ಕುಬ್ಜನಾಗಿಬಿಟ್ಟೆ.!
-ಕೆ ಮಹಾಂತೇಶ್
ಮೈ ತುಂಬಾ ಬಾಸುಂಡೇ
ಮೂಡುವಂತೆ ಬಾರಿಕೋಲಿನಿಂದ
ಹೊಡೆಸಿಕೊಂಡ ದೇಹಕ್ಕೆ
ನೀ ನನ್ನತ್ತ ಎಸೆದ ಶೂ
ಏನೇನು ಅಲ್ಲ ಬಿಡು ಮಾರಾಯ.!
ಅದರಿಂದೇನೂ ನನ್ನ ಮೈ ಮನವೇನೂ
ಮೈಲಿಗೆಯಾಗಲಿಲ್ಲ ನನ್ನ ಕೆಲಸವೇನೂ
ಅರ್ಧಕ್ಕೆ ನಿಂತು ಬಿಡಲಿಲ್ಲ.
ಸಾವಿರಾರು ವರ್ಷಗಳಿಂದ ಅಕ್ಷರದಿಂದ
ವಂಚಿಸಿದ ನಿಮ್ಮಯ ವಂಚನೆಯ ಮುಂದೆ
ನೀ ನನ್ನತ್ತ ಎಸೆದ ಶೂ
ಏನೇನೂ ಅಲ್ಲ ಬಿಡು ಮಾರಾಯ.!
ಅದರಿಂದೇನೂ ನನ್ನ ಅರಿವಿನ
ಹಣತೆಯು ಬತ್ತಲಿಲ್ಲ
ನನ್ನಂತವನು ನ್ಯಾಯಧೀಶನಾಗುವುದ
ತಡೆಯಲು ಸಾಧ್ಯವಿಲ್ಲ
ಅನಾದಿ ಕಾಲದಿಂದ ನಿಮ್ಮಯ ಹೇಸಿಗೆ
ಉಚ್ಚೆ ಬಳಿದ ಈ ದೇಹ ಮನಸ್ಸಿಗೆ
ನೀ ನನ್ನತ್ತ ಎಸೆದ ಶೂ
ಏನೇನೂ ಅಲ್ಲ ಬಿಡು ಮಾರಾಯ.!
ಅದರಿಂದೇನೂ ನನ್ನ ಕೈಗಳು
ಪೆನ್ನು ಹಿಡಿಯುವುದ ಬಿಡುವುದಿಲ್ಲ
ನಾನೇನು ತೀರ್ಪು
ಬರೆಯುವುದಾ ನಿಲ್ಲಿಸುವುದಿಲ್ಲ.
ನೀವು….
ಮನುಸೃತಿಯೇ ಸತ್ಯವೆಂದು ಒಪ್ಪಿಕೊಂಡವರು
ನೀವು ಅಸಮಾನತೆಯ ಹಾಸಿಗೆಯಲ್ಲೇ
ಉರುಳಾಡಿದವರು
ನೀವು ಅಕ್ಷರಗಳನ್ನೇ ಅಂಗೈನಲ್ಲಿ ಬಚ್ಚಿಟ್ಟುಕೊಂಡವರು
ನೀವು ಬ್ರಿಟಿಷರ ಗುಲಾಮರಾಗಿ ಶಿರಬಾಗಿದವರು.
ಆದರೆ….ನಾವು….
ಕಬ್ಬಿಣದಂತಹ ರಟ್ಟೆಯ ನಂಬಿ ಹಸಿದ ಹೊಟ್ಟೆ ತುಂಬಿಸಿಕೊಂಡ ಕಾಯಕ ಜೀವಿಗಳು
ಹೆಬ್ಬೆರಳ ಬಲಿ ಪಡೆದರೂ ಬಿಲ್ವಿಧ್ಯೆ ಕಲಿತ
ಏಕಲವ್ಯನ ವಾರಸುದಾರರು
ನೀವು ಭಿತ್ತಿದ ಅಸಮಾನತೆಯ
ಬೀಜದೊಳಗಿಂದಲೇ ಒಡಮೂಡಿದ ಮೊಳಕೆಗಳು
ಭಾರತದ ಸಂವಿಧಾನದಡಿಯಲ್ಲಿ
ಉಸಿರಾಗಿ ಬೆಳೆದುನಿಂತ ಬೃಹಕಾರದ ವೃಕ್ಷಗಳು
ಆದರೆ
ನನ್ನತ್ತ ಶೂ ಎಸೆಯುವ ಮೂಲಕ
ನೀ ಕುಬ್ಜನಾಗಿಬಿಟ್ಟೆ
ಕುಬ್ಜನಾಗಿಟ್ಟೆಯಲ್ಲ
ಎನ್ನುವ ವ್ಯಥೆಯಷ್ಟೇ ನನ್ನದು..






0 Comments