ಬಾರಯ್ಯ ಮಳೆಗಾರ..

ಬಾರಯ್ಯ ಮಳೆಗಾರ ಹಾದು ಬಂದೆಯ ತವರೂರ

 ರೇಣುಕಾ ರಮಾನಂದ

ಸಣ್ಣಗೆ ಜಿನುಗು ಮಳೆ ಮೊನ್ನೆಯಷ್ಟೇ ಶುರುವಾದದ್ದು “ನಿಸರ್ಗ” ಚಂಡಮಾರುತದ ಸುಳಿವಿಗೋ ಏನೋ ಇಂದು ಚಂಡಿ ಹಿಡಿದಿದೆ… ಉರಿನೆಲದ ಕಿಡಿಬಿಂದುಗಳೆಲ್ಲ ತೆಪ್ಪಗೆ ನೀರುನುಂಗುತ್ತ ವಟರ್ ವಟರ್ ಮರಿಗಪ್ಪೆಗಳನ್ನು ನೆಲದಾಳದಿಂದ ಉಗುಳಿ ಏನೂ ಗೊತ್ತಿಲ್ಲದಂತೆ ತಣ್ಣಗೆ ಮಳೆ ಹಾಡಿಗೆ ಜೂಗರಿಸುತ್ತಿವೆ… ಮಳೆ ಒಮ್ಮೆ ಜೋರು ಇನ್ನೊಮ್ಮೆ ಹಗುರ… ಈ ನಡುವೆ ತಟ್ ತಟ್ ತಟ್ ದಪ್ಪ ಹನಿಯ ಸದ್ದು ಕಿಟಕಿಯಾಚೆಗಿನ ತೆಂಗಿನಮರದಿಂದ ನೆಲಕ್ಕುದುರಿ ಆಪ್ತ ಜೋಗುಳ ಕಿವಿ ತುಂಬುತ್ತಿದೆ… ಕಣ್ಣು ತೂಗಿಸುತ್ತಿದೆ… ಜೀರ್ ಜೀರ್ ಜೀರುಂಡೆಗಳು ಮರಜಿರಲೆಗಳು ಮನೆ ಸುತ್ತಲಿನ ಮರಗಳ ಹೊಟ್ಟೆಗಳಲ್ಲಿ ಕಪ್ಪಿಕೊಂಡು ಅಂತ್ಯವೇ ಇರದ ಸಂಗೀತಮೇಳ… ಒಳಬಂದ ಮಿಂಚುಹುಳವೊಂದರ ಬೆಳಕ ಜೋಲಿಯಾಟ… ಅಲ್ಲೆಲ್ಲೋ ದೂರದಲ್ಲಿ ಗುಡುಗು, ಮಿಂಚಿನ ಸೆಳಕು… ಬಾವಿಯ ಗಡಗಡೆಗೆ ತುದಿ ಸಿಲುಕಿಸಿಟ್ಟು ಬಂದ ಹಗ್ಗವೂ ನೀರು ನುಂಗುತ್ತಿದೆ… ಅಂಗಳದ ನಂದಿಬಟ್ಟಲ ಗಿಡದ ಕೆಳಗೆ ಸಾವಿರಾರು ಬಿಳಿ ಪುಷ್ಪಗಳು… ನವಿಲ ಕೂಗು… ಅದೆಷ್ಟು ನವಿಲ ರಾಶಿ ಇತ್ತೀಚೆಗೆ… ಹೋಗಿ ಬರುವಾಗಲೆಲ್ಲ ಕೈ ಕಾಲಿಗೆ ಸಿಗುತ್ತವೆ… ನಿಂತು ನೋಡಿಕೊಳ್ಳಲಿ ಬಿಡು ಎನ್ನುತ್ತ ಊಟ ಹೆಕ್ಕುತ್ತವೆ… ಈ ಗಾಳಿಯ ಸುಳಿಗೆ ಸಿಕ್ಕಿ ಎಷ್ಟು ಬಾಳೆಗಳು ನೆಲಕಚ್ಚಿದವೋ… ಅಧೋಮುಖಿಯಾದ ಪ್ರತಿಯೊಂದು ಗಿಡದ ಗೆಲ್ಲುಗಳಲ್ಲೂ ಹೊಸ ಕಥೆ…

ಮಳೆಕಥೆ…
ಮಲಗುವ ಮೊದಲು ನೆಲ ಒರೆಸಿ ಬರಿನೆಲಕ್ಕೆ ಬಿದ್ದುಕೊಳ್ಳುತ್ತಿದ್ದ ಬೆವರ ಧಾರೆಯ ನಿನ್ನೆ ಮೊನ್ನೆಯ ಸೆಖೆ ಅದೆಲ್ಲಿ ಮಾಯವಾಯಿತು ಹೇಳ ಹೆಸರಿಲ್ಲದೆ..? ನರಿಗಳು ಊಳಿಡುವ ಸದ್ದು…ಮನೆಯ ಜಗುಲಿಯ ಮೇಲೆ ಮಲಗಿದ ಮೂರು ದೈತ್ಯ ನಾಯಿಗಳು ಬೊಗಳಿ ಪ್ರತ್ಯುತ್ತರಿಸುವ ಸದ್ದೂ ಮತ್ತೆಮತ್ತೆ… ಬೆಟ್ಟದ ಇಳಿಜಾರಿನಲ್ಲಿರುವ ಒಂಟಿಮನೆ… ಆಹಾರ ಹುಡುಕಿ ಬರುವ ಕಾಡುಪ್ರಾಣಿಗಳು… ಎಲ್ಲ ಜೀವಿಗಳಿಗೂ ತಾವು ಒದಗಿಸಿದ ಈ ಭೂಮಿ, ಪ್ರಕೃತಿ ಮಾತೆಯ ಋಣ ತೀರಿಸದೆ ಹೊರಟು ಬಿಡುತ್ತೇವಲ್ಲ ನಾವೆಲ್ಲ…

ಬಾರಯ್ಯ ಮಳೆಗಾರ
ಪುಟ್ಟ ಗುಲಾಬಿ ಬಣ್ಣದ ಚಪ್ಪಲಿ ಮಳೆಯ ನೀರ ರಭಸಕ್ಕೆ ಬಳಿದು ಹೋಗಿ ಅಳುತ್ತಳುತ್ತ ಚಪ್ಪಲಿ ಹೋದ ದಿಕ್ಕಿಗೇ ಓಡುತ್ತಿವಳನ್ನು ಹೋದರೆ ಹೋಯ್ತು ಚಪ್ಪಲಿ… ಹೊಳೆಪಾಲಾಗ್ತಿದ್ದೆಯಲ್ಲೇ ಎಂದು ತನ್ನೆರಡೂ ತೋಳಲ್ಲಿ ಎತ್ತಿಕೊಂಡು ಬಂದ, ನೆನಪಾಗಿಯೇ ಉಳಿದ ಏಳನೇ ವರ್ಗದ ಸಾವಿತ್ರಕ್ಕ… ಬಹುಶಃ ನಾನಾಗ ಎರಡನೇ ವರ್ಗ… ಶಾಲೆಗೆ ಹೋಗುವಾಗಲೂ ಬರುವಾಗಲೂ ಗದ್ದೆ, ಕಾಲುಸಂಕ, ಪುಟ್ಟಹೊಳೆ ದಾಟಿಯೇ ಹೋಗಿ ಬರಬೇಕಾದ ದಿನಮಾನ… ಎಲ್ಲರೂ ಒಟ್ಟು..ಒಗ್ಗಟ್ಟು… ಮಾತುಕಥೆಯ ಹಾಡು ಕುಣಿತದ ನಡುವೆಯೂ ಪುಟ್ಟ ಮಕ್ಕಳ ಮೇಲೆ ದೊಡ್ಡ ಮಕ್ಕಳು ಗಮನವಿಟ್ಟೇ ಇರುವ ಹಲವು ಬಗೆಯ ಕಾಳಜಿ… ಹಲಸಿನಬೀಜ ಸುಟ್ಟು ಒಂದೊಂದೇ ಜಪ್ಪಿ ಸಿಪ್ಪೆ ತೆಗೆದು ಬೂದಿ ಒರೆಸಿ ಮುಂದಿಡುತ್ತಿದ್ದ ಅವ್ವ… ಜೋನಿಬೆಲ್ಲ ತೆಂಗಿನಕಾಯಿ ಹೋಳು ಹುರಿದ ಶೇಂಗಾ ಉದ್ದಿನ ಹಪ್ಪಳ ಅವಲಕ್ಕಿ ಚುರುಮುರಿ ಇಷ್ಟು ಬಿಟ್ಟರೆ ಬೇರೆ ತಿಂಡಿ ಇರುತ್ತದಾ ಗೊತ್ತಿಲ್ಲ… ಪಾರ್ಲೆ ಜಿ… ಗಟ್ಟಿ ಟೋಸ್ಟು ಆಗಾಗ…

ರಸ್ತೆಯ ಇಕ್ಕೆಲಗಳಲ್ಲೂ ಅದೆಷ್ಟೊಂದು ಕಾಡಕೆಸುವಿನ ಗಿಡಗಳು… ಹೊಟ್ಟೆಯೊಳಗೆ ಸ್ಪಟಿಕ ನೀರ ಬಿಂದುಗಳನ್ನು ತುಳುಕಿಸುತ್ತ, ತೂಗಿಸುತ್ತ… ಸಣ್ಣ ಮಳೆಗೆ ಇವೇ ಛತ್ರಿಗಳು… ಗದ್ದೆ ಹಾಳಿಯ ಮೇಲೆ ಪಿಚಕ್ ಪಿಚಕ್ ಕೆಸರು… ದಂಟು ಮುರಿದ ಕೊಡೆಯೊಂದಿಗೆ ಒಂದು ಕೈಯಲ್ಲಿ ಕಲಸಿದ ಅವಲಕ್ಕಿ ಪೊಟ್ಲೆಯ ಚೀಲ ಇನ್ನೊಂದು ಕೈಯಲ್ಲಿ ತೂಗಾಡುವ ಚಹಾದ ಬಾಸ್ಕೆಟ್ಟು…
‘ಅತ್ತೆ ಮನೆಗೆ ಬಂತೂ ಚಣ್ಣ ಕೇದಿಗೆ ಕೂಸು
ಹನ್ನೆರಡೆ ವರುಚ ಹೊಚಬಾಲೆಗೇ…’
-ಜಡಿಮಳೆಗೆ ಬೆಚ್ಚಗಾಗಲು ಹೋ… ಸೋ…ಹಾಡು ಹಾಲಕ್ಕಿ ಗೌಡ್ತಿಯರಿಂದ ಎಲ್ಲ ಗದ್ದೆಗಳಲ್ಲೂ ಒಟ್ಟೊಟ್ಟಿಗೆ… ಅವರಿಗೆ ಚಹಾ ಕೊಟ್ಟು ಬರಲು ನಾನು ಗದ್ದೆ ಕಡೆಗೆ…

ಮಡ್ಲಗೊಡೆಯ ಕೆಳಗೊಬ್ಬಳು ಕೆಸರುಗಾಲಿನ ಅವ್ವ …ಒಂದೊಂದು ಗದ್ದೆಯಲ್ಲೂ ಹತ್ತು ಹನ್ನೆರಡು ಹೆಣ್ಣಾಳು… ಸಸಿ ನೆಡುವ, ಸಸಿ ಕೀಳುವ ಕ್ರಿಯೆ… ಕಿತ್ತಲ್ಲಿ ಕೆಂಚ, ಸೋಮನ ಕಟ್ಟಿ ಹೂಡುವ ಏರೇರೇರಾ ಹಾಡುವ ಹೈ ಹೈ ಬಾರುಕೋಲಿನ ಕವಳದ ಸಂಚಿಯ ಊರ ವಾರಲುಗಾರನೊಬ್ಬ… ಅವನ ಬೆನ್ನಿಗೇ ಅಂಕು ಡೊಂಡು ಹೆಜ್ಜೆ ಹಾಕಿ ಹುಳ ಹೆಕ್ಕುವ ಬೆಳ್ಳಕ್ಕಿಗಳು… ಗಂಜಿಮಡಿಕೆಯ ಹೊಗೆ ತೆಳ್ಳಗೆ ಊರೊಳಗಿಂದ…

ಹದಿನೈದೇ ದಿನದ ಹಿಂದೆ ಅವ್ವ ಖಂಡುಗ ಭತ್ತ ಗೋಣಿಯೊಳಗೆ ತುಂಬಿ ಚಿರ್‌ಚಿರಿ ಬಾಯಿಕಟ್ಟಿ ಹಗ್ಗ ಜೋಲಿಸಿ ಬಾವಿಗೆ ಇಳಿಸಿದ್ದಳು ಹಿಗ್ಗಲು… ಮರುದಿನ ಮೇಲ್ ತೆಗೆದು ಒಣ ಜಾಗದಲ್ಲಿ ಕಲ್ಲು ಹೇರಿ ಇಟ್ಟರೆ ಅದರ ಮರುದಿನ ಸರಸರ ಮೊಳಕೆ.. ಚೀಲ ಬಿಡಿಸಿದರೆ ಎಲ್ಲ ಮೊಳಕೆಗಳ ಬಿಡಿಸಲಾಗದ ಬೆಸೆದ ಬಂಧ… ಮುರಿಯದ ಹಾಗೆ ನಾಜೂಕಾಗಿ ಬಿಡಿಸಿ ಬಿದಿರ ಬುಟ್ಟಿಯ ತುಂಬಿ ಹೂಟಿಯಾದ ಗದ್ದೆಗೆ ಬಿತ್ತಿ ನನ್ನ ಛೂ ಬಿಡುತ್ತಿದ್ದರು..

ಹಕ್ಕಿಗಳು
ಸಾವಿರಾರು ಹಕ್ಕಿಗಳು
ಇಡೀ ಚೌಕಾಕಾರದ ಎಕರೆ ಗದ್ದೆಯ ತುಂಬ ನನ್ನ ಓಡಿಯಾಡಿಸುವ ಹಕ್ಕಿಗಳು… ಕೈಯಲ್ಲೆರಡು ಖಾಲಿ ಗೆರಟೆ ಹಿಡಿದು ಜೋರು ಕುಟ್ಟುತ್ತ ಹಕ್ಕಿಯೋಡಿಸದಿದ್ದರೆ ಎಲ್ಲ ಬಿತ್ತಿದ ಬೀಜ ಹಕ್ಕಿಪಾಲು..
ಎಷ್ಟು ಅಳಿಸುತ್ತಿದ್ದವು ನನ್ನ ಈ ಹಾಳು ಹಕ್ಕಿಗಳು …ಹಸಿರ ಬಣ್ಣದ ಗಿಳಿಗಳು… ಸಣ್ಣದೊಂದು ಕೈ ವಸ್ತ್ರದಲ್ಲಿ ಅವ್ವ ಕಟ್ಟಿಕೊಟ್ಟ ತೆಂಗಿನ ಕಾಯಿ ಹೋಳುಗಳನ್ನೂ… ಒಣ ಅವಲಕ್ಕಿಯನ್ನೂ ಕುಳಿತು ತಿನ್ನಲು ಪುರಸೊತ್ತು ಕೊಡದ ಹಾಗೆ… ಆಚೆಗದ್ದೆಯಲ್ಲೂ ಈಚೆಗದ್ದೆಯಲ್ಲೂ ನನ್ನಂತಹುದೇ ಹುಡುಗ ಹುಡುಗಿಯರು ಹಕ್ಕಿ ಆಡಿಸುವವರು… ಕೂಯ್ ಸದ್ದು… ಧಿಮಿಧಿಮಿ ಕುಣಿದು ಕೇಕೇ ಆಗಾಗ… ಮಳೆ ಜೋರಾದರೆ ತಾಳೆ ಮಡಲಿನ ಮಂಡಗೊಡೆಯೊಳಗೆ ಹತ್ತೂ ಗದ್ದೆಯ ಮಕ್ಕಳು ಸೇರಿ… ಜಿನ್ನುಮನೆ ಮೂರನೇತಿ ವಿಕಾಸ ತರ್ತಿದ್ದ ಬಕ್ಕೆ ಹಲಸಿನಹಣ್ಣು ಬಿಸ್ಮಿಲ್ಲಾ…

 

ಮಗ್ಗುಲು ಬದಲಿಸುತ್ತೇನೆ..

ನಿದ್ದೆ ಒಂದಾದರೂ ಸೂಸಲು ಬಿತ್ತಾ..?

ಅಥವಾ ನೆನಪುಗಳೊಂದಿಗೆ ಜೊಂಪಿನ ಜೋಕಾಲಿಯಾ..?

ದುಂಡು ಮಲ್ಲಿಗೆ ಹೂವು ತೀರುತ್ತ ಬಂತು… ಮಳೆ ಶುರುವಾದ ಮೂರು ದಿನ ಅದರ ಆಯುಷ್ಯ ನಂತರ ಮುಂದಿನವರ್ಷ… ಇದ್ದ ಮೂರು ದಿನ ಸರಭರ ಸಂಪತ್ತಿನ ಸೂರೆಯಷ್ಟು ಹೂ..

ಯಾರದೋ ಮಾವಿನಮರಕ್ಕೆ ಸುತ್ತಿಕೊಂಡ ಬಳ್ಳಿಗಳನ್ನೆಲ್ಲ ತಡಕಿ ಸೂಜಿಮಲ್ಲಿಗೆ ತಂದು ಕಟ್ಟಿ ಎರಡೂ ಜಡೆಗೆ ಸೂಡಿ…

ಚಲುವಯ್ಯ ಚಲುವೋ ತಾನಿತಂದಾನೋ…

ಆಚೆ ಗಟಾರದಲ್ಲಿ ಬಿಟ್ಟ ಕಾಗದದ ದೋಣಿ ಈಚೆ ಪಾಸಾಗಿ ಹರಿದ್ಹರಿದು ಹೋಗಿ ಕಾಣೆಯೇ ಆಗಿ… ಕನಸಿಗೆ ಬಂದು… ಬರುವಾಗ

ಜೊತೆಗೊಬ್ಬ ಹುರಿದ ಶೇಂಗಾ, ಪೆಪ್ಪರುಮೆಂಟು, ಕಮ್ಮರ್‌ಕಟ್ಟು, ಪಾಪುಡಿ ಇವೆಲ್ಲವನ್ನೂ ನನಗಾಗಿ ತಂದ ಹುಡುಗನೊಬ್ಬನನ್ನು ಕುಳ್ಳಿಸಿಕೊಂಡು ಬಂತು..

ಕರಡ ಹೊದಿಸಿದ ಕೊಟ್ಟಿಗೆ ಒಳಗೆ ಮಳೆಗಾಲಕ್ಕೆ ಪೂರ್ತಿ ಕಟ್ಟಿಗೆ, ಉರುವಲಿನ ಇತರ ಸಾಮಗ್ರಿಗಳು… ಮೂಲೆಗೆ ನಾಣಿಗೆ ಒಲೆ, ನಿಂತು ಮೀಯಲು ಒಂದು ಕಲ್ಲು… ಮೊಗೆದು ನೀರು ಹುಯ್ದುಕೊಳ್ಳಲು ಒಂದು “ತೆಂಗು”

ಬೇಸಿಗೆ ಪೂರ್ತಿ ಬಗ್ಗಿ ಸೇದುವ ಬಾವಿಯಿಂದ ನೀರೆಳೆದು ಇಪ್ಪತ್ತು ತೆಂಗಿನಮರ, ಹದಿನೈದು ಅಡಿಕೆ, ಇನ್ನೊಂದಿಷ್ಟು ಬಾಳೆ ಉಳಿಸಿಕೊಂಡ ಅವ್ವನಿಗೀಗ ಚೂರೇ ಪುರಸತ್ತು… ಹೊತ್ತು ಕಂತಿದ್ದೇ ಒಂದನ್ನ ಸಾರು ಉಂಡು ಏಳೂವರೆಗೇ ಮಲಗಿ ಹಳೆಕಥೆಯನ್ನೊಂದಿಷ್ಟು ಬಿಚ್ಚಿ ಅಪ್ಪ ಅವ್ವನ ಮಾತು… ನಾನು ಮಲಗಿದ ಹಸೆಯ ಎಡಕ್ಕೆ ಬಲಕ್ಕೆ ಕಾಲುಕೊಟ್ಟು ಮಲಗಲು ಬೆಚ್ಚಗೆ ಅಕ್ಕಿಚೀಲಗಳು..

ಅವೂ ಮಾತಾಡುತ್ತಿದ್ದವು… ನಾನು ಹೇಳುವ ಕಥೆ ಕೇಳಿಸಿಕೊಳ್ಳುತ್ತಿದ್ದವು…

ಹೀಗೆಯೇ ಜೀರ್‌ಗುಡುವ ಜೀರುಂಡೆ ಮರಜಿರಲೆ

ಸಣ್ ಕಪ್ಪೆ ದೊಡ್ ಕಪ್ಪೆ ಚಿಟಚಿಟ ವಟವಟ

ಎದ್ದರೆ ಬೆಳಗ್ಗೆ ಕಾಲುಬುಡಕ್ಕಿರುವ ಒಲೆಯ ಹತ್ತಿರವೇ ಹೆಂಚಿಟ್ಟು ದೋಸೆ ಎರೆಯುತ್ತಿದ್ದ ಅವ್ವ

ಕಣ್ಣುಜ್ಜಿ ಹೊರಬಂದರೆ ಅಂಗಳದಲ್ಲಿ

ಒದ್ದೆ ದಾಸವಾಳ

 

ಮಳೆ…

ಅಂದೂ ಇಂದೂ ಪೊರೆಯುತ್ತ

ಹಾಡು ಹೇಳಿ ಮಲಗಿಸುತ್ತ

ಗದ್ದೆ ಭೂಮಿ ನೋಡಿಕೊಳ್ಳುವ

ನಮ್ಮೆಲ್ಲರ ಮಳೆ..

 

ಬಾರಯ್ಯ ಮಳೆಗಾರ

ಹಾದು ಬಂದೆಯ ತವರೂರ

‍ಲೇಖಕರು nalike

June 10, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: