ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಿದಲೋಟಿ ರಂಗನಾಥ್ ಕವಿತೆ – ಆ ಹಕ್ಕಿಯ ಕೂಗು…

ಬಿದಲೋಟಿ ರಂಗನಾಥ್

ಒಂಟಿ ಮರದ
ಟೊಂಗೆಯ ಮೇಲೆ ಕೂತು
ಆ ಒಂದು ಹಕ್ಕಿ ಕೂಗುತ್ತಿದೆ
ಅದರ ಪಾದ ಸೋಕಿ ಎಡತಾಕುವ
ಮನೆಯ ಮಾಲಿಕನ ಕಿವಿಗೆ ಬೀಳುತ್ತಿಲ್ಲ

ಅರೆಬರೆ ಕಿತ್ತೋದ ಗರಿಗುಡಿಸಲ ನೆರಳಲ್ಲಿ
ಉಸಿರಾಡುತ್ತಿದ್ದ ನನಗೂ ಕೇಳುತ್ತಿದೆ
ನಾನು ಕರೆಯುವ ಕೂಗು
ಹಕ್ಕಿಗೆ ಕೇಳುತ್ತಿಲ್ಲ
ಕೈ ಸನ್ನೆ ಕಣ್ಸನ್ನೆಗೆ ಕಣ್ಣು ದೊಡ್ಡವಲ್ಲ

ಅದು ಹಸಿವುಂಡ ನೋವೋ
ಕಾಲು ಗಾಯದ ಬಾವೋ
ರೆಕ್ಕೆ ಮುರಿದ ಕೂಗೋ
ತಾಯಿ ಅರಿತ ಸಿಹಿ ಮಾತೋ
ಒಂದೂ ತಿಳಿಯುತ್ತಿಲ್ಲ

ಇಲ್ಲಿ ನಾನು ಕೂತ
ಸಗಣಿ ಕಿತ್ತ ನೆಲದ ಮೇಲಿನ ಬುಡ್ಡಿಯ
ಬೆಳಕ ಬತ್ತಿ ನೆಮೆಯುತ್ತಿದೆ
ಸಾವಿರ ಕನಸಿನ ರೆಕ್ಕೆಗಳು ಮುರಿದು ಬಿದ್ದು
ನಿದ್ದೆ ಹಾರಿ ಗಾಳಿತೂರಿ

ನಡೆದು ಆಚೆ ಹೋಗಲು
ಕರಿಕತ್ತಲ ಕಂಬಳಿ ಹೊದ್ದ ಬಯಲು
ಮರ ಯವುದೋ
ಮಾಲಿಕನ ಮನೆ ಯವುದೋ
ಬೀದಿ ದೀಪ ಆರಿದ ಹೊತ್ತಲ್ಲಿ
ಹಕ್ಕಿಯ ಕೂಗು ಮಾತ್ರ ನಿಂತಿಲ್ಲ !

ಬೆಳಕರಿದು ಬರುವ ಕಾಲುಗಳಲ್ಲಿ
ಚಿತ್ತಾರದ ನಗು ಹೊತ್ತಿದ್ದರೂ
ನನ್ನೊಳಗೆ ಸೇರಿ ಹೋದ ಆ ಕೂಗು
ಭೂಮಿ ಬಿರಿದರೂ ಮಾಯಲಿಲ್ಲ

ಅಲ್ಲಿ ಆ ಒಂಟಿ ಮರದ ಮೇಲೆ ಕೂತ
ಆ ಹಕ್ಕಿಯ ಕೂಗು ಈಗಿಲ್ಲ !
ಮರ ಚಿಗುರ ಹೊತ್ತು ನಗಲಿಲ್ಲ

‍ಲೇಖಕರು avadhi

4 February, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading