– ಸತ್ಯಪ್ರಕಾಶ್ ರಾಮಯ್ಯ
ನಿರಾಳವಿರದ ಮನದ ಕಡಲು ಮೋಡವಾದರೆ
ಕರಾಳವಾದ ಒಡಲ ದುಗುಡ ಕರಗಿ ಹೋಗದು
ನಿರೀಕ್ಷೆಯೆಂಬ ಭ್ರಮೆಯ ಕಟ್ಟೆ ಒಡೆದು ಹೋದರೆ
ಸರಾಗವಾಗಿ ಬದುಕ ದೋಣಿ ದಡವ ಸೇರದು
ಕಬಂಧ ಬಾಹು ತಪ್ತವಾಗಿ ಉಸಿರುಗಟ್ಟಲು
ಅರಾಜಕತೆಯ ಶುಷ್ಕ ಭಾವ ಮೇರೆ ಮೀರದೆ?
ವಿಷಣ್ಣವಾದ ಕನಸು ನೊಂದು ಹೆಪ್ಪುಗಟ್ಟಲು
ವಿಶಾಲವಾದ ಹೃದಯ ಕರಗಿ ಮಳೆಯ ಸುರಿಸದೆ?
ಅನೂಹ್ಯವಾದ ಪ್ರೀತಿಯೆಂಬ ಮರಳ ದೋಣಿಯು
ಅಗಾಧ ನದಿಯ ಸುಳಿಗೆ ಸಿಲುಕಿ ಲೀನವಾಗದೆ?
ಕಪಾಟಿನಲ್ಲಿ ಬೆಚ್ಚಗಿರುವ ನೆನಪ ಹಾಳೆಯು
ಅನಂತವಾದ ಸಾರ್ಥಕತೆಯ ಪ್ರೇಮವಾಗದೆ?
ದಿಗಂತದಲ್ಲಿ ಭೇಟಿಯಾಗಿ ಮೂಕನಾಗುವೆ
ವಿರಾಗಿಯಾಗಿ ಕಳೆದು ಹೋದ ಶೋಕವಾಗುವೆ!






0 Comments