ಬಾಪು ಮತ್ತು ವ್ಯಂಗ್ಯಚಿತ್ರ – ಜೆ ಬಾಲಕೃಷ್ಣ

download ಡಾ ಜೆ ಬಾಲಕೃಷ್ಣ

2004ರಲ್ಲಿ ಆಗ ಅಮೆರಿಕದ ಸೆನೇಟರ್ ಆಗಿದ್ದ ಹಿಲರಿ ಕ್ಲಿಂಟನ್ ಹಣ ಸಂಗ್ರಹಣಾ ಕಾರ್ಯಕ್ರಮವೊಂದರಲ್ಲಿ ಮಹಾತ್ಮ ಗಾಂಧಿಯ ಬಗ್ಗೆ ತಮಾಷೆ ಮಾಡುತ್ತಾ `ಆತ ಇಲ್ಲೇ ಸೇಂಟ್ ಲೂಯಿಯಲ್ಲಿ ಗ್ಯಾಸ್ ಸ್ಟೇಶನ್ ನಡೆಸುತ್ತಿದ್ದ’ ಎಂದು ಹೇಳಿದರು. ಜನರ ನಗು ಕಡಿಮೆಯಾದ ಮೇಲೆ `ಇಲ್ಲ, ಮಹಾತ್ಮ ಗಾಂಧಿ 20ನೇ ಶತಮಾನ ಕಂಡ ಮಹಾನ್ ನಾಯಕ’ ಎಂದು ಹೇಳಿ ತಮ್ಮ ಕುಹಕವನ್ನು ಇಲ್ಲವಾಗಿಸಿದರು. ಆದರೆ ಗಾಂಧಿ ಆಗ ಇದ್ದಿದ್ದರೂ ಯಾರಾದರೂ ಅವರನ್ನು ಲೇವಡಿ, ವಿಡಂಬನೆ ಅಥವಾ ತಮಾಷೆ ಮಾಡಿದಲ್ಲಿ ಅವರು ಸಿಟ್ಟು ಮಾಡಿಕೊಳ್ಳುತ್ತಿರಲಿಲ್ಲವೆಂಬುದು ಚರಿತ್ರೆಯೇ ಹೇಳಿದೆ. ಈ ಸಂದರ್ಭದಲ್ಲಿ ಗಾಂಧಿ ಹೇಳಿರುವ `ನನ್ನ ಅನುಮತಿಯಿಲ್ಲದೆ ಯಾರೂ ನನ್ನನ್ನು ಅವಮಾನಿಸಲು ಸಾಧ್ಯವಿಲ್ಲ’ ಎಂಬ ಮಾತು ಹಾಗೂ 1928ರಲ್ಲಿ ಹೇಳಿದ `ನನ್ನಲ್ಲಿ ವಿನೋದಪ್ರಿಯತೆ ಇಲ್ಲದಿದ್ದಲ್ಲಿ ನಾನೆಂದೋ ಆತ್ಮಹತ್ಯೆ ಮಾಡಿಕೊಂಡಿರುತ್ತಿದ್ದೆ’ೆ ಎಂಬ ಮಾತುಗಳು ಅವರ ವ್ಯಕ್ತಿತ್ವ ಪರಿಚಯಿಸುವಲ್ಲಿ ಬಹಳ ಮುಖ್ಯ ಪಾತ್ರ ವಹಿಸುತ್ತವೆ.

ಮಹಾತ್ಮ ಗಾಂಧಿ ಎಂದಾಕ್ಷಣ ಅವರ ಗಂಭೀರ ಮುಖ, ಅಸಹಕಾರ ಹಾಗೂ ಅಹಿಂಸೆಯನ್ನೇ ಅಸ್ತ್ರವನ್ನಾಗಿಸಿಕೊಂಡ ಬದುಕಿನ ಹೋರಾಟ ನೆನಪಾಗಿ ಗಾಂಧಿಯ ಸ್ವಭಾವವೂ ಹಾಗೆಯೇ ಇತ್ತೆಂದು ಬಹಳ ಜನ ತಿಳಿಯುತ್ತಾರೆ. ಆದರೆ ಗಾಂಧಿಯ ತಮಾಷೆಯ ಮನೋಭಾವ, ಎಲ್ಲರನ್ನೂ ನಕ್ಕು ನಗಿಸುವ ವಾಕ್ಚಾತುರ್ಯ ಇವೇ ಅವರ ಸ್ವಾತಂತ್ರ ಹೋರಾಟದ ಕಷ್ಟಗಳನ್ನು ಎದುರಿಸಲು ಸಹಾಯ ಮಾಡಿದವು ಎನ್ನುತ್ತಾರೆ ಅವರನ್ನು ಹತ್ತಿರದಿಂದ ಕಂಡವರು. ತಮ್ಮ ಯೌವನದಲ್ಲಿ ದಕ್ಷಿಣ ಆಫ್ರಿಕಾಕ್ಕೆ ವಕೀಲರಾಗಿ ಹೋಗಿ ಅಲ್ಲಿ ನಾಗರಿಕ ಹಕ್ಕುಗಳಿಗಾಗಿ ಹೋರಾಡುವಾಗಲೇ ಅವರ ತಮಾಷೆಯ ಮನೋಭಾವವನ್ನು ಕಂಡವರಿದ್ದಾರೆ. ದಕ್ಷಿಣ ಆಫ್ರಿಕಾದಲ್ಲಿ ಕ್ರಿಶ್ಚಿಯನ್ ರೀತಿಯಲ್ಲಿ ಮದುವೆಯಾಗದವರು ಗಂಡ ಹೆಂಡಿರೇ ಅಲ್ಲ ಎಂಬ ಕಾನೂನು ಹೊರಡಿಸಿದಾಗ, ಗಾಂಧಿ ತಮ್ಮ ಪತ್ನಿ ಕಸ್ತೂರಬಾರವರಿಗೆ, `ಇಷ್ಟು ದಿವಸ ನೀನು ನನ್ನ ಹೆಂಡತಿಯಾಗಿದ್ದೆ, ಇಂದಿನಿಂದ ನೀನು ಇಟ್ಟುಕೊಂಡವಳಾಗಿದ್ದೀಯೆ’ ಎಂಬ ಕುಹಕವಾಡಿದ್ದರು.

ಒಮ್ಮೆ ಪತ್ರಕರ್ತರು `ನೀವ್ಯಾಕೆ ಯಾವಾಗಲೂ ಟ್ರೈನಿನಲ್ಲಿ ಮೂರನೇ ದರ್ಜೆಯಲ್ಲೇ ಪ್ರಯಾಣಿಸುತ್ತೀರಾ?’ ಎಂದು ಕೇಳಿದ್ದಕ್ಕೆ `ಏನು ಮಾಡಲಿ? ನಾಲ್ಕನೇ ದಜರ್ೆ ಇಲ್ಲವಲ್ಲಾ?’ ಎಂದು ಕೇಳಿದ್ದರು. ಒಮ್ಮೆ ಅವರು ತಮ್ಮನ್ನು, `ನಾನು ಅಹಿಂಸಾ ಸೈನ್ಯದ ಕಮಾಂಡರ್’ ಎಂದು ಹೇಳಿಕೊಂಡಿದ್ದರು.
ಗಾಂಧಿಯನ್ನು ಹತ್ತಿರದಿಂದ ಕಂಡವರು ಹಾಗೂ ಗಾಂಧಿಯ ಒಡನಾಟದಲ್ಲಿದ್ದವರೆಲ್ಲರೂ ಅವರ ತಮಾಷೆಯ ಮನೋಭಾವವನ್ನು ಕಂಡಿದ್ದಾರೆ. ಎಂಥ ಗಂಭೀರ ಚರ್ಚೆಯ ಸಭೆಯಲ್ಲಿ ಪಾಲ್ಗೊಂಡಿದ್ದರೂ ಹೊರಬರುವಾಗ ಸದಾ ಹಸನ್ಮುಖತೆ ಹೊಂದಿರುತ್ತಿದ್ದರು ಹಾಗೂ ಹೊರಗೆ ಕಾದಿರುತ್ತಿದ್ದ ಪತ್ರಕರ್ತರೊಂದಿಗೆ ಏನಾದರೂ ತಮಾಷೆಯ ಮಾತನಾಡುತ್ತಿದ್ದರು. ಗಾಂಧೀಜಿಯ ವಿಡಂಬನೆಯನ್ನು ಹರ್ಷದಾಯಕ ಅಥವಾ ಉಲ್ಲಾಸದಾಯಕ ಎಂದು ಕರೆದಿರುವ ಸರೋಜಿನಿ ನಾಯುಡುರವರು ಅದನ್ನು ನೇರ ಹಾಗೂ ಅದರಲ್ಲಿ ಕುಹಕವಿದ್ದರೂ ಇತರರನ್ನು ನೋಯಿಸುವ ಭಾವವಿರಲಿಲ್ಲ ಎಂದಿದ್ದಾರೆ.
ಗಾಂಧೀಜಿಯ ವಿಡಂಬನೆಯ ಮನೋಭಾವದ ಬಗ್ಗೆ ಒಮ್ಮೆ ರಬೀಂದ್ರನಾಥರು, `ಆತ ಒಂದು ಮುಕ್ತ ಆತ್ಮ. ಯಾರಾದರೂ ಆತನ ಕುತ್ತಿಗೆಯನ್ನು ಬಿಗಿದರೆ, ಆತ ಅಳುವುದಿಲ್ಲವೆಂಬ ಖಾತರಿ ನನಗಿದೆ. ಆತ ತನ್ನ ಕುತ್ತಿಗೆ ಬಿಗಿಯುವನನ್ನು ನೋಡಿ ನಗಬಹುದು, ಆತ ಸಾಯಬೇಕಾದಲ್ಲಿ ಮುಗುಳ್ನಗುತ್ತಲೇ ಸಾಯುತ್ತಾನೆ’ ಎಂದಿದ್ದರು. ಗಾಂಧಿಯ ನಗು ತಿಳಿನೀರಿನಂತೆ ಸ್ವಚ್ಛವಾದುದು ಏಕೆಂದರೆ ಆತನಲ್ಲಿ ಅಂತಹ ಪ್ರಶಾಂತತೆಯಿತ್ತು. ಆತನ ವ್ಯಕ್ತಿತ್ವ ಸಹಜವಾದದ್ದು ಆತನ ಮನಸ್ಸಿನಲ್ಲಿ ಗೊಂದಲಗಳಿರುತ್ತಿರಲಿಲ್ಲ.

ಗಾಂಧಿ ಮತ್ತು ವ್ಯಂಗ್ಯಚಿತ್ರ

ರಾಜಕೀಯ ವ್ಯಂಗ್ಯಚಿತ್ರಗಳು ಪ್ರಾರಂಭದಿಂದಲೂ ರಾಜಕೀಯ ಸಂದೇಶಗಳನ್ನು ಕ್ಷಿಪ್ರವಾಗಿ, ಸಂಕ್ಷಿಪ್ತವಾಗಿ ಹಾಗೂ ನೇರವಾಗಿ ಓದುಗರಿಗೆ ತಲುಪಿಸುವ ಅತ್ಯಂತ ಸಕ್ಷಮ ಅಸ್ತ್ರಗಳಾಗಿವೆ. ಗಾಂಧಿ ತಮ್ಮ ಸಾಮಾಜಿಕ ಹಾಗೂ ರಾಜಕೀಯ ಜೀವನ ಪ್ರಾರಂಭವಾದಾಗಿನಿಂದಲೂ ವ್ಯಂಗ್ಯಚಿತ್ರಕಾರರ ಅತ್ಯುತ್ತಮ ವಸ್ತುವಾಗಿದ್ದರು. ಸ್ವಾತಂತ್ರ ಪೂರ್ವದಲ್ಲಿ ಗಾಂಧಿಯ ಅಹಿಂಸಾ ಹೋರಾಟ, ಅವರ ಲಂಗೋಟಿ ವಸ್ತ್ರ, ಅವರ ಸತ್ಯಾಗ್ರಹ ಮತ್ತು ಅಸಹಕಾರ ಚಳುವಳಿ ಮುಂತಾದವುಗಳೆಲ್ಲಾ ವ್ಯಂಗ್ಯಚಿತ್ರಕಾರರ ವಿಡಂಬನೆಗೆ ವಸ್ತುಗಳಾಗಿದ್ದವು. ಈಗಿನ ಕೆಲವು ರಾಜಕಾರಣಿಗಳು ಸಿಟ್ಟಾಗುವಂತೆ ತಾವು ವ್ಯಂಗ್ಯಚಿತ್ರಕಾರರ ವಸ್ತುವಾದಾಗಲೆಲ್ಲಾ ಗಾಂಧಿ ಎಂದೂ ತಮ್ಮ ಅಸಹನೆ, ಸಿಟ್ಟು ತೋರಿದವರಲ್ಲ.

ಗಾಂಧಿ ಮತ್ತು ವ್ಯಂಗ್ಯಚಿತ್ರಗಳ ನಂಟು ಪ್ರಾರಂಭವಾದದ್ದು 1893ರಲ್ಲಿ ತಮ್ಮ ದಕ್ಷಿಣ ಆಫ್ರಿಕಾದ ವಾಸ ಪ್ರಾರಂಭಿಸಿದಾಗ. ದಕ್ಷಿಣಾ ಆಫ್ರಿಕಾದಲ್ಲಿ 1903ರಿಂದ 1914ರವರೆಗೆ ಗಾಂಧಿ `ಇಂಡಿಯನ್ ಒಪೀನಿಯನ್’ ಎಂಬ ಬಹುಬಾಷಿಕ ವೃತ್ತಪತ್ರಿಕೆಯನ್ನು ಸಂಪಾದಿಸಿದರು. ಗಾಂಧಿ ವ್ಯಂಗ್ಯಚಿತ್ರಗಳಲ್ಲಿ ತಾವೇ ವಸ್ತುವಾಗುವ ಮೊದಲು ಇಂಡಿಯನ್ ಒಪೀನಿಯನ್ ಪತ್ರಿಕೆಯಲ್ಲಿ ವ್ಯಂಗ್ಯಚಿತ್ರಗಳ ವ್ಯಾಖ್ಯಾನ ಪ್ರಾರಂಭಿಸಿದರು. ಬಹುಶಃ ದಕ್ಷಿಣ ಆಫ್ರಿಕಾದ ಈ ಪತ್ರಿಕೆಯಲ್ಲಿ ಭಾರತಕ್ಕೆ ಸಂಬಂಧಿಸಿದ ರಾಜಕೀಯದ ವ್ಯಂಗ್ಯಚಿತ್ರಗಳನ್ನು ವಿವರಿಸಿ ಹೇಳುವ ಮೊಟ್ಟ ಮೊದಲ ಪ್ರಯತ್ನ ಇದೆನ್ನಬಹುದು. ಈ ಪ್ರಯತ್ನದ ಹಿಂದೆ ಓದುಗರಿಗೆ ವಸಾಹತು ರಾಜಕೀಯವನ್ನು ಅರ್ಥೈಸಿಕೊಳ್ಳಲು ಕೌಶಲತೆ ಮತ್ತು ಸಾಂಸ್ಕೃತಿಕ ಬಂಡವಾಳದ ಅವಶ್ಯಕತೆ ಇದೆ ಎನ್ನುವುದು ಗಾಂಧಿಯವರ ಅಭಿಪ್ರಾಯವಾಗಿತ್ತು. ಇಂಗ್ಲೆಂಡಿನಲ್ಲಿ ಬ್ಯಾರಿಸ್ಟರ್ ಪದವಿ ಮುಗಿಸಿಕೊಂಡುಬಂದು ಮುಂಬೈನಲ್ಲಿ ವಕೀಲಿ ವೃತ್ತಿಯಲ್ಲಿ ವಿಫಲರಾಗುವ ಸಮಯದಲ್ಲಿ ಅವರಿಗೆ ದಕ್ಷಿಣಾ ಆಫ್ರಿಕಾದಲ್ಲಿ ಗುಜರಾತ್ ಮೂಲದ ಕಕ್ಷಿದಾರರನ್ನು ಪ್ರತಿನಿಧಿಸುವ ಅವಕಾಶ ಬಂದಾಗ ಗಾಂಧಿ ದಕ್ಷಿಣ ಆಫ್ರಿಕಾಕ್ಕೆ ತೆರಳಿದರು. ಅಲ್ಲಿ ನಾಟಲ್ನಲ್ಲಿ ವಲಸೆ ಬಂದ ಭಾರತೀಯರ ಹಾಗೂ ಬಿಳಿಯ ಯೂರೋಪಿಯನ್ನರ ನಡುವೆ ಸಂಘರ್ಷವಿತ್ತು. ಗಾಂಧಿ ದಕ್ಷಿಣ ಆಫ್ರಿಕಾದಲ್ಲಿನ ಬ್ರಿಟಿಷರ ಯಾಜಮಾನ್ಯಕ್ಕೆ ವಿರೋಧವಾಗಿ ಹಾಗೂ ಭಾರತೀಯ ವಲಸೆಗಾರರ ಪರವಾಗಿ ಅವರ ಹಕ್ಕುಗಳ ಹೋರಾಟಕ್ಕೆ ಬೆಂಬಲವಾಗಿ ನಿಂತರು. ಹೋರಾಟಕ್ಕೆ ಬೇಕಿರುವುದು ದೈಹಿಕ ಶಕ್ತಿಯಲ್ಲ ಬದಲಿಗೆ ಬೇಕಾಗಿರುವುದು ಮನೋಬಲ ಎಂಬುದನ್ನು ಕಂಡುಕೊಂಡ ಗಾಂಧಿಯ ಮನಸ್ಸಿನಲ್ಲಿ ಅಹಿಂಸೆ ಮತ್ತು ಅಸಹಕಾರಗಳೆಂಬ ಪ್ರತಿಭಟನೆಯ ಅಸ್ತ್ರಗಳ ಪರಿಕಲ್ಪನೆ ಆಗಲೇ ಚಿಗುರೊಡೆಯಲು ಪ್ರಾರಂಭಿಸಿದ್ದು.

ಗಾಂಧೀಜಿಯ ರಾಜಕೀಯ ಸಕ್ರಿಯತೆಯ ಪ್ರಾರಂಭದ ಸಮಯದಲ್ಲಿ ವೃತ್ತಪತ್ರಿಕೆಯ ವ್ಯಂಗ್ಯಚಿತ್ರಗಳಲ್ಲಿಯೂ ಗಾಂಧಿ ಒಂದು ವಿಶಿಷ್ಟ ವ್ಯಾಖ್ಯಾನ ಕಾರ್ಯತಂತ್ರವನ್ನು ಕಂಡುಕೊಂಡರು. ವ್ಯಂಗ್ಯಚಿತ್ರಗಳಲ್ಲಿ ಸತ್ಯ ಹುದುಗಿರುತ್ತದೆ ಎಂದು ಭಾವಿಸಿದ ಅವರು ಅದು ಅದನ್ನು ಅಥರ್ೈಸಿಕೊಳ್ಳಬಲ್ಲವರಿಗೆ ಮಾತ್ರ ದಕ್ಕುತ್ತದೆ, ಹಾಗಾಗಿ ಅದನ್ನು ಬಹುಪಾಲು ಇಂಗ್ಲಿಷ್ ಅರ್ಥವಾಗದ ದಕ್ಷಿಣ ಆಫ್ರಿಕಾದಲ್ಲಿನ ವಲಸೆ ಬಂದಿರುವ ಭಾರತೀಯರಿಗೆ ಆ ಸತ್ಯದಲ್ಲಿನ ರಾಜಕೀಯ ಸಂದೇಶವನ್ನು ತಲುಪಿಸುವ ಕಾರ್ಯ ನಿರ್ವಹಿಸಬೇಕು ಎಂದು ನಿರ್ಧರಿಸಿದರು.

ಇಂಡಿಯನ್ ನಾಟಲ್ ಕಾಂಗ್ರೆಸ್ನ ಅಧ್ಯಕ್ಷರಾದ ಎಂ.ಎಚ್.ನಜರ್, ಮುದ್ರಣಾಲಯದ ಮಾಲೀಕರಾದ ಮದನ್ಜಿತ್ ಮತ್ತು ಗಾಂಧಿ ಸೇರಿ 1903ರಲ್ಲಿ `ಇಂಡಿಯನ್ ಒಪೀನಿಯನ್’ ಪತ್ರಿಕೆ ಪ್ರಾರಂಭಿಸಿದರು ಹಾಗೂ ಅದು ಇಂಗ್ಲಿಷ್, ಹಿಂದಿ, ಗುಜರಾತಿ ಮತ್ತು ತಮಿಳು ಭಾಷೆಗಳ ಚತುರ್ಭಾಷಾ ಪತ್ರಿಕೆಯಾಗಿತ್ತು. ಇತರ ಲೇಖನಗಳ ಜೊತೆಗೆ ಗಾಂಧಿ ವಲಸಿಗ ಭಾರತೀಯರಿಗೆ ರಾಜಕೀಯ ತಿಳಿವಳಿಕೆ ನೀಡುವ ಸಲುವಾಗಿ ಮೊಟ್ಟ ಮೊದಲಿಗೆ ಆ ಪತ್ರಿಕೆಯಲ್ಲಿ ರಾಜಕೀಯ ವ್ಯಂಗ್ಯಚಿತ್ರಗಳ ವಿಶ್ಲೇಷಣೆ ಮತ್ತು ವ್ಯಾಖ್ಯಾನವನ್ನು ನೀಡಲು ಪ್ರಾರಂಭಿಸಿದರು. 1907ರಲ್ಲಿ ತಮ್ಮ ಓದುಗರಿಗೆ ಬರೆದ ಟಿಪ್ಪಣಿಯೊಂದರಲ್ಲಿ, `ನಮ್ಮ ಭಾಷೆಗೆ ಗೌರವ ನೀಡುವ ಮೊದಲ ಹೆಜ್ಜೆಯಾಗಿ ನಿಮ್ಮ ನಿಮ್ಮ ಮಾತೃ ಭಾಷೆಗಳನ್ನು ಹೆಚ್ಚೆಚ್ಚು ಬಳಸಿ, ಆದಷ್ಟು ಅವುಗಳಲ್ಲಿ ವಿದೇಶಿ ಭಾಷೆಯ ಪದಗಳನ್ನು ಬಳಸಬೇಡಿ; ಅದು ಸಹ ದೇಶಭಕ್ತಿಯೇ. ಈ ಮುಂದಿನ ಪದಗಳಿಗೆ ಗುಜರಾತಿಯ ಸಮಾನಾಂತರ ಪದಗಳು ತಿಳಿದಿಲ್ಲದಿರುವುದರಿಂದ ಅವುಗಳನ್ನು ಹಾಗೆಯೇ ಬಳಸುತ್ತಿದ್ದೇವೆ:

ಈ ಪದಗಳಿಗೆ ಗುಜರಾತಿ ಸಮಾನಾಂತರ ಪದಗಳು ಯಾರಿಗಾದರೂ ತಿಳಿದಿದ್ದರೆ ತಿಳಿಸಿ. ಅವುಗಳನ್ನು ಪ್ರಕಟಿಸುವಾಗ ಆ ಪದಗಳನ್ನು ಸೂಚಿಸಿದವರ ಹೆಸರುಗಳನ್ನೂ ಪ್ರಕಟಿಸಲಾಗುವುದು’ ಎಂದು ಬರೆದಿದ್ದರು. ಅಂದರೆ `ಕಾಟರ್ೂನ್’ ಎನ್ನುವುದು ಸತ್ಯಾಗ್ರಹ ಹಾಗೂ ಅಸಹಕಾರದಂತಹ ಪ್ರತಿಭಟನೆಯ ಅಸ್ತ್ರವೆನ್ನುವುದು ಅವರಿಗೆ ಮನದಟ್ಟಾಗಿತ್ತು. `ಇಂಡಿಯನ್ ಒಪೀನಿಯನ್’ ಪತ್ರಿಕೆಯಲ್ಲಿ ವ್ಯಂಗ್ಯಚಿತ್ರಗಳ ಪದಶಃ ಅರ್ಥವನ್ನಷ್ಟೇ ನೀಡಿದರೆ ಸಾಲದು ಎಂದು ಅವುಗಳ ಕುರಿತಂತೆ ದೀರ್ಘ ವ್ಯಾಖ್ಯಾನವನ್ನೂ ನೀಡತೊಡಗಿದರು. ಅಂತಹ ಒಂದು ವ್ಯಾಖ್ಯಾನದ ಸಂಕ್ಷಿಪ್ತ ರೂಪ ಇಲ್ಲಿದೆ:

`ದ ನ್ಯೂ ಏಜ್’ ಎನ್ನುವ ಇಂಗ್ಲಿಷ್ ಪತ್ರಿಕೆಯು ಈ ವಿಷಯದ ಕುರಿತು ವ್ಯಂಗ್ಯಚಿತ್ರವೊಂದನ್ನು ಪ್ರಕಟಿಸಿದೆ ಹಾಗೂ ಅದನ್ನು ನಾವು ಈ ಸಂಚಿಕೆಯಲ್ಲಿ ಮರುಮುದ್ರಿಸುತ್ತಿದ್ದೇವೆ. ಅದರಲ್ಲಿ ಒಂದು ಸೇನೆ ಮುನ್ನಡೆಯುತ್ತಿದೆ ಹಾಗೂ ಅದರ ಹಿಂದೆ ಒಂದು ಭಯಂಕರ ಆಕೃತಿಯ ಸೇನಾಧಿಪತಿಯ ರೂಪವೊಂದು ಸಹ ನಡೆಯುತ್ತಿದೆ. ಆ ಭಯಂಕರಾಕೃತಿ ಬಂದೂಕವೊಂದನ್ನು ಹಿಡಿದಿದ್ದು ಅದು ಹೊಗೆ ಉಗುಳುತ್ತಿದೆ, ಅದರ ತಲೆಯ ಮೇಲೆ ಫಿರಂಗಿಯೊಂದಿದೆ. ಅದು ಧರಿಸಿರುವ ಪದಕದ ಮೇಲೆ ತಲೆಬುರುಡೆಯ ಚಿತ್ರವಿದೆ, ಕೈಯಲ್ಲಿ ರಕ್ತಸಿಕ್ತ ಕತ್ತಿಯಿದೆ… ಈ ಚಿತ್ರವನ್ನು `ನಾಗರಿಕತೆಯ ಮುನ್ನಡೆ’ ಎಂದು ಕರೆಯಲಾಗಿದೆ. ಈ ವಿವರಗಳನ್ನು ಓದುವ ಯಾರೇ ಆಗಲಿ ಅವರು ಖಿನ್ನರಾಗದಿರಲು ಸಾಧ್ಯವಿಲ್ಲ. ಪಾಶ್ಚಿಮಾತ್ಯ ನಾಗರಿಕತೆ ಎಷ್ಟು ಕ್ರೂರವೆಂಬುದು ಹಾಗೂ ಈ ವ್ಯಂಗ್ಯಚಿತ್ರದಲ್ಲಿನ ವ್ಯಕ್ತಿಯ ಮುಖ ಚಹರೆಗಿಂತಾ ಕ್ರೂರವೆಂಬುದು ನಮ್ಮ ಅರಿವಿಗೆ ಬರದೇ ಇರುವುದಿಲ್ಲ………ಈ ವ್ಯಂಗ್ಯಚಿತ್ರದ ಬಗೆಗೆ ನಮ್ಮ ಓದುಗರ ಗಮನ ಸೆಳೆಯುತ್ತಾ ಅವರಿಗೆ ಸತ್ಯಾಗ್ರಹವೆಂಬ ದೈವಿಕ ಜ್ಯೋತಿಯ ಪರಿಚಯ ಮಾಡಿಸಲು ಬಯಸುತ್ತೇವೆ. ನಾಗರಿಕತೆಯ ಅರ್ಥ ನೀಡುವ ಮೇಲಿನ ಚಿತ್ರ ನೋಡಿ, ಸಂಪತ್ತು ಹಾಗೂ ಪ್ರಾಪಂಚಿಕ ಸುಖಗಳನ್ನು ಪಡೆಯಲು ದುರಾಸೆಯಿಂದ ನಿಂತಿರುವ ಹಸಿದ ತೋಳದಂತಹ ಭಯಂಕರ ರೂಪ. ಮತ್ತೊಂದೆಡೆ ನೋಡಿ, ಸತ್ಯಾಗ್ರಹಿಯೊಬ್ಬ ಸತ್ಯಕ್ಕೆ ನಿಷ್ಠನಾಗಿ, ಆಧ್ಯಾತ್ಮವೇ ತನ್ನ ಸ್ವರೂಪವಾಗಿ ದೇವರ ಆಜ್ಞೆಯನ್ನು ಶ್ರದ್ಧೆಯಿಂದ ಅನುಸರಿಸಲು ಕ್ರೂರಿಗಳ ಹೊಡೆತಕ್ಕೆ, ಯಾತನೆಗೆ ಧೃತಿಗೆಡದೆ ಎದೆಯೊಡ್ಡಿ, ಮುಖದಲ್ಲಿ ಮುಗುಳ್ನಗೆ ಮಾಸದೆ, ಒಂದು ಹನಿ ಕಣ್ಣೀರೂ ಸುರಿಸದೆ ನಿಂತಿದ್ದಾನೆ. ಈ ಎರಡೂ ಚಿತ್ರಗಳಲ್ಲಿ ಓದುಗರು ಯಾವುದಕ್ಕೆ ಆಕಷರ್ಿತರಾಗುತ್ತಾರೆ? ಸತ್ಯಾಗ್ರಹಿಯ ಚಿತ್ರ ಮನುಕುಲದ ಹೃದಯ ತಟ್ಟುತ್ತದೆ ಹಾಗೂ ಆತನ ಯಾತನೆ ಹೆಚ್ಚಾದಂತೆ ಅದರ ಪರಿಣಾಮವೂ ಹೆಚ್ಚು ಗಾಢವಾಗುತ್ತದೆನ್ನುವುದರ ಬಗೆಗೆ ನಮ್ಮ ಸಂಶಯವಿಲ್ಲ. ಈ ವ್ಯಂಗ್ಯಚಿತ್ರವನ್ನು ನೋಡುವ ಯಾರಲ್ಲೇ ಆಗಲಿ, ಆತನ ಹೃದಯದಲ್ಲಿ ಸತ್ಯಾಗ್ರಹ ಮಾತ್ರವೇ ಮನುಕುಲಕ್ಕೆ ಸ್ವಾತಂತ್ರ್ಯ ಮತ್ತು ಶಕ್ತಿಯನ್ನು ತಂದುಕೊಡುತ್ತದೆ ಎನ್ನುವ ಭಾವನೆ ಬರದಿರಲು ಸಾಧ್ಯವಿಲ್ಲ ಅಲ್ಲವೆ?’

ಆ ಪತ್ರಿಕೆಯಲ್ಲಿ ಸತ್ಯಾಗ್ರಹಿಯ ಚಿತ್ರವಿಲ್ಲದಿದ್ದರೂ ಅದನ್ನು ಕಲ್ಪಿಸಿಕೊಳ್ಳುವ ಜವಾಬ್ದಾರಿಯನ್ನು ಓದುಗನಿಗೇ ಬಿಟ್ಟಿದ್ದರು. ಇಲ್ಲಿ ಗಾಂಧಿ ಮತ್ತೊಂದು ಕಾರ್ಯನೀತಿ ಅನುಸರಿಸಿದರು. ಇಂಗ್ಲಿಷಿನಲ್ಲಿ ಅಂತಹ ವ್ಯಂಗ್ಯಚಿತ್ರಗಳ ವ್ಯಾಖ್ಯಾನವನ್ನು ಸಂಕ್ಷಿಪ್ತವಾಗಿ ನೀಡಿದ್ದರೆ ಗುಜರಾತಿ ಭಾಷೆಯಲ್ಲಿ ಅವುಗಳ ವ್ಯಾಖ್ಯಾನ ದೀರ್ಘ ಹಾಗೂ ಪ್ರಚೋದನಕಾರಿಯಾಗಿರುತ್ತಿತ್ತು. ಇಂಗ್ಲಿಷ್ ಓದುವ ಬ್ರಿಟಿಷರಿಗೆ ಇತರ ಭಾಷೆಗಳಲ್ಲೇನಿದೆ ಎನ್ನುವುದು ತಿಳಿಯುತ್ತಿರಲಿಲ್ಲ. ವ್ಯಂಗ್ಯಚಿತ್ರಗಳ ಮೂಲಕ ಓದುಗರು ಬಿಳಿಯರ ಮನಸ್ಸಿನೊಳಗೆ ಇಣುಕಿನೋಡುವಂತೆ ಸೂಚಿಸುತ್ತಿದ್ದರು. ಗಾಂಧಿ ಈ ವ್ಯಾಖ್ಯಾನಗಳ ಮೂಲಕ ವ್ಯಂಗ್ಯಚಿತ್ರವೆನ್ನುವುದು ಒಂದು ರಾಜಕೀಯ ಕ್ರಿಯೆ ಹಾಗೂ ಓದುಗರು ಅವುಗಳ ಬಗೆಗೆ ಗಮನ ಹರಿಸಬೇಕು ಎನ್ನುವುದನ್ನು ಸೂಚಿಸುತ್ತಿರುವಂತೆ ಆಧುನಿಕ ನಾಗರಿಕತೆಯ ವಿರುದ್ಧ ಸತ್ಯಾಗ್ರಹವನ್ನು ತನ್ಮೂಲಕ ಪಶ್ಚಿಮದ ವಿರುದ್ಧ ಪೂರ್ವವನ್ನು ನಿಲ್ಲಿಸುವ ಪ್ರಯತ್ನವನ್ನೂ ಮಾಡುತ್ತಿದ್ದರು. ಇಂತಹ ಕಾರ್ಯವನ್ನು ಅವರು ಇಂಗ್ಲಿಷ್ ವ್ಯಾಖ್ಯಾನಗಳಲ್ಲಿ ಮಾಡುತ್ತಿರಲಿಲ್ಲ. ಇದು ದಕ್ಷಿಣಾ ಆಫ್ರಿಕಾದಲ್ಲಿನ ವಲಸಿಗರ ಹಾಗೂ ಮೂಲನಿವಾಸಿಗಳ ಚಟುವಟಿಕೆಗಳ ಮೇಲೆ ಕಣ್ಣಿರಿಸಿದ್ದ ಬ್ರಿಟಿಷರನ್ನು ದಾರಿತಪ್ಪಿಸುವ ಕಾರ್ಯವೂ ಆಗಿತ್ತು. ಬ್ರಿಟಿಷ್ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದ ವ್ಯಂಗ್ಯಚಿತ್ರಗಳನ್ನು ಮರುಮುದ್ರಿಸಿ ವ್ಯಾಖ್ಯಾನಿಸುವಂತೆ ಭಾರತದ ಪತ್ರಿಕೆಗಳಲ್ಲಿ ಹಾಗೂ `ಹಿಂದಿ ಪಂಚ್’ ಪತ್ರಿಕೆಯಲ್ಲಿ ಪ್ರಕಟವಾದ ವ್ಯಂಗ್ಯಚಿತ್ರಗಳನ್ನು ಸಹ ಪ್ರಕಟಿಸಿ ವ್ಯಾಖ್ಯಾನಿಸುತ್ತಿದ್ದರು. ತಮ್ಮ ಸಾರ್ವಜನಿಕ ಭಾಷಣಗಳಲ್ಲಿಯೂ ತಾವು ವ್ಯಾಖ್ಯಾನಿಸಿದ ವ್ಯಂಗ್ಯಚಿತ್ರಗಳ ವಿವರಗಳನ್ನು ಉಲ್ಲೇಖಿಸುತ್ತಿದ್ದರು.

ಆ ಸಮಯದಲ್ಲಿಯೇ ಮೊಟ್ಟಮೊದಲಿಗೆ ಗಾಂಧಿ ವ್ಯಂಗ್ಯಚಿತ್ರಗಳ ವಸ್ತುವೂ ಆಗತೊಡಗಿದರು. ಅವರ ಸತ್ಯಾಗ್ರಹ ಅಸಹಕಾರ ಪ್ರತಿರೋಧ ಹೆಚ್ಚು ಹೆಚ್ಚು ಪ್ರಬಲ ಅಸ್ತ್ರವಾಗತೊಡಗಿತು ಹಾಗೂ ಅವರ ಈ ಪ್ರತಿಭಟನೆಯ ವಿಧಾನವೂ ವ್ಯಂಗ್ಯಚಿತ್ರಗಳ ವಸ್ತುವಾಗತೊಡಗಿದವು. 1906ರಲ್ಲಿ ದಕ್ಷಿಣ ಆಫ್ರಿಕಾದ ಟ್ರಾನ್ಸ್ವಾಲನ್ನು ತನ್ನ ಸ್ವ-ಆಳ್ವಿಕೆಯ ವಸಾಹತನ್ನಾಗಿ ಮಾಡಿಕೊಂಡಿತು ಹಾಗೂ ಆ ಸಕರ್ಾರದ ಮುಖ್ಯಸ್ಥರಾದ ಜನರಲ್ ಬೋಥಾ ಮತ್ತು ಜನರಲ್ ಸ್ಮಟ್ಸ್ ಅಲ್ಲಿಗೆ ಭಾರತೀಯರನ್ನು ಮತ್ತು ಇತರ ಏಷಿಯನ್ನರನ್ನು ಬರದಂತೆ ತಡೆಯುವ ಕಾಯಿದೆಯನ್ನು ತರಲು ಪ್ರಯತ್ನಿಸಿದಾಗ ಗಾಂಧಿ ಸತ್ಯಾಗ್ರಹ ಹೂಡಿ ಪ್ರತಿಭಟಿಸಿದರು. ಆ ಪ್ರತಿಭಟನೆಯು ಇಂಗ್ಲೆಂಡಿನ `ಸಂಡೇ ಟೈಮ್ಸ್’ನಲ್ಲಿ ಒಂದು ವ್ಯಂಗ್ಯಚಿತ್ರವಾಗಿ ಪ್ರಕಟವಾಯಿತು. ಭಾರತೀಯ ಸಮುದಾಯವು ಆನೆಯಂತಿದ್ದು ಅದರ ಮಾಹುತ ಗಾಂಧಿಯಾಗಿದ್ದರು ಹಾಗೂ ಜನರಲ್ ಸ್ಮಟ್ಸ್ ಪ್ರವೇಶ ನಿರ್ಬಂಧ ಕಾಯಿದೆಯಾಗಿರುವ ಸ್ಟೀಮ್ ರೋಲರ್ ಮೂಲಕ ಭಾರತೀಯ ಸಮುದಾಯವನ್ನು ನೆಲಸಮ ಮಾಡಲು ಹೊರಟಿರುವ ಚಿತ್ರ ಅದಾಗಿತ್ತು. ಆ ಚಿತ್ರದಲ್ಲಿ ಹಿಂದಿನಿಂದ ರೋಲರ್ ಗುದ್ದುತ್ತಿದ್ದರೆ `ಕಚಗುಳಿ ಇಡಬೇಡ ಜಾನ್’ ಎಂದು ಆನೆ ಸ್ಮಟ್ಸ್ಗೆ ಹೇಳುತ್ತಿತ್ತು. ಅದೇ ವ್ಯಂಗ್ಯಚಿತ್ರವನ್ನು ಗಾಂಧಿ `ಇಂಡಿಯನ್ ಒಪೀನಿಯನ್’ನಲ್ಲಿ ತಮ್ಮ ವ್ಯಾಖ್ಯಾನದೊಂದಿಗೆ ಮರುಮುದ್ರಿಸಿದರು. `ಸಂಡೇ ಟೈಮ್ಸ್ನ ಸಂಪಾದಕರು ಭಾರತೀಯರ ವಿರೋಧವಾಗಿದ್ದರೂ ಸಹ ಅವರ ವ್ಯಂಗ್ಯಚಿತ್ರಕಾರ ನಮ್ಮ ಹೋರಾಟಕ್ಕೆ ಅದ್ಭುತ ಬೆಂಬಲ ನೀಡುತ್ತಿದ್ದಾನೆ’ ಎಂದು ತಮ್ಮ ವ್ಯಾಖ್ಯಾನದಲ್ಲಿ ಬರೆದಿದ್ದರು.

ದಕ್ಷಿಣ ಆಫ್ರಿಕಾದಲ್ಲಿ ಗಾಂಧಿ 1893ರಿಂದ 1914ರವರೆಗೆ ಕಳೆದ ಪ್ರತಿಭಟನೆಯ ಹೋರಾಟದ ಅವಧಿಯಲ್ಲಿ ಅವರ ಕುರಿತು ಹಲವಾರು ವ್ಯಂಗ್ಯಚಿತ್ರಗಳು ಪ್ರಕಟವಾದವು. ಟ್ರಾನ್ಸ್ವಾಲ್ನ ವಲಸೆ ನಿರ್ಬಂಧ ಕಾನೂನಿನ ಫಲವಾಗಿ ಹಲವಾರು ಭಾರತೀಯ ಮತ್ತು ಏಷಿಯಾದ ಸಣ್ಣ ಪುಟ್ಟ ವ್ಯಾಪಾರಿಗಳು ತೀವ್ರ ನಷ್ಟ ಹೊಂದಿದರು. ಆಗ ಗಾಂಧಿಯ ಸತ್ಯಾಗ್ರಹದ ಭಾಗವಾಗಿ ಆ ಸಣ್ಣ ವ್ಯಾಪಾರಿಗಳೆಲ್ಲಾ ಪರ್ಮಿಟ್ ಇಲ್ಲದಂತೆ ರಸ್ತೆ ಬದಿ ವಸ್ತುಗಳನ್ನು ಮಾರಾಟ ಮಾಡತೊಡಗಿದರು. ಆಗ ಬ್ರಿಟನ್ನಿನ `ದ ಸ್ಟಾರ್’ ಪತ್ರಿಕೆಯಲ್ಲಿ ಪ್ರಕಟವಾದ ವ್ಯಂಗ್ಯಚಿತ್ರದಲ್ಲಿ ದೈತ್ಯಾಕಾರರಂತೆ ನಿಂತಿರುವ ಜನರಲ್ ಬೋತಾ ಮತ್ತು ಇತರ ಬೋಯರ್ ನಾಯಕರ ಎದುರು ಕುಬ್ಜ ಗಾಂಧಿ ಎದೆಸೆಟೆಸಿ ನಿಂತು ಸಣ್ಣ ಪುಟ್ಟ ವ್ಯಾಪಾರಿಗಳನ್ನು ಅರೆಸ್ಟು ಮಾಡುವ ಬದಲು ನನ್ನನ್ನು ಅರೆಸ್ಟು ಮಾಡಿ ಎಂದು ಹೇಳುತ್ತಿದ್ದಾರೆ. 1907ರಲ್ಲಿ ದಕ್ಷಿಣ ಆಫ್ರಿಕಾದ `ರ್ಯಾಂಡ್ ಡೈಲಿ ಮೇಲ್’ನಲ್ಲಿ ಪ್ರಕಟವಾದ ವ್ಯಂಗ್ಯಚಿತ್ರವೊಂದು ಗಾಂಧಿಯ ವ್ಯಕ್ತಿತ್ವ ಪ್ರದರ್ಶಿಸುವ ಮಾರ್ಮಿಕ ಚಿತ್ರವಾಗಿದ್ದು ಅದರಲ್ಲಿ ಏಷಿಯಾಟಿಕ್ ಸುಗ್ರೀವಾಜ್ಞೆಯ ಪಿಸ್ತೂಲು ಹೊಂದಿರುವ ಸರ್ಕಾರಕ್ಕೆ ಅತ್ಯಂತ ತಾಳ್ಮೆಯಿಂದ ನಿಂತಿರುವ ಗಾಂಧಿ ಕಣ್ಣುಮುಚ್ಚಿಕೊಂಡು ಗುಂಡು ನನ್ನ ಎದೆಗೇ ಹಾರಿಸು ಎಂದು ಹೇಳುವಂತೆ ಎದೆಯ ಮೇಲೆ ಕೈ ಇಟ್ಟುಕೊಂಡಿದ್ದಾರೆ ಆದರೆ ಗುಂಡು ಹಾರಿಸಲು ಹೊರಟ ಸರ್ಕಾರ ತಬ್ಬಿಬ್ಬಾಗಿ ಪಿಸ್ತೂಲು ನೆಲಕ್ಕೆ ಬಾಗಿಸಿ ನಿಂತಿದೆ.

ಭಾರತದಲ್ಲಿ ಗಾಂಧಿಯ ಸ್ವಾತಂತ್ರ್ಯ ಹೋರಾಟ ಪ್ರಾರಂಭವಾದನಂತರವೂ ಗಾಂಧಿಯ ಕುರಿತಾದ ನೂರಾರು ವ್ಯಂಗ್ಯಚಿತ್ರಗಳು ಪ್ರಕಟವಾದವು. ಗಾಂಧಿ 1931ರಲ್ಲಿ ಬ್ರಿಟನ್ನಿಗೆ ಎರಡನೇ ದುಂಡು ಮೇಜಿನ ಪರಿಷತ್ತಿಗೆ ಹೋದರು. ಅಷ್ಟೊತ್ತಿಗೆ ಗಾಂಧಿ `ಮಹಾತ್ಮ’ನಾಗಿ ಜಗತ್ಪ್ರಸಿದ್ಧರಾಗಿದ್ದರು. ಆಗ ಲಂಡನ್ನಿನಲ್ಲಿ ಚಾರ್ಲ್ಸ್ ಚಾಪ್ಲಿನ್ ಮತ್ತು ಖ್ಯಾತ ವ್ಯಂಗ್ಯಚಿತ್ರಕಾರ ಡೇವಿಡ್ ಲೋರವರನ್ನು ಭೇಟಿಯಾದರು. ಗಾಂಧಿ ಡೇವಿಡ್ ಲೋರವರ ವ್ಯಂಗ್ಯಚಿತ್ರಗಳ ಅತ್ಯುತ್ತಮ ವಸ್ತುವಾಗಿದ್ದರು. ಗಾಂಧಿಯನ್ನು ಸಂದರ್ಶಿಸಲು ಭಾರತಕ್ಕೆ ಸಹ ಭೇಟಿ ನೀಡಿದ್ದರು. ಒಮ್ಮೆ ಸಂದರ್ಶನ ಮಾಡಿ ಮುಗಿಸಿದಾಗ ಗಾಂಧಿ ತಮ್ಮ ಮೇಕೆಗೆ ಮೇವು ಹಾಕುವಾಗ ತಮಾಷೆಗಾಗಿ `ನನ್ನ ಮೇಕೆಯನ್ನೂ ಸಂದರ್ಶನ ಮಾಡುವಿರಾ ಲೋ?’ ಎಂದು ಕೇಳಿದರು.

ಗಾಂಧಿಯ ಮೇಕೆಯ ಹಾಲಿನ ಸೇವನೆ ಇಂಗ್ಲೆಂಡಿನಲ್ಲೂ ಸುದ್ದಿಯಾಗಿತ್ತು. ಗಾಂಧಿಯ ಈ ಅಭ್ಯಾಸವನ್ನು ಲೇವಡಿ ಮಾಡುವವರೂ ಸಾಕಷ್ಟಿದ್ದರು. ದುಂಡು ಮೇಜಿನ ಪರಿಷತ್ತಿಗೆ ಗಾಂಧಿ ಹೊರಡಲು ಸಿದ್ದವಾಗುತ್ತಿರುವಂತೆ ಲಂಡನ್ನಿನ `ಡೈಲಿ ಮೇಲ್’ನ ಪಾಯ್ ಎಂಬ ವ್ಯಂಗ್ಯಚಿತ್ರಕಾರ ಮೇಕೆಗಳೂ ತಮ್ಮನ್ನು ಲಂಡನ್ನಿಗೆ ಕರೆದೊಯ್ಯುವಂತೆ ಗಾಂಧಿಯ ದುಂಬಾಲು ಬಿದ್ದಿರುವ ವ್ಯಂಗ್ಯಚಿತ್ರ ಪ್ರಕಟಿಸಿದ. ಆ ವ್ಯಂಗ್ಯಚಿತ್ರ ಶೀರ್ಷಿಕೆ ಪದ್ಯದ ರೂಪದಲ್ಲಿದ್ದು ಅದರಲ್ಲಿ ಹಳೆಯ ಇಂಗ್ಲೆಂಡ್ ನೋಡಲು ಕಾತುರರಾಗಿರುವ ಮೇಕೆಗಳಿಗೆ ನಿರಾಸೆ ಮಾಡಬೇಡಿ, ನೀವು ಬರಲು ಸಾಧ್ಯವಾಗದಿದ್ದರೂ ನಾವು ಮೇಕೆಗಳನ್ನು ಸ್ವಾಗತಿಸುತ್ತೇವೆ ಎಂದಿತ್ತು.
ಅದೇ ರೀತಿ ಅವರು ಧರಿಸುತ್ತಿದ್ದ ವಸ್ತ್ರವೂ ವ್ಯಂಗ್ಯಚಿತ್ರಕಾರರ ವಸ್ತುವಾಗಿತ್ತು. ಅವರು ಇಂಗ್ಲೆಂಡಿಗೆ ಹೊರಡುವ ಸಮಯದಲ್ಲೇ ಅಮೆರಿಕಾದ `ಲೈಫ್’ ಪತ್ರಿಕೆಯಲ್ಲಿ ಪ್ರಕಟವಾದ ವ್ಯಂಗ್ಯಚಿತ್ರವೊಂದರಲ್ಲಿ ಕಸ್ಟಮ್ಸ್ ಅಧಿಕಾರಿಗಳು ಗಾಂಧಿಯ ದೊಡ್ಡ ಸೂಟ್ಕೇಸ್ ತಪಾಸಣೆಗೆ ತೆರೆದಾಗ ಅದರಲ್ಲಿ ಲಂಗೋಟಿ ಮಾತ್ರ ಇರುವುದನ್ನು ಕಂಡು ತಬ್ಬಿಬ್ಬಾಗಿರುತ್ತಾರೆ. ವಾಸ್ತವವಾಗಿ ಕೆಲ ದಿನಗಳ ಹಿಂದೆ ಫ್ರಾನ್ಸ್ನ ಮಾಸರ್ೇಲ್ಸ್ನಲ್ಲಿ ಕಸ್ಟಮ್ಸ್ನವರು ಸೂಟ್ಕೇಸ್ನಲ್ಲಿ ಏನೇನಿದೆ ಘೋಷಿಸಿ ಎಂದು ಕೇಳಿದ್ದಾಗ, `ನಾನೊಬ್ಬ ಬಡ ಅಲೆಮಾರಿ. ನನ್ನೆಲ್ಲಾ ಆಸ್ತಿಯೆಂದರೆ ಆರು ಚರಕ, ಬಂದಿಖಾನೆಯ ಕೆಲವು ಪಾತ್ರೆಗಳು, ಒಂದು ಕ್ಯಾನ್ ಮೇಕೆಯ ಹಾಲು, ಆರು ಕೈಮಗ್ಗದ ಲಂಗೋಟಿಗಳು ಮತ್ತು ಟವಲ್ ಹಾಗೂ ಒಂದಷ್ಟು ಗೌರವ- ಅವೆಲ್ಲಾ ಅಷ್ಟೇನೂ ಮೌಲ್ಯಯುತವಾದುದಲ್ಲ ಬಿಡಿ’ ಎಂದಿದ್ದರು!

ಗಾಂಧಿ ಇಂಗ್ಲೆಂಡಿನ ದುಂಡು ಮೇಜಿನ ಸಮಾವೇಶಕ್ಕೆ ಹೊರಟಾಗ ಪತ್ರಕರ್ತನೊಬ್ಬ, `ಗಾಂಧೀಜಿ, ಈ ಲಂಗೋಟಿ ಧರಿಸಿಯೇ ನೀವು ಕಿಂಗ್ ಜಾಜರ್್ನನ್ನು ಭೇಟಿ ಮಾಡಲು ಹೋಗುತ್ತೀರಾ?’ ಎಂದು ಕೇಳಿದಾಗ, `ನನ್ನ ವಸ್ತ್ರಗಳ ಬಗ್ಗೆ ಚಿಂತಿಸಬೇಡ. ರಾಜನ ಬಳಿ ನಮ್ಮಿಬ್ಬರಿಗೂ ಸಾಕಾಗುವಷ್ಟು ವಸ್ತ್ರಗಳಿವೆ’ ಎಂದಿದ್ದರಂತೆ. ಕಿಂಗ್ ಜಾರ್ಜ್  ಮತ್ತು ಲಂಗೋಟಿ ಧರಿಸಿದ ಗಾಂಧಿಯ ಭೇಟಿ ವ್ಯಂಗ್ಯಚಿತ್ರಕಾರರಿಗೆ ಕುತೂಹಲದ ವಿಷಯವಾಗಿತ್ತು ಹಾಗೂ ಆ ಕುರಿತು ಆಗ ಇಂಗ್ಲೆಂಡಿನಲ್ಲಿ ಹಲವಾರು ವ್ಯಂಗ್ಯಚಿತ್ರಗಳು ಪ್ರಕಟವಾದವು.

ಗಾಂಧಿ 1930ರಲ್ಲಿ ದಂಡಿ ಪಾದಯಾತ್ರೆ ಹೋಗಿ ಉಪ್ಪಿನ ಸತ್ಯಾಗ್ರಹದ ಮೂಲಕ ದೊಡ್ಡ ಆಂದೋಲನ ಮಾಡಿ ಯಶಸ್ಸು ಗಳಿಸಿದ ವಿಷಯ ವ್ಯಂಗ್ಯಚಿತ್ರಕಾರರಿಗೆ ಹಬ್ಬದಂತಾಯಿತು. ಗಾಂಧಿಯ ಉಪ್ಪಿನ ಸತ್ಯಾಗ್ರಹ ಕುರಿತ ವ್ಯಂಗ್ಯಚಿತ್ರಗಳು ಸಾಕಷ್ಟು ಪ್ರಕಟವಾದವು. ಅದರಲ್ಲೂ ಬ್ರಿಟಿಷ್ ಸಿಂಹದ ಬಾಲಕ್ಕೆ ಗಾಂಧಿ ಉಪ್ಪು ಹಚ್ಚುತ್ತಿರುವ ಥೀಮ್ ವಿದೇಶಿ ವ್ಯಂಗ್ಯಚಿತ್ರಕಾರರ ಇಷ್ಟದ ವಿಷಯವಾಯಿತು. ಗಾಂಧಿ ಬ್ರಿಟಿಷ್ ಸಿಂಹದ ಬಾಲಕ್ಕೆ ಉಪ್ಪು ಹಚ್ಚುತ್ತಿರುವ ವ್ಯಂಗ್ಯಚಿತ್ರಗಳು ಅಮೆರಿಕದ `ಸನ್’ ಪತ್ರಿಕೆಯಲ್ಲಿ, ಲಂಡನ್ನಿನ `ಡೈಲಿ ಎಕ್ಸ್ಪ್ರೆಸ್’ ಹಾಗೂ `ಗ್ರಾಫಿಕ್’ ಮುಂತಾದ ಪತ್ರಿಕೆಗಳಲ್ಲಿ ಪ್ರಕಟವಾದವು.

ಎರಡನೇ ವಿಶ್ವಯುದ್ಧದ ಸಮಯದಲ್ಲಿ 1942ರ ಆಗಸ್ಟ್ 24ರ `ಲೈಫ್’ ಪತ್ರಿಕೆಯಲ್ಲಿ ಒಂದು ಪುಟದ ಲೇಖನ ಹಾಗೂ ಕೆಲವು ಗಾಂಧಿಯ ವ್ಯಂಗ್ಯಚಿತ್ರಗಳು ಪ್ರಕಟವಾದವು. ಅಮೆರಿಕದ ವ್ಯಂಗ್ಯಚಿತ್ರಕಾರರು ಗಾಂಧಿಯನ್ನು ಒಬ್ಬ ದಡ್ಡ ಹಾಗೂ ದ್ರೋಹಿಯನ್ನಾಗಿ ಚಿತ್ರಿಸುತ್ತಿದ್ದಾರೆಂದಿತ್ತು ಆ ಲೇಖನ. ಗಾಂಧಿ ಭಾರತೀಯರಿಗೆ ಮತ್ತು ಇತರರಿಗೆಲ್ಲಾ `ಮಹಾತ್ಮ’ನಾಗಿದ್ದರೂ ಅಮೆರಿಕನ್ ವ್ಯಂಗ್ಯಚಿತ್ರಕಾರರು ತಲೆ ಸರಿ ಇಲ್ಲದ, ಬೋಳು ತಲೆಯ, ಮಳೆ ಸುರಿಯುತ್ತಿದ್ದರೂ ಆಸರೆಗೆ ಹೋಗಬೇಕೆಂದು ತಿಳಿಯದ ದಡ್ಡ ವ್ಯಕ್ತಿಯೆಂದು ಪರಿಗಣಿಸಿದ್ದರು ಎನ್ನುತ್ತಿತ್ತು ಆ ಲೇಖನ. ಜಪಾನೀಯರು ಭಾರತದ ಮೇಲೆ ಆಕ್ರಮಣ ಮಾಡಬೇಕೆಂದು ನಿಂತಿರುವಾಗ ಈ ಯುದ್ಧದಲ್ಲಿ ಯಾರಿಗೆ ಬೆಂಬಲ ನೀಡಬೇಕೆನ್ನುವುದು ಗಾಂಧಿಗೆ ತಿಳಿಯುತ್ತಿಲ್ಲ ಎಂದಿದ್ದರು. ಆ ಲೇಖನವೇ ಹೇಳಿದಂತೆ ಅಮೆರಿಕದ ವ್ಯಂಗ್ಯಚಿತ್ರಕಾರರಿಗೆ ಭಾರತದ ಸಮಸ್ಯೆಗಳ ಸಂಕೀರ್ಣತೆಯ ಅರಿವಿರಲಿಲ್ಲ ಹಾಗೂ ಬಹುಪಾಲು ಅಮೆರಿಕನ್ನರಂತೆ ವ್ಯಂಗ್ಯಚಿತ್ರಕಾರರೂ ಸಹ ಭಾರತೀಯರನ್ನು `ಅನಾಗರಿಕ ಹಾಗೂ ಅಸಂಸ್ಕೃತ’ ಜನ ಮತ್ತು ಅವರಿಗೆ ಅವರಿಗೆ ಯಾವುದು ಒಳ್ಳೆಯದು ಅದನ್ನೂ ತಿಳಿದುಕೊಳ್ಳುವ ಸಾಮಥ್ರ್ಯವಿಲ್ಲವೆಂದುಕೊಂಡಿದ್ದರು. ಭಾರತದ ಪ್ರಸ್ತುತ ಸ್ಥಿತಿಗೆ ಅಮೆರಿಕವೂ ಸ್ವಲ್ಪ ನೈತಿಕ ಹೊಣೆಗಾರಿಕೆಯನ್ನು ಹೊರಬೇಕೆಂಬ ಸೂಚನೆ ಆ ವ್ಯಂಗ್ಯಚಿತ್ರಗಳಲ್ಲಿಲ್ಲವೆನ್ನುವ ಅಂಶವೂ ಆ ಲೇಖನದಲ್ಲಿತ್ತು.

ಗಾಂಧಿ ಕುರಿತಾದ ವ್ಯಂಗ್ಯಚಿತ್ರಗಳು ಬ್ರಿಟನ್ನಿನ ಸಂಡೇ ಟೈಮ್ಸ್, ದ ಸ್ಟಾರ್, ಮಾರ್ನಿಂಗ್ ಪೋಸ್ಟ್, ಕಾಂಟ್ರಿಬ್ಯೂಟರ್ಸ್ ಕ್ಲಬ್, ಈವನಿಂಗ್ ಸ್ಟ್ಯಾಂಡರ್ಡ್  ಆಫ್ ಲಂಡನ್, ಡೈಲಿ ಎಕ್ಸ್ಪ್ರೆಸ್, ಗ್ರಾಫಿಕ್ (ಲಂಡನ್), ರಿವ್ಯೂ ಆಫ್ ರಿವ್ಯೂಸ್, ದಕ್ಷಿಣ ಆಫ್ರಿಕಾದ ರ್ಯಾಂಡ್ ಡೈಲಿ ಮೇಲ್, ಬ್ರಿಟಿಷ್ ಜರ್ನಲ್ ಕ್ಯಾರಿಕೇಚರ್, ಜರ್ಮನಿಯ ಸಿಂಪ್ಲಿಸಿಸಿಮಸ್, ಕ್ಲಾಡರಾಡ್ಯಾಚ್, ಅಮೆರಿಕದ ಸನ್ (ಬಾಲ್ಟಿಮೋರ್), ಸ್ಪ್ರಿಂಗ್ಫೀಲ್ಡ್ ಲೀಡರ್, ಪೋಸ್ಟ್-ಡಿಸ್ಪ್ಯಾಚ್ (ಸೇಂಟ್ ಲೂಯಿಸ್), ಜೆಕೊಸ್ಲಾವೇಕಿಯಾದ ಪ್ರಾಗರ್ ಪ್ರೆಸ್, ಇಟಲಿಯ ಗೆಟಿನ್ ಮೆಸ್ಚಿನೊ (ಮಿಲಾನ್), ನ್ಯೂಜಿಲೆಂಡಿನ ಆಕ್ಲೆಂಡ್ ಸ್ಟಾರ್ ಹಾಗೂ ಭಾರತದಲ್ಲಿ ಫ್ರೀ ಪ್ರೆಸ್ ಜರ್ನಲ್, ಹಿಂದೂಸ್ತಾನ್ ಟೈಮ್ಸ್, ದ ಪಯೊನೀರ್, ಜನ್ಮಭೂಮಿ, ಲಾಹೋರಿನ ಸಿವಿಲ್ ಮತ್ತು ಮಿಲಿಟರಿ ಗೆಜೆಟ್, ಡಾನ್ ಹಾಗೂ ನೂರಾರು ಸ್ಥಳೀಯ ಭಾಷೆಯ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಅವರ ವ್ಯಂಗ್ಯಚಿತ್ರಗಳನ್ನು ರಚಿಸುತ್ತಿದ್ದ ಭಾರತೀಯರಲ್ಲಿ ಪ್ರಮುಖರು ಶಂಕರ್, ಟಿ.ಆರ್.ಮಹಾಲಿಂಗಮ್ (ಮಾಲಿ), ಅಹ್ಮದ್, ವಿಕ್ರಮ್ ವಮರ್ಾ, ಬೀರೇಶ್ವರ್, ಕುಟ್ಟಿ, ರಂಗ, ಆರ್.ಕೆ.ಲಕ್ಷ್ಮಣ್ ಮುಂತಾದವರು.

ಇತ್ತೀಚಿನ ದಿನಗಳಲ್ಲಿ ಪ್ರವಾದಿ ಮಹಮ್ಮದ್ರವರನ್ನು ವ್ಯಂಗ್ಯಚಿತ್ರಗಳಲ್ಲಿ ಚಿತ್ರಿಸಿ ಮುಸಲ್ಮಾನರನ್ನು ರೊಚ್ಚಿಗೆಬ್ಬಿಸುವ ಪ್ರಯತ್ನಗಳು ನಡೆಯುತ್ತಿವೆ. ಅಂತಹುದೇ ಒಂದು ಕೃತ್ಯ ಗಾಂಧಿಯವರ ಸಮಯದಲ್ಲಿ ಭಾರತದಲ್ಲಿ ನಡೆಯಿತು. ಅದರಲ್ಲಿ ಪ್ರವಾದಿಯ ವ್ಯಂಗ್ಯಚಿತ್ರವಿಲ್ಲದಿದ್ದರೂ ಪ್ರವಾದಿಯನ್ನು ಲೇವಡಿ ಮಾಡಲಾಗಿತ್ತು. 1923ರಲ್ಲಿ ಲಾಹೋರ್ನಲ್ಲಿನ ಪುಸ್ತಕ ಮಳಿಗೆ ಹೊಂದಿದ್ದ ಮಹಾಶಯ್ ರಾಜ್ಪಾಲ್ `ರಂಗೀಲಾ ರಸೂಲ್’ ಎಂಬ ಕೃತಿಯನ್ನು ಬರೆದು ಪ್ರಕಟಿಸಿದ. ಅದರಲ್ಲಿ ಪ್ರವಾದಿಯನ್ನು ಲೇವಡಿ ಮಾಡಲಾಗಿತ್ತು ಹಾಗೂ ಆತ ಅದನ್ನು ಇಸ್ಮಾಮಿನ ವಿದ್ವಾಂಸರ ಕೃತಿಗಳಿಂದಲೇ ವಸ್ತು ಪಡೆದು ಬರೆದು ಪ್ರಕಟಿಸಿರುವುದಾಗಿ ಹೇಳಿದ. ಮುಸಲ್ಮಾನರು ರೊಚ್ಚಿಗೆದ್ದರು. ಆಗ ಗಾಂಧಿ ತಮ್ಮ ವಾರಪತ್ರಿಕೆ `ಯಂಗ್ ಇಂಡಿಯಾ’ದಲ್ಲಿ, `ರಂಗೀಲಾ ರಸೂಲ್ ಪುಸ್ತಕವನ್ನು ಕೂಡಲೇ ಪ್ರಸರಣದಿಂದ ವಾಪಸ್ಸು ಪಡೆಯಬೇಕು ಹಾಗೂ ಅದನ್ನು ಬರೆದವನನ್ನು ಕಾನೂನಿನ್ವಯ ಶಿಕ್ಷೆಗೆ ಒಳಪಡಿಸಬೇಕು… ಭಾವೋದ್ರೇಕ ಕೆರಳಿಸುವುದನ್ನು ಹೊರತುಪಡಿಸಿ ಅಂತಹ ಕೃತಿಗಳನ್ನು ಬರೆದು ಪ್ರಕಟಿಸುವುದರ ಹಿಂದಿನ ಆಶಯ ಏನಿರಬಹುದೆಂದು ನಾನು ನನ್ನನ್ನೇ ಹಲವಾರು ಬಾರಿ ಕೇಳಿಕೊಂಡಿದ್ದೇನೆ. ಪ್ರವಾದಿಯನ್ನು ತೆಗಳುವುದರಿಂದಾಗಲೀ ಮತ್ತು ಲೇವಡಿ ಮಾಡುವುದರಿಂದಾಗಲೀ ಮುಸಲ್ಮಾನನನ್ನು ಅವರ ಶ್ರದ್ಧೆಯಿಂದ ದೂರಮಾಡಲಾಗದು ಹಾಗೂ ತನ್ನದೇ ನಂಬಿಕೆಯ ಬಗ್ಗೆ ಸಂದೇಹ ಹೊಂದಿರುವ ಹಿಂದೂವಿಗೂ ಅದು ಯಾವ ಒಳಿತನ್ನೂ ಮಾಡದು. ಆ ಕೃತಿಗೆ ಯಾವುದೇ ಮೌಲ್ಯವಿಲ್ಲ ಆದರೆ ಅದು ಮಾಡಬಹುದಾದ ಹಾನಿ ಅಪಾರ. ವಿವಿಧ ಶ್ರದ್ಧೆಗಳ ಬಗೆಗೆ ಸಹಿಷ್ಣುತೆ ತೋರುವಂತಹ ಸಾಹಿತ್ಯವನ್ನು ಪ್ರಕಟಿಸಿ ವಿತರಿಸಬೇಕು’ ಎಂದು ಬರೆದಿದ್ದರು. 1929ರ ಸೆಪ್ಟೆಂಬರ್ 6ರಂದು ಇಲಾಮ್ ದಿನ ಎಂಬಾತ ಮಹಾಶಯ್ ರಾಜ್ಪಾಲ್ನ ಅಂಗಡಿಗೆ ನುಗ್ಗಿ ಚಾಕುವಿನಿಂದ ತಿವಿದು ಕೊಂದ. ಇಲಾಮ್ ದಿನ್ನಿಗೆ ಕಾನೂನು ಶಿಕ್ಷೆಯಾಗಿ ಮರಣದಂಡನೆ ವಿಧಿಸಲಾಯಿತು.

ಗಾಂಧಿ 19ನೇ ಶತಮಾನದ ಅಂತ್ಯದಿಂದ ಸ್ವಾತಂತ್ರ್ಯ ಪಡೆಯುವವರೆಗೆ ಹಾಗೂ ಹಂತಕನ ಗುಂಡಿಗೆ ಬಲಿಯಾಗುವವರೆಗೂ ಚರಿತ್ರೆಯ ಇತರ ಮಾಧ್ಯಮಗಳಲ್ಲಿ ದಾಖಲಾದಂತೆ ಜಗತ್ತಿನೆಲ್ಲೆಡೆ ವ್ಯಂಗ್ಯಚಿತ್ರಗಳಲ್ಲೂ ದಾಖಲಾಗಿದ್ದಾರೆ. ಈಗಲೂ ಆಗೊಮ್ಮೆ ಈಗೊಮ್ಮೆ ನಮ್ಮ ಆತ್ಮಸಾಕ್ಷಿಯನ್ನು ಎಚ್ಚರಿಸುವವರಂತೆ ವ್ಯಂಗ್ಯಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಲೇ ಇದ್ದಾರೆ. ಬಾಬ್ರಿ ಮಸೀದಿಯನ್ನು ಕೆಡವಿದಾಗ ಗಾಂಧಿ ರಾಮಜನ್ಮಭೂಮಿಯಿಂದ ದೂರನಡೆಯುತ್ತಿರುವ ವ್ಯಂಗ್ಯಚಿತ್ರ ಪ್ರಕಟವಾಗಿತ್ತು.


ಚಿತ್ರಗಳ ವಿವರ (ಚಿತ್ರ ಕೃಪೆ: ನವಜೀವನ್ ಟ್ರಸ್ಟ್)

ಚಿತ್ರ 1: ಸ್ಟೀಮ್ ರೋಲರ್ ಮತ್ತು ಆನೆ: ಇಂಗ್ಲೆಂಡಿನ `ಸಂಡೇ ಟೈಮ್ಸ್’ನಲ್ಲಿ ಪ್ರಕಟವಾದ ಈ ವ್ಯಂಗ್ಯಚಿತ್ರವನ್ನು ಗಾಂಧಿ
ದಕ್ಷಿಣ ಆಫ್ರಿಕಾದಲ್ಲಿ ತಮ್ಮ `ಇಂಡಿಯನ್ ಒಪೀನಿಯನ್’ ಪತ್ರಿಕೆಯ 1908ರ ಜನವರಿ 11ರ ಸಂಚಿಕೆಯಲ್ಲಿ ಮರುಮುದ್ರಿಸಿ ವ್ಯಾಖ್ಯಾನಿಸಿದರು.

ಚಿತ್ರ 2: ಟ್ರಾನ್ಸ್ವಾಲ್ನಲ್ಲಿ ದೈತ್ಯಾಕಾರರಂತೆ ನಿಂತಿರುವ ಜನರಲ್ ಬೋತಾ ಮತ್ತು ಇತರ ಬೋಯರ್ ನಾಯಕರ
ಎದುರು ಕುಬ್ಜ ಗಾಂಧಿ ಎದೆಸೆಟೆಸಿ ನಿಂತು ಸಣ್ಣ ಪುಟ್ಟ ವ್ಯಾಪಾರಿಗಳನ್ನು ಅರೆಸ್ಟು ಮಾಡುವ ಬದಲು ನನ್ನನ್ನು ಅರೆಸ್ಟು ಮಾಡಿ ಎಂದು ಹೇಳುತ್ತಿದ್ದಾರೆ.

ಚಿತ್ರ 3: 1907ರಲ್ಲಿ ದಕ್ಷಿಣ ಆಫ್ರಿಕಾದ `ರ್ಯಾಂಡ್ ಡೈಲಿ ಮೇಲ್’ನಲ್ಲಿ ಪ್ರಕಟವಾದ ಈ ವ್ಯಂಗ್ಯಚಿತ್ರದಲ್ಲಿ 1907ರಲ್ಲಿ ದಕ್ಷಿಣ
ಆಫ್ರಿಕಾದ `ರ್ಯಾಂಡ್ ಡೈಲಿ ಮೇಲ್’ನಲ್ಲಿ ಪ್ರಕಟವಾದ ವ್ಯಂಗ್ಯಚಿತ್ರದಲ್ಲಿ ಗಾಂಧಿ ಕಣ್ಣುಮುಚ್ಚಿಕೊಂಡು ಗುಂಡು ನನ್ನ ಎದೆಗೇ ಹಾರಿಸು ಎಂದು ಹೇಳುವಂತೆ ಎದೆಯ ಮೇಲೆ ಕೈ ಇಟ್ಟುಕೊಂಡಿದ್ದಾರೆ ಆದರೆ ಗುಂಡು ಹಾರಿಸಲು ಹೊರಟ ಸಕರ್ಾರ ತಬ್ಬಿಬ್ಬಾಗಿ ಪಿಸ್ತೂಲು ನೆಲಕ್ಕೆ ಬಾಗಿಸಿ ನಿಂತಿದೆ.

ಚಿತ್ರ 4: ಲಂಡನ್ನಿನ `ಈವನಿಂಗ್ ಸ್ಟ್ಯಾಂಡರ್ಡ್ ‘ನಲ್ಲಿ 1927ರಲ್ಲಿ ಪ್ರಕಟವಾದ ಖ್ಯಾತ ಬ್ರಿಟಿಷ್ ವ್ಯಂಗ್ಯಚಿತ್ರಕಾರ ಡೇವಿಡ್
ಲೋನ ವ್ಯಂಗ್ಯಚಿತ್ರ. ಬ್ರಿಟಿಷ್ ಸರ್ಕಾರ ಸರ್ ಜಾನ್ ಸೈಮನ್ ಮುಂದಾಳತ್ವದ ಸೈಮನ್ ಆಯೋಗ ಭಾರತದಲ್ಲಿನ  ಆಡಳಿತದ ಕುರಿತ ವರದಿ ಸಲ್ಲಿಸುವಂತೆ ಕಳುಹಿಸಿದಾಗ ರಾಷ್ಟ್ರೀಯ ಕಾಂಗ್ರೆಸ್ ಅದನ್ನು ಧಿಕ್ಕರಿಸಿತು. ಭಾರತೀಯರೆದುರು ಫುಟ್ಬಾಲ್ ಆಟಕ್ಕೆ ಬಂದಂತಿರುವ ವೈಸರಾಯ್ ಲಾರ್ಡ್ ಇರ್ವಿನ್, ಕಾರ್ಯದರ್ಶಿ ವೆಡ್ಜ್ವುಡ್-ಬೆನ್ ಮತ್ತು ಸೈಮನ್ರವರು ಗಾಂಧಿಯ ಬೇಡಿಕೆ ನೋಡಿ ದಂಗಾಗಿದ್ದಾರೆ. ವ್ಯಂಗ್ಯಚಿತ್ರದಲ್ಲಿನ ಗಾಂಧಿಯ ಬೇಡಿಕೆಗಳು ಇಂತಿವೆ: ಆಟದಲ್ಲಿ ಅಂಪೈರ್ ಇರಬಾರದು, ಚೆಂಡು ಅಸ್ಪೃಶ್ಯವಾಗಿರಬೇಕು, ಆಟಕ್ಕೆ ಮೊದಲೇ ಪಾತಿತೋಷಕವನ್ನು ಕೊಟ್ಟುಬಿಡಬೇಕು.

ಚಿತ್ರ 5: ಯೂರೋಪಿಯನ್ ಮತ್ತು ಅಮೆರಿಕಾದ ಪತ್ರಿಕೆಗಳು ಗಾಂಧಿಯ ಅಸಹಕಾರ ಚಳುವಳಿ ಮತ್ತು ಸತ್ಯಾಗ್ರಹವನ್ನು
ಅತ್ಯಂತ ಕಾಳಜಿಯಿಂದ ವಿಸ್ತೃತವಾಗಿ ವರದಿ ಮಾಡುತ್ತಿದ್ದವು ಹಾಗೂ ಅಲ್ಲಿನ ವ್ಯಂಗ್ಯಚಿತ್ರಕಾರರು ಭಾರತದ ಸ್ವಾತಂತ್ರ್ಯವನ್ನು ಬೆಂಬಲಿಸುತ್ತಿದ್ದರು. ಜರ್ಮನಿಯ ಬಲರ್ಿನ್ನಲ್ಲಿನ `ಕ್ಲಾಡರಡ್ಯಾಚ್’ ಪತ್ರಿಕೆಯಲ್ಲಿ ಪ್ರಕಟವಾದ ಈ ವ್ಯಂಗ್ಯಚಿತ್ರದಲ್ಲಿ ಗಾಂಧಿ ಆನೆಯಮೇಲೆ ಕೂತು ಕೆಳಗೆ ಬ್ರಿಟಿಷರು ಹಿಂಸೆಯಿಂದ ದಮನಕ್ಕೆ ಪ್ರಯತ್ನಿಸುತ್ತಿದ್ದರೂ ಭಾರತವನ್ನು ಸ್ವಾತಂತ್ರ್ಯದೆಡೆಗೆ ಕೊಂಡೊಯ್ಯುತ್ತಿದ್ದಾರೆ.

ಚಿತ್ರ 6: ಜೆಕೊಸ್ಲಾವೇಕಿಯಾದ ಪ್ರಾಗ್ನಲ್ಲಿನ `ಪ್ರಾಗರ್ ಪ್ರೆಸ್’ನ ವ್ಯಂಗ್ಯಚಿತ್ರಕಾರ 1930ರ ಗಾಂಧಿಯ ದಂಡಿ ಯಾತ್ರೆ ಕಂಡಂತೆ.

ಚಿತ್ರ 7: ಗಾಂಧಿ 1930ರಲ್ಲಿ ದಂಡಿ ಪಾದಯಾತ್ರೆ ಹೋಗಿ ಉಪ್ಪಿನ ಸತ್ಯಾಗ್ರಹದ ಮೂಲಕ ದೊಡ್ಡ ಆಂದೋಲನ ಮಾಡಿ ಯಶಸ್ಸು ಗಳಿಸಿದ ವಿಷಯ ವ್ಯಂಗ್ಯಚಿತ್ರಕಾರರಿಗೆ ಹಬ್ಬದಂತಾಯಿತು. ಬ್ರಿಟಿಷ್ ಸಿಂಹದ ಬಾಲಕ್ಕೆ ಗಾಂಧಿ ಉಪ್ಪು ಹಚ್ಚುತ್ತಿರುವ ಥೀಮ್ ವಿದೇಶಿ ವ್ಯಂಗ್ಯಚಿತ್ರಕಾರರ ಇಷ್ಟದ ವಿಷಯವಾಯಿತು. ಲಂಡನ್ನಿನ `ಗ್ರಾಫಿಕ್’ ಪತ್ರಿಕೆಯಲ್ಲಿ ಪ್ರಕಟವಾದ ಇಟಲಿಯ ಕಲಾವಿದನೊಬ್ಬನ ವ್ಯಂಗ್ಯಚಿತ್ರ.

ಚಿತ್ರ 8: ದಂಡಿ ಸತ್ಯಾಗ್ರಹದ ಯಶಸ್ಸಿನಿಂದಾಗಿ ಬ್ರಿಟಿಷ್ ಸರ್ಕಾರ ಅದಕ್ಕೆ ದಮನಕ್ಕೆ ಕಠೋರ ಕ್ರಮಗಳನ್ನು ಅನುಸರಿಸಿತು.
ಗಾಂಧಿ ಅವುಗಳನ್ನು ನೋವು, ತ್ಯಾಗದಿಂದ ಪ್ರತಿಭಟಿಸಬೇಕೆಂದು ಕರೆನೀಡಿದರು. ಲಾರ್ಡ್ ಇರ್ವಿನ್ ಕೊನೆಗೂ ಗಾಂಧಿಯನ್ನು ಬಂಧಿಸಬೇಕಾಯಿತು. ಆಗ ಡೇವಿಡ್ ಲೋ ಬರೆದ ವ್ಯಂಗ್ಯಚಿತ್ರ. ಅದರಲ್ಲಿ ಹಲವಾರು ವಾರಗಳ ಸತತ ಪ್ರಯತ್ನದ ನಂತರ ಗಾಂಧಿ ಕೊನೆಗೂ ತಮ್ಮನ್ನು ಬಂಧಿಸಲು ಲಾರ್ಡ್ ಇರ್ವಿನ್  ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದಿತ್ತು.

ಚಿತ್ರ 9: ಗಾಂಧಿಯ ಮೇಕೆ ಹಾಲಿನ ಆಹಾರ ಬ್ರಿಟಿಷರಿಗೆ ಲೇವಡಿಯ ವಿಷಯವಾಗಿತ್ತು. ಲಂಡನ್ನಿನ `ಡೈಲಿ ಮೇಲ್’ನ ಪಾಯ್ ಎಂಬ ವ್ಯಂಗ್ಯಚಿತ್ರಕಾರ ಮೇಕೆಗಳೂ ತಮ್ಮನ್ನು ಲಂಡನ್ನಿಗೆ ಕರೆದೊಯ್ಯುವಂತೆ ಗಾಂಧಿಯ ದುಂಬಾಲು ಬಿದ್ದಿರುವ ವ್ಯಂಗ್ಯಚಿತ್ರ ಪ್ರಕಟಿಸಿದ.

ಚಿತ್ರ 10: ಗಾಂಧಿ ದುಂಡು ಮೇಜಿನ ಪರಿಷತ್ತಿಗೆ ಇಂಗ್ಲೆಂಡಿಗೆ ಹೊರಟಾಗ ಅಮೆರಿಕಾದ `ಲೈಫ್’ ಪತ್ರಿಕೆಯಲ್ಲಿ ಪ್ರಕಟವಾದ ವ್ಯಂಗ್ಯಚಿತ್ರವೊಂದರಲ್ಲಿ ಕಸ್ಟಮ್ಸ್ ಅಧಿಕಾರಿಗಳು ಗಾಂಧಿಯ ದೊಡ್ಡ ಸೂಟ್ಕೇಸ್ ತಪಾಸಣೆಗೆ ತೆರೆದಾಗ ಅದರಲ್ಲಿ ಕೇವಲ ಲಂಗೋಟಿ ಮಾತ್ರ ಇರುವುದನ್ನು ಕಂಡು ತಬ್ಬಿಬ್ಬಾಗಿದ್ದಾರೆ.

ಚಿತ್ರ 11: ಇಂಗ್ಲೆಂಡಿನಲ್ಲಿ ಲಂಗೋಟಿ ಧರಿಸಿ ಹೊರಟಿದ್ದ ಗಾಂಧೀ ಮತ್ತು ಕಿಂಗ್ ಜಾರ್ಜ್ ಭೇಟಿ ವ್ಯಂಗ್ಯಚಿತ್ರಕಾರರಿಗೆ ಕುತೂಹಲದ ವಿಷಯವಾಗಿತ್ತು.

ಚಿತ್ರ 12: ಲಾರ್ಡ್ ವಿಲ್ಲಿಂಗ್ಡನ್ ಗಾಂಧಿಯನ್ನು ಯೆರವಾಡ ಸೆರೆಮನೆಯಲ್ಲಿ ಬಂಧಿಸಿ ಹಿಂದಿರುಗಿ ನೋಡಿದರೆ ಬಂಧನಕ್ಕೊಳಗಾಗಲು ಕಾತುರದಿಂದ ಕಾದಿರುವ ಸಾವಿರಾರು ಗಾಂಧಿಗಳನ್ನು ಕಂಡು ತಬ್ಬಿಬ್ಬಾಗುತ್ತಾನೆ. ಶಂಕರ್ರವರ ವ್ಯಂಗ್ಯಚಿತ್ರ.

ಚಿತ್ರ 13: ಭಾರತ-ಪಾಕಿಸ್ತಾನ ವಿಭಜನೆಯನ್ನು ತಡೆಯಲು ಗಾಂಧಿ ಎಷ್ಟು ಪ್ರಯತ್ನಪಟ್ಟರೂ ಸಾಧ್ಯವಾಗುವುದಿಲ್ಲ. ಭಾರತವೆಂಬ ಟ್ರೈನ್ ಹಳಿತಪ್ಪುವುದೆಂಬ ಎಚ್ಚರಿಕೆ ನೀಡುವ ಕೆಂಪು ಭಾವುಟ ಹಿಡಿದಿರುವ ಗಾಂಧಿ- ಶಂಕರ್ರವರ ವ್ಯಂಗ್ಯಚಿತ್ರ.

ಚಿತ್ರ 14: ಎರಡನೇ ವಿಶ್ವಯುದ್ಧದ ಸಮಯದಲ್ಲಿ 1942ರ ಆಗಸ್ಟ್ 24ರ `ಲೈಫ್’ ಪತ್ರಿಕೆಯಲ್ಲಿ `ಅಮೆರಿಕದ ವ್ಯಂಗ್ಯಚಿತ್ರಕಾರರು ಗಾಂಧಿಯನ್ನು ಒಬ್ಬ ದಡ್ಡ ಹಾಗೂ ದ್ರೋಹಿಯನ್ನಾಗಿ ಚಿತ್ರಿಸುತ್ತಿದ್ದಾರೆ’ ಎಂಬ ಲೇಖನ.

‍ಲೇಖಕರು G

October 2, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. Jayaram

    Sir, Idondu olleya lekhana.
    Heegiddoo vyangya chitragalu Fine arts college galalli subject agilla yake ennuvude ondu acchari. bahusha adu fine arts gintalu meerida kala prakara anta khushi padabahuda?
    Thank you.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: