ಮೂಲ: ಮೊನಿಕ ಡಿ ಲಾ ಟೋರೆ
ಕನ್ನಡಕ್ಕೆ: ಬಿ ಆರ್ ಲಕ್ಷ್ಮಣರಾವ್
ಅರ್ಥ ಹುಡುಕುವುದಲ್ಲ, ಮತ್ತೆ ಕಟ್ಟುವುದು
ಇಂಗಿತವನ್ನು, ಭಾವಭಂಗಿಗಳನ್ನು.
ತೀರಾ ಹಚ್ಚಿಕೊಳ್ಳುತ್ತಾನೆ ಅನುವಾದಕ
ಮೂಲವನ್ನು. ಅತ್ಯಂತ ಉದ್ದೇಶಪೂರ್ವಕ
ಅವನ ಆಯ್ಕೆ.
ಮಧ್ಯಾಹ್ನ ಕವಿಯನ್ನು ಭೇಟಿಯಾಗುತ್ತಾನೆ
ಅನುವಾದಕ, ಕೂಡುರಸ್ತೆಯ ಒಂದು ಹೋಟೆಲಲ್ಲಿ.
ಎಷ್ಟೋ ದಶಕಗಳಿಂದ ರಾತ್ರಿ ವೇಳೆ
ಸಾಲುಗಟ್ಟಿರುತ್ತಾರೆ ಅಲ್ಲಿ
ವಾರಾಂಗನೆಯರು, ಬೃಹನ್ನಳೆಯರು,
ಹಾದಿಹೋಕರ ಸೂಕ್ಷ್ಮ ಓದಿಗಾಗಿ.
ಸ್ವಗತವಲ್ಲ, ಸೂಚ್ಯ ಸಂಭಾಷಣೆ;
ನಿಧಾನ ಅನುವಾದಕನ ಸ್ಪಂದನೆ.

ಅನುವಾದಕನ ಪ್ರಶ್ನೆಗೆ ಕವಿ ಉತ್ತರಿಸುತ್ತಾನೆ
ಯಾವುದೇ ನಿರ್ಬಂಧಗಳಿಲ್ಲದೆ.
ಯಾರೋ ಗಮನಿಸುತ್ತಿದ್ದಾನೆ
ಗ್ರಹಿಸಲಾಗದ ಅವರ ಮಾತುಗಳಲ್ಲಿ
ಅವರ ಕೈಗಳ ಚಲನವಲನ.
ಮಾತಾಡುತ್ತಿದ್ದಾರೆ ಅವರಿಬ್ಬರು
ಫ್ರಾಯ್ಡನ್ನು ಕುರಿತು
ಕವಿಗೆ ಆಗಿರುವ ಭ್ರಮನಿರಸನದ ಬಗ್ಗೆ.
ಹೊರಹೊಮ್ಮುತ್ತವೆ ಒಂದೊಂದಾಗಿ
ಕವಿಯ ಬಾಯಿಂದ
ಅವನ ಕನಸುಗಳ ವರ್ಣನೆ.
ಅವನ ದನಿಯಲ್ಲಿಲ್ಲ ಯಾವುದೇ ವ್ಯಂಗ್ಯ,
ಆಶ್ಚರ್ಯದ ಸುಳಿವು,
ಗೂಡಾರ್ಥಗಳ ಸೂಚನೆ.
ಇರುವುದು ಬಹುಶಃ ಜೀರ್ಣಶೀರ್ಣತೆಯ
ಚಕ್ರಗತಿಯಲ್ಲಿ
ಅವನಿಗಿರುವ ಶ್ರದ್ಧೆ.

ಅನುವಾದಕ ಬಲ್ಲ:
ಒಂದು ಫೋಟೋಗಾಗಿ ಪೋಸ್ ನೀಡಲು
ಕವಿಯ ಕೇಳಿದಾಗ,
ಅವನ ಮುಖದಲ್ಲಿ ವ್ಯಕ್ತವಾದ
ಆ ಒಂದು ಭಾವನೆ,
ಅವನ ಒಳಗನ್ನು ಬತ್ತಲೆಗೊಳಿಸಿ
ತೆರೆದು ತೋರಿದಷ್ಟು,
ಕವಿಯು ಆವರೆಗೆ ಆಡಿದ, ಬರೆದ
ಏನೆಲ್ಲವು ಕೂಡ
ತೋರಲಾರದೆಂದು.
ಎದುರುಗೊಳ್ಳುತ್ತಾನೆ ಕವಿಯೀಗ
ತನ್ನ ಮುಂದಿನ ತಲೆಮಾರನ್ನು
ಕುಚೇಷ್ಟೆಯ
ಒಂದು ದೆವ್ವದ ನಗೆಯೊಂದಿಗೆ.
ಫೊಟೋಗ್ರಾಫರನ ಒತ್ತಾಯಕ್ಕೆ
ಪುನರಾವರ್ತಿಸುತ್ತಾನೆ
ಮೂರಲ್ಲ ನಾಲ್ಕು ಬಾರಿ
ಆ ಭಾವಭಂಗಿಯನ್ನು.
ಆನಂದಿಸುತ್ತಾನೆ ಅನುವಾದಕ
ಆ ದೃಶ್ಯವ ಕಂಡು.
ಫಿಲ್ಮಿಲ್ಲ ಕ್ಯಾಮೆರಾದೊಳಗೆ.






ಮೊನಚುಳ್ಳ ಕವಿತೆ…