ಹೈವೇ 7
——–
ನಮ್ಮ ಬಟ್ಟೆ ಗಂಟುಗಳನ್ನು ಒಮ್ಮೆಲೇ ಮನೆಯ ಅಂಗಳದಲ್ಲಿ ಎಸೆಯುತ್ತಿದ್ದಂತೆ, ಅಮ್ಮ ಒಂದೊಂದೇ ಬಟ್ಟೆಗಳನ್ನು ಪರೀಕ್ಷಿಸಿ, ನಮಗೆಲ್ಲ ಹೊಂದುವಂತಿದ್ದರೆ ತೆಗೆದು ಬೇರೆ ಹೊರೆ ಕಟ್ಟಿ ಉಳಿದೆಲ್ಲವನ್ನೂ ತಲೆಮೂಟೆ, ಬೊಂತೆಗಾಗಿ ಇಟ್ಟುಕೊಳ್ಳುತ್ತಿದ್ದಳು. ತರಹೇವಾರಿ ವಿದೇಶಿ ಸುಗಂಧ ದ್ರವ್ಯದಿಂದ ನಾರುತ್ತಿದ್ದ ಆ ಬಟ್ಟೆಗಳಲ್ಲಿ ರೋಗದ ಕೀವು, ರಕ್ತದ ಕಲೆಗಳು ಸ್ಪಷ್ಟವಾಗಿ ಕಾಣುತ್ತಿದ್ದವಾದರೂ ಒಗೆಯದೆ ಧರಿಸಿಕೊಂಡು ಊರೆಲ್ಲಾ ಓಡಾಡುತ್ತ ಎಲ್ಲರಿಗೂ ತೋರಿಸಿಕೊಂಡು, ಅದೇ ರೋಗರುಜಿನದ ವಾಸನೆಯಲ್ಲೇ ಹಸಿವು ನೀಗಿಸಿಕೊಂಡು ಚಳಿಗಾಲದಲ್ಲಿ ಬೆಚ್ಚಗೆ ಮಲಗಿಕೊಳ್ಳುತ್ತಿದ್ದೆವು.
* * *
ಭಾಗ : ಮೂರು
![]()
ವಿ ಎಂ ಮಂಜುನಾಥ್
ಪ್ರಾರ್ಥನಾ ಗೃಹದ ಎದುರಿಗಿನ ಸಂಪಗೆ ಮರದ ಕೆಳಗೆ ನಿಂತು ಮತ್ತೆ ಸಿಸ್ಟರ್, ಸಿಸ್ಟರ್, ಸಿಸ್ಟರ್… ಎಂದು ಕರೆಯುತ್ತಿದ್ದೆವು. ಕಾಫಿಯೋ, ಮದ್ಯವೋ ಗೊತ್ತಿಲ್ಲ, ಅದನ್ನು ಕುಡಿಯುತ್ತಾ ಹೊರಬಂದವರು, ದೊಡ್ಡ ಗಾತ್ರದ ಬಿಳಿಬಣ್ಣದ ಬಿಸ್ಕತ್ತುಗಳನ್ನು ನಮ್ಮ ಕೈಗಳಿಗೆ ಎಸೆದು, ಅಲ್ಲಿನ ಅರೆ ಹುಚ್ಚ ಹೆಂಗಸರನ್ನು ಕರೆದು ಅವರಿಂದ ಒಳಗಿನಿಂದ ರಾಶಿರಾಶಿ ಬಟ್ಟೆ ಗಂಟುಗಳನ್ನು ತರಿಸಿ ಬಿಚ್ಚಿ ನಮ್ಮೆದುರಿಗೆ ಹರಡುತ್ತಿದ್ದರು. ಹೆಚ್ಚಾಗಿ ಮಲೇಶಿಯಾ, ಕೊರಿಯಾ, ಇಂಡೋನೇಶಿಯಾ, ಚೀನಾ ದೇಶದ ಬಟ್ಟೆಗಳೇ ಬಂದು ಬೀಳುತ್ತಿದ್ದವು ಇಂಡಿಯಾ ದೇಶಕ್ಕೆ. ಉಣ್ಣೆಯ ಸ್ವೆಟರ್ ಗಳು, ಓವರ್ ಕೋಟುಗಳು, ಎಳೆದೆಳೆದು ಹಿಗ್ಗಿಕೊಂಡ ರೂಪದರ್ಶಿಯರದ್ದೊ, ಸೂಳೆಯರದ್ದೊ ಹಲವು ಬಣ್ಣಗಳ ಬ್ರಾ, ಕಾಚಾಗಳು, ಸ್ಟಾಕಿನ್ ಗಳು, ಜೀನ್ಸ್ ಪ್ಯಾಂಟುಗಳು, ಶರ್ಟ್ ಗಳು…ಫುಟ್ ಬಾಲ್, ರಗ್ಬಿ, ಬೇಸ್ ಬಾಲ್, ಬುಲ್ ಫೈಟಿಂಗ್, ರಿಯಲ್ ಮ್ಯಾಡ್ರಿಡ್ ತಂಡದ ಆಟಗಾರರ ಜರ್ಸಿಗಳ ಜೊತೆಗೆ ಪಾಶ್ಚಿಮಾತ್ಯ ದೇಶದ ಉಚ್ಚವರ್ಗದವರೆಲ್ಲರೂ ಧರಿಸಬಹುದಾದ ವೆಲ್ಲಿಂಗ್ ಟನ್ ಬೂಟುಗಳು, ಹೀಲ್ಡ್ ಎಕ್ಕಡಗಳು, ಕಟ್ ಶೂಗಳು, ಪಂಪ್ ಶೂಗಳು, ಸೋತ ಹೆಣ್ಣುಗಳಂತಿರುವ ವಿಚಿತ್ರ ವಿನ್ಯಾಸದ ಚಪ್ಪಲಿಗಳೂ ಇರುತ್ತಿದ್ದವು. ಅವುಗಳಲ್ಲಿ ಗಂಡಿಗೆ ಯಾವುದು, ಹೆಣ್ಣಿಗೆ ಯಾವುದೆಂದು ಗೊತ್ತಾಗದೆ ತೀವ್ರ ಗೊಂದಲಕ್ಕೀಡಾಗುತ್ತಿದ್ದೆವು. ಈಗ ಪುಡಿ ಡಾನ್ ಆಗಿ ರೋಲ್ ಕಾಲ್ ಮಾಡಿಕೊಂಡು ಬದುಕುತ್ತಿರುವ ಸ್ನೇಹಿತನೊಬ್ಬ ಹೆಂಗಸರು ಧರಿಸಬಹುದಾದ ಶೂಸ್ ವೊಂದನ್ನು ನನಗೆ ನೆನಪಿರುವಂತೆ ಐದಾರು ವರ್ಷಗಳ ಕಾಲ ಬಳಸಿದ್ದ.
ಹೀಗೆ ಅವರ ಅನುಮತಿಗೆ ಕಾದಿರುತ್ತಿದ್ದ ನಾವು, ಕ್ಷಣಾರ್ಧದಲ್ಲಿ ಒಬ್ಬರ ಮೇಲೊಬ್ಬರು ಬಿದ್ದು ಒಂದೇ ಒಂದು ತುಂಡು ಬಟ್ಟೆಯಿಲ್ಲದಂತೆ ನಮ್ಮ ಶಕ್ತಿಗೆ ಅನುಗುಣವಾಗಿ ಸಾಧ್ಯವಾದಷ್ಟು ಬಾಚಿಕೊಂಡಿರುತ್ತಿದ್ದೆವು. ಆ ನೂಕುನುಗ್ಗಲಿನಲ್ಲಿ ಅವರಿಂದ ಮತ್ತೆ ಒದೆ ತಿಂದಿರುತ್ತಿದ್ದೆವು. ಆ ಸಂತಸದಲ್ಲಿ ಅದು ಅಷ್ಟಾಗಿ ಅರಿವಿಗೆ ಬರುತ್ತಿರಲಿಲ್ಲ. ಎಲ್ಲರೂ ತಮ್ಮ ತಮ್ಮ ಬಟ್ಟೆ ಗಂಟುಗಳನ್ನು ತಲೆ ಮೇಲೆ ಹೊತ್ತುಕೊಂಡು ಗೇಟಿನ ಹತ್ತಿರ ಬರುತ್ತಿದ್ದಂತೆ ಗ್ರಾಮದ ಒಳಗಿರುವ ದಲಿತರೊಡಗೂಡಿ ಮೇಲ್ಜಾತಿಯವರೆಲ್ಲರೂ ಓಡಿ ಬರುತ್ತಿದ್ದರು. ಅವರು ಅಲ್ಲಿ ಹೋಗಿ ಏನೂ ಸಿಗದೇ ಹೋದಾಗ ನಿರಾಶೆಗೊಂಡು ನಮ್ಮ ಹತ್ತಿರ ಏನಾದರೂ ಸಿಗಬಹುದೆಂಬ ಸಣ್ಣ ಆಸೆಯಲ್ಲಿ ಕೇಳಲು ಬರುವುದರೊಳಗೆ ನಾವು ಮನೆ ಸೇರಿರುತ್ತಿದ್ದೆವು.
ನಮ್ಮ ಬಟ್ಟೆ ಗಂಟುಗಳನ್ನು ಒಮ್ಮೆಲೇ ಮನೆಯ ಅಂಗಳದಲ್ಲಿ ಎಸೆಯುತ್ತಿದ್ದಂತೆ, ಅಮ್ಮ ಒಂದೊಂದೇ ಬಟ್ಟೆಗಳನ್ನು ಪರೀಕ್ಷಿಸಿ, ನಮಗೆಲ್ಲ ಹೊಂದುವಂತಿದ್ದರೆ ತೆಗೆದು ಬೇರೆ ಹೊರೆ ಕಟ್ಟಿ ಉಳಿದೆಲ್ಲವನ್ನೂ ತಲೆಮೂಟೆ, ಬೊಂತೆಗಾಗಿ ಇಟ್ಟುಕೊಳ್ಳುತ್ತಿದ್ದಳು. ತರಹೇವಾರಿ ವಿದೇಶಿ ಸುಗಂಧ ದ್ರವ್ಯದಿಂದ ನಾರುತ್ತಿದ್ದ ಆ ಬಟ್ಟೆಗಳಲ್ಲಿ ರೋಗದ ಕೀವು, ರಕ್ತದ ಕಲೆಗಳು ಸ್ಪಷ್ಟವಾಗಿ ಕಾಣುತ್ತಿದ್ದವಾದರೂ ಒಗೆಯದೆ ಧರಿಸಿಕೊಂಡು ಊರೆಲ್ಲಾ ಓಡಾಡುತ್ತ ಎಲ್ಲರಿಗೂ ತೋರಿಸಿಕೊಂಡು, ಅದೇ ರೋಗರುಜಿನದ ವಾಸನೆಯಲ್ಲೇ ಹಸಿವು ನೀಗಿಸಿಕೊಂಡು ಚಳಿಗಾಲದಲ್ಲಿ ಬೆಚ್ಚಗೆ ಮಲಗಿಕೊಳ್ಳುತ್ತಿದ್ದೆವು. ಇವತ್ತಿಗೂ ನನ್ನಲ್ಲಿ ಅಂದಿನ ಆ ಕೆಲವು ಬಟ್ಟೆಗಳು ಉಳಿದಿರಬಹುದು.
ಚಳಿಗಾಲದಲ್ಲೂ ಬೀಸುವ ಥಂಡಿ ಗಾಳಿಯಲ್ಲಿ ಪೊಲೀಸ್ ಡ್ರೈವಿಂಗ್ ಕ್ಯಾಂಪ್ ನ ಗೇರುತೋಪಿನಿಂದ ಸೌದೆ ಹೊರೆಯನ್ನು ಕಟ್ಟಿಕೊಂಡು ತಲೆ ಮೇಲೆ ಹೊತ್ತು ತಂದು ಹಿತ್ತಲಿಗೆ ಎಸೆದು, ಒಂದು ಕ್ವಾರ್ಟರ್ ಸಾರಾಯಿ ಏರಿಸಿ ಮೂಲೆಯಲ್ಲಿ ಬೆಡ್ ಶೀಟು ಹೊದ್ದುಕೊಂಡು, ಗೋಡೆಯಿಂದ ಕೊರೆದ ಸಣ್ಣ ರಂಧ್ರದಲ್ಲಿ ಕಾಣುವ ಬ್ರೆಡ್ ತಯಾರಿಸುವ ಮುಸ್ಲಿಂ ಕುಟುಂಬದ ಕಡೆಗೆ ದೃಷ್ಟಿ ನೆಟ್ಟು ಕುಳಿತಿರುತ್ತಿದ್ದ ಅಪ್ಪ ಮಾತ್ರ ಚರ್ಚಿನ ಬಟ್ಟೆಗಳನ್ನು ಅಷ್ಟಾಗಿ ಹಚ್ಚಿಕೊಳ್ಳುತ್ತಿರಲಿಲ್ಲ, ಹಾಗೆ ಆತನ ಬದುಕಿರುವ ತನಕ ನಮ್ಮಂತೆ ಚರ್ಚ್ ಗೆ ಬಂದು ಭಿಕ್ಷೆಗೆ ನಿಲ್ಲಲಿಲ್ಲ.





0 Comments