ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಿದಲೋಟಿ ರಂಗನಾಥ್ ಹೊಸ ಕವಿತೆ – ನಾವು ಸಂಭ್ರಮಿಸಲು…

ಬಿದಲೋಟಿ ರಂಗನಾಥ್

ನಾವು ಸಂಭ್ರಮಿಸಲು
ಪೂಜೆ ,ಮದುವೆಗಳು ಬೇಕಿಲ್ಲ
ರಾಶಿ ರಾಶಿ ಹೆಣಗಳಿದ್ದರೆ ಸಾಕು !

ನಾವು ಬದುಕಲು
ಸೂಜಿ ಮೊನೆಯಷ್ಟು ಸತ್ಯವೂ ಬೇಕಿಲ್ಲ
ಸುಳ್ಳಿನ ಕಣ್ಣು ತೆರೆದರೆ ಸಾಕು
ನೋಡಲು ಸತ್ಯವಂತರಿದ್ದಾರೆ !

ಅರಿವಿನ ದೀಪದ ಮುಂದೆ ಕೂರುವ
ಹಕೀಕತ್ತು ಬೇಕಿಲ್ಲ
ಮೌಢ್ಯ ಬಿತ್ತುವ
ಕತ್ತಲೆಯ ಬಾಹುಗಳಿದ್ದರೆ ಸಾಕು !
ಸಾಲು ಸಾಲು ಜನರು ತಲೆ ಬಗ್ಗಿಸಿ ಕೂರುತ್ತಾರೆ
ಕೈಯಲ್ಲಿ ದುಡ್ಡಿಡಿದು

ಹೆತ್ತು ಹೊತ್ತವರು ವೃದ್ಧಾಶ್ರಮವಿಡಿದರೂ
ಪರವಾಗಿಲ್ಲ
ತಾನು ತೊಟ್ಟ ಅಂಗಿ ನೇರಪವಾಗಿದ್ದರೆ ಸಾಕು
ಹಾರುತ್ತಾರೆ ರೆಕ್ಕೆ ಕಟ್ಟಿಕೊಂಡು

ರಾಜ್ಯ ಮೂಗುದಾರವಿಲ್ಲದೆ
ಓಡಿದರೂ ಪರವಾಗಿಲ್ಲ
ಆಳುವ ದೊರೆಯ ಕಿಸೆ ಬರಿದಾಗದೆ
ತೊಟ್ಟ ಬಿಳಿಶರ್ಟು ಮಣ್ಣಾಗದೆ !

ಮಗನು ಬರುವ ದಾರಿಯ ಕಾದ
ಹೆತ್ತ ಕರುಳಿಗೆ
ಯಾವ ಸುದ್ಧಿ ಬಳಸುತ್ತದೋ
ಎಂಬ ಸಂಕಟದಲಿ ಕಣ್ಣಾಲಿಗಳು
ಬರಿದಾಗಿವೆ ಇಲ್ಲಿ

ಪೆನ್ನಿಡಿದು ಶಾಲೆಗೆ ಹೋದ ಮಗ
ಎಲ್ಲಿ ಚೂರಿ ಹಿಡಿದು ಎಲ್ಲಿ ಬರುತ್ತಾನೋ
ಎಂಬ ಆತಂಕ ತಾಯಿಗೆ !

ಕರುಣೆಗಳು ಖಡ್ಗವಿಡಿದು ಕೂತಾಗ
ಹಸಿವಿಗೆ ಬೆಲೆಯಿಲ್ಲ
ಛಲಕ್ಕೆ ದಾರಿಯಿಲ್ಲ
ನಡೆವ ದಾರಿಯುದ್ದಕ್ಕೂ
ದುಗಡ ದುಮ್ಮಾನದ ನೆರಳು !

ಕೊಲ್ಲುವವನು ಮನುಷ್ಯನಲ್ಲ
ಧರ್ಮಗಳು ತೂರಿದ ಮುಂದಂಡೆ.!

‍ಲೇಖಕರು Admin

1 August, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading