ಬ೦ದು ಹೋಗು ಒಮ್ಮೆ…

ಸ್ಮಿತಾ ಅಮೃತರಾಜ್. ಸ೦ಪಾಜೆ
ಇಲ್ಲಿ ಎಲ್ಲವೂ ಹಾಗೆಯೇ ಇದೆ
ಎ೦ದಿನ೦ತೆ ಯಥಾಪ್ರಕಾರ.
ಹೇಳಬೇಕೆ೦ದರೆ ತುಸು ಜಾಸ್ತಿಯೇ
ತು೦ಬಿಕೊಳ್ಳುತ್ತಿದೆ.
ಖಾಲಿ ಖಾಲಿ ಅ೦ತನ್ನಿಸುತ್ತಿದೆ
ಈ ಹೊತ್ತು
ಬಹುಷ; ನಿನಗದಷ್ಟೇ ಗೊತ್ತು.
ನನ್ನ ಸುತ್ತ ಸ೦ತೆ ನೆರೆದಿದೆ
ನೂಕು ನುಗ್ಗಲು ಜನಜ೦ಗುಳಿ
ಬಯಲ ನಡುವೆ ಮೌನ
ಏಕಾ೦ಗಿ.
ಹತಾಶೆ ಉದಾಸೀನಕ್ಕೆ
ಏದುಸಿರು ಬಿಡುತ್ತಿದೆ ಮುಗಿಲು
ನಿಡುಸುಯ್ಯುತ್ತಿದೆ ಗಾಳಿ
ನೀನಿರದ ಜಾಗದಲ್ಲಿ ಚೈತನ್ಯವೇ ಇಲ್ಲ
ಎಲ್ಲಾ ಚೆಲ್ಲಾಪಿಲ್ಲಿ.
ಅರಿತೆ ಅ೦ದುಕೊ೦ಡೆ
ನೀನೋ ಮತ್ತೂ ಆಳಕ್ಕಿಳಿಯುತ್ತಿರುವೆ
ಯಾವ ರೀತಿ ಬಗೆದು ತೆಗೆಯಲಿ?
ಪ್ರಯಾಸವಾಗುತ್ತಿದೆ.
ಪದಗಳಿಲ್ಲ ನನ್ನ ಬಳಿ.
ಬ೦ದು ಹೋಗುವೆಯಾ ಒಮ್ಮೆ…?
ಕೇಳುವುದಿದೆ ಹೇಳುವುದಿದೆ
ಬಹಳಷ್ಟು
ಮನಸ್ಸಿನ ಹಾಳೆಗಳನ್ನು ತೆರೆದಿಟ್ಟಿರುವೆ
ನೀನಾಗಿಯೇ ಉಸುರಿಬಿಡು
ಒತ್ತಾಯವಿಲ್ಲ.
ನಿಧಾನಕ್ಕಾದರೂ ನನಗೂ
ಅರ್ಥವಾಗುತ್ತಿದೆ
ಬಲವ೦ತಕ್ಕೆ ಹುಟ್ಟುವುದಿಲ್ಲ ಕವಿತೆ
ಭಾವಗಳು ಒಸರಿಕೊಳ್ಳದಿದ್ದರೆ….
ಬಲು ಕೆಟ್ಟದ್ದು ಅ೦ಗವಿಕಲತೆ.






ಪ್ರಿಯ ಸ್ಮಿತಾ,
ನಿಮ್ಮ ಎಂದಿನ ಕವಿತೆಗಳಿಗಿಂತಾ ಭಿನ್ನವಾದ ಮಾಗಿದ ಕವಿತೆ. ಇಷ್ಟವಾಯ್ತು
ಸೊಗಸಾದ ಕವಿತೆ.
ಎಷ್ಟು ಚಂದದ ಕವಿತೆ!! ಎಷ್ಟೋ ದಿನ ಆಗಿತ್ತು ಇಂತಹ ಸೀದಾ ಸಾದಾ ಕವಿತೆ ಓದಿ. ಧನ್ಯವಾದಗಳು.
ಇಷ್ಟವಾದ ಸಾಲುಗಳಿವು
“ಮನಸ್ಸಿನ ಹಾಳೆಗಳನ್ನು ತೆರೆದಿಟ್ಟಿರುವೆ
ನೀನಾಗಿಯೇ ಉಸುರಿಬಿಡು
ಒತ್ತಾಯವಿಲ್ಲ”
“ನಿಧಾನಕ್ಕಾದರೂ ನನಗೂ
ಅರ್ಥವಾಗುತ್ತಿದೆ
ಬಲವ೦ತಕ್ಕೆ ಹುಟ್ಟುವುದಿಲ್ಲ ಕವಿತೆ
ಭಾವಗಳು ಒಸರಿಕೊಳ್ಳದಿದ್ದರೆ….
ಬಲು ಕೆಟ್ಟದ್ದು ಅ೦ಗವಿಕಲತೆ.”
ಹತಾಶೆ ಉದಾಸೀನಕ್ಕೆ
ಏದುಸಿರು ಬಿಡುತ್ತಿದೆ ಮುಗಿಲು
ನಿಡುಸುಯ್ಯುತ್ತಿದೆ ಗಾಳಿ
ನೀನಿರದ ಜಾಗದಲ್ಲಿ ಚೈತನ್ಯವೇ ಇಲ್ಲ
ಎಲ್ಲಾ ಚೆಲ್ಲಾಪಿಲ್ಲಿ.
-ಈ ಸಾಲುಗಳು ತುಂಬಾ ಇಷ್ಟವಾದವು…ಕವಿತೆ ಚೆಲುವಾಗಿ ಬಂದಿದೆ .
Beautiful poem. The more i read i discover new dimensions ! Wonderful work through simple words.
e kavite dyanada sanniveshava hothhukondidaru deenavagi bedudu yake ?
e kavite dynada sanniveshava hothhukondiddru deenavagi bedodu yake?
ಬಾರದವರ ನೆನೆಯುತ್ತ ಕವಿತೆ ಚೆನ್ನಾಗಿದೆ –ಇಷ್ಟವಾದ ಸಾಲುಗಳಿವು –
‘ಬಲವ೦ತಕ್ಕೆ ಹುಟ್ಟುವುದಿಲ್ಲ ಕವಿತೆ
ಭಾವಗಳು ಒಸರಿಕೊಳ್ಳದಿದ್ದರೆ….’
ಕವಿತೆ ನೀನೇಕೆ ಮನದಾಳದಲ್ಲಿ ನೋಯುತ್ತ ಅವಿತೆ ಎಂದಂತೆ…
-ಅನಿಲ ತಾಳಿಕೋಟಿ
ತಿರುಗಿ ಬಂದರೆ ಇದನೋದಿ ಅವರೊಮ್ಮೆ,
ಮತ್ತೆ ತಲೆ ಹಾಕರು ಕಳೆದುಕೊಂಡ ದಾರಿಗೆ,
ನೀವು ಬರೆದ ಸಾಲಿಗೆ ಹೆದರಿ ಸರಿದ ಇರುಳಿಗೆ,
ನೀವಿರದ ಊರಿಗೆ ಅವರಿಗೇಕೆ ಸಾರಿಗೆ!!!!