ಬಳ್ಳೊಳ್ಳಿ ಬುತ್ತಿಯೂಟದ ನೆನಪಿನಾಗ…

ಹೆಸರೇ ಅನಾಮಿಕಾ ಹಾಗಾಗಿಯೇ ಈಕೆ ಅನಾಮಿಕೆ .

ಹೆಸರು ಹೇಳಲು ಒಲ್ಲದ ಈಕೆ ಭೋಜನಪ್ರಿಯೆ ಅಂತ ಬಿಡಿಸಿ ಹೇಳಬೇಕಿಲ್ಲವಲ್ಲ. ಅದು ಎಷ್ಟು ಖರೆ ಎಂದು ನಮಗೂ ಗೊತ್ತಿಲ್ಲ. ಆದರೆ ಇಷ್ಟು ಮಾತ್ರ ನಿಜ. ಭೋಜನಕ್ಕೆ ನಮ್ಮನ್ನು ಬಡಿದೆಬ್ಬಿಸುವಂತೆ ಈಕೆ ಬರೆಯುತ್ತಾಳೆ.

ಅಷ್ಟೇ ಆಗಿದ್ದರೆ ಇದನ್ನು ಒಂದು ರಸ ರುಚಿಕಾಲಂ ಹೆಸರಿನಡಿ ಸೇರಿಸಿ ನಾವು ಕೈ ತೊಳೆದುಕೊಳ್ಳುತ್ತಿದ್ದೇವೇನೋ..!

ಆಕೆಗೆ ಒಳಗಣ್ಣಿದೆ. ಒಂದು ಆಹಾರ ಹೇಗೆ ಒಂದು ಸಂಸ್ಕೃತಿಯ ಭಾಗವಾಗಿ ಬರುತ್ತದೆ ಎನ್ನುವುದರ ಬಗ್ಗೆ ಹಾಗೂ ಹೇಗೆ ಆಹಾರ ಒಂದು ಸಂಸ್ಕೃತಿಯನ್ನು ರೂಪಿಸುತ್ತದೆ ಎನ್ನುವುದರ ಬಗ್ಗೆಯೂ

ಹಾಗಾಗಿಯೇ ಇದು ರಸದೂಟವೂ ಹೌದು ಸಮಾಜ ಶಾಸ್ತ್ರದ ಪಾಠವೂ ಹೌದು.

ನಾವು ಸಣ್ಣೋರಿದ್ದಾಗ ನಮ್ಮನ್ಯಾಗ ಅನ್ನ ಮಾಡ್ತಾರಂದ್ರ ಒಂದೋ ಅವರು ಭಾಳ ಶ್ರೀಮಂತ್ರು ಇಲ್ಲಾಂದ್ರ ಅವರ ಮನ್ಯಾಗ ಯಾರಿಗೋ ಜ್ವರ ಬಂದಾವ ಅಂತನೇ ಅರ್ಥ.

ಅನ್ನದಕ್ಕಿಂತಲೂ ಹೆಚ್ಚು ನೆಚ್ಚಿಕೊಂಡಿದ್ದು ನವಣಕ್ಕಿಗೆ ಬಿಟ್ರ ಜೋಳದ ನುಚ್ಚಿಗೆ. ಜೋಳದ ಬುತ್ತಿಗೆ, ಬಾನಕ್ಕ. ನವಣಕ್ಕಿನ್ನ ಯಾವಾಗಲೂ ರಾತ್ರಿನ ತೊಳದಿಡೋರು. ಬೆಳಗ್ಗೆ ಅನ್ನ ಮಾಡೋರು. ಅದೊಂಥರ ಹೊನ್ನಕ್ಕಿ ಬೆಂದಂಗ ಕಾಣೂದು. ಅದಕ್ಕ ಹಾಲು ಬೆಲ್ಲ, ತುಪ್ಪ ಹಾಕಿ ಮಕ್ಕಳಿಗೆ ಉಣಸೋರು. ದೊಡ್ಡೋರು ಉಪ್ಪು, ಮೆಣಸಿನಕಾಯಿ ಚಟ್ನಿ ಇಲ್ಲಾಂದ್ರ ಖಾರಬ್ಯಾಳಿ ಕಲಸ್ಕೊಂಡು ಉಣ್ಣೋರು.

ಜೋಳದ ನುಚ್ಚು ಮಾತ್ರ ಎಲ್ಲಾರ ಮನ್ಯಾಗೂ ಇರ್ತಿತ್ತು. ನುಚ್ಚು ಒಡಸೂದು.. ಸರಳ ಕೆಲಸ. ಬಾನಕ್ಕಾಗಿ ಜೋಳ ನೆನಿಸಿ ಕುಟ್ಟೂದು ಅಗ್ದಿ ಶ್ರಮದ ಕೆಲಸ. ಆದ್ರ ಎರಡೂ ಅಗ್ದಿ ರುಚಿ ಖಾದ್ಯಗಳು. ಜೋಳದ ಬಾನಾ ಹೆಂಗ ಮಾಡ್ತಾರ ಗೊತ್ತದ ಏನ್ರಿ? ಒಂದಿಡೀದಿನ, ಒಂದಿಡೀ ರಾತ್ರಿ ಜೋಳ ನೆನಿಸಿಇಡ್ತಾರ. 

ನೆನಿಸಿದ್ದ ಜೋಳ, ಅಜ್ಜನ ಬೆಳ್ಳನೆಯ ಧೋತರದಾಗ ಒಣ ಹಾಕ್ತಾರ. ಆಮೇಲೆ ಒಳ್ಳಾಗ ಹಾಕಿ, ಒಣಕೀಲೆ ಕುಟ್ಟಿದ್ರ, ಅದರ ಮ್ಯಾಲಿನ ಸಿಪ್ಪಿ ಬಿಟ್ಕೊಂತ ಹೋಗ್ತದ. ಬಿಳಿ ಜೋಳದೊಳಗಿನ ಹತ್ತಿಯುಂಡಿಯಷ್ಟ ಉಳೀತಾವ. 

ಹಿಂಗ ಕುಟ್ಟಿದ್ದ ಜೋಳನ್ನ ಮೊರದಾಗ ಹಾಕಿ ಕೇರ್ತಾರ. ಸಿಪ್ಪಿ ಎಲ್ಲ ತೂರಿ ಹೋಗ್ತದ. ದುಂಡನೆಯ ಬೆಳ್ಳನೆಯ ಕಾಳುಗಳು ಕಾಣ್ತಾವ. ಅವನ್ನ ಹುಳಿ ಮಜ್ಜಿಗಿಯೊಳಗ ನೆನಿಸಿ ಇಡ್ತಾರ. ಹುಳಿಮಜ್ಗಿ ಹೀರಕೊಂಡು, ಹೊಟ್ಟಿಯುಬ್ಬಿಸಿಕೊಂಡ ಈ ಕಾಳನ್ನು ಕುದಸಾಕ ಇಡ್ತಾರ. ಕರೀಗಡಗಿಯೊಳಗ ಕುದಸ್ತಿದ್ಲು ನಮ್ಮಾಯಿ. ಅದೆಷ್ಟು ಚಂದ ಕಾಣ್ತಿತ್ತು. ಕರಿ ಮುಗಿಲಾಗ ಚಂದ್ರನ ಮುಖ ಕಂಡಂಗ. 

ಹಿಂಗ ಕುದಸೂಮುಂದ ಮಜ್ಗಿ ಬೇಕಾದೋರು ಮಜ್ಗಿ ಹಾಕ್ತಾರ. ಹುಳಿ ಭಾಳ ಬ್ಯಾಡ ಅನ್ನೋರು ನೀರಾಗ ಕುದಸ್ತಾರ. ಹಿಂಗ ಕುದ್ದು ಅನ್ನದ ಹದಕ್ಕ ಬಂದಾಗ ಅದರೊಳಗ ನಾಲ್ಕೆಸಳು ಜವಾರಿ ಬಳ್ಳೊಳ್ಳಿ ಹಾಕ್ತಾರ.

ಜವಾರಿ ಬಳ್ಳೊಳ್ಳಿ ಅಂದ್ರ ಅಗ್ದಿ ಸಣ್ಣುವು. ಎಲ್ಲಾ ಕೂಡಿ ಎಂಟರಿಂದ ಹತ್ತು ಎಸಳು ಇರ್ತಾವ. ಇವನ್ನು ಸುಲಿಯಾಕ ಆಗೂದಿಲ್ಲ. ಮತ್ತ ಇವುಗಳ ಸಿಪ್ಪಿ ಮಿಂಚೂದಿಲ್ಲ. ಕೈಯ್ಯಾಗ ಹೊಸದು, ಒಳ್ಳಾಗ ಕುಟ್ಟಿ, ಬಳಸಿದ್ರ ಘಂ ಅಂತ ವಾಸನಿ ಬರ್ತದ.

ಇವನ್ನು ಸುಲ್ಯಾಕ ಹೋದ್ರ ಉಗುರು ಸುತ್ತು ಆಗೂದು ಖಚಿತದ. ಹಂಗಾಗಿ ಸುಲಿಯೂದಿಲ್ಲ. ಹಿಂಗ ಬಳ್ಳೊಳ್ಳಿ ಹಾಕಿದಾಗ, ಇದರ ಖಾರ ಕಡಿಮಿ ಆಗಲಿ ಅಂತ ಉಳ್ಳಾಗಡ್ಡಿನು ಸಣ್ಣಗೆ ಹೆಚ್ಚಿ ಹಾಕ್ತಾರ. ಮ್ಯಾಲೊಂದಿಷ್ಟು ಕೊತ್ತಂಬರಿ ಸೊಪ್ಪು ಹಾಕಿದ್ರ ಮಸ್ತ ಘಮ್‌ ಅನ್ನುವ ಬಾನ ರೆಡಿ ಆಗ್ತದ.

ಹಿಂಗ ರೆಡಿ ಆದ ಬಾನಕ್ಕ ಮೊಸರು, ಗಟ್ಟಿ ಮೊಸರು, ಕೆನಿಹಾಲು ಹಾಕಿ ಕಲಸ್ತಾರ. ತಣದ ಮ್ಯಾಲೆ. ಆಮೇಲೆ ಅವನ್ನು ಉಂಡಿ ಕಟ್ಟಿಡ್ತಾರ. ಈ ಬುತ್ತಿ ಬಾನಕ್ಕ ಗುರೆಳ್ಳು ಮತ್ತು ನಮ್ಮ ಕೊಲ್ಹಾರದಾಗ ಸಿಗುವಂಥ ಮೊಸರು ಮಸ್ತ್‌ ಕಾಂಬಿನೇಷನ್ನು

ಕೊಲ್ಹಾರದ ಮೊಸರು ಅಂದ್ರ ವಿಜಯಪುರ ಜಿಲ್ಲೆಯ ಕೊಲ್ಹಾರ, ಕೃಷ್ಣಾ ನದಿ ದಂಡಿಗೆ ಬರ್ತದ. ಕೊಲ್ಹಾರದ ಕಲ್ಹೂವಿನಂಥ ಮೊಸರು ಅಂತಾರ. ಕಲ್ಲಿನ್ಹಂಗ ಗಟ್ಟಿ, ಹೂವಿನ್ಹಂಗ ಮೃದು. ಸಣ್ಣ ಕುಳ್ಳಿಯೊಳಗ ಹೆಪ್ಪು ಹಾಕ್ತಾರ. ಹಂಗಾಗಿ ನೀರೆಲ್ಲ ಇಂಗ್ತಾವ. ಗಟ್ಟಿ ಮೊಸರಷ್ಟೆ ಉಳೀತದ. ಚಮಚೆಯಿಂದ ಕೊರದು ತಿನ್ನುವಷ್ಟು ಗಟ್ಟಿ. ಇಂಥ ಗಟ್ಟಿ ಮೊಸರು ತಿನ್ನುವ ಖುಷಿನೇ ಬ್ಯಾರೆ. 

ಇಂಥ ಗಟ್ಟಿ ಮೊಸರಿನೊಳಗ ಜೋಳದ ಬುತ್ತಿಬಾನ ನಂಜ್ಕೊಂಡು ತಿನ್ನುವ ಸುಖನೆ ಬ್ಯಾರೆ. ಈ ಚಳಿಗಾಲದಾಗ ಬರುವ ಎಲ್ಲ ಹುಣ್ಣಿವಿ, ಅಮವಾಸಿಗಳಿಗೂ ಬುತ್ತಿ ಕಟ್ಟೂದು ಅಗ್ದಿ ಸಹಜ. ಅವಾಗೆಲ್ಲ ಈ ಬುತ್ತಿ ಬಾನದೂಟ ಅಗ್ದಿ ಪ್ರೀತಿ.

ಈ ಬುತ್ತಿಯನ್ನು ಖಟಕ ರೊಟ್ಟಿ ಜೊತಿಗೆ, ಬಿಸಿ ರೊಟ್ಟಿ ಜೊತಿಗೆ ನಂಜ್ಕೊಂಡು ತಿಂತಾರ. ಹಾಲುಹೈನ ಇರುವ ಮನ್ಯಾಗಂತೂ ತರಕಾರಿ, ಕಾಳು ಇರಲಿಬಿಡಲಿ ಈ ಬಾನದೂಟ ಅಂತೂ ಇದ್ದೇ ಇರ್ತಿತ್ತು.

ಬಾನದೂಟ ತಿಂದ್ರ ಆ್ಯಸಿಡಿಟಿ ಆಗೂದಿಲ್ಲ ಅಂತ ಒಂದು ನಂಬಿಕಿ. ಎದ್ಯಾಗ ಉರಿ ಇಲ್ಲ, ಹೊಟ್ಯಾಗ ಭಗಭಗ ಅಂತಿದ್ರ ಬಾನ ತಿನ್ರಿ ಅಂತಿದ್ರು. ಬರೇ ಮೊಸರಿದ್ರ ತಂಪ ಆಗ್ತದಂತ ಬಳ್ಳೊಳ್ಳಿ ಎಸಳು ಹಾಕೋರು. 

ಯಾರರೆ ಬಸುರಿದ್ದಾಗ ಮೂರನೆಯ ತಿಂಗಳಿಗೆ ಕಳ್ಕುಬಸ ಅಂತ ಮಾಡ್ತಾರ. ಅವಾಗ ಈ ಬುತ್ತಿಯೂಟ ಕಟ್ಕೊಂಡು ಹೋಗೂದು ಸಾಮಾನ್ಯ. ಯಾಕಂದ್ರ ಆವಾಗ ಹಾರ್ಮೋನುಗಳ ಏರುಪೇರಿನಿಂದಾಗಿ ಆ್ಯಸಿಡಿಟಿ, ಪಿತ್ತ ಎಲ್ಲಾ ಶುರುವಾಗಿರ್ತಾವ. ಬಯಕಿ (ಅಂದ್ರ ಬಸುರಿನ ಸಮಯದ ವಾಂತಿ) ಹೆಚ್ಚಾಗಿರ್ತದ. ಅವಾಗ ಹೊಟ್ಟಿಗೆ ಇದು ಹಿತ ಅಂತ ಮೂರರಿಂದ ಐದು ತಿಂಗಳು ಆಗೂತ ನಾನೂ ಬಂಧು ಬಳಗದೋರು ಬುತ್ತಿಯೂಟ ತೊಗೊಂಡು ಹೋಗ್ತಾರ.

ಆ ಬುತ್ತಿಯೂಟದೊಳಗ ಜೋಳದ ಬುತ್ತಿಬಾನ, ಮೊಳಕೆಯೊಡದ ಕಾಳುಗಳ ಉಸುಳಿ ಕಾಯಂ ಇರ್ತದ. ಸಜ್ಜಿರೊಟ್ಟಿ, ಜೋಳದ ರೊಟ್ಟಿ ಇದ್ರೂ ಅವು ಹೆಸರು ಬಸುರಿದ್ದವರದ್ದು. ಚೈನಿ ಉಳದೋರದು ಅನ್ನೂಹಂಗ ಇರ್ತದ. ಆ ಮಾತು ಬ್ಯಾರೆ. ಆದ್ರ ಅಮ್ಮನ ಒಡಲೊಳಗ ನಾನಷ್ಟೇ ಇರೂದು ಅಂತ ಹಟ ಹಿಡಿಯುವ ಆ ಪುಟ್ಟ ಜೀವದ ಹಟವನ್ನು ತಣಿಸುವುದು ಇದೇ ಬುತ್ತಿಯೂಟ.

ಬಯಕಿ ಹಂಗ ಕಡಿಮಿ ಮಾಡುವ ಗುಣ ಈ ಬುತ್ತಿಯೂಟಕ್ಕ ಅದ. ಲಗೂ ಪಚನ ಆಗ್ತದ. ಹೊಟ್ಟಿ ತಣ್ಣಗಿರ್ತದ. ಪಿತ್ತ ಆಗೂದಿಲ್ಲ. ಹಂಗೇ ಏಳರೊಳಗ ರೊಟ್ಟಿಬುತ್ತಿ ಬೀರೂಮುಂದನೂ, ರೊಟ್ಟಿ ಮ್ಯಾಲೊಂದು ಬೆಣ್ಣಿಮುದ್ದಿ ಇದ್ದಂಗ ಬುತ್ತಿಯುಂಡಿ ಇಡ್ತಾರ. ಇಟ್ಟು ಊಟ ಬೀರ್ತಾರ. 

ಇದಕ್ಕ ಇನ್ನೊಂದು ಮುಖ್ಯ ಕಾರಣ ಜೋಳದ ತೆನಿ, ಬಳ್ಳೊಳ್ಳಿ ಇವೆರಡೂ ಬಹುಸಂತಾನ ಇರುವುದನ್ನು ಸೂಚಿಸ್ತಾವಂತ. ಫಲವಂತಿಕೆಯನ್ನು ಸಂಕೇತಿಸಲು ಉಡಿ ತುಂಬುಮುಂದ ಜೋಳ, ಬಳ್ಳೊಳ್ಳಿನೂ ಅಕ್ಕಿ ಜೊತಿಗೆ ಕೊಡ್ತಾರ.

ಫಲವಂತಿಕೆಯ ಪ್ರತೀಕವಾದ ಬುತ್ತಿಯೂಟ ನೇಪಥ್ಯಕ್ಕೆ ಜರುಗಿದ್ದು, ಕುಟ್ಟಿ, ಹೊಟ್ಟು ಬೇರ್ಪಡಿಸುವ ಶ್ರಮದ ಕೆಲಸದಿಂದ. ಆದ್ರ ಈಗಲೂ ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಪ್ರದೇಶದೊಳಗ ಬುತ್ತಿ ಬಾನ, ಅಗಸಿ ಹಿಂಡಿ, ಗುರೊಳ್ಳು ಹಿಂಡಿ ಕಾಂಬಿನೇಷನ್‌ ಅಂದ್ರ ಬಯಕಿಯೂಟದಷ್ಟೇ ಪ್ರೀತಿಯಿಂದ ಸೇವಸ್ತಾರ.

ನೀವೂ ಯಾವಾಗರೆ ಅತ್ತಾಗ ಹೋದ್ರ, ಕೇಳಿ ಮಾಡಸ್ಕೊಂಡು ತಿನ್ರಿ.

‍ಲೇಖಕರು ಅನಾಮಿಕಾ

November 22, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: