ಕ್ರೀಡಾ ಮನೋಭಾವ ಎಂಬ ತತ್ವವ ನೆನೆದು
ಜಿ ಪಿ ಬಸವರಾಜು
‘ಫುಟ್ಬಾಲ್ ಎಂಬುದು ಈ ಭೂಮಿಯ ಮೇಲಿನ ಅತ್ಯಂತ ಬೃಹತ್ ಕುಟುಂಬ ಎಂಬುದನ್ನು ನಾವು ಮತ್ತೆ ತೋರಿಸಿದ್ದೇವೆ.’

ಫುಟ್ಬಾಲ್ ಜಗತ್ತಿನ ದಂತಕತೆ ಪೀಲೆ ಹೇಳಿದ ಈ ಮಾತು ಅಕ್ಷರಶಃ ನಿಜ. ಇದೀಗ ಕೊನೆಗೊಂಡಿರುವ ವಿಶ್ವಕಪ್ ಫುಟ್ಬಾಲ್ ಸೆಣಸಾಟ ಇದನ್ನು ಸಾಬೀತು ಪಡಿಸಿದೆ. ಒಂದು ತಿಂಗಳ ಕಾಲ ಇಡೀ ಜಗತ್ತಿನ ಫುಟ್ಬಾಲ್ ಪ್ರೇಮಿಗಳನ್ನು ಕಾತರದಲ್ಲಿ ಹಿಡಿದಿಟ್ಟಿದ್ದ ಈ ವಿಶ್ವಕಪ್ ಫುಟ್ಬಾಲ್ ಕೊನೆಗೂ ಮುಗಿದಿದೆ. ಈ ಅವಧಿಯಲ್ಲಿ ಎಷ್ಟೊಂದು ಕನಸುಗಳು ಮುಗಿಲಿಗೆ ಗರಿಬಿಚ್ಚಿ ಹಾರಾಡಿದವು; ಎಷ್ಟೊಂದು ಜನರ ಹುಮ್ಮಸ್ಸು ಪುಟಿದೆದ್ದು ಕುಣಿದಾಡಿತು; ಎಷ್ಟೊಂದು ಕನಸುಗಳು ತುಂಡಾಗಿ ಕುಸಿದು ಬಿದ್ದವು. ಹತಾಶೆ, ನಿರಾಶೆ, ಕಣ್ಣೀರು, ಕ್ರೋಧ, ವಿಜಯ ಪತಾಕೆ, ಕೇಕೆ, ಹರ್ಷದ ಹೊನಲು ಒಂದರೊಳಗೊಂದು ಬೆರೆತು ಜಗತ್ತೇ ಮಿಶ್ರಭಾವದಲ್ಲಿ ಮುಳುಗೆದ್ದಿತು.
ಈ ವಿಶ್ವಕಪ್ ಸೆಣಸಾಟಕ್ಕೆ ಆತಿಥ್ಯ ಒದಗಿಸಿದ್ದ ಬ್ರೆಜಿಲ್ ಮೂರನೇ ಸ್ಥಾನವನ್ನೂ ಗಳಿಸದೆ ಹೋದಾಗ ಇಡೀ ರಾಷ್ಟ್ರವೇ ಶೋಕಸಾಗರದಲ್ಲಿ ಮುಳುಗಿದಂತೆ ಕುಸಿದು ಹೋಯಿತು. ಅನೇಕರು ಬಿಕ್ಕಿಬಿಕ್ಕಿ ಅತ್ತರು. ಹಲವರು ಸಿಟ್ಟಿಗೆದ್ದರು. ಬ್ರೆಜಿಲ್ ಉತ್ಸಾಹವೇ ಅಡಗಿ ಹೋಯಿತು.
ಈ ಫುಟ್ಬಾಲ್ ಕತೆಗೆ ಅದು ಕೊನೆಯ ಅಧ್ಯಾಯವಾಗಿರಲಿಲ್ಲ. ಫೈನಲ್ ಇನ್ನೂ ಉಳಿದಿತ್ತು. ಅದನ್ನೊಂದು ಮಹಾಸಮರದಂತೆ ಭಾವಿಸಿದ ಫುಟ್ಬಾಲ್ ಪ್ರೇಮಿಗಳು ಜಗತ್ತಿನ ಅನೇಕ ಭಾಗಗಳಿಂದ ಬಂದು ಈ ಸಮರಕ್ಕೆ ಸಾಕ್ಷಿಯಾದರು. ಜರ್ಮನಿ ಮತ್ತು ಅರ್ಜೆಂಟೈನಾಗಳ ನಡುವಿನ ಸೆಣಸಾಟ ಇದು. ಮೂರು ಬಾರಿ ವಿಶ್ವಕಪ್ಪನ್ನು ಗೆದ್ದಿದ್ದ ಜರ್ಮನಿಯ ಎದುರಾಳಿ ಮೆರಡೋನನ ಅರ್ಜೈಂಟೈನಾ; ಇದು ಎರಡು ಬಾರಿ ವಿಶ್ವಕಪ್ಪನ್ನು ಗೆದ್ದು, ಮೂರನೆಯ ಬಾರಿ ಗೆಲ್ಲುವ ಆಶೆಯಿಂದ ಕಣಕ್ಕಿಳಿದಿತ್ತು. ಜರ್ಮನಿಯಲ್ಲಿ ಅನೇಕ ಹೆಸರಾಂತ ಆಟಗಾರರಿದ್ದರೆ ಅರ್ಜೆಂಟೈನಾದಲ್ಲಿ ಮೆಸ್ಸಿಯೇ ದೊಡ್ಡ ಹೀರೋ. ಅವನ ಕಾಲ್ಚೆಳಕಕ್ಕೆ ಇಡೀ ಜಗತ್ತು ಬೆರಗಾಗಿತ್ತು. ಮೆಸ್ಸಿ ಹೇಗಾದರೂ ಗೋಲ್ ಹೊಡೆದು ವಿಶ್ವಕಪ್ಪನ್ನು ತನ್ನ ರಾಷ್ಟ್ರಕ್ಕೆ ತಂದುಕೊಡುತ್ತಾನೆ ಎಂಬ ನಂಬಿಕೆಯೇ ಬಲವಾಗಿತ್ತು. ಜರ್ಮನಿಯ ನಂಬಿಕೆ ಬೇರೆಯದೇ ಆಗಿತ್ತು. ಅದು ಹೀರೋಗಳನ್ನು ನೆಚ್ಚದೆ ತಂಡವನ್ನೇ ನೆಚ್ಚಿಕೊಂಡಿತ್ತು. ತಂಡದ ಶಿಸ್ತು, ಶ್ರದ್ಧೆ, ಹೋರಾಟದ ಮನೋಭಾವ ಗೆಲುವನ್ನು ತಂದೇ ತರುತ್ತದೆ ಎಂದು ಜರ್ಮನಿ ಬಲವಾಗಿ ನಂಬಿತ್ತು.

ಅದೊಂದು ನಿಜಕ್ಕೂ ಮಹಾನ್ ಹೋರಾಟ. ಎರಡೂ ತಂಡಗಳ ಸಮಬಲ, ಚಾಕಚಕ್ಯತೆ, ನೈಪುಣ್ಯತೆ, ಛಲ ಬಿಡದ ಸೆಣಸಾಟ, ನಿಖರವಾದ ಚಲನೆ ಎಲ್ಲವೂ ಹೋರಾಟದ ಭಾಗವಾಗಿದ್ದವು. ಫುಟ್ಬಾಲ್ ಎಂಥ ಆಟವೆಂದರೆ ಇಲ್ಲಿ ಹೋರಾಡದಿದ್ದರೆ ಗೆಲವು ಸಿಕ್ಕುವುದೇ ಇಲ್ಲ. ಈ ಹೋರಾಟ ಎಷ್ಟೊಂದು ಭೀಕರವಾಗಿರುತ್ತದೆ ಎಂದರೆ ಆಟಗಾರರು ಮೂಳೆ ಮುರಿದುಕೊಳ್ಳುವುದು, ಕಣ್ಣು ಕಳೆದುಕೊಳ್ಳುವುದು, ತಲೆಗೆ ಬಲವಾದ ಏಟುಬಿದ್ದು ಮೂರ್ಛೆ ಹೋಗುವುದು ಇವೆಲ್ಲ ಸಾಮಾನ್ಯ ಸಂಗತಿಗಳೇನೋ ಎನಿಸಿಬಿಡುತ್ತವೆ.
ಕೊನೆಗೂ ಜರ್ಮನಿ ಒಂದು ಗೋಲನ್ನು ಹೊಡೆಯಿತು. ಇದು ಜರ್ಮನಿಗೆ ಗೆಲವನ್ನು ಮಾತ್ರವಲ್ಲ, ವಿಶ್ವಕಪ್ಪನ್ನೇ ತಂದುಕೊಟ್ಟಿತು. ಫುಟ್ಬಾಲ್ ಇತಿಹಾಸದಲ್ಲಿ ಜರ್ಮನಿಗೆ ಮತ್ತೊಮ್ಮೆ ವಿಶ್ವ ಕಿರೀಟ. ಅರ್ಜೆಂಟೈನಾ ಸೋತಿತು. ಆದರೆ ಆ ಸೋಲು ಕೂದಲೆಳೆಯ ಅಂತರದ್ದು. ಒಂದೇ ಒಂದು ಗೋಲು; ಒಂದೇ ಒಂದು ಅಪೂರ್ವ ಕ್ಷಣ. ಜರ್ಮನಿ ಮೆರೆಯಲು ಇಷ್ಟು ಸಾಕು. ಇಡೀ ಜರ್ಮನಿಯೇ ಕುಣಿದು ಕುಪ್ಪಳಿಸಿತು. ವಿಶ್ವಕಪ್ನೊಂದಿಗೆ ಸ್ವದೇಶಕ್ಕೆ ಮರಳಿದ ಆಟಗಾರರನ್ನು ಸ್ವಾಗತಿಸಲು ಬರ್ಲಿನ್ನಲ್ಲಿ ನೆರೆದ ಫುಟ್ಬಾಲ್ ಪ್ರೇಮಿಗಳ ಸಂಖ್ಯೆ ಎರಡೂವರೆ ಲಕ್ಷದಿಂದ ಮೂರು ಲಕ್ಷದವರೆಗೆ. ಅವತ್ತು ರಾತ್ರಿ ಜರ್ಮನಿ ನಿದ್ರಿಸಲಿಲ್ಲ. ಹರ್ಷ ಎಂಬುದು ಅಲ್ಲಿ ಭೋರ್ಗರೆಯುತ್ತಿತ್ತು. ಸಂಭ್ರಮ ಸಡಗರಗಳಲ್ಲಿ ಜನ ತೇಲಾಡಿದರು. ತನ್ನ ಆಟಗಾರರು ಗೆಲ್ಲುತ್ತಾರೆಂದು ನಂಬಿದ್ದ ಜರ್ಮನಿ ಸರ್ಕಾರ ಗೆಲ್ಲುವುದಕ್ಕಿಂತ ಮೊದಲೇ ಅಂಚೆಚೀಟಿಯನ್ನು ಮುದ್ರಿಸಿತ್ತು.
ಅರ್ಜೈಂಟೈನಾ ತಂಡ ಅತ್ಯುತ್ತಮವಾಗಿ ಆಡಿತು ಎಂಬುದನ್ನು ಆ ರಾಷ್ಟ್ರದ ಫುಟ್ಬಾಲ್ ಪ್ರೇಮಿಗಳು ಅರ್ಥಮಾಡಿಕೊಂಡಂತೆ ಕಾಣಲಿಲ್ಲ. ತನಗಾದ ನೋವನ್ನು ನುಂಗಿಕೊಳ್ಳುವ ಸ್ಥಿತಿಯಲ್ಲಿ ಅದು ಇರಲಿಲ್ಲ. ಅಭಿಮಾನಿಗಳು ದುಃಖಿಸಿದರು. ಕೂಗಾಡಿದರು. ನೂರಾರು ಜನ ಬೀದಿಗಿಳಿದು ಗಲಾಟೆ ಮಾಡಿದರು. ಮನೆಯ ಗಾಜುಗಳಿಗೆ ಕಲ್ಲು ಹೊಡೆದರು; ಕೆಲವೆಡೆ ಬೆಂಕಿ ಇಟ್ಟರು. ಪೊಲೀಸರೊಂದಿಗೆ ಕಾಳಗಕ್ಕೆ ಸಿದ್ಧರಾದರು. ರಬ್ಬರ್ ಬುಲೆಟ್ ಹಾರಾಡಿದವು; ನೀರು ಮತ್ತು ಟಿಯರ್ ಗ್ಯಾಸ್ ಕ್ಯಾನನ್ಗಳ ಬಳಕೆಯೂ ಆಯಿತು.
ಇದೆಲ್ಲ ತತ್ಕ್ಷಣದ ಪ್ರತಿಕ್ರಿಯೆಯಂತೆ ಕಾಣಿಸಿದರೂ, ಕ್ರೀಡೆಯಲ್ಲಿ ಸೋಲು ಮತ್ತು ಗೆಲುವುಗಳನ್ನು ಸಮಾನ ಭಾವದಿಂದ ತೆಗೆದುಕೊಳ್ಳುವ ಮನೋಧರ್ಮವೂ ಸಮಾಜದಲ್ಲಿ ಬೆಳೆಯಬೇಕಾಗಿದೆ.
ಕ್ರೀಡೆ ಎನ್ನುವುದು ಒಂದು ಸಮಾಜದ, ರಾಷ್ಟ್ರದ ಶಕ್ತಿಯನ್ನು ಮಾತ್ರವಲ್ಲ, ಆರೋಗ್ಯವನ್ನೂ ಸೂಚಿಸುವಂಥದ್ದು. ಅದಕ್ಕಾಗಿಯೇ ಪ್ರತಿಯೊಂದು ರಾಷ್ಟ್ರವೂ ಕ್ರೀಡೆಗಾಗಿ ಅಪಾರ ಹಣವನ್ನು ಖರ್ಚು ಮಾಡುತ್ತದೆ; ತನ್ನ ಕ್ರೀಡಾಪಟುಗಳನ್ನು ಉತ್ತೇಜಿಸುವ ಹಲವಾರು ಯೋಜನೆಗಳನ್ನು ರೂಪಿಸಿರುತ್ತದೆ. ಫೀಫಾ ಕೂಡಾ ಫುಟ್ಬಾಲ್ ಆಟವನ್ನು ಉತ್ತೇಜಿಸಲು ಇಂಥ ಅನೇಕ ಮಾರ್ಗಗಳನ್ನು ಅನುಸರಿಸುತ್ತಿದೆ. ಪೀಲೆ ಮತ್ತು ಮೆರೊಡೋನಾ ಮಹಾನ್ ಆಟಗಾರರೆಂದು ಗುರುತಿಸಿ, ಇವರನ್ನು ಈ ‘ಶತಮಾನದ ಫೀಫಾ ಸಹ-ಆಟಗಾರರು’ ಎಂದು ಗೌರವಿಸಿತು.
ಇಷ್ಟಾದರೂ, ಕ್ರೀಡಾ ಜಗತ್ತಿನಲ್ಲಿ ಅನೇಕ ಅಡ್ಡಹಾದಿಗಳಿವೆ. ಅನೇಕ ಆಟಗಾರರು ಈ ಅಡ್ಡಹಾದಿಗಳನ್ನು ಹಿಡಿದು ಶಿಖರ ಏರಲು ನೋಡಿರುವುದೂ ಇದೆ. ಅಪಾರವಾಗಿ ಬಂದು ಬೀಳುವ ಹಣ, ಬೆಳಗಾಗುವುದರಲ್ಲಿ ಹೀರೋಗಳಾಗಿ ಮೆರೆಯುವ ಸಾಧ್ಯತೆ ಇವೆಲ್ಲ ಕ್ರೀಡಾಪಟುಗಳನ್ನು ದಿಕ್ಕುತಪ್ಪಿಸಿರುವುದೂ ಉಂಟು. ತನ್ನ ರಾಷ್ಟ್ರಕ್ಕಾಗಿ, ತನ್ನ ನಾಡಿನ ಗೌರವಕ್ಕಾಗಿ ತಾವು ಆಟ ಆಡುವುದಾಗಿ ಹೇಳಿಕೊಂಡ ಆಟಗಾರರೂ ಹಣ ಮತ್ತು ಕೀತರ್ಿಯ ಬಲೆಗೆ ಬಿದ್ದು ದಿಕ್ಕುತಪ್ಪಿರುವುದುಂಟು. ಕ್ರಿಕೆಟ್ ಜಗತ್ತಿನಲ್ಲಿ ಈಗ ಆಟಗಾರರನ್ನು ದಿಕ್ಕುತಪ್ಪಿಸುತ್ತಿರುವ ‘ಮ್ಯಾಚ್ ಫಿಕ್ಸಿಂಗ್’ ನಮಗೆಲ್ಲ ಚೆನ್ನಾಗಿಯೇ ಗೊತ್ತಿರುವ ಸಂಗತಿ. ಫುಟ್ಬಾಲ್ ಜಗತ್ತಿನಲ್ಲಿ ಇಂಥ ‘ಫಿಕ್ಸಿಂಗ್’ ಇನ್ನೂ ತಲೆ ಎತ್ತಿದಂತೆ ಕಾಣುವುದಿಲ್ಲ. ಆದರೆ ಗೋಲ್ ಹೊಡೆದೇ ತೀರಬೇಕೆಂಬ, ತನ್ನ ರಾಷ್ಟ್ರಕ್ಕೆ ಗೆಲವು ತರಲೇ ಬೇಕೆಂಬ ಉತ್ಸಾಹದಲ್ಲಿ ಆಟಗಾರರು ನಡೆದುಕೊಳ್ಳುತ್ತಿರುವ ರೀತಿ ಕ್ರೀಡಾ ಮನೋಭಾವಕ್ಕೆ ವ್ಯತಿರಿಕ್ತವಾಗಿರುವುದು ನಿಚ್ಚಳವಾಗಿ ಕಾಣಿಸುತ್ತಿದೆ. ಚೆಂಡನ್ನು ಮುಟ್ಟುವ ನೆಪದಲ್ಲಿ ಎದುರಾಳಿಗೆ ಅಡ್ಡಗಾಲು ಹಾಕಿ ಅವನನ್ನು ಬೀಳಿಸುವುದು, ಚೆಂಡನ್ನು ಹೊಡೆಯುವ ನೆಪದಲ್ಲಿ ಎದುರಾಳಿಯ ಮೂಳೆಗೆ ಹೊಡೆಯುವುದು ಇಲ್ಲವೇ ನೇರವಾಗಿ ಗುರಿಯಿಟ್ಟು ತಲೆಗೆ ಪೆಟ್ಟು ಬೀಳುವಂತೆ ಮಾಡುವುದು, ಕಣ್ಣಿಗೆ ಹೊಡೆಯುವುದು, ಅವಕಾಶ ದೊರೆತಾಗ ತಲೆಯಿಂದ ಚೆಂಡನ್ನು ತಳ್ಳುವ ಬದಲು ಗೊತ್ತಾಗದ ರೀತಿಯಲ್ಲಿ ಕೈಯನ್ನು ಬಳಸಿ ಚೆಂಡನ್ನು ಗೋಲಾಗಿಸುವುದು ಇತ್ಯಾದಿ ಅನೇಕ ವಿಧಾನಗಳು ಒಂದು ರೀತಿಯ ಅಡ್ಡ ಹಾದಿಗಳೇ.
ಅತ್ಯುತ್ತಮ ರೀತಿಯ ಆಟಗಾರ ಎಂದೂ ಹೀಗೆ ಮಾಡಲಾರ. ಅವನು ತನ್ನ ಕೌಶಲ, ಜಾಣ್ಮೆ, ಪ್ರತಿಭೆ ಮತ್ತು ಸಾಮಥ್ರ್ಯ ಬಳಸಿ ಚಂಡನ್ನು ನಡೆಸಬಲ್ಲ, ನಿಯಂತ್ರಿಸಬಲ್ಲ, ಗೋಲಾಗಿಸಬಲ್ಲ. ಇಂಥ ಆಟ ನೋಡುವುದಕ್ಕೆ ಬಹಳ ಚಂದ. ಆದರೆ ಎದುರಾಳಿ ತಂಡ ಒರಟುತನಕ್ಕಿಳಿದರೆ, ಅಡ್ಡಮಾರ್ಗಕ್ಕೆ ಮುಂದಾದರೆ ಪ್ರತಿಭಾವಂತ ಆಟಗಾರ ಪ್ರಾಣಾಂತಿಕ ಪೆಟ್ಟು ತಿನ್ನುವುದು ಅನಿವಾರ್ಯವಾಗುತ್ತದೆ. ಅತ್ಯಂತ ಮೋಹಕವಾದ, ರೋಚಕವಾದ ಈ ಕ್ರೀಡೆಯಲ್ಲಿ ಉತ್ತಮ ಕ್ರೀಡಾಪಟು ಕಾಲು ಕಳೆದುಕೊಳ್ಳುವುದು, ಕಣ್ಣು ಕಳೆದುಕೊಳ್ಳುವುದು, ತನ್ನ ಭವಿಷ್ಯದ ಬದುಕನ್ನೇ ಹಾಳುಮಾಡಿಕೊಳ್ಳುವುದು ನೆನೆದಾಗ ತೀವ್ರ ವಿಷಾದ ಆವರಿಸಿಬಿಡುತ್ತದೆ. ರೆಫರಿ ಕೆಂಪು ಕಾರ್ಡನ್ನು ಬಳಸಬಹುದು. ಆದರೆ ಕಣ್ಣು ಕಳೆದುಕೊಂಡ ಕ್ರೀಡಾಳುವಿಗೆ ಆತ ಕಣ್ಣು ನೀಡಲಾರ.
ನಿಜವಾದ ಕ್ರೀಡಾ ಮನೋಭಾವವನ್ನು ಜಗತ್ತಿನ ಎಳೆಯರಲ್ಲಿ ಮೂಡಿಸುವುದು ಸಾಧ್ಯವಾದಾಗ ಮಾತ್ರ ನಿಜವಾದ ಕ್ರೀಡೆ ಜೀವಂತಿಕೆಯನ್ನು ಪಡೆದುಕೊಲ್ಳುತ್ತದೆ. ಆಗ ಫುಟ್ಬಾಲ್ ಕೂಡಾ ತನ್ನ ಮೋಹಕತೆಯನ್ನು ಉಳಸಿಕೊಳ್ಳಬಲ್ಲದು. ಇಲ್ಲವಾದರೆ ಇದರ ಸುತ್ತ ಕೆಸರಿನ ರಾಡಿಯೇ ಉಳಿದುಬಿಡುತ್ತದೆ.



0 Comments