
ಮೂಲ – ಬರ್ಟೋಲ್ಟ್ ಬ್ರೆಕ್ಟ್
ಕನ್ನಡಕ್ಕೆ – ಬಸವರಾಜ ಬೀಳಗಿ
ಏಳು ಬಾಗಿಲುಗಳ ಥೀಬ್ಸ್ ನಗರವನು ಕಟ್ಟಿದವರಾರು?
ನಿಮ್ಮ ಪುಸ್ತಕಗಳೆಲ್ಲ ರಾಜರ ಹೆಸರುಗಳಿಂದ ಹೆಣ ಭಾರವಾಗಿವೆ.
ನಿಮ್ಮ ರಾಜರೇನು ಗಜಗಾತ್ರದ ಬಂಡೆಗಳನು ಹೊತ್ತು ತಂದರೇ?
ನೂರೆಂಟು ಬಾರಿ ನೆಲಕಚ್ಚಿ ಮಣ್ಣಾದ ಬ್ಯಾಬಿಲೋನ್ ಅನ್ನು
ಮತ್ತೆ ಮತ್ತೆ ತಲೆಯೆತ್ತಿ ನಿಲ್ಲುವಂತೆ ಮಾಡಿದವರಾರು?
ಹೊಳೆಯುವ ಚಿನ್ನದ ನಗರಿ ಲಿಮಾವನ್ನು ಕಟ್ಟಿದವರು
ಎಂತಹ ಸೂರುಗಳಲಿ ವಾಸಿಸುತ್ತಿದ್ದರು?
ಆ ದಿನದ ಸಂಜೆ ಚೀನಾದ ಗೋಡೆಯನು ಕಟ್ಟಿ ಮುಗಿಸಿದ
ಎಲ್ಲ ಕಲ್ಲುಕುಟಿಗರು ಎಲ್ಲಿ ಹೋದರು?

ಸಾವಿರ ವಿಜಯಸ್ತಂಭಗಳಿಂದ ಮತ್ತು ಕಮಾನುಗಳಿಂದ ಕಂಗೊಳಿಸುತಿದೆ ರೋಮ್.
ಆ ಸ್ತಂಭಗಳನು ಮತ್ತು ಕಮಾನುಗಳನು ನಿಮಿ೯ಸಿದವರಾರು?
ಯಾರ ಸಮಾದಿಯ ಮೇಲೆ ಸೀಸರ್ ಜಯಗಳಿಸಿದನು?
ನೂರಾರು ರಮ್ಯ ಹಾಡುಗಳಿಗೆ ವಿಷಯವಾದ
ಬೈಜಾಂಟಿಯಮ್ ನಗರದ ಸಾಮಾನ್ಯ ಪ್ರಜೆಗಳು ಅರಮನೆಗಳಲಿ ವಾಸಿಸುತ್ತಿದ್ದರೇ?
ಪುರಾಣದಲಿ ಉಲ್ಲೇಖಿತ ಅಟ್ಲಾಂಟಿಸ್ ನಗರಿ
ಸಮುದ್ರದ ಸೆಳೆತಕ್ಕೆ ಸಿಕ್ಕು ಕೊಚ್ಚಿಹೊಗುತ್ತಿದ್ದರೂ ಗುಲಾಮರಿಗಾಗಿ ಬೊಬ್ಬಿರಿಯುತ್ತಿತ್ತು.
ಮಸೆಡೊನಿಯದ ಅಲೆಕ್ಸಾಂಡರ್ ಭಾರತವನು ಗೆದ್ದು ಬೀಗಿದನು.
ಅವನೇನು ಒಬ್ಬನೆ ಗೆದ್ದನೇ?
ಗೌಲರನ್ನು ಸೋಲಿಸಿದ ಸೀಸರ್ ತನ್ನೊಂದಿಗೆ ಅಡುಗೆಯವರನೂ ಕರೆತಂದಿರಲಿಲ್ಲವೇ?
ತನ್ನ ನೌಕಾಪಡೆಯು ಶತ್ರುಗಳೆದುರು ಮಂಡಿಯೂರಿ ಶರಣಾದಾಗ ಸ್ಪೇನ್ನ ಫಿಲಿಪ್ ರೋದಿಸಿದನು.
ಆಗ ಕಣ್ಣೀರು ಸುರಿಸಿದವನು ಅವನೋಬ್ಬನೇ ಏನು?
ಸಪ್ತವಷ೯ಗಳ ಯುದ್ದವನು ಗೆದ್ದ ಎರಡನೆ ಫ್ರೆಡೆರಿಕ್ನಂತೆ ಮತ್ತಾರಾದರೂ ಜಯದ ನಗೆ ಬಿರಿದವರುಂಟೇ?
ಪ್ರತಿಸಲವೂ ವಿಜಯದ ಪಟವೊಂದು ತೆರೆದಾಗ ಜಯಶಾಲಿಗಳಿಗೆ ರಸಗವಳ ತಯಾರಿಸಿ ಬಡಿಸಿದವರಾರು?
ದಶಕವೊಂದಕ್ಕೆ ಒಬ್ಬ ಉದ್ದಾಮ ವೀರ. ಈ ಎಲ್ಲದಕೂ ಬೆಲೆತೆತ್ತವರಾರು?
ಎಣಿಕೆಗೆ ಸಿಗದಷ್ಟು ವೃತ್ತಾಂತಗಳು.
ಅಂತೇಯೇ ಲೆಕ್ಕವಿರದಷ್ಟು ಪ್ರಶ್ನೆಗಳು.






0 Comments