'ಬಾಡಿಗೆ ಹಂತಕರನ್ನು ಹುಟ್ಟುಹಾಕಿದ ನಮ್ಮ ವ್ಯವಸ್ಥೆ' – ಜಿ ಪಿ ಬಸವರಾಜು

gp-4

ಜಿ ಪಿ ಬಸವರಾಜು

ಹಿರಿಯ ವಿದ್ವಾಂಸ ಡಾ.ಎಂ.ಎಂ.ಕಲಬುಗರ್ಿ ಅವರ ಹತ್ಯೆಯ ಕಾರಣಗಳನ್ನು ಪೊಲೀಸರು ಹುಡುಕುತ್ತಿದ್ದಾರೆ. ಕೆಲವೇ ದಿನಗಳಲ್ಲಿ ಈ ಹತ್ಯೆಯ ಕಾರಣ ಹೊರಬರಬಹುದು. ಈಗ ತಿಳಿದಿರುವ ಸಂಗತಿಗಳಲ್ಲಿ ಒಂದು ಮಾತ್ರ ಯಾವ ಊಹೆಗಳಿಗೂ ಅವಕಾಶವಿಲ್ಲದ ರೀತಿಯಲ್ಲಿ ಸ್ಪಷ್ಟವಾಗಿದೆ. ಗುಂಡಿಟ್ಟವನು ಒಬ್ಬ ವೃತ್ತಿಪರ ಹಂತಕ.

ಕಲಬುರ್ಗಿಯವರನ್ನು ಕೊನೆಗಾಣಿಸಲು ಬಂದವರಲ್ಲಿ ಇಬ್ಬರಿದ್ದರು; ಬೈಕ್ನಲ್ಲಿ ಬಂದರು; ಒಬ್ಬ ಗುಂಡಿಕ್ಕಿದ. ಇನ್ನೊಬ್ಬ ಬೈಕನ್ನು ಚಾಲಿತ ಸ್ಥಿತಿಯಲ್ಲಿಯೇ ಇಟ್ಟುಕೊಂಡಿದ್ದ; ಗುಂಡಿಕ್ಕಿ ಬಂದವನನ್ನು ಬೈಕ್ ಮೇಲೆ ಕೂಡಿಸಿಕೊಂಡು ಪರಾರಿಯಾದ; ಇಬ್ಬರೂ 25ರ ಆಸುಪಾಸಿನ ಯುವಕರೇ. ಗುಂಡಿಕ್ಕಿದ್ದು ಮಾತ್ರ ನಿಜ. ಉಳಿದ ಅಂಶಗಳು ಇನ್ನೂ ಬೆಳಕಿಗೆ ಬರಬೇಕಾಗಿದೆ. ಈಗ ಹೇಳುತ್ತಿರುವ ಅನೇಕ ಸಂಗತಿಗಳು ಊಹೆಯ ಆಚೆ ಈಚಿನವು.

ಅಂದು ಬೆಳಗಿನಲ್ಲಿ ಕಲ್ಬುರ್ಗಿಯವರಿಗೆ ಗುಂಡಿಕ್ಕಿದ ವೃತ್ತಿಪರ ಹಂತಕನಿಗೆ ಧಾರವಾಡದ ಚೆಲುವು ತಿಳಿದಿರಲಾರದು. ಹಾಗೆಯೇ ಕಲ್ಯಾಣ ನಗರದ ಪ್ರಾಶಂತತೆಯ ಅರಿವೂ ಇರಲಾರದು. ಕಲುಬುರ್ಗಿಯವರ ವ್ಯಕ್ತಿತ್ವ, ಅದರ ಆಳ ವಿಸ್ತಾರಗಳು, ಐದು ದಶಕಗಳಿಗೂ ಹೆಚ್ಚಿನ ಕಾಲಾವಧಿಯಲ್ಲಿ ಅವರು ಕೈಗೊಂಡ ಮಹತ್ವದ ಸಂಶೋಧನೆ, ಅನೇಕ ಸಂಗತಿಗಳ ಮೇಲೆ ಈ ಸಂಶೋಧನೆ ಬೆಳಕು ಚೆಲ್ಲಿದ ರೀತಿ ಇತ್ಯಾದಿ ಯಾವುದೂ ಅವನಿಗೆ ತಿಳಿದಿರುವ ಸಾಧ್ಯತೆ ತೀರ ಕಡಿಮೆ. ಅದನ್ನೆಲ್ಲ ಪರಾಂಬರಿಸುವ ವ್ಯವಧಾನವೂ ಅವನಿಗೆ ಇದ್ದಿರಲಾರದು.

ವೃತ್ತಿಪರನಿಗೆ ತನ್ನ ಗುರಿಯ ಹೊರತು ಬೇರೇನೂ ಕಾಣುವುದಿಲ್ಲ. ಕೊಂದು ಕೊನೆಗಾಣಿಸಿ ಬಂದರೆ ಇಂತಿಷ್ಟು ಲಕ್ಷ ರೂಪಾಯಿ ಸಿಕ್ಕುತ್ತದೆ ಎಂಬುದಷ್ಟೇ ಅವನ ಪ್ರಜ್ಞೆಯಲ್ಲಿರುತ್ತದೆ. ಹಣದ ಆಮಿಶವನ್ನು ಒಡ್ಡುವ ಅನೇಕ ವೃತ್ತಿಗಳು ನಮ್ಮಲ್ಲಿವೆ. ಧಾರಾಳವಾಗಿ ಹಣವನ್ನು ಸುರಿಯುವವರೂ ಇದ್ದಾರೆ.

0

ಹಣ ಉಳಿದೆಲ್ಲ ಮೌಲ್ಯಗಳನ್ನು ಕಳಾಹೀನವಾಗಿ ಮಾಡಿರುತ್ತದೆ. ಹಣಕ್ಕಾಗಿ ಹಗಲು ರಾತ್ರಿಗಳನ್ನು ಮರೆತು, ತಮ್ಮ ಆರೋಗ್ಯವನ್ನು ಮರೆತು, ಮನುಷ್ಯ ಸಂಬಂಧಗಳನ್ನು ಲೆಕ್ಕಿಸದೆ ದುಡಿಯುವ ಯುವಕರನ್ನು ಮತ್ತು ಅವರನ್ನು ಆಕಷರ್ಿಸುವ ಹಲವು ರೂಪದ ಉದ್ಯೋಗಗಳನ್ನು ನಾವು ನೋಡುತ್ತಿದ್ದೇವೆ. ಇದು ಕೇವಲ ಕರ್ನಾಟಕಕ್ಕೆ ಅಥವಾ ಭಾರತಕ್ಕೆ ಸೀಮಿತವಾಗಿಲ್ಲ. ಜಗತ್ತಿನ ಅನೇಕ ರಾಷ್ಟ್ರಗಳ ಸ್ಥಿತಿ ಇದೇ ಆಗಿದೆ. ಹಣವನ್ನು ಪರಮ ಮೌಲ್ಯವೆಂದು ಗೌರವಿಸಿದ ರಾಷ್ಟ್ರಗಳು ಮುಟ್ಟಬೇಕಾದ ಕೊನೆಯ ಗುರಿ ಇದು.

ಗಾಂಧೀತತ್ವಗಳಲ್ಲಿ ಅಥವಾ ಬುದ್ಧ, ಬಸವ ಮೊದಲಾದ ಚಿಂತಕರ ತತ್ವಗಳಲ್ಲಿ ಹಣ ಕಾಯಕದ ಪ್ರತಿಫಲವಾಗಿತ್ತು. ತನ್ನ ದುಡಿಮೆಗೆ ನ್ಯಾಯಬದ್ಧವಾಗಿ ಸಲ್ಲಬೇಕಾದ ಪ್ರತಿಫಲ ಮಾತ್ರ ಹಣ; ಉಳಿದದ್ದು ಮುಟ್ಟಬಾರದ ವಸ್ತು. ದುಡಿಯದೆ ತಿನ್ನುವುದು ‘ಪಾಪ.’ ಈ ಮೌಲ್ಯ ಎಂದೋ ಎಗರಿ ಹೋಯಿತು. ಕೈಗಾರಿಕೀಕರಣ, ಬಂಡವಾಳದ ಆಶಯಗಳು, ದುಡಿಮೆಯ ಶೋಷಣೆಗೆ ದಾರಿ ಮಾಡಿಕೊಟ್ಟವು. ಕಳೆದ ಎರಡು ಮೂರು ದಶಕಗಳಲ್ಲಾದ ಜಾಗತಿಕ ವಿದ್ಯಮಾನಗಳು, ಪಲ್ಲಟಗಳು ಹಣದ ಬೆನ್ನು ಹತ್ತುವಂತೆ ಮಾಡಿದವು. ಈಗ ಜಗತ್ತಿನಾದ್ಯಂತ ಹರಿಯುತ್ತಿರುವುದು ಹಣದ ಹೊಳೆಯೇ. ಇದಕ್ಕೆ ಮುಖ ತಿರುಗಿಸಿ ನ್ಯಾಯಬದ್ಧ ದುಡಿಮೆ, ದುಡಿಯುವ ಕೈಗಳಿಗೆಲ್ಲ ಕೆಲಸ, ರಾಷ್ಟ್ರದ ಪ್ರತಿಯೊಬ್ಬನಿಗೂ ಸಲ್ಲಬೇಕಾದ ಪಾಲು, ವ್ಯಕ್ತಿ ಘನತೆ, ಗೌರವ, ವ್ಯಕ್ತಿ ಸ್ವಾತಂತ್ರ್ಯ- ಇಂಥ ಮೌಲ್ಯಗಳಿಗೆ ತಮ್ಮನ್ನು ಕೊಟ್ಟುಕೊಂಡ ರಾಷ್ಟ್ರಗಳು ಜಗತ್ತಿನಲ್ಲಿ ಎಲ್ಲಿವೆ- ಎಂಬುದನ್ನು ಹುಡುಕಬೇಕಾಗಿದೆ.

ಬಾಡಿಗೆ ಹಂತಕ ಎಂಬುದೂ ಒಂದು ವೃತ್ತಿಯಾಗುವ ಹಂತಕ್ಕೆ ಬಂದು ನಾವು ತಲುಪಿದ್ದೇವೆ. ಈ ಹಂತವನ್ನು ತಲುಪಿದ ಯಾವ ರಾಷ್ಟ್ರದಲ್ಲೂ ಪ್ರಜಾಪ್ರಭುತ್ವ, ವ್ಯಕ್ತಿಯ ಘನತೆ, ಸ್ವಾತಂತ್ರ ಇತ್ಯಾದಿ ಮೌಲ್ಯಗಳು ಇರುವುದು ಕಷ್ಟ. ಒಂದು ಹತ್ಯೆಗೆ ಮತ್ತೊಂದು ಹತ್ಯೆ, ಸೇಡಿಗೆ ಸೇಡು, ವ್ಯಕ್ತಿಯ ಮೇಲಾಟ ಇಂಥವೇ ವಿಜೃಂಭಿಸುತ್ತವೆ. ಹಂತಕರನ್ನು ನಾವು ತಯಾರು ಮಾಡುತ್ತೇವೆ. ಅವರಿಗೆ ಅಗತ್ಯ ತರಬೇತಿಯನ್ನು ಕೊಡುತ್ತೇವೆ. ಅದಕ್ಕೆ ಪ್ರತಿಫಲವನ್ನೂ ನಿರ್ಣಯಿಸುತ್ತೇವೆ. ಇದು ಕಟು ವಾಸ್ತವ.

ನಮಗೆ ಸ್ವಾತಂತ್ರ್ಯ ಸಿಕ್ಕು 67 ವರ್ಷಗಳು ಜಾರಿವೆ. ಅನೇಕ ಏಳುಬೀಳುಗಳ ನಡುವೆಯೂ ನಮ್ಮಲ್ಲಿ ಇನ್ನೂ ಪ್ರಜಾಪ್ರಭುತ್ವ ಉಳಿದಿದೆ. ಆದರೆ ಇದು ಶಾಶ್ವತವಾಗಿ ಉಳಿದಿರುತ್ತದೆ ಎಂದು ಹೇಳಲಾಗದ ಸ್ಥಿತಿಯಲ್ಲಿ ನಾವಿದ್ದೇವೆ. ಪ್ರತಿಯೊಬ್ಬನಿಗೂ ಅನ್ನ ಎಷ್ಟು ಮುಖ್ಯವೋ, ಅರಿವೂ ಅಷ್ಟೇ ಮುಖ್ಯ. ನಮ್ಮ ಸುದೀರ್ಘ ಪ್ರಜಾಪ್ರಭುತ್ವದ ಅವಧಿಯಲ್ಲಿ ನಾವು ಮೂಡಿಸಿರುವ ಅರಿವು ಎಷ್ಟು? ಅಕ್ಷರವೇ ಅರಿವಲ್ಲ ಎಂಬುದನ್ನು ನಾವು ಕಂಡುಕೊಂಡಿದ್ದೇವೆ. ಮಾನವ ಸಂಬಂಧಗಳ ಮೇಲೆ ಕಟ್ಟಬೇಕಾದ ರಾಷ್ಟ್ರವನ್ನು ಬೃಹತ್ ಯೋಜನೆಗಳ, ಬಂಡವಾಳಗಳ, ಮಾರಾಟಗಳ ಮೂಲಕ ಕಟ್ಟಲು ನೋಡಿ ಸೋತಿದ್ದೇವೆ. ನಾವು ನಂಬಿಕೊಂಡಿರುವ ರಾಜಕಾರಣವೆ ಹಾಗಿದೆ.

ನಮ್ಮ ಚುನಾವಣೆಗಳ ಮೇಲೆ ಇನ್ನೂ ಭರವಸೆ ಇಡಬಹುದೇ? ನಮ್ಮ ರಾಜಕಾರಣದ ಮೇಲೆ ಅಷ್ಟೇ ಭರವಸೆಯನ್ನಿಡಲು ಸಾಧ್ಯವೇ? ಬಹುಮುಖೀ ಸಮಾಜ ಎಂದು ಹೆಮ್ಮೆಯಿಂದ ಹೇಳಿಕೊಂಡರೂ, ಅದನ್ನು ಉಳಿಸಿಕೊಳ್ಳಲು ಅಗತ್ಯವಾದ ಸಹನೆ, ಪ್ರೀತಿ, ಗೌರವ, ವಿಚಾರಗಳ ಸಂವಾದ ಸಾಧ್ಯವಾಗದಂತೆ ಮಾಡಿದ್ದೇವೆಯೇ? ಇವತ್ತಿಗೂ ನಮ್ಮ ರಾಜಕಾರಣ ನಿಂತಿರುವುದು ಹಣದ ಮೇಲೆ; ಜಾತಿಯ ಮೇಲೆ; ಜನರ ಮೌಢ್ಯವನ್ನು ಬಂಡವಾಳ ಮಾಡಿಕೊಂಡ ಹುನ್ನಾರಗಳ ಮೇಲೆ. ಇವುಗಳನ್ನೇ ಬಿತ್ತಿಬೆಳೆದಿರುವ ನಾವು ಮಠಗಳನ್ನು ಕಟ್ಟಿದ್ದೇವೆ; ಧರ್ಮಕ್ಷೇತ್ರಗಳನ್ನು ಕಟ್ಟಿದ್ದೇವೆ. ಕಪ್ಪು ಹಣವನ್ನು, ಕಪ್ಪು ಕೃತ್ಯಗಳನ್ನು ಬೆಂಬಲಿಸುವ ಮೌಲ್ಯವನ್ನೇ ವೃದ್ಧಿಸಿದ್ದೇವೆ.

ಇಂಥ ಸ್ಥಿತಿಯಲ್ಲಿ ಧರ್ಮಗಳ ಮೂಲ ಸ್ವರೂಪ, ಅವು ಹೇಳುವ ಮನುಷ್ಯ ಪ್ರೀತಿ, ಪರಸ್ಪರ ಸಹನೆ, ಸಹಕಾರಗಳು, ವ್ಯಕ್ತಿಯ ಘನತೆ, ದುಡಿಮೆಯ ಮಹತ್ವ ಇತ್ಯಾದಿ ಮಹತ್ವದ ಸಂಗತಿಗಳು ಉಳಿದಿರುವುದಿಲ್ಲ. ವೈಚಾರಿಕ ಚಿಂತನೆ ಎಂಬುದು ಧರ್ಮದ ಟೀಕೆಯಾಗಿ ಮಾತ್ರ ಕಾಣಿಸುತ್ತದೆ. ಸತ್ಯದ ಬೆಳಕಿನಲ್ಲಿ ಅನೇಕ ಸಂಗತಿಗಳನ್ನು ಪರೀಕ್ಷಿಸಬೇಕಾದ ಮನೋಧರ್ಮವೇ ಇಲ್ಲವಾಗಿ ಸತ್ಯ ಎನ್ನುವುದು ಒಂದು ಹುನ್ನಾರದಂತೆ ಕಾಣಿಸುತ್ತದೆ. ಕಲಬುಗರ್ಿ ಅವರು ಹೇಳಿದ ಸತ್ಯಗಳು ಅರ್ಧ ಸತ್ಯಗಳಾಗಿರಬಹುದು. ಅಥವಾ ಸತ್ಯದ ಬೇರೆಯ ಮುಖಗಳೇ ಆಗಿರಬಹುದು. ಅಥವಾ ಸತ್ಯಗಳೆಂದು ಒಪ್ಪದ ಸಂಗತಿಗಳೂ ಆಗಿರಬಹುದು. ಅದು ನಿರ್ಣಯವಾಗುವುದು ಗಂಭೀರ ಸಂವಾದದಿಂದ. ಸತ್ಯದ ವಿಚಾರದಲ್ಲಿ ಯಾರದೂ ಕೊನೆಯ ಮಾತಾಗಿರಬೇಕಾಗಿಲ್ಲ. ಆದರೆ ಒಬ್ಬ ತನ್ನ ಶ್ರಮದಿಂದ, ವಿದ್ವತ್ತಿನಿಂದ, ಹರಿತ ವಿಶ್ಲೇಷಣೆಯಿಂದ ಮಂಡಿಸಿದ ವಿಚಾರಗಳು ಚರ್ಚೆಗೆ, ಸಂವಾದಕ್ಕೆ ದಾರಿ ಮಾಡಿಕೊಡುತ್ತವೆ. ಅದನ್ನು ಸಹನೆಯಿಂದ ನೋಡುವ ಮನೋಭಾವ ಯಾವುದೇ ಪ್ರಜಾಪ್ರಭುತ್ವದಲ್ಲಿ ಇರಬೇಕಾದ ಮೌಲ್ಯ. ಇದನ್ನು ನಾವು ಧಿಕ್ಕರಿಸಿ, ‘ಸತ್ಯ’ ಹೇಳಿದವನನ್ನು ಗುಂಡಿಕ್ಕಿ ಕೊಲ್ಲುವುದು ಪ್ರಜಾಪ್ರಭುತ್ವ ಮೌಲ್ಯವಾಗಲಾರದು. ಅದು ಫ್ಯಾಸಿಸ್ಟ್ ರಾಷ್ಟ್ರದಲ್ಲಿ ಮಾತ್ರ ಸಾಧ್ಯವಾಗುವ ಸಂಗತಿ. ಹಿಂಸೆಯ ಆರಾಧನೆ ಎಂದೂ ಒಪ್ಪತಕ್ಕ ಮಾತಲ್ಲ.

ಪ್ರಜಾಪ್ರಭುತ್ವದ ಹೆಸರಿನಲ್ಲಿ ನಾವು ರೂಪಿಸಿರುವ ಸಮಾಜದಲ್ಲಿ ಮೌಲ್ಯಗಳು ತಲೆಕೆಳಗಾಗಿವೆ. ಬಂದೂಕಗಳು ಸುಲಭವಾಗಿ ಸಿಕ್ಕುವ, ಹಂತಕರನ್ನು ಹೆಚ್ಚು ಶ್ರಮವಿಲ್ಲದೆ ಪಡೆಯುವ ವ್ಯವಸ್ಥೆಯನ್ನು ನಾವು ಕಟ್ಟಿಕೊಂಡಿದ್ದೇವೆ. ಮೌಲ್ಯಗಳ ಮಾತಿರಲಿ, ಮನುಷ್ಯ ಸಹಜವಾದ ಪ್ರೀತಿ ಗೌರವಗಳು, ಸಂಬಂಧಗಳು ಚಿಗುರುವಂತೆ ನಾವು ನೋಡಿಕೊಂಡಿದ್ದರೆ, ಗುಂಡಿಕ್ಕುವ ಬಾಡಿಗೆ ಹಂತಕನಲ್ಲೂ ಒಂದು ಕ್ಷಣ ಅನುಕಂಪದ ಅಲೆ ಏಳುವ ಸಾಧ್ಯತೆ ಇರುತ್ತದೆ. ಇವತ್ತು ಎಂಥ ಭೀಕರ ಸನ್ನಿವೇಶದಲ್ಲಿ ನಾವು ಬದುಕುತ್ತಿದ್ದೇವೆ ಎಂದರೆ ಪ್ರತಿಯೊಬ್ಬ ನಾಗರಿಕನ ಹಿಂದೆಯೂ ಒಬ್ಬ ಪೊಲೀಸ ಇಲ್ಲವೇ ಅಂಗರಕ್ಷಕ ಇರಬೇಕಾದ ಪರಿಸ್ಥಿತಿ ಹುಟ್ಟಿಕೊಂಡಿದೆ. ಮೌಢ್ಯಗಳನ್ನು ಮೌಢ್ಯಗಳೆಂದು ತೋರಿಸುವುದೂ ಪ್ರಚಂಡ ಧೈರ್ಯದ ಸಂಗತಿಯಾಗಿ ತೋರುತ್ತಿದೆ.

ಇದನ್ನು ಬದಲಾಯಿಸುವುದು ಸಾಧ್ಯವಿಲ್ಲವೇ? ಯಾರು ಬದಲಾಯಿಸಬೇಕು. ನಮ್ಮ ಜನಪ್ರತಿನಿಧಿಗಳ, ನಮ್ಮ ರಾಜಕಾರಣದ ಸ್ವರೂಪವನ್ನು ಕುರಿತು ಗಂಭೀರವಾಗಿ ಯೋಚಿಸುವ ಸಮಾಜದಲ್ಲಿ ಇದು ಸಾಧ್ಯ. ಚುನಾವಣೆ ಎನ್ನುವುದು ಆ ಹೊತ್ತಿನ ಒಂದು ಘಟನೆ ಮಾತ್ರವಲ್ಲ, ಅದು ಒಂದು ಸಮಾಜವನ್ನು ಸರಿಯಾದ ರೀತಿಯಲ್ಲಿ ಮುನ್ನಡೆಸುವ ಮುಖ್ಯವಾದ ರಾಜಕೀಯ ಪ್ರಕ್ರಿಯ ಎಂಬು ಅರಿವು ನಮ್ಮಲ್ಲಿ ಮೂಡುವುದು ಸಾಧ್ಯವಾದಾಗ ಮಾತ್ರ ಈ ಪಲ್ಲಟ ಸಾಧ್ಯ. ಭ್ರಷ್ಟಾಚಾರ ಎನ್ನುವುದು ಕೇವಲ ಹಣದ ಸುತ್ತ ಇರುವ ಸಂಗತಿಯಲ್ಲ, ನಮ್ಮ ಬದುಕಿನ ಎಲ್ಲ ಹಾಸು ಹೊಕ್ಕಿನಲ್ಲಿಯೂ ಜಾಗಕೇಳುವ, ಮೌಲ್ಯಗಳನ್ನು ತಲೆಕೆಳಗೆ ಮಾಡುವ ಸಾಮಥ್ರ್ಯ ಹೊಂದಿರುವ ಪ್ರಬಲ ಶಕ್ತಿ ಎಂದುನ್ನೂ ನಾವು ಅರಿಯಬೇಕಾಗಿದೆ. ಇಲ್ಲವಾದರೆ ಹತ್ಯೆಗಳು, ಬಾಡಿಗೆಯ ಹಂತಕರು ಹೆಚ್ಚುವ, ಅದನ್ನು ಒಪ್ಪಿಕೊಳ್ಳುವ ಸಮಾಜವೇ ನಮ್ಮದಾಗಿರುತ್ತೆ.

‍ಲೇಖಕರು avadhi-sandhyarani

September 7, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: