ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಲೆಯೊಳಗೆ ಸಿಲುಕಿದವಳು

ವಿಷ್ಣು ಭಟ್ಟ, ಹೊಸ್ಮನೆ

 

ಹೆಣ್ಣೆಂಬ ಮಹಾತಪಸ್ವಿ

 

ಗಂಗೆ ಬತ್ತಿದರೂ ಬತ್ತುವುದಿಲ್ಲ

ಅವಳ ಕಣ್ಣೀರು

ಇಂದಿಗೂ, ಎಂದಿಗೂ

 

ಕಣ್ಣೊಳಗಿನ ಹಂಬಲ

ಅಂತರಂಗದ ತಲ್ಲಣ

ಎಂದಿಗೂ ಎದೆಗೂಡಿಂದ

ಹೊರಬರದ ಹಕ್ಕಿಯಾಗಿ ಕುಕ್ಕುವಾಗ

ಕಪೋಲಾಭಿಷೇಕ

 

ತವರೆಂಬ ಮೂಲವೂ ಅವಳದ್ದಲ್ಲ,

ಅವನರಮನೆ ಅವಳದ್ದೆನ್ನಲು ಅದೂ ಸ್ವಂತದ್ದಲ್ಲ

ಅಲ್ಲಿಗಿನ್ನು ಸಲ್ಲದ, ಇಲ್ಲಿ ತನ್ನದಲ್ಲದ

ಬದುಕು; ಬದುಕೆಂದರೆ ಬದುಕಲ್ಲ

ತಪಸ್ಸು; ಮಹಾತಪಸ್ಸು

 

ಸ್ವಾತಂತ್ರ್ಯದ ಗುಂಗಿನಲ್ಲಿ

ಹೊಂಗನಸಿನ ರಂಗಿನಲ್ಲಿ

ಬಣ್ಣಗಳು ತುಂಬಿರದ ಕಾಮನಬಿಲ್ಲು

ಬಿಸಿಲಮಳೆಗೆ ನೆನೆದು ನಲಿವ ಮನಸಾಗೆ

ಹೊರ ಅಡಿಯಿಡಲು ಬಿಡದ

ಒಲೆಯ ಮೇಲಿಟ್ಟ ಹಾಲು; ಹಾಲಾಹಲವೇ?

ಅಬಲೆಯಲ್ಲ ಅವಳು ಬಲೆಯೊಳಗೆ ಸಿಲುಕಿದವಳು

 

ಉಭಯ ಕುಲ ದೀಪ; ಪ್ರದೀಪ ಅವಳು

ಬೆಳಗುವುದಲ್ಲ ಸ್ವತಃ ಉರಿಯುವುದು

ಅಗ್ನಿಯಾಗಿ; ಅಗ್ನಿಗಾಗಿ

ಆಹುತಿಯ ಹಸಿ ಸಮಿಧೆ

ಎದ್ದು ಹೊರಟು ಬಿಡುವ ಹಟ,

ಭಂಡ ಧೈರ್ಯ ಎದೆಗವಚುತ್ತಲೇ

ತೊಟ್ಟಿಲಲ್ಲಿ ಅಳುವ ಕಂದನ ಬಂಧ

ಕಣ್ಣೀರು; ಕಣ್ಣಹನಿ

ತಾಪ-ಪರಿತಾಪ, ಮೌನ

ಮತ್ತೆ ತಪಸ್ವಿ; ಮಹಾತಪಸ್ವಿ.

‍ಲೇಖಕರು avadhi

23 September, 2019

1 Comment

  1. T S SHRAVANA KUMARI

    ಚೆನ್ನಾಗಿದೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading