ಬದುಕಿನ ಲೇವಾದೇವಿಗೆ ಸತ್ಯದ ರಶೀದಿಯನ್ನು ಅಂಟಿಸಿದವಳು..


ಅದೊಂದು ದಾರುಣವಾದ ರಾತ್ರಿ. ಹನ್ನೊಂದರ ಹರೆಯದ ಮಗಳು ಮಂಡಿಯೂರಿ ಕುಳಿತು ತನ್ನ ತಾಯಿಯನ್ನು ಉಳಿಸಿಕೊಡುವಂತೆ ದೇವರಿಗೆ ಮೊರೆಯಿಡುತ್ತಿದ್ದಳು. ಆದರೆ ಅಮ್ಮ ತೀರಿಕೊಂಡಳು. ಆ ಮಗು ಅಮ್ಮನೊಂದಿಗೆ ದೇವರ ಮೇಲಿನ ತನ್ನ ನಂಬಿಕೆಯನ್ನೂ ಕಳಕೊಂಡಳು.

ಅವಳು ಪ್ರತಿದಿನ ರಾತ್ರಿಯೂ ಮಲಗುವಾಗ ‘ಸೋಹಿಲೆ’ ಕೀರ್ತನೆಯನ್ನು ಪಠಿಸಿಯೇ ಮಲಗಬೇಕಿತ್ತು. ಹಾಗೆ ಮಾಡುವುದರಿಂದ ಅವಳ ಸುತ್ತಲೂ ಅಬೇಧ್ಯವಾದ ಗೋಡೆಯೊಂದು ನಿರ್ಮಾಣಗೊಂಡು ರಾತ್ರಿಯಿಡೀ ರಕ್ಷಿಸುವುದೆಂದು ಅಪ್ಪ ಹೇಳುತ್ತಿದ್ದರು. ಆದರೆ ಅವಳಿಗೆ ತನ್ನ ಏಕಾಂಗಿತನ್ವನ್ನು ನೀಗಲು ರಾತ್ರಿ ಒಬ್ಬ ಕಾಲ್ಪನಿಕ ಸಂಗಾತಿ ಬೇಕಿದ್ದ. ಸೋಹಿಲೆ ನಿರ್ಮಿಸುವ ಗೋಡೆಯೊಡೆದು ಅವನನ್ನು ತನ್ನೊಳಗೆ ಬಿಟ್ಟುಕೊಳ್ಳುವುದಾದರೂ ಹೇಗೆ? ಅವಳು ಯೋಚಿಸುತ್ತಿದ್ದಳು. ಥಟ್ಟನೆ ಉಪಾಯವೊಂದು ಹೊಳೆಯಿತು. ಸೋಹಿಲೆಯನ್ನು ತಂದೆಯೆದುರು ಪಠಿಸುವ ಮೊದಲೇ ಕಾಲ್ಪನಿಕ ಪ್ರಿಯಕರ ‘ರಾಜನ್’ ನನ್ನು ತನ್ನೊಳಗೆ ಕರೆದುಕೊಂಡುಬಿಟ್ಟಳು! ಮತ್ತೆ ಗೋಡೆಯೆದ್ದರೂ ಅವರಿಬ್ಬರೂ ಜೊತೆಯಾಗಿದ್ದರು.

ಅಟ್ಟದ ಮೇಲೆ ಮೂರು ಗ್ಲಾಸುಗಳಿದ್ದವು. ಅವೇಕೆ ಪ್ರತ್ಯೇಕವಾಗಿವೆಯೆಂದು ಮೊಮ್ಮಗಳು ಅಜ್ಜಿಯೊಂದಿಗೆ ಕೇಳಿದಳು. ಮನೆಗೆ ಬರುವ ಮುಸ್ಲಿಂ (ಕಾಫಿರರು) ಜನಗಳಿಗೆ ಕುಡಿಯಲು ಕೊಡಲು ಎಂದು ತಿಳಿದಾಗ ಬಂಡೆದ್ದಳು. ಮೂರು ಗ್ಲಾಸುಗಳೊಂದಿಗೆ ತಾನೂ ನಾಲ್ಕನೆಯವಳಾಗಿ ಪ್ರತಿಭಟನೆಗೆ ಕುಳಿತು ಈ ಪ್ರತ್ಯೇಕತೆಯ ವಿರುದ್ಧ ಹೋರಾಡಿ ಅವುಗಳನ್ನು ಎಲ್ಲವುಗಳೊಂದಿಗೆ ಜೋಡಿಸಿದಳು. ಮುದೊಂದು ದಿನ ಮುಸ್ಲಿಂ ಪ್ರೀತಿಗಾಗಿ ಇಡಿಯ ಜೀವನವನ್ನೇ ಕನವರಿಕೆಯಾಗಿಸುವೆನೆಂದು ಆ ಪುಟ್ಟ ಹುಡುಗಿಗೆ ತಿಳಿದಿರಲಿಲ್ಲ.

ತಂದೆ ಒಬ್ಬ ಸಾಹಿತಿಯಾಗಿದ್ದರು. ರಾತ್ರಿಯಿಡೀ ಎಚ್ಚರವಾಗಿದ್ದು ಬರೆದು, ಹಗಲಿಡೀ ನಿದ್ರಿಸುತ್ತಿದ್ದರು. ತಾಯಿ ಹನ್ನೊಂದರ ವಯಸ್ಸಿನಲ್ಲಿಯೇ ಅಗಲಿದಳು. ಬದುಕಿನ ಏಕಾಂತ ನೀಗಲು ಅವಳು ಪುಸ್ತಕದ ಮೊರೆಹೋದಳು. ಹಾಗೆ ಓದಿದ ಓದು ಅವಳನ್ನು ಜೀವನಪೂರ್ತಿ ಕೈಹಿಡಿದು ನಡೆಸಿತು. ಲೇಖನಿ ಅವಳ ಅನುದಿನದ ಸಂಗಾತಿಯಾಯಿತು.

ಸಾಹಿರ್ ಲುಧಿಯಾನವಿ ಆ ಕಾಲದ ಪ್ರಸಿದ್ಧ ಸಾಹಿತಿ. ಅವನ ಹಸ್ತಾಕ್ಷರಕ್ಕಾಗಿ ಕಂಡಲೆಲ್ಲ ಜನರು ಮುಗಿಬೀಳುತ್ತಿದ್ದರು. ಅಂಥದೊಂದು ಸಮಾರಂಭದಲ್ಲಿ ಈ ಹುಡುಗಿ ಕೊನೆಯವರೆಗೂ ಕಾದುನಿಂತು ಅವನೆದುರು ತನ್ನ ಕೋಮಲವಾದ ಕೈಯ್ಯನ್ನೇ ಹಸ್ತಾಕ್ಷರಕ್ಕಾಗಿ ಒಡ್ಡಿದಳು. ಅವನೂ ಅಷ್ಟೇ ಪ್ರೀತಿಯಿಂದ ಇವಳ ಕೈಯ್ಯ ಮೇಲೆ ತನ್ನ ಬೆರಳಿನ ಮುದ್ರೆಯನ್ನು ಒತ್ತಿದ. ಅದುವೇ ಪ್ರೀತಿಯ ಮೊಹರಾಗಿ ಜೀವನದ ಕೊನೆಯವರೆಗೂ ಉಳಿಯಿತು!

ಎರಡೇ ಎರಡು ತಿರುವುಗಳು ಜೀವನದಲ್ಲಿ ನಡೆದವು. ಒಂದು ಅವಳ ತಂದೆ, ತಾಯಿಯರಿಂದ ಘಟಿಸಲ್ಪಟ್ಟತು. ಇನ್ನೊಂದು ಸ್ವಯಂಕೃತವಾಗಿ. ನಾಲ್ಕನೆಯ ವಯಸ್ಸಿನಲ್ಲಿ ನಡೆದ ಮದುವೆಯ ನಿಶ್ಚಿತಾರ್ಥ ಹದಿನಾರನೇ ವಯಸ್ಸಿನಲ್ಲಿ ಮದುವೆಯಾಗಿ ಸಾಕಾರಗೊಂಡಿತು ಮತ್ತು ಇಪ್ಪತ್ತೊಂದನೆಯ ವಯಸ್ಸಿನಲ್ಲಿ ಬಂದ ಪ್ರೀತಿ ಬದುಕಿನ ಕೊನೆಯವರೆಗೂ ಕಾಡಿತು.

ಎರಡು ನೋವುಗಳು ಕಾಡಿದವು. ಒಂದು ಮದುವೆಯಾದವನೊಂದಿಗೆ ಏರ್ಪಟ್ಟ ಮಾನಸಿಕ ಮತ್ತು ವೈಚಾರಿಕ ಬೇಧದ ಕಂದರ. ಇನ್ನೊಂದು ಅದರಿಂದಾಗಿ ಏರ್ಪಟ್ಟ ಸಾಮಾಜಿಕ ಅಂತರ. ಎರಡರೊಳಗೊಂದನ್ನು ಆಯ್ಕೆ ಮಾಡಿಕೊಳ್ಳಬೇಕಾದಾಗ ಅವಳ ಆಯ್ಕೆ ಎರಡನೆಯದಾಯಿತು. ಅವರು ಗೌರವಪೂರ್ವಕವಾಗಿ ಬೇರ್ಪಟ್ಟರು. ವಿಚ್ಛೇದನವೆಂದರೆ ಪರಸ್ಪರ ದೂರಿಕೊಂಡು ಬಾಧವ್ಯದ ಎಳೆಯನ್ನು ಹರಿದುಕೊಳ್ಳುವುದಲ್ಲ. ಬದಲಾಗಿ ತುಂಬಲಾಗದ ಕಂದರದ ಆಚೀಚೆ ನಿಂತು ಚೆಂದವಾಗಿಯೇ ಮಾತನ್ನಾಡುತ್ತಾ ಸಮಾಂರತವಾಗಿ ನಡೆಯುವುದು ಎಂಬುದು ಅವಳ ಅಚಲವಾದ ನಂಬಿಕೆಯಾಗಿತ್ತು. ಅದೇ ನಂಬಿಕೆ ಇಚ್ಛಿಸಿದ ಬದುಕನ್ನು ಬದುಕುವ ಅವಳ ಹಂಬಲಕ್ಕೆ ಹಿನ್ನೆಲೆಯಾಯಿತು.

ಎರಡು ಮುದ್ದಾದ ಮಕ್ಕಳ ತಾಯಿ ದಾಂಪತ್ಯ ಸಂಕೋಲೆಯನ್ನು ಕಳಚಿ ಬಂದು ತನ್ನ ಪ್ರೀತಿಗೆ ಇನ್ನೇನು ದೂರವಾಣಿ ಕರೆಯನ್ನು ಮಾಡಬೇಕೆನ್ನುವಾಗಲೇ ಅವಳು ಪ್ರೀತಿಸಿದವನಿಗೊಂದು ಹೊಸದಾದ ಪ್ರೀತಿಯ ನೆರಳು ಸಿಕ್ಕಿದ ಬಗ್ಗೆ ಪತ್ರಿಕೆಯೊಂದು ವರದಿ ಮಾಡಿತ್ತು. ಡಯಲ್ ಮಾಡಲು ಹೊರಟ ಕೈಗಳು ಅಲ್ಲೇ ನಿಂತವು. ಬದುಕು ಬೆಕ್ಕಿನ ಕೈಗೆ ಸಿಕ್ಕ ದಾರದುಂಡೆಯಂತೆ ಉರುಳುರುಳಿ ಸಿಕ್ಕು ಸಿಕ್ಕಾಯಿತು. ಬಿಡಿಸಲಾರದ ಗಂಟುಗಳೊಂದಿಗೆ ಅವಳು ಏಕಾಂಗಿಯಾಗಿದ್ದಳು.

ಅವಳು ಪ್ರೀತಿಯನ್ನು ಹಠದಿಂದ ಕವನವಾಗಿಸಿದಳು. ‘ಸುಹನೆಡೆ’ ಗೆ ಕೇಂದ್ರಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಬಂತು. ಅಕಾಡೆಮಿಯ ಪ್ರಶಸ್ತಿ ಪಡೆದ ಮೊದಲ ಕವಯತ್ರಿ ಎಂಬ ಹೆಮ್ಮೆಯೂ ಅವಳದಾಯಿತು. ಪತ್ರಕರ್ತರು ಅವಳ ಮನೆಯೆದುರು ಸಂದರ್ಶನಕ್ಕಾಗಿ ಕಾದು ನಿಂತರು. ಎಲ್ಲರೊಂದಿಗೆ ಮಾತನಾಡಿದ ನಂತರವೂ ಅವಳೊಳಗೊಂದು ಶೂನ್ಯವು ಉಳಿದುಹೋಯಿತು. ತಾನು ಯಾರಿಗಾಗಿ ಇವುಗಳನೆಲ್ಲ ಬರೆದೆನೋ ಅವರೇ ಇದನ್ನು ಓದಲಿಲ್ಲ!

ಅದು ವಿಪ್ಲವದ ಕಾಲ. ಭಾರತ ಆಗತಾನೇ ಸ್ವತಂತ್ರಗೊಂಡಿತ್ತು. ಗಡಿಯಾಚೆಗಿನ ಬದುಕು ಛಿದ್ರ ಛಿದ್ರವಾಗಿತ್ತು. ಮಾನವೀಯತೆಯನ್ನರಿಯದ ಕೋಮುವಾದಿಗಳು ಕರುಳ ಬಳ್ಳಿಯನ್ನೇ ಕತ್ತರಿಸಿದಾಗ ಅವಳು ಸುಪ್ರಸಿದ್ಧ ಕವನ ‘ಅಜ್ಜ ಅಕ್ಖಾಂ ವಾರಿಸ ಶಾಹ್‍ನೂ’ ಎಂಬ ಕವನವನ್ನು ಬರೆದಳು. ಗಡಿಯ ಆಚೆ ಈಚೆಗಿನ ಜನರೆಲ್ಲ ಈ ಕವನನವನ್ನು ಹಾಡುತ್ತ ಇಂದಿಗೂ ಮೈಮರೆಯುತ್ತಿದ್ದಾರೆ. ವಿಭಜನೆಯ ನೋವನ್ನು ಅವರಂತೆ ತನ್ನ ಬರಹದಲ್ಲಿ ಪಡಿಮೂಡಿಸಿದ ಇನ್ನೊಬ್ಬ ಲೇಖಕಿ ಬಹುಶಃ ಇಲ್ಲ. ಭಾರತೀಯ ಜ್ಞಾನಪೀಠ ಪಡೆದ ಮೊದಲ ಪಂಜಾಬಿ ಕವಯತ್ರಿ ಅವಳು.

ಹೌದು, ಇವೆಲ್ಲವೂ ಅಮೃತಾ ಪ್ರೀತಂ ಎಂಬ ಜೀವಂತ ದಂತಕತೆಯ ಬದುಕಿನ ಸಾಲುಗಳು. ಯಾವ ಸಿನೇಮಾ ಕಥೆಗಳಿಗೂ ಕಡಿಮೆಯಿಲ್ಲದ ವರ್ಣರಂಜಿತ ಪುಟಗಳು. ಆದರೆ ಈ ಎಲ್ಲ ಬಣ್ಣಗಳಾಚೆಗೊಂದು ಮಿಡಿಯುವ ಮಾನವೀಯತೆಯ ತೊರಯೊಂದು ಅವರಲ್ಲಿ ಮಿಳಿತಗೊಂಡಿತ್ತು. ಅವರಿಗೆ ಮನುಷ್ಯ ಸಂಬಂಧಗಳ ಹುಡುಕಾಟವೇ ಬಹಳ ಮುಖ್ಯವಾಗಿತ್ತು. ಸ್ತ್ರೀಯರ ಸ್ವಾತಂತ್ರ್ಯ ಪುರುಷರ ಸ್ವಾತಂತ್ರ್ಯಕ್ಕಿಂತ ಭಿನ್ನವಾದುದಲ್ಲ ಎಂಬುದು ಅವರ ಖಚಿತವಾದ ನಿಲುವಾಗಿತ್ತು. ಮಹಿಳಾ ವಿಮೋಚನಾ ಆಂದೋಲನವೆಂದರೆ ಕೇವಲ ಹಕ್ಕುಗಳ ರಕ್ಷಣೆಗಾಗಿ ಘೋಷಣೆ ಕೂಗುವುದಲ್ಲ ಎಂದು ಅವರು ದೃಢವಾಗಿ ಪ್ರತಿಪಾದಿಸಿದರು.

“ಹೆಣ್ಣಿನ ಹಾಗೆ ಗಂಡು ಸಹ ಮಾನಸಿಕವಾಗಿ ಗುಲಾಮನೆ. ಗಂಡು ಇದುವರೆಗೂ ಸರಿಸಮಾನ ಸಂಗಾತಿಯಾಗಿ, ಸ್ವತಂತ್ರ ಮಹಿಳೆಯ ಸ್ನೇಹ ಹಾಗೂ ಸಹವಾಸವನ್ನು ಪಡೆದಿಲ್ಲ. ಸ್ವತಂತ್ರ ಮನುಷ್ಯ ಜೀವಿಗಳಾಗಿ ಸ್ತ್ರೀ ಪುರುಷರು ಪರಸ್ಪರರನ್ನು ಸಂಧಿಸಿಯೇ ಇಲ್ಲ. ಪ್ರೀತಿ ಎಂದರೆ ಒಬ್ಬ ವ್ಯಕ್ತಿ ಇನ್ನೊಬ್ಬ ವ್ಯಕ್ತಿಯನ್ನುಮೆಚ್ಚುವುದು ಮತ್ತು ಅವನ ಸಹವಾಸವನ್ನು ಬಯಸುವುದು. ಆರ್ಥಿಕ ದಾಸ್ಯವು ನಿಜವಾದ ಪ್ರೀತಿಯ ಅನುಭವಕ್ಕೆ ಅಡ್ಡಿಯಾಗುತ್ತದೆ.” ಇದು ಸ್ತ್ರೀ ಸ್ವಾತಂತ್ರ್ಯದ ಬಗೆಗೆ ಅವರ ಖಚಿತವಾದ ನಿಲುವು.

ತನ್ನ ಆತ್ಮೀಯರೆಲ್ಲ ವಿಭಜನೆಯ ಕರಾಳ ಹಸ್ತಕ್ಕೆ ಸಿಲುಕಿ ಪಾಕಿಸ್ತಾನಕ್ಕೆ ವಲಸೆ ಹೋದಾಗ, ಭದ್ರತೆಯ ದೃಷ್ಟಿಯಿಂದ ಅವರೊಂದಿಗೆ ವರ್ಷಗಳ ಕಾಲ ಸಂಭಾಷಣೆಯನ್ನು ನಡೆಸುವುದಿರಲಿ ಪತ್ರ ವ್ಯವಹಾರಗಳೂ ನಿಂತು ಹೋದಾಗ ಅಮೃತಾ ನಿಜಕ್ಕೂ ತಲ್ಲಣಗೊಳ್ಳುತ್ತಾರೆ.

“ರೆಕ್ಕೆಗಳೆಲ್ಲಾದರೂ ಮಾರಾಟವಾಗುತ್ತಿದ್ದರೆ
ನನಗೆ ಕೊಟ್ಟುಬಿಡು, ಪರದೇಶಿ!
ಇಲ್ಲವೇ ಇದ್ದುಬಿಡು ನನ್ನ ಬಳಿ….”

ಆತ್ಮೀಯ ಗೆಳೆಯನೊಬ್ಬ ಪಾಕಿಸ್ತಾನದಿಂದ ಬಂದು ಒಂದೆರಡು ದಿನ ಮಾತ್ರವೇ ನಿಂತು ಹೋದ ಬಳಿಕ ಅಮ್ರತಾ ಬರೆದ ಸಾಲುಗಳಿವು.

ಅಗಾಧ ಪ್ರತಿಭೆಯ, ಅಪಾರ ವೈಚಾರಿಕತೆಯ, ಅದ್ಭುತ ಸ್ವಾತಂತ್ರ್ಯದ ಕಲ್ಪನೆಯ ಅಮೃತಾರ ಏಳ್ಗೆ ಅಂದಿನ ಪುರುಷ ಸಾಹಿತಿಗಳ ನಿದ್ದೆಗೆಡಿಸುತ್ತದೆ. ಅವರ ಸುತ್ತಲೂ ಸಟೆಯ ಅತಿವಿಜೃಂಭಣೆಯ ಕಥೆಗಳು ಹುಟ್ಟಿಕೊಳ್ಳುತ್ತವೆ. ಮೊದಲೇ ಏಕಾಂಗಿಯಾಗಿದ್ದ ಅಮೃತಾ ಈ ಎಲ್ಲ ಹೊಡೆತಗಳಿಂದ ಜರ್ಜರಿತರಾಗಿಹೋಗುತ್ತಾರೆ. ಆದರೆ ಲೇಖನಿಯನ್ನು ತನ್ನ ಪ್ರೀತಿಯ ಸಂಗಾತಿಯಾಗಿ ಅಪ್ಪಿಕೊಳ್ಳುತ್ತಾರೆ. ಸತ್ಯವನ್ನು ಒಂದಿನಿತೂ ಬಚ್ಚಿಡದೇ ಜಗತ್ತಿಗೆ ಸಾರುತ್ತಾರೆ. ಹತ್ತುವರ್ಷದ ಅವರ ಮಗ ಒಂದು ದಿನ ಅವರೆದುರು ನಿಂತು ಕೇಳುತ್ತಾನೆ, “ಮಾಮಾ, ನಾನು ಸಾಹಿರ್ ಅಂಕಲ್‍ನ ಮಗನೆ?” ಅಮೃತಾ ಅವನನ್ನೆ ಎವೆಯಿಕ್ಕದೇ ನೋಡುತ್ತಾರೆ. ಮಗ ಮತ್ತೆ ಹೇಳುತ್ತಾನೆ, “ಅಮ್ಮಾ, ನಾನು ಅವರ ಮಗನಾಗಿದ್ದರೆ ಹೇಳು. ನನಗೆ ಅವರು ಬಹಳ ಇಷ್ಟ” ಅಮೃತಾ ದೃಢವಾಗಿ ಹೇಳುತ್ತಾರೆ, “ಅವರ ಮಗನಾಗಿದ್ದರೆ ಖಂಡಿತ ಹಾಗೆಯೇ ಹೇಳುತ್ತಿದ್ದೆ ಮತ್ತು ಅವರ ಮಗನಾಗಲಿ ಎಂದು ನಾನೂ ಆಶಿಸಿದ್ದೆ. ಅದು ಸತ್ಯವಾಗಲಿಲ್ಲ.” ಥೇಟ್ ಸಾಹಿರನನ್ನೇ ಹೋಲುವ ಮಗ ಅವರ ಮಾತನ್ನು ನಂಬುತ್ತಾನೆ, ಯಾಕೆಂದರೆ ಸತ್ಯಕ್ಕೆ ಅಂಥಹ ಶಕ್ತಿಯಿದೆ! ಅಮೃತಾ ಮಗುವನ್ನು ತನ್ನ ಗರ್ಭದಲ್ಲಿ ಹೊತ್ತು ಇಡೀ ದಿನ ಸಾಹಿರನ ಕನವರಿಕೆಯಲ್ಲೇ ಕಳೆದ ಪರಿಣಾಮವಾಗಿ ಇರಬೇಕು. ಅವರ ಮಗ ಥೇಟ್ ಸಾಹಿರ್‍ನನ್ನೇ ಹೋಲುತ್ತಾನೆ. ಅವರ ಸಾಹಿತ್ಯದ ಬಗೆಗೆ ಚರ್ಚಿಸದೇ, ಅವರ ಬದುಕಿನ ಬಗ್ಗೆ ರಂಜನೀಯ ಕಥೆಯನ್ನು ಹುಟ್ಟಿಸುತ್ತ ಕಾಲಯಾಪನೆ ಮಾಡುತ್ತಿದ್ದ ಸಾಹಿತ್ಯ ವಲಯದ ಸಂಕುಚತೆಯ ಅವರ ಮಗನ ಮನಸ್ಸಿನಲ್ಲಿಯೂ ಪ್ರತಿಫಲಿಸಿರುತ್ತದೆ.

ಹೆಣ್ಣೊಬ್ಬಳ ಬದುಕಿನ ದುರಂತಗಳ ಬಗ್ಗೆ ಅಮೃತಾ ಹೀಗೆ ಬರೆಯುತ್ತಾರೆ,
“ರಾತ್ರಿಯ ಬಟ್ಟಲನ್ನು ಬದುಕಿನ ಜೇನಿನಿಂದ ತುಂಬಲಾಗದ್ದು , ವಾಸ್ತವದ ತುಟುಗಳು ಆ ಜೇನನ್ನೆಂದೂ ಸವಿಯದಿರುವುದು ದುರಂತವಲ್ಲ. ರಾತ್ರಿಯ ಬಟ್ಟಲು ಚಂದಿರನ ಕಲಾಯಿ ಕಳೆದುಕೊಳ್ಳುವುದು, ಬಟ್ಟಲಿನಲ್ಲಿ ಬಿದ್ದಿರುವ ಕಲ್ಪನೆ ರುಚಿಗೆಟ್ಟು ಹೋಗುವುದು ದುರಂತ. ನಿನ್ನ ಅದೃಷ್ಟವು ನಿನ್ನ ಪ್ರಿಯತಮನ ಹೆಸರು ವಿಳಾಸವನ್ನು ಓದಲಾಗದ್ದು, ನಿನ್ನ ಬದುಕಿನ ಪತ್ರ ಸದಾ ಗೋಳಾಡುತ್ತಲೇ ಇರುವುದು ದುರಂತವಲ್ಲ. ನೀನು ನಿನ್ನ ಪ್ರಿಯತಮನಿಗೆ ನಿನ್ನ ಬದುಕಿನ ಇಡೀ ಪತ್ರ ಬರೆಯುವುದು, ನಂತರ ನಿನ್ನ ಪ್ರಿಯತಮನ ವಿಳಾಸ ಕಳೆದು ಹೋಗುವುದು ದುರಂತ. ಬದುಕಿನ ಸುದೀರ್ಘ ದಾರಿಯಲ್ಲಿ ಸಮಾಜದ ಬಂಧನಗಳು ಮುಳ್ಳು ಚೆಲ್ಲಲಿ. ನಿನ್ನ ಕಾಲುಗಳಿಂದ ಬದುಕಿನುದ್ದಕ್ಕೂ ರಕ್ತ ಹರಿಯುತ್ತಲಿರುವುದು ದುರಂತವಲ್ಲ. ರಕ್ತ ಸೋರುವ ಕಾಲುಗಳಿಂದ ಸಾಗಿ ಒಂದೆಡೆ ನಿಲ್ಲುವುದು, ಅಲ್ಲಿಂದ ಯಾವ ದಾರಿಯೂ ನಿನ್ನನ್ನು ಕೈಮಾಡಿ ಕರೆಯದಿರುವುದು ದುರಂತ. ನೀನು ನಿನ್ನ ಪ್ರೇಮದ ನಡುಗುವ ಶರೀರದ ಸಲುವಾಗಿ ಬದುಕಿನುದ್ದಕ್ಕೂ ಕವನಗಳ ಉಡುಪನ್ನು ಹೊಲಿಯುತ್ತಿರುವುದು ದುರಂತವಲ್ಲ. ಆ ಉಡುಪುಗಳನ್ನು ಹೊಲಿಯಲು ನಿನ್ನ ಬಳಿ ವಿಚಾರಗಳ ದಾರ ಮುಗಿದು ನಿನ್ನ ಲೇಖನಿ ಎಂಬ ಸೂಜಿಯ ತೂತು ಮುರಿಯುವುದು ದುರಂತ.”
ಎಲ್ಲ ಮಹಿಳೆಯರ ಬಾಳಿನ ದುರಂತಗಳನ್ನು ತೆರರೆದಿಡುವ ಮಾತುಗಳಿವು!

ಸಾಹಿರ್ ಅಮೃತಾಳಿಗೆ ‘ತಾಜ್ ಮಹಲ್’ ಎಂಬ ಕವನವನ್ನು ಕಟ್ಟುಹಾಕಿಸಿ ಕೊಟ್ಟಿದ್ದರು. ಆದರೆ ಅವಳ ಬದುಕಿಗೆ ತಾಜ್‍ಮಹಲ್ ಆಗಿ ಬಂದವರು ಖ್ಯಾತ ಚಿತ್ರಕಾರರಾದ ಇಮರೋಜ್ ಅವರು. ಅವರಿಬ್ಬರದು ತಾಜ್‍ಮಹಲ್‍ಗಿಂತ ಸುಂದರವಾದ ಸಾಂಗತ್ಯ. ಜಗದ ಎಲ್ಲ ಬಂಧನಗಳನ್ನೂ ಮುರಿದುಬಿಡಬಹುದಾದ ಮತ್ತು ಪ್ರೇಮದ ಯಾವ ವ್ಯಾಖ್ಯಾನಕ್ಕೂ ಸಿಗದ ಪ್ರೀತಿ ಅವರದ್ದು. ಅಮೃತಾ ಇಮರೋಜ್‍ರ ಸ್ಕೂಟರಿನ ಹಿಂದೆ ಕುಳಿತು ಅವರ ಬೆನ್ನ ಮೇಲೆ ‘ಸಾಹಿರ್’ ಹೆಸರನ್ನು ಸಾವಿರ ಬಾರಿ ಬರೆಯುತ್ತಿದ್ದರು. ಇಮರೋಜ್ ಮಾತ್ರ ‘ನೀನು ಸಾಹಿರ್‍ನ ಮನೆಯಲ್ಲಿ ನಮಾಜ್ ಮಾಡುತ್ತಿದ್ದರೂ ಸರಿಯೆ, ನಾನು ನಿನ್ನನ್ನು ಎತ್ತಿಕೊಂಡು ಬಂದು ಪ್ರೀತಿಸುತ್ತಿದ್ದೆ’ ಎನ್ನುತ್ತಿದ್ದರು. ಮಕ್ಕಳ ಒಪ್ಪಿಗೆಯ ಮೊಹರನ್ನೂ ಆಶಿಸದೇ ಅಮೃತಾ ಇಮರೋಜರ ನೆರಳಿನಲ್ಲಿ ತನ್ನ ಉಳಿದ ಜೀವಾವಧಿಯನ್ನು ಕಳೆದರು. ಅವರ ಮೊದಲ ಪತಿಯನ್ನೂ ಕೊನೆಗಾಲದಲ್ಲಿ ಇವರಿಬ್ಬರೂ ಸೇರಿಯೇ ನೋಡಿಕೊಂಡರು. ಅಮೃತಾ ತಮ್ಮ ಸಾಂಗತ್ಯವನ್ನು ಚಿತ್ರಿಸುದು ಹೀಗೆ,

“ತಂದೆ, ಸೋದರ, ಸ್ನೇಹಿತ ಹಾಗೂ ಪತಿ
ಯಾವ ಶಬ್ದಕ್ಕೂ ಬೆಲೆ ಇರಲಿಲ್ಲ
ನಿನ್ನನ್ನು ನೋಡಿದಾಗ ಈ ಎಲ್ಲ
ಅಕ್ಷರಗಳೂ ಅರ್ಥಪೂರ್ಣವಾದವು”

ಅಮೃತಾರ ಈ ಸ್ವಾತಂತ್ರ್ಯದ ದಾರಿ ಸುಲಭದ್ದೇನೂ ಆಗಿರಲಿಲ್ಲ. ಅವರ ಮಗ ಒಮ್ಮೆ ಅವರಲ್ಲಿ ಕೇಳಿದ, “ಅಮ್ಮಾ, ನೀನು ನಿನ್ನ ಬದುಕಿಗೊಂದು ಹೊಸತಿರುವು ನೀಡಿದೆ. ಆದರೆ ಅದರಿಂದ ಮಕ್ಕಳಾದ ನಾವು ಅನುಭವಿಸಿದ ಮಾನಸಿಕ ತೊಂದರೆಯ ಅನುಭವವು ನಿನಗಿದೆಯೆ?” ಅಮೃತಾ ಅದನ್ನು ಅನುಭವಿಸಿದ್ದರು. ಅವುಗಳೆಲ್ಲವನ್ನೂ ‘ಜೇಬಕತರೆ’ ಎಂಬ ಕಾದಂಬರಿಯಾಗಿ ಚಿತ್ರಿಸಿ ಮಗನ ಕೈಗಿತ್ತರು. ಮಗನ ಕಣ್ಣಲ್ಲಿ ನೀರಾಡಿತ್ತು.

ತನ್ನ ಮತ್ತು ತನ್ನ ಸುತ್ತಲಿನ ಎಲ್ಲ ನೋವುಗಳನ್ನು ಅಕ್ಷರವಾಗಿಸುವ ತಾಕತ್ತು ಅಮೃತಾರ ಲೇಖನಿಗಿತ್ತು ಮತ್ತು ಅದೇ ಅವರನ್ನು ಪೊರೆಯುವ ಶಕ್ತಿಯಾಗಿತ್ತು. ತನ್ನ ಸುತ್ತಲೂ ಹಬ್ಬಿಕೊಂಡ ಅಸತ್ಯದ ಕಥೆಗಳ ಜಾಲವನ್ನವರು ಸತ್ಯದ ಗುರಾಣಿಯಿಂದಲೇ ನಿವಾರಿಸಿಕೊಂಡರು. ತನ್ನೊಳಗೆ ತುಂಬಿಕೊಂಡಿರುವ ಸಾಹಿತಿಯನ್ನು ಬದಿಗೆ ಸರಿಸಿ, ಕೇವಲ ಹೆಣ್ಣೊಬ್ಬಳು ಅಸ್ತಿತ್ವವನ್ನು ನೋಡಿದ ಮೂರೇ ಕ್ಷಣಗಳನ್ನವರು ಹೀಗೆ ನೆನಪಿಸಿಕೊಳ್ಳುತ್ತಾರೆ,
“ನನ್ನ ಇಪ್ಪತ್ತೈದನೆಯ ವಯಸ್ಸಿನಲ್ಲಿ ನಾನೊಂದು ಕನಸು ಕಂಡೆ. ಆಗಿನ್ನೂ ನನಗೆ ಮಕ್ಕಳಾಗಿರಲಿಲ್ಲ. ಪ್ರತಿದಿನ ಕನಸಿನಲ್ಲಿ ನಾನೊಂದು ಹೂಕುಂಡವನ್ನು ನೋಡುತ್ತಿದ್ದೆ. ಅದರಲ್ಲೊಂದು ಹುವು ಮೆಲ್ಲನೆ ಅರಳುತ್ತಿತ್ತು. ಆದರೆ ಒಂದುದಿನ ಇದ್ದಕ್ಕಿದ್ದಂತೆ ಆ ಹೂಕುಂಡದಲ್ಲಿ ಮಗುವೊಂದು ಅರಳಿ ನಿಂತಿತು. ಕಣ್ಣುಬಿಟ್ಟಾಗ ಮನಸ್ಸೆಲ್ಲವೂ ಖಾಲಿಯಾಗಿತ್ತು. ಒಬ್ಬ ‘ಕೇವಲ ಮಹಿಳೆ’ ತಾಯಿಯಾಗುವುದು ಸಾಧ್ಯವಾಗದಿದ್ದರೆ ಬದುಕ ಬಯಸಿರಲಿಲ್ಲ.
ಒಮ್ಮೆ ಸಾಹಿರ್ ಮನೆಗೆ ಬಂದಾಗ ಅವನ ಮೈ ಜ್ವರದಿಮದ ಸುಡುತ್ತಿತ್ತು. ನಾನವನ ಪಕ್ಕದಲ್ಲಿ ಕುಳಿತು ಅವನ ಗಂಟಲು ಮತ್ತು ಎದೆಗೆ ವಿಕ್ಸ್ ಸವರುತ್ತಿದ್ದೆ.ಅವನ ಎದೆಯನ್ನು ಮೆಲ್ಲಗೆ ಸವರುತ್ತ ಇಡಿಯ ಜೀವನವನ್ನು ಕಲೆಯಬಲ್ಲೆ ಎನಿಸಿತು. ‘ಕೇವಲ ಹೆಣ್ಣಿ’ಗೆ ಆಗ ಕಾಗದ ಮತ್ತು ಲೇಖನಿಯ ಅವಶ್ಯಕತೆಯಿರಲಿಲ್ಲ.

ತನ್ನ ಸ್ಟುಡಿಯೋದಲ್ಲಿ ಕುಳಿತುಕೊಂಡಿದ್ದ ಇಮರೋಜ್ ತಮ್ಮ ತೆಳುವಾದ ಬ್ರಶ್‍ನ್ನು ಕಾಗದದಿಂದ ಮೇಲೆತ್ತಿ ಒಮ್ಮೆ ಕೆಂಪು ಬಣ್ಣದಲ್ಲಿ ಅದ್ದಿದರು. ಮತ್ತೆ ಎತ್ತಿ ನನ್ನ ಹಣೆಯ ಮೇಲೆ ಬೊಟ್ಟು ಇಟ್ಟರು. ಆಗ ನಾನು ಕೇವಲ ಹೆಣ್ಣಾಗಿದ್ದೆ.”

ಹೆಣ್ಣೆಂದರೆ ಒಡವೆಗಳ ಬಯಸುವ ಗೊಂಬೆ, ಹೆಣ್ಣೆಂದರೆ ಸಂಪತ್ತನ್ನು ಆಶಿಸುವ ಆಸೆಬುರುಕಿ, ಹೆಣ್ಣೆಂದರೆ ಗಂಡನ್ನು ಆವರಿಸುವ ಮಾಯೆ ಎಂದೆಲ್ಲ ವ್ಯಾಖ್ಯಾನಿಸುವ ಸುಳ್ಳುಗಳ ಸಂಕೋಲೆಯನ್ನು ಕಳಚಿ, ಹೆಣ್ಣಿನ ಭಾವಲೋಕದೊಳಗನ್ನು ತೆರೆದಿಡುವ ಕ್ಷಣಗಳಿವು!

“ಆಡಿಸಿತು ಮತ್ತದೇ ಗಾಳಿ
ನನ್ನ ತಾಯಿಯ ತಾಯಿಯ ತಾಯಿಯಂತೆ
ಬಂತು ಧಾವಿಸುತ
ತಂದಿತು ಕೈಯಲಿ ಕೆಲ ಅಕ್ಷರಗಳನು
ಎನ್ನದಿರು ಇವುಗಳನ್ನು
ಪುಟ್ಟಪುಟ್ಟ ಕಪ್ಪು ಅಕ್ಷರಗಳೆಂದು”

ಲೇಖನಿ ಯಾವತ್ತೂ ಅವರಿಗೆ ದೇವರ ಸಮಾನವಾಗಿತ್ತು. ಅದನ್ನವರು ತನ್ನೊಳಗಿನ ಚೈತನ್ಯದಂತೆ ತಮ್ಮೊಳಗೆ ಎರಕ ಹೊಯ್ದುಕೊಂಡರು. “ದೇವರಂಥ ಆಸರೆ ನಿನ್ನು” ಎಂದು ಎದೆಗಪ್ಪಿಕೊಂಡರು. ಹರಿತವಾದ ಮಾತುಗಳಲ್ಲಿ ವಿಭಜನೆಯ ಕರಾಳ ಮುಖವನ್ನು ತೆರೆದಿಟ್ಟರು. ಅನೇಕರ ಕಣ್ಣಲ್ಲಿ ಧರ್ಮವಿರೋಧಿ ಎನಿಸಿದರು. ಆದರೆ ಕೊನೆಯವರೆಗೂ ಅವರ ಲೇಖನಿ ತನ್ನ ಮೊನಚನ್ನು ಕಳಕೊಳ್ಳಲಿಲ್ಲ.

ಅಮ್ರತಾ ಟಾಲ್‍ಸ್ಟಾಯ್‍ನ ಗೋರಿಗೆ ಭೇಟಿ ಕೊಟ್ಟಾಗ ಗೋರಿಯ ಮೇಲಿಂದ ಒಂದು ಎಲೆಯನ್ನು ಎತ್ತಿಕೊಂಡು ಬಂದಿದ್ದರು. ಏಷ್ಯನ್ ಲೇಖಕರ ಸಮ್ಮೇಳನದಲ್ಲಿ ಭಾಗವಹಿಸಿದಾಗ ಸಾಹಿರ್ ಅವರ ಮತ್ತು ತನ್ನ ಬ್ಯಾಜನ್ನು ಬದಲಾಯಿಸಿಕೊಟ್ಟಿದ್ದರು. ಆ ಎಲೆಯೊಂದಿಗೆ ಸಾಹಿರ್ ಹೆಸರಿರುವ ಬ್ಯಾಜ್ ನ್ನು ಜೋಪಾನವಾಗಿಟ್ಟಿದ್ದರು. “ಅದನ್ನು ನೋಡಿದಾಗಲೆಲ್ಲ ಈ ಬ್ಯಾಜ್ ನನ್ನ ಗೋರಿಯ ಮೇಲಿಂದ ನಾನು ಕೈಯ್ಯಾರೆ ಕಿತ್ತು ತಂದ ಎಲೆಯೇನೋ ಎನಿಸುತ್ತದೆ” ಎನ್ನುತ್ತಾರೆ ಅವರು. ಹಾಗೆಯೇ ವಿಯಟ್ನಾಂನ ಕವಯಿತ್ರಿ ಮಿಖಾರದ್ ಖಾನಂ ಕೊಟ್ಟ ಒಂದು ಬೂದಿಬಟ್ಟಟಲು ಅವರಲ್ಲಿದೆ. “ನಿಮ್ಮ ಅಂತಜ್ಞಾನದ ಹೊಗೆ ನಿಮ್ಮ ಸಿಗರೇಟಿನ ಹೊಗೆಯೊಂದಿಗೆ ಸೇರಿಕೊಂಡಾಗ ನನ್ನನ್ನು ನೆನಪಿಸಿಕೋ” ಎಂಬ ಮಾತು ಕೂಡ ನೆನಪಾಗುಳಿದಿದೆ. ಹೆಣ್ಣು ಜತನದಿಂದ ಕಾಯುವ ವಸ್ತುಗಳ ರೂಪಕದಂತಿವೆ ಇವು.

ಬದಲಾವಣೆಗೆಂದು ತನ್ನ ಜೀವನದ ಬಗೆಗೇ ಬರೆಯಬೇಕೆಂದಿರುವೆ ಎಂದು ಅಮ್ರತಾ ಖುಶ್ವಂತ ಸಿಂಗ್‍ರೊಂದಿಗೆ ಹೇಳಿದಾಗ ಅವರೆಂದರು, “ನಿನ್ನ ಜೀವನದಲ್ಲಿ ಅಂಥದ್ದೇನಿದೆ? ಬರೆಯತೊಡಗಿದರೆ ರಸೀದಿ ಟಿಕೇಟಿನ ಬೆನ್ನ ಹಿಂದೆ ಬರೆಯಬಹುದು.” ಅವರ ಮಾತನ್ನು ಅಮ್ರತಾ ಧನಾತ್ಮಕವಾಗಿ ತೆಗೆದುಕೊಂಡರು. ಯಾವಾಗಲೂ ತನ್ನ ಅಳತೆಯನ್ನು ಬದಲಾಯಿಸಿಕೊಳ್ಳದ ರಸೀದಿ ಟಿಕೇಟನ್ನು ಅವರು ತಮ್ಮ ಬದುಕಿನ ಲೇವಾದೇವಿಗೆ ಅಂಟಿಸಿದರು. ತಮ್ಮೆಲ್ಲ ಕವನಗಳು ಹಾಗೂ ಕಾದಂಬರಿಗಳ ಲೇವಾದೇವಿಯ ಕಚ್ಚಾ ರಸೀದಿಯನ್ನು ಪಕ್ಕಾ ಮಾಡಿಕೊಂಡರು.

ಮಹಿಳೆಯರೇಕೆ ಗಂಭೀರವಾದ ಸಾಹಿತ್ಯವನ್ನು ಬರೆಯುತ್ತಿಲ್ಲ ಮತ್ತು ಮಹಳಾ ಸಾಹಿತಿಗಳ ಸಂಖ್ಯೆಯೇಕೆ ಕಡಿಮೆ? ಎಂಬೆಲ್ಲ ಪ್ರಶ್ನೆಗಳಿಗೆ ಉತ್ತರವಾಗಿ ಅಮ್ರತಾ ದೃಢವಾಗಿ ನಿಲ್ಲುತ್ತಾರೆ. ಎಲ್ಲೋ ಸಾಂಪ್ರದಾಯಿಕ ಕುಟುಂಬದಲ್ಲಿ ಮನೆಗೆಲಸದಲ್ಲಿ ಕಳೆದುಹೋದ ಅಮ್ರತಾರೆಷ್ಟೋ ಲೆಕ್ಕ ಇಟ್ಟವರಾರು? ನಾಲ್ಕನೇ ವಯಸ್ಸಿಗೇ ಮದುವೆಯನ್ನು ನಿಗದಿಗೊಳಿಸಿ ಬದುಕನ್ನು ನಿರ್ಧರಿಸುವಾಗ ಆಯ್ಕೆಯೆಂಬುದು ಹೆಣ್ಣಿನ ಕೈಜಾರಿ ಹೋಗಿರುತ್ತದೆ. ಸುತ್ತಲಿನ ಜನರು ತಮ್ಮ ಮಾತುಗಳೆಂಬ ಈಟಿ, ಭರ್ಜಿಯೊಂದಿಗೆ ಕಾಯುತ್ತಿರುವಾಗ ಸುತ್ತ ಕೋಟೆಯ ಕಟ್ಟಿ ಕಾಯುವ ಇಮರೋಜ್ ಎಷ್ಟು ಹೆಣ್ಣುಗಳಿಗೆ ಸಿಗುತ್ತಾರೆ? ಬದುಕಿನ ಸಂಕೋಲೆಯನ್ನು ಮುರಿದೊಗೆದು ಬಯಲಾಗಿ ಸ್ವಚ್ಛಂದ ಗಾಳಿಯನ್ನು ಹೀರಿ ಸಾಹಿತ್ಯ ಬರೆಯುವ ಧೈರ್ಯ ಎಷ್ಟು ಜನರಿಗಿದ್ದೀತು? ಅಂಥದ್ದೊಂದು ಮಾದರಿಯಾಗಿ ಅಮ್ರತಾ, ಮತ್ತವರನ್ನು ಜತನದಿಂದ ಕಾಯ್ದ ಇಮರೋಜ್ ಎಂದೆಂದಿಗೂ ನೆನಪಾಗುಳಿಯುತ್ತಾರೆ.

ನನ್ನ ಬರಹಗಳನ್ನು ಪ್ರೀತಿಯಿಂದ ಓದುವ ಗೆಳತಿಯೊಬ್ಬಳು ಮೊನ್ನೆ ಫೋನಿನಲ್ಲಿ ಹೇಳಿದಳು, “ನನಗೂ ಬರೆಯುವುದೆಂದರೆ ಪಂಚಪ್ರಾಣ. ಆದರೆ ಇದೆಲ್ಲ ನನ್ನ ಗಂಡನಿಗೆ ಇಷ್ಟವಿಲ್ಲ. ಆಫೀಸಿನ ಕೆಲಸದ ಒತ್ತಡದಲ್ಲಿ ಬರೆಯಲಾಗುವುದಿಲ್ಲ. ಮನೆಗೆ ನಾನು ಮನೆಗೆ ಬರುವ ಮೊದಲೇ ಗಂಡ ಮನೆಯಲ್ಲಿರುತ್ತಾರೆ. ಬರೆಯಲು ಕುಳಿತರೆ ಏನಾದರೂ ಕೆಲಸ ನೆನಪಿಸುತ್ತಲೇ ಇರುತ್ತಾರೆ. ರಾತ್ರಿಯಾದರೂ ಬರೆಯೋಣವೆಂದರೆ ಅವರು ಹೇಳಿದಷ್ಟು ಹೊತ್ತಿಗೆ ಲೈಟ್ ಆಫ್ ಆಗಲೇಬೇಕು. ಅಷ್ಟಕ್ಕೂ ಹೇಗಾದರೂ ಚಿಕ್ಕಪುಟ್ಟ ಬರಹಗಳು ಪ್ರಕಟವಾದರೆ ಆ ದಿನವೆಲ್ಲ ಅನವಶ್ಯಕವಾಗಿ ಮಕ್ಕಳಿಗೆ ಬೈಯ್ಯುತ್ತಿರುತ್ತಾರೆ. ಬರಹಕ್ಕಿಂದ ಬದುಕು ಮುಖ್ಯ ಎಂದು ಬರೆಯುತ್ತಿಲ್ಲ.” ಎಂದಳು. ಒಂದು ಸಾಹಿತ್ಯಗೋಷ್ಠಿಯಲ್ಲಿ ಅಲ್ಲಿಯೇ ಅದ್ಭುತವಾದ ಆಶುಕವನವನ್ನು ರಚಿಸಿ, ಓದಿದ ಅವಳ ಪ್ರತಿಭೆ ಹಾಗೆಯೇ ಮಂಡಿಯೂರಿ ಕುಳಿತಿದೆ. ಅವಳು ತೆರೆದುಕೊಳ್ಳದಿದ್ದರೆ ನನಗೂ ಈ ವಿಷಯ ತಿಳಿಯುತ್ತಿರಲಿಲ್ಲ. ಎಲ್ಲರ ಹಾಗೇ ನಾನೂ ಅವಳನ್ನು ಒಬ್ಬ ಸಂತೃಪ್ತ ಗೃಹಿಣಿಯ ಪಟ್ಟದಲ್ಲಿಟ್ಟು ನೋಡುತ್ತಿದ್ದೆ.

ಇಷ್ಟೆಲ್ಲ, ಹೀಗೆಲ್ಲ ಇರುವಾಗಲೂ ತನ್ನ ಬದುಕಿನ ದಾರಿಯನ್ನು ಎಚ್ಚರದಿಂದ ಆಯ್ದುಕೊಂಡ ಅಮ್ರತಾ ಬಹಳ ಎತ್ತರದಲ್ಲಿ ನಿಲ್ಲುತ್ತಾರೆ, ಸಾಹಿತಿಯಾಗಿಯೂ ಮತ್ತು ಒಬ್ಬ ಅಪ್ಪಟ ಮಹಿಳೆಯಾಗಿಯೂ…….

‍ಲೇಖಕರು avadhi

October 19, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: