ನಮ್ಮ ನಡುವಿನ ಆರ್. ವಿ


ಇನ್ನೊಬ್ಬರು ಅಣ್ಣನ ಆತ್ಮೀಯರು. ಹಿಚ್ಕಡದ ಶಾಂತಾರಾಮ ನಾಯಕರು. ಅವರೂ ಫ್ರೌಢಶಾಲಾ ಶಿಕ್ಷಕರು. ವಿ.ಜೆ. ನಾಯಕ ಮತ್ತು ಶಾಂತಾರಾಮ ನಾಯಕ ಇಬ್ಬರೂ ಸೇರಿ ಶಟಗೇರಿಯ ಸತ್ಯಾಗ್ರಹ ಸ್ಮಾರಕ ಪ್ರೌಢಶಾಲೆಯನ್ನು ಬೆಳೆಸಿದವರು. ಈಗ ಅವರಿಗೆ ೮೦ ವರ್ಷ.

ಹಿಚ್ಕಡವೆಂದರೆ ನಮಗೆ ಇನ್ನೊಂದು ಮನೆ ಇದ್ದಂತೆ. ಇವರಂತೂ ಅಣ್ಣನ ಮಹಾ ಅಭಿಮಾನಿ. ಅಣ್ಣನಿಗೂ ಶಾಂತಾರಾಮ ನಾಯಕರೆಂದರೆ ಅಷ್ಟೇ ಪ್ರೀತಿ. ಶಟಗೇರಿ ಹೈಸ್ಕೂಲಿಗೆ ಅಣ್ಣ ಹತ್ತಾರು ಬಾರಿ ಹೋಗಿದ್ದಿದೆ. ಶಾಂತಾರಾಮ ನಾಯಕರ ಬಹುತೇಕ ಪುಸ್ತಕದ ಬಿಡುಗಡೆಯಲ್ಲಿ ಅಣ್ಣ ಹಾಜರಿದ್ದ. ಅವರ ಹಲವು ಪುಸ್ತಕದ ಬಗ್ಗೆ ವಿಮರ್ಶೆಯನ್ನೂ ಬರೆದಿದ್ದ.

ಶಾಂತಾರಾಮ ನಾಯಕರ ನೇತೃತ್ವದಲ್ಲಿ ಶಿಕ್ಷಣ ತಜ್ಞ ಎಂ.ಎಚ್. ನಾಯಕರ ನೆನಪಿನಲ್ಲಿ ನೀಡುವ ಕೊಗ್ರೆ ಪ್ರಶಸ್ತಿಯನ್ನು ಅಣ್ಣನಿಗೆ ನೀಡಿ ಗೌರವಿಸಲಾಗಿತ್ತು. ಅಣ್ಣನಿಗೆ ಅವರ ಮೇಲೆ ಇನ್ನಷ್ಟು ಗೌರವ ಮೂಡಲು ಕಾರಣ ಅವರು ಬರೆದ ಅಂಕೋಲೆಯ ಸ್ವಾತಂತ್ರ್ಯ ಚಳುವಳಿಯ ಕುರಿತ ಬರೆದ ಪುಸ್ತಕ ಚರಿತ್ರೆಯಲ್ಲಿ ಮರೆತವರ ಕತೆ ಪುಸ್ತಕ.

ದೇಸಾಯಿ ನೇತೃತ್ವದ ರೈತ ಹೋರಾಟ ಮತ್ತು ಅಂಕೋಲೆಯಲ್ಲಿ ನಡೆದ ಸ್ವಾತಂತ್ರ್ಯ ಹೋರಾಟ ಇವೆರಡು ಈ ಜಿಲ್ಲೆಯ ಎರಡು ಮಹಾಕಾವ್ಯಗಳೆಂದು ಅಣ್ಣ ಯಾವಾಗಲೂ ಹೇಳುತ್ತಿದ್ದ. ಅಂತಹ ಒಂದು ಮಹಾಕಾವ್ಯದ ಕುರಿತು ಶಾಂತಾರಾಮ ನಾಯಕರು ಬರೆದಿದ್ದರು.

ಸಾಮಾನ್ಯವಾಗಿ ಉತ್ತರ ಕನ್ನಡ ಜಿಲ್ಲೆಯ ಸ್ವಾತಂತ್ರ್ಯ ಹೋರಾಟದ ಬಗ್ಗೆ ನಾವು ಸೂರ್ಯನಾಥ ಕಾಮತರ ಪುಸ್ತಕವನ್ನೋ ಅಥವಾ ರಂಗನಾಥ ದಿವಾಕರ ಅವರ ಪುಸ್ತಕವನ್ನೋ ಓದಬೇಕಾಗಿತ್ತು. ಅಲ್ಲೆಲ್ಲಾ ಉತ್ತರಕನ್ನಡದ ಬಗ್ಗೆ ತೀರಾ ಸಂಕ್ಷಿಪ್ತ ಮಾಹಿತಿಗಳಿದ್ದವು. ಮತ್ತು ಕೆಲವು ಸಮಸ್ಯಾತ್ಮಕವಾಗಿಯೂ ಇತ್ತು.

ಆದರೆ ಶಾಂತಾರಾಮ ನಾಯಕರು ಮೊದಲು ಬರೆದ ಚರಿತ್ರೆಯಲ್ಲಿ ಮರೆತವರು ಮತ್ತು ನಂತರ ಬರೆದ ಸ್ವಾತಂತ್ರ್ಯ ಹೋರಾಟದ ಹೊರಳು ನೋಟ ಪುಸ್ತಕಗಳು ತೀರಾ ವಿಸ್ತಾರವಾಗಿ ಉತ್ತರ ಕನ್ನಡ ಸ್ವಾತಂತ್ರ್ಯ ಚಳುವಳಿಯ – ಮುಖ್ಯವಾಗಿ ಅಂಕೋಲೆಯನ್ನು ಕೇಂದ್ರವಾಗಿಟ್ಟುಕೊಂಡು- ಅಧಿಕೃತ ಇತಿಹಾಸವನ್ನು ಹೇಳುವಂತಹದು. ಈ ಪುಸ್ತಕ ಬರೆಯುವುದಕ್ಕೆ ಅಣ್ಣನ ಒತ್ತಾಸೆ ಕೂಡ ಕಾರಣವಾಗಿತ್ತು.

ಕೃತಿ ರಚನೆಗೆ ಪ್ರೇರಣೆ ನೀಡಿದವರು ನನ್ನ ಇನ್ನೊಬ್ಬ ಆತ್ಮೀಯರಾದ ಡಾ. ಆರ್.ವಿ. ಭಂಡಾರಿಯವರು. ನಮ್ಮ ಅಂಕೋಲಾ ತಾಲೂಕಿನ ಸ್ವಾತಂತ್ರ್ಯ ಹೋರಾಟದ ಕಥೆಯನ್ನು ಬಹುವಾಗಿ ಮೆಚ್ಚಿಕೊಂಡವರಾಗಿದ್ದರು. ಈ ಭಾಗದ ಸಾಹಸಪೂರ್ಣ ಹೋರಾಟದ ಕಥೆಯನ್ನು ಕೇಳುತ್ತಲೇ ಮೈಮರೆಯುತ್ತಿದ್ದರು.

ಬೇಡ್ಕಣಿ ಚೌಡ ಕನ್ನ ನಾಯ್ಕರ ಕುರಿತು ಬರೆಯುವಂತೆ ತಿಳಿಸಿ ಅವರ ಕುರಿತಾಗಿ ಮಾಹಿತಿಯನ್ನು ಒದಗಿಸಿರುವರು. ಸ್ವಾತಂತ್ರ್ಯ ಸಂಗ್ರಾಮದ ಕುರಿತು ಕೆಲವು ಲೇಖನಗಳನ್ನು ನನ್ನಿಂದ ಬರೆಯಿಸಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ.

ನಮ್ಮ ವರ್ತಮಾನದ ಅನೇಕ ಭಂಡತನಗಳಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಹಾಗೂ ಅನೇಕ ಭಂಡರಿಗೆ ಅರಿಯಾದ ಇವರನ್ನು ಯಾರಿವನು ಎಂದು ಹುಬ್ಬೇರಿಸಿ, ಮಾಕರಿಸಿ ನೋಡುವಂತೆ ಗಮನಸೆಳೆದ ಈ ಜಿಲ್ಲೆ ಹಾಗೂ ಈ ನಾಡು ಕಂಡ ಶ್ರೇಷ್ಠ ಚಿಂತಕ, ಕ್ರಾಂತಿಕಾರಿ, ಬಡವರ ಪಕ್ಷಪಾತಿ, ಮಾನವತಾವಾದಿ ಲೇಖಕರಲ್ಲಿ ಡಾ. ಆರ್.ವಿ. ಭಂಡಾರಿಯವರು ಒಬ್ಬರು.

ಇಂದು ಭೌತಿಕವಾಗಿ ನಮ್ಮಿಂದ ಮರೆಯಾದರೂ, ನನ್ನೊಳಗೆ ನೆಲೆನಿಂತು, ‘ನನ್ನ ಸಾಹಿತ್ಯ ರಚೆನೆಗೆ ಸದಾ ಅಂತ:ಪ್ರೇರಣೆಯನ್ನು ನೀಡುತ್ತಿರುವ ಆತ್ಮೀಯರಾದ ಡಾ. ಆರ್.ವಿ.ಭಂಡಾರಿಯವರಿಗೆ’ ಎಂದು ಶಾಂತಾರಾಮ ನಾಯಕ ಅವರು ಆ ಪುಸ್ತಕದ ನನ್ನ ಮಾತಿನಲ್ಲಿ ಹೇಳಿಕೊಂಡಿದ್ದಾರೆ.

ಇತ್ತೀಚೆಗೆ ಪ್ರಕಟವಾದ ಅವರ ಮಂಡಕ್ಕಿ ತಿಂದ ಗಂಗೆ; ಎನ್ನುವ ಕಥಾ ಸಂಕಲನದಲ್ಲಿ ಕೂಡ “ನನ್ನ ಕತೆಯನ್ನು ಮೊದಲು ಓದಿ ಪ್ರತಿಕ್ರಿಯಿಸಿದವರು ಆತ್ಮೀಯರಾದ ಆರ್ ವಿ ಭಂಡಾರಿಯವರು. ಇನ್ನು ಮುಂದೆ ನೀವು ಕತೆಗಳನ್ನೇ ಬರೆಯಬೇಕು. ನೀವು ಉತ್ತಮ ಕತೆಗಾರರಾಗಬಲ್ಲಿರಿ. ದಯಮಾಡಿ ಕತೆಯ ಬರವಣಿಗೆಯಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ ಎಂದು ಪ್ರೋತ್ಸಾಹದ ಆದೇಶವನ್ನೇ ಮಾಡಿದರು” ಎಂದು ಬರೆದುಕೊಂಡಿದ್ದಾರೆ.

ಇದನ್ನು ಓದಿದ ಮೇಲೆ ಅಣ್ಣನಿಗೆ ಅಂಕೋಲೆಯ ಸ್ವಾತಂತ್ರ್ಯ ಚಳುವಳಿಯನ್ನು ಕೇಂದ್ರವಾಗಿಟ್ಟುಕೊಂಡು ಒಂದು ಕಾದಂಬರಿ ಬರೆಯುವ ಆಸೆಯನ್ನು ವ್ಯಕ್ತಪಡಿಸಿದ್ದ. ಇದಕ್ಕಾಗಿ ಅಣ್ಣ ವಿಷಯ ಸಂಗ್ರಹವನ್ನು ಮಾಡಿಕೊಳ್ಳುತ್ತಿದ್ದ. ಚಳುವಳಿ ನಡೆದ ಕೆಲವು ಪ್ರದೇಶವನ್ನು ತೋರಿಸುವಂತೆ ಶಾಂತಾರಾಮ ನಾಯಕರಲ್ಲಿ ಹೇಳಿದ್ದ ಮತ್ತು ಅಂಕೋಲೆಗೆ ಬಂದಾಗ ಇವರನ್ನು ಕರೆದುಕೊಂಡು ಹೋಗಿದ್ದರೂ ಕೂಡ.

ಆದರೆ ಅನಿರೀಕ್ಷಿತವಾಗಿ ಬಂದ ಆತನ ಅನಾರೋಗ್ಯದಿಂದಾಗಿ ಅಣ್ಣನಿಗೆ ಆ ಕಾದಂಬರಿಯನ್ನು ಮುಗಿಸಲು ಆಗಲಿಲ್ಲ. ಒಬ್ಬ ಸಂಘಟಕರಾಗಿ ಶಾಂತಾರಾಮ ನಾಯಕರು ಬಂಡಾಯ ಸಾಹಿತ್ಯ ಸಂಘಟನೆಯಲ್ಲಿ ಇಲ್ಲದಿದ್ದರೂ ವೈಚಾರಿಕವಾಗಿ, ಸೈದ್ಧಾಂತಿಕವಾಗಿ ಅವರು ಬಂಡಾಯದೊಂದಿಗೆ ಇದ್ದವರು. ಅಣ್ಣ ಸಂಘಟಿಸಿದ ಬಹುತೇಕ ಕಾರ್ಯಕ್ರಮದಲ್ಲಿ ಅವರಿರುತ್ತಿದ್ದರು.

ಅಣ್ಣನ ಕುರಿತು ಅವನ ಪ್ರೀತಿ ಅಭಿಮಾನದ ಕಾರಣದಿಂದ ‘ಸಹಯಾನ’ ಪ್ರಾರಂಭ ಆದಾಗ ಅಧ್ಯಕ್ಷರಾಗಿ ಅವರು ಬೆನ್ನಲುಬಾಗಿ ನಿಂತರು. ಮನೆಯ ಹಿರಿಯರಾಗಿ ಅವರು ಈಗಲೂ ನಮ್ಮನ್ನು ಪ್ರೋತ್ಸಾಹಿಸುತ್ತಿದ್ದಾರೆ. ಅವರ ಮೇಲಿನ ಪ್ರೀತಿಯಿಂದ ಬಂಡಾಯ ಪ್ರಕಾಶನದ ಮೂಲಕ ಅವರ ೨ ಪುಸ್ತಕವನ್ನು ಇತ್ತೀಚೆಗೆ ಪ್ರಕಟಿಸಿದೆವು.

ಅವರ ಪುಸ್ತಕ ಪ್ರಕಟಿಸುವುದೆಂದರೆ ಮನೆಯ ಹಿರಿಯರ ಪುಸ್ತಕ ಪ್ರಕಟಿಸಿದಷ್ಟೇ ಸಂಭ್ರಮ. ಅಣ್ಣ ತೀರಿಕೊಂಡಾಗ ಬಂದು ಸಾಂತ್ವನ ಹೇಳಿದರು. ಎರಡು ವರ್ಷದ ನಂತರ ಕರಾವಳಿ ಮುಂಜಾವಿಗೆ ಅವರೇ ಬರೆದ ಲೇಖನದ ಸಾಲುಗಳಿವು:

ಆರ್. ವಿ. ಭಂಡಾರಿಯವರು ಒಬ್ಬ ಶ್ರೇಷ್ಟ ಸೃಜನಶೀಲ ಶಿಕ್ಷಕ. ಶಿಕ್ಷಕನಾದರೂ ಬದುಕಿನುದ್ದಕ್ಕೂ ವಿದ್ಯಾರ್ಥಿಯಾಗಿಯೇ ಬಾಳಿದವರು ಎಂದು ಆರ್. ವಿ. ಭಂಡಾರಿಯವರ ಒಡನಾಡಿಗಳಾದ ಶ್ರೀ ವಿ.ಜೆ ನಾಯಕರವರು ಅವರ ಕುರಿತು ಹೇಳಿದ ಮಾತು ಅವರ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿಯಾಗಿದೆ.

ನಮ್ಮ ನಡುವೆ ಅವರಂಥವರು ಅವರೊಬ್ಬರೇ. ಒಬ್ಬ ಶಾಲಾ ಶಿಕ್ಷಕ ಹೇಗಿರಬೇಕೆಂದು ಕೇಳಿದರೆ ಡಾ.ಆರ್.ವಿ ಯವರ ಹಾಗಿರಬೇಕು ಎಂದು ಖಂಡಿತವಾಗಿ ಹೇಳುತ್ತೇವೆ. ಶಿಕ್ಷಕನಾಗಿ ತನ್ನ ಹೊಣೆಗಾರಿಕೆ ಏನು ಎನ್ನುವುದನ್ನು ಅವರಷ್ಟು ಚೆನ್ನಾಗಿ ಅರ್ಥಮಾಡಿಕೊಂಡವರು ಬಹಳ ಕಡಿಮೆ. ಶಿಕ್ಷಕರಾಗಿ ತಮ್ಮ ಚಾರಿತ್ರ್ಯದ ಮುದ್ರೆ ಒತ್ತಿ ಪ್ರಭಾವ ಬೀರಿ ಮಾದರಿಯಾದವರು.

ಮಾನವೀಯತೆ ಅವರ ವ್ಯಕ್ತಿತ್ವದ ಪ್ರಧಾನ ಗುಣ. ತಮ್ಮ ವ್ಯಕ್ತಿತ್ವದ ಘನತೆಯ ಗಡಿಯ ರಕ್ಷಣೆ ಮಾಡಿಕೊಂಡು ನಮ್ಮ ನಡುವಿನ ಓರ್ವ ಮಾಡೆಲ್ ಆದವರು.

ಆರ್. ವಿ. ಭಂಡಾರಿಯವರಿಗೆ ಬಡ ಜನರ ಹೊಟ್ಟೆಯ ಹಸಿವಿತ್ತು. ಸ್ವಾತಂತ್ರ್ಯ ಹಾಗೂ ಸಮಾನತೆಯ ಹಸಿವಿತ್ತು. ದೇಸಿ ಹಾಗೂ ಸಮಾಜವಾದಿ ಚಿಂತನೆಯ ಹಸಿವಿತ್ತು. ಕೋಮು ಸೌಹಾರ್ದತೆಯ ಹಸಿವಿತ್ತು. ಜಾತ್ಯತೀತತೆಯ ಹಸಿವಿತ್ತು. ಈ ಎಲ್ಲ ಹಸಿವುಗಳಿಗೆ ತಮ್ಮ ಬದುಕು ಬರಹಗಳ ಮೂಲಕ ತೀವ್ರವಾಗಿ ಸ್ಪಂದಿಸಿ ಧನ್ಯರಾಗಿರುವವರು.

ಕೆರೆಕೋಣದಲ್ಲಿರುವ ಅವರ ಮನೆಯನ್ನೇ ಕೇಂದ್ರವನ್ನಾಗಿಸಿಕೊಂಡು ಸಹಯಾನ ಪ್ರಾರಂಭಿಸಲಾಗಿದೆ. ಆದರೆ ಅದನ್ನು ಬೆಳೆಸುವ, ವಿಸ್ತರಿಸುವ, ಪೂರ್ಣಗೊಳಿಸುವ ಜವಾಬ್ದಾರಿ ನಮ್ಮ ಮೇಲಿದೆ. ಡಾ. ಆರ್.ವಿ ಭಂಡಾರಿಯವರ ಅಭಿಮಾನಿಗಳು, ಗೆಳೆಯರು, ಜಿಲ್ಲೆಯ ಪ್ರಜ್ಞಾವಂತರು ತನು, ಮನ, ಧನದಿಂದ ನೆರವು ನೀಡಿ ಸಹಯಾನದ ಯಶಸ್ಸಿಗೆ ಕಾರಣರಾಗಬೇಕೆಂದು ವಿನಯದಿಂದ ಕೇಳಿಕೊಳ್ಳುತ್ತೇನೆ.

ಹಲವು ಪತ್ರಗಳ ಮೂಲಕವೂ ಆತ ಅವರ ಕೃತಿಗಳ ಕುರಿತು ಆಪ್ತವಾಗಿಯೇ ಬರೆದಿದ್ದಾನೆ. ಅವರ ‘ಹಂಬಲ’ ಸಂಕಲನಕ್ಕೆ ವಿಮರ್ಶೆ ಬರೆಯುತ್ತಾ ಮುಖ್ಯವಾಗಿ ಶಾಂತಾರಾಮ ನಾಯಕ ಇವರು ಕಾವ್ಯಕ್ಷೇತ್ರದಲ್ಲಿ ತೊಡಗಿಸಿಕೊಂಡವರು.

ಇದೀಗ ಹಂಬಲದ ಮೂಲಕ ವೈಚಾರಿಕ ಬರಹಗಳ ಹೊಸ ತೆನೆಯನ್ನು ಹೊತ್ತಿದ್ದಾರೆ. ಈ ಬರಹಗಳ ದೊಡ್ಡ ಗುಣವೆಂದರೆ ಅದು ತುಂಬಿಕೊಂಡಿರುವ ಆತ್ಮೀಯತೆ, ಅದಕ್ಕೆ ತಕ್ಕ ಭಾಷಾ ಶೈಲಿ. ಭಾವನೆಯ ಪಾರದರ್ಶಕತೆ. ‘ಹಂಬಲ’ ಎಂಬ ಹೆಸರಿನ ಆಶಯದ ಅಡಿಯಲ್ಲಿ ಬಂದು ವಿವೇಚನೆಗೆ ಒಳಗಾಗುವ ಎಲ್ಲಾ ಬರಹಗಳೂ ಬದುಕನ್ನು ಸಮೃದ್ಧಿಗೊಯ್ಯಬೇಕೆನ್ನುವ, ಸೌಹಾರ್ದತೆಯ ನೆಲೆಯಾಗಬೇಕೆನ್ನುವ ಊಧ್ವಮುಖಿ ಚಿಂತನೆಯಾಗಿದ್ದು ವೈಚಾರಿಕತೆಯ ಭಾವದಿಂದ ಬಳಲದ ಸಂವಹನಶೀಲ ಬರಹಗಳಾಗಿವೆ.

ಈ ಎಲ್ಲಾ ಬರಹಗಳ ಅಡಿಯಲ್ಲಿ ಮಿಡಿಯುವ ಮಾನವೀಯ ಗುಣದ ಅಭಿವ್ಯಕ್ತಿಯ ಸ್ವರೂಪವೇ ಈ ‘ಹಂಬಲ’
ತಮ್ಮ ಪ್ರೀತಿಯೊಂದನ್ನೇ ಅರ್ಹತೆಯನ್ನಾಗಿ ಮಾಡಿಕೊಂಡು ಗೆಳೆಯ ಶಾಂತಾರಾಮ ನಾಯಕ ಹಿಚ್ಕಡ, ನ್ನನಿಂದ ನಾಲ್ಕು ಬರೆಯಿಸಿಕೊಳ್ಳುವ ಔದಾರ್ಯವನ್ನು ಮೆರೆದಿದ್ದಾರೆ.

ಬರಹವನ್ನು ಓದಿದಾಗ ಆದ ನನ್ನ ಸಂತೋಷವನ್ನು ಇಲ್ಲಿ ಹಂಚಿಕೊಂಡಿದ್ದೇನೆ. ಎಂದು ಪ್ರೀತಿಯನ್ನು ತುಂಬಿದ ಮಾತುಗಳನ್ನಾಡಿದ್ದಾನೆ. ಹೀಗೆ ಬರೆಯುವಾಗ ನಾನು ನಾಯಕರ ಸಂಗಾತಿ ಅನಸೂಯಾ ಮೇಡಂ (ಕಾಮಾಕ್ಷಕ್ಕ ಎಂದೇ ಪ್ರರಿಚಿತರು) ಅವರನ್ನು ನೆನಪಿಸಿಕೊಳ್ಳದಿದ್ದರೆ ಹೇಗೆ? ಅವರೂ ಶಿಕ್ಷಕರೆ… ಹೇಳುತ್ತಾ ಹೋದರೆ ಅಣ್ಣನ ಸ್ನೇಹ ವಲಯಕ್ಕೆ ಕೊನೆ ಎನ್ನುವುದಿಲ್ಲ.

ಹೊನ್ನಾವರದ ಮಾಸ್ತಿ ಗೌಡ, ದೊಡ್ಡಿತ್ತಲಕೇರಿಯ ಸುಬ್ರಾಯ ಮಡಿವಾಳ, ಉಗ್ರಾಣಿ ಮನೆ ಬೀರಜ್ಜ, ಅರೇಅಂಗಡಿಯ ಆನಂದು ನಾಯ್ಕ… ಹೀಗೆ ದೊಡ್ಡವರು, ಕಲಾವಿದರು, ಸಾಮಾನ್ಯರು… ಹೀಗೆ ಬರೆದಷ್ಟು ಮಾತ್ರವಲ್ಲ. ಅದರಾಚೆಯೇ ಸಾಕಷ್ಟಿದೆ.

‍ಲೇಖಕರು

December 23, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: