ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬುದ್ಧನೇ ಆಗಬೇಕೆಂದಿಲ್ಲ…

ಸಿಡಿವ ಚೂರಿನ ಮೊನಚು

ಶ್ರೀಕಲಾ ಕಂಬ್ಳಿಸರ

 

ನನ್ನ ಆದ್ಯತೆಗಳನ್ನು

ಹುಗಿದಿಡಬಯಸುತ್ತೇನೆ

ಕಳೆದುಹೋದ ನಕ್ಷೆಗಳು

ಬದಲಾದ ನೆಲದ ಕಕ್ಷೆಗಳು

ಹರಿದುಹೋಗುವ ಹೊತ್ತಿನ

ಸೂತ್ರದ ನಿರ್ದೇಶನಗಳಿಗಾಗಿ

ಹುಡುಕಾಡುವುದಿಲ್ಲ.

 

ಕಶೇರುಕದ ಕೊಂಡಿ ಬಿಗಿದುಕೊಂಡ

ನನ್ನ ನೇರ ನಿಲುವುಗಳು

ಕೊಳ್ಳುವ ಕಡೆಯಲ್ಲೆಲ್ಲ

ಮಾರುವವನ ತೇಪೆಹಾಕಿದ

ಮುಖಪುಟಕ್ಕೆ ಹೆದರಿ

ಗೂನಾಗುತ್ತವೆ.

 

ಮುರಿದ ಸೂಜಿಯ

ಅನಾಥ ಭಾವನೆಗಳನ್ನು

ಚುಚ್ಚಿಸಿಕೊಂಡ ಅಜ್ಞಾತನೊಬ್ಬ

ರೋಗಿಯಾದ ಸಂದರ್ಭಗಳೆಷ್ಟೋ!

 

ಅಂಗಡಿಗೆ ಕಿಟಕಿಗಳೇ ಇಲ್ಲದೇ

ನನ್ನಾಸೆಗಳ ನೆರಳುಗಳು

ಗೋಚರಿಸುವುದಾದರೂ ಹೇಗೆ?

ಹುಟ್ಟಿಸುವವನು

ಹೊಲದ ಸುತ್ತಳತೆಯನ್ನಳೆದು

ಬೀಜ ಬಿತ್ತುವುದಿಲ್ಲ;

ನಾನು ಹುಟ್ಟಿ

ಹುಟ್ಟಿಸುವವನಾದಾಗ

ಬೀಜ ಬಿತ್ತಲು

ನೆಲದ ಧೂಳೂ

ಇರುವುದು ಶಂಕೆಯೇ.

 

ನನ್ನ ಕಳವಳದ ದಾಳ

ತೋರಿಸುವ ಅಂಕಿಗಳು

ವ್ಯಂಗ್ಯವೋ, ಸತ್ಯವೋ

ತಿಳಿಯುವ ತಿಳುವಳಿಕೆ

ಕನಿಷ್ಟ ಮಟ್ಟದ್ದು.

 

ವಿಕಸನದ ಅವಸಾನವೂ

ತೀರ ದುರ್ಬಲ ಪಡೆಗಳ

ಗರಿಷ್ಟ ಬೇಡಿಕೆಯ

ದರಿದ್ರ ಮುಖ-ಮುಖವಾಡಗಳೇ

ಎಂಬುದನ್ನು ವಿವರಿಸಲು

ಮುಂದೆ ಭಾಷೆಗಳೂ ಇರಲಾರವು.

 

ಭಕ್ತಿಯಂತ್ರಗಳ ಉರುಳುಗಳಲ್ಲಿ

ಉಸಿರಾಡುವವರು,

ಯಂತ್ರಗಳ ಭಕ್ತಿಯಲ್ಲಿ

ಉರುಳಾಡುವವರು

ತಾಳಿಕೊಳ್ಳುವ ಉರಿಯ

ವೇದನೆಗಳೇ ಸೂಕ್ತಗಳಾಗಿ,

ಬದುಕುಳಿದವರು

ಬುದ್ಧನೇ ಆಗಬೇಕೆಂದಿಲ್ಲ,

ಆರೂಢರೋ ಅವಧೂತರೋ

ಆದರೂ ಆದೀತು.

‍ಲೇಖಕರು avadhi

3 November, 2019

2 Comments

  1. ಸುಜಾತಾ ಲಕ್ಮನೆ

    ಚೆನ್ನಾಗಿದೆ..ಕಾವ್ಯದ ವಸ್ತು ಕೂಡ ಚಂದ. ಸುಂದರ.
    ಅಕ್ಷರ ದೋಷಗಳು ಇವೆ.

    ತಪ್ಪು….ಸರಿಯಾದ ರೂಪ

    1. ತಿಳುವಳಿಕೆ- ತಿಳಿವಳಿಕೆ
    2. ಕನಿಷ್ಟ- ಕನಿಷ್ಠ
    3. ಗರಿಷ್ಟ – ಗರಿಷ್ಠ

    • Shrikala Hegde

      ದೋಷಗಳನ್ನು ಗಮನಿಸಿರಲಿಲ್ಲ, ಕ್ಷಮಿಸಿ. ಧನ್ಯವಾದಗಳು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading