ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಿದ್ದು ಮುತ್ತಿಕ್ಕಿದ್ದ ಹಿಮಕ್ಕೆ ಹೊಟ್ಟೆಕಿಚ್ಚು..

ಆ ಘಳಿಗೆ

ವಿನತೆ ಶರ್ಮ

 

ಬಿಡಿಸಿದ ಬಿಳಿಹತ್ತಿ ಹಿಮ ಕೌದಿ

ಮೈತುಂಬಾ ಹೊದ್ದ ಭುವಿ

ಆಗತಾನೆ ತೊಳೆದ ಕರಿಕೂದಲ

ರಾಶಿಯ ಆಗಸದ ತುಂಬಾ

ಹರಡಿ ಪವಡಿಸಿದ ಆ ರಾತ್ರಿ

ಕಪ್ಪು-ಬಿಳಿ ಪಿಸುಗುಟ್ಟಿದ

ಪ್ರೀತಿ ಝಳಕು ಕೇಳಿ

ಚಂದ್ರಮ ಮತ್ತಷ್ಟು

ಮೋಹಿಸಲು ಉತ್ಸುಕನಾದ

ಅರ್ಧ ಮೈ ಬಿಳಿಯಲಿ ಬಿಟ್ಟು

ಕೇಶರಾಶಿಯ ಕತ್ತಲಲಿ ಕರಗಿದ

ಅವನ ಅರ್ಧಾಕಾರವ ನೋಡಿ

ನಕ್ಕಿಚುಕ್ಕಿತಾರೆಗಳ ಕುಲುಕುಲು

ನಗು ಸಂಗೀತದ ಅಲೆಗಳು

ಕಂಪಿಸಿದ ನಾಭಿಗಳ ಹೃದಯಕ್ಕೆ

ಲಗ್ಗೆ ಇಟ್ಟ ಆ ಹೊತ್ತು

ಕನಸಿಸುತ್ತಿದ್ದ ಗಿಡ ಮರ ಸಾಲು

ಒಮ್ಮೆ ಮಾತ್ರ ಸುಯ್ಯೆಂದಾಗ

ಕರಿರಾತ್ರಿಯ ಕಾನನದ ಕೇಶರಾಶಿಯ

ಹಿಮಪರ್ವತಗಳ ಮೈಮಾಟದ

ಅಂತ್ಯವಿಲ್ಲದ ಜಗದೇಕ ಚೆಲುವೆ

ನಡೆಸಿದ್ದ ಆ ನಿರಂತರತೆಗೆ

ನನ್ನೊಳ ಒಡಲು ನಿಂತನೀರಾಗಿ

ಏನೂ ಇಲ್ಲದ ಏನೂ ಆಗಿಲ್ಲದ

ಅರಿವಿಲ್ಲದ ಆ ಘಳಿಗೆಯಲ್ಲಿ

ತಡೆತಡೆದು ತಪ್ಪಿಸಿಕೊಂಡ

ಒಂದು ಕಿರು ಬಿಸಿ ಉಸಿರು

ಹುಟ್ಟಿಸಿದ ಉಂಗುರಗಳು

ಕಲಾವಿದನ ಕುಂಚದ ಗರಿಯಂತೆ

ಬಳಿ ಸರಿದು ಸವರಿದ ಪರಿಗೆ

ಕಣ್ಣ ರೆಪ್ಪೆಯ ಮೇಲೆ

ಬಿದ್ದು ಮುತ್ತಿಕ್ಕಿದ್ದ ಹಿಮಕ್ಕೆ

ಹೊಟ್ಟೆಕಿಚ್ಚು

ಜಾರಿದರೂ ಸೋಲೊಪ್ಪದೆ

ಆವಿಯಾದ ಅದರ ಘನತೆಗೆ

ಕಣ್ಣಪಸೆ ಆರ್ದ್ರವಾದಂತೆ

ಹಿಮ ಕಣ್ಣ ಕಪ್ಪಿನಾಳದಲಿ ಸೇರಿ

ಚೆಲುವೆಯ ನಿರಂತರತೆ

ಕರಗಿ ಮಾಯವಾದ

ಏನೂ ಬೇಡಿರದ ಶೂನ್ಯದ

ಆ ಹೊತ್ತು ನನ್ನ ಸೊತ್ತಾಗದೇ

ಅಂತರ್ಧಾನವಾಗಿ

ಫಕ್ಕನೆ ಎವೆ ಬಿಚ್ಚಿದ ಈ ಕ್ಷಣ.

‍ಲೇಖಕರು Avadhi GK

9 March, 2018

1 Comment

  1. shrivatsadesai

    ”ಒಂದು ಕಿರು ಬಿಸಿ ಉಸಿರು
    ಹುಟ್ಟಿಸಿದ ಉಂಗುರಗಳು
    ಕಲಾವಿದನ ಕುಂಚದ ಗರಿಯಂತೆ
    ’ಬಳಿ ಸರಿದು ಸವರಿದ ಪರಿಗೆ..”
    ಇತ್ಯಾದಿ ಬಹಳ ಸುಂದರ ಸಾಲುಗಳಿಗೆ ಸ್ಫೂರ್ತಿ ಕೊಟ್ತಿತೇ ಇತ್ತೀಚೆಗೆ ಇಂಗ್ಲಂಡನ್ನು ಬೆದರಿಸಿ ನಡುಗಿಸಿದ ಆ ”Beast from the East?”

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading