ಬಹುರೂಪವೆಂಬುದೇ ಎಡಚಿಂತನೆ…

ಡಾ ಶ್ರೀಪಾದ ಭಟ್


ಬಹುರೂಪಿ ನಾಟಕೋತ್ಸವದ ಸಂದರ್ಭವನ್ನು ಬಳಸಿಕೊಂಡು ಏಕರೂಪಿ ಸಂಸ್ಕೃತಿಯ ಆರಾಧಕರಾದ ಮೈಸೂರು ರಂಗಾಯಣದ ಹಾಲೀ ನಿರ್ದೇಶಕರ ಮಾತುಗಳು, ಹೇಳಿಕೆಗಳು ಇವುಗಳಿಗೆ ಸಂಬಂಧಿಸಿದಂತೆ ಸಾಕಷ್ಟು ಚರ್ಚೆಗಳು ಆರಂಭವಾಗಿವೆ.

ಭಾಷೆ ಮತ್ತು ಭಾವಗಳ ಮೇಲೆ ಹಿಡಿತವಿಲ್ಲದ ಅನೇಕ ಮಾತುಗಳು ಅವರಿಂದ ಸಹಜವಾಗಿಯೇ ಜಾರಿವೆ. ಅವು ಆಕಸ್ಮಿಕವೇನಲ್ಲ; ನಿರೀಕ್ಷಿತವೇ. ಆ ಮಾತುಗಳನ್ನು ನಾನಿಲ್ಲಿ ಮತ್ತೆಉಲ್ಲೇಖಿಸ ಹೊರಡುವದಿಲ್ಲ. ಆದರೆ ಗಮನಿಸಬೇಕಾದ ಇನ್ನೊಂದು ವಾದ ಸದ್ದಿಲ್ಲದೇ ಮಂಡನೆಯಾಗುತ್ತಿದೆ.

ಅದು ರಂಗಭೂಮಿಯ ಎಡಬಲದ ಅರ್ಥಾತ್ ಕಲಾ ಮೀಮಾಂಸೆಯ ಎಡಬಲದ ಮಾತಿಗೆ ಸಂಬಂಧಿಸಿದುದು.
ಈ ಚರ್ಚೆಗೆ ಪ್ರಸ್ತಾವನೆಯಾಗಿ, ಕಾರ್ಯಪ್ಪನವರ ಒಟ್ಟೂ ವಾದಗಳ ಸಾರಾಂಶವನ್ನು ಗಮನಿಸೋಣ. ಅದು ಹೀಗಿವೆ.

ಈ ಹಿಂದೆ ರಂಗಾಯಣವನ್ನು ನಡೆಸಿದವರು ಎಡಪಂಥೀಯ ಒಲವಿನವರು. ಆಗ ಅವರ ನಿಲುವನ್ನು ಬಲಪಂಥೀಯರು ವಿರೋಧಿಸದೇ ಸಹಿಸಿದ್ದರು. ನಾನು ಬಲಪಂಥೀಯ ಸಂಘಟನೆಯಿಂದ ಬಂದವನು. ಬಲಪಂಥೀಯ ಒಲವಿನವರನ್ನು ಕರೆಯಬಾರದೇಕೆ? ಅವರು ಅದಕಾಗಿ ಅಷ್ಟೊಂದು ಅಸಹನೆ ತೋರಿಸುವದೇಕೆ? ’ಅವರ ಈ ವಾದವನ್ನುಚರ್ಚೆಗೆತೆಗೆದುಕೊಂಡ ಹಲವು ರಂಗಕರ್ಮಿಗಳು ‘ರಂಗಭೂಮಿಯಲ್ಲಿಎಡ ಮತ್ತು ಬಲ ಎಂಬುದೇನಿಲ್ಲ; ಶುದ್ಧ ರಂಗಭೂಮಿ ಮುಖ್ಯ; ರಂಗಭೂಮಿ ಚಿರಾಯುವಾಗಲಿ…’ ಎಂಬಿತ್ಯಾದಿ ಮಾತುಗಳನ್ನು ಆಡತೊಡಗಿದ್ದಾರೆ.

ಈ ಹಿಂದೆಯೂ ಇಂತಹ ಮಾತುಗಳು ರಂಗಭೂಮಿಯನ್ನೂ ಒಳಗೊಂಡಂತೆ ಎಲ್ಲ ಕಲಾ ಪ್ರಕಾರಗಳಿಗೂ ಸಂಬಂಧಿಸಿ ಕೇಳಿಬಂದಿವೆ. ಆದರೆ ಈ ದಿನಗಳಲ್ಲಿ ಅವು ಬಲವಾಗಿಯೇ ಕೇಳಿಬರುತ್ತಿವೆ.

ಬಹುತೇಕವಾಗಿ ಈ ಬಗೆಯ ಮಾತುಗಳನ್ನಾಡುತ್ತಿರುವವರ ಮನಸ್ಸಿನಲ್ಲಿ ಎಡ ಮತ್ತು ಬಲ ಎಂದರೆ ಅದು ರಾಜಕೀಯ ಪಕ್ಷಗಳ ಸಿದ್ಧಾಂತ ಎಂಬರ್ಥವೇ ಇದೆ. ಅದರಲ್ಲಿಯೂ ಎಡಪಂಥೀಯ ಎಂಬುದು ಎಡಪಕ್ಷಗಳ ಸಿದ್ಧಾಂತ ಎಂಬ ನಂಬಿಕೆ ಬಲವಾಗಿದೆ. ಅಲ್ಲಿಯೇ ಈ ಗೊಂದಲವಿರುವದು.

ಸಮಾಜದಲ್ಲಿ ಉಳ್ಳವರು ಬಲವಂತರಾಗಿರುತ್ತಾರೆ. ಗಂಡು, ಮೇಲ್ಜಾತಿ, ಮೇಲ್ವರ್ಗ ಹೀಗೆ ಇವುಗಳನ್ನು ಗುರುತಿಸಬಹುದು. ಸಮಾಜದ ಕೇಂದ್ರದಲ್ಲಿರುವವರು ಇವರು. ಮೆಜಾರಿಟಿ, ಬಹುಮತ ಇವರೊಂದಿಗಿದೆ. ಸ್ಥಾಪಿತ ಹಿತಾಸಕ್ತಿಯ ಇವರನ್ನು ಮತ್ತು ಈ ಪಂಥವನ್ನು ಬೆಂಬಲಿಸುವವರು ಅಧಿಕಾರ ಕೇಂದ್ರದಲ್ಲಿರುತ್ತಾರೆ. ‘ಪವರ್ ಸ್ಟ್ರಕ್ಚರ್’ ನಲ್ಲಿ ಮೇಲೆ ಇರುವವರು ಇವರು. ಇವರನ್ನು ಬಲಪಂಥೀಯಎನ್ನಲಾಗುತ್ತದೆ. ಇದಕ್ಕೆ ಬದಲಾಗಿ ಪರಿಧಿಯಲ್ಲಿರುವ ಹೆಣ್ಣುಗಳು, ದಲಿತರು, ಬಡವರು, ಮಕ್ಕಳು, ಪರಿಸರ, ಪ್ರಾಣಿಪಕ್ಷಿಗಳು ಇವೆಲ್ಲ ದುರ್ಬಲವಾಗಿದ್ದು ಸಮಾಜದ ವ್ಯವಸ್ಥೆಯಲ್ಲಿ ಬಲ ಇಲ್ಲದ ಎಡವಾಗಿರುತ್ತಾರೆ.

ಈ ವರ್ಗದ ಬೆಂಬಲಿಗರನ್ನುಎಡಪAಥೀಯ ಎನ್ನಲಾಗುತ್ತದೆ. ದುರ್ಬಲವಾದವರನ್ನು ‘ಎಡಚ’ ಎಂತಲೂ ಬೈಗಳವಿದೆ. ಹೆಚ್ಚು ಬಳಕೆಯಲ್ಲಿರುವ ಬಲಗೈಗೆ ಹೋಲಿಸಿದರೆ ಎಡಗೈ ದುರ್ಬಲವಲ್ಲವೇ ಹಾಗೆ. (ರಂಗಭೂಮಿಯಲ್ಲಿ ಬಲಗೈ ಜತೆ ಸಮಾನವಾಗಿಎಡಗೈ ಬಳಸುವ ಹಲವು ವ್ಯಾಯಾಮಗಳೇ ಇವೆ.)
ಹಾಗೆ ನೋಡಿದರೆ ಎಲ್ಲ ಕಲೆಗಳೂ ಎಡಪಂಥೀಯವೇ. ‘ಜಗತ್ತಿನ ರೋಧನವನ್ನು ತನ್ನಲ್ಲಿ ಧರಿಸಿಕೊಂಡ ರುದ್ರನನ್ನು ಮೊದಲ ನಟ ಎಂದು ಕರೆಯುವದು ಈ ಕಾರಣಕ್ಕಾಗಿ.

ಪರಿಧಿಯ ಬಿಂದುವಿನ ಮೇಲೆ ತ್ರಿಜ್ಯವಿಡುವ ಕಲೆಯು ಆ ಮೂಲಕವಾಗಿ ಅವನ್ನೂ ವಿಶ್ವದ ಕೇಂದ್ರದಲ್ಲಿಡಲು ಯತ್ನಿಸುತ್ತದೆ. ಬಲದಲ್ಲಿಅಲ್ಪ ಸಂಖ್ಯಾತವೂ ಆದರೆ ದನಿಯಲ್ಲಿ ಬಹುತ್ವವೂ ಇರುವ ಈ ಸಂಗತಿಯನ್ನು ಮುಖ್ಯಧಾರೆ ನಾಜೂಕಿನಲ್ಲಿ ನಿವಾರಿಸಲುಯತ್ನಿಸುತ್ತದೆ. ಸ್ತ್ರೀ ಸಾಹಿತ್ಯ ಏಕೆ?, ಮಕ್ಕಳ ರಂಗಭೂಮಿ ಎಂದೇಕೆ ಇರಬೇಕು? ಸಾಹಿತ್ಯಎಂದರೆ ಸಾಹಿತ್ಯ ಅಷ್ಟೇ. . .

ರಂಗಭೂಮಿ ಎಂದರೆ ರಂಗಭೂಮಿ ಅಷ್ಟೇ.. ಎಂಬಿತ್ಯಾದಿ ಸೊಲ್ಲುಗಳನ್ನು ನೀವು ಈ ಹಿಂದೆ ಸಣ್ಣದಾಗಿಯಾದರೂ ಕೇಳಿರಲು ಸಾಧ್ಯ. ಇಂದು ಮಧ್ಯಮ ಪಂಥದ ಹೆಸರಿನಲ್ಲಿ ಇವು ಮುನ್ನೆಲೆಗೆ ಬರುತ್ತಿದೆ ಮತ್ತು ಕಲೆಗಿರುವ ಈ ಬಹುಮುಖಿ ನೆಲೆಯನ್ನು ಮತ್ತುಅದರ ಪ್ರತಿಭಟನಾ ಸ್ವರೂಪವನ್ನು ಮುಕ್ಕಾಗಿಸಲು ಯತ್ನಿಸುತ್ತಿವೆ.

‘ಎಡ’ಚಿಂತನೆ ಎಂಬುದು ‘ಎಡಪಕ್ಷಗಳ’ ಜಾಹೀರಾತು ಎಂದು ತಪ್ಪು ತಿಳಿದಿರುವದರಿಂದಲೇ ಕಾರ್ಯಪ್ಪನವರ ಬಾಯಿಂದ ಎಡಚಿಂತನೆ ಎಂದರೆ ಮಾವೋವಾದಿ ಚಿಂತನೆ ಎಂಬ ಮಾತು ಹೊರಬಂದಿರುವದು. ಅದು ಅವರು ಈಗಾಗಲೇ ಘೋಷಿಸಿಕೊಂಡಂತೆ ‘ಅವರು ನನ್ನನ್ನು ಕೋಮುವಾದಿ ಎಂದರು, ಅದಕ್ಕೆಂದೇ ನಾನು ಅವರನ್ನು ಮಾವೋವಾದಿ ಎಂದೆ’ ಎಂಬಷ್ಟು ಸರಳವಾಗಿ, ಪ್ರಾಸಪ್ರಿಯತೆಗಾಗಿ ಬಂದುದಲ್ಲ.

ಮತ್ತೆ ಮತ್ತೆ ನಾವು ಎಡವೂ ಅಲ್ಲ, ಬಲವೂ ಅಲ್ಲಎಂದು ನುಡಿಯುವ ಕಲಾವಿದರು ಈ ಕುರಿತು ಆಲೋಚಿಸುವ ಅಗತ್ಯವಿದೆ. ರಂಗಭೂಮಿ ಎಂದಿಗೂ ಎಡವೇ ಆಗಿದೆ. ಅದನ್ನು ಮರೆಯಲಾಗದು. ಅದು ಸ್ವರೂಪದ ಅಗತ್ಯ. ಕಲೆಯ ನೈತಿಕತೆಗೆ ಸಂಬಂಧಿಸಿದುದು ಅದು. ಅಡ್ಡಂಡ ನವರನ್ನು ವಿರೋಧಿಸುವ ಭರದಲ್ಲಿ, ನೆವದಲ್ಲಿ ‘ನಾವು ಎಡವೂ ಅಲ್ಲ ಬಲವೂ ಅಲ್ಲ ಎಂಬಬಗೆಯ ಹೇಳಿಕೆಗಳು ಕಲೆಯ ಸ್ವರೂಪಕ್ಕೆ ಮಾರಕವಾದುದು ಮತ್ತು ಅದು ಸ್ಥಾಪಿತ ಮೌಲ್ಯಗಳಿಗೇ ಹೆಚ್ಚು ನೆರವು ನೀಡುವಬಗೆಯದು ಎಂಬುದನ್ನುಗಮನಿಸಬೇಕು. ಅದಕೆಂದೇ ಪ್ರವಾಹದ ಪರವಾಗಿರುವ ಇಂತಹ ಹೇಳಿಕೆಗಳು ಬಹುಬೇಗನೆ ಜನಪ್ರಿಯವಾಗುತ್ತದೆ.

ಬಹುರೂಪಿಯನ್ನು ಬಲಪಂಥೀಯವಾಗಿಸಲಾಗುವದಿಲ್ಲ. ಸಂಘಟಕರು ಬೇರೆ ಹೆಸರಿನ ಉತ್ಸವ ಮಾಡಿಕೊಳ್ಳುವದೊಳಿತು. ಏಕೆಂದರೆ ಬಹುತ್ವ, ಬಹುರೂಪ ಧಾರಣಾ ತತ್ವವೇ ಕಲಾತತ್ವ ಮತ್ತುಅದುವೇ ಎಡಚಿಂತನೆ.

‍ಲೇಖಕರು Admin

December 29, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: