ಪ್ರಸಾದ್ ನಾಯ್ಕ್
ನೀ ಬರುವಾಗ ತಂದುಬಿಡು
ಒಂದು ಹಿಡಿ ಹೆಚ್ಚು ಕ್ಷಣವನ್ನೂ..
ಅಂದು ನಮ್ಮಿಬ್ಬರನ್ನು ಬಿಟ್ಟು
ಜಗಕ್ಕೆಲ್ಲಾ ಅವಸರ ಪಾಳಿ ಮುಗಿಸಲು..
ನೀ ಬರುವಾಗ ಮರೆತುಬಿಡು,
ಕ್ಷಣದ ಇರುವಿಕೆಯನ್ನೂ..
ನಿನ್ನ ಕಣ್ಣಬಿಂಬದಲಿ ನಾನಿಂದು ಕಂಡೆ,
ಕಳೆದು ಹೋಗಿದ್ದ ನನ್ನ ನಾನು..
ಈ ಕ್ಷಣಗಳ ಎತ್ತಿಟ್ಟಿರುವೆ,
ನಾ ಬದುಕಿದ್ದ ದಿನಗಳ ಲೆಕ್ಕವಿಡಲು..
ಅದೆಂತು ಕೇಳಿದ್ದೆ ನೀನು,
ನಾ ಆಡಿರದ ಮಾತುಗಳನೂ..

ಬಿರಿದ ಹೂವಿನ ಮಡಿಲಲ್ಲಿ,
ಚಿಟ್ಟೆಯ ರಂಗಿನ ಹುಡಿಹೊಳಪು..
ನಿಸರ್ಗಕ್ಕೇ ಕವಿತೆಯ ಘಮ,
ಒಲವಿನ ಋತುವು ಬರಲು..
ನೀ ಬಂದಾಗ ಮರೆತುಬಿಡು,
ಲೋಕದ ಋತುಮಾನಗಳನ್ನೂ..
ನೀ ಬರುವಾಗ ತಂದುಬಿಡು,
ಹಿಡಿಮುಷ್ಟಿ ಹೆಚ್ಚು ಕ್ಷಣವನ್ನೂ..
ಕೊನೆಮೊದಲಿಲ್ಲದ ಒಲವಿನ,
ಅನಂತಸೀಮೆಯನ್ನು ಅಳೆಯಲು..
ಬಂದೊಮ್ಮೆ ಇದ್ದುಬಿಡು,
ಮರೆತು ಮರಳುವುದನ್ನೂ…






ಚೆನ್ನಾಗಿದೆ