ಕಾಶ್ಮೀರದ ತೇಲುವ ಮನೆಗಳ ಶತಮಾನದ ಕಥೆ!

ಹುಟ್ಟಿದ್ದು, ಬೆಳೆದಿದ್ದು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ. ಓದಿದ್ದು ಪತ್ರಿಕೋದ್ಯಮ. ಏಳೆಂಟು ವರ್ಷ ಕನ್ನಡದ ಪತ್ರಿಕೆ, ಟಿವಿ ಮಾಧ್ಯಮಗಳಲ್ಲಿ ವರದಿಗಾರ್ತಿ, ಬರಹಗಾರ್ತಿಯಾಗಿ ಕೆಲಸ ಮಾಡಿದ್ದಾರೆ.

ಸದ್ಯ ದೆಹಲಿಯ ಹಿಂದಿ ಗಾಳಿಯಲ್ಲಿ ಕನ್ನಡ ಉಸಿರಾಡುತ್ತಿದ್ದಾರೆ. ಕಳೆದೊಂದು ವರ್ಷದಿಂದ ಇಲ್ಲಿನ ಸ್ವಯಂಸೇವಾ ಸಂಸ್ಥೆಯೊಂದರಲ್ಲಿ ಮಹಿಳಾ ಸ್ವಾವಲಂಬನೆ ವಿಭಾಗದಲ್ಲಿ ಗ್ರಾಮೀಣ ಮಹಿಳೆಯರಿಗೆ ಕಲಾ ತರಬೇತಿ ನೀಡುತ್ತಿರುವುದು ತೃಪ್ತಿಕೊಟ್ಟಿದೆ.

ತಿರುಗಾಟ ಹುಚ್ಚು. ಸ್ಟ್ರೆಂತೂ, ವೀಕ್ನೆಸ್ಸುಗಳೆರಡೂ ಹಿಮಾಲಯವೇ. ಬದುಕಿನ ಚಿಕ್ಕ ಚಿಕ್ಕ ಸಂಗತಿಗಳು ಕ್ಯಾಮರಾ ಫ್ರೇಮಿನೊಳಗೆ ಇಳಿವಾಗ ಅವುಗಳು ರೂಪಾಂತರ ಹೊಂದುವ ಅದ್ಭುತ ಸಾಧ್ಯತೆಗಳ ಬಗ್ಗೆ ಸದಾ ಬೆರಗು.

ನಾವು ಹಾಗೆ ಡಲ್‌ ಗೇಟ್‌ ತಲುಪಿದಾಗ ಕತ್ತಲಾಗಿತ್ತು. ಚಳಿಗಾಲದ ಸಂಜೆ ಬೇರೆ. ಐದೂವರೆಗೆಲ್ಲ ಸೂರ್ಯ ಮಾಯವಾಗಿ ಕತ್ತಲು ಕವಿಯಲು ಶುರುವಾಗುತ್ತದೆ. ಇನ್ನು ಏಳರ ರಾತ್ರಿಯ ವಿಚಾರ ಯಾಕೆ! ಗಂಟೆ ನೋಡದಿದ್ದರೆ, ಹತ್ತರ ರಾತ್ರಿಗೂ ಏಳರ ರಾತ್ರಿಗೂ ಹೆಚ್ಚು ವ್ಯತ್ಯಾಸವಿರುವುದಿಲ್ಲ. ಈ ಬಾರಿ ಹಾಗೆ ಅನಿಸಲು ಕಾರಣವೂ ಇತ್ತು. ಈ ಕೊರೋನಾ ಹಾವಳಿಯಿಂದ ಮಂಕು ಕವಿದ ಆ ಡಲ್‌ ಗೇಟ್‌ ರಸ್ತೆ ಅಕ್ಷರಶಃ ಖಾಲಿ, ಅಲ್ಲಲ್ಲಿ ನಾಲ್ಕಾರು ವಾಹನ ಅತ್ತಿಂದಿತ್ತ ಇತ್ತಿಂದತ್ತ ಮಾಡುತ್ತಿದ್ದ ಭರ್ರನೆ ಸದ್ದು ಅಷ್ಟೇ.

ಎರಡು ದಿನಗಳ ಡ್ರೈವ್‌ ಸುಸ್ತಾಗಿತ್ತು. ಬೆಳಗ್ಗೆ ಪರಾಠಾ ಹೊಟ್ಟೆಗೆ ಹಾಕಿದ ಮೇಲೆ, ಮಧ್ಯದಲ್ಲಿ ಹಣ್ಣು ಹಂಪಲು ಬಿಟ್ಟರೆ, ಏನೂ ತಿನ್ನದೆ ಹಸಿವೋ ಹಸಿವು. ಹೀಗಾಗಿ, ಡಲ್‌ ಗೇಟ್‌ ರಸ್ತೆಗೆ ಅಡಿಯಿಡುತ್ತಿದ್ದಂತೆ ಮುತ್ತಿಕೊಂಡು ಕರೆಯುವ ಹೌಸ್‌ ಬೋಟ್‌ ನೌಕರರಿಗೆಲ್ಲ ಬೇಡವೆಂದು ತಲೆಯಲ್ಲಾಡಿಸುತ್ತಿದ್ದ ನಮ್ಮ ಕಣ್ಣು ಮಾತ್ರ ಮೊದಲು ಹೊಟ್ಟೆ ಸೇವೆ ಆಗಲೇಬೇಕೆಂದು ರೆಸ್ಟೋರೆಂಟ್‌ ಹುಡುಕುತ್ತಿತ್ತು. ಇದು ಒಕೆ ಅನಿಸಿ, ಕಾರು ನಿಲ್ಲಿಸಿ ಕೆಳಗಿಳಿವಷ್ಟರಲ್ಲಿ, ಗಬಕ್ಕೆಂದು ನಮ್ಮನ್ನು ಅಡ್ಡ ಹಾಕಿದ್ದು ಆದಿಲ್.‌

ʻನೋಡಿ, ಇಲ್ಲಿಂದ ನೇರ ಅಲ್ಲಿ ಕಾಣುತ್ತದಲ್ಲ, ಅದು ನನ್ನ ಹೌಸ್‌ ಬೋಟ್.‌ ಬಿಸಿನೀರು, ರೂಂ ಹೀಟರ್‌, ವೈಫೈ ಎಲ್ಲ ವ್ಯವಸ್ಥೆಯೂ ಇದೆ.  ಶೇಕಡಾ ೫೦ ರಿಯಾಯಿತಿ ಕೊಡುತ್ತೇನೆ. ಒಮ್ಮೆ ಬಂದು ನೋಡಿ. ಎಷ್ಟು ದಿನ ಇರುತ್ತೀರಿʼ? ಎಂದ. ಈತ ಹಿಂದೆ ಬೀಳುವ ಮೊದಲು, ರಸ್ತೆಯಿಡೀ ಇಂತಹ ಡೈಲಾಗಿನಿಂದ ತಪ್ಪಿಸಿಕೊಂಡು ಬಂದಿದ್ದೆವು. ಇನ್ನೇನು ಮೊದಲು ಹೊಟ್ಟೆಗೆ ಹಾಕಿದರಷ್ಟೆ ತಲೆ ಓಡುತ್ತದೆ ಎಂದು ಯೋಚಿಸುತ್ತಿದ್ದರೆ, ರೆಸ್ಟೋರೆಂಟಿನೊಳಗೆ ನುಗ್ಗಲು ಬಿಡದಂತೆ ಕೇಳಿದ್ದ.

ಪಾಪ ಅನಿಸಿತು. ಈ ಕೊರೋನಾ ಪ್ರವಾಸೋದ್ಯಮವನ್ನು ಎಷ್ಟು ಬಾಧಿಸಿದೆಯೆಂದರೆ, ಇದನ್ನೇ ನಂಬಿಕೊಂಡ ಎಷ್ಟೋ ಜನರು ಬೀದಿಗೆ ಬಿದ್ದಿದ್ದಾರೆ. ʻಇರಿ, ಊಟದ ಜೊತೆ ಯೋಚಿಸಲೂ ಒಂದರ್ಧ ಗಂಟೆ ಕೊಡಿʼ ಎಂದೆವು. ʻಸರಿ, ಕಾಯುತ್ತೇನೆʼ ಎಂದ. ಸರಿಯಾಗಿ ಊಟ ಮುಗಿಸಿ ಹೊರಬರುವಾಗ ಆದಿಲ್‌ ಅಲ್ಲೇ ನಿಂತಿದ್ದ. ಕಾದವನನ್ನು ನಿರಾಸೆಗೊಳಿಸುವುದು ಉಚಿತವಲ್ಲ ಎನಿಸಿ ಅವನ ಹಿಂದೆ ಹೊರಟೆವು.

ಅವನ ಮುಖದಲ್ಲಿ ಇಷ್ಟಗಲದ ನಗು. ನಿಜವಾಗಿ ನೋಡಿದರೆ, ನಮ್ಮ ಕಣ್ಣು ಮೂರು ವರ್ಷದ ಹಿಂದೆ ಬಂದಿದ್ದಾಗ ಉಳಿದುಕೊಂಡಿದ್ದ ಮಕ್‌ಬೂಲ್‌ನ ಹೌಸ್‌ ಬೋಟ್‌ ಹುಡುಕುತ್ತಿತ್ತು. ʻಮೊದಲೊಮ್ಮೆ ಇಲ್ಲಿ ಬಂದಿದ್ದೆವು, ಆ ಹೌಸ್‌ ಬೋಟ್‌ ಎಲ್ಲಿದೆ ಎಂದು ನೋಡುತ್ತಿದ್ದೆವುʼ ಎಂದೆ ನಾನು. ʻಈ ಸಾರಿ ನೋಡಿ, ನಿಮ್ಮ ಹೆಸರು ನನ್ನ ಹಣೇಲಿ ಬರೆದಿದೆ. ಅದಕ್ಕೇ ನೀವು ಸಿಕ್ಕಿದ್ದು. ಇದನ್ನು ತಪ್ಪಿಸೋದಕ್ಕೆ ಯಾರಿಂದಲೂ ಸಾಧ್ಯವಿಲ್ಲʼ ಎಂದು ತನ್ನ ವಯಸ್ಸಿಗೂ ಮಾತಿಗೂ ತಾಳಮೇಳವಿಲ್ಲದಂತೆ ಮಾತನಾಡಿ, ಹೌಸ್‌ ಬೋಟ್‌ ಕಡೆ ನಮ್ಮನ್ನು ಕರೆದೊಯ್ಯಲು ತನ್ನ ಶಿಖಾರ ತರಲು ಓಡಿದ.

ಆದಿಲ್‌ ಎಲ್ಲ ಕಾಶ್ಮೀರಿಗಳ ಹಾಗಲ್ಲ. ಪಕ್ಕನೆ ನೋಡಿದರೆ ಕಾಶ್ಮೀರಿ ಎಂದು ಕಂಡುಹಿಡಿಯೋದು ಕಷ್ಟ. ಸ್ವಲ್ಪ ಡಿಫರೆಂಟು. ವೇಷಭೂಷಣದಲ್ಲೂ ಕೂಡಾ. ಸಾಂಪ್ರಾದಾಯಿಕ ದಿರಿಸಾದ ಫೆರನ್‌ ಹಾಕಿಕೊಂಡು ಅದರ ಕೈಯನ್ನು ಹಾಗೆ ನೇತಾಡಲು ಬಿಟ್ಟು, ಬೂದಿ ಮುಚ್ಚಿದ ಕೆಂಡವಿರುವ ಕಂಗ್ಡಿಯನ್ನು ಬೆಚ್ಚಗೆ ಅಂಗಿಯೊಳಗಿಟ್ಟು ದೊಡ್ಡ ಹೊಟ್ಟೆಯವರಂತೆ ಓಡಾಡುವ ಹೌಸ್‌ ಬೋಟ್‌ ಮಾಲಿಕ ಇವನಲ್ಲ. ನಮ್ಮ ನಿಮ್ಮಂತೆ ಜೀನ್ಸು, ಮೇಲೊಂದು ಟೀಶರ್ಟು, ಅದಕ್ಕೊಂದು ಜಾಕೆಟ್ಟು ತೊಟ್ಟಿದ್ದ, ಇನ್ನೂ ೨೫ರ ಆಸುಪಾಸಿನ ಹುಡುಗ. ಸಿನಿಮಾ ಹುಚ್ಚು. ಚಾರಣ ಮರುಳು. ನಮ್ಮ ಆಸಕ್ತಿ ಗಮನಿಸಿ, ಮಾತಾಡಿದ ಅರ್ಧವೇ ಗಂಟೆಯಲ್ಲಿ, ʻಬನ್ನಿ ವಾಟರ್‌ ಟ್ರೆಕ್‌ ಮಾಡುವʼ ಎಂದು ಕರೆವ ಉತ್ಸಾಹಿ.

ಅದೆಂಥದ್ದು ʻವಾಟರ್‌ ಟ್ರೆಕ್‌ʼ ಎಂದರೆ, ಡಲ್‌ ಸರೋವರದಿಂದ ಝೇಲಂ ಉದ್ದಕ್ಕೂ ನಾಲ್ಕಾರು ದಿನ ಶಿಖಾರಾದಲ್ಲೇ ಹೋಗಿ ಬರುವುದುʼ ಎಂದು ನಕ್ಕ ಹುಡುಗ. ಸದ್ಯ ಇವೆಲ್ಲವುಗಳ ಜೊತೆಗೆ, ವೆಬ್‌ ಸೀರೀಸ್‌, ಅದು ಇದು ಅಂತೆಲ್ಲ ಕಣ್ಣ ತುಂಬ ಕನಸು ಕಟ್ಟಿಕೊಂಡು ನಟನೆಯಲ್ಲಿ ಕೊಂಚ ತನ್ನ ಹಣೆಬರಹ ನೋಡಲು ಹೊರಟಿದ್ದಾನೆ. ಹಾಗಾಗಿಯೋ ಏನೋ, ಫಿಟ್‌ನೆಸ್ಸು, ಫೇರ್‌ನೆಸ್ಸು ಎಂದೆಲ್ಲ ತನ್ನ ಕಾಳಜಿ ಭಾರೀ ಮಾಡಿಕೊಳ್ಳುತ್ತಾನೆ. ರಸ್ತೆಯಲ್ಲಿ ಸಿಕ್ಕಿ ಮಾತನಾಡುವಾಗ ಕಂಡ ಆದಿಲ್‌ಗೂ ತನ್ನ ಹೌಸ್‌ ಬೋಟ್‌ ಒಳಹೊಕ್ಕ ಮೇಲೆ ಕಂಡ ಆದಿಲ್‌ಗೂ ಬಹಳ ವ್ಯತ್ಯಾಸ ಕಂಡಿತು.

ನಾನೋ, ಪರಮ ಉಡಾಳತನದಿಂದ,  ಬಿಸಿಬಿಸಿ ಸ್ನಾನ ಮುಗಿಸಿದರೆ ಸಾಕಪ್ಪಾ ಎಂದುಕೊಂಡು ಫ್ರೆಶ್ಶಾಗಿ ಬಂದು ಆ ಚಳಿಗೆ ಒಣಗುವ ಚರ್ಮದ ಬಗ್ಗೆಯೂ ಕಿಂಚಿತ್ತೂ ತಲೆ ಕೆಡಿಸಿಕೊಳ್ಳದೆ, ಏನನ್ನೂ ಹಚ್ಚಿಕೊಳ್ಳದೆ, ಸ್ವೆಟರಿನೊಳಗೆ ಮೈತೂರಿಸಿಕೊಂಡು ಕತ್ತಲ ಮೌನದಲ್ಲಿ ಸಾಗುವ ಶಿಖಾರಗಳನ್ನು ನೋಡಲು ಹೊರಗಡೆ ಕೂತು ಬಿಟ್ಟೆ. ಆತ ಮಾತ್ರ ಭರ್ಜರಿ ಕ್ಲೆನ್ಸಿಂಗ್‌, ಮಾಯ್‌ಶ್ಚರೈಸಿಂಗ್‌ ಪ್ರಕ್ರಿಯೆಗಳನ್ನೆಲ್ಲಾ ಶಿಸ್ತಾಗಿ ಮುಗಿಸಿಕೊಂಡು ಮುಖಕ್ಕೆ ಇಷ್ಟು ದಪ್ಪಕ್ಕೆ ಬೆಳ್ಳಗೆ ಲೇಪಿಸಿಕೊಂಡು ಬಂದು ಶಾಕ್‌ ಕೊಟ್ಟಿದ್ದ. ಹೌಸ್‌ ಬೋಟ್‌ನ ಹೊಂಬಣ್ಣದ ಬೆಳಕಿದ್ದುದರಿಂದ ಬಚಾವ್.‌ ಕತ್ತಲಲ್ಲಿ ಹೀಗೆ ಹಠಾತ್‌ ದರ್ಶನ ಕೊಟ್ಟಿದ್ದಿದ್ದರೆ, ಖಂಡಿತ ಬೆಚ್ಚಿದ ರಭಸಕ್ಕೆ ಡಲ್‌ನ ತಣ್ಣನೆಯ ನೀರಿಗೆ ಬಿದ್ದು ಮರಗಟ್ಟಿ ಹೋಗುತ್ತಿದ್ದೆ. ನನ್ನಜ್ಜಿ ಪುಣ್ಯ ಮಾಡಿದ್ದರು! ಹಾಗಾಗಲಿಲ್ಲ.

ತಮಾಷೆ ಸೈಡಿಗಿರಲಿ. ಈ ಡಲ್‌ ಸರೋವರವೇ ಒಂದು ವಿಚಿತ್ರ ಜಗತ್ತು. ಆ ಕತ್ತಲ ರಾತ್ರಿಯಲ್ಲಿ ಮದುವೆ ಛತ್ರದಂತೆ ಫಳಫಳಿಸುವ ಲೈಟುಗಳನ್ನು ಹಾಕಿಕೊಂಡು, ಯಾವಾಗಲೂ ಯಾರಿಗೋ ಕಾಯುವಂತೆ ಸಾಲಾಗಿ ನಿಂತ ಹೌಸ್‌ ಬೋಟ್‌ಗಳು, ರಾತ್ರಿ ಹತ್ತಾದರೂ, ʻಕೇಸರ್‌ ಚಾಹಿಯೇ ಕ್ಯಾʼ ಎಂದು ಮಾರಲು ಬರುವ ಫ್ಲೋಟಿಂಗ್‌ ಮಾರ್ಕೆಟ್‌ ಶಿಖಾರಗಳು, ಒಂದೊಂದು ಹೌಸ್‌ ಬೋಟಿಗೂ ಒಂದೊಂದು ವಿಚಿತ್ರ ಹೆಸರುಗಳು!

ಹೆಸರುಗಳನ್ನು ಓದೋದೇ ಇನ್ನೊಂದು ಮಜಾ. ಡ್ಯೂಕ್‌ ಆಫ್‌ ವಿಂಡ್ಸರ್‌, ಮೊನಾಲಿಸಾ, ನ್ಯೂ ಮೊನಾಲಿಸಾ, ಗೋಲ್ಡನ್‌ ಬೆಲ್‌, ಸಿಲ್ವರ್‌ ಸ್ಟ್ರೀಟ್‌, ಬಕ್ಕಿಂಗ್‌ ಹ್ಯಾಂ ಪ್ಯಾಲೇಸ್‌, ರಾಯಲ್‌ ಸೋವರೀನ್‌, ನ್ಯೂ ಮ್ಯಾನ್‌ಹಟನ್‌, ಶಿಕಾಗೋ… ಇತ್ಯಾದಿ ಇತ್ಯಾದಿ. ಇವೆಲ್ಲ ಇಂಗ್ಲಿಷ್‌ ವೀರರ ನಡುವೆ ಅವಳೊಬ್ಬಳೇ ದೇಸೀ ʻಶಬ್ನಮ್ʼ ನನ್ನ ಕಣ್ಣಿಗೆ ಕಂಡದ್ದು. ಇಂತಹ ವಿದೇಶೀ ಹೆಸರುಗಳಿಗೂ, ಶ್ರೀನಗರದ ಡಲ್‌ ಮತ್ತು ನಿಗೀನ್‌ ಸರೋವರಗಳ ಹೌಸ್‌ ಬೋಟುಗಳ ಇತಿಹಾಸಕ್ಕೂ ಸಂಬಂಧವಿದೆಯಾ ಎಂದು ಕೆದಕಿದಾಗ ಗೊತ್ತಾಗಿದ್ದು ಬಹಳ ಇಂಟರೆಸ್ಟಿಂಗ್‌ ಆಗಿ ಕಂಡಿತು.

ಭಾರತ ಸ್ವತಂತ್ರಗೊಂಡದ್ದಕ್ಕಿಂತಲೂ ಹಳೆಯ ಕಥೆಯಿದು. ಕಾಶ್ಮೀರದಂಥ ಸ್ವರ್ಗ ಕಂಡರೆ ಯುರೋಪಿಯನ್ನರು ಬಿಡುತ್ತಾರಾ ಹೇಳಿ. ಇಂತಹ ಚೆಂದದ ಜಾಗ ಕಂಡದ್ದೇ ತಡ, ಹಾಯಾಗಿ ದಿನ ಕಳೆಯಲೆಂದು ಬರಲು ಆರಂಭಿಸಿದ್ದರು. ಆದರೆ, ತಾವಂದುಕೊಂಡಂತೆ ದಿನಗಟ್ಟಲೆ, ತಿಂಗಳುಗಟ್ಟಲೆ ಹಾಯಾಗಿ ಕಳೆಯಬೇಕೆಂದರೆ ಜಾಗ ಬೇಕಲ್ಲ! ದುಡ್ಡಿದೆ, ಜಾಗವಿರಲಿಲ್ಲ. ಆಗಿನ್ನೂ ಪ್ರವಾಸೋದ್ಯಮಕ್ಕಿನ್ನೂ ಅಷ್ಟಾಗಿ ತೆರೆದುಕೊಳ್ಳದ ಸಮಯ. ಈ ನೆಲದಲ್ಲಿ ಜಾಗ ಖರೀದಿ ಮಾಡಿ ಸ್ವಂತಕ್ಕೊಂದು ನೆಲ, ಆಳುಕಾಳುಗಳನ್ನಿಟ್ಟು ಹಾಯಾಗಿ ಇರಬಹುದೆಂಬ ಲೆಕ್ಕಾಚಾರ ಅವರದ್ದು.

ಆದರೆ, ಆಗಿನ ಕಾಶ್ಮೀರದ ಮಹಾರಾಜ ಯುರೋಪಿಯನ್ನರ ಈ ಆಸೆಗೆ ಸೊಪ್ಪು ಹಾಕಲಿಲ್ಲ. ಹೊರಗಿನವರು ಇಲ್ಲಿ ನೆಲ ಖರೀದಿ ಮಾಡುವಂತೆ ಇಲ್ಲ ಎಂಬ ತಮ್ಮ ನೆಲದ ಕಾನೂನನ್ನೇ ಅವರಿಗೂ ಹೇಳಿದರು. ಮಾಡೋದೇನು ಹಾಗಾದರೆ ಎಂದು ತಲೆಕೆರೆದುಕೊಂಡವರಿಗೆ ಕಂಡದ್ದು ಡಲ್‌ ಸರೋವರದ ಶಿಖಾರಗಳು. ವ್ಯಾಪಾರ ವಹಿವಾಟಿಗೆ ಬಳಸುತ್ತಿದ್ದ ಶಿಖಾರ ಹೀಗೆ ಹೌಸ್‌ ಬೋಟುಗಳಾಗಿ ಬದಲಾದವು. ಪುಟ್ಟ ದೋಣಿಗಳು ದೊಡ್ಡ ಹೌಸ್‌ ಬೋಟುಗಳಾಗಿ ಹಲವರ ಮನೆಗಳಾದವು. ವಿದೇಶೀಯರು ಇವುಗಳನ್ನು ಖರೀದಿ ಮಾಡುವ ಸಂಪ್ರದಾಯ ಹೆಚ್ಚಿತು. ಪ್ರವಾಸೋದ್ಯಮ ರೆಕ್ಕೆ ಬಿಚ್ಚಿತು.

ಅದು ೧೮೮೫ರ ಆಸುಪಾಸು. ಕಾಶ್ಮೀರದ ನೆಲದ ಈ ಕಾನೂನಿನ ಹೊರತಾಗಿಯೂ ರೆ. ಜಾನ್‌ ಸ್ಮಿತ್‌ ಎಂಬವರು ಕಾಶ್ಮೀರದಲ್ಲಿ ಮಿಷನರಿ ಶಾಲೆಯೊಂದನ್ನು ತೆರೆಯುವುದರಲ್ಲಿ ಯಶಸ್ವಿಯಾಗಿದ್ದರು. ಈ ಶಾಲೆಯಲ್ಲಿ ಆಂಗ್ಲ ಭಾಷೆ ಕಲಿತವರಲ್ಲಿ ಪಂಡಿತ್‌ ನರೇನ್‌ದಾಸ್‌ ಮತ್ತು ಸಂಬಂಧಿ ಪಂಡಿತ್‌ ಆನಂದ್‌ ಕೌಲ್‌ ಮೊದಲಿಗರು. ಮುಂದೆ ಆನಂದ್‌ ಕೌಲ್‌ ಇದೇ ಶಾಲೆ ಮುಖ್ಯೋಪಾಧ್ಯಾಯರೂ ಆದರು. ಇದೇ ಆನಂದ್‌ ಕೌಲ್‌ ಅವರ ಬಳಿ ಬಂದು ೧೮೯೮ರಲ್ಲಿ ಸ್ವಾಮಿ ವಿವೇಕಾನಂದರು ತಮ್ಮ ಆಶ್ರಮದ ಕನಸನ್ನು ಹೇಳಿಕೊಂಡಿದ್ದರು. ಅವರಿಗೆ ಆಶ್ರಮ ಮಾಡಲು ಕಾಶ್ಮೀರದ ನೆಲದಲ್ಲೊಂದು ಪುಟ್ಟ ಜಾಗ ಬೇಕಿತ್ತು. ಆದರೆ, ಅವರ ಕನಸೂ ನನಸಾಗಿರಲಿಲ್ಲ. ವಿವೇಕಾನಂದರಿಗೆ ರಾತ್ರಿ ಉಳಿದುಕೊಳ್ಳುವ ವ್ಯವಸ್ಥೆಯನ್ನು ಹೌಸ್‌ ಬೋಟಿನಲ್ಲಿ ಮಾಡಲಾಗಿತ್ತು ಎಂಬ ವಿವರಣೆಗಳೂ ಸಿಗುತ್ತವೆ. ಹಾಗಾಗಿ ಆಗಿನಿಂದಲೇ ಹೌಸ್‌ ಬೋಟ್‌ ಸಂಸ್ಕೃತಿ ಬಹಳ ಪ್ರಸಿದ್ಧವಾಗಿತ್ತು ಎಂಬುದನ್ನು ನಾವು ಊಹಿಸಬಹುದು.

ಈ ನರೇನ್‌ದಾಸ್‌ರಿಗೊಂದು ಅಂಗಡಿಯಿತ್ತು. ವ್ಯಾಪಾರ ವಹಿವಾಟು ಚೆನ್ನಾಗಿಯೇ ನಡೆಯುತ್ತಿತ್ತು. ಇಂಥ ಒಂದು ಸಂದರ್ಭ ಅವರ ಅಂಗಡಿಗೆ ಬೆಂಕಿ ಬಿತ್ತು. ಭಾಗಶಃ ಉರಿದುಹೋಗಿದ್ದ ಅಂಗಡಿಯನ್ನು ಮತ್ತೆ ಮೊದಲಿನ ಸ್ಥಿತಿಗೆ ತರುವುದು ಅಷ್ಟು ಸುಲಭವಾಗಿರಲಿಲ್ಲ. ಇಂಥ ಸಂದರ್ಭ ಅಳಿದುಳಿದ ಸಾಮಾನುಗಳೊಂದಿಗೆ ನರೇನ್‌ದಾಸ್‌ ಸ್ಥಳೀಯ ದೋಣಿ ಮಾಡುವುದೇ ಕಸುಬಾಗಿರುವ ಹಂಜಿ ಸಮುದಾಯದ ನೆರವಿನೊಂದಿಗೆ ಡಲ್‌ ಸರೋವರದಲ್ಲೇ ಬೋಟೊಂದರಲ್ಲಿ ವ್ಯಾಪಾರ ಶುರುಮಾಡಿದರು. ಹೀಗೆ ಶುರುವಾದ ತೇಲುವ ಅಂಗಡಿಗೆ ನಿಧಾನವಾಗಿ ಮರದ ಗೋಡೆ, ಮೇಲೆ ಸೂರೂ ಬಂತು. ಇದೇ ಮೊದಲ ಹೌಸ್‌ ಬೋಟ್‌ ಆಗಿ ಪರಿವರ್ತನೆಯಾಯಿತು ಎಂಬುದು ಕಥೆ. ಆದರೆ, ಈ ಕಥೆಯನ್ನು ತಳ್ಳಿಹಾಕುವ ಮಂದಿಯೂ ಇದ್ದಾರೆ. ನರೇನ್‌ ದಾಸ್‌ ಹೌಸ್‌ ಬೋಟ್‌ ಜನಕರೇ ಅಲ್ಲ. ಅದಕ್ಕೂ ಮೊದಲೇ ಹೌಸ್‌ ಬೋಟುಗಳಿದ್ದವು ಎಂಬ ವಾದವೂ ಇದೆ.

ಇರಲಿ. ಅಂದಹಾಗೆ, ನರೇನ್‌ ದಾಸ್‌ ಆಗ ಮಾಡಿದ್ದ ಹೌಸ್‌ ಬೋಟನ್ನು ಲಾಭಕ್ಕೆ ಮಾರಿ ಬಿಟ್ಟಿದ್ದರು. ನಿಧಾನವಾಗಿ ಈ ಹೌಸ್‌ ಬೋಟ್‌ ನಿರ್ಮಾಣವೇ ಒಂದು ಬ್ಯುಸಿನೆಸ್‌ ಎಂದು ಅರಿವಾದ ನರೇನ್‌, ಆ ಕೆಲಸಕ್ಕೆ ಕೈ ಹಾಕಿದರು. ಹೀಗಾಗಿ ಸ್ಥಳೀಯರು ಇವರನ್ನು ʻನಾವ್‌ ನಾರಾಯಣ್‌ʼ ಎಂದೇ ಕರೆಯತೊಡಗಿದರು. ಹೀಗೆ ತಯಾರು ಮಾಡಿದ ಮೊದಲ ಹೌಸ್‌ ಬೋಟ್‌ ಹೆಸರು ಕಶ್ಮೀರಿ ಪ್ರಿನ್ಸೆಸ್!‌ ಇದಾಗಿ ಹತ್ತೇ ವರ್ಷದಲ್ಲಿ ಹೌಸ್‌ ಬೋಟುಗಳ ಸಂಖ್ಯೆ ನೂರಕ್ಕೇರಿತ್ತು. ಭಾರತಕ್ಕೆ ಸ್ವತಂತ್ರವಾಗುವಷ್ಟರಲ್ಲಿ ಈ ಹೌಸ್‌ ಬೋಟುಗಳ ಸಂಖ್ಯೆ ೩೦೦ಕ್ಕೇರಿತ್ತು. ಪ್ರವಾಸೋದ್ಯಮ ಕಾಶ್ಮೀರದ ಕೈಹಿಡಿದಿತ್ತು. ಈಗ ಇವುಗಳ ಸಂಖ್ಯೆ ಸಾವಿರ ದಾಟಿದೆ. ಈಗಲೂ ಯಾವ ಪಂಚತಾರಾ ಹೋಟೇಲುಗಳಿಗೆ ಕಡಿಮೆಯಿರದ, ಐದು ಜನರೇಷನ್‌ ಇತಿಹಾಸವಿರುವ ಹೌಸ್‌ ಬೋಟುಗಳೂ ಇಲ್ಲಿವೆ. ಮರದ ಕುಸುರಿ ಕೆತ್ತನೆಯಿರುವ ಈ ತೇಲುವ ಪ್ರತಿಯೊಂದು ಮನೆಯೂ ಅರಮನೆಯೇ!

ಆದರೀ ಅರಮನೆ ನಿಂತಿರುವುದು ಮಾತ್ರ ಕೊಚ್ಚೆ ನೀರಿನಲ್ಲಾ ಎಂದು ಸಂದೇಹ ಬರುವ ಹಾಗೆ ಡಲ್‌ ಸರೋವರ ಮಲಿನಯುಕ್ತವಾಗಿ ಕಾಣುತ್ತಿತ್ತು. ಸಾವಿರಕ್ಕೂ ಹೆಚ್ಚು ಹೌಸ್‌ ಬೋಟುಗಳ ದಿನನಿತ್ಯದ ಶೌಚದ ನೀರೆಲ್ಲ ಎಲ್ಲಿ ಹೋಗುತ್ತದೆ ಎಂದು ಯೋಚಿಸುತ್ತಿರುವಾಗ ಸರಿಯಾಗಿ ಆದಿಲ್‌ ಬಂದ. ಸರೋವರದ ಅಡಿಯಲ್ಲಿ ಚರಂಡಿ ವ್ಯವಸ್ಥೆಯಿದೆ. ಎಲ್ಲವೂ ಹೊರಗಡೆ ಹೋಗುವ ವ್ಯವಸ್ಥೆ ಮಾಡಲಾಗಿದೆ. ಅಷ್ಟೇ ಅಲ್ಲ, ಸರ್ಕಾರ ಆಗಾಗ ಡಲ್‌ ಸರೋವರವನ್ನು ಸ್ವಚ್ಛಗೊಳಿಸುವ ಕಾರ್ಯ ಮಾಡುತ್ತಿರುತ್ತದೆ. ಮೊನ್ನೆ ಮೊನ್ನೆ ಕೆಲವು ತಿಂಗಳ ಹಿಂದೆ ಈ ಕಾರ್ಯ ನಡೆಯಿತು ಎಂದ. ಕೇವಲ ಚರಂಡಿಯಷ್ಟೇ ಅಲ್ಲ. ಈಗ ಹೈ ಸ್ಪೀಡ್‌ ಇಂಟರ್ನೆಟ್‌ ಕೂಡಾ ಇದೇ ನೀರಿನಡಿಯಿಂದಲೇ ಬರುತ್ತದೆ ನೋಡಿ. ಇಂಟರ್ನೆಟ್‌ ಇಲ್ಲದಿದ್ದರೆ ಪ್ರವಾಸಿಗರು ಯಾಕೆ ಬರುತ್ತಾರೆ ಹೇಳಿ. ಇದೆಲ್ಲ ನಮ್ಮ ಬಹು ಮುಖ್ಯ ಅವಶ್ಯಕತೆಗಳು ಎಂದ ನಗುತ್ತಾ.

***

ಮೂರು ವರ್ಷದ ಹಿಂದಿನ ಅದೊಂದು ಮಾತಿನ ಕ್ಷಣ ಯಾಕೋ ಮೊನ್ನೆಯೂ ಮತ್ತೆ ನೆನಪಾಯಿತು. ಹೆಪ್ಪುಗಟ್ಟುವಂಥ ಡಿಸೆಂಬರ್‌ ಚಳಿಯಲ್ಲಿ ಡಲ್‌ ಸರೋವರದ ಆ ತೇಲುವ ಮನೆಯಲ್ಲಿ ಚಳಿ ಕಾಯಿಸುತ್ತಾ ಮಧ್ಯರಾತ್ರಿಯವರೆಗೆ ಕೂತು, ಮಕಬೂಲ್‌ ಭಾಯಿ ಹೇಳಿದ ಹಲವು ಕಥೆಗಳನ್ನು ಕೇಳಿದ್ದೆವು. ʻತೊಂಭತ್ತರ ಅದೊಂದು ಘಟನೆ ಕಾಶ್ಮೀರದ ಪಾಲಿನ ಕರಾಳ ಅಧ್ಯಾಯವಾಯಿತು ನೋಡಿ. ಪ್ರವಾಸೋದ್ಯಮದಲ್ಲಿ ಉತ್ತುಂಗದಲ್ಲಿದ್ದ ಕಾಶ್ಮೀರವೆಂದರೆ ಜನ ಭಯ ಪಡುವಂತಾಯಿತು. ನಮ್ಮ ಅನ್ನಕ್ಕೆ ಕಲ್ಲು ಬಿತ್ತು. ಕಾಶ್ಮೀರದಷ್ಟು ಸೌಂದರ್ಯವಿರುವ ಜಾಗ ಭಾರತದೆಲ್ಲಾದರೂ ಇದೆಯಾ ಹೇಳಿ! ಸ್ವರ್ಗ ಇದು. ಆದರೆ, ಜನರಿಗೆ ಇನ್ನೂ ಭಯ ಹೋಗಿಯೇ ಇಲ್ಲ. ವಿದೇಶಿಯರ ಸಂಖ್ಯೆಯೂ ಕಡಿಮೆಯಾಗಿದೆ. ಮೊದಲೆಲ್ಲ ಬಾಲಿವುಡ್‌ ಹಾಡೆಂದರೆ ಕಾಶ್ಮೀರ. ಈಗ ಸಿನೆಮಾದವರೂ ಬೇರೆ ಊರು ಹುಡುಕಿಕೊಂಡು ಹೋಗುತ್ತಾರೆ. ಜನರೂ, ಕಾಶ್ಮೀರ ಮರೆತು ಹಿಮಾಚಲ ಪ್ರದೇಶ, ಉತ್ತರಾಖಂಡಗಳಲ್ಲಿ ಸುಖ ಕಾಣತೊಡಗಿದ್ದಾರೆ. ಹನಿಮೂನ್‌ಗೂ ಕಡಿಮೆʼ ಎಂದರು. ಅವರ ದನಿಯಲ್ಲಿ ಬೇಸರವಿತ್ತು.

ʻಭಯ ಹಾಗೂ ಸಂತೋಷ ಒಂದೇ ದೋಣಿಯಲ್ಲಿ ಪಯಣಿಸಲಾಗದು ಅಲ್ವಾʼ ಎಂದೆ. ದಿನನಿತ್ಯ ಬರುವ ಸುದ್ದಿಗಳು ಓದಿ, ಕೇಳಿ ಜನ ಇಲ್ಲಿಗೆ ಮೊದಲಿನಂತೆ ಬರುತ್ತಾರೆ ಅನಿಸುತ್ತಾ ನಿಮಗೆ?ʼ ಅಂದೆ. ʻನಮ್ಮ ತಪ್ಪು ಏನಿದೆ ಹೇಳಿ?ʼ ಅಂತ ಅವರು ಮರುಪ್ರಶ್ನೆ ಹಾಕಿದರು.  ʻಎಲ್ಲರೂ ನಮ್ಮನ್ನೇ ದೂರುತ್ತಾರೆ, ಆದರೆ, ನೋಡಿ ಇದೆಲ್ಲ ರಾಜಕೀಯ, ಮಾಧ್ಯಮಗಳೇ ಮಾಡಿದ್ದು. ಎಲ್ಲೋ ನಾಲ್ಕು ಜಾಗದಲ್ಲಿ ನಡೆದಿದ್ದನ್ನು ಕಾಶ್ಮೀರವೇ ಹಾಗಿದೆ ಎಂದರೆ ಹೇಗೆ?ʼ ಎಂದರು. ನಾನು ಸುಮ್ಮನಾದೆ. ʻನೀವು ಇವತ್ತು ಲಾಲ್‌ ಚೌಕಿಗೆ ಹೋಗಿದ್ದಿರಲ್ಲಾ? ಅಲ್ಲಿ ಏನಾದರೂ ತೊಂದರೆ ಆಯ್ತಾ ಹೇಳಿ? ಪ್ರವಾಸಿಗರೆಂದರೆ ನಮಗೆ ದೇವರ ಹಾಗೆ. ಅನ್ನ ಕೊಡುವವರು. ಅವರಿಗೆ ತೊಂದರೆಯನ್ನು ಇಲ್ಯಾರೂ ಮಾಡಲ್ಲʼ ಎಂದುಬಿಟ್ಟರು. ʻಎಲ್ಲಿಯೂ ನಮಗೇನೂ ತೊಂದರೆಯಾಗಿಲ್ಲ, ನಿಜವೇ. ಬಹಳ ಪ್ರೀತಿಯಿಂದಲೇ ನೋಡಿಕೊಂಡಿದ್ದೀರಿ ಎಂಬುದನ್ನು ಒಪ್ಪುತ್ತೇನೆʼ ಪ್ರಾಮಾಣಿಕವಾಗಿಯೇ ಉತ್ತರ ಕೊಟ್ಟೆ. ಆದರೆ… ಆತನ ಮಾತಿನ ಮಧ್ಯೆ ಆಗಾಗ ನುಸುಳಿದ್ದ ʻಆಪ್‌ಕಾ ಹಿಂದೂಸ್ತಾನ್‌ʼ ಮಾತ್ರ ಗಾಢವಾಗಿ ತಟ್ಟಿಬಿಟ್ಟಿತ್ತು!

‍ಲೇಖಕರು Avadhi

November 22, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: