ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬರಿದೋ ಬರಿದು ಬೀದಿಗಳ ಬದಿಯಲ್ಲಿ..

ಬರಬಹುದೆ ಅವನು

ಜಿ.ಪಿ.ಬಸವರಾಜು

ಹೋದರೆಲ್ಲಿಗೆ ಈ ಮಕ್ಕಳು
ಖಾಲಿ ಭಣಗುಡುತ್ತಿವೆ ಬೀದಿಗಳು
ಮಾತಿಲ್ಲ ಕತೆಯಿಲ್ಲ ಮೌನ
ತುಂಬಿದೆ ಒಳ ಹೊರಗೆ

ಕೊಂಬೆಮೇಲೆ ಕುಳಿತ
ಹಕ್ಕಿಗಳೂ ಹಾಡುತ್ತಿಲ್ಲ
ಸುಡುವ ಸೂರ್ಯ ಉರಿ-
ಯುತ್ತಿದ್ದಾನೆ ಬಿಡುಗಣ್ಣು
ಬಿಟ್ಟು, ನಿದ್ದೆಗಣ್ಣಿನ ನಾಯಿಗಳು
ಕಾಣುತ್ತಿಲ್ಲ ಎಲ್ಲೂ, ಅವು
ಮಲಗುವ ನೆಲಹಾಸು ಖಾಲಿ

ಮುಚ್ಚಿದ ಬಾಗಿಲುಗಳು ಮುಚ್ಚೇ
ಇವೆ, ರಂಗೋಲಿ ಇಲ್ಲದ ಅಂಗಳ
ಮAಕಾಗಿವೆ, ನೀರಿಲ್ಲದೆ ಒಣಗುವ
ಕುಂಡಗಳು ಕರೆಯುತ್ತಿವೆ ಯಾರನ್ನೊ,
ತಕರಾರಿಲ್ಲದೆ ಕಾರುಗಳು ಅಲ್ಲಲ್ಲೇ
ಬೀಡುಬಿಟ್ಟಿವೆ, ಭಯಂಕರ ಸದ್ದಿನ
ಬೈಕುಗಳು ಬೇಕಾಬಿಟ್ಟಿ ಬಿದ್ದುಕೊಂಡಿವೆ

ಉರಿಯುತ್ತಿದೆ ಬೀದಿ ಖಾಲಿ ಖಾಲಿ
ಕರಾಳ ನೆರಳು ಹಾಯುತ್ತಿದೆ ಮನೆ
ಮನೆಗಳ ಮೇಲೆ, ಕರೆಯುತ್ತಿವೆ
ಕಾಣದ ಕಾಗೆಗಳು ಯಾರನೊ, ಎಲ್ಲಿಯೊ,
ಮೇಲೆ ಎತ್ತರದ ಆಗಸದಲ್ಲಿ ಸದ್ದಿಲ್ಲದ
ಹದ್ದುಗಳು ಸಂತೆ ಸೇರಿವೆ, ಬರಬಹುದೇ
ಅವನು ಇದಕೇ ಕಾದಿದ್ದವನು, ನೆರಳಾಗಿ
ಕೊರಳಿಗೆ ಹಗ್ಗ ಬಿಗಿಯುವವನು, ಈಗಲೊ
ಇನ್ನೊಂದು ಗಳಿಗೆಯಲ್ಲೊ, ಕಾಯುತ್ತಿದ್ದಾರೆ
ಎಲ್ಲ, ಬಡಿದುಕೊಳ್ಳುವ ಎದೆಗಳ ಹಿಡಿದು

ಬರಿದೋ ಬರಿದು ಬೀದಿಗಳ ಬದಿಯಲ್ಲಿ
ನಗುತ್ತ ನಿಂತಿರುವ ಮರಗಳಲ್ಲಿ ಅಲೆ ಅಲೆ
ಉಕ್ಕುವ ಹಸಿರಿದೆ, ನಾಳಿನ ಬಾಳ ಹೆಸರಿದೆ

 

‍ಲೇಖಕರು avadhi

5 April, 2020

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading