಖಲಿಸುವೆ ಎಂಬ ಸ್ಥಿತಪ್ರಜ್ಞೆ ವಿಜಯಮ್ಮನದು.


ಪ್ರತಿ ಮಹಿಳೆಯ ಬದುಕಿನಲ್ಲಿ ಆಪ್ತ ಸಂಗತಿಗಳು ಬಹಳ. ಹದಿವಯಸ್ಸಿನ ದೈಹಿಕ ಬೆಳವಣಿಗೆ, ಮೈಮರೆಯುವುದು, ತಿಂಗಳ ಮುಟ್ಟಿನ ಮೂರು ದಿನಗಳು, ಒಳ ಉಡುಪುಗಳ ಬಳಕೆ, ದಾಂಪತ್ಯ ಜೀವನ, ಹೆರಿಗೆ, ಮಗುವಿಗೆ ಹಾಲೂಡುವಿಕೆ ,ದೈಹಿಕ ಬದಲಾವಣೆ, ಮುಟ್ಟು ನಿಲ್ಲುವುದು, ಮುಂತಾದವು ಯಾವ ಮಹಿಳೆಯರ ಜೀವನದಲ್ಲಿ ಈ ಒಟ್ಟೂ ಸಂಗತಿಗಳು ಸುಖಪ್ರದವಾಗಿದ್ದರೆ ,ಗೌರವ ಭಾವವನ್ನು ಅನುಭವಿಸಿದ್ದರೆ ಆಕೆ ಬಹಳ ಅದೃಷ್ಟವೆಂದೇ ತಿಳಿಯಬೇಕು. ಯಾವುದೇ ಒಂದು ಹಂತದಲ್ಲೂ ಆಕೆಗೆ ಕಷ್ಟ ಎದುರಿಸಬೇಕಾದರೆ ಅದು ನರಕಕ್ಕೆ ಸಮಾನ. ಏಕೆಂದರೆ ಇದು ದೈಹಿಕ ಸಂಗತಿ ಮಾತ್ರವಾಗಿರದೆ, ಭಾವನಾತ್ಮಕವೂ, ಮಾನಸಿಕ ಸಂಗತಿಯೂ ಆಗಿರುತ್ತದೆ. ಮಹಿಳೆಯ ಈ ಎಲ್ಲ ವಿಷಯಗಳನ್ನು ಇಂದಿನ ಯುಗದಲ್ಲೂ ಸಮಾಜ, ತಂದೆ, ಗಂಡ, ಸೋದರ ಅಲ್ಲದೆ ಸ್ವತಃ ಮಹಿಳೆಯೇ ವೈಜ್ಞಾನಿಕವಾಗಿ ನೋಡುತ್ತಿಲ್ಲ ಎನ್ನುವುದು ವಿಷಾದದ ಸಂಗತಿ. ಎಲ್ಲದಕ್ಕೂಹೋರಾಟ, ಚಳವಳಿ, ಪ್ರತಿಭಟನೆ ಆಗಲೇಬೇಕು.  ಇದೆಲ್ಲಾ ಏಕೆ ಹೇಳಬೇಕಾಗುತ್ತದೆ ಎಂದರೆ ವಿಜಯಮ್ಮ ಅವರ ಆತ್ಮಕತೆ ಈ ನೆಲೆಯಲ್ಲಿ ಯೋಚಿಸಲು ಹಚ್ಚುತ್ತದೆ .

ನರಕದ ರಾತ್ರಿಗಳನ್ನು ಹಾಯುತ್ತಲೇ ತಮ್ಮ ತಾಯ್ತನದ ಸುಖವನ್ನು, ಮಕ್ಕಳ ಬಾಲ್ಯ, ಚೇಷ್ಟೆಗಳನ್ನು ,ತಂದೆಯ ವಾತ್ಸಲ್ಯ, ನೆರೆಹೊರೆಯವರ  ಸಹಕಾರ, ಪ್ರೀತಿ ,ಸ್ನೇಹವನ್ನು ಓದುಗರಿಗೆ ಉಣ ಬಡಿಸುವಾಗ ಕೆಟ್ಟ ಘಳಿಗೆಗಳು ಬದುಕಿನ ಒಂದು ಭಾಗ ಮಾತ್ರ ಎಂಬಂತೆ ಭಾಸವಾಗುತ್ತದೆ ಹೊರತು ಎಲ್ಲಿಯೂ ಉತ್ಪ್ರೇಕ್ಷೆ, ಉತ್ಸುಕತೆ ಹೆಚ್ಚಿಸುವ ತಂತ್ರಗಾರಿಕೆ, ಅತಿಶಯೋಕ್ತಿ ಇಲ್ಲದೆ, ಅತ್ಯಂತ ಸಮತೋಲನದ  ಬರವಣಿಗೆಯಾಗಿದೆ. ಅಲ್ಲಲ್ಲಿ ತಮಗೆ ದಕ್ಕಿದ ಹೊಗಳಿಕೆಯ ಘಟನೆಗಳನ್ನು ಮತ್ತು ಮುದಗೊಂಡ ಮನಸ್ಸನ್ನು ತೆರೆದಿಡುತ್ತಾರೆ

ಇವೆಲ್ಲವುಗಳೊಂದಿಗೆ ಅವರ ಬದುಕು ಕವಲೊಡೆಯುವ ಪ್ರಾರಂಭಿಕ ದಿನಗಳನ್ನು ಭಾವೋದ್ವೇಗವಿಲ್ಲದೆ ತಾವು ಅನುಭವಿಸಿದ ನೆನಪುಗಳನ್ನು ಅಚ್ಚುಕಟ್ಟಾಗಿ ಚಿತ್ರಿಸಿದ್ದಾರೆ. ತಾವು ಒಬ್ಬ ಗಟ್ಟಿ ಮಹಿಳೆ ಹೋರಾಟಗಾರ್ತಿ ಎಂದು ಬಿಂಬಿಸದೆ ತನ್ನ ಪರ ವಹಿಸಿದ ಮಾವನ ಕೊನೆಗಾಲಕ್ಕೆ ನೆಮ್ಮದಿ ನೀಡಿದ ಬಗ್ಗೆ ತನ್ನ ಜೀವಕ್ಕಿಂತ ಹೆಚ್ಚು ಪ್ರೀತಿಸಿದ ಸರ್ವಸ್ವವೂ ಆದ ತಂದೆಯ ಮರಣದ ಬಗ್ಗೆ ಹೇಳುವ ವಿಜಯಮ್ಮ ಸಮಾಜ ಸೇವಕಿ ಎಂಬ ವೇಷ ಎಲ್ಲಿಯೂ ತೊಡುವುದಿಲ್ಲ.

ಅಪ್ಪಟ ಜೋಯಿಸರ ಮನೆತನದ ಆಕೆ ಮಡಿ ಉಟ್ಟು, ಒಲೆಯ ಮೇಲೆ ಅಡುಗೆ ಮಾಡಿ, ಕೂಡು ಕುಟುಂಬದ ನಿರ್ವಹಿಸಿ, ಮಸಾಲೆ,  ಚಟ್ನಿ ಪುಡಿ, ಹುರಿದು ಕುಟ್ಟಿ ಕಷ್ಟಪಟ್ಟಿದ್ದಾರೆ. ನಿಜ.. ಇವರಂತೆ ಕಷ್ಟಪಟ್ಟ   ಪಡುತ್ತಿರುವ ಮಹಿಳೆಯರು ಅನೇಕರಿದ್ದಾರೆ. ಆದರೆ ಅದನ್ನೆಲ್ಲಾ ಬದುಕಿನ ಅನುಭವದ ದ್ರವ್ಯ ಎಂದು ತೋರಿಸುತ್ತಾ ಫಿನಿಕ್ಸ್ ನಂತೆ ಬಾನೆತ್ತರಕ್ಕೆ ಚಿಮ್ಮಿದ ಈ ಸ್ತ್ರೀಯ ಸಾಮರ್ಥ್ಯಕ್ಕೆ ಒಂದು ಸಲಾಂ. ಎರಡು ಮಕ್ಕಳಾದ ಮೇಲೆ ಕಾಲೇಜಿಗೆ ಹೋಗಿ ಓದು ಮುಂದುವರಿಸಿ ಡಾಕ್ಟರೇಟ್ ಪದವಿ ಸಂಪಾದಿಸಿದ್ದು ಅನೇಕ ಮಹಿಳೆಯರಿಗೆ ಮಾದರಿ. ಪ್ರಜಾಮತ, ತರಂಗ ,ಲೇಖಕಿಯರ ಸಂಘ, ಅನೇಕ ಪ್ರಕಾರದ ಬರವಣಿಗೆ, ಕಲಾ ಮಂದಿರದ ಒಡನಾಟ, ಬೊಂಬೆಯಾಟದ ಯಶಸ್ಸು, ಮಾಸ್ತಿ ,ಕಂಬಾರ, ಚಂಪಾ, ಎ.ಎಸ್. ಮೂರ್ತಿ, ಇಂದಿರಾ, ಎಲ್.ಎಸ್.ಎಸ್, ರೇವಮ್ಮ, ಮಂಗಳ, ಲಂಕೇಶ್, ವಿ.ಸಿ, ಅನಂತಮೂರ್ತಿ, ಬನ್ನಂಜೆ ಸಹೋದರರು, ಭೈರಪ್ಪ, ವಾಣಿ, ಕಮಲಮ್ಮ, ಸುಬ್ಬರಾಯರು, ತೀ.ತಾ. ಶರ್ಮಾ, ಕೆ.ಎಸ್. ನ, ಜಿ.ಎಸ್.ಎಸ್, ಅಡಿಗ, ಅನಕೃ, ಮುಂತಾದವರ ಒಡನಾಟದಲ್ಲಿ ಪಳಗಿ  ದೊಡ್ಡ ಬಳಗದೊಂದಿಗೆ ಸಾರಸ್ವತ ಲೋಕದೊಳಗೆ ಪ್ರವೇಶಿಸಿ ಮೊಳಕೆಯೊಡೆದು ಪುಟಿಯತೊಡಗಿದ್ದನ್ನು ಓದುವಾಗ ಓದುಗನಿಗೇ ನೆಮ್ಮದಿಯ ಭಾವ.

ಇಂತಹ ಮೇರು ವ್ಯಕ್ತಿಗಳೊಂದಿಗೆ ಅತ್ಯಂತ ಧನ್ಯತಾ ಭಾವದಿಂದ ತನ್ನ ಬದುಕಿಗೆ    ಬೆಂಗಾವಲಾದ ಅಂತರಂಗದ ಸಖಿಯು  ಹೌದು ಎಂಬಂತೆ ಕೆಲಸದವರಾದ ಬೋರಮ್ಮನನ್ನು ನೆನಪಿಸಿಕೊಳ್ಳುತ್ತಾರೆ ವಿಜಯಮ್ಮ .ಅನೇಕ ಪ್ರಶಸ್ತಿ ಪುರಸ್ಕಾರಗಳಿಗೆ ಸಂಘ ಸಂಸ್ಥೆಯ ಮಹತ್ವದ ಸ್ಥಾನಗಳಿಗೆ ಆಯ್ಕೆಯಾದ ಡಾ ವಿಜಯಮ್ಮ ಅವರ ಬದುಕು ಕುದಿ ಹೆಸರು ನಿಜ.ಆದರೆ ನನಗನ್ನಿಸಿದ್ದು ಬೆಂಕಿಯಲ್ಲಿ ಬೆಂದ ಗಡಿಗೆ ನೆಲದ ಶಕ್ತಿಯನ್ನು ಒಗ್ಗೂಡಿಸಿ ಮಣ್ಣಿನ ಗಡಿಗೆಯಾಗಿ ರೂಪುಗೊಂಡು ಬೆಂಕಿಯಲ್ಲಿ ಸುಟ್ಟು ಗಟ್ಟಿಯಾದ ಈ ಗಡಿಗೆ ತನ್ನೊಡಲಲ್ಲಿ ತಣ್ಣೀರು ತುಂಬಿಕೊಂಡಿದೆ. ಅಕ್ಷಯ ಪ್ರೀತಿಯ ಅಮ್ಮನ ಮುಂದಿನ ಜೀವನದ ‘ ಜೀವಗಾಳು ‘ ವಿಗಾಗಿ ಜನ ಕಾದು ಕುಳಿತಿದೆ

 

‍ಲೇಖಕರು avadhi

December 23, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: