ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಸವ ನಿಲಯ..

ಅನಿಲ್ ಗುನ್ನಾಪುರ. ಇಂಡಿ

ಇಳಿಸಂಜೆಯ ಹೊತ್ತಲ್ಲಿ
ಗೊಡೆಗೊರಗಿ ನಿಂತಿದ್ದ ತಳ್ಳು ಗಾಡಿಯ ಮೇಲೆ ಕುಳಿತವನ ನೆರಳು ಕತ್ತಲು ನುಂಗುತ್ತಲಿತ್ತು.

ಬದಿಯ ಸರ್ಕಲ್ಲಿನಲ್ಲಿ  ಕುದುರೆಯ ಮೇಲೆ ಕುಳಿತಿದ್ದ ವೀರಾಧಿವೀರನೊಬ್ಬ ಇಳಿದು ರಾಜಗಾಂಭಿರ್ಯದಲಿ ಬರುತಲಿದ್ದ…
ಸೊಂಟದಲ್ಲಿ ಕತ್ತಿ ಫಳಫಳನೆ ಹೊಳೆಯುತಲಿತ್ತು.

ಕುಳಿತವನ ಹೆಗಲಮೇಲೆ ಕೈಹಾಕಿ
ಯಾಕೋ ತಮ್ಮ ಬೇಜಾರಾಗಿದೆಯಾ? ಎಂದ.
ಮರುಮಾತಾಡದೆ ಸುಮ್ಮನೆ ಕುಳಿತನವನು
ನಾನು ಕಣೋ ಬಸವಣ್ಣ…! ಎಂದ ;

ಸುಳ್ಳಾಡಬೇಡ ಹೋಗಪ್ಪ ಎಂದೆನ್ನುತ ಅಲ್ಲಿಂದ ಕಾಲ್ಕೀಳಲಾರಂಬಿಸಿದ…..

ನೋಡಿಲ್ಲಿ ಎಂದವನೇ
ಕಿರೀಟ, ಕತ್ತಿ, ವಜ್ರಾಭರಣಗಳು ಕಿತ್ತೆಸೆದ.
ಕೈಯಲ್ಲಿ ರುದ್ರಾಕ್ಷಿ ಮಾಲೆ ಹಿಡಿದು ಹೂನಗೆಯ ಬೀಸುತ್ತ ನಿಂತ ಬಸವಣ್ಣ.

ಉಮ್ಮಳಸಿ ಬಂದ ದುಃಖ ತಡೆಹಿಡಿದು ಗದ್ಗಿತವಾದ ಧ್ವನಿಯಲ್ಲಿ ….

ಅಣ್ಣಾ….. ಎಂದೆನ್ನುತ ಅಪ್ಪಿಕೊಂಡು ಬಿಕ್ಕಳಿಸಲಾರಂಬಿಸಿದ…

ಸಂತೈಸುತ ಅವನ ವೃಂತ್ತಾಂತವೆನ್ನೆಲ್ಲ ಬಿಚ್ಚಿಸಿದ ಬಸವಣ್ಣ.

ಊರೆಲ್ಲಾ ಅಲೆದೆ ಕೋಣೆ ಬಾಡಿಗೆಗಾಗಿ
ಊಹ್ಞೂಂ… ಯಾರೊಬ್ಬರು ಕ್ಯಾರೆ ಎನ್ನಲಿಲ್ಲ.
ಕೊನೆಗೊಂದು ಮನೆಯ ಗೇಟಿನ ಮೇಲೆ ಫಲಕ ತೂಗಿಹಾಕಿದ್ದರು…
“ಕೋಣೆ ಬಾಡಿಗೆ ಕೊಡುವುದಿದೆ” ಎಂದು.
ನಿಟ್ಟುಸಿರು ಬಿಟ್ಟು ಒಳನಡೆದೆ
ಗೋಡೆಯ ಚಿತ್ರಪಟದಲಿ ಅಣ್ಣಾ.. ನಿನ್ನದೆ ಧ್ಯಾನಸ್ಥ ಚಿತ್ರ.
ಒಳಗೊಳಗೆ ಹೆಮ್ಮೆ ಎನಿಸಿತು.
ಮಾತುಕತೆಯಲ್ಲಾ ಮುಗಿಸಿ ಹೊರಬಂದೆ
ಮತ್ತೊಮ್ಮೆ ಕಣ್ತುಂಬಿಕೊಳ್ಳುವ ಹಂಬಲದಿ ತಿರುಗಿ ನೋಡಿದೆ.
“ಬಸವ ನಿಲಯ” ಎಂದು ಬರೆದ ಮುದ್ದಾದ ಅಕ್ಷರಗಳು ನಲಿದಾಡುತಿದ್ದವು.

ಮುಗುಳ್ನಗೆ ಬೀರುತ್ತಲೇ ಮನೆಹಿರಿಯ ಎಸೆದ ಮಾತಿನ ಬಾಣ…
ಗಾಯ ಕಾಣಲಿಲ್ಲ ನಿಜ ನೋವು ಹೇಳತಿರದು
ಅಣ್ಣಾ…!
ನಿನ್ನ ಮನೆಯಲ್ಲಿಯು ಜಾತಿಭೇದದ ಮಾತೆ
ಓದಿಲ್ಲವೆ ನೀ ಬರೆದ ಸಮಾನತೆಯ ಕವಿತೆ

ದುಃಖಿಸಬೇಡ : ಅವರವರ ಖುಷಿಗಾಗಿ ನನ್ನ ಬಳಸಿಕೊಂಡಿದ್ದಾರೆ.
“ಬಸವ ನಿಲಯ” ಎಂದು ಬರೆದಿರುವ ಎಲ್ಲ ಮನೆಗಳಲ್ಲಿ ನಾನಿಲ್ಲ ತಮ್ಮಾ….
ಸಮಾನತೆ, ಸಹೋದರತೆ, ಸಹಬಾಳ್ವೆ ಬಯಸುವ ಎಲ್ಲರ ಮನದೊಳಗೆ ನಾನಿರುವೆ.
ಹೋಗು ನಿರಾಶನಾಗಬೇಡ..!
ಪ್ರೀತಿಸುವ ಹೃದಯಗಳು
ಸಮಾನತೆ ಸಾರುವ ಹೂವುಗಳು ಎಲ್ಲೆಲ್ಲೂ ಅರಳುತಿವೆ.

‍ಲೇಖಕರು avadhi

30 April, 2017

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading