ನಂದಿನಿ ಹೆದ್ದುರ್ಗ
**
ಒಂದು ಸುದೀರ್ಘ ಕಾಲ
ನಿಯತ್ತಿಗೆ ನೀರೂಡಿಸಿ
ಸಲಹಿದ್ದು;
ಪೇಟೆ ಬೀದಿಯಲ್ಲಿ ನಿಂತು
ಸಮಾಧಿಯಾಗಲು ಸ್ಥಳ
ಹುಡುಕುವುದು
ಒಂದೇ ಎನಿಸಿದ ಕಾಲಕ್ಕೆ
ನೀನು ಸಿಕ್ಕಿದ್ದು
ಎಷ್ಟು ಸುಲಭದ ಜೀವ
ನೋಡು ನನ್ನದು
ಮತ್ತೊಮ್ಮೆ ಕರಿಬೆಕ್ಕನ್ನು
ಮೀಯಿಸಿ
ಮುದ್ದಿಸಿ
ಬಂಗಾರದ ಉಂಡೆಯಾಗಿಸುವ
ಮರುಳು ಮೂಡುತ್ತಿದೆ.
ಮೂರನೇ ಪ್ರೇಮದಲ್ಲಿದ್ದ ಗರಗಸವನ್ನು
ಒಂದನೇ ಪ್ರೇಮದಲ್ಲಿದ್ದ ತಾವರೆದಳವನ್ನೂ
ಎರಡನೇ ಪ್ರೇಮದಲ್ಲಿದ್ದ ಕಾಮಕಸ್ತೂರಿ ಚರಟವನ್ನು
ನಾಲ್ಕನೇ ಪ್ರೇಮದಲ್ಲಿದ್ದ ಮರಳುಗಾಡನ್ನು
ಮನದಲ್ಲಿ ಹೊತ್ತು
ಒಂದು ಹೂದೋಟ ಮಾಡಿದ್ದೇನೆ
ನೀನು ನಿನ್ನ ಬೆಳ್ಳಿಕೂದಲನ್ನು ,
ಕೆದಕು ಕಣ್ಣನ್ನು , ಪದಗಳ ನಡುವಿನ
ಕ್ಷುದ್ರ ಗ್ರಹಗಳನ್ನು ಆಫೀಸಿನಲ್ಲೇ
ಬಿಟ್ಟು ಬಾ
ನಾನು ನನ್ನ ಪ್ರವರವನ್ನು ಮತ್ತು ಹರೆಯವನ್ನು
ಗೇಟಿನಲ್ಲಿ ಇಟ್ಟಿದ್ದೇನೆ
ನಾಳೆ ಏನಾದರೂ ಆಗಬಹುದು
ಮರ ನೋಡುತ್ತಾ ಪರವಶಳಾಗುವ
ಬೇನೆಯಿದೆ ನನಗೆ,
ಆಗಾಗ ಎಚ್ಚರಿಸು
ಐದು ಮುಗಿದು ಆರು ಆರಂಭಕ್ಕೆ
ಒಂದಿಷ್ಟು ಸಮಯ ಕೊಡು






0 Comments