ಅದಾಗಲೇ ನನಗೆ ಐದು ತಿಂಗಳು ತುಂಬಿತ್ತು..

ಏಪ್ರಿಲ್ 23 ಷೇಕ್ಸ್ ಪಿಯರ್ ಹುಟ್ಟಿದ ಮತ್ತು ಇಲ್ಲವಾದ ದಿನ. ಈ ಸಂದರ್ಭದಲ್ಲಿ ‘ಅವಧಿ’ಯ ಪರಿಚಿತ ಬರಹಗಾರ, ಲಿಬ್ಯಾದಲ್ಲಿ ಸಾಕಷ್ಟು ವರ್ಷ ಅಧ್ಯಾಪನ ಮಾಡಿದ, ಆ ಕುರಿತು ಪ್ರವಾಸ ಕಥನವನ್ನೂ ಬರೆದಿರುವ ಉದಯ ಇಟಗಿ ಅವರ ಹೊಸ ಮಾಲೆಯನ್ನು ಪ್ರಕಟಿಸುತ್ತಿದ್ದೇವೆ ನಿನ್ನೆ ಅದರ ಮೊದಲ ಕಂತು ಪ್ರಕಟಗೊಂಡಿತ್ತು ಅದು ಇಲ್ಲಿದೆ.

ಉದಯ ಇಟಗಿ

ನಿನ್ನೆಯ ಸಂಚಿಕೆಯಿಂದ..

ಸರಿ, ಮುಂದಿನ ತಿಂಗಳು ನಾನು ಮುಟ್ಟಾಗಲಿಲ್ಲ. ನಮ್ಮಿಬ್ಬರ ಮೊದಲ ಮಿಲನದಲ್ಲಿಯೇ ನಾನು ಗರ್ಭ ಧರಿಸಿದ್ದೆ. ವಿಷಯವನ್ನು ಅವನಿಗೆ ತಿಳಿಸಿದೆ. ಮದುವೆಗೆ ಏರ್ಪಾಡು ಮಾಡೆಂದೆ. ಮಹಾನ್ ಖಿಲಾಡಿ ಅವನು! ಮೊದಲು ಖುಶಿಪಟ್ಟ. ಕುಣಿದು ಕುಪ್ಪಳಿಸಿದ. ನಾಳೆ ಬರುತ್ತೇನೆ ಎಂದು ಹೇಳಿಹೋದ. ಆದರೆ ಆಸಾಮಿ ನಾಲ್ಕು ದಿವಸವಾದರೂ ಪತ್ತೆನೇ ಇಲ್ಲ.

ಐದನೆಯ ದಿನ ಪ್ರತ್ಯಕ್ಷನಾದ. ನಾನು ‘ಮನೆಯಲ್ಲಿ ಕೇಳಿದಿಯಾ?’ ಎಂದು ಕೇಳಿದೆ. ಹೂಂ, ಊಹೂಂ ಎಂದೇನೋ ಬಡಬಡಿಸಿದ. ನಾನು ಹಟಬಿಡದೆ ಮತ್ತೆ ಕೇಳಿದೆ. ಮದುವೆ ಈಗಲೇ ಸಾಧ್ಯವಿಲ್ಲ ಎಂದ. ಏನೇನೋ ಸಬೂಬುಗಳನ್ನು ಹೇಳಿದ. ತಪ್ಪಿಸಿಕೊಳ್ಳಲು ನೋಡಿದ.

ನಾನು ಬಿಡಲಿಲ್ಲ. ಮನೆಯಲ್ಲಿ ಅಪ್ಪ ಅಮ್ಮನಿಗೆ ವಿಷಯ ತಿಳಿಸಿದೆ. ಅವರು ಪಂಚಾಯಿತಿ ಕೂಡಿಸಿದರು. ಪಂಚಾಯಿತಿಯಲ್ಲಿ ಅವನು ನನ್ನ ಮದುವೆಯಾಗಲೇಬೇಕೆಂದು ತೀರ್ಮಾನ ಕೊಟ್ಟರು. ಹತ್ತಿರದ ಚರ್ಚ್ ವೊಂದರಲ್ಲಿ ಪಂಚಾಯಿತಿಯ ಸಮ್ಮುಖದಲ್ಲಿಯೇ ನಮಗಿಬ್ಬರಿಗೂ ಮದುವೆಯಾಯಿತು.

ಅದಾಗಲೇ ನನಗೆ ಐದು ತಿಂಗಳು ತುಂಬಿತ್ತು. ಮದುವೆಯಾದಾಗ ನನಗೆ 26. ಅವನಿಗೆ 18. ಅಂದರೆ ವಯಸ್ಸಲ್ಲಿ ನಾನು ಅವನಿಗಿಂತ 8 ವರ್ಷ ದೊಡ್ಡವಳಾಗಿದ್ದೆ. ಅವನಿಗದು ಕಸಿವಿಸಿಯೆನಿಸಿತು. ಮುಜುಗರವೆನಿಸಿತು. ಕೀಳರಿಮೆಯಾಗಿ ಕಾಡತೊಡಗಿತು. ಹಾಗೂ ಅವನದನ್ನು ಯಾವತ್ತೂ ಮರೆಯಲಿಲ್ಲ! ನನಗೂ ಮರೆಯಲು ಬಿಡಲಿಲ್ಲ!

ನಾನೊಮ್ಮೆ ಕೇಳಿದ್ದೆ ಅವನನ್ನು ನೇರವಾಗಿ “ನಿನಗೆ ನನ್ನ ಬಸಿರು ಮಾಡುವಾಗ ಕಾಣದ ವಯಸ್ಸು ಈಗ ಸಂಸಾರ ನಡೆಸುವಾಗ ಯಾಕೆ ಕಾಣುತ್ತಿದೆ?” ಎಂದು. ಪ್ರಶ್ನೆ ಮುಖಕ್ಕೆ ಹೊಡೆದ ಹಾಗಿತ್ತು. ಆದರೆ ಅವನಿಗೆ ನಾನು ಕೇಳಿದ ರೀತಿ ಇಷ್ಟವಾಗಲಿಲ್ಲ. ನಾನೇನು ಮಾಡಲಿ? ನಾನು ಹೇಳುವ ಕೇಳುವ ರೀತಿಯೇ ಹಾಗಿತ್ತು. ಕಡ್ಡಿ ಮುರಿದ ಹಾಗೆ! ನನಗೋ ನಯನಾಜೂಕಾಗಿ ಹೇಳಲು ಬರುತ್ತಲೇ ಇರಲಿಲ್ಲ. ನಾನದನ್ನು ಕಲಿಯಲೂ ಇಲ್ಲ.

I am no chopper, nor no changer

First words are best words

ಅವನಿಗೆ  ಅದೇಕೋ ನಾನು ಹಾಗೆ ಮಾತನಾಡುವ ರೀತಿ ಇಷ್ಟವಾಗತ್ತಿರಲಿಲ್ಲ. ಅವನೋ ಏನಾದರು ಹೇಳಬೇಕೆಂದರೆ ಸುತ್ತಿ ಬಳಸಿ ಹೇಳುತ್ತಿದ್ದ. ಅದೇ ಮೆಟಫರ್-ಗಿಟಫರ್ ಅಂತಾರಲ್ಲ ಅದರಲ್ಲಿ ಹೇಳುತ್ತಿದ್ದ. ನನಗೋ ತಲೆಬುಡ ಒಂದೂ ಅರ್ಥವಾಗುತ್ತಿರಲಿಲ್ಲ. ಬಹುಶಃ, ಇದೇ ವಿಷಯ ನಮ್ಮಿಬ್ಬರ ನಡುವೆ ಬಿರುಕು ಮೂಡಲು ಕಾರಣವಾಯಿತೇನೋ. ಈ ಅಂತರ ಮುಂದೆ ಹಿಗ್ಗುತ್ತಲೇ ಹೋಯಿತು. ಹೀಗಾಗಿ ಅವನು ಮಾನಸಿಕವಾಗಿ ನನಗೆ ಯಾವತ್ತೂ ಅಷ್ಟಾಗಿ ಹತ್ತಿರವಾಗಲೇ ಇಲ್ಲ!

ನಾನು ಉಳ್ಳವರ ಮನೆಯಿಂದ ಬಂದವಳು. ಇವನ ಮನೆನೂ ಹಾಗೆ ಅನ್ಕೊಂಡು ಬಂದೆ. ಆದರೆ ಅದಾಗಲೇ ಇವನಪ್ಪನಿಗೆ ವ್ಯಾಪಾರದಲ್ಲಿ ನಷ್ಟವುಂಟಾಗಿ ದಿವಾಳಿ ಎದ್ದಿದ್ದ. ಜೀವನಕ್ಕೆ ಇರಲಿ ಅಂತಾ ದನದ ವ್ಯಾಪಾರವನ್ನು ಮಾತ್ರ ಇನ್ನೂ ಕೈಯಲ್ಲಿ ಹಾಗೆ ಇಟ್ಕೊಂಡಿದ್ದ.

ಹೀಗಾಗಿ ಮನೆ ಮುಂದೆ ಯಾವಗಲೂ ದನಗಳ ಹಿಂಡು ಹಿಂಡು ಸಾಲು. ಅವು ಅಲ್ಲೇ ಸಗಣಿ ಹಾಕುತ್ತಿದ್ದವು. ಆ ಸಗಣಿಯೇ ಮನೆ ಮುಂದೆ ಒಂದು ಗುಡ್ದೆಯಾಗಿ ಸದಾ ಗೊಮ್ಮೆನ್ನುವ ದುರ್ನಾತ ಹರಡುತ್ತಿತ್ತು. ನನಗೋ ಇಸ್ಸಿಸ್ಸಿ….ಎಂದು ಅಸಹ್ಯವಾಗುತ್ತಿತ್ತು.

ಏನು ಮಾಡೋದು? ಕಟ್ಕೊಂಡ ಮೇಲೆ ಅನುಭವಿಸಲೇ ಬೇಕಲ್ಲ? ನಾನು ಬಂದ ಹೊಸತರಲ್ಲಿ ಅಂತಾ ಕಾಣುತ್ತೆ- ಹೀಗೆ ಗುಡ್ದೆ ಹಾಕಿ ಗಬ್ಬುನಾತ ಹೊರಡಿಸಿದ್ದಕ್ಕೆ ಮುನಿಸಿಪಾಲ್ಟಿಯವರು ನನ್ನ ಮಾವನಿಗೆ ಒಂದು ಶಿಲ್ಲಾಂಗಿನಷ್ಟು ದಂಡ ಹಾಕಿದ್ದರು. ಅವತ್ತು ಎಲ್ಲರೂ ಬೇಜಾರಿನಲ್ಲಿದ್ದರು. ನಾನು ಮಾತ್ರ ಒಳಗೊಳಗೆ ಖುಶಿಪಟ್ಟಿದ್ದೆ!

ನನ್ನ ಅತ್ತೆ ಮೇರಿ ಷೇಕ್ಸ್ ಪಿಯರ್ ಸಂತಳ ತರ ಇದ್ದಳು. ಆದರೆ ಅವಳು ಯಾವಾಗ್ಲೂ ನನಗೆ ಹಂಗಿಸೋಳು; “ನೀನು ನನ್ನ ಮಗನಿಗೆ ಮರಳು ಮಾಡಿ ಮೋಸ ಮಾಡ್ದಿ” ಅಂತಾ. ಇನ್ನು ನನ್ನ ಮಾವ ಜಾನ್ ಷೇಕ್ಸ್ ಪಿಯರ್ ನೋಡೊಕೆ ಚೆನ್ನಾಗಿದ್ದ. ಕೆಂಪು ಕೆನ್ನೆಯವ. ಆದರೆ ಮಹಾನ್ ಕುಡುಕ! ಅವನು ಕುಡಿಯುವದಕ್ಕೇ ಹುಟ್ಟಿದ್ದನೇನೋ ಎಂಬಂತೆ ಕುಡಿಯುತ್ತಿದ್ದ. ಜೊತೆಗೆ ಹೆಣ್ಣು ಬಾಕ. ಹೊರಗೆ ಹೆಂಗಸರ ಸಹವಾಸ ಮಾಡಿ ಬರುತ್ತಿದ್ದ. ಮನೆಯಲ್ಲಿ ನನ್ನ ಮೇಲೂ ನಾಲ್ಕೈದು ಬಾರಿ ಕೈ ಹಾಕಿದ್ದುಂಟು! ಆದರೆ ಅವನಾಟ ನನ್ನ ಮುಂದೆ ನಡೆಯಲಿಲ್ಲ ಎನ್ನಿ. ಇವನ ಈ ಚಾಳಿಯೇ ನನ್ನ ಗಂಡನಿಗೆ ಬಳುವಳಿಯಾಗಿ ಬಂದಿದ್ದಿದೆ.

ಆವತ್ತು ಮಿಸ್ಟರ್ ಷೇಕ್ಸ್ ಪಿಯರ್ ಲಂಡನ್ನಿಗೆ ಹೊರಟ ದಿನ. ಅವ ಕೆಲಸ ಹುಡುಕಿ ಹೊರಟಿದ್ದ. ಇದ್ದಬಿದ್ದ ದನದ ವ್ಯಾಪಾರದಲ್ಲಿ ಇವನಪ್ಪ ಕೈ ಸುಟ್ಟುಕೊಂಡು ಬರಿಗೈ ದಾಸನಾಗಿದ್ದ. ಎರಡು ಹೊತ್ತಿನ ಊಟಕ್ಕೂ ಕಷ್ಟವಾಗಿತ್ತು. ಸಹಜವಾಗಿ ಮನೆಯ ಜವಾಬ್ದಾರಿ ನನ್ನ ಗಂಡನ ಮೇಲೂ ಬಿತ್ತು.  ಸರಿ, ಲಂಡನ್ನಿಗೆ ಹೊರಟು ನಿಂತ. ಹೊರಡುವಾಗ ನಾನವನಿಗೆ ಒಂದು ಪತ್ರವನ್ನು ಬರೆದುಕೊಟ್ಟೆ. ಬಹುಶಃ, ನನ್ನ ಇಡೀ ಜೀವಮಾನದಲ್ಲಿ ನಾನವನಿಗೆ ಬರೆದ ಒಂದೇ ಒಂದು ಪತ್ರ ಅದು.

ಡಿಯರ್ ಹಸ್ಬೆಂಡ್,

ಈ ಪತ್ರ ಬರೆಯುತ್ತಿರುವದು ನಾನು ನಿನ್ನನ್ನು ಪ್ರೀತಿಸುತ್ತೇನೆ ಮತ್ತು ನಿನಗೆ ಸದಾ ಬೆಂಬಲವಾಗಿ ನಿಲ್ಲುತ್ತೇನೆ ಎಂದು ಹೇಳಲು. ಬಹುಶಃ, ನೀನು ಲಂಡನ್ ತಲಪುವಷ್ಟರಲ್ಲಿ ಇವನ್ನೆಲ್ಲಾ ಮರೆತೂ ಬಿಡಬಹುದು.

ಇತಿ ನಿನ್ನ ನಮ್ರ ಮತ್ತು ನಿರ್ಲಜ್ಜ ಪ್ರಾಮಾಣಿಕಳು

ಯ್ಯಾನಿ..

ಕೊನೆಗೂ ಅವನು ನಮ್ಮೆಲ್ಲರನ್ನು ಬಿಟ್ಟು ಹೊರಟು ನಿಂತ. ಹೊರಡುವಾಗ ಕಣ್ಣ ತುಂಬ ಭರವಸೆ, ಕನಸು. ಹೋಗುವಾಗ ಹಲ್ಲು ಕಚ್ಚಿ ಹೇಳಿದ: “ಬರೆಯುತ್ತೇನೆ.” ನಾನು ಪತ್ರ ಬರೆಯುತ್ತಾನೇನೋ ಅಂದುಕೊಂಡೆ! ಆದರೆ ಅವ ಬರೆದಿದ್ದು ಮೂವತ್ತೆಂಟು ನಾಟಕಗಳನ್ನು, ನೂರಾ ಐವತ್ನಾಲ್ಕು ಸುನಿತಗಳನ್ನು ಹಾಗೂ ಎರಡು ಉದ್ದದ ಅಶ್ಲೀಲ ಪದ್ಯಗಳನ್ನು.

ಅವನು ಹೋಗಿ ಮೂರ್ನಾಲ್ಕು ತಿಂಗಳಾದ ಮೇಲೆ ಲಂಡನ್ನಿನಲ್ಲಿ ಇವನೇನು ಕಡಿಯುತ್ತಾನೆ ನೋಡಿಕೊಂಡು ಬನ್ನಿ ಅಂತಾ ತಮ್ಮಂದಿರನ್ನು ಅಟ್ಟಿದೆ. ಅವರು ಹೋಗಿ ಬಂದು “ಕೆಲಸವಂತೂ ಇದೆ” ಅಂದರು. ಸದಾ ರಂಗಶಾಲೆಯ ಬಾಗಿಲಲ್ಲಿ ನಿಂತಿರುತ್ತಾನೆ; ಕುದರೆಗಳನ್ನು ಕಾಯುತ್ತಾನೆ ಅಂದರು. ಅದರಲ್ಲೇನು ದುಡ್ಡು ಸಿಗುತ್ತೆ ಅಂದುಕೊಂಡೆ. ಇಲ್ಲ, ದಿನೆ ದಿನೆ ಷೇಕ್ಸ್ ಪಿಯರ್ ನ ವ್ಯಾಪಾರ ಕುದುರುತ್ತಾ ಹೋಯಿತು. ಮುಂದೆ ಸ್ವಲ್ಪೇ ದಿನದಲ್ಲಿ ಅವನ ಕೈ ಕೆಳಗೆ ಹತ್ತಾರು ಜನ ಹುಡುಗರು ಕೆಲಸ ಮಾಡಲು ಶುರು ಮಾಡಿದರು!

ಮತ್ತೆ ಊರಿಗೆ ಬರುವ ಹೊತ್ತಿಗೆ ಮಿಸ್ಟರ್ ಷೇಕ್ಸ್ ಪಿಯರ್ ಗೆ ರಂಗಶಾಲೆಯ ಒಳಕ್ಕೆ ಬಡ್ತಿ ಸಿಕ್ಕಿತ್ತು. “ನಾನೀಗ prompter’s assistant” ಅಂದ. ಅಥವಾ assistant prompter ಅಂದನೋ? ಸಧ್ಯ, ಕುದುರೆ ಕಾಯುವ ಕೆಲಸಕ್ಕಿಂತ ಇದು ವಾಸಿ. “ಏನು ಕೆಲಸ ಅದು?” ಎಂದು ಕೇಳಿದೆ. “ಅದೇ…. ಸ್ಟೇಜಿನ ಹಿಂದೆ ನಿಂತು ನಟರಿಗೆ ಅವರ ಮಾತುಗಳನ್ನು ಹೇಳಿಕೊಡುವದು” ಅಂದ!…

। ಇನ್ನುಳಿದದ್ದು ನಾಳೆಗೆ ।

 

‍ಲೇಖಕರು Avadhi Admin

April 24, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

    • ರಾಧಾ hm

      ಶೇಕ್ಷಪೀಯರ್ ಹೆಂಡತಿಯ ಅಭಿಪ್ರಾಯ /ಅಭಿವ್ಯಕ್ತಿ ಇಲ್ಲಿವರೆಗೂ ನಾನು ಓದುವ ಪ್ರಯತ್ನ ಮಾಡಿರಲಿಲ್ಲ , english ಸಾಹಿತ್ಯದ ದೊಡ್ಡ ಪ್ರತಿಭೆಯ ಇನ್ನೊಂದು ವಯಕ್ತಿಕ ಬದುಕಿನ ಮುಖ ತೆರೆದಿಡುವ ಪ್ರಯತ್ನ ನಿಮ್ಮ ಬರಹ ….. ಧನ್ಯವಾದಗಳು sir

      ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: