ಮುಷಾಯಿರಾ
ಸಿರಾಜ್ ಬಿಸರಳ್ಳಿ
ಬರೆಯಬೇಕಿದೆ ಕವಿತೆ
ಹಾಡಬೇಕಿದೆ ಘಜಲ್
ನಿತ್ಯ ನಿರಂತರ ಈ ಮುಷಾಯಿರಾ
ಗೆಳೆಯ
ಯಾವುದು ನಿಂತಿದೆ ಹೇಳು
ಬಸುರಿಯ ಸೀಳಿದ ತ್ರಿಶೂಲ
ಮತ್ತೆ ಹಂತಕನ ಕೈಸೇರಿದೆ,
ಕಂದಮ್ಮಗಳ ಜೀವಂತ ಸುಟ್ಟ ಓಣಿಯಲಿ
ಮತ್ತೆ ಕಚೋರಿ, ಸಮೋಸಾಗಳ ವಾಸನೆ
ಎಲ್ಲ ಕಳೆದುಕೊಂಡ ಹೆಣ್ಣುಗಳೀಗ
ಕಾಮಾಟಿಪುರದಲ್ಲಿ ಹೂ ಮುಡಿಯುತ್ತಿವೆ !
ಗೆಳೆಯ
ನಿತ್ಯ ನಿರಂತರ ಈ ಮುಷಾಯಿರಾ
ಕೇಕೆ,ಸಿಳ್ಳೆ,ಚಪ್ಪಾಳೆ
ನೋಡು ಸಾವಿನ ವ್ಯಾಪಾರಿಯ ರುದ್ರನರ್ತನ
ಭರ್ಜರಿ ಜೋಷ್ ನಲ್ಲಿ ಪಕ್ಕವಾದ್ಯ ಮೇಳ
ಉಧೋ ಉಧೋ ಎನ್ನುತ್ತಿವೆ
ರಕ್ತ ಕುಡಿದ ನಾಲಿಗೆಗೆಳು
ಕೋಲು,ಚಾಳೀಸು ಕಳೆದುಕೊಂಡ
ಬೊಚ್ಚು ಬಾಯಿಯ ಮುದುಕ ವಿಳಾಸ ಹುಡುಕುತ್ತಿದ್ದಾನೆ
ನೋಡು ಮತ್ತೊಮ್ಮೆ
ಕತ್ತಿ,ಖಡ್ಗ ಮಸೆಯುವ ಸದ್ದು
ಉಧೋ ಉಧೋ ಉನ್ಮಾದ
ನಾಲಿಗೆ ಚಾಚಿ ಕಾಯುತಿವೆ ಶವದ ಮನೆಗಳು
ಕಫನ್ ಹೊಲಿಯುತ್ತಿವೆ ಸಾವಿರ ಕೈಗಳು
ಆಕಾಶದಲ್ಲಿ ಮತ್ತೆ ರಣಹದ್ದುಗಳ ಹಾರಾಟ
ಗೆಳೆಯ
ನಾವೇನು ನೀರೋನ ಅತಿಥಿಗಳಾ ?
ಮಲ್ಲಿಗೆ ಬಳ್ಳಿ ಹಬ್ಬಿಸೋಣ ಕಮಟು ವಾಸನೆಯ ಓಣಿಯಲಿ
ಗುಲಾಬಿಯೂ ಇರಲಿ ಶವದ ಮನೆಗೆ,
ಸಾಕಿ ತೋರಲಿ ಮಧುಶಾಲೆಗೆ ದಾರಿ
ದಿಕ್ಕೆಟ್ಟು ಹೋದ ಪಾರಿವಾಳಗಳ ಕರೆದು ಕೂಗಿ
ಅಜ್ಜನಿಗೆ ವಿಳಾಸ ನೀಡೋಣ
ಗೆಳೆಯ
ಬರೆಯಬೇಕಿದೆ ಕವಿತೆ
ಹಾಡಬೇಕಿದೆ ಘಜಲ್
ನಿತ್ಯ ನಿರಂತರ ಈ ಮುಷಾಯಿರಾ
ನಿತ್ಯ ನಿರಂತರ..






ಚೆನ್ನಾಗಿದೆ..ವಾಸ್ತವ ಸತ್ಯವಾಗಿದೆ…
chennaagide ; khadakkaada bhavaabhivyakti !! Rosha Aakroshagalige maarmika lepavide !!
super sir
nice..very nice.subhavaagali siraaj sir.
so intense …!! tumbaa chennaagi kavite henediddeeri.
innu basuriya hotte seelida trishoola annuva badalu berenaadaroo pada balasa bahuditteno anisitu..
yaakendare trishoola annuva pada ondu kopannu pratinidhisuvante kaanuttade.haage tegedu kondare idondu sahaja bhaavaikyateya kavitegintaloo komuvaadada kaviteya hage kaanuttade.
ಗೆಳೆಯ
ಬರೆಯಬೇಕಿದೆ ಕವಿತೆ
ಹಾಡಬೇಕಿದೆ ಘಜಲ್
ನಿತ್ಯ ನಿರಂತರ ಈ ಮುಷಾಯಿರಾ
ನಿತ್ಯ ನಿರಂತರ….very nice….hrart touching….aa photo nannannu yombaa kadtide….