ಬಹುಮುಖೀ ಕೃಷ್ಣಮೂರ್ತಿ ಬಿಳಿಗೆರೆ…

ಬಹುಮುಖೀ ವ್ಯಕ್ತಿತ್ವದ ಕ್ರಿಯಾಶೀಲ ಆಚಾರ್ಯ, ಕೆ.ಬಿ. ಕ್ರಾಸಿನ ಕರ್ವಾಲೋ – ಪ್ರೊ ಕೃಷ್ಣಮೂರ್ತಿ ಬಿಳಿಗೆರೆ

ಡಾ ಮೋಹನ್ ಮಿರ್ಲೆ

“ಅಧಿಕಾರ ಅಹಂಕಾರವಲ್ಲ, ಜವಾಬ್ದಾರಿ” – ಇದು ಕಾಲೇಜು ಶಿಕ್ಷಣ ಇಲಾಖೆಯ, ಧಾರವಾಡ ವಿಭಾಗದ ನೂತನ ಜಂಟಿ ನಿರ್ದೇಶಕರಾಗಿ ದಿನಾಂಕ: 09.05.2022ರಂದು ಅಧಿಕಾರ ಸ್ವೀಕರಿಸಿದ ಪ್ರೊ. ಕೃಷ್ಣಮೂರ್ತಿ ಬಿಳಿಗೆರೆಯವರು ಸಾಮಾನ್ಯವಾಗಿ ಬಳಸುತ್ತಿದ್ದ ಸಾಲು. ಹೀಗೆ ಅಧಿಕಾರವನ್ನು ಯಾವಾಗಲು ಜವಾಬ್ದಾರಿ ಎಂದೇ ಭಾವಿಸುವ ನಮ್ಮ ಪ್ರಾಚಾರ್ಯರ ಬಹುಮುಖೀ ವ್ಯಕ್ತಿತ್ವ ನಾಲ್ಕೈದು ವರ್ಷಗಳ ಅವರ ಒಡನಾಟದಲ್ಲಿ ನನಗೆ ಕಂಡಿದ್ದು ಹೀಗೆ :

ಪ್ರೊ. ಕೃಷ್ಣಮೂರ್ತಿ ಬಿ.ಆರ್., ಜಂಟಿ ನಿರ್ದೇಶಕರು, ಧಾರವಾಡ ವಿಭಾಗ, ಕಾಲೇಜು ಶಿಕ್ಷಣ ಇಲಾಖೆ, ಕರ್ನಾಟಕ ಸರ್ಕಾರ

ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಸುತ್ತಮುತ್ತ ನಡೆದಿರುವ ಗಣಿಗಾರಿಕೆಯಿಂದಾಗಿ ಪರಿಸರದ ಮೇಲೆ, ಜೀವ ವೈವಿಧ್ಯದ ಮೇಲೆ ಆಗಿರುವ ಅನ್ಯಾಯ, ಅತ್ಯಾಚಾರಗಳನ್ನು ಖಂಡಿಸಿ ನಿರಂತರ ಲೇಖನಗಳನ್ನು ಬರೆಯುತ್ತಿದ್ದ ಪ್ರಾಚಾರ್ಯ ಪ್ರೊ. ಕೃಷ್ಣಮೂರ್ತಿ ಬಿಳಿಗೆರೆ ಅವರು ಈ ಕುರಿತು ಹಲವು ಜಾಗೃತಿ ಗೀತೆಗಳನ್ನೂ ರಚಿಸಿ ಸ್ವತಃ ಹಾಡಿದ್ದಾರೆ. ಈ ಭಾಗದ ಪ್ರತಿ ಗಿಡ-ಮರಗಳ ಬಗ್ಗೆ ಮತ್ತು ಅವುಗಳ ವೈಶಿಷ್ಟ್ಯತೆಯ ಬಗ್ಗೆ ಅಪಾರ ಅರಿವು ಇವರಿಗಿದೆ.

ಸ್ಥಳೀಯವಾಗಿ ಬೆಳೆಯುವ ತೆಂಗು, ಮಾವು, ಹಲಸು ಮುಂತಾದವುಗಳ ಆರೋಗ್ಯದ ಬಗ್ಗೆಯೂ ಇವರಿಗೆ ವಿಶೇಷ ಕಾಳಜಿ. ಮನುಷ್ಯರ ಆರೋಗ್ಯದ ಬಗ್ಗೆ, ಹತ್ತಾರು ಬಗೆಯ ಸೊಪ್ಪುಗಳ ಬಗ್ಗೆ, ಹಣ್ಣು-ತರಕಾರಿಗಳ ಬಗ್ಗೆ, ಸಿರಿಧಾನ್ಯಗಳ ಮಹತ್ವದ ಬಗ್ಗೆ ಸಮುದಾಯದಲ್ಲಿ ಅರಿವು ಮೂಡಿಸುವ ಸಾಮಾಜಿಕ ಕಳಕಳಿಯೂ ಇವರ ಇನ್ನೊಂದು ಗುಣ. ಬಿಳಿಗೆರೆಯವರಿಗೆ ಇಲ್ಲಿನ ಪ್ರತಿಯೊಂದು ಪ್ರಾಣಿ, ಪಕ್ಷಿ, ಕೀಟಗಳ ಒಡನಾಟವಿದೆ. ಈ ನೆಲದ ಮಣ್ಣಿನ ಗುಣ ಮತ್ತು ಅಲ್ಲಿ ಬೆಳೆಯುವ ಹಾಗೂ ಬೆಳೆಯಬೇಕಾದ ಬೆಳೆಗಳ ಬಗ್ಗೆ ಅಪಾರ ಜ್ಞಾನವಿದೆ. ಸುತ್ತಲಿನ ಕೆರೆ, ಕೊಳ್ಳ, ತಲಪರಿಗೆಗಳ ಬಗ್ಗೆ ವಿಶೇಷ ಅರಿವಿದೆ. ನೀರಿನ ಸಂರಕ್ಷಣೆಯ ಬಗ್ಗೆ, ಕೃಷಿಯಲ್ಲಿ ನೀರಿನ ಮಿತ ಹಾಗೂ ಪರಿಣಾಮಕಾರಿ ಬಳಕೆಯ ಬಗ್ಗೆ, ಮಳೆ ನೀರು ಮತ್ತು ಅಂತರ್ಜಲವನ್ನು ಬಳಸಬೇಕಾದ ಕ್ರಮದ ಬಗ್ಗೆ, ಜನರಿಗೆ ಸುಲಭವಾಗಿ ತಿಳಿಸುವ ಕಲೆಯಿದೆ. ಈ ಎಲ್ಲಾ ಕಾರಣಕ್ಕಾಗಿ ಮತ್ತು ಪ್ರಕೃತಿಯನ್ನು ವಿಸ್ಮಯದಿಂದ ನೋಡುವ, ಪ್ರೀತಿಸುವ, ಕಾಳಜಿ ಮಾಡುವ ಮತ್ತು ಪರಿಸರ ರಕ್ಷಣೆಗಾಗಿ ದನಿ ಎತ್ತುವ ತಮ್ಮ ಗುಣದಿಂದಾಗಿ ಇವರು ಈ ಭಾಗದಲ್ಲಿ ‘ಕೆ.ಬಿ. ಕ್ರಾಸಿನ ಕರ್ವಾಲೋ’ ಎಂದೇ ಪ್ರಸಿದ್ಧರಾಗಿದ್ದಾರೆ.

ಚಳುವಳಿಗಳ ಸಂಗಾತಿ – ಸಂಘಟಕ, ಆಯೋಜಕ, ನಿರ್ವಾಹಕ
ರೈತ ಚಳವಳಿ, ದಲಿತ-ಬಂಡಾಯ ಚಳುವಳಿಗಳ ಜೊತೆ ಗುರುತಿಸಿಕೊಂಡಿರುವ ಬಿಳಿಗೆರೆಯವರು ತಮ್ಮ ಪ್ರಖರ ವಿಚಾರಧಾರೆಗಳಿಂದ, ಹರಿತ ಮಾತುಗಾರಿಕೆಯಿಂದ ಮತ್ತು ತಮ್ಮ ಭಾಷಣ ಕಲೆಯಿಂದ ಸಭಿಕರನ್ನು ಸಮ್ಮೋಹನಗೊಳಿಸುತ್ತಿದ್ದರು. ಆ ಮೂಲಕ ತಮ್ಮ ವಿಚಾರಗಳನ್ನು ಸುಲಭವಾಗಿ ಸಭಿಕರಿಗೆ ಮುಟ್ಟಿಸುತ್ತಿದ್ದರು. ಅವರ ಯಾವುದೇ ವೇದಿಕೆ ಉಪಸ್ಥಿತಿಯಲ್ಲಿ ಸಭಿಕರ ಒತ್ತಾಯದ ಮೇರೆಗೆ ಅವರಿಂದ ಒಂದು‌ ಹಾಡೂ ಇರುತ್ತಿತ್ತು. “ಭಿನ್ನ‌ ಭೇದವ ಮಾಡಬೇಡಿರಿ” ಈ ಹಾಡು ಅತಿ ಬೇಡಿಕೆಯ ಹಾಡಾಗಿತ್ತು. ವೇದಿಕೆಯಲ್ಲಿ‌ ಯಾರೇ ಇದ್ದರೂ ಯಾವುದೇ ರಾಜಕಾರಣಿ ಅಥವಾ ವಿದ್ವಾಂಸರಿದ್ದರೂ ಕಾರ್ಯಕ್ರಮದ ಚೌಕಟ್ಟಿಗೆ ಧಕ್ಕೆಯಾದರೆ ಮುಲಾಜಿಲ್ಲದೆ ಮಧ್ಯಪ್ರವೇಶಿಸಿ ಸಂದರ್ಭವನ್ನು ಜಾಣ್ಮೆಯಿಂದ, ಕೆಲವೊಮ್ಮೆ ನಿಷ್ಠುರವಾಗಿಯಾದರೂ ಸರಿ ನಿಯಂತ್ರಿಸುತ್ತಿದ್ದರು.

ಬಿಡುವಿನ ವೇಳೆಯ ತೋಟಿಗ – ಸಹಜ ಕೃಷಿಯ ಪ್ರತಿಪಾದಕ
ಸದಾ ಒಂದಿಲ್ಲೊಂದು ಚಟುವಟಿಕೆಗಳಲ್ಲಿ ತೊಡಗಿರುವ ಪ್ರಾಚಾರ್ಯ ಬಿಳಿಗೆರೆಯವರು ತಮ್ಮ ಕೃಷಿ ಕುರಿತ ಬರಹಗಳನ್ನು ಕಾಲ್ಪನಿಕವಾಗಿ ಬರೆಯುವವರಲ್ಲ. ಇವರು ತಮ್ಮ ಪ್ರತಿದಿನದ ವ್ಯಾಯಾಮದ ಭಾಗವಾಗಿ ತಮ್ಮ ತೋಟದ ಕೆಲಸಕ್ಕೆ ಒಂದು ಗಂಟೆಯನ್ನು ಮೀಸಲಿರಿಸಿ, ಆ ಸಮಯದಲ್ಲೇ ತಮ್ಮ ತೋಟದಲ್ಲಿ ಹಲವು ಕೃಷಿ ಪ್ರಯೋಗಗಳನ್ನು ಮಾಡಿದ್ದಾರೆ. ಅವರ ತೋಟ ಸಹಜ ಕೃಷಿಯ ಪ್ರಯೋಗಶಾಲೆಯಾಗಿದೆ. ಅಲ್ಲಿ ಯಾವುದೇ ಉಳುಮೆ ಇಲ್ಲ. ಸೊಪ್ಪು ಸೆದೆಗೆ ಬೆಂಕಿ ಹಾಕುವುದಿಲ್ಲ. ಇವೆಲ್ಲವನ್ನೂ ಮಲ್ಚಿಂಗ್ ಮೂಲಕ ಮಣ್ಣಿಗೆ ಸೇರಿಸಿ ಮತ್ತೆ ಅದನ್ನು ಗೊಬ್ಬರವಾಗಿಸುತ್ತಾರೆ. ಅಲ್ಲಿ ಹಲವು ಬಗೆಯ ಹಣ್ಣಿನ ಮರಗಳಿವೆ. ಅಲ್ಲಿನ ಬೇಲಿಯ ಮೇಲೆ ತರಕಾರಿಗಳ ಬಳ್ಳಿಗಳು ಹಬ್ಬಿವೆ. ಇವರ ತೋಟ ಅಳಿಲು, ಗೊದ್ದ, ಹಾವು, ನವಿಲು, ಕೋತಿ, ಎರೆಹುಳ ಸೇರಿದಂತೆ ಹಲವು‌ ಬಗೆಯ ಪ್ರಾಣಿ-ಪಕ್ಷಿಗಳಿಗೆ ನೆಲೆಯಾಗಿದೆ. ಬಿಡುವಿನ ವೇಳೆ ಮತ್ತು ರಜಾ ದಿನಗಳಲ್ಲಿ ಸಹಜ ಕೃಷಿಯ ಪ್ರಚಾರಕ್ಕಾಗಿ ಕೃಷಿ ಚಿಂತಕ ಪ್ರೊ. ಶಿವನಂಜಯ್ಯ ಬಾಳೆಕಾಯಿ ಅವರ ಜೊತೆ ಸೇರಿ ಊರೂರು ಸುತ್ತುವುದು ಇವರಿಗೆ ಸಂತಸದ ವಿಷಯ.

ಎಳನೀರ ರಾಯಭಾರಿ
ಬಿಳಿಗೆರೆಯವರು ಕೋಕಾ ಕೋಲಾ, ಪೆಪ್ಸಿ ಕುಡಿದು ಆರೋಗ್ಯ ‌ಕೆಡಿಸಿಕೊಳ್ಳುವವರಿಗೆ ಬುದ್ಧಿ ಹೇಳಿ, ಇವುಗಳ ಬದಲು ಎಳನೀರು ಕುಡಿಯುವಂತೆ ಹಾಡು ಕಟ್ಟಿ ಎಚ್ಚರಿಸುತ್ತಾರೆ. ಅವರ “ಎಳನೀರ್ ಎಳನೀರ್ ಎಳನೀರು.. ಎಳನೀರ್ ಕುಡಿಯೋರ್ ಒಳ್ಳೇರು” ಎಂಬ ಹಾಡು ಚಿಕ್ಕ ಮಕ್ಕಳಿಗಷ್ಟೇ ಅಲ್ಲದೆ ದೊಡ್ಡವರಿಗೂ ಪ್ರಿಯವಾಗಿ ಬಾಯಿಪಾಠವಾಗಿದೆ. ಎಳನೀರನ್ನು ಜನಪ್ರಿಯಗೊಳಿಸಲು ಎಷ್ಟೋ ಕಡೆ ‘ಎಳನೀರು ಮೇಳ’ಗಳನ್ನು ಮಾಡಿದ್ದಾರೆ. ರೈತರು ತೆಂಗಿನ ನುಸಿಪೀಡೆ ರೋಗದಿಂದ ಪಾರಾಗಿ ಲಾಭ ಪಡೆಯುವಂತಾಗಲು ವೈಜ್ಞಾನಿಕವಾಗಿ ‘ನೀರಾ’ ಇಳಿಸಿ ಮಾರುವುದಕ್ಕೆ ಸರ್ಕಾರ ಲೈಸೆನ್ಸ್ ನೀಡಬೇಕೆಂದು ಒತ್ತಾಯಿಸಿ ಈ ಸಂಬಂಧ ಹಲವು ಹೋರಾಟಗಳಲ್ಲೂ ಭಾಗವಹಿಸಿದ್ದಾರೆ.

ಊರ ಹಮ್ಮೀರ
ಇತಿಹಾಸ ಪ್ರಾಧ್ಯಾಪಕರಾದ ಬಿಳಿಗೆರೆಯವರು ‘ಗ್ರಾಮ ಪಂಚಾಯಿತಿ ರಾಜಕಾರಣ’ದ ಬಗ್ಗೆ ವಿಶೇಷ ಒಲವನ್ನು ಹೊಂದಿದ್ದು, ಮಾದರಿ ರಾಜಕಾರಣವನ್ನು ತಳಮಟ್ಟದಿಂದಲೇ ರೂಪಿಸಬೇಕು ಎಂಬ ಆಸೆಯನ್ನೂ ಹೊಂದಿರುವವರು. ಇದಕ್ಕಾಗಿ ತಮ್ಮ ಸ್ವಗ್ರಾಮ ಬಿಳಿಗೆರೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳನ್ನು ಪ್ರಯೋಗಶಾಲೆಯಾಗಿ ಮಾಡಿಕೊಂಡು ಗ್ರಾಮ ರಾಜಕಾರಣದ ಶುದ್ಧ ಮಾದರಿಯೊಂದನ್ನು ಹುಟ್ಟುಹಾಕಲು ನಿರಂತರವಾಗಿ ಪ್ರಯತ್ನಿಸುತ್ತಿದ್ದಾರೆ. ಸಾಕಷ್ಟು ಚರ್ಚೆ ಮತ್ತು ಅಧ್ಯಯನ ಶಿಬಿರಗಳನ್ನು ನಡೆಸಿ ‘ಪಂಚಾಯಿತಿ ಪಾಲಿಟಿಕ್ಸ್’ ಎಂಬ ಹೆಸರಿನ ಒಂದು ಕಿರು ಹೊತ್ತಿಗೆಯನ್ನೂ ಕೂಡ ಹೊರತಂದಿದ್ದಾರೆ. ಪಂಚಾಯಿತಿ ಚುನಾವಣೆಗೆ ನಿಲ್ಲಬಯಸುವವರು ಯಾವೆಲ್ಲ ಅರ್ಹತೆ ಹೊಂದಿರಬೇಕು, ಯಾವೆಲ್ಲ ನಿಯಮಗಳಿಗೆ ಬದ್ಧರಾಗಿರಬೇಕು, ಗೆದ್ದ ಮೇಲೆ ಅವರ ಕಾರ್ಯ ವೈಖರಿ ಹೇಗಿರಬೇಕು ಎಂಬ ಮಾರ್ಗಸೂಚಿ ಈ ಕೈಪಿಡಿಯಲ್ಲಿದೆ. ಹಾಗೆಯೇ ತಮ್ಮ ಊರಿನಲ್ಲಿ ಸಮಾನ ಮನಸ್ಕರ ತಂಡವೊಂದನ್ನು ಕಟ್ಟಿಕೊಂಡು ಊರಿನ ಹಿತರಕ್ಷಣೆ, ಸಾರ್ವಜನಿಕ ಸ್ಥಳಗಳ ಸ್ವಚ್ಛತೆ ಹಾಗೂ ಜನಜಾಗೃತಿ ಕಾರ್ಯಕ್ರಮಗಳನ್ನೂ ನಡೆಸಿಕೊಂಡು ಬರುತ್ತಿದ್ದಾರೆ. ಭೂಮಿಗೆ ಅಂಚೇ ಇಲ್ಲದಿರುವುದರಿಂದ ‘ಅಂಚಿನ ಗ್ರಾಮ’ ಎಂಬ ಪದ ಬಳಕೆಯನ್ನೂ ಇವರು ಒಪ್ಪುವುದಿಲ್ಲ. ಭೂಮಿಗೆ ಪ್ರತಿಯೊಂದು ಸ್ಥಾನವೂ ಕೇಂದ್ರವೆ. ಆದ್ದರಿಂದ ನಾವಿರುವ ಸ್ಥಳವೇ ‘ಕೇಂದ್ರ ಸ್ಥಾನ’ವೆಂದು ತಿಳಿದು ಕೆಲಸ ಮಾಡಬೇಕು ಎಂಬುದು ಇವರ ಸಿದ್ಧಾಂತ. ಅದರಂತೆ “ಲೋಕಲ್ಲೇ ಗ್ಲೋಬಲ್ಲು” ಎಂಬ ಮಾತನ್ನು ಯಾವಾಗಲೂ ಬಳಸುವ ಇವರು ತಮ್ಮ ಈ ಕುಗ್ರಾಮದಲ್ಲೂ ರಾಜ್ಯ ಮಟ್ಟದ ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ಯಶಸ್ವಿಯಾಗಿ ನಡೆಸಿ ನಾಡಿನ ಗಮನವನ್ನು ಸೆಳೆದಿದ್ದಾರೆ.

ಕ್ರಿಯಾಶೀಲ ಪ್ರಾಚಾರ್ಯ
ಬಿಳಿಗೆರೆಯವರು ಸದ್ಯ ಜಂಟಿ ನಿರ್ದೇಶಕರಾಗಿ ಜವಾಬ್ದಾರಿ ವಹಿಸಿಕೊಳ್ಳುವ ಮೊದಲು ಹುಳಿಯಾರಿನ ಬಿ.ಎಂ.ಎಸ್. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಾಚಾರ್ಯರಾಗಿದ್ದರು. ಈ ಅವಧಿಯಲ್ಲಿ ನಾಲ್ಕುವರೆ ವರ್ಷಗಳ ಕಾಲ ಅವರೊಂದಿಗೆ ಸಹೋದ್ಯೋಗಿಯಾಗಿ ಕೆಲಸ ಮಾಡುವ ಸೌಭಾಗ್ಯ ನನಗೆ ಸಿಕ್ಕಿತು. ನಾನು ಕಂಡಂತೆ ಅವರು ಸದಾ ಲವಲವಿಕೆಯಿಂದ ಇರುತ್ತಿದ್ದ ವ್ಯಕ್ತಿ. ಅಲ್ಲದೆ ತಮ್ಮ ಜೊತೆಗಿದ್ದವರೂ ಹಾಗೇ ಇರಲೆಂದು ಬಯಸುತ್ತಿದ್ದ ಜೀವ. ಮಾತ್ರವಲ್ಲ, ಅದಕ್ಕೆ ಪೂರಕ ವಾತಾವರಣವನ್ನೂ ನಿರ್ಮಿಸುವ ಕಲೆಗಾರಿಕೆ ಅವರಿಗೆ ಸಹಜವಾಗಿ ಸಿದ್ಧಿಸಿತ್ತು. ಚರ್ಚೆ-ವಾಗ್ವಾದಗಳ ಮೂಲಕ ಸತ್ಯ ಶೋಧನೆಗೆ ತೊಡಗುತ್ತಿದ್ದ ಇವರು, ಕಿರಿಯರ ಮಾತಿಗೂ ಕಿವಿಗೊಡುತ್ತಿದ್ದರು. ಅವರ ವ್ಯಕ್ತಿತ್ವದ ಬಗ್ಗೆ ತಿಳಿದಿದ್ದ ನಮಗೆ ಇದೇನು ವಿಶೇಷ ಎನಿಸುತ್ತಿರಲಿಲ್ಲ. ಸಹಜವಾಗಿ ಎಲ್ಲರೊಂದಿಗೆ ಬೆರೆಯುತ್ತಿದ್ದರೂ ಒಮ್ಮೊಮ್ಮೆ ಮಾತ್ರ ತಾತ್ವಿಕ ಕಾರಣಗಳಿಗಾಗಿ ಸಿಟ್ಟಾಗುತ್ತಿದ್ದರು. ಆದರೆ ಆ ಸಿಟ್ಟೂ ನಿರ್ದಿಷ್ಟ ವಿಚಾರಕ್ಕೆ ಮತ್ತು ಆ ಕ್ಷಣಕ್ಕೆ ಮಾತ್ರ. ಮತ್ತೆ ಅವರು ಎಂದಿನ ಅದೇ ಬಿಳೀ.. ಗೆರೆ. ಅಕಸ್ಮಾತ್ ತಮ್ಮಿಂದ ಯಾರಿಗಾದರೂ ಬೇಸರವಾಗಿದೆ ಎಂದು ತಿಳಿದರೆ ಯಾವುದೇ ಮುಜುಗರಕ್ಕೆ ಒಳಗಾಗದೆ ಅವರು ಹಿರಿ-ಕಿರಿಯರು ಎಂಬುದನ್ನೂ ಎಣಿಸದೆ ಕೂಡಲೆ ಕ್ಷಮೆಯಾಚಿಸುತ್ತಿದ್ದರು. ಚರ್ಚೆ-ವಾದಗಳಿಗೆ ಅವರ ಬಳಿ ಅವಕಾಶ ಇತ್ತೇ ಹೊರತು ದ್ವೇಷಕ್ಕೆ ಅಲ್ಲಿ ಜಾಗವೇ ಇರಲಿಲ್ಲ. ತಮ್ಮ ಪ್ರತಿದಿನದ ಪಗಾರಕ್ಕೆ ನ್ಯಾಯ ಸಲ್ಲಿಸಬೇಕೆಂದು‌ ಸದಾ ಹಪಹಪಿಸುತ್ತಿದ್ದ ಪ್ರಾಚಾರ್ಯರು, ತಮ್ಮ ಸಹೋದ್ಯೋಗಿಗಳಿಗೂ ಕೂಡಾ ಅದನ್ನು ಆಗಾಗ್ಗೆ ನೆನಪಿಸುತ್ತಿದ್ದರು. ಸದಾ ವಿದ್ಯಾರ್ಥಿ ಸ್ನೇಹಿ ನಿಲುವು ತೆಗೆದುಕೊಳ್ಳತ್ತಿದ್ದ ಇವರು ಪಠ್ಯಕ್ಕಿಂತ ಜೀವನವನ್ನು ಬೋಧಿಸಿದ್ದೇ ಹೆಚ್ಚು.

ಪ್ರಗತಿಪರ ಚಿಂತಕ ಮತ್ತು ಪುಸ್ತಕ ಸಂಸ್ಕೃತಿಯ ಪ್ರತಿಪಾದಕ
ಯಾವಾಗಲೂ ವಿದ್ಯಾರ್ಥಿಗಳ ಆಸಕ್ತಿಯ ವಿಷಯಗಳಿಗೆ ಪ್ರೋತ್ಸಾಹ ನೀಡುವ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದ ಪ್ರಾಚಾರ್ಯ ಬಿಳಿಗೆರೆಯವರು ವಿದ್ಯಾರ್ಥಿಗಳಲ್ಲಿ ಸಂಶೋಧನಾ ಗುಣ ಬೆಳೆಸಲು ಸೂಕ್ತ ಕಾರ್ಯಕ್ರಮಗಳನ್ನೂ ಹಾಕಿಕೊಳ್ಳುತ್ತಿದ್ದರು. ಹೊಸ ರಾಷ್ಟ್ರೀಯ ಶಿಕ್ಷಣ ನೀತಿ-2020 ರೂಪಿಸಿದ ಎಷ್ಟೋ ಸಂಗತಿಗಳನ್ನು ಇವರು ಮೊದಲೇ ತಮ್ಮ ಕಾರ್ಯಸ್ಥಾನದಲ್ಲಿ ಕಾರ್ಯಗತಗೊಳಿಸಿದ್ದರು. ಸರ್ಕಾರದ ಆದೇಶ ಬರುವ ಮೊದಲೇ ಕಾಲೇಜಿನ ಸಮಾರಂಭಗಳಲ್ಲಿ ಹಾರ-ತುರಾಯಿ ಸಂಸ್ಕೃತಿಯನ್ನು ನಿಷೇಧಿಸಿ ಅದರ ಸ್ಥಾನದಲ್ಲಿ ಪುಸ್ತಕ ನೀಡುವ ಸಂಸ್ಕೃತಿಯನ್ನು ಜಾರಿಗೊಳಿಸಿದ್ದರು. ಇವರ ಅವಧಿಯಲ್ಲಿ ಯಾವ ಮಹನೀಯರ ಜಯಂತಿಗೂ ದೀಪ ಮತ್ತು ಊದುಬತ್ತಿಯನ್ನು ಹಚ್ಚಿದ್ದಿಲ್ಲ. ಆದರೆ ಕಾರ್ಯಕ್ರಮವನ್ನು ವಿಭಿನ್ನವಾಗಿ ಆಯೋಜಿಸುವ ಮೂಲಕ ಜಯಂತಿಗಳನ್ನು ಮತ್ತು ದಿನಾಚರಣೆಗಳನ್ನು ಅರ್ಥಪೂರ್ಣವಾಗಿಸುತ್ತಿದ್ದರು. ಸಾಮಾನ್ಯವಾಗಿ ಇಂತಹ ಕಾರ್ಯಕ್ರಮಗಳಲ್ಲಿ ಒಂದು ಕವಿಗೋಷ್ಠಿ ಇರುತ್ತಿತ್ತು. ಒಂದು ಸಂವಾದ ಇರುತ್ತಿತ್ತು. ಅಲ್ಲಿ ವಿದ್ಯಾರ್ಥಿಗಳ ಭಾಗವಹಿಸುವಿಕೆಗೆ ಮುಕ್ತ ಅವಕಾಶ ಇರುತ್ತಿತ್ತು. ಜೊತೆಗೆ ಅವರದೇ ಒಂದು ಉತ್ತಮ ಉಪನ್ಯಾಸವಿರುತ್ತಿತ್ತು. ಕೆಲವೊಮ್ಮೆ ವಿಶೇಷ ಆಹ್ವಾನಿತರ ಭಾಷಣವೂ ಇರುತ್ತಿತ್ತು.

ವಿದ್ಯಾರ್ಥಿ ಸ್ನೇಹಿ ಗುರು
ಪ್ರಾಚಾರ್ಯ ಬಿಳಿಗೆರೆಯವರು ತರಗತಿಗಳು ಸದಾ ಲವಲವಿಕೆಯಿಂದ ಕೂಡಿರಬೇಕೆಂದು ಬಯಸುತ್ತಿದ್ದರು. ಸಿದ್ಧತೆ ಇಲ್ಲದ ಪಾಠವನ್ನು ವಿದ್ಯಾರ್ಥಿಗಳು ಸುಲಭವಾಗಿ ಗುರುತಿಸುತ್ತಾರೆ ಎಂದು ಸಹೋದ್ಯೋಗಿಗಳನ್ನು ಆಗಾಗ್ಗೆ ಎಚ್ಚರಿಸುತ್ತಿದ್ದರು. ಅಧ್ಯಾಪಕರು ತರಗತಿಗಾಗಿ ಮಾಡಿಕೊಂಡ ಮುಖ್ಯಾಂಶಗಳ ಟಿಪ್ಪಣಿಯನ್ನು ವಿದ್ಯಾರ್ಥಿಗಳಿಗೆ ಬರೆಸಲು ಸೂಚಿಸುತ್ತಿದ್ದರು. ಒಂದು ಗಂಟೆಯ ತರಗತಿಯಲ್ಲಿ ವಿದ್ಯಾರ್ಥಿಗಳ ಮಾತುಗಳಿಗೆ ಕನಿಷ್ಠ ಇಪ್ಪತ್ತು ನಿಮಿಷ ಸಮಯ ನೀಡಬೇಕು, ಬೋಧನೆ ಏಕಮುಖವಾಗಬಾರದು ಎಂದು ಸದಾ ನೆನಪಿಸುತ್ತಿದ್ದರು. ದಿನಪತ್ರಿಕೆಗಳ ಓದು ಮತ್ತು ವಾಚನ ತರಗತಿಗಳಿಗೆ ಹೆಚ್ಚು ಒತ್ತು ಕೊಡುತ್ತಿದ್ದರು. ವಿರೋಧಗಳು ಎದುರಾದರೂ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪಾಠದ ಅವಧಿಗಳು ಪೂರ್ಣಗೊಳ್ಳುವವರೆಗೆ ಕಟ್ಟಡದ ಮುಖ್ಯ ದ್ವಾರಕ್ಕೆ ಬೀಗ ಹಾಕಿಸುತ್ತಿದ್ದರು. ವಿದ್ಯಾರ್ಥಿಗಳೊಂದಿಗೆ ಸದಾ ಸ್ನೇಹಿತನಂತೆ ಬೆರೆಯುತ್ತಾ ಅವರು ಪ್ರಶ್ನೆಗಳನ್ನು ಕೇಳುವಂತೆ ಪ್ರೇರೇಪಿಸುತ್ತಿದ್ದರೂ ತರಗತಿಗಳು ಸರಿಯಾಗಿ ನಡೆಯುವ ವಿಷಯದಲ್ಲಿ ಮಾತ್ರ ಪೋಲೀಸಪ್ಪನಂತಾಗುತ್ತಿದ್ದರು. “ವಿದ್ಯಾರ್ಥಿಗಳಿಗೆ ಈಗ ಗೊತ್ತಾಗುವುದಿಲ್ಲ, ನಾವು ಹೀಗೆ ಮಾಡಿ ಕಲಿಸದಿದ್ದರೆ ಮುಂದೆ ನಮ್ಮನ್ನು ಬೈದುಕೊಳ್ಳುತ್ತಾರೆ” ಎಂದು ತಮ್ಮ ಈ ನಿರ್ಧಾರಕ್ಕೆ ಸಮಜಾಯಿಸಿ ನೀಡುತ್ತಿದ್ದರು. ಮತ್ತು ಇದು ಏಕಮುಖ ನಿರ್ಧಾರವಾಗದಂತೆ ಕಾಲೇಜು ಕೌನ್ಸಿಲ್ ಸಭೆಯಲ್ಲಿ ತಮ್ಮದೇ ಆದ ವಿಧಾನದಲ್ಲಿ ಎಲ್ಲರ ಒಪ್ಪಿಗೆಯ ಮುದ್ರೆಯನ್ನೂ ಪಡೆದುಕೊಳ್ಳುತ್ತಿದ್ದರು.

ಸೃಜನಶೀಲ ಮಾರ್ಗದರ್ಶಕ ಮತ್ತು ಅನುಪಾಲಕ
ಇನ್ನು ಇವರ ಮಾರ್ಗದರ್ಶನದಲ್ಲಿ ನಡೆಯುತ್ತಿದ್ದ ಕಾಲೇಜಿನ ಎನ್.ಎಸ್.ಎಸ್. ಘಟಕಗಳ ಕಾರ್ಯಕ್ರಮಗಳು ವೈವಿಧ್ಯಮಯವಾಗಿರುತ್ತಿದ್ದವು. ಈ ಘಟಕಗಳ ಮೂಲಕ ‘ಬೀಜ ಬ್ಯಾಂಕ್’ ಸ್ಥಾಪನೆ, ‘ಔಷಧಿ ವನ’, ‘ಎರೆಗೊಬ್ಬರದ ತೊಟ್ಟಿ’, ‘ಸಾವಯವ ಕಾಂಪೋಸ್ಟ್ ತೊಟ್ಟಿ’, ‘ಮಳೆ ನೀರು ಕೊಯ್ಲು’, ಕಾಲೇಜು ಆವರಣದಲ್ಲಿರುವ ಮರಗಳ ಸಮೀಕ್ಷೆ ಮತ್ತು ಅವುಗಳ ಸ್ಥಳೀಯ ಮತ್ತು ವೈಜ್ಞಾನಿಕ ಹೆಸರುಗಳ ಫಲಕಗಳ ಪ್ರದರ್ಶನ – ಹೀಗೆ ಹತ್ತುಹಲವು ವಿಶಿಷ್ಟ ಪ್ರಯೋಗಗಳು ಆಗಿವೆ. ಹಾಗೆಯೇ ಪ್ರತಿವರ್ಷ ನಡೆಯುತ್ತಿದ್ದ ಏಳು ದಿನಗಳ ‘ಎನ್.ಎಸ್.ಎಸ್. ವಾರ್ಷಿಕ ವಿಶೇಷ ಶಿಬಿರ’ಗಳಲ್ಲಿ ಸ್ವಚ್ಛತಾ ಕಾರ್ಯಗಳು ಮತ್ತು ವಿಶೇಷ ಉಪನ್ಯಾಸಗಳಲ್ಲದೆ ವಿಭಿನ್ನ ಬಗೆಯ ಕಾರ್ಯಕ್ರಮಗಳೂ ಇರುತ್ತಿದ್ದವು. ಪ್ರತಿದಿನ ಮುಂಜಾನೆ ಎನ್.ಎಸ್.ಎಸ್. ಧ್ವಜಾರೋಹಣದ ನಂತರ ‘ಯೋಗ’ ಮತ್ತು ‘ಧ್ಯಾನ’ದ ಕಾರ್ಯಕ್ರಮಗಳು ನಡೆಯುತ್ತಿದ್ದವು. ಇವುಗಳ ಜೊತೆಗೆ ‘ನುಗ್ಗೆಕಡ್ಡಿ ಚಿಗುರು ಆಂದೋಲನ’, ‘ಬೇವಿನ ಕಡ್ಡಿ ಆಂದೋಲನ’, ‘ಮಲ್ಚಿಂಗ್ ಆಂದೋಲನ’, ‘ಬಾಟಲ್ ಇರಿಗೇಷನ್ ಪ್ರಾತ್ಯಕ್ಷಿಕೆ’, ‘ಹುರುಳಿ ಹಬ್ಬ’, ‘ಎಳನೀರು ಮೇಳ’, ‘ಸಿರಿಧಾನ್ಯ ಮೇಳ’, ‘ಆರ್ಥಿಕ-ಸಾಮಾಜಿಕ ಸಮೀಕ್ಷೆ’, ‘ಜೀವನ‌ಶೈಲಿ ಸಮೀಕ್ಷೆ’, ‘ಆಕಾಶ ವೀಕ್ಷಣೆ ಕಾರ್ಯಕ್ರಮ’, ‘ದೇಸೀ ಕ್ರೀಡಾಕೂಟ’, ‘ಕಬಡ್ಡಿ ಪಂದ್ಯಾವಳಿ’, ‘ಸ್ಥಳೀಯ ಔಷಧಿ ಸಸ್ಯಗಳ ಪರಿಚಯ’, ‘ಉಚಿತ ವೈದ್ಯಕೀಯ ಶಿಬಿರ’, ‘ಪಶು ಚಿಕಿತ್ಸಾ ಶಿಬಿರ’, ಸರ್ಕಾರಿ ಶಾಲೆಗಳಿಗೆ ಬಣ್ಣ‌ ಕಾಣಿಸುವ ‘ಸುಣ್ಣ-ಅಣ್ಣ ಕಾರ್ಯಕ್ರಮ’, ಸ್ಥಳೀಯ ಕಲಾವಿದರಿಂದ ‘ಕೋಲಾಟ’, ‘ಸೋಬಾನೆ ಪದಗಳು’ ಮತ್ತು ‘ಜನಪದ ಗೀತೆಗಳ ಗಾಯನ’ – ಹೀಗೆ ಹತ್ತು ಹಲವು‌ ವೈವಿಧ್ಯಮಯ ಕಾರ್ಯಕ್ರಮಗಳು ಇರುತ್ತಿದ್ದವು. ಇವುಗಳಷ್ಟೇ ಅಲ್ಲದೆ ಶಿಬಿರದ ಆ ಏಳು ದಿನಗಳ ಅವಧಿಯಲ್ಲಿ ಅಲ್ಲಿನ ವಿದ್ಯಾರ್ಥಿ ಸ್ವಯಂಸೇವಕರಿಗೆ ಶೈಕ್ಷಣಿಕ ಚಟುವಟಿಕೆಗಳ ಕೊರತೆ ಉಂಟಾಗದಂತೆ ಪ್ರತಿದಿನ ಮಧ್ಯಾಹ್ನ ಊಟದ ನಂತರ ‘ಪ್ರಬಂಧ ಸ್ಪರ್ಧೆ’, ‘ಭಾಷಣ ಸ್ಪರ್ಧೆ’, ‘ಚರ್ಚಾ ಸ್ಪರ್ಧೆ’, ‘ಲಿಖಿತ ರಸಪ್ರಶ್ನೆ ಸ್ಪರ್ಧೆ’, ‘ಎನ್.ಎಸ್.ಎಸ್. ಕವಿಗೋಷ್ಠಿ’ – ಹೀಗೆ ಯಾವುದಾದರೊಂದು ಕಾರ್ಯಕ್ರಮ ಇರುವಂತೆ ನೋಡಿಕೊಳ್ಳುತ್ತಿದ್ದರು. ಪ್ರತಿದಿನದ ಶಿಬಿರದ ಚಟುವಟಿಕೆಗಳನ್ನು ಕುರಿತು ಉತ್ತಮವಾದ ‘ವರದಿ’ ತಯಾರಿಸಿದವರಿಗೆ ಬಹುಮಾನ ಕೂಡ ಇರುತ್ತಿತ್ತು. ಮೊದಲ ಬಾರಿಗೆ ನಾನು ಎನ್.ಎಸ್.ಎಸ್. ಶಿಬಿರಾಧಿಕಾರಿಯಾಗಿದ್ದಾಗ ಪ್ರಾಚಾರ್ಯರು ಹೇಳಿದ್ದು, “ಶಿಬಿರದ ಏಳೂ ದಿನ ನೀವು ಶಟ್೯ ಇನ್ ಮಾಡಬಾರದು ಮತ್ತು ಚರಂಡಿ ಸ್ವಚ್ಛಗೊಳಿಸಲು ಶಿಬಿರಾರ್ಥಿಗಳಿಗೆ ಹೇಳುವ ಮೊದಲು ನೀವು ಗುಂಡಿಗೆ ಇಳಿದಿರಬೇಕು” ಎಂದು. ಇದು ಕೇವಲ ಸಲಹೆಯ ಮಟ್ಟದಲ್ಲೇ ಉಳಿಯದೆ ತಾವೂ ಸಹ ಶಿಬಿರದಲ್ಲಿ ಭಾಗಿಯಾಗುತ್ತಿದ್ದರು. ಬರ್ಮುಡಾ, ಟೀ ಶರ್ಟ್ ತೊಟ್ಟು ಸ್ವತಃ ಚರಂಡಿಗೆ ಇಳಿಯುತ್ತಿದ್ದರು. ಶಿಬಿರದಲ್ಲಿ ನಡೆಯುತ್ತಿದ್ದ ಕಬಡ್ಡಿ ಪಂದ್ಯಾವಳಿಗಳಲ್ಲಿ ಆಟಗಾರನಾಗಿ ಅವರು ಅಕಾಡಕ್ಕಿಳಿಯುತ್ತಿದ್ದುದು ಶಿಬಿರದ ಆಕರ್ಷಣೆಯ ಕೇಂದ್ರವಾಗಿರುತ್ತಿತ್ತು.

ತೆರೆದ ಮನದ ಮಾತುಗಾರ
ಬಿಳಿಗೆರೆಯವರು ಸಮಯ ಸಿಕ್ಕಾಗಲೆಲ್ಲಾ ಸಹೋದ್ಯೋಗಿಗಳೊಂದಿಗೆ ತಮ್ಮ ಆಲೋಚನೆಗಳನ್ನು ಹಂಚಿಕೊಳ್ಳುತ್ತಿದ್ದರು. “ನನಗೆ ಮೂರು ವಿಷಯಗಳಲ್ಲಿ ಯಾವಾಗಲೂ ನಾಚಿಕೆಯಿದೆ, ಹಾಗಾಗಿ ಆ ವಿಚಾರಗಳಲ್ಲಿ ಎಚ್ಚರವಾಗಿರುತ್ತೇನೆ” ಎಂದೂ ಆಗಾಗ್ಗೆ ಹೇಳುತ್ತಿದ್ದರು. ಅವರು ಹೇಳುತ್ತಿದ್ದ ಆ ಮೂರು ವಿಚಾರಗಳೆಂದರೆ: ಒಂದು – “ತಾನು ಗಂಡಾಗಿ ಹುಟ್ಟಿರುವುದು; ಎರಡು -‌ ತಾನು ಲಿಂಗಾಯಿತನಾಗಿ ಹುಟ್ಟಿರುವುದು; ಮೂರು – ತಾನು ಯುಜಿಸಿ ವೇತನ ಪಡೆಯುತ್ತಿರುವುದು.” ಇದು ಮೇಲ್ನೋಟಕ್ಕೆ ಹಿಪಾಕ್ರಸಿ ಎನಿಸಿದರೂ ಅವರು ತಮ್ಮ ನಿತ್ಯ ಬದುಕಿನಲ್ಲೂ ಆ ಎಚ್ಚರವನ್ನು ಉಳಿಸಿಕೊಂಡು ಇಂತಹ ನಾಚಿಕೆಗಳನ್ನು ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದರು. ಒಬ್ಬ ಅಪ್ಪಟ ಸ್ತ್ರೀವಾದಿಯಾಗಿ, ಸಮಾಜವನ್ನು ಸ್ತ್ರೀ ದೃಷ್ಟಿಕೋನದಿಂದ ನೋಡುತ್ತಿದ್ದ, ಹೆಣ್ಣಿನ ಅಂತಃಕರಣವನ್ನು ಹೊಂದಿದ್ದ ಅಪಾರ ಪ್ರೀತಿಯ, ಕ್ಷಮಾಗುಣದ ವ್ಯಕ್ತಿಯಾಗಿದ್ದರು. ತಾವೂ ಬಸವಣ್ಣನ ದೃಷ್ಟಿಯ ಲಿಂಗಾಯಿತನಾಗಲು ನಿತ್ಯವೂ ಹೆಣಗುತ್ತಿದ್ದರು. “ನಮ್ಮ ಅರಿವಿಗೆ ಬಾರದೇ ನಮ್ಮಲ್ಲಿ ಕಾಣಿಸಿಕೊಳ್ಳುವ ಜಾತಿ ಶ್ರೇಷ್ಠತೆಯ ವ್ಯಸನವನ್ನು ಗುರುತಿಸಿ ಅದನ್ನು ಮೀರಲು ನಿತ್ಯವೂ ಹೆಣಗಬೇಕು, ಮೈಮರೆತರೆ ಅವು ಚಿಗಿತು ಹೆಮ್ಮರವಾಗುತ್ತವೆ, ಆದ್ದರಿಂದ ಕುಡಿಯಲ್ಲೇ ಅವುಗಳನ್ನು ಗುರುತಿಸಿ ನಮಗೆ ನಾವೇ ಕೊಚ್ಚಿಕೊಳ್ಳಬೇಕು” ಎನ್ನುತ್ತಿದ್ದರು. ಪ್ರಗತಿಪರರಾಗಿ ಮೂಢ ಆಚಾರಗಳನ್ನು, ಆಹಾರ ಸೂತಕವನ್ನು ಮೀರಿದ್ದರು. ಎಲ್ಲ ಜಾತಿ ವರ್ಗದವರೊಂದಿಗೆ ಆತ್ಮೀಯವಾಗಿ ಸಮಾನತಾಭಾವದಿಂದ ಬೆರೆಯುತ್ತಿದ್ದರು. ತಳವರ್ಗಗಳ ಬಗ್ಗೆ, ಶ್ರಮಜೀವಿಗಳ ಬಗ್ಗೆ ವಿಶೇಷ ಒಲವನ್ನು ಹೊಂದಿದ್ದರು. “ದುಡಿದು ತಿನ್ನುವವನು ಬಡವನಲ್ಲ, ಬಡಿದು ತಿನ್ನುವವನು ಬಡವ” ಎಂದು ಹೇಳುವ ಮೂಲಕ ದುಡಿಯುವ ವರ್ಗಕ್ಕೆ ತಮ್ಮದೇ ರೀತಿಯಲ್ಲಿ ಗೌರವ ಸೂಚಿಸುತ್ತಿದ್ದರು. “ಕಣ್ಣಿಗೆ ಕೂಲಿಂಗ್ ಗ್ಲಾಸ್ ಮತ್ತು ಕಾಲಿಗೆ ಶೂ ಬೇಕಿರುವುದು ನೆರಳಿನಲ್ಲಿ ಕೆಲಸ ಮಾಡುವ ಅಧಿಕಾರಿಗಳಿಗಲ್ಲ. ಬಿಸಿಲಿನಲ್ಲಿ ಕೆಲಸ ಮಾಡುವ ರೈತರು ಮತ್ತು ಕೂಲಿಕಾರ್ಮಿಕರಿಗೆ” ಎನ್ನುತ್ತಿದ್ದರು. ಈ ರೀತಿಯ ಮಾತುಗಳು ಬಹುತೇಕ ದುಡಿಯುವ ವರ್ಗದ ಹಿನ್ನೆಲೆಯಿಂದ ಬಂದಿರುವ ಕಾಲೇಜಿನ ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸವನ್ನು ಮತ್ತು ತಮ್ಮ ದುಡಿಮೆಯ ಬಗ್ಗೆ ಹೆಮ್ಮೆಯ ಭಾವವನ್ನು ಮೂಡಿಸುತ್ತಿತ್ತು. “ಕಾಲೇಜುಗಳು ಪದವೀಧರ ನಿರುದ್ಯೋಗಿಗಳನ್ನು ಸೃಷ್ಟಿಸುವ ಕಾರ್ಖಾನೆಗಳಾಗದೆ ವಿದ್ಯಾರ್ಥಿಗಳ ಬದುಕನ್ನು ರೂಪಿಸುವ ಕೇಂದ್ರಗಳಾಗಬೇಕು, ಕಾಲೇಜಿನಲ್ಲಿ ಸಮುದಾಯ ಕೇಂದ್ರಿತ, ವಿದ್ಯಾರ್ಥಿ ಸ್ನೇಹಿ ವಾತಾವರಣ ಇರಬೇಕು” ಎಂದು ಹಂಬಲಿಸುತ್ತಿದ್ದರು. ಮತ್ತು ಆ ನಿಟ್ಟಿನಲ್ಲಿ ಸದಾ ಕಾರ್ಯೋನ್ಮುಖರಾಗಿರುತ್ತಿದ್ದರು.

ಮಿಡಿವ ಹೃದಯದ ಸರಳ ಜೀವಿ
ನಾನು ಹೊಸದಾಗಿ ಈ ಕಾಲೇಜಿಗೆ ಬಂದಾಗ ಪ್ರಾಚಾರ್ಯರು ನನಗೆ ಎರಡು ರೀತಿಯಲ್ಲಿ ಅನುಭವವಾದರು. ಒಂದು – ಅವರೊಂದಿಗಿನ ದಿನದಿನದ ಒಡನಾಟ. ಎರಡು – ಬೇರೆಯವರು ಅವರ ಬಗ್ಗೆ ಹೇಳುತ್ತಿದ್ದ ಕುತೂಹಲಕಾರಿ ಸಂಗತಿಗಳು. ಹುಳಿಯಾರು ಬಸ್ ನಿಲ್ದಾಣದಿಂದ ಪದವಿ ಕಾಲೇಜಿಗೆ ಸುಮಾರು ಒಂದೂವರೆ ಕಿಲೋಮೀಟರ್ ‌ದೂರ ಇತ್ತು. ಕೆ.ಬಿ.ಕ್ರಾಸ್ ಸಮೀಪದ ಬಿಳಿಗೆರೆಯಿಂದ ಬಸ್ಸಿನಲ್ಲಿ ಹುಳಿಯಾರಿಗೆ ಬರುತ್ತಿದ್ದ ಬಿಳಿಗೆರೆಯವರು, ತಾವು ಪದವಿ ಕಾಲೇಜಿನ ಪ್ರಾಂಶುಪಾಲರು ಎಂಬ ಯಾವ ಹಮ್ಮೂ ಇಲ್ಲದೆ ಬಸ್ ನಿಲ್ದಾಣದಿಂದ ಕಾಲೇಜಿಗೆ ಬೈಸಿಕಲ್ ತುಳಿದು ಬರುತ್ತಿದ್ದರು. ಆದರೆ ಆ ಮಾರ್ಗ, ಕೆರೆ ಏರಿಯ ಪಕ್ಕದ ತಿರುವು ರಸ್ತೆ ಆದ ಕಾರಣ ಬೈಸಿಕಲ್ ಸವಾರಿಗೆ ಯೋಗ್ಯವಲ್ಲ ಎಂಬ ಹಿತೈಷಿಗಳ ಸಲಹೆ ಮೇರೆಗೆ ಮುಂದೆ ಆ ದಿನಚರಿ ನಿಂತಿತು. ಅನಂತರ ಬಸ್ ನಿಲ್ದಾಣದಿಂದ ಕಾಲೇಜಿಗೆ ಸಹೋದ್ಯೋಗಿಗಳ ಬೈಕಿನಲ್ಲೇ ಲಿಫ್ಟ್ ಪಡೆಯುತ್ತಿದ್ದರು. ಮುಂದೆ ಕೋವಿಡ್-19 ಮೊದಲ ಅಲೆ ಬರುವವರೆಗೆ ಇದು ಹೀಗೇ ನಡೆಯಿತು. ನಂತರವೇ ಅವರು ಸುರಕ್ಷತಾ ದೃಷ್ಟಿಯಿಂದ ಕಾರು ತಂದಿದ್ದು. ಈ ಬೈಕ್ ಲಿಫ್ಟ್ ನ ಮೂರು ವರ್ಷದ ಅವಧಿಯಲ್ಲಿ ಬಹುತೇಕ ನಾನೇ ಅವರ ಕೋ-ಪಾರ್ಟ್ನರ್. ಇದು ನನಗೆ ಒಂದು ಸೌಭಾಗ್ಯ. ಹೊಸದಾಗಿ ಕಾಲೇಜಿಗೆ ಬಂದಿದ್ದ ನನಗೆ ಅವರ ಸಾಮೀಪ್ಯ ಬಹು ಸುಲಭವಾಗಿ ದೊರೆಯಿತು. ಬೆಳಿಗ್ಗೆ ಮತ್ತು ಸಂಜೆಯ ಆ ಕಿರು ಪ್ರಯಾಣದಲ್ಲಿನ ಮೌನವನ್ನು ಭೇದಿಸಿಕೊಂಡು ಅವರ ತಲೆಯಲ್ಲಿ ಕೊರೆಯುತ್ತಿದ್ದ ಎಷ್ಟೋ ವಿಚಾರಗಳು ತೆರೆದುಕೊಳ್ಳುತ್ತಿದ್ದವು. ಆ ಸಂದರ್ಭಕ್ಕೆ ಎಷ್ಟು ಬೇಕೋ ಅಷ್ಟು ವಿವರಗಳೊಂದಿಗೆ ಚುಟುಕಾಗಿ ಆ ಮಾತುಕತೆಗಳೂ ಮುಗಿಯುತ್ತಿದ್ದವು. ಸಾಮಾನ್ಯವಾಗಿ ಕಾಲೇಜಿನಲ್ಲಿ ಹೊಸದಾಗಿ ಮಾಡಬೇಕಾದ ಕಾರ್ಯಕ್ರಮಗಳ ಬಗ್ಗೆ, ಓದಿದ ಹೊಸಪುಸ್ತಕಗಳ ಬಗ್ಗೆ, ಹೊಸ ಬರವಣಿಗೆಯ ಬಗ್ಗೆ ಈ ಚರ್ಚೆ ಸಾಗುತ್ತಿತ್ತು. ಎದುರು ಬಂದ ಪಾದಚಾರಿಯನ್ನೋ, ಸೈಕಲ್ ಸವಾರರನ್ನೋ ಕಂಡೊಡನೆ ಅವರ ಮಾತಿನ ದಿಕ್ಕು ಬದಲಾಗುತ್ತಿತ್ತು. “ನಾವು ಪಾದಚಾರಿಗಳಿಗೆ, ಸೈಕಲ್ ಸವಾರರಿಗೆ ಗೌರವ ಕೊಡಬೇಕು. ಅನಗತ್ಯ ಹಾರನ್ ಮಾಡಬಾರದು. ಅಂತಹ‌ ಸಂದರ್ಭಗಳಲ್ಲಿ ನಾವೇ ನಿಧಾನ ಮಾಡಬೇಕು” – ಹೀಗೆ ಸಾಮಾಜಿಕವಾಗಿ ಕಡಿಮೆ ಸೌಲಭ್ಯ ಇರುವವರ ಬಗೆಗಿನ ಅವರ ಎಂದಿನ ಕಾಳಜಿ ಜಾಗೃತವಾಗುತ್ತಿತ್ತು.

ಯೋಜನೆಗಳ ಕನಸುಗಾರ
ಇನ್ನು ಪ್ರಾಚಾರ್ಯರ ನೇತೃತ್ವದಲ್ಲಿ ನಡೆಯುತ್ತಿದ್ದ ಕಾಲೇಜಿನ ಬಹುತೇಕ ಸಭೆಗಳಲ್ಲಿ ಅಕಡೆಮಿಕ್ ಚರ್ಚೆ ಪ್ರಾರಂಭವಾಗುವ ಮೊದಲು ಅಥವಾ ಕೊನೆಯಲ್ಲಿ ಕನಿಷ್ಠ ಅರ್ಧ ಗಂಟೆ ಸಮಯವಾದರೂ ಸಾಹಿತ್ಯಿಕ, ರಾಜಕೀಯ, ವೈಚಾರಿಕ ಹಾಗೂ ಆರೋಗ್ಯಕ್ಕೆ ಸಂಬಂಧಪಟ್ಟ ವಿಚಾರಗಳಿಗೆ ಮೀಸಲಾಗಿರುತ್ತಿತ್ತು. ಕೆಲವೊಮ್ಮೆ ಅವರ ಕಂಚಿನ ಕಂಠದ ಗಾಯನ, ಅವರ ಹೊಸ ಪದ್ಯ, ಪ್ರಬಂಧ ಬರೆವಣಿಗೆ ಇತ್ಯಾದಿ ವಿಷಯಗಳ ಚರ್ಚೆ ಇರುತ್ತಿತ್ತು. ಈ ಸಂದರ್ಭದಲ್ಲಿ ಸಹೋದ್ಯೋಗಿಗಳ ಹೊಸ ಬರವಣಿಗೆ ಹಾಗೂ ಓದಿರುವ ಹೊಸ ಪುಸ್ತಕಗಳ ಬಗ್ಗೆಯೂ ವಿಚಾರಿಸುತ್ತಿದ್ದರು. ಅಲ್ಲದೆ ತಾವು ಓದಿದ ಹೊಸ ಪುಸ್ತಕಗಳ ಬಗ್ಗೆಯೂ ಹೇಳುತ್ತಿದ್ದರು. ಎಲ್ಲ ಅಧ್ಯಾಪಕರೂ ತಮ್ಮ ವಿಷಯಗಳಿಗೆ ಸಂಬಂಧಿಸಿದ ನಿತಯಕಾಲಿಕೆಗಳು ಮತ್ತು ಸಂಶೋಧನಾ ಪತ್ರಿಕೆಗಳಿಗೆ ಚಂದಾದಾರರಾಗುವಂತೆ ಮತ್ತು ಲೇಖನಗಳನ್ನು ಬರೆಯುವಂತೆ ಪ್ರೇರೇಪಿಸುತ್ತಿದ್ದರು. ನಮ್ಮ ಕೆಲಸದ ದಿನಚರಿ(Work Diary)ಗಳು ತರಗತಿಯಲ್ಲಿ ಕೈಗೊಳ್ಳುವ ಚಟುವಟಿಕೆಗಳು, ರೆಫರೆನ್ಸ್ ಪುಸ್ತಕಗಳ ವಿವರಗಳೂ ಸೇರಿದಂತೆ ನವೀನತೆಯಿಂದ ಕೂಡಿರಬೇಕು ಎಂದು ಸಲಹೆ ನೀಡುತ್ತಿದ್ದರು. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸಹಕಾರ ತತ್ವದಡಿ ವಿದ್ಯಾರ್ಥಿಗಳೇ ನಡೆಸುವ ‘ಮಿನಿ ಕ್ಯಾಂಟೀನ್’ ಅನ್ನೂ ಕೂಡ ಆರಂಭಿಸಿದ್ದರು. ಅವರ ಒತ್ತಾಸೆಯಿಂದಾಗಿ ತರಗತಿಗೆ ಒಂದರಂತೆ ಬಿ.ಎ. ವಿಭಾಗಕ್ಕೆ ಮೂರು ಮತ್ತು ಬಿ.ಕಾಂ. ವಿಭಾಗಕ್ಕೆ ಮೂರು ಒಟ್ಟು‌ ಆರು ‘ಗೋಡೆ ಪತ್ರಿಕೆ’ಗಳು ವಿದ್ಯಾರ್ಥಿಗಳ ಬರೆವಣಿಗೆ ಮತ್ತು ಅವರ ಇತರೆ ಕಲೆಗಳ ಅನಾವರಣಕ್ಕೆ ವೇದಿಕೆಯಾದವು. ಅವರದೇ ಮಹತ್ವಾಕಾಂಕ್ಷೆಯ ‘ವಿದ್ಯಾರ್ಥಿ ಸಂಶೋಧಕರು’ ಎಂಬ ಪರಿಕಲ್ಪನೆಯ ‘ಉತ್ತಮ ರೂಢಿ’(Best Practice) ಕಳೆದ ಮೂರು ವರ್ಷಗಳಿಂದ ಚಾಲ್ತಿಯಲ್ಲಿದ್ದು, ಫಲ ಕಂಡಿತ್ತು. ಪ್ರತಿ ಅಧ್ಯಾಪಕರು ಐದರಿಂದ ಹತ್ತು ಆಸಕ್ತ ವಿದ್ಯಾರ್ಥಿಗಳನ್ನು ಗುರುತಿಸಿ ಅವರ ಆಸಕ್ತಿಯ ವಿಷಯಗಳಿಗೆ ಪ್ರೋತ್ಸಾಹ ನೀಡುವ, ಸಾಮಗ್ರಿಗಳನ್ನು ಒದಗಿಸುವ ಮತ್ತು ಮಾರ್ಗದರ್ಶನ ನೀಡುವ ಮೂಲಕ ಅವರಲ್ಲಿ ವಿಶೇಷ ವ್ಯಕ್ತಿತ್ವವನ್ನು ರೂಪಿಸುವ ಮತ್ತು ನಿರ್ದಿಷ್ಟ ವಿಷಯದಲ್ಲಿ ಅವರನ್ನು ಸಂಪನ್ಮೂಲ ವ್ಯಕ್ತಿಗಳನ್ನಾಗಿ ಮಾಡುವ ಯೋಜನೆ ಇದಾಗಿತ್ತು. 

ಚೈತನ್ಯದ ಚಿಲುಮೆ – ಪಾದರಸದ ನಡೆ
ಕಾಲೇಜಿನ ಪ್ರಾರ್ಥನಾ ಸಮಯಕ್ಕೂ ಮುಂಚಿತವಾಗಿ ಬರುತ್ತಿದ್ದ ಪ್ರಾಚಾರ್ಯರು ಬೇಗ ಬಂದಿರುವ ವಿದ್ಯಾರ್ಥಿಗಳನ್ನು ಗುಂಪು ಸೇರಿಸಿ ‘ಎಳನೀರಿನ ಹಾಡು’, ‘ಬೇಲಿಯ ಹಾಡು’, ‘ಹಲಸಿನ ಹಾಡು’, ‘ಮಳೆಯ ಹಾಡು’, ‘ನದಿಯ ಹಾಡು’ – ಹೀಗೆ ಕೋರಸ್ ನೊಂದಿಗೆ ಸಾಮೂಹಿಕ ಗಾಯನದಲ್ಲಿ ತೊಡಗುತ್ತಿದ್ದರು. ತಮ್ಮ ಎಲ್ಲ ಕವಿತೆಗಳಿಗೆ ಅವರೇ ಸಂಗೀತ ಸಂಯೋಜನೆಯನ್ನೂ ಮಾಡಿಕೊಳ್ಳುತ್ತಿದ್ದರು. ಸ್ವತಃ ಒಳ್ಳೆಯ ಹಾಡುಗಾರರಾಗಿದ್ದ ಇವರು ಕೃಷಿ ಹಾಡುಗಳನ್ನೂ ತತ್ವಪದಗಳನ್ನೂ ಏಕತಾರಿ ನಾದದೊಂದಿಗೆ ಸುಶ್ರಾವ್ಯವಾಗಿ ಹಾಡುತ್ತಿದ್ದರು. ಇವರ ಪಾದರಸದ ನಡೆ ಯುವಕರನ್ನೂ ನಾಚಿಸುವಂತಿತ್ತು. ಅಧ್ಯಾಪಕ ವರ್ಗದವರಿಗೆಲ್ಲಾ ಫಿಟ್ ನೆಸ್ ಕಾಯ್ದುಕೊಳ್ಳಲು ಸಲಹೆ‌ ಸೂಚನೆ ನೀಡುತ್ತಿದ್ದರಲ್ಲದೆ. ಕಾಲೇಜಿನಲ್ಲೇ ಪ್ರತಿ ದಿನ ಸಂಜೆ ಶೆಟಲ್ ಕಾಕ್ ಆಡುವ ಅಭ್ಯಾಸವನ್ನೂ ರೂಢಿಸಿದ್ದರು. ಹೀಗೆ ತಮ್ಮ ಎಲ್ಲ ಹಿರಿಕಿರಿಯ ಗೆಳೆಯರೊಂದಿಗಿನ ನಿರಂತರ ಒಡನಾಟದಲ್ಲಿ ಸಾಹಿತ್ಯಿಕ ಚರ್ಚೆ, ಪಾರ್ಟಿ, ಹರಟೆ, ಟ್ರೆಕ್ಕಿಂಗ್ ನಡೆಸುತ್ತಾ ಸದಾ ಕ್ರಿಯಾಶೀಲವಾಗಿರುವ ಚೈತನ್ಯಶೀಲ ಮತ್ತು ಚಿಂತನಶೀಲ ವ್ಯಕ್ತಿತ್ವ ಇವರದಾಗಿತ್ತು. 

ಮರೆಯಲಾರದ ವ್ಯಕ್ತಿತ್ವ
ಕವಿ, ಸಾಹಿತಿ ಕೃಷ್ಣಮೂರ್ತಿ ಬಿಳಿಗೆರೆ ಎಂದರೆ ನಾಡಿನಾದ್ಯಂತ ಬೌದ್ಧಿಕ, ಸಾಂಸ್ಕೃತಿಕ ಹಾಗೂ ಶ್ರಮಿಕ ವಲಯಗಳಲ್ಲಿ ಚಿರಪರಿಚಿತ ವ್ಯಕ್ತಿತ್ವ. ಸ್ನೇಹಜೀವಿ ಮತ್ತು ಮಾತುಗಾರರಾದ ಇವರಿಗೆ ‘ಪ್ರತಿಭೆಯನ್ನು ಪ್ರತಿಭೆ ಗೌರವಿಸುತ್ತದೆ’ ಎಂಬ ಮಾತಿನಂತೆ ನಾಡಿನಾದ್ಯಂತ ಹಲವಾರು ಪರಿಚಿತ ಪ್ರತಿಭೆಗಳಿದ್ದಾರೆ. ಸಾಹಿತ್ಯ, ಕೃಷಿ, ಪ್ರಕೃತಿ, ಮಕ್ಕಳು, ಶಿಕ್ಷಣ – ಹೀಗೆ ಇವರ ಹಲವು ಕ್ಷೇತ್ರಗಳ ಅದಮ್ಯ ಆಸಕ್ತಿಯ ಕಾರಣವಾಗಿ ಮತ್ತು ತಮ್ಮ ಅದ್ಭುತ ಕಂಠಸಿರಿ, ಹಾಡುಗಾರಿಕೆ ಮತ್ತು ಏಕತಾರಿ ನಾದದಿಂದಾಗಿ ಹಾಗೂ ತತ್ವಪದ ಗಾಯನದಿಂದಾಗಿ ನಾಡಿನಾದ್ಯಂತ ಒಳ್ಳೆಯ ನೆಟ್ ವರ್ಕ್ ಹೊಂದಿದ್ದಾರೆ. ರಾಜ್ಯದಾದ್ಯಂತ ತಮಗಿರುವ ಸಾಹಿತಿಗಳ ಒಡನಾಟವನ್ನು ಶೈಕ್ಷಣಿಕವಾಗಿಯೂ ಬಳಸಿಕೊಂಡು ಪದವಿ ಕಾಲೇಜಿನ ವಿದ್ಯಾರ್ಥಿಗಳಿಗೆ ನೂರಾರು ಉಪನ್ಯಾಸಗಳನ್ನು, ಕಮ್ಮಟಗಳನ್ನು, ಚರ್ಚೆ-ಸಂವಾದಗಳನ್ನು‌ ಏರ್ಪಡಿಸಿದ್ದಾರೆ. ಇವರ ಈ ವೈವಿಧ್ಯಮಯ ವ್ಯಕ್ತಿತ್ವದ ಮೊದಲ ಫಲಾನುಭವಿಗಳು ಕಾಲೇಜಿನ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ವರ್ಗದವರೇ ಎಂದರೆ ತಪ್ಪಾಗಲಾರದು.

ಮಕರಂದ ಹೀರುವ ದುಂಬಿ
ಪ್ರಾಚಾರ್ಯರು ಹುಳಿಯಾರು ಅಥವಾ ಸಮೀಪ ಮಾರ್ಗವಾಗಿ ಯಾರೇ ಪರಿಚಿತ ವಿದ್ವಾಂಸರು, ಕಲಾವಿದರು ಪ್ರಯಾಣಿಸುತ್ತಿರುವುದು ತಿಳಿದರೆ ಅವರನ್ನು ಕಾಲೇಜಿಗೆ ಕರೆಸಿ ಕನಿಷ್ಠ ಅರ್ಧ ಗಂಟೆಯಾದರೂ ಅವರಿಂದ ಉಪನ್ಯಾಸ ಕೊಡಿಸದೆ ಬಿಡುತ್ತಿರಲಿಲ್ಲ. ಬಂದವರೂ ಸಹ ಅಷ್ಟೇ ಪ್ರೀತಿಯಿಂದ ಮಕ್ಕಳೊಂದಿಗೆ ತಮ್ಮ ವಿಚಾರಗಳನ್ನು ಹಂಚಿಕೊಂಡು ವಿದ್ಯಾರ್ಥಿಗಳೊಂದಿಗೆ ಒಡನಾಡುತ್ತಿದ್ದರು. ಸಂವಾದ ನಡೆಸಿ ಸಂತೋಷಪಡುತ್ತಿದ್ದರು. ರಂಗಕರ್ಮಿ ಪ್ರಸನ್ನ, ಚಂಪಾ, ಕುಂ. ವೀರಭದ್ರಪ್ಪ, ಹನೂರು ಕೃಷ್ಣಮೂರ್ತಿ, ಓ.ಎಲ್. ನಾಗಭೂಷಣಸ್ವಾಮಿ, ನಟರಾಜ್ ಹುಳಿಯಾರ್, ನಟರಾಜ್ ಬೂದಾಳ್, ಕೆ.ಬಿ. ಸಿದ್ಧಯ್ಯ, ಎಲ್.ಎನ್‌. ಮುಕುಂದರಾಜ್, ಜಿ.ಎನ್. ಮೋಹನ್, ಆರ್.ಜಿ.ಹಳ್ಳಿ ನಾಗರಾಜ್, ತೋ. ನಂಜುಂಡಸ್ವಾಮಿ, ದೊರೈರಾಜು, ಉಜ್ಜಜ್ಜಿ ರಾಜಣ್ಣ, ಎಸ್. ಗಂಗಾಧರಯ್ಯ, ಗುರುಪ್ರಸಾದ್ ಕಂಟಲಗೆರೆ, ಎಚ್.ಆರ್. ಸ್ವಾಮಿ, ಡಾ. ತಿಪ್ಪೇಸ್ವಾಮಿ, ಪ್ರೊ. ಇಂದಿರಮ್ಮ, ಪ್ರೊ. ಪಟ್ಟಾಭಿರಾಮ ಸೋಮಯಾಜಿ, ಪ್ರೊ. ಟಿ.ಎಸ್. ನಾಗರಾಜ ಶೆಟ್ಟಿ, ಎಂ.ವಿ. ನಾಗರಾಜರಾವ್ ಮುಂತಾದ ಸಾಹಿತಿಗಳು ಕಾಲೇಜಿಗೆ ಭೇಟಿ ನೀಡಿದ್ದಾರೆ. ಹಾಗೆಯೇ ಕೃಷಿ ಕ್ಷೇತ್ರದಲ್ಲಿ ಗಮನಾರ್ಹ ಸೇವೆ ಸಲ್ಲಿಸಿರುವ ಶಿವನಂಜಯ್ಯ ಬಾಳೆಕಾಯಿ, ತೆಂತ ನಾಗೇಶ್, ಷಡಕ್ಷರಿ ತರಬೇನಹಳ್ಳಿ, ಅರುಣ್ ಕುಮಾರ್ ಶೆಟ್ಟೀಕೆರೆ, ರಂಗನಕೆರೆ ಮಹೇಶ್ ಮುಂತಾದವರು ವಿದ್ಯಾರ್ಥಿಗಳೊಂದಿಗೆ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ರಾಷ್ಟ್ರ ಪ್ರಶಸ್ತಿ ವಿಜೇತ ಚಲನಚಿತ್ರ ನಿರ್ದೇಶಕರಾದ ಲಿಂಗದೇವರು, ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯ ಅಧ್ಯಕ್ಷ ರವಿಕೃಷ್ಣಾರೆಡ್ಡಿ ಹಾಗೂ ಇವರಷ್ಟೇ ಅಲ್ಲದೆ ಸ್ಥಳೀಯವಾಗಿ ಲಭ್ಯವಿರುವ ಪ್ರತಿಭಾನ್ವಿತ ಕಲಾವಿದರನ್ನು ಮತ್ತು ವಿಶೇಷ ವ್ಯಕ್ತಿಗಳನ್ನೂ ಕಾಲೇಜಿಗೆ ಕರೆಸಿ ಅವರಿಂದ ವಿದ್ಯಾರ್ಥಿಗಳಿಗೆ ಉಪಯುಕ್ತ ಕಾರ್ಯಕ್ರಮಗಳನ್ನು ಕೊಡಿಸಿದ್ದಾರೆ.

ಎಲ್ಲ ಹೊಂದಿಸಬಲ್ಲ ಮಾಂತ್ರಿಕ
ಕಾಲೇಜಿನಲ್ಲಿ ಪ್ರಾಚಾರ್ಯ ಬಿಳಿಗೆರೆಯವರು ಇದ್ದಷ್ಟು ಕಾಲ ಯೋಜಿತ ಕಾರ್ಯಕ್ರಮಗಳಿಗಿಂತ ದಿಢೀರ್ ಎಂದು ನಿರ್ಧಾರವಾದ ಕಾರ್ಯಕ್ರಮಗಳೇ ಹೆಚ್ಚು. ಆದರೆ ಆ ದಿಢೀರ್ ಕಾರ್ಯಕ್ರಮಗಳೂ ಯಶಸ್ವಿಯಾಗುತ್ತಿದ್ದವು. ಇದಕ್ಕೆ ಕಾರಣ ಅಧ್ಯಾಪಕ ವರ್ಗದವರೂ ಇಂತಹ ಪರಿಸ್ಥಿತಿಗೆ ಒಗ್ಗಿಕೊಂಡಿದ್ದು ಹಾಗೂ ಖಚಿತ ನಿರ್ಧಾರ ಕೈಗೊಳ್ಳುವ ಪ್ರಾಚಾರ್ಯರ ಗುಣ ಮತ್ತು ಅವರ ಅದಮ್ಯ ಆತ್ಮವಿಶ್ವಾಸ. ಸದರಿ ಉಪನ್ಯಾಸ ಯಾವ ವಿಭಾಗಕ್ಕೆ, ಯಾವ ತರಗತಿಗಳಿಗೆ ಸೂಕ್ತ, ಯಾವ ಬ್ಯಾನರ್ ಅಡಿ ಆ ಕಾರ್ಯಕ್ರಮ ನಡೆಯಬೇಕು ಎಂದು ಕೆಲವೇ ನಿಮಿಷಗಳಲ್ಲಿ ನಿರ್ಧರಿಸುತ್ತಿದ್ದರು. ಕಾಲೇಜಿನ ಎಲ್ಲ ವಿದ್ಯಾರ್ಥಿಗಳಿಗೂ ಸದರಿ ಕಾರ್ಯಕ್ರಮ ಅವಶ್ಯ ಎನಿಸಿದಲ್ಲಿ ಅದಕ್ಕೂ ‘ಕಾಲೇಜು ಬಯಲು ಆಲಯ’ ಕೆಲ ನಿಮಿಷಗಳಲ್ಲೇ ಸಜ್ಜುಗೊಳ್ಳುತ್ತಿತ್ತು. ಸಮಯದ ಅಭಾವವಿದ್ದಾಗ ಎಷ್ಟೋ ಬಾರಿ ಆರಂಭ ಗೀತೆ, ಸ್ವಾಗತ, ನಿರೂಪಣೆ, ವಂದನಾರ್ಪಣೆ ಇತ್ಯಾದಿ ಫಾರ್ಮಾಲಿಟೀಸ್ ಗಳಿಗೆ ತಿಲಾಂಜಲಿ ಇಡಲಾಗುತಿತ್ತು. ಉಪನ್ಯಾಸ ಮತ್ತು ಸಂವಾದಗಳಿಗೆ ಹೆಚ್ಚು ಆಸ್ಪದ ಕೊಡಲಾಗುತ್ತಿತ್ತು. ಸಹೋದ್ಯೋಗಿಗಳನ್ನು ಒಟ್ಟಿಗೆ ಕರೆದೊಯ್ಯುವ ಕಲೆ ಅವರಿಗೆ ಸಿದ್ಧಿಸಿತ್ತು. ಸಾರ್ವಜನಿಕರು, ಪೋಷಕರು, ರಾಜಕಾರಣಿಗಳು, ಅಧಿಕಾರಿವರ್ಗ ಯಾರೇ ಇರಬಹುದು ಅವರನ್ನು ಪ್ರಾಚಾರ್ಯರು ನಿಭಾಯಿಸುತ್ತಿದ್ದ ರೀತಿಯೇ ವಿಭಿನ್ನವಾಗಿರುತ್ತಿತ್ತು.

ವಿಭಿನ್ನ ಕಾರ್ಯಕ್ರಮಗಳ ರೂವಾರಿ
ಪ್ರಾಚಾರ್ಯ ಬಿಳಿಗೆರೆಯವರು ಕಾಲೇಜಿನಲ್ಲಿ ಆಯೋಜಿಸುತ್ತಿದ್ದ ಕಾರ್ಯಕ್ರಮಗಳೂ ವಿಭಿನ್ನವಾಗಿರುತ್ತಿದ್ದವು. ‘ಫಿಲ್ಮ್ ಅಪ್ರಿಸಿಯೇಷನ್’ ಕೋರ್ಸ್ ಮೂಲಕ ಕನ್ನಡ ಹಾಗೂ ಜಾಗತಿಕ ಮಟ್ಟದ ಹಲವಾರು ಪ್ರಶಸ್ತಿ ವಿಜೇತ ಚಲನಚಿತ್ರಗಳ ಪ್ರದರ್ಶನ; ಹಲವಾರು ‘ದತ್ತಿ ಉಪನ್ಯಾಸಗಳು’, ಕೃಷಿ ಸಂಕಷ್ಟಗಳನ್ನು ಕುರಿತ ‘ರಾಜ್ಯ ಮಟ್ಟದ ವಿಚಾರ ಸಂಕಿರಣ’, ‘ಅನುವಾದ ಕಮ್ಮಟಗಳು’ ಮತ್ತು ‘ನ್ಯಾಕ್ ಕುರಿತ ಕಾರ್ಯಾಗಾರ’; ಕನ್ನಡ ಪುಸ್ತಕ ಪ್ರಾಧಿಕಾರದ ಸಹಯೋಗದೊಂದಿಗೆ ‘ಜಾಣ ಜಾಣೆಯರ ಬಳಗ’ ಸ್ಥಾಪನೆ, ಮತ್ತು ಈ ಬಳಗದ ಮೂಲಕ ‘ಸಾಹಿತಿಗಳೊಂದಿಗೆ ಸಂವಾದ’, ‘ಪ್ರಕಾಶಕರೊಂದಿಗೆ ಸಂವಾದ’ ಮುಂತಾದ ಕಾರ್ಯಕ್ರಮಗಳು; ಸಿ.ಎಂ.ಸಿ.ಎ. ಸಂಸ್ಥೆಯೊಂದಿಗೆ ಎಂ.ಓ.ಯು.(MoU) ಮೂಲಕ ಹಲವಾರು ‘ಯುವಜನ’ ಕೇಂದ್ರಿಕ ಕಾರ್ಯಕ್ರಮಗಳು; ‘ಸಂತೆ ಭೇಟಿ’, ‘ಕೃಷಿ ತೋಟದ ಭೇಟಿ’, ‘ಕೈಗಾರಿಕಾ ಸ್ಥಳ ಭೇಟಿ’; ರಾಜ್ಯ ಮಟ್ಟದ ಕವಿಗೋಷ್ಠಿಗಳು, ವಿದ್ಯಾರ್ಥಿ ಕವಿಗೋಷ್ಠಿಗಳು; ಅಂಧ ಕಲಾವಿದರಿಂದ ಸಂಗೀತ ಕಛೇರಿ, ಭಾಷಣ-ಹಾಡು-ಚರ್ಚೆ ಹೀಗೆ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳ ಆಯೋಜನೆ; ‘ವ್ಯಕ್ತಿತ್ವ ವಿಕಸನ’ ತರಬೇತಿ, ‘ಜೀವನ ಕೌಶಲ’ ತರಬೇತಿ; ‘ಉದ್ಯೋಗಕ್ಕಾಗಿ ಯುವ ಜನಾಂದೋಲನ’, ‘ಗಾಂಧಿ ಮತ್ತು ಯುವಜನತೆ’, ‘ಹಿಂದ್ ಸ್ವರಾಜ್’ ಮುಂತಾದ ಚರ್ಚೆ ಮತ್ತು ಸಂವಾದಗಳು; ‘ಉಚಿತ ವೈದ್ಯಕೀಯ ಶಿಬಿರಗಳು’, ‘ರಕ್ತದಾನ ಶಿಬಿರಗಳು’, ‘ಮೂರ್ಛೆ ರೋಗ ಕುರಿತು ಜಾಗೃತಿ’ ಮುಂತಾದ ಸಮುದಾಯ ಕೇಂದ್ರಿತ ಕಾರ್ಯಕ್ರಮಗಳು ಮತ್ತು ಅಂತರ ಕಾಲೇಜು ಕ್ರೀಡಾಕೂಟಗಳ ಆಯೋಜನೆ – ಹೀಗೆ ಕಾಲೇಜು ನಿರಂತರ ಕ್ರಿಯಾಶೀಲವಾಗಿರುವಲ್ಲಿ ಪ್ರಾಚಾರ್ಯರ ಪಾತ್ರ ಪ್ರಮುಖವಾಗಿರುತ್ತಿತ್ತು. ಇವರದೇ ಕನಸಿನ “ತಲೆಮಾರು” ಎಂಬ ಹೆಸರಿನ‌ ಕಾಲೇಜು ವಾರ್ಷಿಕ ಪತ್ರಿಕೆ ಕೂಡ ತನ್ನ ವಿನೂತನತೆಯಿಂದ ಶೈಕ್ಷಣಿಕ ವಲಯದಲ್ಲಿ ಗಮನ ಸೆಳೆದಿತ್ತು. ಈ ಎಲ್ಲಾ ಕಾರಣಗಳಿಂದಾಗಿಯೇ ‘ಸಿ’ ಗ್ರೇಡ್ ನಲ್ಲಿದ್ದ ಹೋಬಳಿ ಮಟ್ಟದ ನಮ್ಮ ಕಾಲೇಜು ಈ ವರ್ಷ ನ್ಯಾಕ್ ಮೌಲ್ಯಮಾಪನದಲ್ಲಿ ‘ಬಿ’ ಗ್ರೇಡ್ ಪಡೆಯಲು ಸಾಧ್ಯವಾಯಿತು. ಸಾಂಸ್ಕೃತಿಕ ಮತ್ತು ಕ್ರೀಡಾ ಸ್ಪರ್ಧೆಗಳಲ್ಲಿ ಅಂತರ ಕಾಲೇಜು ಮತ್ತು ಅಂತರ ವಲಯ ಮಟ್ಟದ ಬಹುಮಾನಗಳನ್ನು ಗೆಲ್ಲಲು ಸಾಧ್ಯವಾಯಿತು. ಶೈಕ್ಷಣಿಕವಾಗಿಯೂ ನಮ್ಮ ವಿದ್ಯಾರ್ಥಿಗಳು ವಿಶ್ವವಿದ್ಯಾಲಯ ಮಟ್ಟದಲ್ಲಿ ರ್ಯಾಂಕ್ ಪಡೆಯಲು ಸಾಧ್ಯವಾಯಿತು.

ಮಕ್ಕಳ ಪ್ರೇಮಿ
ಮಕ್ಕಳೊಂದಿಗೆ ಮಗುವಾಗುತ್ತಿದ್ದ ಪ್ರಾಚಾರ್ಯ ಬಿಳಿಗೆರೆಯವರು ಬಹುಬೇಗ ಅವರನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳುತ್ತಿದ್ದರು. ತಮ್ಮ‌ ಊರು,‌ ಕಾರ್ಯ ಕ್ಷೇತ್ರ ಮತ್ತು ಅವುಗಳ ಸುತ್ತಮುತ್ತಲಿನ ಊರುಗಳಲ್ಲಿನ ಸರ್ಕಾರಿ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳಿಗೆ ನಿರಂತರ ಭೇಟಿ ಕೊಟ್ಟು ಮಕ್ಕಳಿಗೆ‌ ಹಾಡು ಮತ್ತು ಕಥೆಗಳನ್ನು ಹೇಳಿಕೊಡುತ್ತಿದ್ದರು. ಆ ಕಾರಣವಾಗಿ ಸುತ್ತ ಮುತ್ತ ಎಲ್ಲೇ ಹೋದರು ಅವರಿಗೆ ದೊಡ್ಡ ಸಂಖ್ಯೆಯ ಮಕ್ಕಳ ಅಭಿಮಾನಿಗಳಿರುತ್ತಿದ್ದರು. ಮಕ್ಕಳ ಸಾಹಿತ್ಯಕ್ಕೆ ಇವರು ನೀಡಿರುವ ಕಾಣಿಕೆ ಕೂಡ ಅಪಾರ. ಮಕ್ಕಳಿಗಾಗಿ ಇವರು ಹಲವು ಪದ್ಯಗಳು ಮತ್ತು ನಾಟಕಗಳನ್ನು ಬರೆದಿದ್ದಾರೆ. ‘ಕಣ್ಮುಚ್ಚಾಲೆ ಮಕ್ಕಳ ಗುಂಪು’ ಎಂಬ ಚಿಣ್ಣರ ಸಂಘಟನೆಯನ್ನು ಕಟ್ಟಿದ್ದಾರೆ. ಇತ್ತೀಚೆಗೆ ಹದಿಹರೆಯದ ವಿದ್ಯಾರ್ಥಿಗಳಿಗಾಗಿ ‘ಛೂಮಂತ್ರಯ್ಯನ ಕಥೆಗಳು’ ಎಂಬ ಕಥಾ ಸಂಕಲನವನ್ನೂ ಹೊರತಂದಿದ್ದಾರೆ. ಸ್ವತಃ ನಟರೂ, ರಂಗಕರ್ಮಿಯೂ ಆಗಿರುವ ಪ್ರಾಚಾರ್ಯ ಬಿಳಿಗೆರೆಯವರು ಕಾಲೇಜಿನಲ್ಲಿ ಹಲವು ರಂಗ ಪ್ರಯೋಗಗಳನ್ನು ಆಯೋಜಿಸಿದ್ದಾರೆ. ಇವರದೇ ರಚನೆ‌ ಮತ್ತು ನಿರ್ದೇಶನದ ‘ಕೇಡಾಳ ಕೆಪ್ಪರ್ಕ’ ಎಂಬ ನಾಟಕ‌ ಕಾಲೇಜಿನ ರಂಗ ಶಿಬಿರದಲ್ಲಿ ಪ್ರದರ್ಶನಗೊಂಡು ಅದ್ಭುತ ಯಶಸ್ಸನ್ನೂ ಕಂಡಿತ್ತು.

ಈ ನೆಲದ ಸಾಹಿತಿ
ಬಿಳಿಗೆರೆಯವರು ಹತ್ತಾರು ಕೃತಿಗಳನ್ನು ರಚಿಸಿ ಕವಿಯಾಗಿ ಲೇಖಕರಾಗಿ ನಾಟಕಕಾರರಾಗಿ ಕಥೆಗಾರರಾಗಿ ಈಗಾಗಲೇ ನಾಡಿನಾದ್ಯಂತ ಗುರುತಿಸಿಕೊಂಡಿದ್ದಾರೆ. ‘ಸಾವಿರ ಕಣ್ಣಿನ ನವಿಲು’, ‘ಕಿಂಚಿತ್ತು ಪ್ರೀತಿಯ ಬದುಕು’, ‘ದಾಸಯ್ಯ ಇದು ಕನಸೇನಯ್ಯ’, ‘ಧರೆ ಮೇಲೆ ಉರಿಪಾದ’, ‘ಗಾಯಗೊಂಡಿದೆ ಗರಿಕೆ ಗಾನ’, ‘ಭೂಮಿಯೊಂದು ಮಹಾ ಬೀಜ’ – ಇವು ಇವರ ಕಾವ್ಯ ಕೃತಿಗಳು. ‘ಜೀರಿಂಬೆ ಹಾಡು’, ‘ಗುಡು ಗುಡು ಗುಡ್ಡ’, ‘ಪದ್ಯದ ಮರ’, ‘ಢ್ರೂ ಢ್ರೂ ಢ್ರೂಟೆ’, ‘ಹಾಡೆ ಸುವ್ವಿ’ – ಇವು ಮಕ್ಕಳಿಗಾಗಿ ಬರೆದ ಹಾಡಿನ ಪುಸ್ತಕಗಳು. ‘ಮಳೆ ಹುಚ್ಚ’, ‘ಅಗಲ ಕಿವಿಯ ಅರಿವುಗಾರ’, ‘ನವಿಲೂರಿನ ಕತೆ’, ‘ಅಂಗಭಂಗದ ರಾಜ್ಯದಲ್ಲಿ’, ‘ಕೇಡಾಳ ಕೆಪ್ಪರ್ಕ’, ‘ಕತ್ತೆ ಹಾಡು’ – ಇವು ಮಕ್ಕಳ ನಾಟಕಗಳು. ‘ಚಗಚೆ ಹೂವಿನ ಹುಡುಗಿ’ – ಇದು ಮಕ್ಕಳ ಕಥಾ ಪುಸ್ತಕ. ‘ಮಳೆ ನೀರ ಕುಡಿ’ – ಇದು ಮಳೆ ನೀರ ಕೊಯ್ಲು ಕುರಿತ ಪುಸ್ತಕ. ‘ಹುಟ್ಟೋದು ನಿನ್ನ ಒಡಲಲ್ಲಿ’ – ಸಾಕ್ಷರತಾ ಹಾಡುಗಳ ಪುಸ್ತಕ, ‘ಇವು ಗೂಟಗಳಲ್ಲ ತೋಟಗಳು’ – ತುಮಕೂರು ಜಿಲ್ಲೆಯ ಸುಸ್ಥಿರ ತೋಟಗಳ ಪರಿಚಯ ಪುಸ್ತಕ, ‘ರಾಶಿ ಮಾಡೋಣ ಬನ್ನಿರಿ’ – ಈ ಕಾಲದ ಪ್ರಾರ್ಥನಾ ಗೀತೆಗಳು, ‘ಅನ್ನ ದೇವರ ಮುಂದೆ’, ‘ಮರದಡಿಯ ಮನುಷ್ಯ’, ‘ಬಿಸ್ಲುಬಾಳೆ ಹಣ್ಣು ಮತ್ತು ಇತರ ಪ್ರಬಂಧಗಳು’ – ಇವು ಪ್ರಬಂಧ ಬರಹಗಳು, ಇವರ ‘ಬೆಳಿಗೆರೆ ಹಾಡುಗಳು’ ಸಂಕಲನ ಕೃಷಿಪದ, ನೀರಪದ ಮತ್ತು ತತ್ವಪದಗಳಿಂದ ಕೂಡಿದ ವಿಶೇಷ ಕೃತಿ.

ಸಾಹಿತ್ಯ ಕೃಷಿಗೆ ಅರಸಿ ಬಂದ ಗೌರವಗಳು
ಇವರ ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ‘ಆರ್ಯಭಟ ಸಾಹಿತ್ಯ ಪ್ರಶಸ್ತಿ’, ‘ಜಿ.ಎಸ್.ಎಸ್. ಕಾವ್ಯ ಪ್ರಶಸ್ತಿ’, ‘ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ’ ಮತ್ತು ‘ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಪ್ರಶಸ್ತಿ’ಗಳೂ ಸೇರಿದಂತೆ ಹತ್ತುಹಲವು ಪ್ರಶಸ್ತಿಗಳು ಸಂದಿವೆ. ಇವರ ‘ತೀರಿ ಹೋದ ಹಳ್ಳದಗುಂಟ’ ಎಂಬ ಪ್ರಬಂಧ ಮಂಗಳೂರು ವಿಶ್ವವಿದ್ಯಾಲಯದಲ್ಲಿ ಪಠ್ಯವಾಗಿದೆ. ಹಲವಾರು ನಿಯತಕಾಲಿಕೆಗಳಲ್ಲಿ ಇವರ ಲೇಖನಗಳು, ಪ್ರಬಂಧಗಳು ಪ್ರಕಟವಾಗಿವೆ. ಇವರ ಬಹುತೇಕ ಬರಹಗಳು ಮಣ್ಣು, ಬೀಜ, ಮಳೆ, ನೀರು, ಅಂತರ್ಜಲ, ಹಸಿರು, ಕೀಟ, ಬೇಲಿ, ಹಣ್ಣು, ಹುಳ, ಗೊಬ್ಬರ, ಸೊಪ್ಪು, ತರಕಾರಿ – ಇವುಗಳನ್ನು ಕುರಿತು ಇವೆ. ಉಳಿದಂತೆ ಬುದ್ಧ-ಬಸವ-ಅಂಬೇಡ್ಕರ್ ಕುರಿತ ಕವಿತೆಗಳು, ಯುದ್ಧ ವಿರೋಧಿ ಹಾಡುಗಳು ಮತ್ತು ಬರಹಗಳಿವೆ. ಕಳೆದ ವರ್ಷದಿಂದ ‘ಪ್ರಜಾಪ್ರಗತಿ’ ದಿನ ಪತ್ರಿಕೆ, ‘ಅವಧಿ ಮ್ಯಾಗಜಿನ್’ ಮತ್ತು ‘ನಾನು ಗೌರಿ.ಕಾಂ’ ಪತ್ರಿಕೆಗಳಲ್ಲಿ ಇವರ ‘ಕೃಷಿ ಕಥನ’ ಕುರಿತ ಅಂಕಣಗಳು ನಿರಂತರ ಪ್ರಕಟವಾಗುತ್ತಿವೆ.

ನಮ್ಮ ಪ್ರಕಾಶಕ – ಪತ್ರಿಕೆಗಳ ಸಂಪಾದಕ
ಬಿಳಿಗೆರೆಯವರು ‘ನಮ್ಮ ಪ್ರಕಾಶನ’ದ ಮೂಲಕ ತಮ್ಮ ಪುಸ್ತಕಗಳೂ ಸೇರಿದಂತೆ ಹಲವರ ಪುಸ್ತಕಗಳನ್ನು ಹೊರತಂದಿದ್ದಾರೆ. ಪ್ರಕಾಶಕರಾಗಿ ಪುಸ್ತಕ ಮಾರುವುದರಲ್ಲಿ ಇವರು ಸಿದ್ಧಹಸ್ತರು. ತಮ್ಮದೇ ಪುಸ್ತಕವನ್ನು ಮಾರಲು ಇವರು ಸ್ವಲ್ಪವೂ ಹಿಂಜರಿಯುವುದಿಲ್ಲ.‌ ಆ ಮಡಿವಂತಿಕೆಯನ್ನು ಅವರು ಒಪ್ಪುವುದೂ ಇಲ್ಲ. ಅದು ಯಾವ ಸ್ಥಳವಾದರೂ ಸರಿ, ಯಾವುದೇ ಸಾಹಿತ್ಯಿಕ ಸಮಾವೇಶವಾದರೂ ಸರಿ, ಅಲ್ಲಿ ಅವರ ಹಾಜರಿ ಇದ್ದರೆ ಪುಸ್ತಕಗಳ ಮಾರಾಟ ಇದ್ದೇ ಇರುತ್ತದೆ. ತಮ್ಮದೇ ಪ್ರಶಸ್ತಿ ಸ್ವೀಕಾರ ಸಮಾರಂಭದಲ್ಲೂ ಮಾರುತ್ತಾರೆ, ತಮ್ಮ ಪ್ರತಿನಿತ್ಯದ ಬಸ್ ಪ್ರಯಾಣದಲ್ಲಿಯೂ ಮಾರುತ್ತಾರೆ. ಇವರದೇ ಪ್ರಕಾಶನದ ಇವರ ‘ಭೂಮಿಯೊಂದು ಮಹಾ ಬೀಜ’ ಕೃತಿಗೆ ಪ್ರಕಾಶಕರಿಗೆ ನೀಡುವ ‘ಪುಸ್ತಕ ಸೊಗಸು’ ಬಹುಮಾನ ಕೂಡ ಲಭಿಸಿದೆ. ಇವರು ‘ಒಡಲಾಳ’ ದ್ವೈಮಾಸಿಕ ಸಾಹಿತ್ಯ ಪತ್ರಿಕೆಯ ಸಂಪಾದಕರಾಗಿಯೂ ಮತ್ತು ‘ಸಿರಿ ಸಮೃದ್ಧಿ’ ಕೃಷಿ ಮಾಸಿಕದ ಗೌರವ ಸಂಪಾದಕರಾಗಿಯೂ ಕೆಲಸ ನಿರ್ವಹಿಸಿದ್ದಾರೆ.

ಪ್ರತಿಭೆಯ ಯಾನ – ಪ್ರೀತಿಯ ಬೀಳ್ಕೊಡುಗೆ
ಇಂತಹ ನಮ್ಮ ಪ್ರಾಚಾರ್ಯರು ವೃತ್ತಿ ಪದೋನ್ನತಿ ಹೊಂದಿ ನಮ್ಮಿಂದ ಭೌತಿಕವಾಗಿ ದೂರವಾಗುತ್ತಿರುವುದು ಬೇಸರದ ಸಂಗತಿಯಾದರೂ ಕಾಲೇಜು ಶಿಕ್ಷಣ ಇಲಾಖೆಯ ಒಂದು ಇಡೀ ವಿಭಾಗದ ಮುಖ್ಯಸ್ಥರಾಗಿ, ಧಾರವಾಡ ವಿಭಾಗದ ಜಂಟಿ ನಿರ್ದೇಶಕರಾಗಿ ಅಧಿಕಾರ ಸ್ವೀಕರಿಸುತ್ತಿರುವುದು ಒಂದು ರೀತಿಯಲ್ಲಿ ಸಂತೋಷದ ವಿಷಯವಾಗಿದೆ. ಅವರ ಸೇವೆ ವಿಶಾಲ ವ್ಯಾಪ್ತಿಗೆ ದೊರೆಯುವ ಕಾರಣ ಮತ್ತು ಉತ್ತರ ಕರ್ನಾಟಕ ಭಾಗದಲ್ಲೂ ಅವರ ಚಿಂತನೆಗಳು ಹಬ್ಬಲಿ ಎಂಬ ಮಹದಾಸೆಯಿಂದ ಅವರನ್ನು ನಾವು ಸಂತೋಷದಿಂದಲೇ ಬೀಳ್ಕೊಟ್ಟಿದ್ದೇವೆ. ಸಂಪರ್ಕ ಸಾಧಿಸಲು ಈಗ ಹಲ ಬಗೆಯ ಮಾಧ್ಯಮಗಳು ನಮಗೆ ನೆರವಾಗುತ್ತಿರುವುದರಿಂದ ಅವರ ನಿರಂತರ ಒಡನಾಟ ಮತ್ತು ಮಾರ್ಗದರ್ಶನ ಇದ್ದೇ ಇರುತ್ತದೆ. ಅವರು ಹಾಕಿಕೊಟ್ಟ ಮಾರ್ಗದಲ್ಲಿ ವಿದ್ಯಾರ್ಥಿಗಳ‌ ಪ್ರಗತಿಗೆ ಪೂರಕವಾಗಿ ಪಠ್ಯ, ಪಠ್ಯಪೂರಕ ಹಾಗೂ ಪಠ್ಯೇತರ ಚಟುವಟಿಕೆಗಳನ್ನು ಹಮ್ಮಿಕೊಂಡು ಕಾರ್ಯಗತಗೊಳಿಸುವ ಮೂಲಕ ಅವರ ನೆನಪನ್ನು ಸದಾ ಸ್ಥಾಯಿಯಾಗಿಡುತ್ತೇವೆ ಎಂಬ ವಿಶ್ವಾಸವಿದೆ. ಹಾಗೆಯೇ ಪ್ರಾಚಾರ್ಯ ಬಿಳಿಗೆರೆಯವರು ಜಂಟಿ ನಿರ್ದೇಶಕರಾಗಿ ತಮ್ಮ ಹೊಸ ಕಾರ್ಯಕ್ಷೇತ್ರದಲ್ಲಿಯೂ ತಮ್ಮ ಛಾಪನ್ನು ಮೂಡಿಸಿ ಆ ಭಾಗದ ಪದವಿ ಕಾಲೇಜುಗಳಲ್ಲಿ ಹೊಸ ಚೈತನ್ಯವನ್ನು ಮೂಡಿಸುತ್ತಾರೆ, ತಮ್ಮ ಹೊಸ ಜವಾಬ್ದಾರಿಯಲ್ಲಿಯೂ ಯಶಸ್ಸು ಕಾಣುತ್ತಾರೆ ಎಂಬ ದೃಢ ನಂಬಿಕೆ ಕೂಡ ನಮಗಿದೆ.


‍ಲೇಖಕರು Admin

May 25, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: