ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಿದಲೋಟಿ ರಂಗನಾಥ್ ಹೊಸ ಕವಿತೆ- ಬಹುದೂರ ನಡೆದವನ ಕಣ್ಣಲ್ಲಿ…

ಬಿದಲೋಟಿ ರಂಗನಾಥ್

ಬಾಗಿಲು ಬಡಿದ ರಾತ್ರಿಗಳು
ಭಯದ ಭರ್ಜಿಗಳ ಹೊತ್ತು ತಂದಿದ್ದವು
ಚಂದ್ರ ಪೇಲವನಾಗಿದ್ದ
ಕನಸುಗಳು ಕೀಲು ಮುರಿದುಕೊಂಡಿದ್ದವು

ಬಹುದೂರ ನಡೆದವನ ಕಣ್ಣಲ್ಲಿ
ಸಾವಿರ ಯುದ್ಧಗಳ ದಾರಿ
ಕ್ರೂರತೆಯ ರಣಕೇಕೆ
ಶವಗಳ ವಾಸನೆಯ ಗಾಳಿ

ಹುಲ್ಲಿನ ಎಸಳಿಂದ ಪಾರಾಗಿ
ಹಗುರಾದ ಜೀವ
ಕೆಂಡ ಹೊತ್ತವನು ಇದ್ದಿಲಾಗದ
ಕನಸು
ಬೆವರು ಹಸಿರಾಗುವ ಸೊಗಸು
ಕಲ್ಲೊಂದು ಮಾತಾಡಿದ ಸದ್ದು
ಚುಕ್ಕಿಯ ಹಣೆ ಸವರಿದ ಕೈಯಿ

ಪ್ರೀತಿಯ ಗೆರೆ ಮೇಲೆ
ಗಿಣಿ ಕೂತು ಮೌನ ಮುರಿದ ದಿನಗಳು
ಮುತ್ತಿನ ನತ್ತು ಮಿಂಚಿ
ಹೃದಯದ ನೆಲದ ಮೇಲೆ ಹಸಿ ಚಪ್ಪರ !

ಅವಳ ತಿಂಡಿ ಡಬ್ಬಿಯನು
ಖಾಲಿ ಮಾಡಿ ನೀರು ತುಂಬಿಟ್ಟು
ನಕ್ಕ ಮನಸು
ಹಸಿವು ಚಕ್ಕಂಬಕ್ಕಲ ಹಾಕಿ ಕೂತರೂ
ಸೆರಗಿನ ತುದಿಯ ಪ್ರೀತಿ
ಚಂದ್ರನ ಬಿಡಿಸಿತ್ತು !

ಕಣ್ತೆರೆದವನ ಕಣ್ಣಲ್ಲಿ
ಸಂಸಾರದ ನೊಗ ನಗುತ್ತಿತ್ತು
ಎಳೆಬಿಸಿಲು ಕಂದನ ಹೆಗಲ ಮೇಲೆ
ಬದುಕಿನ ದಾರಿಯ
ಹಚ್ಚೆ ಹೊಯ್ಯುತಿತ್ತು !

‍ಲೇಖಕರು Admin

15 March, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading