'ಬುದ್ಧ ಮತ್ತು ಚಿಟ್ಟೆ' – ವಿ ಎನ್ ಲಕ್ಷ್ಮೀನಾರಾಯಣ

 

– ವಿ ಎನ್ ಲಕ್ಷ್ಮೀನಾರಾಯಣ

ಪಾಪಿಲೋ ಬುದ್ದ ಹೆಸರೇ ಸೂಚಿಸುವಂತೆ ಪಶ್ಚಿಮ ಘಟ್ಟದ ವಿಶೇಷ ಚಿಟ್ಟೆ ಮತ್ತು ಬುದ್ಧನನ್ನು ಒಂದಾಗಿಸುವ ಚಿತ್ರ. ಕೇರಳದ ಆದಿವಾಸಿ ದಲಿತರ ಬಿಡುಗಡೆಯ ಸಾದ್ಯತೆಯನ್ನು ಮಾರ್ಕ್ಸ್, ಗಾಂಧಿ ಮತ್ತು ಅಂಬೇಡ್ಕರ್ ತಾತ್ವಿಕತೆಗಳ ಮೂಲಕ ಪರಿಶೀಲಿಸುವ ಚಿತ್ರ. ಜಾಗತೀಕರಣದ ಸಂದರ್ಭದಲ್ಲಿ ವಿದೇಶಿ ಮತ್ತು ದೇಶೀಯ ಶಕ್ತಿಗಳು ತಮ್ಮ ಸ್ವಂತ ಹಿತಾಸಕ್ತಿಗಳನ್ನು ಪೂರೈಸಿಕೊಳ್ಳಲು ಆದಿವಾಸಿಗಳನ್ನು ಸಾಧನವಾಗಿ ಬಳಸಿಕೊಳ್ಳುವ ಆಳುವ ವರ್ಗಗಳ ಬಂಡವಾಳವಾದೀ ರಾಜಕೀಯವೂ ಇಲ್ಲಿ ವಿಮರ್ಶೆಗೊಳಪಡುತ್ತದೆ.
ಲ್ಯಾಟಿನ್ ಮತ್ತು ಫ್ರೆಂಚ್ ಮೂಲದ ಪಾಪಿಲಿಯೊ ಪದದ ಅರ್ಥ ಚಿಟ್ಟೆ. ಚಿತ್ರ ಪ್ರಾರಂಭವಾಗುವುದು ಕೇರಳದ ರಮಣೀಯ ನಿಸರ್ಗದ ಹಿನ್ನೆಲೆಯಲ್ಲಿ ಯುವಕನೊಬ್ಬ ವಿದೇಶೀಯನಿಗಾಗಿ ಚಿಟ್ಟೆಯನ್ನು ಹಿಡಿಯುವ ದೃಶ್ಯದಿಂದ. ದೆಹಲಿಯ ಜೆ ಎನ್ ಯು ವಿಶ್ವವಿದ್ಯಾಲಯದ ಎಡಪಂಥೀಯ ರಾಜಕೀಯದ ನಡುವಿನಿಂದ ಬಂದು ತನ್ನ ಆದಿವಾಸಿ ತಂದೆಯೊಂದಿಗೆ ಕಾಡಿನಲ್ಲಿ ವಾಸಿಸುವ ಯುವಕ ಶಂಕರನ್ ಪ್ರವಾಸೀ ವಿದೇಶೀಯನು ಕೊಡುವ ಹಣಕ್ಕಾಗಿ ಚಿಟ್ಟೆ ಹಿಡಿಯುತ್ತಾನೆ. ಶಂಕರನ ತಂದೆ ಕರಿಯನ್ ಒಂದುಕಾಲದಲ್ಲಿ ಕೇರಳದ ಪ್ರಖ್ಯಾತ ಕಮ್ಯುನಿಸ್ಟ್ ನಾಯಕ ಇಎಮ್ಎಸ್ ರ ಅಭಿಮಾನಿಯಾಗಿದ್ದು ಅವರನ್ನು ದೇವರೆಂದು ಪೂಜಿಸುತ್ತಿದ್ದವನು. ಅವರ ಹೆಸರನ್ನೇ ಮಗನಿಗೂ ಇಡುವಷ್ಟು ನಿಷ್ಠೆ ಅವರಲ್ಲಿ. ಆದರೆ ಆದಿವಾಸಿ ದಲಿತರ ಭೂಮಿಯ ಪ್ರಶ್ನೆ ‘ ಬ್ರಾಹ್ಮಣತ್ವಕ್ಕೆ ಅಂಟಿಕೊಂಡ ಇಎಮ್ಎಸ್ ರಾಜಕೀಯದಿಂದ ಬಗೆಹರಿಯುವುದಿಲ್ಲವೆಂದು ಕರಿಯನ್ ತೀರ್ಮಾನಿಸಿದ ಮೇಲೆ ಅಂಬೇಡ್ಕರ್ ರ ಅನುಯಾಯಿಯಾಗಿ ತನ್ನ ಜನರನ್ನು ಸಂಘಟಿಸುತ್ತಾನೆ. ಕಾಡಿನ ಶಾಂತ-ಸುಂದರ ಪರಿಸರದಲ್ಲಿ ಬದುಕುವ ಆದಿವಾಸಿ ದಲಿತರನ್ನು ಒಕ್ಕಲೆಬ್ಬಿಸುವ ಆಳುವ ವರ್ಗಗಳ ವಿರುದ್ಧ ನಡೆಸುವ ಗಾಂಧಿಮಾರ್ಗದ ಸತ್ಯಾಗ್ರಹ’ ಶಾತಿಯುತ ದೀರ್ಘ ಹೋರಾಟ ನಿರರ್ಥಕವೆಂದು ಗಾಂಧಿವಾದವನ್ನು ಕರಿಯನ್ ನೇತೃತ್ವದ ಆದಿವಾಸಿ ದಲಿತರು ತಿರಸ್ಕರಿಸಿದ್ದಾರೆ. ಸರಕಾರೀ ಭೂಮಿಯನ್ನು ಆದಿವಾಸೀ ದಲಿತರು ಆಕ್ರಮಿಸಿ ಧರಣಿ ನಡೆಸಿದಾಗ ಅವರನ್ನು ಬಲಪ್ರಯೋಗದಿಂದ ಹೊರದೂಡುವ ಹಿಂಸೆಯಲ್ಲಿ ಸರಕಾರದೊಂದಿಗೆ ಕೈಜೋಡಿಸುವ ಗಾಂಧಿವಾದಿ ರಾಮದಾಸ್ ಮೂಲಕ ನವಗಾಂಧಿವಾದದ ಬಂಡವಾಳವಾದೀ ಸ್ವರೂಪವನ್ನು ಚಿತ್ರದಲ್ಲಿ ಬಯಲಿಗೆಳೆಯಲಾಗಿದೆ. ಮಲೆಯಾಳಂ ಮಾತನಾಡುವ ಆದಿವಾಸಿ ದಲಿತರನ್ನು, ಚಳುವಳಿಮಾಡುವ ಗಾಂಧಿವಾದಿಗಳ ಮೆರವಣಿಗೆಗೆ ಅಡ್ಡಿಮಾಡದೆ ಹಾದಿಮಾಡಿಕೊಡಬೇಕೆಂದು ಇಂಗ್ಲಿಷ್ ನಲ್ಲಿ ಮನವಿ ಮಾಡುವ ಮಹಿಳಾ ಜಿಲ್ಲಾಧಿಕಾರಿಯ ಪ್ರಸಂಗ ಭಾರತದ ಅಧಿಕಾರಶಾಹಿ ಯಾರೊಟ್ಟಿಗೆ ಇದ್ದಾರೆಂಬುದನ್ನು ವ್ಯಂಗ್ಯವಾಗಿ ನಿರೂಪಿಸುತ್ತದೆ. ಹಿನ್ನೆಲೆಗೆ ನೂಕಿದ ಅಂಬೇಡ್ಕರ್ ಚಿತ್ರ, ಆಟೋರಿಕ್ಷಾದ ಮೇಲೆ ಕಂಗೊಳಿಸುವ ಬುದ್ಧನ ಚಿತ್ರ ಆದಿವಾಸಿ ದಲಿತರಿಗೆ ಒಪ್ಪಿತವಾದ ರಾಜಕೀಯ ಮತ್ತು ತಾತ್ವಿಕ ಆಯ್ಕೆಗಳಾಗಿ ಚಿತ್ರದಲ್ಲಿ ಬಿಂಬಿತವಾಗಿವೆ. ಚಪ್ಪಲಿಯ ಹಾರ ಹಾಕಿದ ಗಾಂಧಿಯ ಪ್ರತಿಕೃತಿ, ಹಿಂಸಾಚಾರದಲ್ಲಿ ಪೋಲೀಸರು ಉರುಳಿಸಿ ಬೀಳಿಸುವ ಬುದ್ಧನ ಪ್ರತಿಮೆಗಳ ಮೂಲಕ ದಲಿತ ಆದಿವಾಸಿಗಳು ಮತ್ತು ಆಳುವವರ ನಡುವಿನ ರಾಜಕೀಯ ಸಂಘರ್ಷವನ್ನು ಅಸಂಧಿಗ್ಧವಾಗಿ ಹೇಳುವ ಈ ಚಿತ್ರಕ್ಕೆ ಸೆನ್ಸಾರ್ ಮಂಡಳಿ ಸಲೀಸಾಗಿ ಸರ್ಟಿಫಿಕೇಟ್ ಕೊಡಲಿಲ್ಲ ಎಂಬುದನ್ನೂ ಗಮನಿಸಬೇಕು.

ಅರಣ್ಯ, ಆದಿವಾಸಿಗಳ ದಮನಿತ ಜೀವನ ಮತ್ತು ಮಾವೋವಾದೀ ಹೋರಾಟ ಒಟ್ಟಿಗೆ ಬೆಸೆದುಕೊಂಡ ರಾಜಕೀಯವನ್ನು ಹತ್ತಿಕ್ಕಲು ನೇಮಕಗೊಂಡ ಪೋಲೀಸರು ಸಿಕ್ಕ ಸಿಕ್ಕ ಬಡ ಹೆಂಗಸರನ್ನು ಬಾಂಬು-ಬಂದೂಕುಗಳಿಗಾಗಿ ತಪಾಸಣೆಗೊಳಪಡಿಸುವ ದೃಶ್ಯ, ಆಳುವ ವರ್ಗದ ಒಂದು ದುರಂತ-ವಿಡಂಬನೆ. ಚಿಟ್ಟೆಯ ಬೇಟೆಯ ನೆಪದಲ್ಲಿ ಕಾಡುಮೇಡುಗಳನ್ನು ಅಲೆಯುವ ಶಂಕರ ಮತ್ತು ಆತನ ಅಮೆರಿಕನ್ ಸಂಗಾತಿಯನ್ನು ಪೋಲಿಸರು ಮಾವೋವಾದಿಗಳೆಂದು ಶಂಕಿಸಿ ಬಂಧಿಸುತ್ತಾರೆ. ತನ್ನ ವೈಯಕ್ತಿಕ ಹಿತಾಸಕ್ತಿಗಳಿಗಾಗಿ ಇಂಗ್ಲಿಷ್ ಬಲ್ಲ ಶಂಕರನನ್ನು ಬಳಸಿಕೊಳ್ಳುವ ವಿದೇಶಿಗ ಸಂತ್ರಸ್ತನಾದಾಗ ರಾಜಕೀಯ ಆಪಾದನೆಯಿಂದ ಪಾರಾದರೆ ಸಾಕೆಂದು ಅವನನ್ನು ಬಿಟ್ಟು ಹೊರಟುಹೋಗುತ್ತಾನೆ. ಪೋಲೀಸರ ಸಂಶಯಕ್ಕೆ ಒಳಗಾಗಿ, ಚಿತ್ರಹಿಂಸೆ ಅನುಭವಿಸುವ ಶಂಕರನ್ ತನ್ನ ಸಖ, ಸ್ನೇಹಿತ, ನೌಕರ ಎಂಬ ಯಾವ ಸಂಬಂಧಗಳೂ ಅವನನ್ನು ಕಾಡುವುದಿಲ್ಲ.
 
ಒಂದೇ ವರ್ಗಕ್ಕೆ ಸೇರುವ ಆಟೋ ಡ್ರೈವರ್ ಗಳು ಆದಿವಾಸಿ ದಲಿತ ಹುಡುಗಿ ತಮ್ಮ ಸಹೋದ್ಯೋಗಿಯಾಗಿದ್ದರೂ ಅವಳ ಮೇಲೆ ದೌರ್ಜನ್ಯವೆಗುತ್ತಾರೆ. ಅವಳು ದಿಟ್ಟಳಾಗಿ ಪ್ರತಿಭಟಿಸಿದಾಗ ನಿರ್ಜನ ಪ್ರದೇಶಕ್ಕೆ ಮೋಸದಿಂದ ಕರೆದೊಯ್ದು ಸಾಮೂಹಿಕ ಅತ್ಯಾಚಾರ ವೆಸಗುತ್ತಾರೆ. ವರ್ಗ ಹಿತಾಸಕ್ತಿ ಒಂದೇ ಇದ್ದರೂ ವೈಷಮ್ಯಕ್ಕೆ ಕಾರಣ ಜಾತಿ ಅಸಮಾನತೆ-ಅದಕ್ಕಿಂತಲೂ ಮಿಗಿಲಾಗಿ ಲಿಂಗ ಅಸಮಾನತೆ ಎಂದು ಬಿಂಬಿಸಲು ಈ ಘಟನೆ ಚಿತ್ರದಲ್ಲಿ ಬಳಕೆಯಾಗಿದೆ. ಅಮಾನುಷ ದೌರ್ಜನ್ಯದಲ್ಲಿ ಬದುಕುಳಿದ ಹುಡುಗಿ ಗಾಯಗಳಿಂದ ಸಿಕ್ಕುಗಟ್ಟಿದ ಕೂದಲನ್ನು ನಿಧಾನವಾಗಿ ಬಿಡಿಸಿ, ಒಂದೊಂದೇ ಕತ್ತರಿಸುತ್ತಾ ತನ್ನ ಪ್ರೀತಿಯ ಬುದ್ಧಗುರುವಿನ ಮೂರ್ತಿಯ ಮುಂದೆ ನುಣ್ಣನೆಯ ತಲೆಯ ಬೌದ್ಧಳಾಗುತ್ತಾಳೆ. ಪ್ಯಾಂಟು-ಷರಟಿನ ವೇಷದಲ್ಲಿ ಪುರುಷ ಆದಿವಾಸಿಗಳಿಗೆ ಹೆಗಲೆಣೆಯಾಗಿ ಒಕ್ಕಲೆಬ್ಬಿಸಲು ಬಂದ ಪೋಲೀಸರ ದೌರ್ಜನ್ಯವನ್ನು ಎದುರಿಸುತ್ತಾಳೆ.
ಜಾಗತೀಕರಣದ ಬಂಡವಾಳವಾದೀ ರಾಜಕೀಯದ ಭಾಗವಾಗಿ ಭಾರತಾದ್ಯಂತ ತಲೆ ಎತ್ತಿದ ಎನ್ ಜಿ ಓ ಸೇವಾಸಂಸ್ಥೆಗಳು ಆದಿವಾಸಿ ದಲಿತರ ಮೇಲಾಗುವ ದೌರ್ಜನ್ಯವನ್ನೇ ತಮ್ಮ ಹಿತಾಸಕ್ತಿಗಾಗಿ ಸಿಕ್ಕ ಸದವಕಾಶವೆಂದು ಬಳಸಿಕೊಳ್ಳುವ ಸಂದರ್ಭವನ್ನು ಚಿತ್ರದಲ್ಲಿ ಸೃಷ್ಟಿಸಲಾಗಿದೆ. ಅರಣ್ಯ ಭೂಮಿಯನ್ನು ಆದಿವಾಸಿಗಳು ತೆರವು ಮಾಡದೆ ಪ್ರತಿಭಟನೆ ಮಾಡಿದಾಗ ಮುಖ್ಯಮಂತ್ರಿ ಗಾಂಧಿವಾದಿ ರಾಮದಾಸರ ಆಶ್ರಮಕ್ಕೆ ದೌಡಾಯಿಸಿ ಅವರ ಸಹಾಯ ಬೇಡುತ್ತಾರೆ. ರಾಮದಾಸರು ತಮ್ಮ ಅನುಯಾಯಿಗಳೊಂದಿಗೆ ರಾಮಭಜನೆ ಮಾಡುತ್ತಾ ಮೆರವಣಿಗೆಯಲ್ಲಿ ಸಾಗಿ ಆದಿವಾಸಿ ದಲಿತರು ಅರಣ್ಯಭೂಮಿಯನ್ನು ಆಕ್ರಮಿಸಿಕೊಂಡರೆ ಬಡವರು ಎಲ್ಲಿ ಹೋಗಬೇಕು? ಎಂದು ದಲಿತರನ್ನೇ ಪ್ರಶ್ನಿಸುವ ಮೂಲಕ ನವಗಾಂಧಿವಾದಕ್ಕೂ ದಲಿತವಿರೋಧೀ ಆಳುವ ವರ್ಗಕ್ಕೂ ಇರುವ ಸಮಾನ ವರ್ಗಹಿತಾಸಕ್ತಿಯನ್ನು ಪ್ರಕಟಿಸುತ್ತಾರೆ. ಕೊನೆಯಲ್ಲಿ ಪೋಲೀಸರ ದೌರ್ಜನ್ಯದ ಫಲವಾಗಿ ಮನೆ-ಮಠಗಳನ್ನು ಕಳೆದುಕೊಂಡ ದಲಿತ ಆದಿವಾಸಿಗಳು ಅಸಹಾಯಕರಾಗಿ ಗುಳೇಹೋಗುವ ದೃಶ್ಯದೊಂದಿಗೆ ಚಿತ್ರ ಮುಕ್ತಾಯಗೊಳ್ಳುತ್ತದೆ. ತಮ್ಮ ಸರ್ವಸ್ವವನ್ನೂ ತಲೆಯಮೇಲೆ ಹೊತ್ತು ಎಲ್ಲಿಗೆಂದು ಗೊತ್ತಿಲ್ಲದೆ, ದೂರ ಚಿತ್ರದಲ್ಲಿ ಸಾಲುಗಟ್ಟಿ ಚಿಕ್ಕ ಆಕೃತಿಗಳಾಗಿ ಬೆಟ್ಟ ಕಣಿವೆಗಳನ್ನು ದಾಟುತ್ತಾ ನಡೆಯುವ ಆದಿವಾಸಿಗಳು, ದಮನಿತ ಬಡಜನರ ದಾರುಣ ಬದುಕನ್ನು, ವಿದೇಶೀಯನಿಗಾಗಿ ಬಲೆಯಲ್ಲಿ ಬಂಧಿತವಾದ ಚಿಟ್ಟೆಯನ್ನು, ಜಾಗತೀಕರಣದ ‘ಅಭಿವೃದ್ಧಿ’ ರಾಜಕೀಯದಿಂದಾಗಿ ಅವಸಾನದತ್ತ ಸಾಗುತ್ತಿರುವ ಒಟ್ಟು ಪರಿಸರವನ್ನು ಚಿತ್ರಿಸುವ ರೂಪಕಗಳಾಗುತ್ತಾರೆ.
ಚಿಟ್ಟೆಯ ಬಂಧನದಿಂದ ಆರಂಭವಾಗುವ ‘ಪಾಪಿಲೋ ಬುದ್ಧ’ ಒಂದರೊಳಗೊಂದು ಬೆಸೆದ ಚೌಕಟ್ಟುಗಳಾದ ಪರಿಸರದ ನಾಶದ ಪ್ರಶ್ನೆ, ದಮನಿತ ಆದಿವಾಸಿ ದಲಿತರಾದ ಪುಲಿಯರ ಬಿಡುಗಡೆಯ ಪ್ರಶ್ನೆ, ಗಂಡು-ಹೆಣ್ಣುಗಳ ಲಿಂಗ ಅಸಮಾನತೆಯ ಪ್ರಶ್ನೆ, ವರ್ಗ ಅಸಮಾನತೆಯ ಪ್ರಶ್ನೆ, ಜಾತಿ ಅಸಮಾನತೆಯ ಪ್ರಶ್ನೆ, ರಾಜಕೀಯ ಸಿದ್ಧಾಂತಗಳ ಆಯ್ಕೆಯ ಪ್ರಶ್ನೆ, ಹೀಗೆ ಚೌಕಟ್ಟಿನಿಂದ ಚೌಕಟ್ಟಿಗೆ ವಿಸ್ತರಿಸುತ್ತಾ, ಕುಗ್ಗುತ್ತಾ-ಹಿಗ್ಗುತ್ತಾ ಅಂತಿಮವಾಗಿ ಇವೆಲ್ಲವುಗಳಿಂದಲೂ ಮುಕ್ತವಾದ ಅನುಕ್ಷಣದ ಶುದ್ಧ ಅಸ್ತಿತ್ವದ ಅನ್ವೇಷಣೆಗೆ ಪ್ರೇರೇಪಿಸುವ ಬೌದ್ಧ ತಾತ್ವಿಕತೆಯನ್ನು ಅಂಗೀಕರಿಸುತ್ತದೆ.
ಆಧುನಿಕೋತ್ತರ ವಿಶ್ವದಲ್ಲಿ ಮಧ್ಯಮವರ್ಗೀಯ ಬುದ್ಧಿಜೀವಿಗಳು ಎಲ್ಲಾ ರಾಜಕೀಯ ಸಿದ್ಧಾಂತಗಳನ್ನು, ತಾತ್ವಿಕ ದೃಷ್ಟಿಕೋನಗಳನ್ನು ಬಿಡಿ ಬಿಡಿಯಾಗಿ ತಿರಸ್ಕರಿಸಿ ಅಥವಾ ಒಟ್ಟಿಗೆ ಬೆಸೆದ ‘ಪ್ರಜಾಪ್ರಭುತ್ವ’ವನ್ನು ಮಾರ್ಕ್ಸ್ ವಾದಕ್ಕೆ ಪರ್ಯಾಯವೆಂದು ಪ್ರತಿಪಾದಿಸುವ ಪರಿಪಾಠವಿದೆ. ವರ್ಗಹೋರಾಟದ ಎಡಪಂಥೀಯ ರಾಜಕೀಯ, ಮತ್ತು ಗಾಂಧಿವಾದೀ ವರ್ಣಸಾಮರಸ್ಯದ ರಾಜಕೀಯ ಎರಡನ್ನೂ ಅಂಬೇಡ್ಕರ್ ತಿರಸ್ಕರಿಸುತ್ತಾರೆ. ಆಸ್ತಿ ಹಕ್ಕನ್ನು ಹೊರಗಿಡುವ ಬೌದ್ಧ ಧರ್ಮೀಯ ಲೋಕದೃಷ್ಟಿ, ಮತ್ತು ಅದಕ್ಕಾಗಿ ನಡೆಸುವ ದಲಿತ ನೇತೃತ್ವದ ಜಾತಿ ನಿರ್ಮೂಲನೆಯ ರಾಜಕೀಯ ಸಂಘರ್ಷ, ಮಾನವೀಯತೆ ಮತ್ತು ಪ್ರಜಾಪ್ರಭುತ್ವದ ಹೆಸರಿನಲ್ಲಿ ಅವರಿಗೆ ಸಮ್ಮತವೆನಿಸುವ ಪರ್ಯಾಯವಾಗಿದೆ. ಮನಮೋಹಕ ಛಾಯಾಗ್ರಹಣ ಮತ್ತು ಸಾವಧಾನದ ನಿರೂಪಣೆಯ ‘ಪಾಪಿಲೋ ಬುದ್ಧ’ ಅಂಥ ಪರ್ಯಾಯವನ್ನು ಪ್ರತಿಪಾದಿಸುವ ಬೌದ್ಧಿಕ-ರಾಜಕೀಯ ಚಿತ್ರ.
 

‍ಲೇಖಕರು G

January 13, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: