ಬಸಿರ ಹೂ ನಕ್ಹಾಂಗ; ಮೈಗೆ ಮೈ ನುಡಿದ್ಹಾಂಗ…

ಕನ್ನಡ ರಂಗಭೂಮಿಯ ವಿಶಿಷ್ಠ ಹೆಸರು ಶ್ರೀಪಾದ್ ಭಟ್. ಕನ್ನಡ ಸಾಹಿತ್ಯಕ್ಕೆ ನೋಟದ ಆಯಾಮ ಕೊಟ್ಟ ಹೆಗ್ಗಳಿಕೆ ಇವರದ್ದು. ಬೆಂಗಳೂರಿನ ‘ರಂಗಶಂಕರ’ದಲ್ಲಿ ಜರುಗಿದ ಶ್ರೀಪಾದ್ ಭಟ್ ನಾಟಕೋತ್ಸವ ಮಿಂಚು ಹರಿಸಿತ್ತು.

ಶ್ರೀಪಾದ್ ಭಟ್ ಅವರ ರಂಗನೋಟವನ್ನು ಒಳಗೊಂಡ ಕೃತಿ ‘ಸಿರಿ ಪಾದ’ ಈ ಸಂದರ್ಭದಲ್ಲಿಯೇ ಪ್ರಕಟವಾಯಿತು. ಇವರ ನಾಟಕದ ಹಾಡುಗಳು ಕೇಳುಗರಿಗೆ ಒಂದು ರೀತಿಯ ಕಾಲಕೋಶ. ಈ ಹಾಡುಗಳ ಸಿ ಡಿ ಯನ್ನು ‘ಲಹರಿ’ ಹಾಗೂ ‘ಅವಧಿ’ ಜಂಟಿಯಾಗಿ ಹೊರತಂದಿದೆ.

ಈಗ ಸಿರಿ ಪಾದ ಹೆಸರಿನಲ್ಲಿ ಶ್ರೀಪಾದ್ ಭಟ್ ತಮ್ಮ ವಿಶೇಷ ರಂಗ ಅನುಭವವನ್ನು ಮುಂದಿಡಲಿದ್ದಾರೆ.

ರಂಗಭೂಮಿಯೊಳಗಣ ಪ್ರತಿಕ್ಷಣವೂ ಅದು ಹೊಕ್ಕುಳ ಹೂವನ್ನು ಅರಳಿಸುವ  ಕ್ಷಣ. ಅಲ್ಲಿ ಮೈಯ ಪ್ರತಿಕಣವೂ ಮಿಡಿಯುತ್ತದೆ. ಬೇಂದ್ರೆಯವರ ನುಡಿಯಲ್ಲಿ ಹೇಳುವದಾದಲ್ಲಿ ಮೈಯಿಗೆ ಮೈಯ್ಯೇ ನುಡಿಯುತ್ತದೆ. ಸುಮಾರು 35 ವರ್ಷಗಳಾದವು ರಂಗಭೂಮಿಯನ್ನೇ ಆದ್ಯತೆಯ ಕ್ಷೇತ್ರವೆಂದೆಣಿಸಿ. ಇಲ್ಲಿಯ ಪ್ರತಿ ದಿನವೂ ವಿಶೇಷವೇ. ಯಾವುದರ ಬಗ್ಗೆ ಹೇಳ ಹೊರಟರೂ ಅದು ಹೇಳದೇ ಉಳಿದಿರುವ ಮಾತುಗಳನ್ನೇ ನೆನಪಿಸುವದು.

ಸುಮಾರು 150ರಷ್ಟು ನಾಟಕಗಳು, ನೂರಾರು ತರಬೇತಿಗಳು, ನೂರಾರು ವಿಚಾರ ಸಂಕಿರಣಗಳು ಅದಕ್ಕಿಂತ ಹೆಚ್ಚಾಗಿ ಹಗಲು ರಾತ್ರಿಯೆನ್ನದೇ ಆಡಿದಷ್ಟೂ ಉಳಿದ ರಂಗಭೂಮಿಯ ಹರಟೆಗಳು, ಮಾತುಕತೆಗಳು, ಅವು ಮೊಗೆದಷ್ಟೂ ಉಳಿವ ಕಡಲಿನಂತೆ, ಅಳೆದಷ್ಟೂ ಉಳಿವ ಮುಗಿಲಿನಂತೆ.

ಆ ಹುಡುಗ ಹಾವೇರಿ ಹಳ್ಳಿಯಲ್ಲಿ ಸಿಕ್ಕಿದವ. ಹಳ್ಳಿಯ ಶಾಲೆಯೊಂದರಲ್ಲಿ ‘ನಕ್ಕಳಾ ರಾಜಕುಮಾರಿ’ ನಾಟಕ ಆಡಿಸಲು ತಯಾರಿ ನಡೆಸಿದ್ದೆ. ರಂಗಭೂಮಿಯ ಆಸಕ್ತಿ ಉಳ್ಳ ಅಲ್ಲಿಯ ಹೆಡ್ ಮಾಸ್ಟರ್ ‘ಏಳುಕೋಟಿ’ ಅನ್ನುವವರು ಆ ಹುಡುಗನ ಪರಿಚಯ ಮಾಡಿಕೊಟ್ಟರು. “ಈತ ಶಾಲೆಗೆ ಯಾವತ್ತೂ ಸರಿಯಾಗಿ ಬಂದುದೇ ಇಲ್ಲ. ಆದರೆ ನಾಟಕ ಅಂದಕೂಡಲೇ ಓಡಿ ಬರುತ್ತಾನೆ. ಶಾಲೆಯಲ್ಲಿ ನಾಟಕ ಆರಂಭಿಸುತ್ತಿದ್ದಾರೆ ಅಂತ ಸುದ್ದಿ ಹರಡಿದ ಕೂಡಲೇ ಓಡಿ ಬಂದಿದ್ದಾನೆ ನೋಡಿ. ಶಾಲೆಗೆ ಸರಿಯಾಗಿ ಬರುತ್ತೇನೆಂದು ಒಪ್ಪಿಕೊಂಡರೆ ಪಾತ್ರಕೊಡಿ” ಅಂದರು.

ಆತ ಮೈ ತುಂಬ ನಗುತ್ತಿದ್ದ. ಅವನ ದೇಹದ ತುಂಬೆಲ್ಲ ಲಯ ಲಾಸ್ಯ ಆಡುತ್ತಿತ್ತು. “ಸರ್ ನನಗೆ ಓದೋಕೆ, ಬರೆಯೋಕೆ ಬರಲ್ಲ. ನಾನು ಬೇರೆ ಎಲ್ಲ ಕೆಲಸ ಮಾಡಿಕೊಡ್ತೇನೆ. ನಂಗೆ ಮಾತು ಇಲ್ಲದ ಅಥವಾ ಒಂದೋ ಎರಡೋ ಮಾತಿರುವ ಪಾತ್ರಕೊಡಿ. ಆಗಲ್ಲ ಅಂತ ಮಾತ್ರ ಹೇಳಬೇಡಿ ದಮ್ಮಯ್ಯ” ಅಂದ. ನಿಜ. ಅವನಿಗೆ ಅಕ್ಷರಗಳನ್ನು ಗುರುತಿಸಿ ಓದೋಕೆ ಬರುತ್ತಿರಲಿಲ್ಲ. ಸರಿಯಾಗಿ ಶಾಲೆಗೆ ಬಂದಿದ್ದರೆ 6 ನೇ ತರಗತಿಯಲ್ಲಿ ಆತ ಇರಬೇಕಿತ್ತು. ‘ಆತನಿಗೆ ಓದೋಕೇ ಬರಲ್ಲ’ ಅಂತ ಶಾಲೆಯೇ ತೀರ್ಮಾನಿಸಿದ್ದರಿಂದ ಆತ ಶಾಲೆಯನ್ನೇ ಬಿಟ್ಟಿದ್ದ.

ಅಪರೂಪಕ್ಕೆ ಕಾರ್ಯಕ್ರಮಗಳಾಗೋವಾಗ ಬರ್ತಿದ್ದನಂತೆ. ನಾನು ನಾಟಕ ಆರಂಭಿಸಿದೆ. ಅದರ ಓದನ್ನು ನಾನು ಮಾಡುತ್ತಿದ್ದಂತೆ ಆತ ಕರಾರುವಾಕ್ಕಾಗಿ ಪ್ರತಿ ನುಡಿಯುತ್ತಿದ್ದ! ಅವನ ಮಾತು ಸ್ಫುಟವಿತ್ತು. ಭಾವಾಭಿವ್ಯಕ್ತಿ ನಿಖರವಿತ್ತು! ನಾಟಕದ ಮುಖ್ಯ ಪಾತ್ರಧಾರಿ ಸಹಜವಾಗಿ ಆತನೇ ಆಗಿ ಹೋದ. ಆ ವಾರದಲ್ಲಿಯೇ ಇಡೀ ನಾಟಕ ಆತನಿಗೆ ಕಂಠಪಾಠವಾಗಿ ಹೋಗಿತ್ತು.

 ನಾಟಕದ ಬಲದಿಂದ ಆತನನ್ನು ಒಂಬತ್ತನೇ ತರಗತಿಯವರೆಗೆ ಕರೆತಂದೆ. 10ನೇ ವರ್ಗದಲ್ಲಿ, ಅದರ ಪರೀಕ್ಷೆಯ ಭಯಕ್ಕೆ ಬಿದ್ದೋಡಿದ ಆತನನ್ನು ಮತ್ತೆ ಕರೆತರಲಾಗಲಿಲ್ಲ. ಕೇರಳಾದ ಯಾವುದೋ ಕಡೆ ವಾಹನ ಚಾಲಕನಾಗಿದಾನಂತೆ; 10ನೇ ತರಗತಿ ಸರ್ಟಿಫಿಕೇಟಿಗಾಗಿ ಓಡಾಡುತ್ತಿದ್ದನಂತೆ.

ಶಿಕ್ಷಣದಲ್ಲಿ ರಂಗಭೂಮಿಯ ಕುರಿತು ಎಷ್ಟೆಲ್ಲ ದಿನಗಳಿಂದ ಮಾತನಾಡುತ್ತಿದ್ದೇವೆ. ಇದುವರೆಗೂ ನಮ್ಮಿಂದ ಆಗಿರುವುದು ಇಷ್ಟು ಮಾತ್ರ. ಬೇಸಿಗೆ ಶಿಬಿರಗಳಲ್ಲಿ, ಪ್ರತಿಭಾಕಾರಂಜಿ ಮತ್ತು ವಿಜ್ಞಾನ ನಾಟಕ ಸ್ಪರ್ಧೆಗಾಗಿ ವರ್ಷಕ್ಕೊಂದು ನಾಟಕ ಮಾಡಿಸುವದು, ಅಪರೂಪಕ್ಕೆ ಶಾಲಾ ವಾರ್ಷಿಕೋತ್ಸವಗಳಲ್ಲಿ ಅವಕಾಶ ಸಿಕ್ಕರೆ ಒಂದು ನಾಟಕ ಮಾಡಿಸುವದು. ಅಷ್ಟೆ. ಕೆಲವು ಸಂಸ್ಥೆಯವರ ವಿಶೇಷ ಆಸ್ಥೆಯಿಂದಾಗಿ ವರ್ಷಕ್ಕೆ ಒಂದು ವಾರವೋ, ಹತ್ತು ದಿನವೋ ‘ರಂಗತರಬೇತಿ’. ಅದೂ ಇಡಿಯ ರಾಜ್ಯದಲ್ಲಿ ಬೆರಳೆಣಿಕೆಯಷ್ಟು ಕಡೆ.

ನಾವು ಆಗಾಗ ಶಿಕ್ಷಣ ಮತ್ತು ರಂಗಭೂಮಿಯನ್ನು ಸಂಧಿಸುವಂತೆ ಮಾಡಲು ಯತ್ನಿಸುತ್ತಿದ್ದೇವೆ; ಆದರೆ ಅದು ಸಮಾಸಗೊಳ್ಳಲು ನಮ್ಮ ಯತ್ನ ಏನೂ ಸಾಲದಿದೆ. ಶಿಕ್ಷಕರಿಗೆ ರಂಗತರಬೇತಿ ಹೆಸರಿನಲ್ಲಿ ಒಂದೆರಡು ಪಾಠಗಳಂತಹ ಸಂಗತಿಗಳನ್ನು ನಾಟಕರೂಪ ಮಾಡುವದು ಹೇಗೆ ಅನ್ನೋ ‘ತಂತ್ರ’ ಹೇಳಿಕೊಡಲು ಯತ್ನಿಸಿದ್ದೇವೆ ಹೊರತೂ ಪಂಚೇಂದ್ರಿಯಗಳನ್ನು  ಮುಟ್ಟಬೇಕಾದ ರಂಗ ಭಾಷೆಯನ್ನು ಇನ್ನೂ ದರ್ಶಿಸಲೇ ಇಲ್ಲ.

ಚಿತ್ರ, ಘಮ, ಸ್ಪರ್ಶ, ರುಚಿ ಮತ್ತು ಶ್ರಾವ್ಯದ ಎಷ್ಟೆಲ್ಲ ಅನುಭವಗಳಿಗೆ ರಂಗಭಾಷೆ ತೆರೆದುಕೊಳ್ಳಬೇಕಿದೆ! ಮಕ್ಕಳ ಸಾಹಿತ್ಯಕ್ಷೇತ್ರದಲ್ಲಿ ಅನುಪಮ ಕೊಡುಗೆ ನೀಡಿದ ಜಿ.ಪಿ.ರಾಜರತ್ನಂ ಅವರನ್ನು‘ಮಕ್ಕಳ ಸಾಹಿತ್ಯದ ಬೆಳೆ ಹೇಗಿದೆ?’ ಎಂದು ಕೇಳಿದಾಗ ಅವರೆಂದರು “ಸಾಲದು ಸ್ವಾಮಿ ಏನೇನೂ ಸಾಲದು…” ರಂಗಭೂಮಿ ಮಕ್ಕಳನ್ನುಳಿಸಬೇಕೊ, ಮಕ್ಕಳೇ ರಂಗಭೂಮಿಯನ್ನುಳಿಸಬೇಕೊ ತಿಳಿಯದು. ಮಕ್ಕಳ ಜತೆಗಿನ ರಂಗ ಬದುಕಿಗೆ ಏನಾದರೂ ಮಾಡಬೇಕಿದೆ.

ದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯು ಏರ್ಪಡಿಸಿದ್ದ ರಂಗೋತ್ಸವಕ್ಕೆ ಹೋದಾಗ ಅಲ್ಲಿ ನಾಟಕದ ನಂತರ ನಡೆಯುವ ಸಂವಾದದಲ್ಲಿ ಒಬ್ಬ ವಿದ್ಯಾರ್ಥಿನಿ ಕೇಳಿದಳು “ನೀವು ನಿರ್ದೇಶನ ಏಕೆ ಆಯ್ಕೆ ಮಾಡಿಕೊಂಡಿರಿ, ನಟನೆಯಾಕಲ್ಲ?” ಅಂತ. ನಮಗೆ ಆಯ್ಕೆ ಅನ್ನೋದೇ ಇರಲಿಲ್ಲ ಆ ಮಾತು ಬೇರೆ. ನನ್ನ ಅಭಿಪ್ರಾಯವೆಂದರೆ ನಾಟಕ ಮಾಡೋದು ಅಂದರೆ ‘ಅಭಿನಯಿಸೋದು’ ಅಂತಾನೇ.

ನಟನೆಯನ್ನುಅಪಾರವಾಗಿ ಪ್ರೀತಿಸುತ್ತಿದ್ದ ನನಗೆ ನಮ್ಮ ಊರಿನಲ್ಲಿ ಯುವಕರಿಗೆ ನಾಟಕ ನಿರ್ದೇಶನ ಮಾಡುವವರು ಯಾರೂ ಸಿಗದಿರುವುದರಿಂದ ಅನಿವಾರ್ಯವಾಗಿ ನಿರ್ದೇಶಕನಾಗಿ ಹೋದೆ ಅಷ್ಟೆ. ಯಾವ ತರಬೇತಿಯಿಂದಲ್ಲ. ನಾನೇ ಅಭಿನಯಿಸಿಕೊಳ್ಳುತ್ತ ನಿರ್ದೇಶಕನೂ ಆಗಿದ್ದೆ. ಹವ್ಯಾಸಿ ರಂಗಭೂಮಿಯಲ್ಲಿ ನಾಟಕ ನಿರ್ದೇಶಕನೇ ಸಂಘಟಕನೂ ಆಗಬೇಕಿದ್ದ ಕರ್ಮಒದಗಿದ್ದರಿಂದ ರಂಗದ ಮೇಲೆ ನಟನಾಗಿ ಕಾಣಿಸಿಕೊಳ್ಳುವದು ತಪ್ಪತೊಡಗಿತು. ಆದರೆ ನನಗೆ ಈಗಲೂ ಅನಿಸುವದು, ನಿದೇಶಕನೆಂದರೆ ಪ್ರಧಾನ ನಟ, ನಟನೆಯನ್ನು  ಸಂಘಟಿಸುವವನು.

ನಾನು ಆ ಹುಡುಗಿಗೆ ಹೇಳಿದೆ “ನೋಡು ನಟರು ಅಂತಾದ್ರೆ ನಾಟಕದಲ್ಲಿ ಒಂದೇ ಪಾತ್ರ ಸಿಗೋದು. ನಿರ್ದೇಶಕನಾದ್ದರಿಂದ ಆ ನಾಟಕದ ಎಲ್ಲ ಪಾತ್ರಗಳನ್ನೂ ನಾನು ಮಾಡೋಕಾಗತ್ತೆ” ಅಂತ. ತಮಾಶೆಯಾಗಿ ನಾನದನ್ನು ಹೇಳಿದರೂ ಆಳದಲ್ಲಿ ಅದು ನಿಜವೂ ಆಗಿತ್ತು. ನನ್ನ ನಟನೆಯ ಹಂಬಲದ ಈಡೇರಿಕೆಯೂ ಅದಾಗಿತ್ತು. ಸರಿಯೋ ತಪ್ಪೋ ತಿಳಿದಿಲ್ಲ. ನನಗೊದಗಿದ ಬದುಕು ಅದು.

ನಾಟಕವೆಂದರೆ ಅಂತಿಮವಾಗಿ ಅಭಿನಯವೇ. ನಟನೇ ಅಂತಿಮ ಸತ್ಯ. ನಟನೆ ಮನುಷ್ಯನ ಒಂದು ಅದ್ಭುತ ಸಾಧ್ಯತೆ. ನಿರಂತರ ಶ್ರಮದಿಂದ ಆತ ನಟನೆಯ ತಂತ್ರಗಳನ್ನು ಸಾಧಿಸಿಕೊಳ್ಳಬೇಕು. ತಂತ್ರ ಎಂದೆ ನಾನು, ನಿಜ. ಅದು ತಂತ್ರವೇ ಸರಿ. ಅದು ದೇವರ ಕೊಡುಗೆ, ಆನುವಂಶೀಯತೆ, ಹುಟ್ಟುಪ್ರತಿಭೆ ಇತ್ಯಾದಿಗಳಿಂದ ಒದಗುವದಲ್ಲ.

ತುಂಬು ಪ್ರೀತಿಯಿಂದ, ಕಠಿಣ ಶ್ರಮದಿಂದ, ಹುಚ್ಚಿನಿಂದ ಒಲಿಸಿಕೊಳ್ಳಬೇಕಾದ ಪ್ರೇಮವದು. ನನ್ನ ನಟರು ಹೇಗೆಲ್ಲ ಸಿದ್ಧರಾಗಬೇಕು ಎಂಬ ಕನಸನ್ನು ಆಗಾಗ ಕಟ್ಟುವದಿದೆ ನಾನು. ಅದನ್ನು ಅಲ್ಲಲ್ಲಿ ಟಿಪ್ಪಣಿ ಮಾಡಿಕೊಳ್ಳುತ್ತಿದ್ದೆ. ಅವುಗಳಲ್ಲಿ ಕೆಲವು ದೊರಕಿದೆ. ಅದನ್ನೇ ನಿಮ್ಮೊಡನೆ ಹಂಚಿಕೊಳ್ಳುವೆ. ಅದನ್ನು ಬೇಕಾದ ಹಾಗೆ ಮುಂದುವರಿಸಿಕೊಳ್ಳಬಹುದು.

ನನ್ನ ಕನಸಿನ ನಟರು ಹೀಗಿರುತ್ತಾರೆ; ಅವರ ಸಾಧನೆಯ ತಂತ್ರಗಳು ಹೀಗಿರುತ್ತವೆ. ನನ್ನ ನಟರು –

  1. ಬದುಕಿನಕುರಿತ ಅಸೀಮ ಪ್ರೀತಿ; ಅದರ ಸಾಧ್ಯತೆಗಳ ವಿಸ್ತರಣೆಯ ಅಭಿಪ್ಸೆಯ ಜತೆಗೆ ಕಲೆಯಲ್ಲಿ ಕರಗುವರು; ಅದ್ವೈತರಾಗುವರು.

2. ಕಾಲದೇಶಗಳನ್ನಾಧರಿಸಿ ಜನಿಸುವ ಕಲೆ ತಾನು ಸಾರ್ಥಕ್ಯ ಹೊಂದುವದು ಕಾಲದೇಶಗಳನ್ನು ಮೀರುವದರಲ್ಲಿ. ಕಲೆಯ ಈ ಸ್ವರೂಪಧಾರಣೆಯನ್ನುಅವರು ಹೊಂದುವರು.

3. ಕಾವ್ಯ, ಜಾನಪದ, ಪುರಾಣ, ತತ್ವಶಾಸ್ತ್ರ, ಧರ್ಮ, ಸಮಾಜ ಸಿದ್ಧಾಂತ ಮುಂತಾದವುಗಳಿಂದ ಕಲೆಯನ್ನು ಹೇಗೆ ಗ್ರಹಿಸಬೇಕು ಮತ್ತುಕಲೆಯ ಮೂಲಕ ಇವುಗಳನ್ನು ಹೇಗೆ ನಿರ್ವಚಿಸಬೇಕು ಎಂಬ ಅರಿವನ್ನು ಹೊಂದಿರುವರು.

4. ವಿಶ್ವ ಸಂವಾದದಲ್ಲಿ ಸ್ಥಳೀಯ ಉಲುಹುಗಳನ್ನು ಕೇಳಬಯಸುವ; ಸ್ಥಳೀಯ ಉಲುಹಿನ ಮೂಲಕ ವಿಶ್ವಾತ್ಮಕ ಸಂವಾದ ನಡೆಸಬಲ್ಲ ಶಕ್ತಿ ಪಡೆಯುವರು.

5. ಇಡಿಯ ನಾಟಕವನ್ನೇ ಒಂದು ಪಾತ್ರ ಅಂತ ತಿಳಿದು, ಅದರ ಒಳವಿನ್ಯಾಸಗಳ ಮಾತಿಗೆ ಮೈ ಕೊಡುವರು.

6. ನಮ್ಮೊಳಗಿನ ಸಂಚಲನೆಯು  ಸಮಾಜದ ಸಂಚಲನೆಗೂ ಕಾರಣವಾಗಬಲ್ಲದು ಎಂಬ ಜಗದೆಚ್ಚರದ ಸ್ಥಿತಿಯಲ್ಲಿ ಬದುಕುವದನ್ನು ಅಭ್ಯಸಿಸುವರು.

7. ಸಾಂಕೇತಿಕವಾಗಿರುವದಾದರೂಅದು ಸಂಭಾವ್ಯವಾಗಿದೆಎಂಬುದನ್ನುಒಪ್ಪಿಸಲುಜೀವವನ್ನು ಫಣಕ್ಕಿಡುವ ಜೂಜನ್ನು ಅಭ್ಯಸಿಸುವರು.

8. ಅಚೇತನಕ್ಕೆ ತಿಳಿದಿರುವ ಚಿತ್ರಭಾಷೆಯನ್ನುಜಾಗೃತಾವಸ್ಥೆಯಲ್ಲಿಯೂಅರಿಯಬಲ್ಲಂತಹ ಸಂವೇದನೆಯನ್ನು ಹೊಂದಲು ನಡೆಸುವ ಸತತಾಭ್ಯಾಸನಡೆಸುವರು.

9. ಸೌಂದರ್ಯ ಎಂಬುದೊಂದು ಗುಣವಂತಿಕೆ; ಜೀವನದೆಡೆಗೆ ನೋಡುವ ಕಲಾತ್ಮಕ ನೋಟದಲ್ಲಿ ಅದು ದೊರಕಬಲ್ಲದು. ಬದುಕಿನ ಎಲ್ಲ ಬಗೆಯ ಸಂಬಂಧಗಳಲ್ಲಿಯೂ ಆ ಕಲಾತ್ಮಕತೆ ದಕ್ಕುವ ಹಾಗೆ ನಡೆಸುವ ಆದರ್ಶ ಸಾಧನೆಯ ಹಾದಿಯನ್ನರಿಯುವರು.

10. ಕಾಡಿನೊಳಗೆ ಕೊಡಲಿ ಹಿಡಿದವನು ಪ್ರವೇಶಿಸಿದರೆ ಅಲ್ಲಿಯ ಗಿಡಮರಗಳಲ್ಲೆಲ್ಲ. ಪಶುಪಕ್ಷಿಗಳಲೆಲ್ಲ ಕಂಪನ ಉಂಟಾಗುವದಂತೆ.ಅಷ್ಟು ಸೂಕ್ಷ್ಮಾಂಶ ಸಂವೇದಿಗಳು ಅವು.ಆ ಬಗೆಯ ಸಂವೇದನೆಜಾಗೃತವಾಗುವತೆರದಿ ಸಾಧನಾಭ್ಯಾಸ ನಡೆಸುವವರು.

ನಾನೂ ಸಹ ಕನಸಿನ ರಂಗ ಶಾಲೆಯಲ್ಲಿ ಇಂತದೊಂದು ತರಬೇತಿಯನ್ನು ಪಡೆಯಬೇಕಿದೆ. ಚಿಕ್ಕಂದಿನಿಂದ ಕಲೆಯಲ್ಲಿ ಹಂಬಲವಿದ್ದರೂ ಅದನ್ನು ಕಲಿಯಲೂ ಸಹ ‘ಶಾಲೆಗಳಿವೆ’ ಎಂಬುದು ತಿಳಿಯುವ ಹೊತ್ತಿಗೆ ಸಂಸಾರದಲ್ಲಿಳಿದಾಗಿತ್ತು. ನೋಡಿ ಕಲಿಯಲೇನು ತೊಂದರೆ? ಎಲ್ಲೆಲ್ಲಿ ತಿಳಿಯುತ್ತೋ ಅಲ್ಲಲ್ಲಿ ನಾಟಕ ನೋಡಲು ಹೋಗ್ತಿದ್ದೆ, ಹಲವು ನಿರ್ದೇಶಕರು ನಾಟಕ ನಿರ್ದೇಶನ ಮಾಡುವದನ್ನುಕದ್ದಾದರೂ ನೋಡಹೋಗುತ್ತಿದ್ದೆ, ನೀನಾಸಂನಲ್ಲಿ ಕಲಿತ ಹುಡುಗರಿಂದ ಅಲ್ಲಿ ನಡೆಯುವ ತರಗತಿಗಳ ಬಗ್ಗೆ ನಿರಂತರ ಕೇಳುತ್ತಿದ್ದೆ. ಹೀಗೆ ಕಲಾ ಪರಂಪರೆಯೇ ಒಂದಿಷ್ಟನ್ನು ಕಲಿಸಿತ್ತಲ್ಲ.

ಅವೆಲ್ಲವನ್ನೂ ನನ್ನೊಳಗೆ ಕರಗಿಸಿಕೊಳ್ಳತೊಡಗಿದೆ. ಕನ್ನಡದಲ್ಲಿ ರಂಗ ಕಲಿಕೆಗೆ ಸಂಬಂಧಿಸಿದಂತೆ ಬಂದಿರುವ ಪಠ್ಯಗಳು ತುಂಬ ಕಡಿಮೆ. ನನಗೆ ಕನ್ನಡದ ಹೊರತೂ ಬೇರೆಯಾವ ಭಾಷೆಯೂ ಬರುವದಿಲ್ಲ. ಹೀಗಾಗಿ ಕನ್ನಡದಲ್ಲಿಯೇ ಇಹ ಪರ ಸಾಧಿಸಿಕೊಳ್ಳಬೇಕಾದ ಅನಿವಾರ್ಯವಿರುವ ನನಗೆ ನಿರಂತರ ನಾಟಕನೋಡುವದು, ಸಂಗೀತ ಕೇಳುವದು, ನೃತ್ಯದೊಡನೆ ಸಂಭಾಷಿಸುವದು, ಓದುವದು ಇವೇ ಕಲಿಕೆಯ ಮಾರ್ಗಗಳಾಗಬೇಕಾದುದು ಅನಿವಾರ್ಯವಾಗಿತ್ತು.

ಹಾಗೆ ಕಲಿತದ್ದನ್ನು ಪ್ರಯೋಗಿಸುತ್ತಲೇ ನಡೆದೆ. ಸಂಜೆ ಶಾಲೆ ಮುಗಿದ ನಂತರ ಮರುದಿನ ಶಾಲೆ ಆರಂಭವಾಗುವವರೆಗಿನ ಅವಧಿ ಅದು ನನ್ನದೇ ಆಗಿತ್ತು. ಎಲ್ಲ ರಜಾ ದಿನಗಳೂ, ಎಲ್ಲ ಹಬ್ಬಗಳ ದಿನಗಳೂ, ಸಂಚಿತ ರಜೆಗಳೂ, ಕೆಲವೊಮ್ಮೆ ಸಂಬಳ ರಹಿತ ರಜೆಗಳೂ ನನ್ನ ಪಾಲಿಗೆ ರಂಗ ಅವಧಿಗಳೇ ಆಗಿದ್ದವು.

ಬಿ.ವಿ.ಕಾರಂತರ ಜತೆಗಿನ ಒಂದು ಸಂದರ್ಭವನ್ನು ಗಿರೀಶ ಕಾಸರವಳ್ಳಿಯವರು ಹೀಗೆ ನೆನಪಿಸಿಕೊಳ್ಳುತ್ತಾರೆ. ‘ಚೋಮನದುಡಿ’ ಸಿನೆಮಾ ಶೂಟಿಂಗ್ ಸಮಯವದು. ಎಲ್ಲಿಯೋ ಶೂಟಿಂಗ್‌ ತಾಣಕ್ಕೆ ತಲುಪಬೇಕಿದ್ದ ಕಾರಂತರ ಕಾರು, ಅವರ ಸೂಚನೆಯಂತೆ ಸಮುದ್ರ ದಡ ಸೇರಿತ್ತಂತೆ. ಕಾರಂತರು ತುಸು ಹೊತ್ತು ಸಮುದ್ರದ ಅಲೆಗಳನ್ನು ನೋಡುತ್ತ ಸುಮ್ಮನೆ ನಿಂತಿದ್ದು ನಂತರ  ಕಾಸರವಳ್ಳಿಯವರೊಡನೆ “ನೋಡಿದೊಡ್ಡಅಲೆಯಂತೆಯೇ  ಸಣ್ಣ ಅಲೆಯೂ ದಡ ಮುಟ್ಟುತ್ತದೆ ಅಲ್ವಾ”ಅಂದರಂತೆ. ಅರೆ! ಹೌದಲ್ವಾ! ಸಣ್ಣ ಸಣ್ಣ ಅಲೆಯಾಗಿಯಾದರೂ ಇಲ್ಲಿದೇವೆ ನಾವು ಅಂತ ನೆಮ್ಮದಿ ತಂದಘಟನೆಯಿದು.

ಕರ್ನಾಟಕದ ಅಂಚುಗಳಲ್ಲಿ ಆಧುನಿಕ ರಂಗಭೂಮಿಯ ಪರಿಚಯ ಮಾಡುವ ಕೆಲಸವನ್ನಾದರೂ ಮಾಡಿದೇನೆ ಎಂಬ ಭ್ರಮೆಯಂತೂ ನನಗೆ ಇದೆ.

ಗೌರೀಶ ಕಾಯ್ಕಿಣಿಯವರು ತಮ್ಮ ಬರಹದಲ್ಲಿ ಒಂದೆಡೆ ‘ಕಾಲದಕರೆ’ ಮತ್ತು ‘ಕಂಪಿನ ಕರೆ’ ಎಂಬೆರಡು ಪದಗಳನ್ನು ಬಳಸುತ್ತಾರೆ. ಅದು ಮತ್ತೆ ಮತ್ತೆ ನನ್ನ ಕೆಣಕುತ್ತದೆ; ಒಳಗೆ ಇಣುಕುತ್ತದೆ. ಇದುವರೆಗಿನ ನನ್ನ ಬದುಕಿನಲ್ಲಿ ಕಾಲದ ಕರೆಯ ಅಗತ್ಯಕ್ಕೆ ತಕ್ಕಂತೆಯೇ ನಡೆದಿರುವೆ. ನನ್ನೆದೆಯ ಒಳಗಣ ಕಂಪಿನ ಕರೆಯನ್ನು ಎಷ್ಟು ಕೇಳಿಸಿಕೊಂಡೆನೋ ಅನುಮಾನವಿದೆ. ಆದರೆ ಕಾಲದ ಕರೆಯ ಕೆಲಸಕ್ಕೆ ಸಾಧ್ಯವಾದಷ್ಟು ಕಂಪಿನ ಕರೆಯನ್ನು ಜೋಡಿಸಲೆತ್ನಿಸಿದ್ದೇನೆ.

ನಾನು ಇದುವರೆಗೆ ನಿರ್ದೇಶಿಸಿದ ಬಹುತೇಕ ನಾಟಕಗಳೆಲ್ಲವೂ ಆಯಾ ತಂಡದ ಅಗತ್ಯ, ಆಸಕ್ತಿ, ಮಿತಿಗನುಗುಣವಾಗಿಯೇ ರೂಪಿಸಿದ್ದು. ಅದರಲ್ಲಿಯೇ ನನ್ನ ಸಂತಸಕಂಡುಕೊಂಡಿರುವೆ. ಈಗಲೂ ನನ್ನೊಳಗಿನ ‘ಕಂಪಿಕರೆ’ಯಾವುದದು?ಎಂಬ ಹುಡುಕಾಟದಲ್ಲಿರುವೆ.

‘ಅವಧಿ’ಯಲ್ಲಿ ನಿಮ್ಮ ನಾಟಕದ ಪಾತ್ರಗಳೊಡನೆಯ ಪಯಣದ ಕುರಿತು ಬರೆಯಿರಿಅಂತ ಕಳೆದ ವರ್ಷ ಜಿ.ಎನ್.ಮೋಹನರು ಹೇಳಿದಾಗ ಬರೆಯಲು ಆಗಿರಲಿಲ್ಲ. ಈಗ ಕೇಳಿದಾಗ ಆಗದು ಎಂದು ಹೇಳುವಂತಹ ಕೆಲಸಗಳೂ ಇರಲಿಲ್ಲ. ಆದರೆ ಪಾತ್ರಗಳ ಬದಲು ಒಟ್ಟೂ ರಂಗಕ್ರಿಯೆಯ ಪರಿಸರ, ಸಂದರ್ಭವನ್ನು ಕುರಿತು, ಬಣ್ಣದ ಹೆಜ್ಜೆಗಳು ಮೂಡಿದ ಒದ್ದೆ ಮಣ್ಣಿನ ನೆಲದ ಹಾದಿಯ ಕುರಿತು ಬರೆಯುವೆ ಎಂದೆ.

ಬರವಣಿಗೆ ಎಂದರೆ ಗೌರವ ಮಿಶ್ರಿತ ಭಯವಿದೆ ನನಗೆ. ನಾನಂದುಕೊಂಡಿದ್ದನ್ನು ನನಗೆ ಬರಹದಲ್ಲಿ ದಾಟಿಸಲಾಗದು ಎಂದೇ ಯಾವತ್ತೂ ಅನಿಸಿದೆ. ಎ.ಕೆ.ರಾಮಾನುಜನ್‌ ಅವರ ‘ಪದ್ಯದ ಮಾತು ಬೇರೆ’ ಎಂಬ ಕವನದಲ್ಲಿಯಂತೆ ನನಗೆ ಯಾವತ್ತೂ ಅನಿಸುವದು.  ಪದ್ಯದಂತೆ, ಕಲೆಯಲ್ಲಿಯೂ ‘ಅಪಾರ್ಥವಾದರೂ ಅದೂ ಒಂದು ಅರ್ಥವೇ’ ಎಂದು ಸಮಾಧಾನವನ್ನಾದರೂ ಹೊಂದಬಹುದು. ಲೇಖನದಲ್ಲಿ ಹಾಗಲ್ಲ. ಇನ್ನು ನಮ್ಮ ರಂಗಭೂಮಿಯ ಹಲವು ಸ್ನೇಹಿತರಿಗೆ ಅಕ್ಷರಗಳ ಅಲರ್ಜಿ ಇದೆ; ಅವರು ಓದುವದಿಲ್ಲ. ‘ಓದಲು ಸಾಧ್ಯವಿಲ್ಲ ಎಂದೇ ನಾಟಕಕ್ಕೆ ಬಂದಿದ್ದು ಮಾರಾಯಾ’ ಎನ್ನುತ್ತಾರೆ.

ಉಳಿದ ಓದುಗರಿಗೆ ರಂಗಭೂಮಿಯ ವ್ಯಾಕರಣದ ಚರ್ಚೆ ನಿಜಕ್ಕೂ ಬೋರು. ಲಲಿತ ಪ್ರಬಂಧದ ಮಾದರಿಯಲ್ಲೇ ನಿರಂತರವಾಗಿ ಬರೆಯಲು ನನಗೆ ಕಷ್ಟ. ಆದರೂ ಒಂದಿಷ್ಟು ಜನ ಓದಿದವರು ಪ್ರತಿಕ್ರಿಯೆ ಬರೆದು ಇದುತನಕ ಸಲಹಿದರು. ನನ್ನ ಬದುಕಿನ ಕತೆ ಬರೆಯಲು ನಿಜಕ್ಕೂ ನನಗೆ ಮನಸಿಲ್ಲ. ಅದನ್ನು ಕಟ್ಟಿಕೊಂಡು ಜಗಕೇನು? ಎಂದೇ ಅನಿಸುವದು ನನಗೆ. ಈ ಬರಹದ ತಲುಪುವಿಕೆಯ ಕುರಿತು ನನಗೂ ಸ್ನೇಹಿತೆ ಸುಧಾ ಆಡುಕಳ ಅವರಿಗೂ ಹಲವು ಸಾರಿ ಜಗಳವಾಗಿದ್ದಿದೆ.

ನನ್ನ ರಂಗ ಬದುಕಿನಲ್ಲಿ ‘ಕಲೆಯ ಜಗತ್ತಿನ ಕುರಿತ ಕಥನವಿದೆಯೇ’ ಎಂದು ಹುಡುಕಿ ಕೆಲವನ್ನು ಬರೆದಿರುವೆ. ‘ನಾನು, ನನ್ನʼ ಅನ್ನುವ ಪದ ಬಂದಾಗಲೆಲ್ಲ ಕಿರಿಕಿರಿ ಆಗುತ್ತಿತ್ತು. ತಪ್ಪಿಸಲು ಸಾಧ್ಯವಾದಷ್ಟು ಪ್ರಾಮಾಣಿಕವಾಗಿ ಯತ್ನಿಸಿರುವೆ. ಆದರೂ ಹಲವೆಡೆ ಈ ‘ನಾನು’ ಎಂಬುದು ಉಳಿದಿದ್ದರೆ ಅದು ನನ್ನಅಹಂಕಾರದಿಂದಲ್ಲ, ಬರಹದ ಮಿತಿಯಿಂದ ಎಂದು ತಿಳಿಯಬೇಕೆಂಬ ವಿನಮ್ರ ಕೋರಿಕೆ.ಇಲ್ಲಿ ಅಂಕಣದ ನೆವನದಿಂದ ಇಷ್ಟು ದಿನ ನಾನು ಆಡಿದ ಮಾತುಗಳನ್ನು ನಾನೂ ಕೇಳಿಸಿಕೊಂಡಿರುವೆ. ರಂಗತಾತ್ವಿಕತೆಗೆ ಸಂಬಂಧ ಪಟ್ಟ ಮಾತುಗಳು ಅವು ಉಪದೇಶಕ್ಕೆ ಹೇಳಿದುವಲ್ಲ. ನನಗೆ ನಾನೇ ಖಾತ್ರಿಪಡಿಸಿಕೊಂಡ ನುಡಿಗಳವು.

ಇಷ್ಟಾದರೂ ಬರೆಯಲು ಸಾಧ್ಯವಾದದ್ದು ಮೋಹನರಿಂದ, ಅವರ ಅವಧಿಯ ಬಳಗದಿಂದ. ಒಂದು ದಿನವೂ ಬರವಣಿಗೆಯ ಕ್ರಮದ ಬಗ್ಗೆ, ಅದರ ಉದ್ದ ಅಗಲದ ಬಗ್ಗೆ ಅವರೆಂದೂ ನನ್ನ ಕೇಳಿದ್ದಿಲ್ಲ. ಬರಹಕ್ಕೆ ಸಂಬಂಧಪಟ್ಟಂತೆ ಸಲಹೆ ಕೊಡ್ತೇನೆ ಎಂದವರು ಬಹುತೇಕ ನಾಪತ್ತೆಯೇ ಆಗಿದ್ದಾರೆ. ಕೊಟ್ಟಿರುವದನ್ನು ಪ್ರೀತಿಯಿಂದ ಪ್ರಕಟಿಸಿದ್ದಾರೆ. ನಾನವರಿಗೆ ಋಣಿ. ಇದು ನನ್ನ ಕೊನೆಯ ಅಂಕಣ ಬರಹವಾಗಿರುವದರಿಂದ ನನ್ನ ಕೃತಜ್ಞತೆಯ ಮಾತನ್ನು ಉಸುರಿರುವೆ.

ಇಂತದೊಂದು ಅನುಭವಗಳ ರೂಪಣೆಗೆ ನೆರವಾದರಂಗ ಸಂಗಾತಿಗಳಿಗೆ, ರಂಗ ಪರಿಸರಕ್ಕೆ ಶರಣೆನ್ನುವೆ. ನಿಜ. ರಂಗ ಪರಿಸರವನ್ನು ಸಿದ್ಧಗೊಳಿಸಿದ ನಮ್ಮ ಹಿರಿಯರು, ರಂಗ ವ್ಯಾಕರಣವನ್ನು ರೂಪುಗೊಳಿಸಿದ ಪರಂಪರೆ ಇವೆಲ್ಲವೂ ನನ್ನಂತವನಿಗೂ ಚೂರುಪಾರು ಕೆಲಸ ಮಾಡುವ ಧೈರ್ಯವನ್ನುತಂದು ಕೊಟ್ಟಿತು. ರಘುವಂಶ ಕಾವ್ಯದಲ್ಲಿ ಕಾಳಿದಾಸನು ಹೇಳಿದ ಮಾತೊಂದನ್ನು ವಿನಮ್ರವಾಗಿ ನೆನೆದುಮಾತು ಮುಗಿಸುವೆ. “ಹಿಂದೆ ಶ್ರೇಷ್ಠ ಕವಿಗಳು ಈ ವಂಶದ ಬಗ್ಗೆ ಬರೆದರು. ಅವರು ಹಾಗೆ ನಿರ್ಮಿಸಿದ ಮಾತಿನ ಬಾಗಿಲ ಮೂಲಕ ನಾನು ಈ ವಂಶದ ಒಳಕ್ಕೆ ಹೋಗುತ್ತಿದ್ದೇನೆ. ನನ್ನ ಈ ಪ್ರಯತ್ನ , ವಜ್ರದಿಂದ ಕೊರೆದು ಮಾಡಿದ ರತ್ನಗಳ ರಂಧ್ರದಲ್ಲಿ ಸಾಮಾನ್ಯ ದಾರವೊಂದು ಹಾದು ಬಂದಂತೆ ಇದೆ.”

ನಮಸ್ಕಾರ.
ಕಾಲ ಮತ್ತೆ ಅನುಮತಿ ನೀಡಿದರೆ ಸೇರೋಣ.
ಕಾಲದ ಕಂಬಳಿ ಹೊದೆಸಿದ ಆ ಕುರುಬಗೆ / ನೀಲಿಯಡೇರೆಯ ನಿಲಿಸಿದ ಆ ಅರಬಗೆ
ತಿಳಿವಿನ ತೆರೆಗಳಕರುಣಿಸೋ ಕಡಲಿಗೆ / ಶರಣೆಂಬೆವು ನಾವು ಶರಣೆಂಬೆವು
-ಸು.ರಂ.ಎಕ್ಕುಂಡಿ.

‍ಲೇಖಕರು ಶ್ರೀಪಾದ್ ಭಟ್

November 28, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

  1. SUDHA SHIVARAMA HEGDE

    ವೇದಿಕೆಯಲ್ಲಿ ತೀರ ಮುಗ್ಧವಾಗಿ ನಾನು ಮಾತಾಡಿದಾಗಲೆಲ್ಲ ಈ ಮುಗ್ಧತೆ ಆರೋಪಿಸಿಕೊಂಡಿದ್ದಲ್ಲ ಎಂದು ದನಿಗೂಡಿಸುತ್ತಿದ್ದವ ನೀನು. ಇಲ್ಲಿ ಬರೆದುದೆಲ್ಲವೂ ಅಕ್ಷರಶಃ ಸತ್ಯ. ಅನೇಕ ಸಲ ಗಂಟೆಗಟ್ಟಲೆ ಮಾತಾಡಿ ಫೋನಿಟ್ಟ ನಂತರ ಶ್ರೀಪಾದ್ ಯಾವೂರಿನಲ್ಲಿ ಇದ್ದಾನಂತೆ ಈಗ? ಎಂಬ ಪ್ರಶ್ನೆಗೂ ಉತ್ತರ ತಿಳಿದಿರುವುದಿಲ್ಲ. ಇಡಿಯ ಮಾತುಕತೆ ನಮ್ಮ ಇರವನ್ನು ಮೀರಿ ಬರಿಯ ವಿಚಾರಗಳ ಕುರಿತೇ ಇರುತ್ತಿತ್ತು. ಒಂದು ವಾಕ್ಯ ಬರೆಯಲು ಇಡೀ ದಿನ ತಳಮಳಗೊಳುವ ನೀನು ಎಷ್ಟೊಂದು ಬರೆದೆ ಎನ್ನುವುದೇ ಚೋದ್ಯ!

    ಪದೇ ಪದೇ ಹೇಳುವ ಮಾತೊಂದು ನೆನಪಾಗುತ್ತದೆ. ಏಕಲವ್ಯನ ಬೆರಳಿಗಾದ ಗಾಯ ಎಲ್ಲರೆದೆಯ ಗಾಯ. ಹಾಗಾಗಿ ಆ ಕುರಿತು ಹಾಡಬೇಕು ನಾವು. ನಮ್ಮ ಬೆರಳಿನ ಗಾಯ ಕಟ್ಟಿಕೊಂಡು ಸಮಾಜಕ್ಕೇನಾಗಬೇಕಿದೆ? ಇಲ್ಲಿಯ ಎಲ್ಲ ಲೇಖನಗಳಲ್ಲಿ ಆ ಎಚ್ಚರವೇ ಪ್ರತಿಫಲಿಸಿದೆ.

    “ನೀನು ಒಂದು ವಾಕ್ಯ ಬರೆ. ನಾನದಕ್ಕೆ ಸುಮಾರು ಪುಟಗಳ ವ್ಯಾಖ್ಯಾನ ಬರೆಯುವೆ.” ಎಂದು ಸದಾ ಛೇಡಿಸುತ್ತಿದ್ದೆ ನಾನು. ಇಲ್ಲಿಯ ಎಲ್ಲ ಲೇಖನಗಳೂ ಹಾಗೆ ವ್ಯಾಖ್ಯಾನಕ್ಕೊಳಪಡುವ ಅನೇಕ ಬೀಜ ವಾಕ್ಯಗಳನ್ನು ಒಳಗೊಂಡಿವೆ.

    ಪ್ರತಿಶನಿವಾರ ಕುತೂಹಲದಿಂದ ಕಾಯುತ್ತಿದ್ದ ಅಂಕಣ ಮುಗಿದಿದೆ. ಆದರೇನು? ಮತ್ತೆ, ಮತ್ತೆ ಕಾಲ, ದೇಶ, ಇರವನ್ನು ಮೀರಿದ ರಂಗಚರ್ಚೆ ಮುಂದುವರೆಯುತ್ತಲೇ ಇರುತ್ತದೆ. ಏಕೆಂದರೆ ಅದನ್ನು ಬಿಟ್ಟು ಬೇರೇನನ್ನೂ ಯೋಚಿಸಲು, ಮಾತಾಡಲು ನಿನಗೆ ಬಾರದು.

    ಪ್ರತಿಕ್ರಿಯೆ
  2. Kiran Bhat

    ರಂಗಜಗದ ವಿಸ್ತಾರದ ದರುಶನ ಮಾಡಿಸಿದೆ ನೀನು….

    ಪ್ರತಿಕ್ರಿಯೆ
  3. Ahalya Ballal

    ಕಾಲದ ಕರೆಯೋ ಕಂಪಿನ ಕರೆಯೋ ಒಟ್ಟಿನಲ್ಲಿ ಇಷ್ಟು ವಾರಗಳ ಅಂಕಣದಲ್ಲಿ ಅದೆಷ್ಟು behind the scenes ವಿಷಯಗಳನ್ನೂ ಅನುಭವಜನ್ಯ ಒಳನೋಟಗಳನ್ನೂ ಕೊಟ್ಟಿರಿ! ಬರೆಸಿದ ಮೋಹನ್ ಸರ್ ಅವರಿಗೆ ಶರಣು.
    ರಸಿಕರು, ನಟವರ್ಗ, ನಿರ್ದೇಶನದವರು, ನೇಪಥ್ಯದವರು, ಸಂಘಟಕರು, ಶಿಕ್ಷಕರು, ಸಂಗೀತ ನೃತ್ಯ ವರ್ಣ ಚಿತ್ರಕಲಾವಿದರು, ಬರಹಗಾರರು ಮುಂತಾಗಿ ಎಲ್ಲರಿಗೂ ಇಲ್ಲಿ ಪ್ರಸ್ತುತವೆಸುವಂತದ್ದು ಇದೆ.

    ನಿಮ್ಮ ಪಯಣದ ಮರುಸೃಷ್ಟಿಯನ್ನು ಆಸ್ವಾದಿಸುವ ಅವಕಾಶ ಸಿಕ್ಕಿದ್ದೇ ಖುಶಿ.

    ಪ್ರತಿಕ್ರಿಯೆ
  4. Kavya Kadame

    ಶ್ರೀಪಾದ್ ಭಟ್ ಸರ್, ಈ ಅಂಕಣದ ಪ್ರತೀ ಬರಹವೂ ಒಂದೊಂದು ವಿಭಿನ್ನ ಕತೆಯನ್ನು ಓದುಗರೆದೆಗೆ ದಾಟಿಸಿವೆ. ನಟನೆಯ ತಯಾರಿಗೆಂದು ಈ ಲೇಖನದಲ್ಲಿ ಟಿಪ್ಸ್ ಕೊಟ್ಟಿದ್ದು ಚೆನ್ನಾಗಿದೆ. ಹತ್ತನೇ ಕ್ಲಾಸಿಗೆ ಶಾಲೆ ಬಿಟ್ಟ ಆ ಚುರುಕು ಹುಡುಗನ ಕತೆ ಕೇಳಿ ಬೇಸರವಾಯಿತು. ಸರಿಯಾದ ಅಡಿಪಾಯ ದೊರಕಿದ್ದರೆ ಬದುಕಿನ ಎಷ್ಟೊಂದು ಸಾಧ್ಯತೆಗಳಿಗೆ ತೆರೆದುಕೊಳ್ಳುತ್ತಿದ್ದನೋ ಏನೋ. ಕಾರಂತರು ಹೇಳಿದಂತೆ ದೊಡ್ಡ ಅಲೆಗಳಂತೆಯೇ ಸಣ್ಣ ಅಲೆಗಳೂ ದಡ ಮುಟ್ಟುವ ಉಪಮೆ ಆ ಹುಡುಗನನ್ನೂ ಸೇರಿ ನಮ್ಮೆಲ್ಲರಿಗೂ ತಾಳೆಯಾಗುತ್ತದಲ್ಲ! It was a lovely journey. ನಿಮ್ಮ ಬರಹಗಳನ್ನು ಮತ್ತೂ ಓದಬೇಕು, ನಾಟಕಗಳನ್ನು ನೋಡಬೇಕು ಅಂತ ಆಸೆ.    

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: