ಡಾ. ಲಕ್ಷ್ಮಣ ವಿ ಎ ಮಹಾನಗರದ ತುಸು ದೂರ
ಮರದ
ಬಟ್ಟೆ ತೊಟ್ಟಿಲುಗಳಿಗೆ ಮರದ ಹಕ್ಕಿಗಳುಲುವೇ ಗಿಲಕಿ
ಈ ಮಕ್ಕಳ ತಾಯಂದಿರು ತಮ್ಮ ಬಡಮೊಲೆಯ ಹಾಲೂಡಿಸಿ ಪೇಟೆಯ ಕಡೆಗೆ ನಡೆದಿದ್ದಾರೆ ಬೊಂಬೆಗಳ ಮಾರಲು
ಐಸು ಕರಗಿದ ಕಡ್ಡಿಯಂತಹ ಪೋರನ ಕೈಗಳಲಿ
ವಿವಿಧ ದೇಶದ ನಕಾಶೆಗಳು ಬಣ್ಣದ ಬಾವುಟಗಳು
ಕಂಡು ಕೇಳರಿಯದ ಹಕ್ಕಿ- ಹದ್ದಿನ ಚಿತ್ರಗಳು
ಶಸ್ತ್ರ ಸಜ್ಜಿತ ದೇವರುಗಳು
ಉಧ್ವಸ್ಥ ಕಡಲಿನಲಿ ಈಗಷ್ಟೇ ಉರಿದು ಆರಿದ ಎರಡು ಪುಟ್ಟ ಹಣತೆಯಂತಹ ದೋಣಿಗಳು
ನಗರದ ನಕಾಶೆಯ ತುಂಬ ಹಾಲೋ ಬ್ಲಾಕಿನ ಅರಮನೆಗಳು
ವಾಕಿಂಗ್ ಮುಗಿಸಿ ಮನೆಗೆ ಮರಳಿದ ಮಂದಿ
ಕರಗಿ ಹೋಗುತ್ತಾರೆ ಸೋಡಿಯಂ ಬೆಳಕಿನೊಳಗೆ
ಊರ ನೆನಪಿನಲಿ ತಂದಿಟ್ಟು ನೆಟ್ಟ ಸಸಿ ಪ್ರತಿ ದಿನ ಇವನ ಖಾಸಗೀ ಕನಸಿನೊಳಗೆ
ಉಸಿರುಗಟ್ಟಿಸುವ ಮರದ ಬಳ್ಳಿ ಇವನ ಕೊರಳಿಗೆ ಸುತ್ತಿ
ಎನ್ನ ಕಾಲೇ ಕಾಂಡ
ಕೈ ಯೇ ಟೊಂಗೆ
ಶಿರವೇ ಹೊನ್ನ ಹೂ ಹೊಂಗೆ
ಮರದ ಜೋಲಿಯಲಿ ನಿದ್ದೆಗೆ ಜಾರಿದ ಮಗು

ಮಿದುಳು ಘನ ನೆನಪುಗಳು ಕರಗಿ
ಮಂಜು ಹನಿ ಕಂಬನಿ
ದಾವಾನಲ ಎದೆ ನದಿಯ ದಾರಿ
ಕೇಳಲು ಯಾರಿರದಿದ್ದರೂ ಅನವರತ ಮೊರೆವ ಕಡಲು
ಪ್ರತಿ ಬಡ ಬಸುರಿಯೊಡಲಿನೊಳಗೊಂದು
ಮೊರೆವ ಪುಟ್ಟ ಕಡಲು
ತಿಂಗಳು ಬೆಳೆದಂತೆ ಬೆಳೆವ ಉಬ್ಬರದ ಅಲೆಗಳು
ಜನರಲ್ ವಾರ್ಡಿನ ತುಂಬ ಎಷ್ಟೊಂದು ಬಾಲ ಚಂದಿರರು
ಕಣ್ಣು ತೆರೆದರೆ ಎದುರಿಗೇ ಕಡಲು
ಎವೆ ಮುಚ್ಚಿದರೆ ಮುಕ್ಕೋಟಿ ದೇವತೆಗಳ ಚಿತ್ರ
ಸಾಲು ಸಾಲು
ಸಂಜೆ ಮರಕೆ ಮರಳಿದ ಹಕ್ಕಿಗಳ ಲೆಕ್ಕ ತಪ್ಪಿದೆ
ಅರೆರೆ!
ಈ ಜೋಲಿಯಲಿ ಆಡುವ ಕಂದನ ಮರೆತೆವಲ್ಲ!
ಬಿಕರಿಯಾಗದ ದೇವರ
ಪಟ ಹೊತ್ತು ನಡೆದಿದ್ದಾನೆ ಐಸು ಕಡ್ಡಿಯ ಪೋರ
ಹೊಂಗೆಯ ಮರದ ಎಡೆಗೆ
ಮೂರು ಮತ್ತೊಂದು ಕಲ್ಲಿನ ಒಲೆಯೆದುರಿನ
ಅವ್ವ ನಿಗೆ ಈಗ ಬಂಗಾರದ ಹೊಳಪು






0 Comments