ಹೆಜ್ಜೆ-ಹಾದಿ
ಅನನ್ಯ ತುಷಿರಾ
ಬಯಲ ಕಾಡ ಹಾದಿ
ಆದಿಯರಿವಿಗೆ ನಿಲುಕದು
ಅಂತ್ಯದ ಕುರುಹೂ ಸುಳಿಯದು
ಹೆಜ್ಜೆ ಸವೆಸಿದ್ದೇ ಹಾದಿ
ಹೊಸತು-ಹಳೆತುಗಳ ಹುಡುಕಾಟ
ದ್ವಂದ್ವಗಳ ಮಧ್ಯ.
ನಿಲ್ಲಲಾರೆ ನನ್ನಿಚ್ಛೆಯನುಸಾರ
ನಡೆ,ನಡೆ,ನಡೆ…ನಡೆಯುತ್ತಲೇ ಇರುವೆ
ಸತ್ಯ ಸುಳ್ಳುಗಳ ಭ್ರಮೆ
ಕಳಚಿದಾಗಲೆಲ್ಲ ಬೆರಗುಗೊಳ್ಳುತ್ತ
ನಾನೇ ಕಂಡುಕೊಂಡ ಜಾಡೆಂಬ
ಅಹಮ್ಮಿನಲಿ!
ತಿಳಿದದ್ದು ತಡ.
ನಾ ಕ್ರಮಿಸಿದ ದಾರಿಗೂ ದೂರ ಆಚೆ, ಆಚೆ
ಅದಾಗಲೇ ಯಾರೋ ಸಾವರಿಸಿಕೊಳ್ಳುತ್ತಿದ್ದಾರೆ,
ದಣಿವು ಚೆಲ್ಲುತ್ತಿದ್ದಾರೆ…
ಅರೆಕ್ಷಣ ದಿಟ್ಟಿಸಿ ನನ್ನೆಡೆ-
`ಬಂದೆಯಾ, ನಿನ್ನದೂ ನನ್ನ ಪಾಡು’
ಎಂಬಂತೆ ಅರ್ಥ ಹುಡುಕುವ ನಗೆಯಲ್ಲಿ.
ಯಾವುದರ ಹುಡುಕಾಟ?
ಬಯಲ ಜಂಗುಳಿಯೋ? ಜಂಗುಳಿಯಲ್ಲಿನ
ಬಯಲೋ?
ಸುಮ್ಮನೇ ನಡೆಯಲಾಗದ ಮನಸಿಗೆ
ಉತ್ತರಗಳಿಗಿಂತ
ಪ್ರಶ್ನೆಗಳ ಹುಡುಕಾಟದ ಹಾದಿಯೇ ಮೆಚ್ಚುಗೆ.





0 Comments