ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಕೇಟು ಹಿಡಿಯುವ ಒಂದು ಅರ್ಹತೆ ಬಿಟ್ಟರೆ, ಉಳಿದ ಅರ್ಹತೆಗಳಿಗೆ ವಿಧಾನ ಪರಿಷತ್ತಿನಲ್ಲಿ ಅವಕಾಶ ಸಿಕ್ಕಿದ್ದು ಬಹಳ ಕಡಿಮೆ

ನಾಮಕರಣದ ಬದಲು ಅರ್ಹತೆಯ ತೊಟ್ಟಿಲು ತೂಗಿದರೆ…?

rajaram tallur

ರಾಜಾರಾಂ ತಲ್ಲೂರು

ರಾಜ್ಯಸಭೆಗೆ ಕರ್ನಾಟಕದಿಂದ ಕನ್ನಡಿಗರಲ್ಲದವರನ್ನು ಆಯ್ದು ಕಳಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ. ಜೊತೆಗೆ, ಕರ್ನಾಟಕ ವಿಧಾನ ಪರಿಷತ್ತಿಗೂ ಖಾಲಿಯಾಗಿರುವ ಸ್ಥಾನಗಳ ಭರ್ತಿಗಾಗಿ ಚುನಾವಣೆ – ನಾಮಕರಣ ನಡೆಯುವುದಿದೆ. ಈ ಅರ್ಹತೆಗಳ ಚರ್ಚೆಯ ಹಿನ್ನೆಲೆಯಲ್ಲಿ, ಕರ್ನಾಟಕ ವಿಧಾನ ಪರಿಷತ್ತನ್ನು ಗಮನಿಸೋಣ.

ಕರ್ನಾಟಕ ವಿಧಾನ ಪರಿಷತ್ತಿಗೆ ನಾಮಕರಣ ಸದಸ್ಯರನ್ನು ಆಯ್ಕೆ ಮಾಡುವುದಕ್ಕೆ ಮಾನದಂಡದ ನಿಯಮಗಳು ಹೀಗನ್ನುತ್ತವೆ: “ರಾಜ್ಯಪಾಲರಿಂದ ನಾಮನಿರ್ದೇಶಿತರಾಗಬೇಕಾದ ಸದಸ್ಯರು ಕೆಳಕಂಡ ವಿಷಯಗಳಿಗೆ ಸಂಬಂಧಿಸಿದಂತೆ ಎಂದರೆ,- ಸಾಹಿತ್ಯ, ವಿಜ್ಞಾನ, ಕಲೆ, ಸಹಕಾರ ಚಳವಳಿ ಮತ್ತು ಸಮಾಜ ಸೇವೆಗಳಲ್ಲಿ ವಿಶೇಷ ಜ್ಞಾನವನ್ನು ಅಥವಾ ವ್ಯಾವಹಾರಿಕ ಅನುಭವವನ್ನು ಪಡೆದವರಾಗಿರತಕ್ಕದ್ದು.”

p mahamud on rajyasabhaಈ ನಿಯಮಗಳ ಹೊರತಾಗಿಯೂ ಬಕೇಟು ಹಿಡಿಯುವ ಒಂದು ಅರ್ಹತೆ ಬಿಟ್ಟರೆ, ಉಳಿದ ಅರ್ಹತೆಗಳಿಗೆ ವಿಧಾನ ಪರಿಷತ್ತಿನಲ್ಲಿ ಅವಕಾಶ ಸಿಕ್ಕಿದ್ದು ಬಹಳ ಕಡಿಮೆ ಎಂಬುದು ವಾಸ್ತವ. ಆಳುವ ಪಕ್ಷ ಮತ್ತು ರಾಜ್ಯಪಾಲರ ಮರ್ಜಿಗಳನ್ನು ಆಧರಿಸಿಯೇ ಈ ನಾಮಕರಣ ನಡೆಯುತ್ತಾ ಬಂದಿದೆ. ಹೀಗೆ ಆಯ್ಕೆ ಆಗಿ ಬಂದವರ ಸದನ ಚಟುವಟಿಕೆಗಳೂ ಬಹಳ ಸೀಮಿತ ಎಂಬುದು ಅನುಭವ.

ಈ ರೀತಿಯ ಮಾಯಕದಿಂದ ಯಾರನ್ನೋ ತರುವ ಬದಲು, ನಿಯಮಾನುಸಾರ ಮತ್ತು ಸಮಕಾಲೀನ ಪರಿಸ್ಥಿತಿಗೆ ಅನುಗುಣವಾದ ಬೇರೆ ಇತರ ಕ್ಷೇತ್ರಗಳಿಂದಲೂ ಜನರಿಂದ ಚುನಾಯಿತರಾದವರಿಗೆ ಯಾಕೆ ವಿಧಾನ ಪರಿಷತ್ತಿನಲ್ಲಿ ನಾಮಕರಣದ ಅವಕಾಶ ಸಿಗಬಾರದು?

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು, ಕರ್ನಾಟಕ ವಾಣಿಜ್ಯ ಚೇಂಬರ್ ಅಧ್ಯಕ್ಷರು, ಕರ್ನಾಟಕ ಚಲನಚಿತ್ರ ವಾಣಿಜ್ಯ ಚೇಂಬರ್ ಅಧ್ಯಕ್ಷರು, ಕರ್ನಾಟಕ ಬಾರ್ ಕೌನ್ಸಿಲ್ ಅಧ್ಯಕ್ಷರು, ಕರ್ನಾಟಕ ಚಾರ್ಟರ್ಡ್ ಅಕೌಂಟಂಟ್ಸ್ ಕೌನ್ಸಿಲಿನ ಅಧ್ಯಕ್ಷರು, ರಾಜ್ಯ ಸರಕು ವಾಹನ ಮಾಲಕರ ಸಂಘದ ಅಧ್ಯಕ್ಷರು, ಸರ್ಕಾರಿ ನೌಕರರ ಮಹಾ ಮಂಡಲದ ಅಧ್ಯಕ್ಷರು, ರಾಜ್ಯ ಕಾರ್ಮಿಕ ಸಂಘಗಳ ಫೆಡರೇಷನ್ ಮುಖ್ಯಸ್ಥರು, ಮಹಿಳಾ ಮಂಡಲ ಒಕ್ಕೂಟಗಳ ರಾಜ್ಯಾಧ್ಯಕ್ಷರು, ಸ್ವಸಹಾಯ ಸಂಘಗಳ ಒಕ್ಕೂಟದ ರಾಜ್ಯಾಧ್ಯಕ್ಷರು… ಹೀಗೆ ಚುನಾಯಿತ ಪದಾಧಿಕಾರಿಗಳಿರುವ ರಾಜ್ಯಮಟ್ಟದ ಸಂಘಟನೆಗಳ ಚುನಾಯಿತ ಅಧ್ಯಕ್ಷರು ಅಥವಾ ಆ ಸಂಸ್ಥೆ ನಾಮನಿರ್ದೇಶನ ಮಾಡಿರುವ ಸಂಘದ ಪ್ರತಿನಿಧಿ ಯಾಕೆ ವಿಧಾನ ಪರಿಷತ್ತಿಗೆ ನಾಮಕರಣಗೊಳ್ಳಬಾರದು?

ಇದರಿಂದ ಕೆಲವು ಲಾಭಗಳಿವೆ. ಒಂದು, ಇಲ್ಲಿಂದ ವಿಧಾನ ಮಂಡಲ ಹೊಕ್ಕುವ ಅವಕಾಶ ಇದೆಯೆಂದಾದರೆ, ಪ್ರಭಾವೀ ನಾಯಕರುಗಳೂ ಈ ಸಂಘಟನೆಗಳಲ್ಲಿ ಸಕ್ರಿಯರಾಗಿ, ಸಂಘಟನೆಗಳು ಬಲಗೊಳ್ಳಬಹುದು (ಅಥವಾ ಇನ್ನಷ್ಟು ರಾಡಿಗೊಳ್ಳಲೂ ಬಹುದು!) ಎರಡನೆಯದಾಗಿ, ತಾವು ಪ್ರತಿನಿಧಿಸುತ್ತಿರುವ ಸಂಘಟನೆಗಳ ಬೇಡಿಕೆಗಳು, ಸಮಸ್ಯೆಗಳು ಈ ಪ್ರತಿನಿಧಿಗಳಿಗೆ ಚೆನ್ನಾಗಿ ತಿಳಿದಿರುವುದರಿಂದ, ವಿಧಾನ ಪರಿಷತ್ತಿನಲ್ಲಿ ಅವರ ಸಮಸ್ಯೆಗಳ ಬಗ್ಗೆ ಚರ್ಚೆಗಳೂ ಅರ್ಥಪೂರ್ಣವಾಗುವ ಅವಕಾಶಗಳಿವೆ. ಮೂರನೆಯದಾಗಿ, ಈ ಸಂಘಟನೆಗಳು ಈ ಅವಕಾಶದ ಕಾರಣಕ್ಕೆ ಇನ್ನಷ್ಟು ವ್ಯವಸ್ಥಿತವಾಗಿ ರೂಪುಗೊಳ್ಳುತ್ತವೆ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ, ಬಕೆಟ್ ಹಿಡಿಯುವ, ದುಡ್ಡಿನ ಥೈಲಿಯ ರಾಜಕೀಯ “ನಾಮಕರಣದ” ವಿಷಯದಲ್ಲಿ ಹಿನ್ನೆಡೆ ಕಾಣಲಿದೆ.

ಹಾಲೀ ವಿಧಾನ ಪರಿಷತ್ತಿನಲ್ಲಿ 75 ಸದಸ್ಯರಿದ್ದು, ಅವರಲ್ಲಿ 25ಮಂದಿ ಚುನಾಯಿತ ವಿಧಾನ ಸಭಾ ಸದಸ್ಯರಿಂದಲೂ, 25 ಮಂದಿ ಸ್ಥಳೀಯಾಡಳಿತ ಸಂಸ್ಥೆಗಳಿಂದಲೂ, 7ಮಂದಿ ಪದವೀಧರ ಕ್ಷೇತ್ರಗಳಿಂದಲೂ, 7ಮಂದಿ ಶಿಕ್ಷಕ ಕ್ಷೇತ್ರಗಳಿಂದಲೂ ವಿಧಾನ ಪರಿಷತ್ತಿಗೆ ಆಯ್ಕೆ ಆಗುತ್ತಾರೆ, ಉಳಿದ 11 ಮಂದಿ ರಾಜ್ಯಪಾಲರಿಂದ ನಾಮಕರಣಗೊಳ್ಳಬೇಕಿದ್ದು, ಆ ಹನ್ನೊಂದು ಮಂದಿಯನ್ನು ಯಾಕೆ ಹನ್ನೊಂದು ರಾಜ್ಯಮಟ್ಟದ ಪ್ರಾತಿನಿಧಿಕ ಸಂಘಟನೆಗಳ ಪ್ರತಿನಿಧಿಗಳ ರೂಪದಲ್ಲಿ ನಾಮಕರಣ ಮಾಡಬಾರದು?

ಒಂದು ವೇಳೆ, ಇಂತಹ ವ್ಯವಸ್ಥೆಯಿಂದ ಎಲ್ಲ ಜನವರ್ಗಗಳಿಗೆ ಪ್ರಾತಿನಿಧ್ಯ ಸಿಗುವುದಿಲ್ಲ ಎಂದಾದರೆ, ಅಂತಹ ಜನವರ್ಗಗಳಿಗೂ ರಾಜ್ಯಮಟ್ಟದಲ್ಲಿ ಸಂಘಟನೆ ರೂಪಿಸಿ, ಅವರ ಪ್ರತಿನಿಧಿಗಳನ್ನು ಆಯ್ಕೆ ಮಾಡಬಹುದು. ಒಂದು ವೇಳೆ ಅರ್ಹ ಸಂಘಟನೆಗಳ ಸಂಖ್ಯೆ ಹೆಚ್ಚಿದ್ದಲ್ಲಿ ರೋಟೇಷನ್ ಮೇಲೆ ಅವಕಾಶ ಕೊಡಬಹುದು.

ಇಂತಹದೊಂದು ವ್ಯವಸ್ಥೆಯ ಬಗ್ಗೆ ಚರ್ಚೆ ನಡೆಯುವುದು ಆರೋಗ್ಯಕರ ಅಲ್ಲವೇ?

‍ಲೇಖಕರು Admin

28 May, 2016

2 Comments

  1. Arathi Ghatikar

    ಚಿಂತನೆ ಚೆನ್ನಾಗಿದೆ ! ಈ ರೀತಿಯ ವ್ಯವಸ್ತೆ (ವಿವಿದಃ ಸಂಘಗಳಿಗೆ ಆಗಲೇ ಅಧ್ಯಕ್ಷ ಸ್ಥಾನ ಅಲಂಕರಿಸಿದ ವ್ಯಕ್ತಿಗಳು ) ಬರಬೇಕಾದರೆ ನಮ್ಮ ರಾಜಕಾರಣಿಗಳು ಅಡ್ಡ ಗಾಲು ಹಾಕುತ್ತಾರಲ್ಲ !
    aarathi ghatikaar

    • ರಾಜಾರಾಂ ತಲ್ಲೂರು

      ಥ್ಯಾಂಕ್ಸ್. ಎಲ್ಲೋ ಒಂದು ಕಡೆ ಸಣ್ಣ ಬೆಂಕಿಕಿಡಿ ಹೊತ್ತಿಕೊಳ್ಳಲಿ ಅಂತ ಆಸೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading