ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬೃಂದಾವನದಲ್ಲಿ ರಾಧೆಯೀಗ ಒಂಟಿಯಲ್ಲ, ಕಾಯುವಾ ತಪದಲ್ಲಿ ಅವಳಿಗೀಗ ನಂಬಿಕೆಯಿಲ್ಲ….

ಕೊಳಲನೊಮ್ಮೆ ಊದು…

ಎಸ್  ಪಿ  ವಿಜಯಲಕ್ಷ್ಮಿ

ನವಿಲುಗರಿ ನಡುವಲ್ಲಿ ಇದೆಂಥ ಆಟವೋ ಕೃಷ್ಣ
ತತ್ತರಿಸಿ, ಒತ್ತರಿಸಿ, ಉಮ್ಮಳಿಸಿ ನಡುಗಿಹುದು ಎದೆ ನೋಡು
ಇದು ನಿನ್ನ ಕಾಲವಲ್ಲ ಮುತ್ತಿ ಮುತ್ತಿಕ್ಕಿ ಬೆಣ್ಣೆಯೂಡಿಸಲು…
ಇದು ನಿನ್ನ ಕಾಲವಲ್ಲ ಮುತ್ತಿಕ್ಕಿದರೂ ಮುಕ್ತಿಪಥದಲಿ ಮೇಲೇರಲು, ನೆಮ್ಮದಿಯಲಿ
ತೋಳಲೊರಗಿ ಸುಖಿಸಲು….
 
ಇಲ್ಲೂ ಇದ್ದೀವಿ ರಾಧೆಯರು, ಗೋಪಿಕೆಯರು ಮನೆಮನೆಯಲ್ಲಿ, ಗಲ್ಲಿಗಲ್ಲಿಯಲಿ…
ಇಲ್ಲಿಯೂ ಇದೆ ಗೋಕುಲ, ನದಿ, ಬೃಂದಾವನ, ಗೋವು ಎಲ್ಲವೆಲ್ಲ. ಆದರೇನು…?
ಗೋವುಗಳು ಗೋವುಗಳಲ್ಲ, ಗೋಮುಖದ ವ್ಯಾಘ್ರಗಳು…
ನದಿಯೆಲ್ಲ ಯಮುನೆಯಲ್ಲ, ನದಿಯೊಳಗೆ ನೆತ್ತರಿದೆ….
 
ಬೃಂದಾವನದಲ್ಲಿ ರಾಧೆಯೀಗ ಒಂಟಿಯಲ್ಲ, ಕಾಯುವಾ ತಪದಲ್ಲಿ ಅವಳಿಗೀಗ ನಂಬಿಕೆಯಿಲ್ಲ….
ನೀನವಳ ವಿರಹಿಯಾಗಿಸಿದೆಯಲ್ಲವೇ ನಿರಂತರ…
ಸಿಕ್ಕಂತೆ, ಸಿಗದಂತೆ ಕಾಡಿಸಿದೆಯಲ್ಲವೇ ಗೋಪಿಕೆಯರ ಹಸಿಹಸಿಹೃದಯಗಳ…
ಮೋಹನರಾಗದಲಿ ಈ ಮಾನಿನಿಯರ ಆಟವಾಡಿಸಿಬಿಟ್ಟೆಯಲ್ಲವೇ…
ಎಷ್ಟೆಂದು ತಪಿಸಿಯಾರು ಮೊಗದೋರದಾ ಚೆಲುವಂಗೆ..?
ಎಷ್ಟೆಂದು ದಹಿಸಿಯಾರು ನಿತ್ಯ ಕಾಮಮರ್ದನವ..?
ಎದೆಯ ಕಣ್ಣೀರಿಗೆ, ಕುದಿಗೆ ಆಸರೆಯಾಗಿ ಒರಗಲೊಂದು ಭುಜವಿಲ್ಲದೆ, ಎದೆಯಿಲ್ಲದೆ
ಎಷ್ಟೆಂದು ಬಾಗುವಾ ಕಾಯವ ನೆಟ್ಟಗಿಟ್ಟಾರು..?
ಇತಿಹಾಸ, ಪುರಾಣ ಕಣ್ಣೆದುರಿಗಿದೆ. ಸೀತೆ ಕಾಡುಪಾಲಾಗಿದ್ದು, ಅಹಲ್ಯೆ ಕಲ್ಲಾದದ್ದು, ಮಂಡೋದರಿ- ಕನಲಿದ್ದು, ಯಶೋಧರೆ ತಪಿಸಿದ್ದು…ಅಯ್ಯೋ ಹೆಣ್ಣ ಸಂಕಟ, ಕುದಿಯೇ…!

‘ನಾವು ಈ ಎಲ್ಲರಂತಲ್ಲ, ನಮ್ಮ ಆದರ್ಶ ಇಲ್ಲಿದೆ’ ಎನ್ನುತ್ತ,
ಸಿಡಿಯುತ್ತಿದ್ದಾರೆ ಅಂಬೆಯಂತೆ,
ಕುದಿಯುತ್ತಿದ್ದಾರೆ ಜ್ವಾಲೆಯಂತೆ,
ಆದರೆ, ಆದರೆ….
ಸೇಡು ಹೊಸೆಯಲು ಹೊರಟು ಹೊಸ್ತಿಲ ದಾಟುವಾತುರದಲ್ಲಿ ಎಡವುತ್ತಿದ್ದಾರೆ…
ಯಮುನೆಯೊಳಗೆ ಇಳಿಯುತಿದ್ದಾರೆ,
ಕಾಳಿಂದೀಮಡುವಲ್ಲಿ ಧುಮುಕುತಿದ್ದಾರೆ,
ಮಂಗಳಸೂತ್ರಕೆ ಮಂಗಳ ಹಾಡುತಿದ್ದಾರೆ,
ನಿನ್ನಂತೆ ಹತ್ತುಕೃಷ್ಣರ ಹುಡುಕುತ್ತಿದ್ದಾರೆ,
ಕೀಚಕ, ರಾವಣ, ದುಶ್ಯಾಸನರ ನಂಬುತ್ತಿದ್ದಾರೆ,
ಸೀರೆಸೆಳೆವ ಕೈಗೆ ತಾವಾಗೇ ಚುಂಗು ನೀಡುತ್ತಿದ್ದಾರೆ,
ಮತ್ತೀಗ, ನೂರು ತೆರನ ಹಾಡು, ಪಾಡು, ಸಂಕಟ…!
ನೀನೊಂದು ರೀತಿಯಲಿ ಕಾಡಿದೆ,
ಮತ್ತಿವರು ಮತ್ತೆ ಹತ್ತುಹಲವು ರೀತಿಯಲಿ….!
ಮೇಲೇಳುವುದು ದುಸ್ತರವೋ ಕೃಷ್ಣಾ……
 
ಅಯ್ಯೋ, ನೀರೆಯರು ಜಾರುತ್ತಿದ್ದಾರೆ, ಉರಿವ ನಾಲಿಗೆಯೆದುರು ಉದುರುವಾ ಪತಂಗವಾಗುತ್ತಿದ್ದಾರೆ..
ದ್ವಾಪರದ ಯುಗವಲ್ಲವೋ ಕೃಷ್ಣಾ ಇದು, ಆಧ್ಯಾತ್ಮಬಂಧುವಾಗಲು…!
ತ್ರೇತೆಯಲ್ಲವೋ ಕೃಷ್ಣಾ ಇದು, ಕಾಡು, ಬೆಂಕಿ, ಪಾತಾಳಕೆ ಆಹಾರವಾಗಲು…!
ಕಳ್ಳಕೃಷ್ಣರಿಗೆ ಬುದ್ಧಿಕೊಡು ಹುಸಿಗೊಳಲನೂದಿ ಕಾಡದಂತೆ,
ಹೆಣ್ಣಿಗೆ ಅಭಯವರ ನೀಡು ಜಾರದಂತೆ,
ಊದು ಸ್ವಚ್ಛಬಿದಿರಕೊಳಲನೊಮ್ಮೆ, ಮನಗಳ ಮಲಿನ ಕಳೆವಂತೆ.
ನಾವು ಹಸಿರಾಗಬೇಕು…
ಜಗಸೃಷ್ಟಿಯ ಉಸಿರಾಗಬೇಕು….
 
 
 

‍ಲೇಖಕರು G

24 June, 2015

13 Comments

  1. Soory Hardalli

    I liked the poem. Simple and very good.

    • Vijaya lakshmi S.P.

      thank you Suri Hardalli yavare. Vivek thank you…
      Jayashri, Smitha nimma mechchugeya nudigalige dhanyavaadagalu….

  2. Vivek

    very nice Aathe

  3. smitha

    Ishtavayithu kavite..

  4. Jayashree

    ತುಂಬಾ ಚೆನ್ನಾಗಿದೆ.ಅರ್ಥಗಭಿ೯ತ ಕವನ. ಶುಭಾಶಯಗಳು.

  5. Usha Phatak

    ನಿಜ.’ಸೇಡು ಹೊಸೆಯಲು ಹೊರಟು ಹೊಸ್ತಿಲ ದಾಟುವಾತುರದಲ್ಲಿ ಎಡವುತ್ತಿದ್ದಾರೆ’…
    ಅಂದಿನದೆಲ್ಲವೂ ಸರಿಯಲ್ಲ- ಇಂದಿನದೆಲ್ಲವೂ ಸರಿಯೇ ಸರಿ ಎಂದುಕೊಳ್ಳುವ
    ಆತ್ಮರತಿಯುಳ್ಳವರು!

  6. Madhu

    Very well written !! Today’s biggest problem woven with history is the beauty of this poem !!

  7. Veda H

    Super….! Thumba sundaravada kavana.

  8. Vijaya

    ಸಾಲುಗಳ ನಡುವಿನ ಅರ್ಥಗರ್ಭಿತ ಸುಪ್ತ ಭಾವನೆಗಳ
    ಸಮಾಜದಲ್ಲಿ ಬ್ರಭಲವಾಗಿ ಹರಡಿರುವ ಹುಸಿನಡತೆಗಳ
    ಹಿತಕಾವ್ಯ ಭಾಷೆಯಲಿ ಲಲಿತಶೈಲಿಯ ರಚನೆ ಪ್ರಭಾವ
    ಭಾವೋತ್ತೇಜಕ ಪರಿಣಾಮಕಾರಕ ಈ ಹಾಡಿನ ವೈಭವ!
    – ಮವಿ ಶೀಲ

  9. noorullathyamagondlu

    ಚೆನ್ನಾಗಿದೆ.

  10. mmshaik

    vaastavika chitraNa..nice poem

  11. ಅಕ್ಕಿಮಂಗಲ ಮಂಜುನಾಥ

    ಪದ್ಯ, ತುಂಬಾ ತುಂಬಾ ಇಷ್ಟವಾಯ್ತು, ಮೇಡಂ.

    • Vijaya lakshmi S.P.

      Kavithe prakatisida “avadhi’patrikege, mechchi abhipraya helida sahrudaya odugarige atyantha dhanyavaadagalu

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading