'ಬಹುತೇಕರು ಬೆಳೆಯುವುದಕ್ಕೆ ಸಿಜಿಕೆ ಅವರ ನಾಟಕಗಳು ಕಾರಣವಾಗಿದ್ದವು' – ಬಿ ಸುರೇಶ್


ಸಿ.ಜಿ.ಕೃಷ್ಣಸ್ವಾಮಿಯವರು ಸಹ ಬೀದಿನಾಟಕ ಚಳವಳಿಯ ಮೂಲಕ ಕನ್ನಡ ರಂಗಭೂಮಿಗೆ ಬಂದವರು. ಇವರ ನಿರ್ದೇಬಶನದ ‘ಬೆಲ್ಚಿ’ ‘ಅಲ್ಲೆ ಇದ್ದೋರು’ ನಾಟಕಗಳು ಆವರೆಗೆ ಪ್ರಚಲಿತವಾಗಿದ್ದ ಬೀದಿ ನಾಟಕ ಅಭಿನಯಿಸುವ ಕ್ರಮವನ್ನು ಬಿಟ್ಟು ಹೊಸ ದೃಶ್ಯ ವೈಭವ ನಿರ್ಮಿಸುವ ಪ್ರಯತ್ನ ಮಾಡಿದ್ದವು. ನಂತರದ ದಿನಗಳಲ್ಲಿ ಪ್ರೊಸಿನಿಯಂ ರಂಗಭೂಮಿಗೆ ಸಿಜಿಕೆ ಹೊರಳಿದರು. ಈ ಹಾದಿಯಲ್ಲಿ ಅನೇಕ ಅಪರೂಪದ ಪ್ರಯೋಗಗಳನ್ನು ಕನ್ನಡ ರಂಗಭೂಮಿಗೆ ನೀಡಿದರು. ಅವುಗಳಲ್ಲಿ ‘ಒಡಲಾಳ’ ಪ್ರಯೋಗವಂತೂ ತೀರಾ ವಿಶಿಷ್ಟವಾಗಿತ್ತು. ಎಂಬತ್ತರ ದಶಕದ ಎರಡನೆಯ ಅರ್ಧದಲ್ಲಿ ಪ್ರದರ್ಶನ ಕಂಡ ಈ ನಾಟಕವು ತನ್ನೊಳಗಿನ ದಲಿತ ಲೋಕವನ್ನು ಬಿಚ್ಚಿಡುತ್ತಾ ಪ್ರೇಕ್ಷಕರನ್ನು ವಿಸ್ಮಯಕ್ಕೆ ತಳ್ಳುವಲ್ಲಿ ಸಫಲವಾಗಿತ್ತು. ಈ ನಾಟಕದಲ್ಲಿ ಉಮಾಶ್ರೀ ಅವರ ಅಭಿನಯವಂತೂ ನೋಡುಗರನ್ನು ಮಂತ್ರಮುಗ್ಧರಾನ್ನಾಗಿಸಿತ್ತು.
ದಲಿತ ಲೋಕಕ್ಕೆ ಅಭಿನಯ ಅಥವಾ ಯಾವುದೇ ಕಲೆ ಅಭಿಜಾತ. ಅಲ್ಲಿ ಕಲಿಕೆಯ ಅಗತ್ಯವೇ ಇಲ್ಲ ಎಂಬ ನಿಲುವಿನ ಸಿಜಿಕೆ ರಂಗದಮೇಲೆ ದಲಿತರನ್ನೇ ತಂದರು. ಹಿಂದೆಂದೂ ಇದ್ದಿರದ ಪ್ರಮಾಣದಲ್ಲಿ ರಂಗದಮೇಲೆ, ಹಿನ್ನೆಲೆಯಲ್ಲಿ ದುಡಿದ ಅವರುಗಳು ಸಿಜಿಕೆ ಪ್ರಯೋಗಗಳಿಗೆ ಹೊಸ ಅರ್ಥ, ಸಾರ್ಥಕತೆ, ಯಶಸ್ಸನ್ನು ತುಂಬಿದರು. ಸಿಜಿಕೆ ಅವರ ಎಲ್ಲ ನಾಟಕಗಳೂ ‘ಅಂಬೇಡ್ಕರ್’, ಕಂಬಾರರ ‘ಚಕೋರಿ’? ಮೊದಲ್ಗೊಂಡು ಎಲ್ಲದರ ಯಶಸ್ಸಿನ ಹಿಂದೆ ಈ ತಂತ್ರವಿತ್ತು. ಸಾಣೇಹಳ್ಳಿಯ ರೆಪರ್ಟರಿಗೂ ಇದು ಹೊರತಲ್ಲ. ಒಂದು ಹೊಸ ರಂಗಕರ್ಮಿಗಳ ತಂಡವೇ ಇದರಿಂದ ಮುನ್ನೆಲೆಗೆ ಬಂದಿದ್ದು ವಿಶೇಷ.
ಸಿ.ಜಿ.ಕೆ. ನಿರ್ದೇಶನದ ‘ಸುಲ್ತಾನ್ ಟಿಪ್ಪು’, ‘ನೀಗಿಕೊಂಡ ಸಂಸ’, ‘ಷೇಕ್ಸ್‌ಪಿಯರ್ ಸ್ವಪ್ನನೌಕೆ’ ನಾಟಕಗಳು ದೃಶ್ಯವೈಭವದಿಂದ ಮನಸ್ಸಲ್ಲಿ ನಿಂತವು. ‘ಸುಲ್ತಾನ್ ಟಿಪ್ಪು’ ನಾಟಕಕ್ಕೆ ರಂಗಸ್ಥಳದ ವಿಸ್ತಾರ (ಅಗಲ-ಉದ್ದಗಳು) ಮಾತ್ರವಲ್ಲ ಎತ್ತರವನ್ನೂ ಬಳಸಬೇಕೆಂಬ ತಮ್ಮ ಉದ್ದೇಶವನ್ನು ಸಿಜಿಕೆ ಮಾಡಿ ತೋರಿಸಿದರು. ಮಸೀದಿ ಇತ್ಯಾದಿಗಳನ್ನು ಕಲಾಕ್ಷೇತ್ರದ ಎತ್ತರವನ್ನೂ ಬಳಸಿ ಸೆಟ್ ಹಾಕಿದ್ದರು. ರಂಗಸಂಘಟಕ, ನಿರ್ದೇಶಕ ಮಾತ್ರ ಎಂದು ಕೊಂಡಿದ್ದವರಿಗೆ ಬಿ.ವಿ. ರಾಜಾರಾಂ ಅಪರೂಪದ ನಟ ಎಂಬುದನ್ನು ಈ ನಾಟಕದ ಅವರ ಟಿಪ್ಪು ಪಾತ್ರದಿಂದ ಜನರಿಗೆ ತೋರಿಸಿಕೊಟ್ಟರು.
‘ನೀಗಿಕೊಂಡ ಸಂಸ’ದ ರಂಗವಿನ್ಯಾಸಕ್ಕೂ ಎತ್ತರವನ್ನು ಬಳಸಿಕೊಳ್ಳಲಾಗಿತ್ತು. ಅಲ್ಲಿ ಹಣತೆಗಳ ಬಳಕೆ, ಸಂಸರ ಪಾತ್ರದಲ್ಲಿ ನಾಗಾಭರಣರ ಅಭಿನಯ ಹೀಗೆ ಉತ್ತಮಿಕೆಗಳ ದೊಡ್ಡ ಪಟ್ಟಿಯೇ ಇದೆ. ಎಲ್ಲಕ್ಕಿಂತ ಮುಖ್ಯವಾಗಿ ಕಿ.ರಂ. ನಾಗರಾಜರಿಂದ ಈ ನಾಟಕ ಬರೆಸಿದ ವಿಶೇಷವಿತ್ತು.
ಸಿ.ಜಿ.ಕೆ. ‘ಕುಸುಮಬಾಲೆ’ ನಾಟಕವನ್ನೂ ರಂಗದಮೇಲೆ ಓದುವ ಪ್ರಯೋಗ ಮಾಡಿದ್ದೂ ಮಹತ್ವದ ಸಂಗತಿಯೇ ಹಾಗೊಂದು ರಂಗವಿಧಾನ ಚಾಲ್ತಿಗೂ ಬಂತು. ದೆಹಲಿರಂಗಶಾಲೆಯ ಅಂಕುರ್ ಅವರು ‘ಸಂಸ್ಕಾರ’ ಕಾದಂಬರಿಯನ್ನು ಹೀಗೆ ಓದು ರಂಗವಾಗಿಸಿದ್ದರು. ಸಿ.ಬಸವಲಿಂಗಯ್ಯನವರು ಈ ಬಗ್ಗೆ ಸಿದ್ಧಾಂತಗಳನ್ನೇ ಕಟ್ಟಿದರು.
‘ಶೇಕ್ಸ್‌ಪಿಯರ್ ಸ್ವಪ್ನನೌಕೆ’ಗೆ ಮಾಡಿದ್ದ ರಂಗ ವಿನ್ಯಾಸ ಪ್ರೇಕ್ಷಕನ ಕಣ್ಣಿಗೆ ಹಬ್ಬ… ನಿಜವಾದ ಸ್ವಪ್ನ ಲೋಕವನ್ನೇ ಕಂಡರಿಸಿತ್ತು. ಸಿಜಿಕೆ ರಂಗ ಪ್ರಯೋಗಕ್ಕೆ ಹೊಂದುವಂಥ ನಾಟಕಗಳನ್ನು ಲೇಖಕರ ಜೊತೆ ಕುಳಿತು ಸಿದ್ಧಪಡಿಸಿದ್ದು, ತಾವೇ ಬರೆದದ್ದು, ‘ರಂಗನಿರಂತರ’ದ ಮೂಲಕ ಹೊಸ ನಿರ್ದೇಶಕರ ತಂಡವನ್ನು ಬೆಳಕಿಗೆ ತಂದದ್ದು ಹೀಗೆ ಪುಟಗಟ್ಟಲೆ ಹೇಳುವ ಮಾತಿದೆ.
ಸಿ.ಜಿ.ಕೆ. ಅವರು ದೃಶ್ಯವಿನ್ಯಾಸ ಮತ್ತು ರಂಗವಿನ್ಯಾಸಕ್ಕೆ ನೀಡುತ್ತಿದ್ದ ಒತ್ತಿನಿಂದಾಗಿ ಇವರ ನಾಟಕಗಳಲ್ಲಿ ರಂಗವಿನ್ಯಾಸಕರು ಹಾಗೂ ನೇಪಥ್ಯದ ಕೌಶಲಕ್ಕೆ ಹೆಚ್ಚು ಅವಕಾಶ ದೊರೆಯುತ್ತಿತ್ತು. ಹೀಗಾಗಿ ಇಂದು ಕನ್ನಡ ರಂಗಭೂಮಿಯಲ್ಲಿ ದೊಡ್ಡ ಹೆಸರಾಗಿರುವ ನೇಪಥ್ಯದವರಲ್ಲಿ ಬಹುತೇಕರು ಬೆಳೆಯುವುದಕ್ಕೆ ಸಿ.ಜಿ.ಕೆ. ಅವರ ನಾಟಕಗಳು ಕಾರಣವಾಗಿದ್ದವು

ಬಿ ಸುರೇಶ್

‍ಲೇಖಕರು G

January 17, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Ramesh Gururajarao

    ನನ್ನಲ್ಲಿ ಹವ್ಯಾಸಿ ರಂಗಭೂಮಿಯ ಗುಂಗು ಹತ್ತಿಸಿದ್ದು ಕಾಲಜ್ಞಾನಿ ಕನಕ ನಾಟಕ. ಸಿ ಜಿ ಕೆ ನನ್ನನ್ನು ಕಲಾಕ್ಷೇತ್ರದ ಮೆಟ್ಟಿಲ ಮೇಲೆ ನಾಗರಾಜ ಮೂರ್ತಿ ಜೊತೆ ಕೂತು ಹಾಡೋದಕ್ಕೆ ಹೇಳಿದಾಗ, ನಾನು ಹಾಡಿದ ಮೇಲೆ ಸಿಗರೇಟು ಇದ್ದ ಕೈನಿಂದ ನನ್ನ ಬೆನ್ನು ತಟ್ಟಿ “ನನ್ನ ನಾಟಕದಲ್ಲಿ ಬಾರಯ್ಯಾ” ಅಂದಿದ್ದು ಎಲ್ಲವೂ ನಿಚ್ಚಳ ನೆನಪು. ನಂತರ ಕಾಲಜ್ಞಾನಿ ಕನಕ ನಾಟಕಕ್ಕೆ ದನಿಗೂಡಿಸಿದ್ದೆ. ಅವರು ತಮ್ಮನ್ನು ಪರಿಚಯ ಮಾಡಿಕೊಳ್ಳುತ್ತಿದ್ದೇ “ನಾನು ಸಿ ಜಿ ಕೃಷ್ಣಸ್ವಾಮಿ… ರಂಗಭೂಮಿಯಲ್ಲಿ ಕೆಲಸ ಮಾಡ್ತೀನಿ… ಆಗಾಗ ಯೂನಿವರ್ಸಿಟಿ ಗೆ ಹೋಗಿ ಎಕನಾಮಿಕ್ಸ್ ಪಾಠ ಮಾಡಿ ಬರ್ತೀನಿ” ಅಂತ. ಮಂಟೇಸ್ವಾಮಿ ಕಥಾ ಪ್ರಸಂಗಕ್ಕೆ ಅವರು ಮಾಡಿದ ಬೆಳಕಿನ ಸಂಯೋಜನೆ ಅದ್ಭುತವಾದದ್ದು… ಅವರಿಂದ ತಲೆ ಮೇಲೆ ಹೊದೆಸಿಕೊಂಡಿದ್ದು,ಹೊಡೆಸಿಕೊಂಡಿದ್ದು, ನಂತರ ಅವರೇ ನನಗೆ ಕಾರಂತರ ಕ್ಯಾಂಟೀನಿನಲ್ಲಿ ಅರ್ಧ ಕಾಫೀ ಕುಡಿಸಿದ್ದು,ನನ್ನಂಥಾ ಚಿಕ್ಕವನನ್ನೂ “ಏನ್ ಗೆಳೆಯಾ” ಅಂತ ಮಾತಾಡಿಸಿದ್ದು ಎಲ್ಲವೂ ನೆನಪಾಯ್ತು

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: