ಅದು ಬದುಕಿನ ಸಂಗೀತಕ್ಕೆ ಸಂಬಂಧಿಸಿದುದು..

ಸಂಗೀತದ ಒಸಗೆ

girija shasthri

ಗಿರಿಜಾಶಾಸ್ತ್ರಿ

ನಮಿತಾ ದೇವಿದಯಾಳ್ ಅವರ 2007 ರಲ್ಲಿ ಪ್ರಕಟವಾದ ಮ್ಯೂಸಿಕ್ ರೂಮ್ ಎನ್ನುವ ಕೃತಿ ಸಂಗೀತ ಕ್ಷೇತ್ರದಲ್ಲಿ ಮಾತ್ರವಲ್ಲದೇ ಸಾಹಿತ್ಯ ಕ್ಷೇತ್ರದಲ್ಲಿಯೂ ಹೊಸ ಅಲೆಯನ್ನು ಎಬ್ಬಿಸಿದೆ. ಇದು ವೊಡೋಫೋನ್ ಕ್ರಾಸ್ ವರ್ಡ್ ಪಾಪ್ಯುಲರ್ ಪುಸ್ತಕ ಪ್ರಶಸ್ತಿಯನ್ನು ಪಡೆದುಕೊಂಡಿರುವುದಲ್ಲದೇ, ಪಂಡಿತ್ ರವಿಶಂಕರ್ ರವರಂತಹ ಪ್ರಸಿದ್ಧ ಸಂಗೀತ ಕಲಾವಿದರೇ ಅಲ್ಲದೇ ಸೋನಿಯಾ ಗಾಂಧಿಯಂತಹ ಅನೇಕ ರಾಜಕಾರಣಿಗಳಿಂದಲೂ ಪ್ರಶಂಸೆಗೆ ಒಳಗಾಗಿದೆ.

ಮೇಲುನೋಟಕ್ಕೆ ಈ ಕೃತಿ ಸಂಗೀತಕ್ಕೆ ಸಂಬಂಧಿಸಿದಂತೆ ಕಂಡುಬಂದರೂ ಇದು ಕೇವಲ ‘ತಾಳ ಮಾನ ಸರಿ ಸಮಗಳ, ಓಜೆ ಬಜಾವಣೆಯ ಲೆಕ್ಕಗಳ’ ಶುದ್ಧ ಸಂಗೀತ ಶಾಸ್ತ್ರ ಕೃತಿಯಲ್ಲ. ಅದು ಬದುಕಿನ ಸಂಗೀತಕ್ಕೆ ಸಂಬಂಧಿಸಿದುದು. ಹಾಗೆಂದೇ ಅಷ್ಟು ಆಕರ್ಷಣೀಯವಾದುದು ಮತ್ತು ಗಮನಾರ್ಹವಾದುದು. ಇದು ಸಂಗೀತ ಮತ್ತು ಬದುಕಿನ ನಡುವಿನ ಎಲ್ಲಾ ಗೋಡೆಗಳನ್ನು ಕೆಡವಿಬಿಡುತ್ತದೆ. ಇಲ್ಲಿ ಮನುಷ್ಯ ಸಂಬಂಧದ ಸಂಕೀರ್ಣ ಎಳೆಗಳನ್ನು ಸಂಗೀತದ ವಿವಿಧ ವಿನ್ಯಾಸಗಳಿಂದ ಹೆಣೆಯಲಾಗಿದೆ. ಆದುದರಿಂದಲೇ ಓದುಗರಿಗೆ ಇದು ಒಂದು ಅಖಂಡ ಅನುಭವವನ್ನು ತಂದುಕೊಡುತ್ತದೆ.

the music room cover2ಇಲ್ಲಿ ಸಾವು, ಬಡತನ, ನೋವು, ಕಾಮ ಪ್ರೇಮ, ಈರ್ಷ್ಯೆ, ಲಾಲಸೆ, ಲೌಕಿಕ ವೈಭವ, ಅಧ್ಯಾತ್ಮ ಪ್ರಕಾಶ ಈ ಎಲ್ಲ ಬದುಕಿನ ರೂಪಗಳೂ ಹಿಂದೂಸ್ಥಾನೀ ಸಂಗೀತವೆಂಬ ಸಾಗರದಲ್ಲಿ ಅಂರ್ತಗತವಾಗಿದೆ. ಹಿಂದೆ ಒಮ್ಮೆ ಜಿ.ಎಸ್.ಎಸ್. ಅವರು ಕರ್ನಾಟಕ ಸಂಗೀತ ಮತ್ತು ಉತ್ತರಾದಿ ಸಂಗೀತಗಳ ಬಗ್ಗೆ ಹೇಳುವಾಗ, ಉತ್ತರ ಭಾರತದ ನದಿಗಳಂತೆ ಅಲ್ಲಿನ ಸಂಗೀತವೂ ಕೂಡ ಧೀರ್ಘ, ಆಳ ಮತ್ತು ಅಷ್ಟೇ ಗಂಭೀರವಾದುದು ಎಂದಿದ್ದರು. ಹಿಂದೂಸ್ಥಾನೀ ಸಂಗೀತ ಕಲಾವಿದರ ಬದುಕು ಮತ್ತು ಸಾಧನೆಗಳ ಸುತ್ತ ವ್ಯಾಪಿಸಿರುವ ಈ ಕೃತಿ ಜಿ.ಎಸ್. ಎಸ್. ಅವರ ಮಾತುಗಳಿಗೆ ಒಂದು ರೂಪಕವಾಗಿದೆ.

ಇಂಗ್ಲಿಷಿನಲ್ಲಿ ‘ಸಂಗೀತಕ್ಕೆ ಭಾಷೆಯೆಂಬುದಿಲ್ಲ’ (Music knows no language) ಎಂಬ ಮಾತಿದೆ. ನಿಜ, ಸಂಗೀತಕ್ಕೆ ಮನುಷ್ಯ ನಿರ್ಮಿತವಾದ ಒಂದು ಭಾಷೆಯಿಲ್ಲ. ಮನುಷ್ಯ ನಿರ್ಮಿತವಾದ ಭಾಷೆಗೆ ಅಡ್ಡಗೋಡೆಗಳೇ ಹೆಚ್ಚು. ಗೋಡೆ ದಾಟಲು ದುಬಾಷಿಗಳ ಸಹಾಯವಿಲ್ಲದೇ ಸಾಧ್ಯವಿಲ್ಲ. ಆದರೆ ಸಂಗೀತದ ಭಾಷೆ ಪ್ರೇಮ. ಅದು ಎಲ್ಲ ಗೋಡೆಗಳನ್ನೂ ಏಕ ಕಾಲಕ್ಕೆ ಒಡೆದು ಹಾಕಬಲ್ಲುದು.

ಇದಕ್ಕೆ ಬಹಳ ಒಳ್ಳೆಯ ಉದಾಹರಣೆಯೆಂದರೆ ಬಿ. ಎಂ. ಶ್ರೀ ಯವರ ಪ್ರಸಿದ್ಧವಾದ ‘ವಸಂತ ಬಂದ’ ಎನ್ನುವ ಕವಿತೆ. ಈ ಕವಿತೆ ಎಷ್ಟು ಸಶಕ್ತವಾಗಿದೆಯೆಂದರೆ ಅದು ಬಹಳ ದಿನಗಳವರೆಗೆ, ಬಹಳ ಜನರಿಗೆ ಅದು ನ್ಯಾಷ್ ಕವಿಯ ‘Spring’ ಎಂಬ ಇಂಗ್ಲಿಷ್ ಕವಿತೆಯ ಅನುವಾದವೆಂದು ತಿಳಿದಿರಲಿಲ್ಲ. ಈ ಪದ್ಯವನ್ನು ಇಂಗ್ಲಿಷಿನಿಂದ ಕನ್ನಡಕ್ಕೆ ತರುವಾಗ ಬಿ.ಎಂ.ಶ್ರೀ ಯವರು 4 ಮತ್ತು 8ನೆಯ ಸಾಲಿನಲ್ಲಿ ಅನುರಣಗೊಳ್ಳುವ ಕೂಹೂ.. ಜಗ್ ..ಜಗ್.. ಟೂವ್ವೀ.. ಟೂವಿಟ್ಟವು… (cuckoo – jug-jug- pu -we tu witta-woo) ಎಂಬ ಸಾಲನ್ನು ಆಶ್ಚರ್ಯಕರವಾಗಿ, ಇಂಗ್ಲಿಷಿನಲ್ಲಿ ಇರುವ ಹಾಗೆಯೇ ಇಟ್ಟಿದ್ದಾರೆ (ಕುಕೂ ಎನ್ನುವುದು ಕುಹೂ ಆಗಿರುವುದನ್ನು ಬಿಟ್ಟರೆ). ಇಂಗ್ಲಿಷಿನ ‘ಟೂ-ವಿಟ್ಟವೂ’ ಎನ್ನುವ ಹಕ್ಕಿಯ ಧ್ವನಿ ಕನ್ನಡದಲ್ಲಿ ಕ್ರಿಯಾಪದವಾಗಿ ಸಾರ್ಥಕವಾಗಿಬಿಟ್ಟಿದೆ.

ಈ ಸಾಲುಗಳಲ್ಲಿರುವುದು ಹಕ್ಕಿಯ ಕೂಗು. ಹಕ್ಕಿಯ ಕೂಗಿಗೆ ಅನುವಾದ ಬೇಕಿಲ್ಲ. ಇಂಗ್ಲೆಂಡಿನ ಕುಕೂ, ಸೈಬೀರಿಯನ್ ಫ್ಲೆಮಿಂಗೋಗಳು ನಮ್ಮ ಕೋಗಿಲೆ , ಹಂಸಗಳ ಜೊತೆಗೆ ಸುಲಭವಾಗಿ ಸಂವಹನಿಸಬಲ್ಲವು. ಅಲ್ಲಿಂದ ಇಲ್ಲಿಗೆ ಇಲ್ಲಿಂದ ಅಲ್ಲಿಗೆ ಹಾರಿ ಬರಬಲ್ಲವು. ಆದರೆ ಮನುಷ್ಯನಿಗೆ ಮಾತ್ರ ತಾನು ನಿರ್ಮಿಸಿಕೊಂಡಿರುವ ಸಂಕೀರ್ಣ ಗೋಡೆಗಳ ಕಾರಣದಿಂದಾಗಿ ತನ್ನ ಮನೆಯ ಹಿತ್ತಲನ್ನೂ ದಾಟಲು ಅಸಾಧ್ಯವಾಗಿದೆ. ಬಿ.ಎಂ.ಶ್ರೀಯವರು ತಮ್ಮ ಅನುವಾದದಲ್ಲಿ ಪ್ರಜ್ಞಾಪೂರ್ವಕವಾಗಿ ಮೂಲವನ್ನು ಬದಲಾಯಿಸದೇ ಉಳಿಸಿಕೊಂಡಿರುವ ಹಕ್ಕಿಯ ಹಾಡಿನ ಈ ಸಾಲುಗಳು ಸಂಗೀತದ ಸೀಮಾತೀತ ನೆಲೆಗೆ ಪ್ರತೀಕವಾಗಿದೆ.

ಈ ‘ಸಂಗೀತ ಕೋಣೆ’ ಯಲ್ಲಿ ಕಥೆ ಪ್ರಾರಂಭವಾಗುವುದು ಅದರ ಅಂತ್ಯದಿಂದ. ಲೇಖಕಿ ಈ ಭಾಗವನ್ನು ‘ಭೈರವಿ’ ಎಂದು ಕರೆದಿದ್ದಾರೆ. ಈ ಕೃತಿ ತೆರೆದು ಕೊಳ್ಳುವುದು ‘ಭೈರವಿ’ ಯ ಮೂಲಕ. ಆದರೆ ಹಿಂದೂಸ್ಥಾನೀ ಪದ್ಧತಿಯಲ್ಲಿ ‘ಭೈರವಿ’ ಬರುವುದು ಸಂಗೀತ ಕಚೆೇರಿಯೊಂದರ ಮುಕ್ತಾಯದಲ್ಲಿ. ಕಲಾವಿದೆಯೊಬ್ಬಳು ಭೈರವಿ ಪ್ರಾರಂಭಿಸಿದಳೆಂದರೆ ತನ್ನ ಸಂಗೀತ ಕಚೇರಿಯ ಮುಕ್ತಾಯ ಹಂತಕ್ಕೆ ಬಂದಳು ಎಂದೇ ಅರ್ಥ. ಆದರೆ ‘ಸಂಗೀತ ಕೋಣೆ’ಯಲ್ಲಿ ಭೈರವಿಯದ್ದು ಪ್ರಥಮ ಆಲಾಪ. ಬದುಕಿನ ಕೊನೆಯಲ್ಲಿ ನಿಂತು ಬದುಕನ್ನು ಹಿಂತಿರುಗಿ ನೋಡಿದಾಗ ಅದರ ಸಾರ್ಥಕ ಮಜಲುಗಳು ಗೋಚರವಾಗುವುದರ ಜೊತೆಗೆ ಬದುಕಿಗೆ ಒಂದು ಪೂರ್ಣ ದೃಷ್ಟಿಯೂ ಪ್ರಾಪ್ತವಾಗುತ್ತದೆ.

ಈ ಕೃತಿಯ ನಾಯಕಿ ಧೋಂಡುತಾಯಿಗೆ ಇಂತಹ ಒಂದು ದೃಷ್ಟಿ ಪ್ರಾಪ್ತವಾದ ಕುರುಹಾಗಿ ಅವಳು ಹಾಡಿನಲ್ಲಿ ತಲ್ಲೀನಳಾಗಿ ಅದರ ಗರಿಷ್ಠ ಎತ್ತರಕ್ಕೆ ಏರುವಾಗ ಅವಳ ಮುಚ್ಚಿದ ಕಣ್ಣುಗಳ ಒಳಗೆ ಈ ರಾಗದ ಅಧಿದೇವತೆಯಾದ ಭೈರವಿ ಮಿಂಚಿ ಮಾಯವಾಗುತ್ತಾಳೆ.  “As she reached the raga’s highest and most sublime note, she heard a sigh of pleasure and the goddess appeared before her, smiling. Startled, Dhondutai shut her eyes, and when she opened them, the vision was gone” (pg.4).

ರಾಗದ ಪ್ರಸ್ತುತಿಯೊಂದು ಹೇಗಿರಬೇಕೆಂದರೆ ಹಾಡು ಪ್ರಾರಂಭಿಸಿದ ಮರುಕ್ಷಣದಲ್ಲೇ ಹಾಡುವ ಮತ್ತು ಕೇಳುಗರ ಮುಂದೆ ಸಾಕ್ಷಾತ್ತಾಗಿ ಆ ರಾಗ ಬಂದು ನಿಲ್ಲುವಂತಿರಬೇಕು ಎಂದು ಕೃತಿಯ ಪ್ರಾರಂಭದಲ್ಲಿಯೇ ಬರುವ ಪ್ರಸಿದ್ಧ ಸಿತಾರ್ ವಾದಕ ವಿಲಾಯತ್ ಖಾನನ ಈ ಮಾತುಗಳು ಧೋಂಡೂತಾಯಿಯ, ಮೇಲಿನ ಅನುಭವಕ್ಕೆ ಮುನ್ನಡಿಯಾಗಿದೆ.

ಸಂಗೀತದ ಭಾಷೆಯೆಂದರೆ ‘ಅನಿಯಂತ್ರಿತ ಪ್ರೇಮ’ ಎಂದೆ. ಆದುದುದರಿಂದಲೇ ಬಹುಶಃ ಅದನ್ನು ದೈವಿಕತೆಯ ಜೊತೆಗೆ ಸಮೀಕರಿಸಲಾಗಿದೆ. ಕರ್ನಾಟಕ ಸಂಗೀತದಲ್ಲಂತೂ ‘ಭಕ್ತಿಯ ವಿನಾ ಸಂಗೀತ ಜ್ಞಾನ’ ವೆಂಬುದು ಶೂನ್ಯ. ಭಕ್ತಿಯಿಂದ ಕೂಡಿದ ಸಂಗೀತ ಸನ್ಮಾರ್ಗಕ್ಕೆ ಒಯ್ಯಬಲ್ಲದು ಎಂಬ ನಂಬಿಕೆ. ಅದು ದೈವಿಕತೆಯ ಪರಿಕಲ್ಪನೆಯಲ್ಲಿಯೇ ಉಳಿದಿರುವುದನ್ನು ಲೇಖಕಿ ಗುರುತಿಸುತ್ತಾಳೆ. ಆದರೆ ಹಿಂದೂಸ್ಥಾನೀ ಸಂಗೀತ ಕರ್ನಾಟಕ ಸಂಗೀತದಂತೆ ಪೂರ್ತಿ ದೈವಿಕವಾಗಿ ಉಳಿಯಲಿಲ್ಲ ಅದರೊಳಗೆ ರಂಜನೀಯ ಗುಣ ಕೂಡ ಹೊಕ್ಕಿದೆ ಎಂದು ಲೇಖಕಿ ಅಭಿಪ್ರಾಯಪಡುತ್ತಾಳೆ.

namitha music roomವಿಪ್ರಲಂಭ ಶೃಂಗಾರವನ್ನು ವೈಭವೀಕರಿಸುವ ‘ಠುಮ್ರಿ’ಯೆಂಬ ಲಘು ಪ್ರಬೇಧ ಹುಟ್ಟಿಕೊಂಡದ್ದೇ ಅದಕ್ಕೆ ಕಾರಣ. (ಆದರೆ ಕರ್ನಾಟಕ ಸಂಗೀತದಲ್ಲಿ ಇಂತಹ ಪ್ರಬೇಧ ಹುಟ್ಟಿಕೊಳ್ಳಲಿಲ್ಲ.) ಠುಮ್ರಿ ಹಾಡುವುದರ ಬಗ್ಗೆ ಮಡಿವಂತರ ಆಕ್ಷೇಪ ಕೂಡ ಇದೆ. ಆದರೆ ನಿಜವಾಗಿ ನೋಡಿದರೆ ಯಾವ ಸಂಗೀತದಲ್ಲಿಯೇ ಆಗಲೀ ‘ಸತಿ ಪತಿಗಳೊಂದಾಗುವ’ ಭಕ್ತಿಯ ತೀವ್ರತೆ ವ್ಯಕ್ತವಾಗುವುದು ವಿಪ್ರಲಂಭ ಶೃಂಗಾರಗಳ ಉತ್ಕಟ ಯೋಗ ರೂಪದಲ್ಲಿಯೇ. ವೇದಗಳ ಮೂಲದಲ್ಲಿದ್ದ ಸಂಗೀತವು ಮೊಗಲರ ಕೈಯಿಗೆ ಸಿಕ್ಕಿ ಹಾದಿ ತಪ್ಪಿರುವುದರಿಂದ ಅದನ್ನು ಅವರ ಕೈಯಿಂದ ಮತ್ತೆ ಪಡೆದುಕೊಳ್ಳಬೇಕು ಎನ್ನುವ ಧೋಂಡೂತಾಯಿಯ ತಂದೆ ಗಣಪತ್ ರಾವ್ ನ ಬಯಕೆಯ ಹಿಂದೆ ಹಿಂದೂಸ್ತಾನೀ ಸಂಗೀತಕ್ಕೆ ತಗುಲಿರುವ ಮೈಲಿಗೆಯನ್ನು ಕಳೆಯಬೇಕೆಂಬ ಪ್ಯೂರಿಟಾನ್ ದೃಷ್ಟಿಕೋನವೇ ಅಡಗಿದೆ. ಇದು ವಿಕ್ಟೋರಿಯನ್ ಯುಗದ ಹುಸಿ ಮೌಲ್ಯವೂ ಹೌದು. ಆದರೆ ನಿಜವಾಗಿ ಮೊಗಲರು ಹಾಗೂ ಕಲಾವಂತರಿಂದಲೇ ಈ ಸಂಗೀತ ಭಾರತದಲ್ಲಿ ಬೆಳಕಿಗೆ ಬಂದುದು, ಅಲ್ಲದೇ ಪರ್ಷಿಯಾದ ದೇಶದಿಂದ ಬಂದ ಅಮೀರ್ ಖುಸ್ರುವೇ ಈ ಸಂಗೀತಕ್ಕೆ ಬುನಾದಿ ಹಾಕಿದನೆಂಬ ವಾದವೂ ಇದೆಯೆಂಬ ಸತ್ಯವನ್ನು ಲೇಖಕಿ ಬಯಲಾಗಿಸುತ್ತಾಳೆ.

ಈ ಕೃತಿ ಐದು ಭಾಗಗಳಲ್ಲಿ ಕಲಾವಿದರ ಕಥೆಗಳನ್ನು ಹಿಂದಕ್ಕೆ ಮುಂದಕ್ಕೆ ಚಲಿಸುತ್ತಾ ಮುಂದುವರೆಯುತ್ತದೆ. ‘ಭೈರವಿ’ಯಿಂದ ಪ್ರಾರಂಭವಾಗುವ ಇದು ‘ಬೊರಿವಲಿ’ಯಲ್ಲಿ ಬಂದು ನಿಲ್ಲುವಾಗ ತಾನು ಹೊರಟ ಕಡೆಗೇ ಬಂದು ನಿಂತು ಒಂದು ಆವರ್ತನವನ್ನು ಮುಗಿಸುತ್ತದೆ. ಈ ಆವರ್ತನದೊಳಗೆ ಕೆನಡಿ ಬ್ರಿಜ್ ನಿಂದ ಪ್ರಾರಂಭವಾದ ಲೇಖಕಿಯ ಪಯಣ ಅನೇಕ ಕಥೆಗಳನ್ನು ಜೋಡಿಸುತ್ತಾ ಹೋಗುವ ಒಂದು ಸೂತ್ರವಾಗಿದೆ. ಎಲ್ಲ ಕಥೆಗಳನ್ನೂ ಸಾಕ್ಷಿ ಪ್ರಜ್ಞೆಯಿಂದ ಹೆಣೆಯುವ, ಎಲ್ಲಾ ನಿರ್ಣಯಗಳನ್ನೂ ಓದುಗರಿಗೇ ಬಿಡುವ ಲೇಖಕಿಯ ವಸ್ತುನಿಷ್ಠ ದೃಷ್ಟಿಕೋನ ಆರೋಗ್ಯಕರವಾದುದು.

ಈ ಆವರ್ತನದಲ್ಲಿ ಪರಸ್ಪರ ವಿರುದ್ಧ ದಿಕ್ಕಿನಲ್ಲಿ ತಿರುಗುತ್ತಿರುವ ಎರಡು ಮುಖ್ಯ ಪಾತ್ರಗಳೆೆಂದರೆ ಕೇಸರೀ ಬಾಯಿ ಮತ್ತು ಧೋಂಡೂತಾಯಿಯದು. ಹಿಂದೂಗಳಾದ ಈ ಇಬ್ಬರೂ ಸುತ್ತುವುದು ಗುರುಗಳಾಗಿ ಬರುವ ಖಾನಸಾಹೇಬರುಗಳ ಸುತ್ತ. ಕೇಸರಿ ಬಾಯಿ ವ್ಯಕ್ತಿತ್ವ ಹೊಳೆವ ಕತ್ತಿಯ ಅಲಗಿನಂತೆ. ಅವಳು ಝಗ ಝಗಿಸುವ ವಿದ್ಯುತ್ ದೀಪವಾದರೆ, , ಧೋಂಡೂತಾಯಿ ದೇವರ ಕೋಣೆಯಲ್ಲಿ ಮಂದವಾಗಿ ಉರಿಯುವ ಹಣತೆ.

ಕೇಸರಿ ಬಾಯಿಯ ಒರಟುತನ, ನಿರ್ಭಿಡೆ, ಸಂಗೀತದ ಪ್ರಾವೀಣ್ಯತೆ, ಅಲಂಕಾರ ಪ್ರಿಯತೆ, ತನ್ನನ್ನು ಸಾಬೀತು ಪಡಿಸಬೇಕೆಂಬ ಛಲ, ಅವಳ ವೈಭವ, ವಜ್ರ ವೈಡೂರ್ಯದ ಸಿರಿವಂತಿಕೆ ಎಲ್ಲವೂ ಅವಳ ಕುಲ ಕಸುಬಿಗೆ (ಗಣಿಕೆ) ಅನಿವಾರ್ಯವಾದ ಬಹಿರ್ಮುಖೀ ಸ್ವರೂಪವನ್ನು ಬಯಲಾಗಿಸುತ್ತದೆ. ಆದರೆ ಅದೇ ಧೋಂಡೂ ತಾಯಿಯ ಬದುಕು ಅಂತರ್ಮುಖಿಯಾದ್ದು ಅನುಭಾವೀ ಸ್ವರೂಪಿಯಾದದ್ದು. ಅವಳು ಚಹಾ ಮಾಡುವುದರಿಂದ ಹಿಡಿದು ಪೂಜೆ ಮಾಡುವ ಪ್ರಾರ್ಥನೆ ಮಾಡುವ, ಅಡುವ ಉಡುವ ಎಲ್ಲಾ ಕ್ರಿಯಗಳಲ್ಲಿ ಒಂದು ರೀತಿಯ ಆನುಭಾವಿಕ ತಾದಾತ್ಮ್ಯವನ್ನು ಕಾಣುತ್ತೇವೆ. ಚಹಾವನ್ನು ಬೆರೆಸುವುದೂ ಕೂಡಾ ಅವಳು ಎರಡು ರಾಗಗಳನ್ನು ಬೆರೆಸುವಂತೆಯೇ.

ಕೇಸರೀ ಬಾಯಿ ಶ್ರೀಮಂತ ಶೋತೃಗಳಿಗಾಗಿ ಅವರನ್ನು ಮೆಚ್ಚಿಸುವುದಕ್ಕಾಗಿ ಹಾಡಿದರೆ, ಧೋಂಡೂತಾಯಿಯ ಎದುರು ಶೋತೃಗಳಿದ್ದರೂ ತನ್ನ ಆತ್ಮ ತೃಪ್ತಿಗಾಗಿ ಹಾಡುತ್ತಾಳೆ. ಕೇಸರೀ ಬಾಯಿಗೆ ಲಾಲಸೆಯಿದ್ದರೆ. ಧೋಂಡೂ ತಾಯಿಗೆ ಅರ್ಪಣಾ ಮನೋಭಾವವಿದೆ. ಕೇಸರೀ ಬಾಯಿ ಅತ್ಯಂತ ಆಧುನಿಕಳು, ಆಗಿನ ಕಾಲದಲ್ಲಿಯೇ (ಹತ್ತೊಂಬತ್ತನೆಯ ಶತಮಾನದ ಕೊನೆ) ತೋಳಿಲ್ಲದ ರವಿಕೆ ತೊಡುವ, ವಾರೆ ಬೈತಲೆ ತೆಗೆಯುವ, ಸೆರಗಿನಿಂದ ಮುಚ್ಚದ ತನ್ನ ಬೆತ್ತಲೆ ತೋಳನ್ನು ಪ್ರದರ್ಶಿಸುತ್ತಾ ನೆರೆದ ಗಂಡಸರ ಮಧ್ಯೆ ನಡೆದು ಹೋಗುವ ಅವರ ಕೈ ಕುಲುಕುವ ಎದೆಗಾರಿಕೆಯವಳು. ಆದರೆ ಧೋಂಡೂತಾಯಿ ತನ್ನ ಪೂಜೆ, ಪ್ರಾರ್ಥನೆ, (ಮೂಢ?) ನಂಬಿಕೆಗಳ ಜೊತೆಗೆ, ಹೊಟ್ಟೆ ಪಾಡಿಗಾಗಿ ನವೆಯುತ್ತಾ ತನ್ನ ಆತ್ಮ ಸಂಗೀತಕ್ಕೆ ತನ್ನನ್ನೇ ಅನಿಯಂತ್ರಿತವಾಗಿ ಅರ್ಪಿಸಿಕೊಂಡವಳು. ತನ್ನ ಬ್ರಾಹ್ಮಣ್ಯದ ನಿಷ್ಠುರ ಕೋಶದಿಂದ ಹೊರಬರದವಳು.

ಈ ಇಬ್ಬರೂ ಒಂದೇ ಸಾಮಜಿಕ ಕಾಲದಲ್ಲಿ ಬದುಕಿದವರು. ಹಾಗೆ ನೋಡಿದರೆ ಧೋಂಡೂತಾಯಿಯ ಗುರುವಾದ ಕೇಸರಿ ಬಾಯಿ ಕಾಲದಲ್ಲಿ ತನ್ನ ಶಿಷ್ಯಳಿಗಿಂತ ಹಳಬಳಾದರೂ ಆಧುನಿಕತೆಯಲ್ಲಿ ಅವಳಿಗಿಂತ ಅರ್ಧಶತಮಾನ ಮುಂದಿರುವವಳು. ಜಗತ್ತಿಗೆ ಕಾಣುವುದು ಕಣ್ಣು ಕುಕ್ಕುವ ಬೆಳಕೇ ಹೊರತು, ದೇವರ ಮುಂದಿನ ಹಣತೆಯಲ್ಲ. ಆದುದರಿಂದಲೇ ಕೇಸರೀಬಾಯಿಯ ಬದುಕಿನ ಉಪಾಯಗಳನ್ನು ಆತ್ಮಸಾತ್ ಮಾಡಿಕೊಳ್ಳಲಾರದ ಧೋಂಡೂತಾಯಿ ಅವಳಷ್ಟು ಪ್ರಸಿದ್ಧಿಗೆ ಬರುವುದಿಲ್ಲ. ಈ ಇಬ್ಬರೂ ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ತಮ್ಮದೇ ರೀತಿಯಲ್ಲಿ ಸಂಗೀತ ಪ್ರಪಂಚದೊಳಗೆ ಮಿಂಚಿದರೂ, ಸಾಮಾಜಿಕ ಪ್ರಪಂಚದ ಬಂಧನದಲ್ಲಿ ಸೊರಗುತ್ತಾರೆ. ಹೆಣ್ಣಿಗೆ ಪಿತೃಪ್ರಧಾನ ವ್ಯವಸ್ಥೆಯ ದೇಣಿಗೆ ಇದು.

ಕೇಸರೀಬಾಯಿ ಕೇಸ್ಕರ್

ಕೇಸರೀಬಾಯಿ ಕೇಸ್ಕರ್

ಕಲಾವಂತಳಾದ ಕೇಸರಿ ಬಾಯಿಗೆ ಸ್ವಾತಂತ್ರ್ಯವಿದೆ ಆದರೆ ಸಾಮಾಜಿಕ ಘನತೆಯಿಲ್ಲ. ಬ್ರಾಹ್ಮಣ ಕುಟುಂಬದಿಂದ ಬಂದ ಧೋಂಡೂತಾಯಿಗೆ ಸಾಮಾಜಿಕ ಘನತೆಯಿದೆ, ಆದರೆ ಕೇಸರಿ ಬಾಯಿಯ ಸ್ವಾತಂತ್ರ್ಯವಿಲ್ಲ. ಸಂಗೀತದ ಮೂಲಕವೇ ಕೇಸರೀ ಬಾಯಿ ತನ್ನ ಸಾಮಾಜಿಕ ಅಡ್ಡ ಗೋಡೆಗಳನ್ನು ಮೀರುತ್ತಾಳೆ. ಧೋಂಡೂತಾಯಿಗೆ ತನ್ನ ಒಳಗಿನ ಮಡಿವಂತಿಕೆಯನ್ನು ಮೀರಲು ಅಸಾಧ್ಯವಾದರೂ ಹೊರಗಿನ ಧಾರ್ಮಿಕ ಅಡ್ಡಗೋಡೆಗಳನ್ನು ಮೀರಲು ಸಹಾಯಕವಾಗುವುದು ಸಂಗೀತವೇ.

ಈ ಮೀರುವ ಪ್ರಕ್ರಿಯೆ ನಾಲ್ಕು ತಲೆಮಾರುಗಳಲ್ಲಿ ಸತತವಾಗಿ ನಡೆದು ಬರುತ್ತದೆ. ಜಯಪುರ ಘರಾನವನ್ನು ಹುಟ್ಟು ಹಾಕಿದ ಅಲ್ಲಾದೀಯಾ ಖಾನ್ ನಿಂದ ಅವನ ಶಿಷ್ಯೆ ಕೇಸರೀ ಬಾಯಿಗೆ, ಕೇಸರೀ ಬಾಯಿಯ ಶಿಷ್ಯೆಯಾದ ಧೋಂಡೂತಾಯಿಯ ಮೂಲಕ ಅವಳ ಶಿಷ್ಯೆ ನಮಿತಾಳಿಗೆ ಅದು ಹರಿದು ಬರುತ್ತದೆ. ಮುಸಲ್ಮಾನನಾದ ಅಲ್ಲಾದೀಯಾ ಖಾನ್ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಕುಳಿತು ಹಾಡುತ್ತಾನೆ. ಧೋಂಡೂತಾಯಿಯನ್ನು ಮೊಮ್ಮಗಳಂತೆ ಪ್ರೀತಿಸುತ್ತಾನೆ. ಅವನ ಮಗ ಬಾಬ ಅವಳಿಗೆ ತನ್ನೆಲ್ಲಾ ವಿದ್ಯೆಯನ್ನು ಧಾರೆ ಎರೆಯುತ್ತಾನೆ. ಅವರ ನಡುವಿನ ಅನನ್ಯವಾದ ಸಂಬಂಧಕ್ಕೆ ಧರ್ಮ ಅಡ್ಡ ಬರುವುದಿಲ್ಲ. ಧೋಂಡೂತಾಯಿಯ ಮನೆಯ ಗೋಡೆಯ ಮೇಲೆ ಅಲ್ಲಾದೀಯಾ ಖಾನ್ ಶಾಶ್ವತವಾಗಿ ಪೂಜೆಗೊಳ್ಳುತ್ತಾನೆ.

ಕೊನೆಗೆ ಧೋಂಡೂತಾಯಿ ಮತ್ತು ಲೇಖಕಿ, ಅಲ್ಲಾದೀಯಾ ಖಾನ್ ಹಾಡುತ್ತಿದ್ದ, ಅವನು ಸತತವಾಗಿ ಒರಗಿಕೊಂಡು ಎಣ್ಣೆ ಜಿಡ್ಡಾದ ಮಹಾಲಕ್ಷ್ಮಿ ದೇವಸ್ಥಾನದ ಕಂಬಕ್ಕೆ ಒರಗಿ ಹಾಡುವುದು ಅಡ್ಡಗೋಡೆಗಳನ್ನು ಮೀರುವ ಪರಂಪರೆಯ ಮುಂದುವರಿಕೆಯಾಗಿದೆ. ಕೊನೆಗೆ ಲೇಖಕಿ ನಮಿತಾ ತನ್ನ ಶ್ರೀಮಂತ ಉದ್ಯಮೀ ಕುಟುಂಬದ ಹುಸಿ ಮೌಲ್ಯಗಳನ್ನು ಮೀರಲು ಸಾದ್ಯವಾಗುವುದು ಬಡವಳಾದ ಆದರೆ ಪ್ರತಿಭಾವಂತಳಾದ ಧೋಂಡೂತಾಯಿಯ ಶಿಷ್ಯೆಯಾಗುವುದರ ಮೂಲಕವೇ.

ಈ ಎಲ್ಲರನ್ನೂ ಬೆಸೆಯುವುದು ಸಂಗೀತವೇ ಆದರೂ, ಅವರ ಸಾಮಾಜಿಕ ಹಿನ್ನೆಲೆ ಅವರನ್ನು ಬಂಧಿಸಿದೆ. ಎಲ್ಲಾ ಬಂಧನಗಳನ್ನೂ ಹರಿಯುವ ಸಾಮರ್ಥ್ಯ ಸಂಗೀತಕ್ಕೆ ಇದೆ ಎನ್ನುವುದು ನಿಜವಾದರೂ, ನಮ್ಮ ಸಾಮಾಜಿಕ ಸಂರಚನೆ ಅದರ ವಿರುದ್ಧದ ನೆಲೆಯಲ್ಲಿ ಕೆಲಸ ಮಾಡುತ್ತದೆ. ಸಮಾಜಕ್ಕೆ ಛಿದ್ರಗೊಳಿಸುವ ಆಸಕ್ತಿಯಿದ್ದರೆ ಸಂಗೀತಕ್ಕೆ ಬೆಸೆಯುವ ಅದಮ್ಯ ಉತ್ಸಾಹವಿದೆ. ಆದುದರಿಂದಲೇ ಸಂಗೀತ ನಮ್ಮ ವ್ಯವಸ್ಥೆಗೆ ಒಂದು ವೈರುಧ್ಯ ರೂಪಕವಾಗಿದೆ.

ಈ ಕೃತಿಯ ಪ್ರಾರಂಭದಲ್ಲಿ ಸಂಗೀತದ ಉಗಮಕ್ಕೆ ಸಂಬಂಧಿಸಿದಂತೆ ಒಂದು ಕಥೆ ಬರುತ್ತದೆ. ಅಲ್ಲಾಹು ಒಮ್ಮೆ ತನ್ನ ದೇವತೆಗಳಿಗೆ ಹಜರತ್ ಅದಾಮ್ ಆಲೇಹೋಸ್ ಸಲಾಮ್ ಎನ್ನುವ ಸಂತನೊಬ್ಬನ ಮಣ್ಣಿನ ಪ್ರತಿಮೆಯನ್ನು ಮಾಡಲು ಹೇಳುತ್ತಾನೆ. ಹಾಗೆ ಮಾಡಿದ ಅವರು ಅದಕ್ಕೆ ಜೀವ ಬರಿಸಲು ಸೋತಾಗ, ಅಲ್ಲಾಹು ಆ ಪ್ರತಿಮೆಯೊಳಗೆ ಕುಳಿತು ಹಾಡಲು ಆ ದೇವತೆಗಳಿಗೆ ಆದೇಶಿಸುತ್ತಾನೆ. ಅವರು ಹಾಡಲು ಪ್ರಾರಂಭಿಸಿದ ತಕ್ಷಣ ಆ ಸಂತನ ಪ್ರತಿಮೆಯೊಳಗೆ ಆತ್ಮ ಪ್ರವೇಶಿಸುತ್ತದೆ. ದೇವತೆಗಳು ಅದನ್ನು ಮರುಗಳಿಗೆಯೇ ಅಲ್ಲಿ ಬಂಧಿಸಿಬಿಡುತ್ತಾರೆ.

dhondhutaikulakarniಆದುದರಿಂದಲೇ ಅದೇ ಮಣ್ಣಿನಿಂದಾದ ಸಕಲ ಪ್ರಾಣಿ ಪಕ್ಷಿ ಮನುಷ್ಯರಿಗೆ ಸಂಗೀತವೆಂಬುದು ಪ್ರಿಯವಾಗಿದೆ ಎಂಬುದು ಕಥೆ- ಕಾಯಕ್ಕೆ ಮೂಲವಾದ ಮಣ್ಣಿನ ತತ್ವದ ಸಮಾನತೆಯನ್ನು ಸಂಗೀತ ಸಾರುತ್ತದೆ ಎಂಬುದು ಈ ಕಥೆಯಿಂದ ಧ್ವನಿತವಾಗುತ್ತದೆ. ಆದರೆ ವಿಷಾದವೆಂದರೆ ಮನುಷ್ಯ ಶಾಶ್ವತವಾಗಿ ಗಂಧರ್ವಲೋಕದಲ್ಲಿ ನೆಲೆಯೂರಲು ಸಾಧ್ಯವಿಲ್ಲ. ಕೆಳಗಿಳಿದು ಬರಲೇಬೇಕಾಗಿದೆ, ಮತ್ತೆ ಮೇಲೇರಲು. ಹೀಗೆ ಮನುಷ್ಯರ ಬದುಕೆಂಬುದು ಮೇಲೇರುವ ಕೆಳಗೆ ಜಾರುವ ‘ಮಿಥ್ ಆಫ್ ಸಿಸಿಫಸ್ಸಿ’ನ ನಿರಂತರ ಆವರ್ತನವೆಂಬುದನ್ನು ಈ ಕೃತಿ ತನ್ನ ಕಥೆಯ ಸಂಕೀರ್ಣ ಆವರ್ತನಗಳಲ್ಲಿ ಸೆರೆಹಿಡಿಯುತ್ತದೆ.

ವರ್ಡ್ಸ್ವ ವರ್ತ್ ಒಂದು ಪದ್ಯದಲ್ಲಿ “world is too much with us getting and spending” ಎನ್ನುತ್ತಾನೆ. ಈ ಕೊಳ್ಳುಬಾಕ ಸಂಸ್ಕೃತಿಗೆ ಒಂದು ಪರ್ಯಾಯ ತಾಣವೆಂದರೆ (alternative space) ‘ಮ್ಯೂಸಿಕ್ ರೂಮ್’ ಎಂದು ಏಶಿಯಾಟಿಕ್ ಸೊಸೈಟಿಯ ಒಂದು ಸಂದರ್ಶನವೊಂದರಲ್ಲಿ ಲೇಖಕಿ ಹೇಳಿಕೊಂಡಿರುವುದು, ವರ್ಡ್ಸ್ವ ವರ್ತ್ ಕವಿಯ ಸಾಲುಗಳ ವಿಸ್ತರಣೆಯೇ ಆಗಿದೆ. ಧೋಂಡೂತಾಯಿಯ ಮ್ಯೂಸಿಕ್ ರೂಮ್ ನ್ನು ಆಶ್ರಮ ಎನ್ನುತ್ತಾಳೆ. ಭಾರತೀಯ ಶಾಸ್ತ್ರೀಯ ಸಂಗೀತ ಅಂಚಿಗೆ ತಳ್ಳಲ್ಪಟ್ಟಿರುವುದನ್ನು ವಿಷಾದದಿಂದ ಹೇಳಿಕೊಳ್ಳುತ್ತಾಳೆ.

ಮೈಕೇಲ್ ಜಾಕ್ಸನ್ ನ ಸಾವುನ್ನು ಇಡೀ ಜಗತ್ತು ವೈಭವೀಕರಿಸಿತು ಆದರೆ ಅದೇ ಅಲಿ ಅಕ್ಬರ್ ಖಾನ್ ಸತ್ತಾಗ ಸುದ್ದಿಯೇ ಆಗದೇಹೋದ ಸಂಗತಿಯನ್ನು ಹೇಳೊಕೊಳ್ಳುತ್ತಾ, ಜಾಗತೀಕರಣದ ಅಬ್ಬರದಲ್ಲಿ ಭಾರತೀಯ ಶಾಸ್ತ್ರೀಯ ಸಂಗೀತ ಹೇಗೆ ಅಂಚಿಗೆ ತಳ್ಳಲ್ಪಟ್ಟಿದೆ ಎಂಬುದನ್ನು ವಿಷಾದದಿಂದ ಹೇಳಿಕೊಳ್ಳುತ್ತಾಳೆ. ಅದಕ್ಕೊಂದು ಜಾಗತಿಕ ಮಟ್ಟದಲ್ಲಿ ಸಾಂಸ್ಕೃತಿಕ ಅವಕಾಶವನ್ನು (ಸ್ಪೇಸ್ ) ನಿರ್ಮಾಣ ಮಾಡುವ ಉದ್ದೇಶ ಕೂಡ ಈ ಕೃತಿಯ ಹಿಂದೆ ಇರುವುದನ್ನು ಹೇಳಿಕೊಂಡಿದ್ದಾಳೆ.

ಕೆನೆಡಿ ಬ್ರಿಜ್ ನ ಕೆಳಗೆ ಒಲ್ಲದ ಮನಸ್ಸಿನಿಂದ ಸಂಗೀತ ಕೋಣೆಗೆ ಅವಳು ಬರುತ್ತಾಳೆ, ಅಥವಾ ಅವಳನ್ನು ಎಳೆದು ಕೊಂಡು ಬರಲಾಗುತ್ತದೆ. ಆನಂತರ ಅದು ಪ್ರಿಯವಾಗುತ್ತಾ ಹೋಗುತ್ತದೆ. ಮುಂಬಯಿಯ ಕೆಂಪು ದೀಪದ ಕೊಳೆಗೇರಿಯ ನಡುವಿನ ಕಾಂಗ್ರೆಸ್ ಹೌಸ್  ನಲ್ಲಿ ಧೋಂಡೂತಾಯಿಯ ಚಿಕ್ಕ ಕೋಣೆಯಲ್ಲಿ ಪ್ರಾರಂಭವಾಗುವ ಅವಳ ಸಂಗೀತ ಕಮಲದಂತೆ ಅರಳುತ್ತಾ ಹೋಗುತ್ತದೆ. ಆನಂತರ ಅವಳ ಬದುಕಿನ ಭಾಗವೇ ಆಗಿ ಅವಳ ಅರಿವಿನ ವಿಸ್ತಾರಕ್ಕೆ ಕಾರಣವಾಗುತ್ತದೆ.

ಆದುದರಿಂದಲೇ, ಅವಳೇ ಸಂದರ್ಶನದಲ್ಲಿ ಹೇಳಿಕೊಂಡಿರುವಂತೆ ‘cluttered with material objects, and superfluous people’ ನಿಂದ ತುಂಬಿದ ಶ್ರೀಮಂತ ಉುದ್ಯಮಿ ಕುಟುಂಬದಿಂದ ಬಂದ ಆಕೆಗೆ ಉಪಭೋಗಿ ನೆಲೆಯ ನಿಷ್ಫಲತೆಯ ಅರಿವಾಗಿದೆ. ಈ ಅರಿವೇ ಇಂತಹ ಒಂದು ಸಮತೂಕದ, ಅನನ್ಯವಾದ ಕೃತಿಯನ್ನು ಕೊಡಲು ಕಾರಣವಾಗಿದೆ.

‍ಲೇಖಕರು Admin

May 28, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

  1. Anonymous

    ತುಂಬಾ ಸುಂದರವಾದ , ತೂಕದ ವಿಮರ್ಷೆ . ಓದಿ ಮುಗಿಸುವಾಗ ಕೃತಿ ಓದಬೇಕೆನ್ನುವ ತುಡಿತ ಹಚ್ಚುತ್ತದೆ ….S.P.Vijaya lakshmi

    ಪ್ರತಿಕ್ರಿಯೆ
  2. lalitha sid

    ಬಹಳ ಚೆನ್ನಾಗಿದೆ – ಪುಸ್ತಕ ಕೂಡಲೇ ಓದಬೇಕೆಂಬ ಆಸೆ ಹುಟ್ಟಿಸುವ ಹಾಗೆ. ಧನ್ಯವಾದಗಳು ಗಿರಿಜಾ.

    ಪ್ರತಿಕ್ರಿಯೆ
  3. Lakshminarayana Bhatta

    ಸದಾನಂದ ಕನವಳ್ಳಿಯವರು “ಸಂಗೀತ ಕೋಣೆ” ಎಂದು ಅದ್ಭುತವಾಗಿ ಅನುವಾದಿಸಿದ್ದಾರೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: