“ಬಾಳಂತಿ ಪುರಾಣ” ಎಂಬ ರಮ್ಯ ಕತೆ..!!!

ವಸುಂಧರಾ ಕೆ. ಎಂ

ಮೊನ್ನೆ ‘ಅವಧಿ’ ಆನ್ ಲೈನ್ ಮ್ಯಾಗಜೈನಿನಲ್ಲಿ ಶ್ರೀಕಲಾ ಡಿ ಎಸ್ ಅವರ ಸ್ವಾನುಭವದ ಬಾಣಂತನದ ಕಥೆಗಳ ಪುಸ್ತಕ ‘ಬಾಳಂತಿ ಪುರಾಣ’ದ ಅಧಿಕೃತ ಬಿಡುಗಡೆ ಕಾರ್ಯಕ್ರಮವಿತ್ತು. ಫೇಸ್ಬುಕ್ಕಿನಲ್ಲಿಯೇ ಪ್ರಸಾರವಾಗುತ್ತಿದ್ದರಿಂದ ಪೂರಾ ಕಾರ್ಯಕ್ರಮ ನೋಡಿದೆ. ಇದಕ್ಕೂ ಮೊದಲು ಗೆಳತಿ , ಕವಯಿತ್ರಿ ರೇಣುಕಾ ರಮಾನಂದರು ಪುಸ್ತಕದ ಬಗ್ಗೆ ಸೊಗಸಾಗಿ ಬರೆದು ಕುತೂಹಲ ಹೆಚ್ಚಿಸಿದ್ದರು..!

ಭಾನುವಾರ ‘ಅಂಕಿತ’ ಪುಸ್ತಕ ಮಳಿಗೆಯಲ್ಲಿ ಕೊಂಡ ಪುಸ್ತಕವನ್ನು ಇಂದು ಬೆಳಿಗ್ಗೆ 6ಗಂಟೆಯಿಂದ 8ರ ನಡುವೆ ಅದೂ ಇದೂ ಕೆಲಸ ಮಾಡುತ್ತಲೇ ಎರಡು ಗಂಟೆಯ ಒಳಗೇ ಓದಿ ಮುಗಿಸಿದೆ.. ಅಷ್ಟು  ಚೆಂದವಿದೆ..

ಬರಿಯ ಓದಿದೆ ಎಂದರೆ ಸರಿಯಾಗಲಾರದು, ನನ್ನೆರಡು ಬಾಣಂತನಗಳನ್ನು  ಆಗಾಗ್ಗೆ ನೆನೆದುಕೊಂಡು, ಅಲ್ಲಲ್ಲಿ  ಕಂಗಳು ಮಂಜಾಗಿ, ಕೆಲವೊಮ್ಮೆ ನನ್ನಷ್ಟಕ್ಕೆ ನಗುತ್ತಾ… ನನ್ನ ಆಪ್ತ ಗೆಳತಿ ನನ್ನೊಡನೆ ಮಾತನಾಡುತ್ತಿರುವಳೇನೋ ಎಂದು ಭಾಸವಾಗುತ್ತಿದ್ದಂತೆ  ಓದಿ ಮುಗಿಸಿದೆ..

ಶ್ರೀಕಲಾ ಅಪ್ಪಟ ಮಲೆನಾಡಿನ ಹೆಣ್ಣು ಮಗಳು. ಶಿವಮೊಗ್ಗೆಯ ಸಾಗರ ಬಳಿಯ ತಾಳಗುಪ್ಪದವರು. ತವರಿಗೆ ಹೋಗುವ ಹಾದಿಯಲ್ಲೇ , ಅವಸರದಲ್ಲಿ ತಮ್ಮನ್ನು ಕಾಣಲು ಬಂದ  ಎರಡನೆಯ ಕೂಸು ಸಂಪನ್ನನನ್ನು  ಹೇಗೆ ಹೆತ್ತದ್ದೆಂಬುದರಿಂದ ಹಿಡಿದು ಬರೋಬ್ಬರಿ ಮೂರು ತಿಂಗಳ ಬಾಣಂತನದ ವಿವರವನ್ನು  91 ಪುಟಗಳಲ್ಲಿ ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ..

ಮಂಡ್ಯ ಜಿಲ್ಲೆಯಂತ ಬಯಲು ಸೀಮೆಯ ನನಗೆ ಇಂಥ ಬಿಸಿ ಬಿಸಿ ಬಾಣಂತನ ಆಗದಿದ್ದರೂ, ಹಲವಾರು ಪಥ್ಯೋಪಚಾರ, ಶಿಶುಪಾಲನೆಗೆ ಬಹಳ ಹೋಲಿಕೆಯಿದೆ ಎನಿಸಿತು. ಕೆಲವು ನನ್ನ ಮೊಂಡು ಹಟದಿಂದ ತಪ್ಪಿದ್ದೂ ಇದೆ. ಹಾಗೂ ಎರಡೂ ಹೆರಿಗೆಯು ಸಿ-ಸೆಕ್ಷನ್ ಆದ್ದರಿಂದ ಸ್ವಲ್ಪ ವ್ಯತ್ಯಾಸವೂ ಇದೆ.

ಅನನುಭವಿ ತಾಯಿ ಮಗುವಿಗೆ ಮೊದಲ ಬಾರಿಗೆ ಮೊಲೆಯೂಡಲು ಎಷ್ಟು ತ್ರಾಸಾಗುತ್ತದೆ ಎಂಬುದರಿಂದ ಹಿಡಿದು,  ಶ್ರೀಕಲಾ ನಿದ್ದೆಯಿರದ ರಾತ್ರಿಗಳು, ಮಗುವಿಗೆ ಎಣ್ಣೆ ಸ್ನಾನ, ಕಷಾಯ, ಬಾಣಂತಿ ಪಥ್ಯ, ಬಾಣಂತಿ ಸ್ನಾನ, ಕೆಂಡ ಕಾಯಿಸುವುದು, ಬಟ್ಟೆ ಕಟ್ಟುವುದು, ಮಲಬದ್ಧತೆ.., ಹೀಗೆ ವಿಧವಿಧವಾಗಿ ವರ್ಣನೆ ಕಟ್ಟಿಕೊಟ್ಟಿದ್ದಾರೆ.. ಪುಸ್ತಕ ಓದುತ್ತಿದ್ದಂತೆಯೇ.., ನಾವೂ ಸಹ  ಬಾಣಂತಿಯೊಡನೆ, ಅವರ ಅಜ್ಜಿಯೊಡನೆ ಕೋಣೆ, ಬಚ್ಚಲ ಮನೆ, ಅಡುಗೆ ಮನೆಯೊಳಗೆಲ್ಲಾ ಓಡಾಡಿ ಬಂದಂತಾಗುತ್ತದೆ. ಬಿಸಿನೀರಿನ ಹಬೆ ಮುಖಕ್ಕೆ ಬಡಿದು ಬೆವರುವಂತಾಗುತ್ತದೆ.. ಕಷಾಯ, ದೊಡ್ಡೌಷಧ ಕುಡಿದು, ಕಂಬಳಿ ಹೊದ್ದು ಗಡದ್ದಾಗಿ ಮಲಗುವಂತಾಗುತ್ತೆ.

ಒಂದು ಸಚಿತ್ರ ಕಥಾಮಾಲಿಕೆಯಂತೆ ಇಡೀ ಪುಸ್ತಕ ಆವರಿಸುತ್ತದೆ… ಶ್ರೀಕಲಾ , ಒಳ್ಳೆಯ ನಿರೂಪಕಿ. ಸ್ವತಃ ಭರತನಾಟ್ಯ ಕಲಾವಿದೆಯೂ, ಪತ್ರಿಕೋದ್ಯಮ ಅಧ್ಯಯನ ಮಾಡಿದವರೂ ಆಗಿರುವುದರಿಂದ ಅವರ ಬರವಣಿಗೆಯಲ್ಲಿ ಅವೆಲ್ಲವೂ ಕಾಣುತ್ತದೆ.

ಯಾವ ಕೆಲಸವೇ ಆಗಲಿ ಬೇಗ ಮುಗಿಸಿಬಿಡಲು ಆಸಕ್ತಿ ತೋರುವ ಈ ಕಾಲದ ನಮಗೆ ಯಾವಾಗಲೂ ಹಿಂದಿನ ಕಾಲದವರೊಡನೆ ವರಾತ ಇದ್ದದ್ದೇ ಅಲ್ಲವೇ..? ಅಂತಹದ್ದೇ ಸಣ್ಣ ಪಿರಿಪಿರಿ ಶ್ರೀಕಲಾ ತಮ್ಮ ಅಜ್ಜಿಯವರೊಡನೆ ತೆಗೆದರೂ ಬಹಳ ಬೇಗ ಜಾಣ ಹುಡುಗಿಯಂತೆ ಆಗಿಬಿಡುವುದೂ ಸಹ ಓದಲು ಚೆಂದ.

ಭಾಷೆಯಲ್ಲಿ ಸೊಗಸಿದೆ. ಅಜ್ಜಿಯ ಮಾತೆಲ್ಲವೂ ಮಲೆನಾಡಿನ ಹವ್ಯಕ ಕನ್ನಡ..

ಹೆಣ್ತನವೇ ಒಂದು ಅಚ್ಚರಿ..!  ಅದರಲ್ಲಿಯೂ ತಾಯ್ತನವೆಂದರೆ ಕಡಿಮೆ ಸೊಗಸೇ..! ಇದೆಲ್ಲಾ ಅಚ್ಚರಿ, ಸಂಭ್ರಮಗಳನ್ನು ನನ್ನೊಬ್ಬಳು ಮಗಳಿಗೆ, ಮುಂದೆ ಯಾವಾಗಲೋ ಬರುವ ನನ್ನ ಸೊಸೆಗೆ, ನನ್ನ ಮೊಮ್ಮಗಳಿಗೆ…!? (ಮಿಗಿಲಾಗಿ ನನ್ನ ಗಂಡ, ಮಗ, ಅಳಿಯ, ಮೊಮ್ಮಗನಿಗೆ) ಮನದಟ್ಟು ಮಾಡಿಸಲು ಶ್ರೀಕಲಾ ಅವರ ಈ ಪುಸ್ತಕದ ಪಾಲೂ ಸೇರುತ್ತದೆ ಎನ್ನುತ್ತಾ.., ಲಿಂಗಬೇಧವಿಲ್ಲದೆ ಎಲ್ಲರೂ ಓದಿರೆಂಬ ಶಿಫಾರಸ್ಸಿನೊಂದಿಗೆ..

ಆನ್ ಲೈನ್ ಖರೀದಿಯ ಲಿಂಕ್-
https://www.bahuroopi.in/Baalanti-Purana-p135791872

https://www.amazon.in/…/pro…/8193853377/ref=cx_skuctr_share…

ಅಂಕಿತ, ನವಕರ್ನಾಟಕ, ಆಕೃತಿ, ಐ ಬಿ ಎಚ್, ಸ್ನೇಹ ಪ್ರಕಾಶನ ಸೇರಿದಂತೆ ಎಲ್ಲಾ ಪ್ರಮುಖ ಪುಸ್ತಕ ಮಳಿಗೆಗಳಲ್ಲಿ ಲಭ್ಯ.
#ನನ್ನಮೊದಲಪುಸ್ತಕ
#ಬಾಳಂತಿಪುರಾಣ

www.bahuroopi.in

‍ಲೇಖಕರು avadhi

April 25, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

  1. suma kalasapura

    ಸೊಗಸಾದ ಅನಿಸಿಕೆ. ನನಗೂ ಓದುವ ಹಂಬಲವಾಯ್ತು. ಕೊಂಡು ಓದುವೆ. ಶುಭಾಷಯಗಳು

    ಪ್ರತಿಕ್ರಿಯೆ
  2. Pavitra.m

    ಬಾಳಂತಿಯ ಓದು….ಕಥೆಯಾಗುವ ತವಕದ ಲೇಖನ…ವಂಸುಂಧರಾ

    ಪ್ರತಿಕ್ರಿಯೆ
  3. Prasanna Kumar J

    ಪುಸ್ತಕ ನಿಮ್ಮನ್ನು ಪ್ರಭಾವಿಸಿದೆ
    ನಿಮ್ಮ ಬರಹ ನಮಗೂ ಪ್ರೇರೇಪಿಸುತ್ತದೆ…

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: