ಸುಮಿತ್ ಮೇತ್ರಿ ಹಲಸಂಗಿ

ಬಣ್ಣದ ತಗಡಿನ ತುತ್ತೂರಿ
ಇದೆಯೆಂದು ಗಂಟಲು
ಹರಿದುಕೊಂಡರೆ
ಎದೆಯ ಚಿಕಿತ್ಸೆ ಯಾವ
ಕಟಕಟೆಯಲ್ಲಿ ಸಾಧ್ಯ?
ಗುಡಿ-ಗುಂಡಾರ
ಜಪ-ತಪ
ಭಜನೆ-ಭೋಜನೆಯ
ಗದ್ದಲದ ನಡುವೆ
ಹಸಿದ ಉಸಿರಿನ, ಉಸಿರಾಟ ಜೋರಾಗಿ
ಈ ಸಾವಿನ ಆಪಾದನೆ
ಯಾರು ಹೊತ್ತಾರು?
ಬಾಯಾರಿದ ಪಾರಿವಾಳದ
ಕತ್ತು ಹಿಸುಕಿ ಕೊಂದವರಾರು?
ಅಲೆಮಾರಿ ಗುಡಿಸಲಿನ
ಗುಡಿ ಹೊರಗೆ
ತೆವಳುವ ಹಸಿದ ಹೊಟ್ಟೆಗೆ
ಬಿಸಿಲು ತೊಟ್ಟವರ ಮೈಗೆ
ದೂರಲು ಪುರುಸೊತ್ತಿಲ್ಲದೆ
ದಣಿದು ತಿನ್ನುವ ಬಾಯಿಗೆ
ದನಿ ಇಲ್ಲ
ನಿಮಗಾದರೂ ನಾಚಿಕೆಯಾಗಬೇಕಿತ್ತು.

ಹಗೆವು ತುಂಬಿದ ಹಗೆ
ಹೊಗೆಯಲ್ಲಿ ಉಸಿರುಗಟ್ಟಿಸಿ
ತೆವಲಿಗೆ ನೆತ್ತರು ಹರಿಸಿ
ಅಮಾಯಕರ ದನಿ ನುಂಗದಿರಲಿ
ಅಬ್ಬರದ
ಬಣ್ಣದ ತಗಡಿನ ತುತ್ತೂರಿ!
ಕುಲಾಯಿ ಹೆಣೆದು
ಬಾವುಟ ಹಿಡಿದು
ಒಂಟಿಗಾಲಲಿ ಕಾದ
ಕತ್ತಲೆ ದೀಪದ ಕೆಳಗೆ
ನಿಂತ
ತಾಯಿ ಇನ್ನೂ ಕಾದಿದ್ದಾಳೆ.
ಸಾಧ್ಯವಾದರೆ, ನೀವು ಬರಬಹುದು!
ಬೀದಿ ಹುಡುಗನಿಗೆ
ಲೆಕ್ಕ ಬಿಡಿಸಲು ಕಾಗದ ಬೇಕು
ಕರಪತ್ರ ಒಂದೇ ಮಗ್ಗುಲಲ್ಲಿ
ಮುದ್ರಿಸಿ ಬಿಡಿ ಸಾಕು
ತಂಗಿ ಕುಂಡೆ ಒರೆಸಬೇಕು.
ಗುಂಡು ನುಂಗಿದ
ಕಿಸೆಯಲ್ಲಿ ಕುಳಿತು ನಗುವ
ತಾತನ ನೆನಪು ಸೋಕಿ
ಕೂಗೆ ಕೂಗತ್ತದ ಮನ
ಸಭ್ ಕೋ ಸನ್ಮತಿ ದೇ
ಸಭ್ ಕೋ ಸನ್ಮತಿ ದೇ.
ಬಿಸಿಲು ತೊಟ್ಟವರು..
ನಿಮಗೆ ಇವೂ ಇಷ್ಟವಾಗಬಹುದು…





0 Comments