ಬಿಸಿ ರೊಟ್ಟಿ ಬ್ಯಾಡಾದ್ರ… ರೊಟ್ಟಿ ಮುಟಗಿ, ರೊಟ್ಟಿಮುರಿ…

ಹೆಸರೇ ಅನಾಮಿಕಾ ಹಾಗಾಗಿಯೇ ಈಕೆ ಅನಾಮಿಕೆ .

ಹೆಸರು ಹೇಳಲು ಒಲ್ಲದ ಈಕೆ ಭೋಜನಪ್ರಿಯೆ ಅಂತ ಬಿಡಿಸಿ ಹೇಳಬೇಕಿಲ್ಲವಲ್ಲ. ಅದು ಎಷ್ಟು ಖರೆ ಎಂದು ನಮಗೂ ಗೊತ್ತಿಲ್ಲ. ಆದರೆ ಇಷ್ಟು ಮಾತ್ರ ನಿಜ. ಭೋಜನಕ್ಕೆ ನಮ್ಮನ್ನು ಬಡಿದೆಬ್ಬಿಸುವಂತೆ ಈಕೆ ಬರೆಯುತ್ತಾಳೆ.

ಅಷ್ಟೇ ಆಗಿದ್ದರೆ ಇದನ್ನು ಒಂದು ರಸ ರುಚಿಕಾಲಂ ಹೆಸರಿನಡಿ ಸೇರಿಸಿ ನಾವು ಕೈ ತೊಳೆದುಕೊಳ್ಳುತ್ತಿದ್ದೇವೇನೋ..!

ಆಕೆಗೆ ಒಳಗಣ್ಣಿದೆ. ಒಂದು ಆಹಾರ ಹೇಗೆ ಒಂದು ಸಂಸ್ಕೃತಿಯ ಭಾಗವಾಗಿ ಬರುತ್ತದೆ ಎನ್ನುವುದರ ಬಗ್ಗೆ ಹಾಗೂ ಹೇಗೆ ಆಹಾರ ಒಂದು ಸಂಸ್ಕೃತಿಯನ್ನು ರೂಪಿಸುತ್ತದೆ ಎನ್ನುವುದರ ಬಗ್ಗೆಯೂ

ಹಾಗಾಗಿಯೇ ಇದು ರಸದೂಟವೂ ಹೌದು ಸಮಾಜ ಶಾಸ್ತ್ರದ ಪಾಠವೂ ಹೌದು.

ಈ ದೀಪಾವಳಿ ಗದ್ದಲ ಮುಗಿಯೂದ್ರೊಳಗ ನಾಲಗಿ ಜಿಡ್ಡು ಹಿಡದಂಗ ಆಗ್ತದ. ಶರನ್ನವರಾತ್ರಿಯಿಂದ ದೀಪಾವಳಿ ಮುಗೀತ ನಾನೂ ರೊಟ್ಟಿ ಮಾಡ್ಬೇಕಂದ್ರ ಒಂದು ಜಮಾನಾ ಆಗಿರ್ತದ. ಹಬ್ಬಕ್ಕ ಒಂದಷ್ಟು ಕಟಿರೊಟ್ಟಿ ಮಾಡಿಟ್ಟಿದ್ದು ಇನ್ನಾ ಗೂಡಿನಾಗ ಇರ್ತಾವ. ಅಂಥ ದಿನದೊಳಗ ಅಗ್ದಿ ಸೇರೂದು ಅಂದ್ರ, ಚಾ ಜೊತಿಗೆ ರೊಟ್ಟಿ ಮುರಿ ಮಾಡ್ಕೊಳ್ಳೂದು.

ಕಟಿ ರೊಟ್ಟಿ ತನ್ನ ಕುರುಕುರು ಕಳಕೊಂಡು ಚಳಿಗೆ ಬಿರುಸಾದಾಗ ಇವನ್ನು ಒಂದೀಟೆ ನೀರಾಗ ಮುಖ ತೊಳದಂಗ, ನೆನಿಸಿ ತಗೀತಾರ. ಒಂದು ರೊಟ್ಟಿಯೊಳಗ ಒಂದು ಹದಿನಾರು ತುಣುಕುಗಳನ್ನು ಮಾಡಿ, ಹಿಂಗ ಒಂದ್ಹತ್ತು ರೊಟ್ಟೀವು, ಐದು ರೊಟ್ಟೀವು ತುಣುಕು ಮಾಡಿ, ನೆನೆಸಿ ಒಂದು ಗಂಗಾಳನಾಗ ಹರಿವಿಡ್ತಾರ. 

ಉಳ್ಳಾಗಡ್ಡಿ, ಮೆಣಸಿನಕಾಯಿ ಹೆಚ್ಚಿಟ್ಕೊಂಡು, ಒಗ್ಗರಣಿಗೆ ರೆಡಿ ಮಾಡ್ತಾರ. ಬಾಣಲಿಯೊಳಗ ಎಣ್ಣಿಕಾಯಾಕ ಇಟ್ಟು, ಮೊದಲು ಹಸಿಮೆಣಸಿನಕಾಯಿ ಮತ್ತು ಕರಿಬೇವು ಹಾಕಬೇಕು. ಸಾಸಿವಿ ಜೀರಗಿ ಆಮೇಲೆ. ಇವೆಲ್ಲ ಗರಿಗರಿಯಾದಾಗ, ಉಳ್ಳಾಗಡ್ಡಿ ಹಾಕೂದು. ಅವು ಘಂ ಅನ್ನುಮುಂದ, ಚೂರು ಉಪ್ಪು, ಇಂಗು, ಹಸಿಕೊಬ್ಬರಿ, ಮೆಣಸಿನಕಾಯಿ ಬದಲಿಗೆ ಮಸಾಲಿ ಖಾರನೂ ಹಾಕಬಹುದು. ಎಲ್ಲವೂ ಕರುಳು ಹಿಗ್ಗಲಿಸುವಂಥ ಘಮವನ್ನು ಬೀರುವಾಗ, ಚೂರು ಮಾಡಿಟ್ಟುಕೊಂಡ ರೊಟ್ಟಿಯನ್ನು ಅವಲಕ್ಕಿ ಹಾಕಿದ್ಹಂಗ ಹಾಕಿ ತಿರುವಿಬಿಡಬೇಕು.

ಆಮೇಲೆ ಒಂದು ಲೋಟದೊಳಗ ಚಾ ತೊಗೊಂಡು ಕುಡ್ಕೊಂತ ರೊಟ್ಟಿಮುರಿ ತಿಂದ್ರ, ಆಹಹಾ.. ಹಬ್ಬದ ಸಿಹಿಸವಿಯ ಜಿಡ್ಡೆಲ್ಲ ತೊಳದು ಹೋಗ್ತದ. ಮನ್ಯಾಗಿನ ರೊಟ್ಟಿನೂ ಖಾಲಿ ಆಗ್ತಾವ.

 ಮನ್ಯಾಗ ತರಕಾರಿ ಇಲ್ಲದಾಗ, ಕಾಳು ಇಲ್ಲದಾಗ ಬಿಸಿರೊಟ್ಟಿ ಉಣ್ಣುವ ಸುಖನೇ ಬ್ಯಾರೆ. ಬಿಸಿಬಿಸಿ ರೊಟ್ಟಿಗೆ ಕುದಿಬ್ಯಾಳಿ ಹಾಕಿ, (ಅರೆಬೆಂದ ಬೇಳೆ) ಅದರ ಮ್ಯಾಲೆ ಬಳ್ಳೊಳ್ಳಿ ಚಟ್ನಿ ಇಲ್ಲಾಂದ್ರ ಮಸಾಲಿ ಖಾರ ಅಥವಾ ಮನ್ಯಾಗಿರುವ ಗುರೆಳ್ಳು ಪುಡಿ, ಹಾಕ್ಕೊಂಡು, ಒಂಚೂರು ಹುಣಸಿ ತೊಕ್ಕುನೂ ಇದರೊಳಗ ಕಲಿಸಿಕೊಂಡು ಉಂಡ್ರ… ಆಹಹಾ… ಯಾವ ಮೃಷ್ಟಾನ್ನ ಭೋಜನವೂ ಬ್ಯಾಡನಿಸ್ತದ.

ಇಲ್ಲಿಯ ಸಂಸ್ಕೃತಿಯೊಳಗ ಮಸಾಲಿ ಅರಿಯುವ ಪದ್ಧತಿನೇ ಕಡಿಮಿ. ಮಣ್ಣಿನೊಂದಿಗೆ ಹೆಚ್ಚು ಶ್ರಮಿಸುವ ಇವರಿಗೆ ಪಚಡಿ ಮಾಡೂದು, ಕೋಸಂಬ್ರಿ ಹಚ್ಚೂದು ಅಗ್ದಿ ಸರಳ ಕೆಲಸ. ಬದನಿಕಾಯಿ ಸುಟ್ಟು ಭರ್ತ ಮಾಡೂದು, ಹಕ್ಕರಕಿ, ಮೆಂತ್ಯ ಸೊಪ್ಪು, ಮೂಲಂಗಿ ಸೊಪ್ಪು ಇವನ್ನೂ ಸಣ್ಣಗೆ ಹೆಚ್ಕೊಂಡು ಹಸಿಹಸಿಯಾಗಿ ತಿನ್ನೂ ಬದಲು ಯಾವುದರೆ ಹಿಂಡಿ (ಪುಡಿ)ಗಳನ್ನು ಕಲಿಸಿಕೊಂಡು ತಿನ್ನೂದು ಸರಳ ಅನಿಸ್ತದ. 

ಏನೂ ಇಲ್ಲಂತ ಕೊರಗೂಹಂಗೆ ಇಲ್ಲ. ಇರೋದ್ರೊಳಗ ರುಚಿ ಮಾಡ್ಕೊಳ್ಳೂದು, ಜೀವನವನ್ನು ಆನಂದಿಸುವ ಸಂಸ್ಕಾರ ಇವರಿಗದ. ತರಕಾರಿ ಇಲ್ಲ, ಕಾಳು ತಿನ್ನೂನು. ಕಾಳು, ಕಡಿ, ತರಕಾರಿ ಏನೂ ಇಲ್ಲ, ಉಳ್ಳಾಗಡ್ಡಿ ಚಟ್ನಿ, ಹಸಿಮೆಣಸಿನಕಾಯಿ ಚಟ್ನಿ, ಖಗ್ಗ ಟೊಮೆಟೊ ಚಟ್ನಿ, ಹೀರಿಕಾಯಿ ಸಿಪ್ಪಿ ಚಟ್ನಿ, ಪುಂಡಿಪಲ್ಯೆ ಚಟ್ನಿ ಒಟ್ಟ ಏನರೆ ಒಂದು ಒಳ್ಳಾಗ ಜಜ್ಜಿ, ರೊಟ್ಟಿ, ಬೆಣ್ಣಿ ಅಥವಾ ತುಪ್ಪ ಇಲ್ಲಾಂದ್ರ ಬಿಸಿ ಎಣ್ಣೀಜೊತಿ ಸವರಿಕೊಂಡು ಉಣ್ಣೂದು ರೂಢಿ.

ಬಿಸಿರೊಟ್ಟಿ ಮಾಡೂದದ ಅಲ್ಲ, ಅದು ಅಷ್ಟು ಸುಲಭದ ಸರಳ ಖಾದ್ಯ ಅಲ್ಲವೇ ಅಲ್ಲ. ಇಡೀ ಬದುಕಿನ ಹದನೇ ಈ ರೊಟ್ಟಿಗೆ ಹಿಟ್ಟು ನಾದಾಕ ಬೇಕು. ಜೋಳದ ಹಿಟ್ಟನ್ನು ಫರಾತಕ್ಕೆ ಹಾಕಿ, ಹಂಚಿನಾಗ ಬಿಸಿನೀರು ಕುದಿಯುಮುಂದ ಹಿಟ್ಟಿನ ಗೋಡೆ ಕಟ್ಟಿ, ಆ ಬಾವಿಯೊಳಗ ಬಿಸಿಬಿಸಿ ನೀರು ಹಾಕ್ತಾರ. ಹಂಗೆ ಆ ಹಿಟ್ಟಿನ ರಾಶಿಯಿಂದಲೇ ಆ ಬಾವಿ ಮುಚ್ಗೊಂತ ಬರ್ತಾರ.

ಚೂರು ಯಾಮಾರಿದರೂ ಬೆರಳು ಸುಡೂದು ಅಗ್ದಿ ಖರೆ. ಹಿಂಗ ಹಿಟ್ಟಿನ ಮ್ಯಾಲೆ ನೀರು ಹಾಕ್ಕೊಂತನ ಅದನ್ನ ನಾದ್ತಾರ. ನೀವತಾರ. ಜೋಳದ ಹಿಟ್ಟಿಗೆ ಗೋದಿ ಹಿಟ್ಟಿದ್ದಂಗ ಜಿಗುಟಿರುದಿಲ್ಲ. ಹಂಗಾಗಿ ಬಿಸಿನೀರು ಹಾಕಾಕಬೇಕು. ನಾದಾಕ ಬೇಕು. ಹಿಂಗ ನಾದ್ಕೊಂತ ನಾದ್ಕೊಂತ ಒಂದು ಹಿಟ್ಟಿನ ಮುದ್ದಿ ಆಗ್ತದ. ಅದನ್ನ ದುಂಡ ಉಂಡಿಹಂಗ ಮಾಡಿ, ಪಕ್ಕಕ್ಕ ಇಡ್ತಾರ.

ಪ್ರತಿ ರೊಟ್ಟಿ ಮಾಡೂಮುಂದ ಒಂದಷ್ಟು ಹಿಟ್ಟುದುರಿಸಿ, ಇದನ್ನ ತಟ್ಕೊಂತ ಹೋಗೂದೆ ಒಂದು ಕಲೆ. ಕೈಲೆ ದುಂಡಕ ತಿರಗಸ್ಕೊಂತ, ಅಂಚು ಹರಿಯದ ಹಂಗ, ಅಂಗೈಗೆ ಅಂಟ್ಕೊಳ್ದಂಗ ಜರಗಸ್ಕೊಂತ ರೊಟ್ಟಿ ಮಾಡಬೇಕು. ಒಂದೇ ಒಂದು ಕ್ಷಣ ಅತ್ತಿತ್ತ ಚಿತ್ತ ಹರದ್ರ, ರೊಟ್ಟಿನೂ ಹರಕು, ಇಲ್ಲಾಂದ್ರ ಅಂಚಿಗೆ ಬಿರುಕು. ಹಿಂಗ ಬಿರುಕು ಮೂಡಿದಾಗ, ಏನವ್ವಾ, ಎಮ್ಮಿ ಮೂಗ ಆದಂಗ ಆಗ್ಯಾವಲ್ಲ ರೊಟ್ಟಿ ಅನ್ನು ಕೊಂಕು ಬ್ಯಾರೆ. ಚಂದ್ರನ್ಹಂಗ ದುಂಡನೆಯ ರೊಟ್ಟಿ ಬರಬೇಕಂದ್ರ, ಒಂದಷ್ಟು ರೊಟ್ಟಿಯಂತೂ ಹರಕಾಗಿರಾಕ ಬೇಕು. ಆಕಳಿಗೆ ಕೊಟ್ಟಿರಾಕ ಬೇಕು.

ಹಿಂಗ ತಟ್ಟಿದ ರೊಟ್ಟಿಯನ್ನು ಹಂಚಿನ ಮ್ಯಾಲೆ ಒಂದ ಅಂಗೈಯಾಗ ಹಿಡಿದು ಹಾಕಬೇಕು. ಹಂಗ ಹಾಕಿದ ಕೂಡಲೇ ಮೇಲ್ಮೈಗೆ ಬಟ್ಟಿಯಿಂದ ನೀರು ಸವರಬೇಕು. ಹಂಗ ಸವರಿದ ನೀರು ಒಣಗಿದ್ರ, ಹಂಚಿನಮ್ಯಾಲಿದ್ದ ಮೈ ಬೆಂದದ ಅಂತರ್ಥ. ಅವಾಗ ಹೊಳ್ಳಿಸಿ ಹಾಕಬೇಕು. ಹಿಂಗ ಹೊಳ್ಳಿಸಿಹಾಕಿದಾಗ, ನೀವು ಅಗ್ದಿ ಪ್ರೀತಿಲೆ ತಟ್ಟಿದ್ರ, ರೊಟ್ಟಿ ಹೊಟ್ಟಿಯುಬ್ಬಸಾಕ ಶುರು ಮಾಡ್ತದ.

ಹಿಂಗ ಹೊಟ್ಟಿಯುಬ್ಬಿಸಿದ ರೊಟ್ಟಿಗೆ ಹಂಚಿನಮ್ಯಾಲೆ ಬೆಣ್ಣಿ ಹಾಕ್ತಾರ. ಆ ಬೆಣ್ಣಿ ಅಗ್ದಿ ನಾಜೂಕಿನ ಹೆಣ್ಮಗಳು ಬ್ಯಾಲೆ ಆಡಿದ್ಹಂಗ ರೊಟ್ಟಿ ಮ್ಯಾಲೆ ಗಿರಕಿ ಹೊಡೀತಿರ್ತದ. ಅವಾಗ ಅದರ ಮ್ಯಾಲೆ ಶೆಂಗಾ ಪುಡಿ, ಉದುರಿಸಿ ತಿನ್ನಾಕ ಸುರುಳಿ ಸುತ್ತಿ ಕೊಟ್ರಂದ್ರ, ಮಕ್ಕಳು ತಾವೇ ಇನ್ನೊಂದಕ್ಕ ಬಂದು ನಿಂದರ್ತಾರ.

ಎರಡು ಮೂರು ವರ್ಷದ ಮಕ್ಕಳಿಗೆ ಬೆಣ್ಣಿ, ಬೆಲ್ಲ, ತುಪ್ಪ ಬೆಲ್ಲ ಸವರಿ ಕೊಡ್ತಾರ. ಸ್ವಲ್ಪ ಮನ್‌ ಮರ್ಜಿಯಾ ಆಗಿದ್ದು ಚಟ್‌ಪಟಾ ತಿನ್ಬೇಕು ಅನ್ನೋರಿಗೆ ರೊಟ್ಟಿ ಮುಟುಗಿ ಹೇಳಿ ಮಾಡಿಸಿದ್ದು. ಹಂಚಿನಾಗ ಬಿಸಿರೊಟ್ಟಿ ಆಗೂದ್ರೊಳಗ ಒಳಕಲ್ಲಿನಾಗ ಮೂರ್ನಾಲ್ಕು ಬಳ್ಳೊಳ್ಳಿ ಎಸಳು, ಹಾಕಿ, ಜಜ್ಜಿ ಇಟ್ಟಿರ್ತೀವಿ. ಅದಕ್ಕೇ ಆ ಬಿಸಿ ರೊಟ್ಟಿಗೆ ತುಪ್ಪ ಉಪ್ಪು ಸವರಿ ಮುದ್ದಿ ಮಾಡಿ ಹಾಕ್ತಾರ.

ಅದನ್ನು ಆರೂದ್ರೊಳಗ ಕುಟ್ಟಿ ಮೆತ್ಗ ಮಾಡಬೇಕು. ಬೇಕಾದ್ರ ಒಂದಿಷ್ಟು ಬಿಸಿ ಎಣ್ಣಿ ಹಾಕಬಹುದು. ರೊಟ್ಟಿಗೆ ತುಪ್ಪ ಎಷ್ಟು ಸವರೀರಿ ಅನ್ನೂದ್ರ ಮ್ಯಾಲೆ ಹೋಗ್ತದ ಇದು. ಕೆಮ್ಮಿದ್ರ ತುಪ್ಪ ಹಚ್ಚೂದಿಲ್ಲ. ಹಂಗ ಮುದ್ದಿ ಮಾಡಿ ಹಾಕ್ತರ. ಹಿಂಗ ಕುಟ್ಟಿ ಮೆತ್ಗಾದ ರೊಟ್ಟಿಯನ್ನು ಅಂಗೈನ ಮುಟುಗಿಯೊಳಗ ಉಂಡಿ ಮಾಡಿ ಕೊಡ್ತಾರ. ಇದಿಷ್ಟೂ ಕೆಲಸ ಆರೂದ್ರೊಳಗ ಮಾಡಬೇಕು. ಅಷ್ಟನ್ನೂ ಆರೋದ್ರೊಳಗ ತಿನ್ನ ಬೇಕು. 

ಈ ಇಡೀ ಅವಸರ ನಮ್ಮ ಜೀವನವನ್ನೇ ಸಂಕೇತಿಸ್ತದ. ನಾವು ಹಿಟ್ಟಿನ ಕಣ. ಎಲ್ಲರ ಜೊತಿಗೂಡಬೇಕು. ತಟ್ಟಸ್ಕೊಬೇಕು. ಯಾವ ಆಕಾರಕ್ಕ ತಟ್ತಾರೊ, ಅದೇ ಆಕಾರಕ್ಕ ತಿರುಗಬೇಕು. ಇಲ್ಲಿ ತಟ್ಟೋದು ನಮ್ಮ ದೈವ. ಯಾವುದೇ ಕಾರಣಕ್ಕೂ ನಮ್ಮೊಳಗ ಬಿರುಕು ಬರದ್ಹಂಗ ದುಂಡದುಂಡಕ್ಕ ತಿರುಗಬೇಕು. ಹಂಚಿಗೆ ಹಾಕಿ ಬೇಯಿಸುವ ಕಾವು ನಮ್ಮನ್ನ ಕಾಪಿಡ್ತದ. ಹೊಗಿ ತುಂಬ್ಕೊಂಡು ಹೊಟ್ಟಿಯುಬ್ಬಿಸಿಕೊಂಡರೂ ಅದೊಂದು ಮೃದುತ್ವ ಕೊಡ್ತದ. 

ಅವಸರವಸರದಾಗ ಮಾಡುವ ರೊಟ್ಟಿ ಮುಟುಗಿ, ನಮ್ಮ ಜೀವನದಿಂದ ದಿನಗಳೂ ಹಂಗೇ ಕಳೀತಾವ. ಉಪ್ಪು, ಖಾರ, ಎಲ್ಲಕ್ಕೂ ಜೀವನಪ್ರೀತಿಯೆಂಬ ದ್ರವ್ಯವನ್ನು ತುಪ್ಪ ಅಥವಾ ಎಣ್ಣೆಯಂತೆ ಬಳಸಿದ್ರೆ ಜೀವನವನ್ನೂ ಆಸ್ವಾದಿಸಬಹುದು. ರುಚಿರುಚಿಯಾಗಿ. 

ರೊಟ್ಟಿಗೂ ಬದುಕಿಗೂ ಇಷ್ಟು ಸಮೀಪದ ಬಂಧ. ಅದಕ್ಕೇ ಇಲ್ಲಿ ರೊಟ್ಟಿ ಇಲ್ಲಂದ್ರ ನಡಿಯೂದಿಲ್ಲ. ರೊಟ್ಟಿ ತಿಂದವ ಗಟ್ಟಿಯಾದ ಅಂತಾರ. ಆಂತರ್ಯದೊಳಗ ಆ ಹಿಟ್ಟಿನಷ್ಟೇ ಅಂತಃಕರುಣೆಯ ಮೃದುತ್ವ ಇದ್ದೇ ಇರ್ತದ.

‍ಲೇಖಕರು ಅನಾಮಿಕಾ

November 15, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: