'ಬರ ಆಹೆ ನಾ?' 'ತಬ್ಯತ್ ಠೀಕ್ ಅದಲ್ಲಾ?'

ನೀರಸ ಬದುಕಿಗೆ ಸಂಜೀವಿನಿಯನ್ನೆರೆಯುವವರು..

girija shastri

ಗಿರಿಜಾ ಶಾಸ್ತ್ರಿ

ಆಕಿ ಹೆಸ್ರು ನೀಲವ್ವ ನಂತೆ ಸೇಂದಿ ಜ್ಯೂಸ್ ಮಾರ್ತಾಳ. ಮುಂಬಯಿಯಲ್ಲಿ ಅದಕ್ಕೆ ನೀರಾ ಅಂತ ಹೆಸ್ರು. ಬೇಸಿಗೆ ಬಂತೆಂದರೆ ಅದಕ್ಕೆ ಬಹಳ ಡಿಮ್ಯಾಂಡು. ಅವಳ ಪಕ್ಕದಲ್ಲೇ ಒಬ್ಬಳು ಹಣ್ಣು ಮಾರುವ ಅಜ್ಜಿ ಕೂತ್ಕೋತಾಳೆ. ತಾಜಹಣ್ಣುಗಳು ತೂಕದಲ್ಲಿ ಮೋಸ ಮಾಡುವುದಿಲ್ಲ. ಅವಳ ವ್ಯಾಪಾರವನ್ನು ಕೆಲವು ಸಲ ನಾನೇ ಬೋಣಿ ಮಾಡುವುದು. ನನಗೆ ಗೆಳತಿಯಾಗಿಬಿಟ್ಟಿದ್ದಾಳೆ.
peopleಇಂದು ಅವಳು ಕೂರುವ ಜಾಗ ಖಾಲಿ ಆಗಿದ್ದು ನೋಡಿ ಮನಸ್ಸಿಗೆ ಯಾಕೋ ಮುಳ್ಳುಚುಚ್ಚಿದಂತಾಗಿ, ಪಕ್ಕದಲ್ಲಿರುವ ನೀರಾ ಕೇಂದ್ರದ ಹೆಣ್ಣು ನೀಲವ್ವನನ್ನು ಹಿಂದಿಯಲ್ಲಿ ವಿಚಾರಿಸಿದೆ. ಆಗ…..
ನೀವು ಕನ್ನಡದವರೇನ್ರೀ…. (ನನ್ನ ಮತ್ತು ಅವಳ ಕಣ್ಣುಗಳಲ್ಲಿ ಮಿಂಚು)
ಯಾ ಊರು ನಿಮ್ದು…?
ನಮ್ಮದು ರಾಯಚೂರು.
ಏಸು ಮಕ್ಕಳು ?
ಮಗಳ ಬಾಣಂತನಕ್ಕೆ ಬಂದಿದ್ದೆ. ಕೂಸಿನ್ನು ಚಿಕ್ಕದು.. ಅದಕ್ಕೇ ಅಳ್ಯಾನ ದಂಧಾ ನೋಡ್ಕೋತೀನ್ರಿ. ನಾವು ಈಡಿಗ ಮಂದೀರಿ.. ನೀವು? ಇಗೋರೀ ಸ್ವಲ್ಪ ನೀರಾ ಕುಡ್ದ ಹೋಗ್ರೀ..
‘ಬ್ಯಾಡ ನೀಲವ್ವ ನಾನು ಅದೆಲ್ಲಾ ಕುಡ್ಯೋದಿಲ್ಲ. ಬರ್ತೀನಿ. ಹಣ್ಣಿನ ಅಜ್ಜಿ ಬಂದ್ರೆ ಹೇಳ್ಬಿಡು ನಾನ್ ಬಂದಿದ್ದೆನೆಂತಾ….’
ಒಮ್ಮೊಮ್ಮೆ ಬದುಕು ಸಾಕು ಎನ್ನಿಸುವ ಕ್ಷಣಗಳು ಎದುರಾಗುತ್ತವೆ. ಅಂತಹ ಕ್ಷಣಗಳಲ್ಲಿ ಹೊರಗೆ ಹೊರಟಾಗ ಮನೆಕೆಲ್ಸದವರು. ಕಸ ಎತ್ತುವವರು, ವಾಚ್ ಮನ್ ಗಳು, ಹಾಲಿನ ಭೈಯ್ಯಾಗಳು, ಗಾರೆ ಕೆಲಸದವ್ರು, ತರಕಾರಿ ಮಾರುವವರು ಯಾರಾದರೂ ಎದುರಾಗುತ್ತಾರೆ. ದೂರದಿಂದಲೇ ಕೈಬೀಸಿ ಕೈಸೇ ಹೋ ಆಂಟಿ ಎಂತಲೋ, ಬಹುತ್ ದಿನ್ಕೆ ಬಾದ್ ಆಯೀ ಹೈಂ ಎಂತಲೋ, ಇಲ್ಲ ಹತ್ತಿರ ಬಂದು ಎರಡೂ ಕೈಗಳನ್ನು ಗಟ್ಟಿಯಾಗಿ ಹಿಡಿದುಕೊಂಡು ಮರಾಠಿಯಲ್ಲಿ “ಬರ ಆಹೆ ನಾ?” (ಚೆನ್ನಾಗಿದಿಯಲ್ವಾ), ಎಂದೋ ಮನೆಕೆಲಸ ಮಾಡಿ ಬಿಟ್ಟಿದ್ದ ಪಾರವ್ವರು ಎದುರಾಗಿ ‘ಯಾಕ್ರೀ ಯವ್ವಾ ಭಾಳ್ ಸೊರ್ಗೀರೀ. ತಬ್ಯತ್ ಠೀಕ್ ಅದಲ್ಲಾ?’ ಎಂದು ನಮ್ಮೊಳಗೆ ಬೆಚ್ಚಗೆ ನುಸುಳಿ ಆತ್ಮೀಯವಾಗಿ ನಮ್ಮನ್ನು ತಟ್ಟಿ ಮಾಯವಾಗಿಬಿಡುತ್ತಾರೆ.
..ಆಗ ಬದುಕು ಮತ್ತೆ ಗರಿಕೆದರಿಕೊಂಡು ನಿಲ್ಲುತ್ತದೆ. ನರ್ತಿಸುತ್ತದೆ. ಬದುಕೆಂದರೆ ಹುಟ್ಟು ಸಾವುಗಳ ನಡುವಿನ ಯಾತ್ರೆಯೆಂದು ಬಹಳ ಸುಲಭವಾಗಿ ವೇದಾಂತ ಹೇಳಿಬಿಡಬಹುದು. ಆದರೆ ಬದುಕೆಂದರೆ ೨೪*೭.
ಅದರ ಅದರ ಪ್ರತಿಯೊಂದು ಕ್ಷಣವನ್ನು ದೈನಂದಿನ ಯಾಂತ್ರಿಕತೆಯಿಂದ ಬಿಡಿಸಿಕೊಳ್ಳಬೇಕೆಂದರೆೆ ಮೇಲಿನ ಸಾಮನ್ಯ ಮಂದಿಯ ದೇಣಿಗೆಗಳೆಷ್ಟುು? ಅವರಿಲ್ಲದೆ ನಮ್ಮ ಬದುಕು ಹಸನಾಗಲು ಹೇಗೆ ಸಾಧ್ಯ? ಯಾರೋ ಏನೋ ಇಂತಹ ಆಗಂತುಕರಿಂದ ನಮ್ಮ ಬದುಕಿನ ಖಿನ್ನತೆಯೆಲ್ಲಾ ಮಾಯವಾಗಿಬಿಡುತ್ತವೆ.
ನಮ್ಮ ಬದುಕನ್ನು ಕಟ್ಟುತ್ತಿರುವ .. ಅದು ಮುರುಟಿ ಹೋಗದಂತೆ ನೀರೆರೆಯುತ್ತಿರುವ ಈ ಅಮಾಯಕರಿಗೆ ಸಾವಿರ ನಮನಗಳು.

‍ಲೇಖಕರು Avadhi

March 26, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. ಚಂದ್ರಪ್ರಭಾ ಬಿ.

    ಹೌದು, ಬದುಕು ಕಟ್ಟುವ ಇವರಿಗೆ ಸಾವಿರ ಸಾವಿರ ನಮನಗಳು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: