ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಿಕ್ಕುಣಿಯ ಕಥೆ ಹೇಳಬೇಕಿದೆ..

ಆಮ್ರಪಾಲಿ
ಡಾ. ಸುಜಾತಾ.ಸಿ

ಸುತ್ತಲು ಹಚ್ಚನೆ ಹಸಿರು
ವೈಶಾಲಿ ರಾಜ್ಯದ ಆಮ್ರಪಾಲಿಯ
ಸುಂದರ ನೋಟದ ಕಥೆ ಹೇಳಬೇಕಿದೆ

ಯಾವ ತಂದೆ ಬೀಜ ಬಿತ್ತಿದನೋ
ಯಾವ ತಾಯಿ ಫಲಿಸಿದಳೋ
ದಾರಿ ಹೋಕರ ಕೈಗೂಸಾಗಿ
ಬಿಕ್ಕಳಿಸಿದವಳ ಬಿಕ್ಕಳಿಕೆ ನಿಲ್ಲಿಸುವ ಕಥೆ ಹೇಳಬೇಕಿದೆ

ಹಂಸದ ಹುಡುಗಿಯ ವಿವಾಹದ ಕಗ್ಗಂಟಿನ
ಮೂಟೆ ಬಿಚ್ಚಿ ಚರ್ಚಿಸಬೇಕಿದೆ
ವೈಶಾಲಿ ರಾಜರ ಕಾಮದ ಹಪಾಹಪಿಯನು ದಾಖಲಿಸಬೇಕಿದೆ
ವೈಶಾಲಿ ಸಂಸತ್ತಿನ ನಿರ್ಣಯವನ್ನು ಅರುಹಬೇಕಿದೆ

ರಾಜ್ಯ ವೇಶ್ಯೆಯಾಗಿಸಿ
ರೂಪಸಿಯ ಕನಸೆಲ್ಲ ನುಚ್ಚು ನೂರಾಗಿಸಿ
ನಗರದ ವಧು ಮಾಡಿದ ರಾಜಾಜ್ಞೆಗೆ ಬಲಿಯಾದ
ಭುವನ ಸುಂದರಿಯ ಕಥೆ ಹೇಳಬೇಕಿದೆ

ಜಾರಿಣಿ ಎಂದು ಜರಿದವರ ಬಾಯಿಗೆ ಹುಯ್ಯಬೇಕಿದೆ
ಸುರ-ಅಸುರರ ಅಸಲಿಯತ್ತು
ಅನಾಥಳಾದ ಆಮ್ರಪಾಲಿಯ
ಆಮ್ರವನದ ಕಥೆ ಹೇಳಬೇಕಿದೆ

ಬಿಚ್ಚಬೇಕಿದೆ ಗುಟ್ಟನೊಟ್ಟಿದ ಗುಹೆಗುವ್ವರಗಳಿಗೆ
ನರ್ತಕಿಯಾಗಿಸಿದ ನಟನೆಯ
ಪಾಷಂಡಿಗಳಿಗೆ ಅರುಹ ಬೇಕಿದೆ
ಗುಣ-ಅವಗುಣಗಳ ಅರಿಯದ ಗುಣಗಾನರಿಗೆ

ಕುಣಿಯಲು ಆಗದ ನೆಲ ಡೊಂಕಾಗಿಸಿದ
ನಾಯಿ ಬಾಲದ ಕೇಡಿಗಳಿಗೆ
ಆಮ್ರವನದ ಹುಡುಗಿಯ ಕಥೆ ಹೇಳಬೇಕಿದೆ

ಕಾಮ-ಮೋಹಗಳಲ್ಲಿ ಬಂದಿಸಿಟ್ಟ
ರಾಜ-ಮಹಾರಾಜರಿಗೆ ತೃಪ್ತಿ ಪಡಲು
ಬಯಸಿದ ಬಾಯಿ ಬಡುಕರಿಗೆ
ಸುಂದರ ಹೆಣ್ಣಿನ ಕಥೆ ಹೇಳಬೇಕಿದೆ

ಗೆದ್ದೆ ಎಂದು ಮಿಸೆ ತಿರುವಿ ನಿಂತ ಶಿಖಂಡಿಗಳಿಗೆ
ಸೌಂದರ್ಯ ತಮ್ಮ ಸ್ವತ್ತೆಂದು-ತುತ್ತೆಂದು ಬರಸೆಳೆದು
ಜಾರಿಣಿಯಾಗಿಸಿದ ಜಾರಣಿಗಳಿಗೆ
ರೂಪಸಿಯ ರೂಪವೇ ಕಂಟಕವಾದ ಕಥೆ ಹೇಳಬೇಕಿದೆ

ಮಗಧ ಸಾಮ್ರಾಜ್ಯದ ಅಧಿಪತಿ ಬಿಂಬಸಾರ
ಸಂಗೀತ ಪ್ರವೀಣಿ ಮಹಾನ ನೃತ್ಯಗಾರ್ತಿ
ಆಮ್ರಪಾಲಿಯನು ರಮಿಸಿದ ಕಥೆ ಹೇಳಬೇಕಿದೆ

ಬಿಂಬಸಾರನ ಸೌಖ್ಯ ಸುಖಕೊಟ್ಟರೂ
ಮಗುವಿನ ನಗು ತುಂಬಿದ ಆಮ್ರವನವಿರಲು
ಮನಮಿಡಿತ ಹೇಳಬೇಕಿದೆ
ಒಲ್ಲದ ಬದುಕಿಗೆ ಮೈಯೊಡ್ಡಿದ ಕಥೆ ಹೇಳಬೇಕಿದೆ

ಬಿಕ್ಷಾಟನೆಗೆ ಹೊರಟ ಚಿರಯೌವ್ವನದ
ಬೌದ್ಧ ಬಿಕ್ಕುವನ್ನು ಎದುರುಗೊಂಡ
ಮೈ ಬಿರಿಯುವ ಯೌವ್ವನದ
ಆಕರ್ಷಕ ಮುಖಾರವಿಂದಕೆ ಮನಸೋತು
ಮೊದಲ ಬಾರಿಗೆ ಪ್ರೇಮ ವಶವಾದ ಪ್ರೇಮಿಯ ಕಥೆ ಹೇಳಬೇಕಿದೆ

ಬಿಕ್ಕುವಿನ ನಿಷ್ಠೆಗೆ ಬುದ್ಧರ ತತ್ವಕ್ಕೆ ಮನಸೂರೆಗೊಂಡ
ಆಮ್ರಪಾಲಿ ಸೋತು ಶರಣಾಗತಿಯಾಗಿ
ಸುಂದರ ಉದ್ಯಾನ-ಅರಮನೆ ದಾನವಾಗಿಸಿ
ಬುದ್ಧನ ಚರಣಕ್ಕೆ ಎರಗಿದ ಕಥೆ ಹೇಳಬೇಕಿದೆ

ಬೌದ್ಧ ಭಿಕ್ಷುಣಿ ಸಂಘದ ಮುಖ್ಯಸ್ಥೆಯಾಗಿ
ಜಗತ್ಪ್ರಸಿದ್ಧ ಸುಂದರಿ ಆಮ್ರಪಾಲಿ
ಬಿಕ್ಕುಣಿಗಳಿಗೆ ಸ್ಪೂರ್ತಿಯಾದ ಕಥೆ ಹೇಳಬೇಕಿದೆ

 

ವಿಮಲಕೊಂಡಣ್ಣ ವೈಶಾಲಿ ತೊರೆದು
ತಾಯಿ ಆಮ್ರಪಾಲಿಯ ಮಾರ್ಗದಡಿ ನಡೆದು
ಬುದ್ಧರ ಸಂಘದ ಮೊರೆ ಹೊದ ಕಥೆ ಹೇಳಬೇಕಿದೆ

ರಾಜ್ಯಗೃಹ ತೊರೆದು ಸನ್ಯಾಸಿಯಾಗಲು
ಕಾಮ-ಮೊಹಗಳಾಚೆಗೆ ಈಜಿ
ದಡ ಸೇರ ಬಯಸಿದವಳ ಕಥೆ ಹೇಳಬೇಕಿದೆ

ಬುದ್ಧರ ಕರುಣಾ ಮೈತ್ರಿ ಶೀಲ
ಭಾವದಲಿ ಮಿಂದೆದ್ದ
ಕೆAಪು ಮಿಶ್ರಿತ ಉಡುಗೆ ಉಟ್ಟ
ಬಿಕ್ಕುಣಿಯ ಕಥೆ ಹೇಳಬೇಕಿದೆ

 

‍ಲೇಖಕರು avadhi

11 April, 2020

1 Comment

  1. Marlabandi Rangaswamy

    ಚೆನ್ನಾಗಿದೆ..
    ಕಥೆ ಕೇಳಿದೆ ರೀ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading