ಹೂವು ತಂದವಳು…

ಶಿವಕುಮಾರ್ ಮಾವಲಿ
ಶಿವಕುಮಾರ ಮಾವಲಿ
ಹೊಡೆಯ ಬಂದ ಕೈಗಳಿಗೆ
ಹೂವನಿತ್ತವಳು…
ಹೊಂಚು ಹಾಕಿ ಕುಂತವಗೂ
ಪ್ರೀತಿಯ ಹೊಂಬಾಳೆ ಇಟ್ಟಾಳು…
ತಾನಾಗಿಯೇ ಸಿಡಿಯಲಾರದು ಮದ್ದು
ಬಂದೂಕಿಗಿರುವ ಬಲ ನಿನ್ನದೇ ತೋಳಿನದ್ದು
ನನ್ನ ಬಳಿ ಕೆಂಗುಲಾಬಿಯಿದೆ
ಅವರ ಬಳಿ ಕೆಂಪು ಕೋಟೆಯಿದೆ
ನಮ್ಮಿಬ್ಬರ ಮಧ್ಯೆ ನಿನ್ನವರ
ಬೂಟು ಬಂದೂಕುಗಳಿವೆ
ನೀವು, ನನ್ನ ಕೈಲಿರುವ
ಈ ಕೆಂಪು ಹೂವನ್ನು
ಅವರಿಗೆ ತಲುಪಿಸುವಿರೋ ?
ಇಲ್ಲವೆ ನನ್ನ ಕಡುಗೆಂಪು ನೆತ್ತರನು ಅವರಿಗರ್ಪಿಸುವಿರೋ ?
ಆಯ್ಕೆ ನಿಮ್ಮದೇ !
ನೆನಪಿರಲಿ ಅಣ್ಣ,
ಕೆಂಗುಲಾಬಿಗಳನ್ನು
ಕೆಂಪು ರಕ್ತದ ನೆಲದಲ್ಲಿ
ಬೆಳೆಯಲಾಗುವುದಿಲ್ಲ
ಬಂದೂಕುಗಳನು ಹಣೆಗಿಟ್ಟು
ಬದುಕು ಕಟ್ಟಲಾಗುವುದಿಲ್ಲ
ಬದುಕು ಮುಗಿಸಲೂ ಆಗುವುದಿಲ್ಲ






0 Comments