ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಿದಲೋಟಿ ರಂಗನಾಥ್ ಕವಿತೆ- ದೇವರು ಮುಟ್ಟದ ಗುಜ್ಜುಕೋಲು!

ಬಿದಲೋಟಿ ರಂಗನಾಥ್

ದೇವರ ಹುಡುಕುವ ಕಣ್ಣುಗಳು
ಹಸಿದ ಹೊಟ್ಟೆಗೆ ಅನ್ನ ಹೊಂಚುತ್ತಿದ್ದವು
ನಿರಾಕಾರ ರೂಪ ಹೊತ್ತ ದೇವರು
ಬೆತ್ತಲೆಯ ಕೊಳಕು ಮನಸಿಗೆ ರವಿಕೆ ತೊಡಿಸುತ್ತಿದ್ದ

ಕೈ ಕಾಲುಗಳಿಲ್ಲದ ದೇವರೆಂಬ ಕುರುಡುನಿಗೆ
ಗುಜ್ಜುಕೋಲು ಆತುಕೊಳ್ಳುವುದು ಬೇಕಿತ್ತೆ?
ಆ ಕೋಲು ಮಾಡಿದ್ದ ಬಡಿಗಿ
ಮುಟ್ಟಬಾರದ ಹೂವಿನ ಕೈಲಿ ಬಣ್ಣ ಹಾಕಿಸಿದ್ದ
ಅಂದ ಮೇಲೆ ಮೈಲಿಗೆ ಎಲ್ಲಿಯದು

ನಾಯಿ ಮೂಸಿದ ಕೋಲಿಗೆ
ದೇವರು ತಿಕಕೊಟ್ಟು ತಿರುಗಾಡಿ
ಬಾಲಕ ಮುಟ್ಟಿದನೆಂದು ದಂಡ ಹಾಕಿ
ಬಹಿಷ್ಕಾರ ಏರಿದರೆ
ಈ ಮೂರ್ಖರೇನು ದೇವರಿಗುಟ್ಟಿದವರೇ?

ಕಣ್ಣಿಗೆ ಕಾಣದ ಜಾತಿ
ಅಳತೆಗೆ ಮೀರಿ ಸುಡುತ್ತಿರುವಾಗ
ಇರುವ ಗುಡಿಸಲು ಸೋರಿ
ಅನ್ನ ನೀರಿಗು ತತ್ವಾರ ಸುತ್ತಿರುವಾಗ
ರೆಕ್ಕೆ ಮುರಿದ ಹಕ್ಕಿ
ಹೇಗೆ ದಂಡ ಕಟ್ಟಿತೋ
ಅಂಡ ಪಿಂಡವ ತೊಳೆದು
ಅರಿವಿನ ದೀಪ ಆರಿಸಿದ ತೊಗಲ ಚೀಲವೆ.

ನಿನ್ನ ಕೈಯ ತಾಕದ ಕುಂಕುಮದ ಮಣ್ಣು
ಆ ಹುಡುಗನ ಹಿಡಿ ತುಂಬಿ
ಬೀಜ ಮೊಳೆತು ಭೂಮಿ ಪೈರಾಗುವ ಹೊತ್ತಿಗೂ
ಅಂಗಾಂಗ ಸುಡುವ ಜಾತಿಗೆ ಬಣ್ಣ ಕಟ್ಟಿ
ದೇವರೆಂಬ ಕಲ್ಲಿನ ಎದುರು ತಪ್ಪಿತಸ್ಥರ ಮಾಡುತ
ಕುಲವಿಲ್ಲದ ನಾಲಿಗೆ ನಾಗರವಾಗುತ್ತಿಯಲ್ಲ
ಯಾವ ಗುರು ಕಲಿಸಿದ ಪಾಠ!

ಮೊದಲು ನಿನ್ನೊಳಗನ್ನು ತೊಳೆದುಕೋ
ಪಚ್ಚೆಕಟ್ಟಿ ಕರೆಗಟ್ಟಿದ ಮೌಢ್ಯತೆಗೆ ಗುಂಡಿ ತೋಡು
ಯಾರಿಲ್ಲದ ಹೊತ್ತಿನಲಿ
ದೇವರಿಗೆ ಉಸಿರಿರುವುದಿಲ್ಲ
ನಿನ್ನುಸಿರ ಮಿಡಿತ ಎಲ್ಲಿದು ಕಂಡುಕೋ!

ನೀನು ಮಾಡಿದ ದೇವರು
ನ್ಯಾಯದ ತಕ್ಕಡಿ ತೂಗಿಸಲಾರದೆ
ನ್ಯಾಯಾಲಯಗಳು ರೆಕ್ಕೆ ಬಿಚ್ಚಿ ಕೂತಿವೆ
ಹಸಿದ ಅಸ್ಪೃರ ಬೆಕ್ಕು ಬಂದು ನಿಮ್ಮನೆ
ಹಾಲು ಕುಡಿದು ಹೋಗುವಾಗ
ಬಣ್ಣವಿಲ್ಲದ ಬುಗುರಿ ಮಾಡಿ
ಮೊಳೆ ಬಡಿದು ಆಡಿಸುವ ನೀನು
ಈ ನೆಲಕೆ ಪರಿದಿ ಹಾಕುವೆಯ!

ನಿನ್ನ ತೆವಲಿಗೆ ಗುಡಿ ಕಟ್ಟಿ
ಮೂಗದೇವರ ಕೂರಿಸಿ
ಆಚರಣೆಗಳು ಅಡಚಣೆಗಳಾಗಿ
ಯಾಕೆ ಸುಲಿಯುತ್ತೀಯ ಮುಗ್ಧ ಮನಸುಗಳ
ಹಸಿದ ಚರ್ಮವನು!

ಸೂರ್ಯನಿಗೆ ಬಟ್ಟೆ ಕಟ್ಣಿಟಲಾರೆ
ಗಾಳಿಯ ಹಿಡಿತುಂಬಿಕೊಂಡು ಬಚ್ಚಿಟ್ಟುಕೊಳ್ಳಲಾರೆ
ಭೂಮಿಯನು ಮಡಿಚಿಡಲಾರೆ
ನೋವುಂಡವರ ಮಾನ
ದೇವರ ಹೆಸರಲ್ಲಿ ರಣಗಾಯ ಮಾಡುದೆಷ್ಟು ಸರಿ

ಯಾರೂ ಇಲ್ಲದ ಗುಡಿಯಲಿ
ಗುಜ್ಜು ಕೋಲು ಮಾತಾಡುವುದೆ?
ಮುಟ್ಟಲಿ ಬಿಡು
ಮುಟ್ಟಬಾರದವರು ಯಾರೂ ಇಲ್ಲ ಇಲ್ಲಿ
ಅ ಬಾಲಕನೂ ಅವ್ವನೆತ್ತ ಕೂಸೆ!
ದೇವರೆಂಬ ಆಕಾರ ನೀನು ರೂಪಿಸಿದ
ಅಮೂರ್ತ ಕಲ್ಪನೆ!

‍ಲೇಖಕರು Admin

25 September, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading