ನೋವಾನ ನಾವೆ ಬೇಕಾಗಿದೆ!
ಜಯಶ್ರೀ ಭಟ್
ನೋವಾ ಎಂಬುವವ ಪ್ರಪಂಚ ಮುಳುಗುವಾಗ ಪ್ರಾಣಿ ಸಂಕುಲವನ್ನು ಉಳಿಸಲು ತನ್ನ ನಾವೆಯನ್ನು ತಂದ ಬೈಬಲ್ ಕಥೆ ಜನಜನಿತ. ನನಗೀಗ ಆ ನೋವಾನ ನಾವೆಯ ನೆನಪಾಗುತ್ತಿದೆ. ಯಾಕೆಂದರೆ ಸುತ್ತಲೂ ಮಾಹಿತಿ ಎಂಬ ಸಮುದ್ರದ ಹುಚ್ಚು ಭರತದಲ್ಲಿ ನಾನೆಲ್ಲಿ ಕೊಚ್ಚಿ ಹೋಗುವೆನೋ ಎಂಬ ಭಯ ಶುರುವಾಗಿದೆ ನನಗೆ.
ಫೇಸ್ ಬುಕ್ಕಿನೊಳಗೊಂದು ಅಕೌಂಟು ಮಾಡಿ ಲೈಕು, ಕಮೆಂಟುಗಳಿಗಂಜಿದೊಡೆಂತಯ್ಯಾ…..? ಈ ಮಾಹಿತಿ ಪ್ರಪಂಚದಲ್ಲಿ ಬೇಕಾದ ಬೇಡಾದ ಸುದ್ದಿಯನ್ನು ಹೀರಿ ಹೀರಿ ಮೆದುಳಿನಲ್ಲಿರುವ ನರತಂತುಗಳೆಲ್ಲ ಒಡ್ಡು ಕಿತ್ತ ನೀರಿನ ಹಾಗೆ ಧುಮ್ಮಿಕ್ಕಿಬಿಡುವುದೇನೋ ಎನಿಸುತ್ತದೆ ಒಮ್ಮೊಮ್ಮೆ. ಅಬ್ಬಬ್ಬಾ. ಅದೇನು ಸುದ್ದಿ, ಅದೆಷ್ಟು ವಿಷಯ, ರಾಜಕೀಯ, ಮೋದಿ, ರಾಗಾದಿಂದ ಹಿಡಿದು ಕ್ರೇಜಿವಾಲ್ ವರೆಗೆ ಫೋಟೋ, ವಿಡಿಯೋ, ಶೇರು, ಲೈಕು ಮಾಡಿದ್ದೇ ಮಾಡಿದ್ದು ಜನ. ಅಲ್ಲಿಂದ ಮುಂದೆ ಹಿತ್ತಲಲ್ಲಿ ತುಂಬೆ ಹೂಬಿಟ್ಟರೂ ಕಿಸಕ್ಕನೆ ಒಂದು ಫೋಟೋ ಕ್ಲಿಕ್ಕಿಸಿ ಫೇಸ್ ಬುಕ್ಕಿನ ಗೋಡೆಗೆ ಸಿಕ್ಕಿಸಿ ಲೈಕು ಗಿಟ್ಟಿಸುವ ಹುನ್ನಾರದಲ್ಲಿರುವ ಅಕ್ಕ, ತಮ್ಮ, ಅತ್ತಿಗೆ, ನಾದಿನಿಯರಿಂದ ಹಿಡಿದು ಸಾಹಿತ್ಯ, ಸಂಗೀತ, ಗಣಿತ, ವೇದ ಮುಂತಾದವುಗಳನ್ನೆಲ್ಲ ಓತಪ್ರೋತವಾಗಿ ಉಣಬಡಿಸುವ ವಿವಿಧೋಪರುಚಿಯ ದೇಶ ವಿದೇಶಗಳಲ್ಲಿರುವ ಗೆಳೆಯರ ಹಿಂಡು, ಅವರೆಲ್ಲಾ ಇದ್ದೂ ಬಿಡದೇ ಕಾಡುವ ಒಂಟಿತನ. ದಿನವೂ ಬೆಳಿಗ್ಗೆ ಎದ್ದು ಐಪ್ಯಾಡಿನ ಸುಕೋಮಲ ಗುಂಡಿ ಅದುಮಿದರೆ ತೆರೆದುಕೊಳ್ಳುವ ಈ ಫೇಸ್ ಬುಕ್ ಎಂಬ ಆಧುನಿಕ ವಿಶ್ವಾಮಿತ್ರ ಸ್ರುಷ್ಟಿಯಲ್ಲಿ ನಾವೆಲ್ಲ ತ್ರಿಶಂಕುಗಳಾಗುತ್ತಿದ್ದೇವೇನೋ ಎಂದು ನನಗೆ ಗಾಬರಿಯಾಗುತ್ತದೆ. ಯಾರದೋ ಮನೆಯ ರಂಗೋಲಿ, ಯಾರದೋ ಮಕ್ಕಳ ಬಾಲವಾಡಿಯ ಆಟದ ಪ್ರಶಸ್ತಿ, ಇನ್ಯಾರದೋ ಮನೆಯ ಚಕ್ಕುಲಿ, ಮಗುವೊಂದು ಅಳುತ್ತಾ ತಮ್ಮ ದೊಡ್ಡವನಾಗುವುದು ಬೇಡವೆನ್ನುವ ವಿಡಿಯೋ ಕ್ಲಿಪ್,ಕಥೆ, ಪದ್ಯ, ಕ್ವಿಜ್, ಓದಿದ ಪುಸ್ತಕದ ಪಟ್ಟಿ, ವಿಚಾರ, ವಾಗ್ವಾದ, ಹುಟ್ಟು, ಸಾವು, ಸಂಸ್ಕಾರ…. ಒಟ್ಟಿನಲ್ಲಿ ಈ ಪಟ್ಟಿ ಅನಂತ!

ರಂಗೋಲಿಗೆ ಲೈಕ್ ಒತ್ತಲಿ, ಅವಳ ಅತೀ ಕೆಟ್ಟ ಸೆಲ್ಫೀ ಫೋಟೋಗೂ ಲೈಕುಗಳಿರಲಿ, ಹಾವು, ಚೇಳು ಈ ಜಗತ್ತಿನ ಸಮಸ್ತ ವಸ್ತುಗಳಿಗೂ ಲೈಕು ಒಕೆ, ಆದರೆ ಸಾವಿನಂತ ಸುದ್ದಿಗೂ ಲೈಕು ಒತ್ತಿದ್ದನ್ನು ಕಂಡಾಗ ನನ್ನ ನೆಮ್ಮದಿ ಕದಡುತ್ತದೆ. ದಿನಕ್ಕೆ ಒಂದೇ ಒಂದು ಫೇಸ್ ಬುಕ್ ವಿಡಿಯೋ ನೋಡಲು ನನಗೆ ನಾನು ಒಪ್ಪಿಗೆ ಕೊಟ್ಟುಕೊಂಡಿದ್ದೇನೆ. ಆದರೂ ಫೇಸ್ ಬುಕ್ಕಿನಿಂದಲೇ ಎದ್ದು ಹೋಗುವ ಬುದ್ದಿ ಇನ್ನೂ ಬಂದಿಲ್ಲ. ಇದರಿಂದಾಗಿ ಹಾಳಾಗುವ ಸಮಯದ ಬಗ್ಗೆ ಯೋಚಿಸಿದಾಗ ’ಏನಾದರೂ ಮಾಡು’ ಎಂದು ಯಾವುದೋ ಅದ್ರುಶ್ಯ ಕೈ ಕಿವಿ ಹಿಂಡಿದಂತಾಗುತ್ತದೆ.
ದೊಸ್ತೋವ್ಸ್ಕಿಯ ’ದಿ ಈಡಿಯಟ್’ ನ್ನು ಓದುತ್ತಿದ್ದೆ (ಅದೂ ಈ ಐಪಾಡ್ ನಲ್ಲೇ) ಅದರಲ್ಲಿನ ಒಂದು ಸಾಲು ನನಗೆ ಈ ಕಾಲಕ್ಕೂ ತುಂಬಾ ಸರಿಯಿದೆ ಎನಿಸಿತು. ದೋಸ್ತೋವ್ಸ್ಕಿ ಹೇಳುತ್ತಾನೆ ’ಈ ಮೂರನೇ ದರ್ಜೆ ಪ್ರಯಾಣಿಕರಿಗೆ ಮಾಹಿತಿ ಹುಚ್ಚು. ಅವರಿಗೆ ಎಲ್ಲರ ಬಗ್ಗೆ, ಎಲ್ಲದರ ಬಗ್ಗೆ, ಎಲ್ಲವೂ ತಿಳಿದಿರುತ್ತದೆ. ಯಾರು ಯಾರ ಹೆಂಡತಿ, ಅವರ ಮಕ್ಕಳು, ಅವರ ಕಾರುಬಾರು.. ಇಂತಹ ಮಾಹಿತಿಗಳನ್ನೇ ಅವರು ಜೀವಮಾನವಿಡೀ ಕಲೆಹಾಕುತ್ತಾ ಅದನ್ನೇ ಒಂದು ವಿಜ್ನಾನ ಎಂಬಂತೆ ಬೆಳೆಸುತ್ತಾರೆ ಅಥವಾ ತಮ್ಮ ಬದುಕು ಸವೆಸುತ್ತಾರೆ’ ಎಂದು. ಈಗ ಅವನು ಹೇಳಿದ ಮೂರನೇ ದರ್ಜೆಯ ಪ್ರಯಾಣಿಕರು ಅಥವಾ ನೂರು ಪೌಂಡ್ ನಲ್ಲಿ ವರ್ಷವಿಡೀ ಕಳೆಯುವವರು ಎಂಬ ಮಾತನ್ನು ಫೇಸ್ ಬುಕ್ಕಿನಲ್ಲಿ ಸಮಯ ಕೊಲ್ಲುವವರಿಗೆ ಅನ್ವಯಿಸಿ ಹೇಳಬಹುದೇನೋ.
ಮೊನ್ನೆ ಮೊನ್ನೆಯವರೆಗೂ ಬರೀ ಆಟದ ವಸ್ತುವಾಗಿದ್ದ ಈ ಸೋಷಿಯಲ್ ನೆಟ್ವರ್ಕ್ ಗಳು ಈಗೀಗ ಪ್ರಾಣಾಂತಿಕವಾಗಿದೆ ಎನಿಸಿದ್ದು ಯಾರೋ ಫೇಸ್ ಬುಕ್ಕಿನ ಕಮೆಂಟಿಗೆ ನೊಂದು ಜೀವ ಕಳಕೊಂಡ ಸುದ್ದಿ ಓದಿದ ಮೇಲೇ. ಇನ್ಯಾರೋ ಅವಹೇಳನಕಾರಿ ಮಾತಾಡಲು ಹೋಗಿ ಕೋರ್ಟು ಕಟ್ಟಳೆ ಎಂದು ಅಲೆದಾಡಬೇಕಾಗಿ ಬಂದಿದ್ದೂ ಈ ಜಾಲತಾಣಗಳಿಂದಲೇ ತಿಳಿದಿದ್ದು. ಈಗ ಅವಸರದ ಕಮೆಂಟಿಗರು ಸ್ವಲ್ಪ ಹುಷಾರಾಗಿರಬಹುದು.
’ಮ್ಯಾನ್ ದಿ ಅನ್ ನೋನ್’ ಎಂಬ ಪುಸ್ತಕ ಬರೆದ ನೊಬೆಲ್ ಪ್ರಶಸ್ತಿ ಪಡೆದ ಲೇಖಕ ಮತ್ತು ಡಾಕ್ಟರ್ ಅಲೆಕ್ಸಿಸ್ ಕಾರೆಲ್ ಆ ಕಾಲದಲ್ಲೇ ಕೇಳಿದ್ದ ಪ್ರಶ್ನೆ ಇಂದಿಗೂ ಅದೆಷ್ಟು ಪ್ರಸ್ತುತ. ಅವನಿಗೆ ಆಶ್ಚರ್ಯವಾಗುವುದು ಮನುಷ್ಯ ಯಾಕೆ ಹೀಗೆ ಸದಾ ಒಂದಿಲ್ಲೊಂದು ತನಗೆ ಸುಖ, ಸೌಕರ್ಯ ಒದಗಿಸುವ ವಸ್ತುಗಳ ಆವಿಷ್ಕಾರ ಮಾಡುತ್ತಲೇ ಇರುತ್ತಾನೆ ಎಂದು, ಯಾಕೆಂದರೆ ಇವು ಯಾವುದೂ ಅವನ ಆರೋಗ್ಯ, ನೆಮ್ಮದಿ ಹೆಚ್ಚಿಸಿಲ್ಲ, ಬದಲಿಗೆ ಬಹಳಷ್ಟು ಹಾನಿಯನ್ನೇ ಮಾಡಿದೆ ತಾನೆ. ಐಷಾರಾಮಿ ಕಾರಿನಲ್ಲಿ ಓಡಾಡಿಕೊಂಡು, ಮೈ ಬಗ್ಗಿಸದೆ ಉಂಡು, ಸದಾ ಕೈಯಲ್ಲಿ ಮಾಹಿತಿಗಳ ವಿಶ್ವಕೋಶವನ್ನು ಹಿಡಿದು ಕೂತು(ಐಪ್ಯಾಡ್/ ಸ್ಮಾರ್ಟ್ ಫೋನ್) ಕೊನೆಗೆ ಬೊಜ್ಜು ಬೆಳೆದಿದೆಯೆಂದು ಜಿಮ್ಮಿಗೋ, ಯೋಗ ಕ್ಲಾಸಿಗೋ ಹೋಗಿ ಕಸರತ್ತು ಮಾಡುವುದಿಲ್ಲವೇ ನಾವೆಲ್ಲ.
ಹಾಗೇ ತಲೆಯಲ್ಲಿ ಗೊಬ್ಬರ ತುಂಬಿದಂತೆ ಸುದ್ದಿಗಳ ಸಂತೆಯನ್ನೇ ತುಂಬಿಕೊಂಡರೆ ಯಾವ ಯೋಗ, ಜಿಮ್ಮೂ ನಮ್ಮ ತಲೆಯ ನೆರವಿಗೆ ಬರುವುದಿಲ್ಲ ತಾನೇ. ಅದಕ್ಕೇ ನನಗೆ ಈ ಐಪ್ಯಾಡ್, ಐಫೋನ್, ಯುಗದ ವಿಪರೀತಗಳನ್ನು ನೋಡಿ ಮುಂಬರುವ ವಿಪತ್ತುಗಳನ್ನು ನೆನೆದು ನೋವಾನ ನಾವೆಯ ನೆನಪಾಗುತ್ತಿದೆ. ನೋವಾನೇ ಆಗಬೇಕೆಂದೇನೂ ಇಲ್ಲ. ನಮ್ಮದೇ ಮುಕ್ಕೋಟಿ ದೇವರುಗಳಲ್ಲಿ ಯಾರಾದರೂ ಬಂದು ಮನುಷ್ಯರ ಈ ಪಾಟಿ ವಿಷಯಾಸಕ್ತಿ ನಿಲ್ಲಿಸಿದರೂ ಅಡ್ಡಿ ಇಲ್ಲ. ಓಹ್ ಆದರೆ ನಮ್ಮ ಪ್ರಿಯ ಮೂಷಿಕ ವಾಹನನ್ನೇ ಯಾರೋ ವರ್ಮಾ ಎಂಬಾತ ಅವನೇನು ಹುಟ್ಟುತ್ತಲೇ ಹೊಟ್ಟೆ ಭಾರ ಇದ್ದವನೇ? ಅವನ ಪೂಜೆ ಮಾಡಿದ್ದರಿಂದ ಯಾವ ಯಾವ ಸಂಕಷ್ಟ ಪರಿಹಾರವಾಗಿದೆ ಎಂದು ಪಟ್ಟಿ ಮಾಡಿ ಎಂದೆಲ್ಲಾ ಟ್ವೀಟಿಸಿ ಬಿಟ್ಟಿದ್ದಾನಂತೆ. ಹೇ ಗಜಾನನ ಟ್ವಿಟ್ಟರ್, ಫೇಸ್ ಬುಕ್ಕುಗಳೆಂಬ ಸಕಲ ಸಂಕಟಗಳಿಂದಲೂ ನೀನೇ ಪಾರು ಮಾಡು ತಂದೆ.






Chennagide nanna Facebook godege antisale?
Sure, antisi
ಜಯಶ್ರೀ ಭಟ್, ಫೇಸ್ ಬುಕ್ ಗೀಳಿನ ಕುರಿತು ತುಂಬ ಚನ್ನಾಗಿ ಚರ್ಚಿಸಿದ್ದೀರಿ. ಕೆಲವೊಮ್ಮೆ ಸುಮ್ಮನೆ ಸಮಯ ಹಾಳು ಅನ್ನಿಸಿದರೂ ಬಿಡದಂತೆ ಹಿಡಿದಿಟ್ಟುಕೊಳ್ಳುವ ಬ್ರೌನ್ ಶುಗರ್ ತರಹ, ಅಡಿಕ್ಟ್ ರಾಕ್ಷಸವೇನೋ ಇದು. ಗೆಳೆತನಗಳೆಲ್ಲ ಶುಷ್ಕವೇನೋ ಎಂದೆನಿಸಿದ್ದೂ ಇದೆ…
Thanks Lakhmikanth
ನೋವಾನ ನಾವೆ ! ಚ೦ದದ ಪಡ ಜೋಡಣೆ ! ಫೇಸ್ಬುಕ್ ನಲ್ಲಿ ಬರುವ ಮಾಹಿತಿಗಳಿ೦ದ ನೋವೂ ಬರುತ್ತದೆ, ಸ೦ತಸವೂ ಉ೦ಟು . ಸ್ನೇಹಿರೌ, ಸ೦ಬ೦ಧಿಗಳು ಎಲ್ಲಿ ಹೇಗೆ ಇದ್ದಾರೆ. ಅಥವಾ ಯಾರು ಇಲ್ಲದಾಗಿದ್ದಾರೆ . Is everything alright with the world ? ಇದು ಪೋಸ್ತ ಮನ್ ತರದ ಪೋಸ್ಟ್ !
ಲೇಖನ ತುಂಬಾ ಚೆನ್ನಾಗಿದೆ ಓದಿ ತುಂಬಾ ಖುಷಿಯಾಯಿತು ಈ ರೀತಿ ಲೇಖನಗಳು ನಮ್ಮ ಯುವ ಜನತೆಗೆ ಬೇಕಾಗಿವೆ.
Thank you all for the likes and comments!