ಬಾ ಕವಿತಾ – ಎಸ್ ಜಯಶ್ರೀನಿವಾಸ ರಾವ್ – ಗಾನಾ ದೇಶದ ಐದು ಕವನಗಳು

ಕನ್ನಡಕ್ಕೆ ಅನುವಾದ: ಎಸ್ ಜಯಶ್ರೀನಿವಾಸ ರಾವ್

ಆಫ಼್ರಿಕಾ ಖಂಡದ ಪಶ್ಚಿಮ ಭಾಗದಲ್ಲಿರುವ ಗಾನಾ (Ghana) ದೇಶದ ಐದು ಹೆಸರಾಂತ ಕವಿಗಳ ಒಂದೊಂದು ಕವನಗಳ ಕನ್ನಡ ಅನುವಾದ.

1. ಸಂಕೇತಗಳು

(ಮೂಲ: TOTEMS)

ಕವಿ: ಅಮ ಅಟ ಆಯ್ಡೂ AMA ATA AIDOO

ನಾನು
ಹಠಾತ್ತಗಿ
ಎದುರಾದೆನೊಂದು ಗೂಬೆಯ
ನಾಕು ರಸ್ತೆ ಕೂಡುವಲ್ಲಿ
ಕಣ್ ಕಣ್ ಬಿಡುತಿತ್ತು
ನನಗಾಗಿರುವ ಗೊಂದಲಕ್ಕಿಂತಲೂ
ಹೆಚ್ಚು ಗೊಂದಲದಲ್ಲಿ!

ವಿನಾಶದ ಹಕ್ಕಿ.
ವಚನದ ಹಕ್ಕಿ.

ನಗರದ ಒಂದು ಜೋಳದ ಗದ್ದೆಯ
ಫ಼್ಲೊರಸೆಂಟ್ ಬೆಳಕುಗಳು,
ಹೇಳುತ್ತವೆ ಗೂಬೆಗೆ
ಕಾಲ ಬದಲಾಗಿದೆಯೆಂದು.

ಕಾಗೆಯ ಪೈಕಿಯವರು
ವಿವಾಹಗಳ ಮೂಲಕ
ಹಣೆಬರಹಗಳನ್ನು
ಕೆತ್ತಿಸಿಕೊಳ್ಳಲಾರರು.

ಯಾರಿಂದಲಾದರೂ ಸಾಧ್ಯವೇ?

ಅವನು ಅವಳನ್ನು ಪ್ರೀತಿಯಿಂದಲೇ
ನೋಡಿಕೊಳ್ಳುತ್ತಿದ್ದ,
ಅವಳಿಗೆ ಗೊತ್ತಾಗುತ್ತಿತ್ತು ಯಾವಾಗಲೂ
ಯಾವಾಗ ಗಂಜಿಹಾಕಿದ ಹಳೆ ಬಟ್ಟೆಗಳು
ಇನ್ನೊಬ್ಬರ ಮಗುವನ್ನು
ಹೊದಿಸಲು ಹೋಗುತ್ತಿತ್ತೆಂದು.

ತಾಳೆ ಮರದ ದೊಡುವಾ:
ಮೊದಲ ಸಲ ಒಗೆದ
ಉಳಿದ ಹೊಸ ಬಟ್ಟೆಗಳನ್ನು
ಅವಳು ಒಣಗಲು ನೆತು ಹಾಕುತ್ತಿದ್ದಾಳೆ.

ಎಲ್ಲಾಗುತ್ತೊ ಅಲ್ಲಿ ಕೂರು, ಕೂತು
ನಿನ್ನ ಕಥೆಯ ಹೇಳು. ಎಲ್ಲಾ
ಮಾಡುಗಳೂ ಮನೆಗಳನ್ನು
ಮಳೆಯಿಂದ ಕಾಪಾಡುತ್ತವೆಯೆಂದು
ನಂಬಿಸುತ್ತಾರೆ ಅವರು.

ಅಕುವಾ, ನನ್ನ ಸೋದರಿ,
ಬಿರುಗಾಳಿಯಲ್ಲಿ ಮರದಡಿ
ನಿಲ್ಲಲು ಯಾರೂ ಇಚ್ಛಿಸುವುದಿಲ್ಲ.

ಆದ್ದರಿಂದ
ನೀನು
ಜ್ಞಾಪಿಸುವವಳಾಗಬೇಡ
ನಾನು
ಮಹಾನ್ ಪೂರ್ವಿಕರಿಗಾಗಿ ಅಳಬೇಕೆಂದು,
ನೆನೆಪಿಸಬೇಡ
ಒಂದು ಕಾಲದಲ್ಲಿ ರಾಜರ ಬೀಡಾಗಿದ್ದ
ಆ ಪಾಳುಬಿದ್ದ ಹಳ್ಳಿಯನ್ನು.

ಇಟು ಕ್ವಾನ್
ಮಾ
ಅಡ್ಜ಼ೆ ಸಾ ವೊ ಆ
ನಾ
ಅಡ್ಜ಼ೆ ಅಸಾ ವೊ!!

(ಕತ್ತಲೆ ಯಾವಾಗ ಪಯಣವ ದಾಟಿ ಮುಂದಕ್ಕೆ ಹೊಗುತ್ತೋ, ಅದು ಹೋಗುತ್ತೆ!!)

2. ಗೀಜಗ ಹಕ್ಕಿ

(ಮೂಲ: THE WEAVER BIRD)

ಕವಿ: ಕೋಫಿ ಅವುನೊರ್ KOFI AWOONOR

ಗೀಜಗ ಹಕ್ಕಿ ಕಟ್ಟಿತು ನಮ್ಮ ಮನೆಯಲಿ
ಇಟ್ಟಿತು ಮೊಟ್ಟೆಗಳ ನಮ್ಮ ಏಕೈಕ ಮರದಲಿ
ಅದನ್ನ ನಾವು ಓಡಿಸಲು ಬಯಸಲಿಲ್ಲ
ಅದರ ಗೂಡು ಕಟ್ಟುವುದ ನೋಡಿದೆವು ನಾವು
ಅದರ ಮೊಟ್ಟೆ ಇಡುವುದ ನಿಗಾವನಿ ಮಾಡಿದೆವು ನಾವು.

ಆಮೇಲೆ ಗೀಜಗ ಮರಳಿ ಬಂತು ಒಡೆಯನ ವೇಷ ಹಾಕಿ
ಮನೆ ಒಡೆಯರಾದ ನಮಗೇ ಮುಕ್ತಿಮಾರ್ಗವ ಬೋಧಿಸಲು
ಅದು ಪಶ್ಚಿಮದಿಂದ ಬಂದದ್ದು ಅಂತಂದರು
ಅಲ್ಲಿ ಕಡಲ ಚಂಡಮಾರುತಗಳು ಕಡಲ್‌ಹಕ್ಕಿಗಳ ಕೆಡಹಿದವಂತೆ
ಅಲ್ಲಿ ಮೀನುಗಾರರು ಲಾಂದ್ರದ ಬೆಳಕಿನಲಿ ಬಲೆಗಳ ಒಣಗಿಸುವರಂತೆ
ಅದರ ಪ್ರವಚನ ನಮ್ಮದೇ ಭವಿಷ್ಯವಾಣಿಯಂತಾಗಿತ್ತು
ಮತ್ತೆ, ನಮ್ಮ ಹೊಸ ದಿಗಂತಗಳು ಅದರ ಗೂಡಿನವರೆಗೇ ಸೀಮಿತ
ಆದರೆ ದೀಕ್ಷಾಧಾರಿಗಳ ಪ್ರಾರ್ಥನಾ-ಪರಿಹಾರ ಸಭೆಗಳಿಗೆ ನಾವು ಸೇರುವಂತಿಲ್ಲ.

ನಾವು ಪ್ರತಿದಿನ ಹೊಸ ಬೀಡುಗಳ ಹುಡುಕಾಟದಲ್ಲಿರುವೆವು,
ಹೊಸ ಪೂಜಾಪೀಠಗಳ ಮತ್ತೆ ಕಟ್ಟಲು ಹೆಣಗುವೆವು ನಾವು
ಗೀಜಗನ ಮಲದಿಂದ ಮೈಲಿಗೆಯಾದ ನಮ್ಮ ಪುರಾತನ ಗುಡಿಗಳ.

3. ಹುಡುಕಾಟ

(ಮೂಲ: THE SEARCH)

ಕವಿ: ಕ್ವೇಸೀ ಬ್ರೂ KWESI BREW

ಗತವು ಮತ್ತೇನಲ್ಲ,
ವರ್ತಮಾನದ ಕೆಂಡಗಳು, ಅಷ್ಟೇ;
ಭವಿಷ್ಯತ್ತೋ, ಮೋಡ-ಕಟ್ಟಿದ ಆಕಾಶದೊಳಗೆ
ಮಾಯವಾದ ಹೊಗೆ, ಅಷ್ಟೇ.

ಸೌಮ್ಯ ತೋರು, ಕರುಣೆದೋರು, ಪ್ರಿಯೇ,
ಪದಗಳು ನೆನಪುಗಳಾಗುತ್ತವೆ,
ನೆನಪುಗಳು ವಿದೂಷಕರ ಆಯುಧಗಳಾಗುತ್ತವೆ.
ತಿಳಿದವರು ಮೌನತಾಳಿದ್ದಾರೆಂದರೆ
ಅವರು ಬುದ್ಧನ ಮುಖದಲ್ಲಿ
ಕ್ರೈಸ್ತನ ಅಂಗೈಗಳನ್ನು ಓದಿದ್ದಾರೆಂದು.

ಎಂದೇ, ಅವರ ಮಾತುಗಳಲ್ಲಿ
ವಿವೇಕ, ಆದರ್ಶಗಳನ್ನು ಅರಸಬೇಡ, ಪ್ರಿಯೇ.
ಅವರ ನಾಲಗೆಗಳನ್ನು ಹದಮಾಡಿ ಮೌನವಾಗಿಸಿದ
ಬೆಂಕಿಯೇ ನಮಗೂ ಕಲಿಸಿಲಿ
ಕಲಿಸು ನಮಗೆ!

ಮಳೆ ಸುರಿಯುತ್ತಿತ್ತು,
ನೀನು ನಾನು ರಾತ್ರಿಯ
ಉತ್ಕಟತೆಯ ಹೊರೆ ಹೊತ್ತು ಮಲಗಿರುವಾಗ;
ಮಿನುಗುವ ಮಿಂಚಿನ ಝಳಪಿನಲಿ
ಅವರ ನವ-ಜ್ಞಾನದ
ನಿಜ ಗೋಚರಿಸಿತು –
ಅವರು ಮೂರ್ಖರ ಗುಲಾಮರಾಗಿದ್ದರೆಂದು.

4. ಶಬ್ದ ಮತ್ತು ಮೌನ

(ಮೂಲ: SOUND AND SILENCE)

ಕವಿ: ಕೊಫಿ ಅನ್ಯಿಡೊಹೊ KOFI ANYIDOHO

ನಾನು ಕಿರುಚುವುದಿಲ್ಲವಾದ್ದರಿಂದ ಆದ್ದರಿಂದ
ನಿನಗೆ ಗೊತ್ತಿಲ್ಲ ನಾನೆಷ್ಟು ತೀವ್ರವಾಗಿ ನೋಯುತ್ತೇನೆಂದು

ನಾನು ಬಹಿರಂಗವಾಗಿ ಚುಂಬಿಸುವುದಿಲ್ಲವಾದ್ದರಿಂದ ಆದ್ದರಿಂದ
ನಿನಗೆ ಗೊತ್ತಿರಲಿಕ್ಕಿಲ್ಲ ನಾನೆಷ್ಟು ಪ್ರೀತಿಸುತ್ತೇನೆಂದು

ಮತ್ತೆ ಮತ್ತೆ ಮತ್ತೆ ಪ್ರಮಾಣ ಮಾಡುವುದಿಲ್ಲವಾದ್ದರಿಂದ ಆದ್ದರಿಂದ
ನಿನಗೆ ಗೊತ್ತಾಗುವುದಿಲ್ಲ ನನ್ನ ಅಕ್ಕರೆ ಎಷ್ಟು ಗಾಢವಾದುದ್ದೆಂದು
ನೀನು ಹೇಳುತ್ತಲೇ ಇರುವೆ
ಹೇಗೆ, ಹೇಗೋ ನಮ್ಮ ಲೋಕ ಸಂಜ್ಞೆಗಳ ಜತೆಗೇನೇ ಬದುಕಬೇಕೆಂದು
ಆದರೆ, ನೋಡು, ನಾವೆಷ್ಟು ಬಿಟ್ಟುಕೋಡುತ್ತೇವೆಂದು
ಸೆರೆಯಾಗಿದ್ದೇವೆ ಸಂಜ್ಞೆಗಳ ಬೆನ್ನಟ್ಟಿ
ತೊರೆದು ಎಲ್ಲ ಅರ್ಥಗಳ
ಎಲ್ಲ ಗುರಿಗಳ

ನಾವು ನಮ್ಮ ಮಾತುಗಳನ್ನು ಎರಡಾಗಿ ತುಂಡರಿಸುತ್ತೇವೆ
ಮತ್ತೆ ಪ್ರತಿ ಅರ್ಧವನ್ನು ಬೆರ್ಪಡಿಸುತ್ತೇವೆ
ಶಬ್ಧಗಳಾಗಿ
ಮೌನಗಳಾಗಿ

5. ವಿಸ್ಮೃತಿ

(ಮೂಲ: OBLIVION)

ಕವಿ: ಎಲಿಸ್ ಅಯಿತೆಯ್ ಕೊಮೆಯ್ ELLIS AYITEY KOMEY

ಈ ಜೀವತುಳುಕುವ ಕಾಡಿನಲ್ಲಿ
ತನ್ನ ಗಟ್ಟಿ ಹೊಟ್ಟೆಯಿಂದ
ಬೆಳ್ಳಗಾಗುತ್ತಾ ಜಿನುಗುತ್ತಿರುವ
ಕಳ್ಳಿನ ದ್ರವವ ಸೂಸುತ್ತ ಬಿದ್ದಿರುವ
ತಾಳೆಯ ನೆನಪಿನಲ್ಲಿಟ್ಟುಕೊಳ್ಳಲು ಬಯಸುವೆ ನಾನು.

ನದಿಬದಿಯ ಕೊಂಬೆಗಳ ಮುಳ್ಳುಗಳಿಂದ
ಚರ್ಮ ಗೀರಿಸಿಕೊಂಡು,
ಪಾದಗಳಿಗೆ ಮಣ್ಣು ಮೆತ್ತಿಸಿಕೊಂಡು,
ರಸ್ತೆಯಿಂದ ಇದನ್ನು ನೋಡಲು ಬಯಸುವೆ ನಾನು.

ಗೂಬೆಗಳ ಅಂಗಲಾಚುವ ಊಳುಗಳು
ಕಪ್ಪೆಗಳ ಖುಷಿತುಂಬಿದ ಕೇಕೆಗಳು
ಹಸಿರುಗಣ್ಣಿನ ಅಡವಿಯ ನೋಟ
ಇವೆಲ್ಲವ ಚೆನ್ನಾಗಿ ನೆನಪಿನಲ್ಲಿಟ್ಟುಕೊಳ್ಳಲು ಬಯಸುವೆ ನಾನು.

ಹಸಿದ ಹಸುಳೆಗೆ ಹಾಲುಣ್ಣಿಸುವ ತಾಯಂದರ
ಸ್ತನಗಳಂತೆ ಜೋತಿರುವ ಕೋಕೊ ಕೋಡುಗಳು,
ಸಿಹಿಗೆಣಸು ಮರಗೆಣಸು ಪೊದೆಗಳಡಿಯಲ್ಲಿ
ಅರಮನೆ ಕಟ್ಟುವ ಏಡಿ,
ಈ ಪೊದೆಗಳಿಗೆ ನೆರಳನೀಡುವ ಹರಿತ ಎಲೆಗಳ
ತಾಳೆಮರಗಳ ನಡುವೆ ನಡೆದಾಡಲು ಬಯಸುವೆ ನಾನು.
ಇವೆಲ್ಲವನ್ನೂ ನೆನಪಿನಲ್ಲಿಟ್ಟುಕೊಳ್ಳಲು ಬಯಸುವೆ ನಾನು
ನಾನು ಹೊರಟು ಹೋದ ಮೇಲೆ
ಅವೆಲ್ಲವೂ ಸತ್ತು ಮಣ್ಣಾಗುವ ಮುಂಚೆ.

‍ಲೇಖಕರು Admin

July 10, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ಲಲಿತಾ ಸಿದ್ಧಬಸವಯ್ಯ

    ಘಾನಾ ಕಾವ್ಯದ ಬಗ್ಗೆ ತುಸುವಾದರೂ ಪರಿಚಯ ನೀಡುವ ಕವಿತೆಗಳು ಇವು. ಎಲ್ಲಾ ಕವನಗಳೂ ಚೆನ್ನಾಗಿವೆ. ಇವುಗಳ ಜೊತೆಗೆ ಘಾನಾ ಕಾವ್ಯದ ಕುರಿತೊಂದು ಪ್ರವೇಶಿಕೆ ಇದ್ದರೆ ಚೆನ್ನಾಗಿರುತ್ತಿತ್ತು.
    ಕೋಫಿ ಅವನೂರ್ ಹೊರತಾಗಿ ಇತರೆ ಘಾನಾ ಕವಿಗಳ ಬಗ್ಗೆ ಜಗತ್ತಿಗೆ ಗೊತ್ತಿರುವುದು ಕಡಿಮೆ. ಕೋಫಿಯ ದುರಂತ ಸಾವು ಕಾವ್ಯಕ್ಕೆ ಬಿದ್ದ ಹೊಡೆತ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: