'ಬಹುರೂಪಿ ಗಿರೀಶ್ ಕಾರ್ನಾಡ್' ಹೀಗಿದೆ..

ಕಂಡಂತೆ ಕಾರ್ನಾಡ್ 
ಡಾ ಪಲ್ಲವಿ ಹೆಗಡೆ

‘ಬಹುರೂಪಿ’ ಪ್ರಕಟಿತ ‘ಬಹುರೂಪಿ ಗಿರೀಶ್ ಕಾರ್ನಾಡ್’- ವಿದಾಯದ ಚಿತ್ರಗಳು, ಪುಸ್ತಕದ ಓದಿನ ಟಿಪ್ಪಣಿ. 

ಸವೆದಷ್ಟೂ ಪರಿಮಳ ಸೂಸುವ ಚಂದನದ ಚೈತನ್ಯ ಹೊತ್ತವರು ಗಿರೀಶ್ ಕಾರ್ನಾಡರು. ಅಗಲಿಕೆ ಎಂಬುದು ದೈಹಿಕವೋ, ಮಾನಸಿಕವೋ ಇದು ಅವರವರ ಆಯ್ಕೆಗೆ ಬಿಟ್ಟಿದ್ದು. ಚಿಂತನೆಗಳ ಬಯಲನ್ನು ತೆರೆದು ತಮ್ಮ ಕೃತಿಗಳ ಮೂಲಕ ದಾಖಲಿಸಿದ ಹಿರಿಯರ ಜೀವನ ‘ಅಮೃತ’.
ಹಾಗಾಗಿ ಕಾರ್ನಾಡರು ನಮ್ಮನ್ನು ಅಗಲಲಿಲ್ಲ ಎಂದು ನನಗೆ ಅನಿಸುತ್ತದೆ. ಅವರು ದೈಹಿಕವಾಗಿ ಪ್ರಾಪಂಚಿಕ ಜಂಜಾಟಗಳ ತೊರೆದು, ಇನ್ನೊಂದು ವಾರಕ್ಕೆ ಒಂದು ತಿಂಗಳು. ತಿಂಗಳೊಳಗೆ ಅವರ ವಿದಾಯದ ಚಿತ್ರಗಳು, ಒಡನಾಡಿಗಳ ನೆನಪಿನ ಬರೆಹಗಳ ಮೂಲಕ, ಜೋಗಿಯವರ ಶ್ರಮದಿಂದ ಸಂಕಲನಗೊಂಡು ನಮಗೆಲ್ಲಾ ಓದಲು ಸಿಗುತ್ತಿದೆ. ಹಾಗಾಗಿ ಅವರು ಮತ್ತೆ ನಮ್ಮ ಮನಸ್ಸಿನಲ್ಲಿ ನೆಲೆಯಾಗುತ್ತಾರೆ.
ನಾನು ಕಾರ್ನಾಡರನ್ನು ಮುಖತಃ ಕಂಡಿಲ್ಲ. ಆದರೇನಂತೆ, ಅವರ ಅಭಿನಯ, ನಾಟಕ, ಆತ್ಮಕಥೆ, ನಿರ್ದೇಶಿಸಿದ ಸಿನೇಮಾಗಳ ಬಗ್ಗೆ ಅಲ್ಪವಾದರೂ ಗೊತ್ತು. ಹತ್ತಿರದಿಂದ ಬಲ್ಲ, ಯಾವುದೋ ಕೆಲಸದ ನಿಮಿತ್ತ ಅವರನ್ನು ಭೇಟಿಯಾದ, ಜೊತೆಗೆ ನಟಿಸುವಾಗ, ನಿರ್ದೇಶಿಸುವಾಗ, ನಾಟಕಗಳ ಪ್ರಕಾಶಿಸುವಾಗ ಹೀಗೆ ಒಡನಾಡಿದವರ ಸುಮಾರು ನಲವತ್ತು ನೆನಪಿನ, ಅನುಭವದ ಬರಹಗಳ ಸಂಗ್ರಹ ಕಾರ್ನಾಡರನ್ನು ಮತ್ತೊಂದಿಷ್ಟು ಕಂಡಂತೆ ಅನಿಸುತ್ತದೆ.
ಕನ್ನಡ, ಹಿಂದಿ, ಮರಾಠಿ, ತಮಿಳು, ತೆಲುಗು, ಮಲಯಾಳಂ ಚಲನಚಿತ್ರಗಳಲ್ಲಿ ಅವರು ನಿರ್ದೇಶನ, ಅಭಿನಯದಿಂದಾಗಿ ಕಾರ್ನಾಡರು ಬಹುಜನರ ಪ್ರಿಯರು. ಈ ಪುಸ್ತಕವನ್ನು ಓದುವಾಗ ವಿಭಿನ್ನ ವ್ಯಕ್ತಿತ್ವಗಳೊಂದಿಗೆ ಕಾರ್ನಾಡರು ಹೇಗಿದ್ದರು ಎಂಬುದು ತಿಳಿಯುತ್ತದೆ.
ಹಲವು ಇಂಗ್ಲೀಷ್ ಮೂಲದ ಬರೆಹಗಳನ್ನು ವಿಕಾಸ್ ನೆಗಿಲೋಣಿ ಕನ್ನಡಕ್ಕೆ ಅಷ್ಟೇ ನೈಜವಾಗಿ ಅನುವಾದಿಸಿದ್ದಾರೆ. ಕಾರ್ನಾಡರ ಮಗ ರಘು ಕಾರ್ನಾಡ್ ಅಪ್ಪನ ಕೊನೆಯ ಕ್ಷಣಗಳ ಬಗ್ಗೆ ಬರೆದಿದ್ದಾರೆ. ಸ್ವತಃ ವಿಕಾಸ್ ಅವರು ಕಾರ್ನಾಡರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ನಡೆದ ಮಾತುಕಥೆಗಳ ಅನುಭವವನ್ನು ಬರೆದಿದ್ದಾರೆ. ಶಿರಸಿಯ ಬಾಲ್ಯವನ್ನು ನೆನೆಯುತ್ತಾರೆ.
ಹಿರಿಯನಟ ಅನಂತನಾಗ್ ಅವರು ಶಂಕರನಾಗ್ ಅವರೊಂದಿಗಿನ ಸಿನೇಮಾ, ನಿರ್ದೇಶನ, ಶಂಕರನಾಗ್ ಅವರ ಅಪಘಾತದ ನಂತರದ ಕಾರ್ನಾಡರೊಂದಿಗಿನ ಒಡನಾಟವನ್ನು ನೆನೆದಿದ್ದಾರೆ.
ವಿವೇಕ್ ಶಾನಭಾಗರು ‘ದೇಶಕಾಲ’ ಪತ್ರಿಕೆಯಲ್ಲಿ ಕಾರ್ನಾಡರ ‘ಮದುವೆಯ ಆಲ್ಬಂ’ ನಾಟಕ‌ ಪ್ರ‌ಕಟಿಸುವಾಗಿನ ಸಂದರ್ಭವನ್ನು ನೆನಪು ಮಾಡಿದ್ದಾರೆ. ಕಾರ್ನಾಡರು ಅದೆಷ್ಟು ಬಾರಿ ಬರೆದದ್ದನ್ನು ತಿದ್ದುತ್ತಿದ್ದರು, ಬದಲಾಯಿಸುತ್ತಿದ್ದರು ಎಂದು ಅವರ ಪರಿಪೂರ್ಣತೆ ಮತ್ತು ಶ್ರಮವನ್ನು ಕಾಣಿಸುತ್ತಾರೆ.
ಗಂಗಾಧರ ಕೊಳಗಿಯವರು ಕಾರ್ನಾಡರ ಸರಳತೆ ಮತ್ತು ಅಪರಿಚಿತರನ್ನೂ ಸ್ನೇಹಪೂರ್ವಕವಾಗಿ ನಡೆಸಿಕೊಳ್ಳುತ್ತಿದ್ದುದರ ಬಗ್ಗೆ ಬರೆಯುತ್ತಾರೆ. ಹಿರಿಯರಾದ ಚಂದ್ರಶೇಖರ ಕಂಬಾರರು ಹೇಗೆ ಪೈಪೋಟಿಗೆ ಬಿದ್ದವರಂತೆ ಕಾರ್ನಾಡರೊಂದಿಗೆ ಸಲುಗೆ ಮತ್ತು ಸಾಹಿತ್ಯದ ಒಡನಾಟ ನಾಟಕರಚನೆಗೆ ಕಾರಣವಾಯ್ತು ಎಂದು ಕಾಣಿಸುತ್ತಾರೆ.
ಕೆ.ಎಂ. ಚೈತನ್ಯರು ಕಾರ್ನಾಡರು ನೆರೆಮನೆಯಲ್ಲೆ ಇದ್ದಾಗ ತಮ್ಮೊಂದಿಗೆ ಹೇಗೆ ಅಡುಗೆಯನ್ನು ಹಂಚಿಕೊಂಡು ಆಪ್ತರಾಗಿದ್ದರು ಎಂದು ಇನ್ನೊಂದು ಮುಖವನ್ನು ಕಾಣಿಸುತ್ತಾರೆ. ಗೀತೆ, ಉಪನಿಷತ್ತು, ಪುರಾಣಗಳ ಹಲವು ಭಾಗಗಳು ಕಾರ್ನಾಡರ ಬಾಯಿಯಲ್ಲಿ ಹಾಗೇ ಹರಿದಾಡುತ್ತಿದ್ದುದರ ಬಗ್ಗೆ ದೀರ್ಘವಾಗಿ ಬರೆದಿದ್ದಾರೆ.
ಕವಿತಾ ಲಂಕೇಶ್ ತಮ್ಮ ಬಾಲ್ಯದ ನೆನಪಿನೊಂದಿಗೆ ಗೌರಿ ಲಂಕೇಶ್ ಸಾವು ಸಂಭವಿಸಿದ ಹೊತ್ತಲ್ಲಿ ಕಾರ್ನಾಡರ ಸ್ಥೈರ್ಯ, ಬೆಂಬಲವನ್ನು ನೆನೆಯುತ್ತಾರೆ.
ಟಿ. ಎಸ್ ನಾಗಾಭರಣರು ಚಂದನೆಯ ಗುರುಸಮಾನ ಕಾರ್ನಾಡರ ಶಿಷ್ಯಪ್ರೀತಿಯ, ಅವರ ಕಲಿಸುವ ಆಸ್ಥೆಯ ಬಗ್ಗೆ ದೀರ್ಘವಾಗಿ ಬರೆದಿದ್ದಾರೆ. ಶಬಾನಾ ಅಜ್ಮಿ, ಅಲಿ ಅಬ್ಬಾಸ್, ಸುರೇಂದ್ರ ನಾಥ್ ಹೀಗೆ ಹಲವು ಹಿಂದಿ ಸಿನೆಮಾರಂಗದವರ ಕಾರ್ನಾಡರೊಂದಿಗಿನ ಅನುಭವಗಳ ಬರೆಹಗಳಿವೆ.
ಪಾಲಹಳ್ಳಿ ವಿಶ್ವನಾಥ್ ಕಾರ್ನಾಡರೊಂದಿಗಿನ ಒಂದು ಪ್ರಯಾಣವನ್ನು ದಾಖಲಿಸಿದ್ದಾರೆ.
ಅಮೃತಾ ದತ್ತರು, ಕಾರ್ನಾಡರು ತಮ್ಮ ಸಮಕಾಲೀನ ಮರಾಠಿ, ಹಿಂದಿ, ಬಂಗಾಲಿ ನಾಟಕಕಾರರೊಂದಿಗೆ ಹೇಗೆ ಪುರಾಣಪಾತ್ರಗಳ ಹೊಸದೃಷ್ಟಿಕೋನವನ್ನು ತೆರೆದಿಟ್ಟು ನವ್ಯಪರಂಪರೆಯ ಪ್ರಾರಂಭಿಸಿದರು ಎಂದು ವಿವರವಾಗಿ ಬರೆದಿದ್ದಾರೆ.
ಋತ್ವಿಕ್ ಸಿಂಹ, ಸುಧನ್ವ ದೇಶಪಾಂಡೆ, ರಾಮಚಂದ್ರ ಗುಹಾ, ಸದಾನಂದ ಮೆನನ್, ಬಾಗೇಶ್ರೀ, ಮುರಳೀಧರ ಖಜಾನೆ, ಗೀತಾ ಹರಿಹರನ್, ನವನೀತಾ ಸೇನ್, ಉಮಾ ಮಹಾದೇವನ್ ಅವರ ಬರೆಹಗಳು ಕಾರ್ನಾಡರ ಸಮಯಪಾಲನೆ, ಶಿಸ್ತು, ಆರೋಗ್ಯದ ಕುರಿತಾದ ಕಾಳಜಿ, ಸ್ವತಃ ಬೇರೆಯವರ ಕಾರುಣ್ಯಪೂರ್ಣ ಮಾತುಗಳ ಬಯಸದ ದೃಢತೆ, ತಮ್ಮ ನಿಲುವನ್ನು ಸ್ಪಷ್ಟವಾಗಿ ಘೋಷಿಸುತ್ತಿದ್ದ ರೀತಿ, ನಾಟಕ, ಸಿನೇಮಾ ಕ್ಷೇತ್ರದಲ್ಲಿ ಅವರು ನವೀನತೆಗೆ ಯೋಚಿಸುತ್ತಿದ್ದ ರೀತಿ, ಸಾಮಾಜಿಕ ಕಾರ್ಯಕ್ಕಾಗಿ ‘ಬೆಳಕು’ ಸಂಸ್ಥೆಗೆ ಸ್ಪಂದಿಸಿದ ನೆನಪು ಹೀಗೆ ಕಾರ್ನಾಡರ ಬಹುರೂಪತ್ವವನ್ನು ಈ ಪುಸ್ತಕದಲ್ಲಿ ಕಾಣಬಹುದು.
ಓದು ಪೂರ್ಣಗೊಂಡಾಗ ಕಾರ್ನಾಡರ ಅಪರೂಪದ ಚಿತ್ರಗಳೊಂದಿಗೆ ಅವರ ವಿದಾಯದ ಬದಲು ವ್ಯಕ್ತಿತ್ವದ ತುಣುಕುಗಳು ನಮ್ಮೊಳಗೆ ಆದಾನವಾಗುವುದನ್ನು ಕಂಡುಕೊಳ್ಳಬಹುದು.
ಧನ್ಯವಾದ ‘ಬಹುರೂಪಿ’ ಮತ್ತು ಸಂಪಾದಕರಾದ ಜೋಗಿ ಸರ್ ಶ್ರಮಕ್ಕೆ.
****

‍ಲೇಖಕರು avadhi

July 5, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. Vasantha Raju

    It was probably in 2011 in Mysore. Girish Karnad Sir was in conversation with theater enthusiasts in Rangayana in Mysore. This was the occasion of a book release on Karnad’s play edited by Krishnamurthy Hanoor. He was so happy that this book was edited by Krishnamurthy Hanoor that aside while interacting with the audience Karnad got furious when he was asked about the film Nagamandala based on his own play. He was categorically stated that he was not the director of the film, and he could only take questions on his play not the film. It was visible that he was not happy with the way the film was made. Later, then director of Rangayana Prof. Lingadevaru Hallamane intervened and pacify Karnad and requested the audience to limit their questions to his play and films he directed.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: